ADVERTISEMENT

Karnataka | ನವಯುಗದ ವೃತ್ತಿಗಳಿಗೆ ಕನ್ನಡಿಗರು ಸನ್ನದ್ಧರಾಗಲಿ: ಸತ್ಯಪ್ರಕಾಶ್

ಕರ್ನಾಟಕ 50 | 25 ವರ್ಷಗಳ ಮುನ್ನೋಟ

ಸತ್ಯಪ್ರಕಾಶ್ ಎಂ.ಆರ್.
Published 25 ನವೆಂಬರ್ 2023, 0:30 IST
Last Updated 25 ನವೆಂಬರ್ 2023, 0:30 IST
   

ಮುಂದಿನ 25 ವರ್ಷಗಳು ನವಯುಗದ ಕರ್ನಾಟಕದ ವೃತ್ತಿಪರರಿಗೆ ಹೊಸ ಸವಾಲುಗಳು ಮತ್ತು ಅವಕಾಶಗಳ ಬಾಗಿಲುಗಳನ್ನು ಒಟ್ಟೊಟ್ಟಿಗೆ ತೆರೆಯಲಿವೆ. ಡಿಜಿಟಲ್ ಮತ್ತು ಎಐ ತಂತ್ರಜ್ಞಾನಾಧಾರಿತ ಔದ್ಯೋಗಿಕ ಮಾರುಕಟ್ಟೆಯಲ್ಲಿ ವಿಶ್ಲೇಷಣಾತ್ಮಕ ಸಾಮರ್ಥ್ಯ, ಕ್ರಿಯಾಶೀಲ ಆಲೋಚನೆ, ವೈಯುಕ್ತಿಕ ಕ್ಷಮತೆಯ ಅರಿವು, ನಿರಂತರ ಕಲಿಕೆ ಮತ್ತು ನಾಯಕತ್ವದ ಕೌಶಲಗಳು ಅತ್ಯಂತ ಅವಶ್ಯಕ

ನಾವೀಗ ಇತಿಹಾಸದ ಬಹುದೊಡ್ಡ ಸಂಕ್ರಮಣ ಕಾಲಘಟ್ಟದಲ್ಲಿದ್ದೇವೆ. ಹೊಸಯುಗದ ತಂತ್ರಜ್ಞಾನ, ಜಗತ್ತಿನ ರೂಪುರೇಷೆಯನ್ನೇ ಬದಲಿಸುತ್ತಲಿದೆ. ಡಿಜಿಟಲ್ ಮಾಧ್ಯಮ, ಅಂತರ್ಜಾಲ ಆಧಾರಿತ ಅನಲಿಟಿಕ್ಸ್, ಕೃತಕ ಬುದ್ಧಿಮತ್ತೆ, ವ್ಯಕ್ತಿಗತ ಮಾರುಕಟ್ಟೆಯ ಅನುಭೂತಿ ಬದುಕಿನ ಎಲ್ಲ ಮಗ್ಗಲುಗಳನ್ನೂ ಬುಡಮೇಲು ಮಾಡುತ್ತಿದೆ. ಸಾಂಪ್ರದಾಯಿಕ ಉದ್ಯೋಗಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ. ಉದ್ಯೋಗದ ಸ್ವರೂಪ ಕೂಡ ಬದಲಾಗುತ್ತಿದೆ.

ಜನರೇಷನ್ ವೈ ಮತ್ತು ಜೆಡ್ ಅಂದರೆ 1980ರಿಂದ 1994ರವರೆಗೆ ಮತ್ತು 1995ರಿಂದ 2010ರ ನಡುವೆ ಹುಟ್ಟಿದ ಪೀಳಿಗೆಗಳು ಹಿಂದಿನ ಎಲ್ಲ ಪೀಳಿಗೆಗಿಂತಲೂ ಭಿನ್ನ, ವಿಶಿಷ್ಟ. ಜನರೇಷನ್ ವೈ ಅನಾಲಾಗ್‍ನಿಂದ ಡಿಜಿಟಲ್ ತಂತ್ರಜ್ಞಾನಕ್ಕೆ ತೆರೆದುಕೊಂಡವರಾದರೆ, ಜನರೇಷನ್ ಜೆಡ್ ಹುಟ್ಟುತ್ತಲೇ ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್ ಹಾಗೂ ಅತಿ ವೇಗದ ಅಂತರ್ಜಾಲವನ್ನು ಬಳುವಳಿಯಾಗಿ ಪಡೆದವರು. ಈ ಎರಡು ಪೀಳಿಗೆಯ ವೃತ್ತಿಪರರು ಅರಸುವ ಮತ್ತು ಇವರಿಗಾಗಿ ಲಭ್ಯವಿರುವ ವೃತ್ತಿಗಳು, ಅವುಗಳ ನಿರ್ವಹಣೆಯ ಸ್ವರೂಪ ಕೂಡ ಬದಲಾಗುತ್ತಲೇ ಇದೆ.

ADVERTISEMENT

ಕೋವಿಡ್-19 ನಂತರ ಸಂಭವಿಸಿದ ಆರ್ಥಿಕತೆಯ ಸ್ಥಿತ್ಯಂತರ ಹಾಗೂ ಜಾಗತಿಕ ರಾಜಕಾರಣದ ಪಲ್ಲಟ, ಔದ್ಯೋಗಿಕ ರಂಗದಲ್ಲಿ ಅಚ್ಚರಿಯ ಬದಲಾವಣೆಗಳನ್ನು ತಂದೊಡ್ಡಿದೆ. ಭವಿಷ್ಯದ ವೃತ್ತಿಗಳ ಕುರಿತು ವಿಶ್ವ ಆರ್ಥಿಕ ವೇದಿಕೆಯು 2023ರಲ್ಲಿ ಹೊರತಂದಿರುವ ವರದಿಯ ಪ್ರಕಾರ ಮುಂಬರುವ ವರ್ಷಗಳಲ್ಲಿ ಸಾಮಾನ್ಯ ಶಿಕ್ಷಣ ಪಡೆದ ಪದವೀಧರರು ಮತ್ತು ಮಹಿಳೆಯರು ಉದ್ಯೋಗ ಗಿಟ್ಟಿಸುವುದು ಕಷ್ಟಕರವಾಗಲಿದೆ. ಈ ಸಂಕಷ್ಟಕರ ಪರಿಸ್ಥಿತಿಯ ಮಧ್ಯೆ ಜಾಗತಿಕ ಔದ್ಯೋಗಿಕ ಮಾರುಕಟ್ಟೆಯಲ್ಲಿ ಕಂಪನಿಗಳು ಕಡಿಮೆ ವೇತನದಲ್ಲಿ ಕೌಶಲಯುತ ಹಾಗೂ ಗುಣಮಟ್ಟದ ವೃತ್ತಿಪರರನ್ನು ಅರಸುವ ವಿದ್ಯಮಾನಕ್ಕೆ ನಾವೆಲ್ಲರೂ ಅಣಿಗೊಳ್ಳಬೇಕಿದೆ.

ಹಾಗಾದರೆ ಕನ್ನಡಿಗ ಉದ್ಯೋಗಾಕಾಂಕ್ಷಿಗಳಿಗಿರುವ ಅವಕಾಶಗಳಾದರೂ ಯಾವುವು? ಅವುಗಳನ್ನು ಸಾಕಾರಗೊಳಿಸಿಕೊಳ್ಳಲು ಇರುವ ಮಾರ್ಗಗಳು ಯಾವುವು? ಮುಂಬರುವ ದಿನಗಳಲ್ಲಿ ಡಿಜಿಟಲ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಮತ್ತು ಅಂತರ್ಜಾಲ ಕೇಂದ್ರಿತ ವೃತ್ತಿಗಳಿಗೆ ಬೇಡಿಕೆ ಹೆಚ್ಚಲಿದೆ.

ಕೋವಿಡ್-19ರ ಹೊಡೆತಕ್ಕೆ ಮಕಾಡೆ ಮಲಗಿದ, ಮುಂದುವರಿಯುತ್ತಿರುವ ಮತ್ತು ಹಿಂದುಳಿದ ದೇಶಗಳಲ್ಲಿ ಪರಿಸರಸ್ನೇಹಿ ತಂತ್ರಜ್ಞಾನ, ಹಸಿರು ಆರ್ಥಿಕತೆ ಮತ್ತು ಆರ್ಥಿಕ ಮರುಹೊಂದಾಣಿಕೆಯಿಂದಾಗಿ ಭಾರಿ ಸಂಖ್ಯೆಯಲ್ಲಿ ಸಾಂಪ್ರದಾಯಿಕ ಉದ್ಯೋಗಗಳು ಕಣ್ಮರೆಯಾಗಲಿವೆ.

ಶಿಕ್ಷಣ ಮತ್ತು ಉದ್ಯೋಗದ ಪ್ರಶ್ನೆ: ಪ್ರಸಕ್ತ ಶಿಕ್ಷಣ ವ್ಯವಸ್ಥೆಯೇ ಸಂಪೂರ್ಣ ಬದಲಾಗಿಹೋಗಿದೆ. ಸಾಂಪ್ರದಾಯಿಕವಾದ ಪಾಠ ಪ್ರವಚನಗಳ ಜೊತೆಗೆ ಈಗ ಆನ್‍ಲೈನ್ ಶಿಕ್ಷಣ, ಸರ್ವಾಂತರ್ಯಾಮಿ ಕಲಿಕೆ (Ubiquitous learning), ಸ್ವಯಂ ಕಲಿಕೆ, ಹೀಗೆ ಬೋಧನೆ ಮತ್ತು ಕಲಿಕೆಯ ಸ್ವರೂಪ ಹೈಬ್ರಿಡ್ ಮಾದರಿಗೆ ಬದಲಾಗಿದೆ. ಈ ಹೈಬ್ರಿಡ್ ಶಿಕ್ಷಣ ಮಾದರಿಯನ್ನು ಮಾಹಿತಿ ಆಧಾರಿತ ಆರ್ಥಿಕತೆಯ ಸೂಚಕವಾಗಿ ಪರಿಗಣಿಸುವುದಾದರೆ, ಸಮಕಾಲೀನ ಉದ್ಯೋಗಗಳು ಹೈಬ್ರಿಡ್ ಮಾದರಿಗೆ ಯಾಕೆ ಹೊರಳಿದೆ ಎಂಬುದು ನಮಗೆ ಅರಿವಾಗುತ್ತದೆ.

ತಂತ್ರಜ್ಞಾನದ ರಾಕೆಟ್ ವೇಗದ ಅಭಿವೃದ್ಧಿ ಮತ್ತು ವ್ಯಾಪಕ ಡಿಜಿಟಲೀಕರಣದ ಪರಿಣಾಮದಿಂದ ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿದ್ದ ಗುಮಾಸ್ತರು, ಸಹಾಯಕರು, ಬ್ಯಾಂಕ್‍ಗಳಲ್ಲಿನ ಟೆಲ್ಲರ್‌ಗಳು, ಪೋಸ್ಟಲ್ ಸೇವಾ ಕ್ಲರ್ಕ್‍ಗಳು, ಕ್ಯಾಷಿಯರ್‌ಗಳು, ಟಿಕೆಟ್ ಎಕ್ಸಿಕ್ಯುಟಿವ್‍ಗಳು, ಡೇಟಾ ಎಂಟ್ರಿ ಆಪರೇಟರ್‌ಗಳು ಮುಂಬರುವ ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗಲಿದ್ದಾರೆ. ಆದ್ದರಿಂದ ಉದ್ಯೋಗಾಸಕ್ತರು ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕ ವೃತ್ತಿಗಳ ಬಗ್ಗೆ ಯೋಚಿಸುವುದನ್ನು ಬಿಟ್ಟು, ನವಯುಗದ ಹೊಸ ಮಾದರಿಯ ವೃತ್ತಿಗಳಿಗೆ ತಯಾರಾಗುವುದರತ್ತ ಗಮನಹರಿಸಬೇಕಿದೆ.

ಮರೀಚಿಕೆಯಾಗುತ್ತಿರುವ ಸರ್ಕಾರಿ ಉದ್ಯೋಗ: ಇನ್ನು ಸರ್ಕಾರಿ ವಲಯದ ಔದ್ಯೋಗಿಕ ಅವಕಾಶಗಳ ವಿಷಯಕ್ಕೆ ಬಂದರೆ, ಉದ್ಯೋಗಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಲೇ ಇದೆ. ಹಲವು ಇಲಾಖೆಗಳಲ್ಲಿ ನೇಮಕಾತಿಗೆ ಚಾಲನೆಯೇ ದೊರಕುತ್ತಿಲ್ಲ. ನೇರ ನೇಮಕಾತಿಯ ಬದಲಿಗೆ ಹೊರಗುತ್ತಿಗೆ, ತಾತ್ಕಾಲಿಕ ಗುತ್ತಿಗೆ ಆಧಾರದ ನೇಮಕಾತಿ, ಸೀಮಿತ ಅವಧಿಯ ನೇಮಕಾತಿಗೆ ಇಲಾಖೆಗಳು ಮೊರೆ ಹೋಗುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಈ ಮಾತು ಅನ್ವಯಿಸುತ್ತದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಒಂದೊಂದಾಗಿ ಖಾಸಗೀಕರಣಗೊಳ್ಳುತ್ತಿರುವ ವಿಷಮ ಸಂದರ್ಭದಲ್ಲಿ ಸರ್ಕಾರಿ ಉದ್ಯೋಗವು ಸಹಜವಾಗಿಯೇ ಕೈಗೆಟುಕದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಪರಿಸ್ಥಿತಿ ಹೀಗಿರುವಾಗ ಸರ್ಕಾರವನ್ನೇ ನೆಚ್ಚಿ ಕೂರುವಂತಿಲ್ಲ. ಖಾಸಗಿ ವಲಯದ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕ ಕೌಶಲಗಳನ್ನು ಕನ್ನಡಿಗರು ಕಲಿಯಲೇಬೇಕಿದೆ. ಹೊಸ ಮಾದರಿಯ ವೃತ್ತಿಗಳಿಗೆ ಪೂರಕವಾದ ಕೋರ್ಸ್‍ಗಳು, ಕೌಶಲ್ಯವೃದ್ಧಿ, ಉದ್ಯೋಗದ ಜೊತೆ ಜೊತೆಗೆ ಕಲಿಕೆ, ಹೀಗೆ ಹೊಸ ಯುಗದ ರೀತಿ ರಿವಾಜುಗಳಿಗೆ ತಯಾರಾಗಲೇಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಹೊಸ ಮಾದರಿಯ ವೃತ್ತಿಗಳು: ಡಿಜಿಟಲೀಕರಣ ಪ್ರಕ್ರಿಯೆ ಉದ್ಯಮಗಳ ವಾಣಿಜ್ಯ ವ್ಯವಹಾರಗಳ ಮೇಲೆ ಬಹುದೊಡ್ಡ ಪ್ರಭಾವ ಬೀರಲಿದೆ. ಕಾರ್ಪೊರೇಟ್ ಸಂಸ್ಥೆಗಳು ಕ್ಲೌಡ್ ಕಂಪ್ಯೂಟಿಂಗ್, ಎಐ, ಬಿಗ್ ಡೇಟಾ, ಡಿಜಿಟಲ್ ವೇದಿಕೆಗಳು ಮತ್ತು ಆ್ಯಪ್‍ಗಳನ್ನು ತಮ್ಮ ದೈನಂದಿನ ನಿರ್ವಹಣೆಯಲ್ಲಿ ಅಳವಡಿಸಿಕೊಳ್ಳಲಿವೆ. ಬಹುತೇಕ ಉದ್ಯಮಗಳು ಆನ್‍ಲೈನ್ ಅಥವಾ ಡಿಜಿಟಲ್ ವ್ಯಾಪಾರ ಮತ್ತು ಈ-ಕಾಮರ್ಸ್ ವಹಿವಾಟನ್ನು ಹೊಂದಲಿವೆ. ಇದರ ಪರಿಣಾಮ ಡೇಟಾ ಅನಲಿಟಿಕ್ಸ್, ಬಿಸಿನೆಸ್ ಅನಲಿಟಿಕ್ಸ್, ವೈಯಕ್ತಿಕ ಡೇಟಾ ನಿರ್ವಹಣೆ, ಎನ್‍ಕ್ರಿಪ್ಷನ್, ಸೈಬರ್ ಸುರಕ್ಷತೆ, ಫೈನಾನ್ಷಿಯಲ್ ಅನಾಲಿಸಿಸ್, ಫಂಡ್ ನಿರ್ವಹಣೆ ಇವೇ ಮುಂತಾದ ವೃತ್ತಿಗಳಿಗೆ ಬೇಡಿಕೆ ಹೆಚ್ಚಾಗಲಿದೆ.

ಎಐ ವಿಜ್ಞಾನಿಗಳು ಮತ್ತು ಮಷೀನ್ ಲರ್ನಿಂಗ್ ಎಂಜಿನಿಯರ್‌ಗಳು, ಮಾಹಿತಿ ಸುರಕ್ಷತಾ ಅನಲಿಸ್ಟ್‌ಗಳು, ಸಿಸ್ಟಮ್ ಎಂಜಿನಿಯರ್‌ಗಳು ಮಂಚೂಣಿಗೆ ಬರಲಿದ್ದಾರೆ. ಡಿಜಿಟಲ್ ತಂತ್ರಜ್ಞಾನದ ವಿಸ್ತರಣೆಯಿಂದಾಗಿ ಇ-ಕಾಮರ್ಸ್ ಪರಿಣತರು, ಡಿಜಿಟಲ್ ಟ್ರಾನ್ಸ್‌ಫಾರ್ಮೇಷನ್ ಪರಿಣತರು, ಎಥಿಕಲ್ ಹ್ಯಾಕರ್‌ಗಳು, ಡಿಜಿಟಲ್ ಮಾರ್ಕೆಟಿಂಗ್ ಮತ್ತು ತಂತ್ರಗಾರಿಕೆ ಪರಿಣತರಂತಹ ಸುಮಾರು 40 ಲಕ್ಷ ಸ್ವರೂಪದ ಹೊಸ ವೃತ್ತಿಗಳು ಸೃಷ್ಟಿಯಾಗಲಿವೆ ಎಂದು ಡಬ್ಲ್ಯುಇಎಫ್ ಅಂದಾಜಿಸಿದೆ.

ಮುಂದಿನ 25 ವರ್ಷಗಳು ನವಯುಗದ ಕರ್ನಾಟಕದ ವೃತ್ತಿಪರರಿಗೆ ಹೊಸ ಸವಾಲುಗಳು ಮತ್ತು ಅವಕಾಶಗಳ ಬಾಗಿಲುಗಳನ್ನು ಒಟ್ಟೊಟ್ಟಿಗೆ ತೆರೆಯಲಿವೆ. ಡಿಜಿಟಲ್ ಮತ್ತು ಎಐ ತಂತ್ರಜ್ಞಾನಾಧಾರಿತ ಔದ್ಯೋಗಿಕ ಮಾರುಕಟ್ಟೆಯಲ್ಲಿ ವಿಶ್ಲೇಷಣಾತ್ಮಕ ಸಾಮರ್ಥ್ಯ, ಕ್ರಿಯಾಶೀಲ ಆಲೋಚನೆ, ವೈಯುಕ್ತಿಕ ಕ್ಷಮತೆಯ ಅರಿವು, ನಿರಂತರ ಕಲಿಕೆ ಮತ್ತು ನಾಯಕತ್ವದ ಕೌಶಲಗಳು ಅತ್ಯಂತ ಅವಶ್ಯಕ. ಐವತ್ತರ ಹರೆಯದ ಕರ್ನಾಟಕ ಹೊಸ ಯುಗದ ಉದ್ಯೋಗಾವಕಾಶಗಳಿಗೆ ಸನ್ನದ್ಧವಾಗುವ ದಿಸೆಯಲ್ಲಿ ಅಗತ್ಯವಾದ ವೃತ್ತಿಕೌಶಲಗಳನ್ನು ರೂಢಿಸಿಕೊಳ್ಳಲೇಬೇಕಿದೆ. ಇದು ಈ ಕಾಲಘಟ್ಟದ ಅಗತ್ಯವೂ ಹೌದು.

ಲೇಖಕ: ಸಹ ಪ್ರಾಧ್ಯಾಪಕ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಕುವೆಂಪು ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.