ADVERTISEMENT

ಆಳ–ಅಗಲ | ಭೂಕುಸಿತ: ಕಲಿಯದ ಪಾಠ

ಪಶ್ಚಿಮ ಘಟ್ಟದಲ್ಲಿ ಮರುಕಳಿಸುತ್ತಲೇ ಇವೆ ಅನಾಹುತಗಳು

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 23:36 IST
Last Updated 25 ಜುಲೈ 2024, 23:36 IST
   

ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ಘಟನೆಯು ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಜನರನ್ನು ಬೆಚ್ಚಿಬೀಳಿಸಿದೆ. 11 ಜನರನ್ನು ಬಲಿ ತೆಗೆದುಕೊಂಡ ದುರಂತವು ಭೂಕುಸಿತಕ್ಕೆ ಸಂಬಂಧಿಸಿದ ಈ ಭಾಗದ ಜನರ ಸಾವು ನೋವು, ಕಷ್ಟನಷ್ಟಗಳ ಭಯಂಕರ ನೆನಪುಗಳಿಗೆ ಮರುಜೀವ ನೀಡಿದೆ.     

ಹಿಮಾಲಯಕ್ಕಿಂತಲೂ ಪುರಾತನವಾದ ಸಹ್ಯಾದ್ರಿ ಬೆಟ್ಟ ಸಾಲುಗಳು ನಿಸರ್ಗ ಸಂಪತ್ತಿನ ಮತ್ತು ಹಲವು ನದಿಗಳ ಮೂಲ. ಅಪಾರ ಸಸ್ಯವೈವಿಧ್ಯ, ಜೀವವೈವಿಧ್ಯ ಮತ್ತು ಕೋಟ್ಯಂತರ ಜನರು ಈ ಬೆಟ್ಟಗಳ ಶ್ರೇಣಿಯನ್ನು ಅವಲಂಬಿಸಿದ್ದಾರೆ. ದಶಕದಿಂದೀಚೆಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭೂಕುಸಿತ ಒಂದು ಸಾಮಾನ್ಯ ವಿದ್ಯಮಾನದಂತಾಗಿದ್ದು, ರಾಜ್ಯದ ಗಂಭೀರ ಸಮಸ್ಯೆಗಳಲ್ಲೊಂದಾಗಿ ಬದಲಾಗಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯ ಏಳು ಜಿಲ್ಲೆಗಳ 30 ತಾಲ್ಲೂಕುಗಳು ಪ್ರತಿ ಮಳೆಗಾಲದಲ್ಲಿ ಭೂಕುಸಿತದ ಭೀತಿ ಎದುರಿಸುತ್ತಿವೆ.

ಭೂಕುಸಿತದ ಬಗ್ಗೆ ನಡೆದಿರುವ ಹಲವು ಅಧ್ಯಯನಗಳು, ಗುಡ್ಡಗಳು ಕುಸಿದು ಬೀಳಲು ಕಾರಣಗಳೇನು ಎಂಬುದನ್ನು ಪಟ್ಟಿ ಮಾಡಿರುವುದಲ್ಲದೆ, ಅದಕ್ಕೆ ಪರಿಹಾರೋಪಾಯಗಳು ಏನು ಎಂಬುದನ್ನು ಸರ್ಕಾರಕ್ಕೆ ತಿಳಿಸುವ ಕೆಲಸ ಮಾಡಿವೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ದುರ್ಘಟನೆ ಸಂಭವಿಸಿದಾಗ ರಕ್ಷಣಾ ಕಾರ್ಯಾಚರಣೆ ಮತ್ತು ಸಂತ್ರಸ್ತರಿಗೆ ಒಂದಿಷ್ಟು ಪರಿಹಾರ ನೀಡುವುದಕ್ಕೆ ಸೀಮಿತವಾಗಿವೆಯೇ ವಿನಾ, ಭವಿಷ್ಯದಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಮಾಡುವ ಶಾಶ್ವತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಮಳೆಗಾಲ ಆರಂಭದಲ್ಲಿ ಸದ್ದು ಮಾಡುವ ಭೂಕುಸಿತಗಳು, ಮಳೆಗಾಲ ಮುಕ್ತಾಯದ ಹೊತ್ತಿಗೆ ಸರ್ಕಾರ ಮತ್ತು ಜನರ ಮನಸ್ಸಿನಿಂದಲೂ ದೂರವಾಗುತ್ತವೆ.   

ADVERTISEMENT

ಕಾರವಾರ ಸಮೀಪದ ಕಡವಾಡದಲ್ಲಿ 2009ರಲ್ಲಿ ಸಂಭವಿಸಿದ ಭಾರಿ ಭೂಕುಸಿತವೇ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದ ಈ ಶತಮಾನದ ಮೊದಲ ದೊಡ್ಡ ಭೂಕುಸಿತ ಎನ್ನಲಾಗುತ್ತಿದೆ. ಆನಂತರ ಆಗೀಗ ಗುಡ್ಡ ಕುಸಿತ ಘಟಿಸುತ್ತಲೇ ಇದ್ದು, 2016ರ ನಂತರ ಅವುಗಳ ಸಂಖ್ಯೆ ಏರಿಕೆಯಾಗಿದೆ. ಕೊಡಗಿನಲ್ಲಿ 2018ರಲ್ಲಿ ಘಟಿಸಿದ ಭೂಕುಸಿತವಂತೂ ಇಡೀ ರಾಜ್ಯವನ್ನು ನಡುಗಿಸಿತ್ತು.

ಆ ವರ್ಷದ ಮುಂಗಾರಿನಲ್ಲಿ ಕೊಡಗಿನಲ್ಲಿ ಕಳೆದ 20 ವರ್ಷಗಳಲ್ಲಿ ಸುರಿಯುತ್ತಿದ್ದ ಸರಾಸರಿ ಮಳೆಗಿಂತ ಶೇ 32ರಷ್ಟು ಹೆಚ್ಚು ಮಳೆ ಸುರಿದಿತ್ತು. ಅದರಿಂದಾಗಿ ಜಿಲ್ಲೆಯಲ್ಲಿ ಭಾರಿ ಪ್ರವಾಹ ಉಂಟಾಗಿತ್ತು. ಮೊದಲ ಬಾರಿಗೆ ಜಿಲ್ಲೆಯಲ್ಲಿ ಒಂದಕ್ಕಿಂತ ಹೆಚ್ಚು ಭೂಕುಸಿತ ಸಂಭವಿಸಿದ್ದವು. 105 ಭೂಕುಸಿತಗಳನ್ನು ಭಾರತೀಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ (ಜಿಎಸ್‌ಐ) ದೃಢಪಡಿಸಿತ್ತು. 20 ಮಂದಿ ಸಾವಿಗೀಡಾದರೆ, 268 ಜಾನುವಾರುಗಳು ಅಸುನೀಗಿದ್ದವು; 900 ಮನೆಗಳಿಗೆ ಹಾನಿಯಾದರೆ, 33,548 ರೈತರ ಬೆಳೆ ಹಾನಿಯಾಗಿತ್ತು. ನೆಲೆ ಕಳೆದುಕೊಂಡಿದ್ದ 18,000 ಜನರಿಗಾಗಿ 45 ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿತ್ತು. 

ಇದರಿಂದ ಎಚ್ಚೆತ್ತಿದ್ದ ರಾಜ್ಯ ಸರ್ಕಾರವು, ಗುಡ್ಡ ಕುಸಿತದ ಬಗ್ಗೆ ಅಧ್ಯಯನಕ್ಕಾಗಿ ಒಂದು ಸಮಿತಿ ರಚಿಸಿತ್ತು. ಆ ಸಮಿತಿಯು 2021ರಲ್ಲಿ ‘ಕರ್ನಾಟಕದ ಪಶ್ಚಿಮ ಘಟ್ಟ ಹಾಗೂ ಕರಾವಳಿಯಲ್ಲಿ ಭೂಕುಸಿತ ತಡೆಗಟ್ಟುವ ಹಾಗೂ ನಿಯಂತ್ರಿಸುವ ಮಾರ್ಗೋಪಾಯಗಳು’ ಎನ್ನುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಕೆಎಸ್‌ಡಿಎಂಎ) ಭೂಕುಸಿತ ಪ್ರಕರಣಗಳ ನಿರ್ವಹಣೆಗಾಗಿ 2022ರಲ್ಲಿ ಕಾರ್ಯಯೋಜನೆಯೊಂದನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಅದರಲ್ಲಿ ಹೆಚ್ಚು ಮಳೆ ಬೀಳುವ, ಗುಡ್ಡಕುಸಿತದ ಸಂಭವನೀಯತೆ ಇರುವ ಸ್ಥಳಗಳನ್ನು ಗುರುತಿಸುವುದು, ಸೂಚನಾ ಫಲಕ ಅಳವಡಿಸುವುದು, ತಡೆಗೋಡೆ ನಿರ್ಮಿಸುವುದು, ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುವುದು, ವಿವಿಧ ಇಲಾಖೆಗಳ ಸಮನ್ವಯ ಸಾಧಿಸುವುದು, ತುರ್ತು ಕ್ರಮಕ್ಕೆ ಸಿದ್ಧವಾಗಿರುವುದು ಸೇರಿದಂತೆ ಹಲವು ಕಾರ್ಯಸೂಚಿಗಳನ್ನು ಪ್ರಸ್ತಾಪಿಸಿತ್ತು. ಆದರೆ, ಈ ಎರಡೂ ವರದಿಗಳ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.      

ತಜ್ಞರು ಹೇಳುವಂತೆ, ಇಂದು ಸಂಭವಿಸುತ್ತಿರುವ ಬಹುತೇಕ ಎಲ್ಲ ಭೂಕುಸಿತಗಳೂ ಮಾನವ ನಿರ್ಮಿತವೇ ಆಗಿವೆ. ಅದರಲ್ಲೂ ಮುಖ್ಯವಾಗಿ ಅರಣ್ಯ ಒತ್ತುವರಿ, ಅಕ್ರಮ ಗಣಿಗಾರಿಕೆಯ ಚಟುವಟಿಕೆಗಳು, ರಸ್ತೆ, ಮನೆ ಇತ್ಯಾದಿಗಳ ನಿರ್ಮಾಣಕ್ಕಾಗಿ ಕಾಡು ಹಾಗೂ ಗುಡ್ಡಗಳನ್ನು ಕಡಿಯುವುದು ಗುಡ್ಡ ಕುಸಿತಕ್ಕೆ ಕಾರಣವಾಗುತ್ತಿವೆ. ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪ ಮಿತಿಮೀರಿದರೆ ಇಂಥ ಅನಾಹುತಗಳು ಸಂಭವಿಸುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕಾರಣಗಳೇನು?

l ನೈಸರ್ಗಿಕ ಇಳಿಜಾರು (ಗುಡ್ಡ) ಕತ್ತರಿಸುವುದು

l ಅವೈಜ್ಞಾನಿಕ ಅಭಿವೃದ್ಧಿ ಕಾಮಗಾರಿಗಳು

l ಅರಣ್ಯ ನಾಶ, ಭೂಸವಕಳಿ

l ನೀರಿನ ಸಹಜ ಹರಿವಿಗೆ ತಡೆಯೊಡ್ಡುವುದು

l ಇಳಿಜಾರಿನ ಒಳಭಾಗದಲ್ಲಿ ಅತಿ ವೇಗದಿಂದ ನೀರು ಹರಿಯುವುದು

l ನಾಲೆಗಳಲ್ಲಿ ನೀರಿನ ಹರಿವಿಗೆ ತಡೆಯಾಗಿ (ಅಣೆಕಟ್ಟೆಯ ರೂಪ ತಾಳಿ) ದಿಢೀರ್‌ ಪ್ರವಾಹ ಸೃಷ್ಟಿಯಾಗುವುದು

l ಭೂವಿಜ್ಞಾನಕ್ಕೆ ಸಂಬಂಧಿಸಿದ ಕಾರಣಗಳು (ಮಣ್ಣಿನ ರಚನೆ,
ಮೇಲ್ಮಣ್ಣು, ಕೆಳಸ್ಥರದ ಭೂಮಿಯ ರಚನೆ)

l ಭಾರಿ ‍ಪ್ರಮಾಣದಲ್ಲಿ/ದೀರ್ಘಾವಧಿಗೆ ಸುರಿಯುವ ಮಳೆ

ಭೂಕುಸಿತ ತಡೆಯುವ ಬಗೆ...

l ಭೂಕುಸಿತದ ಸಾಧ್ಯತೆ ಇರುವ ಪ್ರದೇಶಗಳ ಗ್ರಾಮ ಮಟ್ಟದ ನಕ್ಷೆ ತಯಾರಿ

l ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ, ಕ್ವಾರಿ ಚಟುವಟಿಕೆಗಳ ತಡೆ

l ಅರಣ್ಯನಾಶ, ಭೂ ಸವಕಳಿ ತಡೆಗಟ್ಟುವುದು, ‌ವಿವಿಧ ಸ್ಥಳೀಯ ಗಿಡ ನೆಟ್ಟು ಪೋಷಣೆ

l ಅವೈಜ್ಞಾನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಕಡಿವಾಣ     

l ನೀರು ಹರಿಯುವ ಮಾರ್ಗಗಳ ಒತ್ತುವರಿ ತಡೆ, ಮುಚ್ಚದಂತೆ ಎಚ್ಚರ ವಹಿಸುವುದು

l ಗುಡ್ಡಗಳ ಇಳಿಜಾರು ಪ್ರದೇಶವನ್ನು ಕತ್ತರಿಸದೇ, ಮೇಲ್ಮಣ್ಣು ಕೊಚ್ಚಿಹೋಗದಂತೆ ಕ್ರಮ ಕೈಗೊಳ್ಳುವುದು

l ಪರಿಸರ ಸೂಕ್ಷ್ಮ ಪ್ರದೇಶಗಳ ಕಾಡು, ರಸ್ತೆ ಅಂಚಿನ ಅತಿಕ್ರಮಣ ತಪ್ಪಿಸುವುದು

l ತಳಮಟ್ಟದಲ್ಲಿ ಜನಸಹಭಾಗಿತ್ವದ ಯೋಜನೆ ರೂಪಿಸುವುದು

ಸುಸ್ಥಿರ ಅಭಿವೃದ್ಧಿ ನೀತಿ ಅಗತ್ಯ

ಉತ್ತರ ಕನ್ನಡದ ಶಿರೂರಿನಲ್ಲಿ ಗುಡ್ಡ ಕುಸಿತ ಆಗುತ್ತದೆ ಎಂದು ಮೂರು ತಿಂಗಳ ಹಿಂದೆಯೇ ಪರಿಸರ ವಿಜ್ಞಾನಿಗಳು ಎಚ್ಚರಿಸಿದ್ದರು. ಕಾರವಾರ–ಗೋವಾ ಹೆದ್ದಾರಿಯ ಕಾಮಗಾರಿ ಪರಿಶೀಲಿಸಿದ್ದ ಕೇಂದ್ರ ಅರಣ್ಯ ಸಚಿವಾಲಯದ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಸಿದ್ದರು. ಎಲ್ಲವೂ ಗೊತ್ತಿದ್ದರೂ, ದೊಡ್ಡ ಅನಾಹುತ ಆಗಿದೆ. ಅರಣ್ಯ ಸಂರಕ್ಷಣೆಗೆ ಕಾನೂನುಗಳಿವೆ. ಅಪರೂಪದ ಜೀವವೈವಿಧ್ಯ ತಾಣವಾಗಿರುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ನಿಯಮಗಳಿವೆ. ಆದರೆ, ಇಲ್ಲಿ ಎಲ್ಲವನ್ನೂ ಉಲ್ಲಂಘಿಸಿ ಅವೈಜ್ಞಾನಿಕ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಭೂಕುಸಿತ ತಡೆಗೆ ಏನೇನು ಮಾಡಬೇಕು ಎಂದು 2021ರಲ್ಲಿ ವಿಸ್ತೃತ ವರದಿ ನೀಡಿದ್ದರೂ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಭೂಕುಸಿತಗಳು ಮರುಕಳಿಸದಂತೆ ಮಾಡಲು ಪಶ್ಚಿಮ ಘಟ್ಟದಲ್ಲಿ ಹೆದ್ದಾರಿ ನಿರ್ಮಿಸುವಾಗ ಸುಸ್ಥಿರ ಅಭಿವೃದ್ಧಿ ನೀತಿ ಅಗತ್ಯವಾಗಿದೆ. ಇದರ ಜೊತೆಗೆ ಭೂಕುಸಿತದಿಂದ ಹಾನಿಗೊಳಗಾದ ರೈತರಿಗೆ ಪುನರ್‌ವಸತಿ ಪರಿಹಾರ, ಹಾನಿಗೊಳಗಾದ ಗುಡ್ಡದ ಪುನಶ್ಚೇತನ, ಪರಿಸರ ಪರಿಹಾರ, ಭೂಕುಸಿತ ಮುನ್ನೆಚ್ಚರಿಕೆ, ಯಂತ್ರಗಳ ಬಳಕೆಗೆ ಕಡಿವಾಣ, ಗುಡ್ಡಗಳಲ್ಲಿ ಗಣಿಗಾರಿಕೆಗೆ ಅವಕಾಶ ನಿರಾಕರಣೆಯಂತಹ ಕ್ರಮಗಳನ್ನು ಕೈಗೊಳ್ಳಬೇಕು.

ಅನಂತ ಹೆಗಡೆ ಅಶೀಸರ, ರಾಜ್ಯ ಸರ್ಕಾರ ರಚಿಸಿದ್ದ ಭೂಕುಸಿತ ಅಧ್ಯಯನ ಸಮಿತಿ ಅಧ್ಯಕ್ಷ 

ಯೋಜನೆಗೂ ಮುನ್ನ ಅಧ್ಯಯನ ಬೇಕು

ಮೊದಲೆಲ್ಲ ಭೂಕುಸಿತ ಎನ್ನುವುದು ನೈಸರ್ಗಿಕ ವಿಪತ್ತು ಆಗಿತ್ತು. ಆದರೆ, ಈಗ ರಾಜ್ಯದಲ್ಲಿ ನಡೆಯುತ್ತಿರುವುದು ನೈಸರ್ಗಿಕವಲ್ಲ; ಮಾನವ ನಿರ್ಮಿತ. ಕರಾವಳಿ, ಮಲೆನಾಡು ಭಾಗಗಳಲ್ಲಿ ರಸ್ತೆ, ರೈಲು, ವಿದ್ಯುತ್‌ ಮಾರ್ಗ, ಗಣಿಗಾರಿಕೆ ಸೇರಿದಂತೆ ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಲಾಗುತ್ತಿದ್ದು, ಗುಡ್ಡಗಳನ್ನು ಬೇಕಾಬಿಟ್ಟಿಯಾಗಿ ಕತ್ತರಿಸಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳು ನಡೆಯಲೇಬೇಕು. ಆದರೆ, ಅದಕ್ಕಾಗಿ ಪರಿಸರ ಹಾಳುಮಾಡುವುದಲ್ಲ. ಅತ್ಯಂತ ವ್ಯವಸ್ಥಿತವಾಗಿ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ನಮ್ಮ ಮಲೆನಾಡು ಸೂಕ್ಷ್ಮ ಪ್ರದೇಶ. ಶಿರೂರು ಗುಡ್ಡವನ್ನು 90 ಡಿಗ್ರಿ ಕೋನದಲ್ಲಿ ಕತ್ತರಿಸಲಾಗಿತ್ತು. ಯಾವುದೇ ಇಳಿಜಾರನ್ನು ಕತ್ತರಿಸುವಾಗ ಅದರ ಕೋನವು 45 ಡಿಗ್ರಿಗಿಂತ ಹೆಚ್ಚು ಇರುವಂತಿಲ್ಲ.ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಕ್ಕಿಂತಲೂ ಮೊದಲು, ಅಲ್ಲಿನ ಪರಿಸರ, ಮಣ್ಣಿನ ರಚನೆಯನ್ನು ಸಮರ್ಪಕ ಅಧ್ಯಯನಕ್ಕೆ ಒಳಪಡಿಸಬೇಕು. 15ನೇ ಹಣಕಾಸು ಆಯೋಗವು ವಿಪತ್ತು ಪರಿಹಾರಕ್ಕೆ ಮಾತ್ರವಲ್ಲದೆ ವಿಪತ್ತು ಉಪಶಮನ ಕಾರ್ಯಗಳಿಗೂ ಅನುದಾನ ನಿಗದಿಪಡಿಸಿದೆ. ಇದರ ಅಡಿಯಲ್ಲಿ ಭೂಕುಸಿತ ಪ್ರದೇಶದ ಅಧ್ಯಯನ, ಜಾಗೃತಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು.

ಜಿ.ಎಸ್‌.ಶ್ರೀನಿವಾಸ ರೆಡ್ಡಿ, ಭೂವಿಜ್ಞಾನಿ

ಆಧಾರ: ಕೆಎಸ್‌ಡಿಎಂಎ ಕಾರ್ಯಯೋಜನಾ ವರದಿ (2022), ರಾಜ್ಯ ಸರ್ಕಾರ ರಚಿಸಿದ್ದ ಭೂ ಕುಸಿತ ಅಧ್ಯಯನ ಸಮಿತಿಯ ವರದಿ (2021), ಜಿಎಸ್‌ಐ ವರದಿ, ನ್ಯಾಚುರಲ್‌ ಹಜಾರ್ಡ್ಸ್‌ ರಿಸರ್ಚ್‌ ಜರ್ನಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.