ಕೋವಿಡ್ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಕರ್ನಾಟಕದ ‘ಗ್ರಾಮಾರೋಗ್ಯ’ ಸಂಪೂರ್ಣವಾಗಿ ಹದಗೆಟ್ಟು ಹಳ್ಳಿಗಳೆಲ್ಲ ಹಾಸಿಗೆ ಹಿಡಿಯಲು ಮುಖ್ಯವಾಗಿ ಮೂರು ಕಾರಣಗಳುಂಟು. ಅವುಗಳೆಂದರೆ– ಆರೋಗ್ಯ ಮೂಲಸೌಕರ್ಯದ ಗೈರು, ವೈದ್ಯರ ಕೊರತೆ ಮತ್ತು ಆರೋಗ್ಯ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವಲ್ಲಿ ತೋರಲಾದ ದಿವ್ಯ ನಿರ್ಲಕ್ಷ್ಯ. ನೀವು ಚಾಮರಾಜನಗರದ ಯಾವುದೇ ಹಾಡಿಯಿಂದ ಬೀದರ್‌ನ ಕಟ್ಟಕಡೆಯ ಗ್ರಾಮದವರೆಗೆ, ದಕ್ಷಿಣ ಕನ್ನಡದ ಸಮುದ್ರ ತೀರದಿಂದ ಚಿತ್ರದುರ್ಗದ ಗುಡ್ಡದ ಮೇಲಿನ ಹಟ್ಟಿಯವರೆಗೆ ಎತ್ತಸುತ್ತಿ ನೋಡಿದರೂ ‘ಗ್ರಾಮಾರೋಗ್ಯ’ದ ತಪಾಸಣಾ ವರದಿಗಳಲ್ಲಿ ಇವೇ ಮೂರು ‘ರೋಗ ಲಕ್ಷಣ’ಗಳು ಎದ್ದು ಕಾಣುತ್ತವೆ.
ಮೂರು ಹಂತಗಳ ನಮ್ಮ ಗ್ರಾಮೀಣ ಆರೋಗ್ಯ ವ್ಯವಸ್ಥೆಯಲ್ಲಿ ತೀರಾ ಕೆಳಸ್ತರದಲ್ಲಿರುವ ಉಪ ಆರೋಗ್ಯ ಕೇಂದ್ರಗಳು (ಎಸ್‌ಎಚ್‌ಸಿ) ಅಗತ್ಯ ಪ್ರಮಾಣಕ್ಕಿಂತಲೂ ಶೇ 18ರಷ್ಟು ಕಡಿಮೆ ಇವೆ. ಹಾಗೆಯೇ ಮಧ್ಯದ ಸ್ತರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ (ಪಿಎಚ್‌ಸಿ) ಪ್ರಮಾಣದಲ್ಲಿ ಶೇ 22ರಷ್ಟು, ಮೇಲಿನ ಸ್ತರದ ಸಮುದಾಯ ಆರೋಗ್ಯ ಕೇಂದ್ರಗಳ (ಸಿಎಚ್‌ಸಿ) ಪ್ರಮಾಣದಲ್ಲೂ ಶೇ 30ರಷ್ಟು ಕೊರತೆ ಇದೆ. ಗ್ರಾಮಾಂತರ ಭಾಗದಲ್ಲಿ ಪ್ರತೀ ಹತ್ತು ಸಾವಿರ ಜನಸಂಖ್ಯೆಗೆ ಲಭ್ಯವಿರುವ ಸರ್ಕಾರಿ ಆಸ್ಪತ್ರೆ ಹಾಸಿಗೆಗಳ ಸಂಖ್ಯೆ 3.2ರಷ್ಟು ಮಾತ್ರ. ಕಲ್ಯಾಣ ಕರ್ನಾಟಕದ ಹಿಂದುಳಿದ ತಾಲ್ಲೂಕುಗಳಲ್ಲಿ ಪ್ರತೀ ಹತ್ತುಸಾವಿರ ಜನಸಂಖ್ಯೆಗೆ ಕೇವಲ ಒಬ್ಬ ವೈದ್ಯರ ಸೇವೆ ಲಭ್ಯವಿದೆ. ಪಟ್ಟಣ ಪ್ರದೇಶಗಳನ್ನೂ ಒಳಗೊಂಡಂತೆ ಗ್ರಾಮೀಣ, ಅರೆಗ್ರಾಮೀಣ ಭಾಗಗಳ ಆರೋಗ್ಯ ಕೇಂದ್ರಗಳಲ್ಲಿ ತಜ್ಞವೈದ್ಯರ ಕೊರತೆ ಶೇ 81.9ರಷ್ಟಿದೆ. ಇವುಗಳೆಲ್ಲ ರಾಷ್ಟ್ರೀಯ ಆರೋಗ್ಯ ಸಮೀಕ್ಷೆಗಳೇ ಹೊರಹಾಕಿರುವ ಅಂಕಿ ಅಂಶಗಳು.
ಆರೋಗ್ಯ ಕೇಂದ್ರಗಳಲ್ಲಿ ಬಹುಮುಖ್ಯವಾಗಿ ಬೇಕಾಗಿರುವುದು ರೋಗಪತ್ತೆ ಪರೀಕ್ಷಾ ವ್ಯವಸ್ಥೆ. ರೋಗವನ್ನು ಪತ್ತೆ ಮಾಡಿದರೆ ಅರ್ಧ ಯುದ್ಧವನ್ನು ಗೆದ್ದಂತೆ. ಆಗ ಚಿಕಿತ್ಸೆಗೆ ದಾರಿ ಸುಲಭ. ಆದರೆ, ಅಸ್ಥಿಪಂಜರಗಳಂತೆ ನಿಂತಿರುವ ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ರೋಗಪತ್ತೆಗೆ ಬೇಕಾದ ಪರೀಕ್ಷಾ ಸೌಲಭ್ಯಗಳೇ ಇಲ್ಲ. ತಜ್ಞವೈದ್ಯರ ಲಭ್ಯತೆ ಒತ್ತಟ್ಟಿಗಿರಲಿ, ಎಷ್ಟೋ ಕಡೆ ಒಬ್ಬ ಫಿಸಿಶಿಯನ್ ಕೂಡ ಲಭ್ಯವಿಲ್ಲ. ಹೀಗಾಗಿ ಸಮುದಾಯದ ಆರೋಗ್ಯದ ಅಗತ್ಯಗಳಿಗೆ ತಕ್ಕಂತೆ ಅರ್ಥಪೂರ್ಣವಾಗಿ ಸ್ಪಂದಿಸಲು ಅವುಗಳಿಂದ ಸಾಧ್ಯವಾಗುತ್ತಿಲ್ಲ. ಹಾವು ಕಚ್ಚಿಸಿಕೊಂಡು ಬಂದವರಿಗೂ ತುರ್ತಾಗಿ ಚಿಕಿತ್ಸೆ ಕೊಡುವಷ್ಟು ಔಷಧಿಗಳಾಗಲೀ ಒಂದು ಪುಟ್ಟ ಶಸ್ತ್ರಚಿಕಿತ್ಸೆ ನಡೆಸುವಷ್ಟು ಸಾಧನ ಸೌಲಭ್ಯಗಳಾಗಲೀ ಇಂತಹ ಕೇಂದ್ರಗಳಲ್ಲಿಲ್ಲ. ಸಂಬಂಧಿಗಳು ಅಸ್ವಸ್ಥರನ್ನು ಕರೆದುಕೊಂಡು ಪಟ್ಟಣದ ಆಸ್ಪತ್ರೆಗಳತ್ತ ಓಡಲೇಬೇಕು. ಬಯಲು ಸೀಮೆಯಲ್ಲಿ ಆಸ್ಪತ್ರೆಗೆ ತೆರಳಲು ದಾರಿಗಳಾದರೂ ಇವೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಹಾಸನ ಜಿಲ್ಲೆಗಳ ಘಟ್ಟ ಪ್ರದೇಶಗಳಲ್ಲಿ, ಚಾಮರಾಜನಗರದ ಹಾಡಿಗಳಿರುವ ತಾಣಗಳಲ್ಲಿ ಸರಾಗವಾಗಿ ಓಡಾಡಲು ದಾರಿಗಳೂ ಇಲ್ಲದೆ ಎಷ್ಟೋ ಕಡೆ ಕಡಿದಾದ ಹಾದಿಗಳಲ್ಲಿ ರೋಗಿಗಳನ್ನು ಹೊತ್ತುಕೊಂಡೇ ಹೋಗುವಂತಹ ಸನ್ನಿವೇಶ ಇದೆ.
ಗ್ರಾಮೀಣ ಭಾಗಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕೊರತೆಗಳ ಉದ್ದನೆಯ ಪಟ್ಟಿಯೇ ದೊಡ್ಡ ತೊಡಕಾದರೆ, ಈ ಕೇಂದ್ರಗಳ ಕುರಿತು ಜನರಿಗೆ ಇರುವ ಭಯ ಹಾಗೂ ಅಪನಂಬಿಕೆ ಅಷ್ಟೇ ದೊಡ್ಡ ಸವಾಲು. ಆರೋಗ್ಯ ಸಿಬ್ಬಂದಿ, ರೋಗಿಗಳೊಂದಿಗೆ ನಡೆದುಕೊಳ್ಳುವ ರೀತಿಯೇ ಇದಕ್ಕೆ ಕಾರಣ. ವೈದ್ಯರು ಇಲ್ಲದಿರುವುದು, ರೋಗಿಗಳ ಪ್ರಶ್ನೆಗಳಿಗೆ ಸಿಬ್ಬಂದಿ ಅಸಡ್ಡೆಯಿಂದ ಉತ್ತರಿಸುವುದು, ರೋಗಲಕ್ಷಣವನ್ನು ಸರಿಯಾಗಿ ಗುರುತಿಸದೆ ಚುಚ್ಚುಮದ್ದು ಹಾಕಿ ಕಳುಹಿಸುವುದು, ಆರೈಕೆಯಲ್ಲಿ ನಿರ್ಲಕ್ಷ್ಯ ವಹಿಸುವುದು– ಇಂತಹ ಕಾರಣಗಳಿಂದ ಆರೋಗ್ಯ ಕೇಂದ್ರಗಳು ಜನರ ವಿಶ್ವಾಸವನ್ನು ಬಹುಮಟ್ಟಿಗೆ ಕಳೆದುಕೊಂಡಿವೆ. ಸರ್ಕಾರಿ ಆಸ್ಪತ್ರೆಗಳೆಂದರೆ, ‘ಅಲ್ಲಿ ಡಾಕ್ಟ್ರು ಇರ್ತಾರಾ’, ‘ಸರಿಯಾಗಿ ಟ್ರೀಟ್‌ಮೆಂಟ್ ಕೊಡ್ತಾರಾ’ ಎಂದೆಲ್ಲ ಪ್ರಶ್ನಿಸುತ್ತಾ ಅಂಜಿಕೆಯಿಂದ ಹಿಂದೆ ಸರಿಯುವಂತೆ ಮಾಡಿವೆ. ಸಾಲ ಮಾಡಿದರೂ ಪರವಾಗಿಲ್ಲ, ಖಾಸಗಿ ಆಸ್ಪತ್ರೆಗಳಲ್ಲೇ ತೋರಿಸುವುದು ವಾಸಿ ಎನ್ನುವ ಮನಃಸ್ಥಿತಿಗೂ ಅವರು ಬರಲು ಕಾರಣವಾಗಿವೆ. ಆದರೆ, ಆ ಖಾಸಗಿ ಆಸ್ಪತ್ರೆಗಳು ಸಹ ಎಲ್ಲ ‘ಅರ್ಥ’ದಲ್ಲೂ ಹಳ್ಳಿಗರ ಕೈಗೆಟಕದಷ್ಟು ದೂರವೇ ಉಳಿದಿವೆ. ಅದು ಗದಗ ಜಿಲ್ಲೆಯ ಬೆಳ್ಳಟ್ಟಿಯೇ ಆಗಿರಲಿ, ಕೊಡಗು ಜಿಲ್ಲೆಯ ಕಾಡ್ಮನೆ ಆಗಿರಲಿ ಎಲ್ಲ ಕಡೆಗಳಲ್ಲಿ ಇಂತಹದ್ದೇ ಮನೋಭಾವ, ಇಂತಹದ್ದೇ ವಾತಾವರಣ.
ಕೋವಿಡ್ ಸಾವು ನೋವಿನ ತೀವ್ರತೆ ರಾಜ್ಯದ ಗ್ರಾಮಾಂತರ ಭಾಗದಲ್ಲಿ ವರದಿ ಆಗಿರುವ ಪ್ರಮಾಣಕ್ಕಿಂತಲೂ ಹೆಚ್ಚಾಗಿದೆ. ಬಹುತೇಕ ಹಳ್ಳಿಗಳಲ್ಲಿ ಕೋವಿಡ್ ಲಕ್ಷಣಗಳಿದ್ದರೂ ತಪಾಸಣೆ ಮಾಡಿಸಿಕೊಳ್ಳಲು ಜನ ಹಿಂದೇಟು ಹಾಕಿರುವುದು ಎದ್ದು ಕಂಡಿರುವ ಸತ್ಯ. ಎಷ್ಟೋ ಮಂದಿ ಚಿಕಿತ್ಸೆ ಪಡೆಯುವ ಗೋಜಿಗೆ ಹೋಗದೆ ಮನೆಯಲ್ಲಿಯೇ ನರಳಿ ಪ್ರಾಣಬಿಟ್ಟ ಕಥೆಗಳು ಹಳ್ಳಿ–ಹಳ್ಳಿಯಲ್ಲೂ ಬಿಚ್ಚಿಕೊಳ್ಳುತ್ತವೆ. ಸಾವಿರಾರು ಕೋವಿಡ್ ಸಾವುಗಳು ದಾಖಲೆಗೆ ಸೇರದೆ ‘ಸಹಜ ಸಾವು’ಗಳಾಗಿ ಮಾರ್ಪಟ್ಟಿರುವುದು ಕಟು ವಾಸ್ತವ. ರಾಜ್ಯದಲ್ಲಿ ಗ್ರಾಮೀಣ ಭಾಗದ ಜನಸಂಖ್ಯೆಯ ಪ್ರಮಾಣ ಶೇ 61.33ರಷ್ಟಿದೆ (ದೇಶದಲ್ಲಿ ಈ ಪ್ರಮಾಣದ ಸರಾಸರಿ ಶೇ 65). ಈ ಜನಸಂಖ್ಯೆಗೆ ಲಭ್ಯವಿರುವ ಆಸ್ಪತ್ರೆ ಹಾಸಿಗೆಗಳ ಪ್ರಮಾಣ, ರಾಜ್ಯದ ಒಟ್ಟು ಸಾಮರ್ಥ್ಯದ ಶೇ 35ರಷ್ಟು ಮಾತ್ರ. ಈ ಅಂಶವೊಂದೇ ಸಾಕು, ಗ್ರಾಮಾಂತರ ಪ್ರದೇಶದಲ್ಲಿರುವ ಆರೋಗ್ಯದ ಅವ್ಯವಸ್ಥೆಗೆ ಕನ್ನಡಿ ಹಿಡಿಯಲು. ಹಳ್ಳಿಗಳಲ್ಲಿ ವೈರಾಣುವಿನ ತೀವ್ರವಾದ ಹೊಡೆತಕ್ಕೆ ಸಿಕ್ಕ ರೋಗಿಯನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಲು ಕನಿಷ್ಠ ಆರರಿಂದ ಎಂಟು ಗಂಟೆ ಬೇಕು. ರೋಗಿಯನ್ನು ಉಳಿಸಿಕೊಳ್ಳಲು ಇರುವ ‘ಸುವರ್ಣ ಸಮಯ’ ಆಸ್ಪತ್ರೆ ಹುಡುಕಾಟದಲ್ಲೇ ಕಳೆದು ಹೋಗಿದ್ದರಿಂದ ಗ್ರಾಮಾಂತರ ಭಾಗಗಳಲ್ಲಿ ಕೋವಿಡ್ ಮರಣಗಳ ಪ್ರಮಾಣ ಹೆಚ್ಚಾಗಿದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ.
ಕೋವಿಡ್ ಪ್ರಕರಣಗಳ ಅಸಮರ್ಪಕ ನಿಗಾ ವ್ಯವಸ್ಥೆ ಕುರಿತು, ಪರಿಸ್ಥಿತಿ ನಿರ್ವಹಣೆಯಲ್ಲಿ ಆಗುತ್ತಿರುವ ವೈಫಲ್ಯಗಳ ಕುರಿತು, ವೆಂಟಿಲೇಟರ್–ಆಕ್ಸಿಜನ್ ಅಲಭ್ಯತೆ ಕುರಿತು, ಸರಿಯಾದ ತಪಾಸಣಾ ಸೌಲಭ್ಯ ಇಲ್ಲದಿರುವ ಕುರಿತು, ವೈದ್ಯಕೀಯ ಆರೈಕೆಯಲ್ಲಿ ಆಗುತ್ತಿರುವ ಲೋಪಗಳ ಕುರಿತು ತಜ್ಞರು ಎಚ್ಚರಿಸುತ್ತಲೇ ಬಂದರೂ ಗ್ರಾಮಾಂತರ ಭಾಗದಲ್ಲಿ ಗಣನೀಯ ಬದಲಾವಣೆಗಳು ಏನೂ ಕಂಡುಬರಲಿಲ್ಲ. ಕೋವಿಡ್‌ನ ಮೊದಲ ಅಲೆಯ ಸಂದರ್ಭದಲ್ಲೇ ವೈರಾಣು ಗ್ರಾಮೀಣ ಭಾಗದಲ್ಲಿಯೂ ಹರಡುವ ಸಾಧ್ಯತೆಯಿದ್ದು, ಅಲ್ಲಿನ ಸೌಲಭ್ಯಗಳನ್ನು ಈಗಲೇ ಹೆಚ್ಚಿಸಬೇಕು ಎಂಬ ಸಲಹೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಗ್ರಾಮೀಣ ಭಾಗಗಳಲ್ಲಿ ಕೋವಿಡ್ ನಿರ್ವಹಣೆಗೆ ಕೇಂದ್ರ ಸರ್ಕಾರ ಮೇ 16ರಂದು ನಿಯಮಾವಳಿ ರೂಪಿಸುವವರೆಗೆ ಎದ್ದು ಕಾಣುವಂತಹ ಯಾವ ಗಟ್ಟಿ ಕ್ರಮವೂ ಕಾಣಲಿಲ್ಲ. ಹೀಗಾಗಿ ನೂರಾರು ಹಳ್ಳಿಗಳು ಕೋವಿಡ್‌ನ ‘ಹಾಟ್‌ಬೆಡ್’ಗಳಾಗಿ ರೂಪಾಂತರ ಹೊಂದಿದವು. ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ಪೀಡಿತರಾದ ನೂರರಲ್ಲಿ 20 ಮಂದಿಗೆ ಮಾತ್ರ ಆಸ್ಪತ್ರೆಗಳಲ್ಲಿ ಆರೈಕೆ ಬೇಕಿತ್ತು. ಆದರೆ, ಅಷ್ಟು ಸಣ್ಣ ಅಗತ್ಯವನ್ನೂ ಪೂರೈಸಲಾಗದೆ ನಮ್ಮ ಆರೋಗ್ಯ ವ್ಯವಸ್ಥೆ ಸೋತು ಕೈಚೆಲ್ಲಿತು. ಪಿಎಚ್‌ಸಿ, ಸಿಎಚ್‌ಸಿ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಮೂಲಸೌಕರ್ಯವನ್ನು ಮುಂಚಿತವಾಗಿ ಹೆಚ್ಚಿಸಿದ್ದರೆ, ಹಳ್ಳಿಗಳಿಂದ ಆಸ್ಪತ್ರೆಗಳಿಗೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆಯನ್ನೂ ಮಾಡಿದ್ದರೆ, ಅಗತ್ಯ ಸಂಖ್ಯೆಯಲ್ಲಿ ಆಂಬುಲೆನ್ಸ್‌ಗಳು ಲಭ್ಯವಾಗಿದ್ದರೆ ಪರಿಸ್ಥಿತಿ ಇಷ್ಟೊಂದು ವಿಕೋಪಕ್ಕೆ ಹೋಗುತ್ತಿರಲಿಲ್ಲ.
ರಾಜ್ಯದ ಕೆಲವು ಉಪ ಆರೋಗ್ಯ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕವಾಗಲೀ ನೀರಿನ ಸಂಪರ್ಕವಾಗಲೀ ಇಲ್ಲ ಎಂದಮೇಲೆ ಸರ್ಕಾರ ಈ ವಿಷಯದಲ್ಲಿ ಎಷ್ಟೊಂದು ಗಂಭೀರವಾಗಿದೆ ಎಂಬುದನ್ನು ನೀವೇ ಊಹಿಸಿ. ಪಿಎಚ್‌ಸಿಗಳಲ್ಲಿ ಕನಿಷ್ಠ ನಾಲ್ಕು ಹಾಸಿಗೆ ಸೌಲಭ್ಯವಾದರೂ ಇರಬೇಕು ಎನ್ನುವುದು ನಿಯಮ. ಆದರೆ, ಕಲ್ಯಾಣ ಕರ್ನಾಟಕದ ಬಹುತೇಕ ಪಿಎಚ್‌ಸಿಗಳಲ್ಲಿ ಒಂದು ಹಾಸಿಗೆ ಸೌಲಭ್ಯವೂ ಇಲ್ಲ. ವೈದ್ಯರು ಇರಲಿ, ಎಷ್ಟೋ ಕೇಂದ್ರಗಳಲ್ಲಿ ನರ್ಸ್‌ಗಳು, ಸೂಲಗಿತ್ತಿಯರು, ಪ್ರಯೋಗಾಲಯದ ಸಹಾಯಕರು ಸಹ ಇಲ್ಲ. ಅವುಗಳು ಹೆಸರಿಗೆ ಮಾತ್ರ ಬಾಗಿಲು ತೆರೆದಿರುತ್ತವೆ ಎನ್ನುತ್ತವೆ ಖುದ್ದು ಸ್ಥಳಕ್ಕೆ ಹೋಗಿ ಬರೆದಿರುವ ವರದಿಗಳು. ಆರೋಗ್ಯ ಕೇಂದ್ರಗಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ವಿಫಲವಾದ ಸರ್ಕಾರ, ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆ ಲಾಕ್‌ಡೌನ್ ವಿಧಿಸಿ, ಹಳ್ಳಿಗರನ್ನೂ ಮನೆಯಲ್ಲಿಯೇ ಕುಳಿತು ದಣಿಯುವಂತೆ ಮಾಡಿತು. ಏನು ಮಾಡುವುದು? ನಮ್ಮ ನೀತಿ ನಿರೂಪಣೆಗಳೇ ಹಾಗಿವೆ. ರೋಗಗಳು ದಾಳಿ ಇಡುವುದನ್ನು ತಡೆಗಟ್ಟುವುದು ನಮ್ಮ ಆದ್ಯತೆಯಾಗುವ ಬದಲು ರೋಗ ಬಂದಮೇಲೆ ನಿರ್ವಹಣೆಗೆ ಒತ್ತು ನೀಡುವುದು ನಮ್ಮ ಸಮುದಾಯ ಆರೋಗ್ಯದ ನೀತಿಯಾಗಿಬಿಟ್ಟಿದೆ.
‘ನರ್ಸ್‌ಗಳಿಗೆ ತರಬೇತಿ ಕೊಡಿ’
ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಸ್ವಾಮಿ ವಿಶ್ವನಾಥನ್, ಕೋವಿಡ್‌ನ ಮೊದಲ ಅಲೆ ಎದ್ದಾಗಲೇ ಒಂದು ಮಾತು ಹೇಳಿದ್ದರು. ‘ವೈರಾಣುವಿನ ತೀವ್ರತೆ ಹೆಚ್ಚಿದರೆ ಗ್ರಾಮಭಾರತವೆಲ್ಲ ಕೋವಿಡ್‌ನ ‘ಹಾಟ್‌ಬೆಡ್’ ಆಗಲಿದೆ. ಎದುರಿಗಿರುವ ಈ ಸವಾಲನ್ನೇ ಒಂದು ದೊಡ್ಡ ಅವಕಾಶವನ್ನಾಗಿ ಮಾಡಿಕೊಂಡು ಗ್ರಾಮೀಣ ಭಾಗದಲ್ಲಿ ಕ್ಷಿಪ್ರಗತಿಯಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಬೇಕು. ಹಾಗೆಯೇ ತರಬೇತಿ ಹೊಂದಿದ ಆರೋಗ್ಯ ಸೇವಕರ ಪಡೆಯನ್ನು ಕಟ್ಟಬೇಕು’ ಎಂದು. ಆದರೆ, ಇವರ ಮಾತಾಗಲೀ ಹಳ್ಳಿಗರ ಆಕ್ರಂದನವಾಗಲೀ ಯಾವುದೂ ಸರ್ಕಾರದ ಕಿವಿಗೆ ಬೀಳಲಿಲ್ಲ. ‘ಗ್ರಾಮೀಣ ಭಾಗಗಳಲ್ಲಿ ವೈದ್ಯರ ಕೊರತೆ ಇರುವುದು ವಾಸ್ತವ. ಸರ್ಕಾರ ಇದನ್ನು ಒಪ್ಪಿಕೊಳ್ಳಬೇಕು. ಅಲ್ಲಿರುವ ನರ್ಸ್‌ಗಳಿಗೇ ಕೆಲವು ಚಿಕಿತ್ಸೆಗಳನ್ನು ನೀಡುವಂತಹ ತರಬೇತಿ ಕೋರ್ಸ್ ನಡೆಸಿದರೆ ಸಿಬ್ಬಂದಿ ಕೊರತೆಯನ್ನು ಒಂದು ಹಂತದವರೆಗೆ ನೀಗಿಸಬಹುದು’ ಎಂದು ಡಾ. ದೇವಿ ಶೆಟ್ಟಿ ಕೂಡ ಈ ಹಿಂದೆ ಸಲಹೆ ನೀಡಿದ್ದರು. ತಜ್ಞರ ಮಾತುಗಳಿಗೆ ಸರ್ಕಾರ ಇನ್ನಾದರೂ ಕಿವಿಗೊಡಬೇಕು. ಹದಗೆಟ್ಟ ಗ್ರಾಮಾರೋಗ್ಯಕ್ಕೆ ಸೂಕ್ತ ಮದ್ದು ಅರೆಯುವ ಕೆಲಸವನ್ನು ಮಾಡಬೇಕು. ಏಕೆಂದರೆ, ಗ್ರಾಮದ ಆರೋಗ್ಯವೇ ಗ್ರಾಮಭಾರತದ ಇಂಧನ ಶಕ್ತಿಯಾಗಿ ಕೆಲಸ ಮಾಡುವುದು.
ವಿಶ್ವಾಸ ಮೂಡಿಸಲು ಸಾಧ್ಯವೇ?
ರಾಜ್ಯದ ಗ್ರಾಮಾಂತರ ಭಾಗದಲ್ಲಿ ಪ್ರತೀ 35 ಸಾವಿರ ಜನರಿಗೆ ಒಂದರಂತೆ ಸಿಎಚ್‌ಸಿ ಇದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡುತ್ತದೆ. ಆದರೆ, ಪಕ್ಕದ ತಮಿಳುನಾಡು ಹಾಗೂ ಕೇರಳದಲ್ಲಿ ಈ ಸೌಲಭ್ಯ ಪ್ರತೀ ಹತ್ತು ಸಾವಿರ ಜನರಿಗೆ ಒಂದರಂತೆ ಇದೆ. ತಮಿಳುನಾಡಿನ ಸಿಎಚ್‌ಸಿಯಲ್ಲಿ ರೋಗಿಗೆ ಯಾವುದೇ ಔಷಧಿಯನ್ನು ಹೊರಗಿನಿಂದ ಖರೀದಿಸುವಂತೆ ಹೇಳುವುದಿಲ್ಲ. ಹಾಗೊಂದು ವೇಳೆ ಔಷಧಿಯನ್ನು ಹೊರಗಿನಿಂದ ತರಿಸಿರುವುದು ಸರ್ಕಾರದ ಗಮನಕ್ಕೆ ಬಂದರೆ ಅಂಥವರನ್ನು ಕೂಡಲೇ ಕೆಲಸದಿಂದ ತೆಗೆದುಹಾಕಲಾಗುತ್ತದೆ. ನಮ್ಮ ಬಡಾವಣೆಯಲ್ಲಿ ವಾಸಿಸುವ ತಮಿಳುನಾಡು ಮೂಲದ ಮಹಿಳೆಯೊಬ್ಬರು ಹೆರಿಗೆಗಾಗಿ ತಮ್ಮೂರಿನ ಆಸ್ಪತ್ರೆಗೆ ಹೊರಟಿದ್ದರು. ಬೆಂಗಳೂರಿಗಿಂತಲೂ ಆ ಪುಟ್ಟ ಊರಿನಲ್ಲಿ ವೈದ್ಯಕೀಯ ಸೌಲಭ್ಯ ಅಷ್ಟೊಂದು ಚೆನ್ನಾಗಿದೆಯೇ ಎಂದು ಕೇಳಿದಾಗ, ಅಲ್ಲಿನ ಸಿಎಚ್‌ಸಿಯಲ್ಲಿ ಯಾವುದೇ ಖರ್ಚಿಲ್ಲದೆ ಹೆರಿಗೆ ಮಾಡಿಸಿ, ವಾರದವರೆಗೆ ಆರೈಕೆಮಾಡಿ ಕಳಿಸಲಾಗುತ್ತದೆ. ಅಲ್ಲಿನ ಸಿಎಚ್‌ಸಿಗಳಲ್ಲಿ ವೈದ್ಯಕೀಯ ಸೌಲಭ್ಯಗಳೂ ಚೆನ್ನಾಗಿವೆ ಎಂದು ಅವರ ಕುಟುಂಬದವರು ಹೇಳಿದರು. ನಮ್ಮ ಆರೋಗ್ಯ ಕೇಂದ್ರಗಳನ್ನೂ ಜನ ಹೀಗೆ ತುಂಬು ವಿಶ್ವಾಸದಿಂದ ಹುಡುಕಿಕೊಂಡು ಹೋಗುವಂತಹ ವಾತಾವರಣ ನಿರ್ಮಿಸಬೇಕಲ್ಲವೇ?
**
ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದ್ದು, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪ್ರಾಯೋಗಿಕವಾಗಿ ಮೇಲ್ದರ್ಜೆಗೇರಿಸಿ, ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಆರೋಗ್ಯ ಸವಲತ್ತುಗಳನ್ನು ನೀಡುವ ಉದ್ದೇಶವಿದೆ. ಆಸ್ಪತ್ರೆಗಳ ಖಾಲಿ ಹುದ್ದೆ ತುಂಬಲು 1,763 ವೈದ್ಯರು ಹಾಗೂ ವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಂತರ ಗುತ್ತಿಗೆ ಆಧಾರದಲ್ಲಿ ಒಂದು ವರ್ಷ ಕಡ್ಡಾಯ ಸೇವೆಯಡಿ 2,050 ವೈದ್ಯರ ನೇಮಕ ನಡೆದಿದೆ.
–ಡಾ.ಕೆ. ಸುಧಾಕರ್,ಆರೋಗ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.