ADVERTISEMENT

ಆಳ– ಅಗಲ | ಬಿಷ್ಣೋಯಿ ಗ್ಯಾಂಗ್: ಮತ್ತೊಂದು ‘ಡಿ ಕಂಪನಿ’?

ದೇಶದ ವಿವಿಧ ರಾಜ್ಯಗಳಲ್ಲಿ, ಹೊರದೇಶಗಳಲ್ಲಿ ಅಪರಾಧ ಕೃತ್ಯ; ಬಾಲಿವುಡ್ ಮಂದಿಯೂ ಗುರಿ

ಬಿ.ವಿ. ಶ್ರೀನಾಥ್
ಸೂರ್ಯನಾರಾಯಣ ವಿ.
Published 16 ಅಕ್ಟೋಬರ್ 2024, 23:10 IST
Last Updated 16 ಅಕ್ಟೋಬರ್ 2024, 23:10 IST
<div class="paragraphs"><p>ಲಾರೆನ್ಸ್ ಬಿಷ್ಣೋಯಿ</p></div>

ಲಾರೆನ್ಸ್ ಬಿಷ್ಣೋಯಿ

   
ಲಾರೆನ್ಸ್ ಬಿಷ್ಣೋಯಿ 2015ರಿಂದ ಜೈಲಿನಲ್ಲಿದ್ದಾನೆ. ಆದರೆ, ಮಾಜಿ ಸಚಿವ ಬಾಬಾ ಸಿದ್ದೀಕಿ, ಗಾಯಕ ಸಿಧು ಮೂಸೇವಾಲ ಸೇರಿದಂತೆ ಹಲವು ಖ್ಯಾತನಾಮರ ಹತ್ಯೆ ಪ್ರಕರಣದಲ್ಲಿ ಈತನ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಕೆನಡಾ–ಭಾರತದ ಕಲಹದಲ್ಲಿಯೂ ಈತನ ಹೆಸರು ಪ್ರಸ್ತಾಪವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುವುದಾಗಿ ಬಹಿರಂಗವಾಗಿ ಘೋಷಿಸಿದ್ದಾನೆ. ಲಾರೆನ್ಸ್‌ನ ಬಿಷ್ಣೋಯಿ ಸಮುದಾಯದ ನಂಬಿಕೆಗಳು ಮತ್ತು ಈತನ ಅಪರಾಧ ಕೃತ್ಯಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳಗಾಗುತ್ತಿವೆ 

ಲಾರೆನ್ಸ್ ಬಿಷ್ಣೋಯಿ...ಈ ಹೆಸರು ಆಗಿಂದಾಗ್ಗೆ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದೆ. ಎಲ್ಲವೂ ಘಟಾನುಘಟಿಗಳಿಗೆ ಸಂಬಂಧಿಸಿದ ಇಲ್ಲವೇ ರಾಷ್ಟ್ರೀಯ ಮಹತ್ವದ ಅಪರಾಧ ಪ್ರಕರಣಗಳೇ. ವಿಶೇಷ ಅಂದರೆ, ಈಗ ಇದೇ ಹೆಸರು ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದೀಕಿ ಅವರ ಹತ್ಯೆ ಪ್ರಕರಣ ಮತ್ತು ಭಾರತ–ಕೆನಡಾ ನಡುವಿನ ಕಲಹದಲ್ಲೂ ಕೇಳಿಬಂದಿದೆ. ಕೆನಡಾದಲ್ಲಿನ ಖಾಲಿಸ್ತಾನಿ ಹೋರಾಟಗಾರರನ್ನು ಗುರಿಯಾಗಿಸಿಕೊಳ್ಳುವ ವಿಚಾರದಲ್ಲಿ ಭಾರತದ ಏಜೆಂಟ್‌ಗಳು ಬಿಷ್ಣೋಯಿ ಗ್ಯಾಂಗ್‌ನಂಥ ಸಂಘಟಿತ ಅಪರಾಧಿ ತಂಡಗಳನ್ನು ಬಳಸಿದ್ದಾರೆ ಎನ್ನುವುದು ಕೆನಡಾದ ಆರೋಪ. ವಿಚಿತ್ರವೇನೆಂದರೆ, ಭಾರತವು ಇದಕ್ಕೆ ವಿರುದ್ಧವಾದ ಆರೋಪ ಮಾಡಿದ್ದು, ಬಿಷ್ಣೋಯಿ ಗ್ಯಾಂಗ್ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುತ್ತಿದೆ ಎಂದಿದೆ. 

ಲಾರೆನ್ಸ್ ಬಿಷ್ಣೋಯಿ ಮತ್ತು ಆತನ ಗ್ಯಾಂಗ್ ಈಗ ವಿಶ್ವದ ಎರಡು ಪ್ರಬಲ ರಾಷ್ಟ್ರಗಳ ನಡುವಿನ ಆರೋಪ ಪ್ರತ್ಯಾರೋಪದ ಭಾಗವಾಗಿದೆ. ಭಾರತವಷ್ಟೇ ಅಲ್ಲದೇ ಹಲವು ದೇಶಗಳ ಪಾಲಿಗೆ ಮೋಸ್ಟ್ ವಾಂಟೆಡ್‌ ಪಾತಕಿಯಾಗಿರುವ ಲಾರೆನ್ಸ್ ಬಿಷ್ಣೋಯಿ, 2015ರಿಂದ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸಬರಮತಿ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಜೈಲಿನಲ್ಲಿದ್ದುಕೊಂಡೇ ಪಂಜಾಬ್, ದೆಹಲಿ, ರಾಜಸ್ಥಾನ, ಹರಿಯಾಣ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮತ್ತು ಕೆನಡಾ, ನೇಪಾಳ ಸೇರಿದಂತೆ ಹಲವು ದೇಶಗಳಲ್ಲಿ ತನ್ನ ಗ್ಯಾಂಗ್ ಮೂಲಕ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದಾನೆ ಎನ್ನುವುದು ಪೊಲೀಸರ ವಾದ.

ADVERTISEMENT

ಅಂದಹಾಗೆ, ಬಿಷ್ಣೋಯಿ ಗ್ಯಾಂಗ್ ಎಂದರೆ ಅದು ಹತ್ತಿಪ್ಪತ್ತು ಮಂದಿಯ ಗುಂಪಲ್ಲ; ವಿವಿಧ ರಾಜ್ಯ ಮತ್ತು ದೇಶಗಳಲ್ಲಿ ವ್ಯಾಪಿಸಿರುವ 700 ಮಂದಿಯ ಬೃಹತ್ ಪಡೆ. ಗೋಲ್ಡಿ ಬ್ರಾರ್, ಸಚಿನ್ ಥಾಪನ್, ಅನ್ಮೋಲ್ ಬಿಷ್ಣೋಯಿ, ವಿಕ್ರಮ್‌ಜಿತ್ ಸಿಂಗ್, ಕಾಲಾ ಜಥೇರಿ, ಕಾಲಾ ರಾಣಾ ಮುಂತಾದ ಕುಖ್ಯಾತ ಗ್ಯಾಂಗ್‌ಸ್ಟರ್‌ಗಳು, ಶಾರ್ಪ್‌ಶೂಟರ್‌ಗಳಿರುವ ಈ ತಂಡದ ರೂವಾರಿಯೇ 31 ವರ್ಷದ ಲಾರೆನ್ಸ್ ಬಿಷ್ಣೋಯಿ.

ಲಾರೆನ್ಸ್ ಹುಟ್ಟಿದ್ದು ಪಂಜಾಬ್‌ನಲ್ಲಿ. ಪೊಲೀಸ್ ಅಧಿಕಾರಿಯಾಗಿದ್ದ ಈತನ ತಂದೆ ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಕೃಷಿಕರಾಗಿದ್ದರು. ನೂರಾರು ಎಕರೆ ಜಮೀನು ಹೊಂದಿದ್ದ ಶ್ರೀಮಂತ ಕುಟುಂಬ ಇವರದ್ದು. ದುಬಾರಿ ಬಟ್ಟೆ, ಶೂ ತೊಟ್ಟು, ತನ್ನದೇ ಸ್ವಂತ ವಾಹನದಲ್ಲಿ ಕಾಲೇಜಿಗೆ ಹೋಗುತ್ತಿದ್ದ ಸ್ಫುರದ್ರೂಪಿ ಲಾರೆನ್ಸ್‌ ಒಬ್ಬ ಕಾನೂನು ಪದವೀಧರ. ಕಾಲೇಜಿನಲ್ಲಿದ್ದಾಗಲೇ ಭೂಗತ ಜಗತ್ತಿನೆಡೆಗೆ ಆಕರ್ಷಿತನಾದ ಈತ, ಕಾನೂನುವಿರೋಧಿ ಕೃತ್ಯಗಳಲ್ಲಿ ಭಾಗಿಯಾಗತೊಡಗಿದ. ಗೋಲ್ಡಿ ಬ್ರಾರ್ ಮತ್ತು ತನ್ನ ಸಹೋದರ ಅನ್ಮೋಲ್ ಬಿಷ್ಣೋಯಿ ಜತೆ ಸೇರಿ ಒಂದು ತಂಡವನ್ನೇ ಕಟ್ಟಿದ.     

ಲಾರೆನ್ಸ್ ವಿರುದ್ಧ ಮಾದಕ ವಸ್ತು ಕಳ್ಳಸಾಗಣೆ, ಹತ್ಯೆ, ಬೆದರಿಕೆ, ಸುಲಿಗೆ ಸೇರಿದಂತೆ 71 ಪ್ರಕರಣಗಳು ದಾಖಲಾಗಿವೆ. ಈತ 2015ರಿಂದ ಜೈಲಿನಲ್ಲಿದ್ದುಕೊಂಡೇ ಹಲವು ಖ್ಯಾತನಾಮರ ಹತ್ಯೆ ಮಾಡಿಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೇಳುತ್ತಿದೆ. ಬಿಷ್ಣೋಯಿ ಹೆಸರು ದೇಶದಾದ್ಯಂತ ಹರಿದಾಡಿದ್ದು 2018ರಲ್ಲಿ. ಪ್ರಕರಣವೊಂದರ ವಿಚಾರಣೆಗೆ ಜೋಧ್‌ಪುರ ಕೋರ್ಟ್‌ಗೆ ಹೋಗುವ ಹಾದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಲಾರೆನ್ಸ್ ಬಿಷ್ಣೋಯಿ, ತಾನು ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಹೇಳಿದ್ದ. ಆಗ ಬಹುತೇಕರು ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ನಂತರ ಈತ ಎಸಗಿದ ಕೃತ್ಯಗಳು ಈತ ಸಾಮಾನ್ಯ ಪಾತಕಿಯಲ್ಲ ಎನ್ನುವುದನ್ನು ಸಾರಿದ್ದವು.      

ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೇವಾಲ 2022ರಲ್ಲಿ ಕೊಲೆಯಾದಾಗ ಅದರ ಹಿಂದೆ ಕೇಳಿಬಂದ ಹೆಸರು ಇದೇ ಲಾರೆನ್ಸ್ ಬಿಷ್ಣೋಯಿಯದ್ದು. 2023ರಲ್ಲಿ ಕರ್ಣಿ ಸೇನಾ ಮುಖ್ಯಸ್ಥ ಸುಖ್‌ದೇವ್ ಸಿಂಗ್ ಅವರ ಕೊಲೆಯಾಯಿತು. ಅದೂ ಈತನ ಗ್ಯಾಂಗ್‌ನ ಕೃತ್ಯ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬಂತು. ಭಾರತದಲ್ಲಷ್ಟೇ ಅಲ್ಲ, ಈತನ ತಮ್ಮ ಅನ್ಮೋಲ್ ಕೆನಡಾದಲ್ಲಿದ್ದು, ಅಲ್ಲಿಂದಲೇ ಹಲವು ಅಪರಾಧ ಕೃತ್ಯಗಳನ್ನು ನಡೆಸುತ್ತಿರುವುದು ಕೂಡ ಪೊಲೀಸರ ಗಮನಕ್ಕೆ ಬಂದಿದೆ.

ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಲಾರೆನ್ಸ್ ಹಲವು ಬಾರಿ ಘೋಷಿಸಿದ್ದರೂ ಮತ್ತು ಈ ವರ್ಷದ ಏಪ್ರಿಲ್‌ನಲ್ಲಿ ಆತನ ಗ್ಯಾಂಗ್‌ ಸದಸ್ಯರು ಸಲ್ಮಾನ್‌ ಖಾನ್‌ ಮನೆಯ ಹೊರಗಡೆ ಗುಂಡು ಹಾರಿಸಿದ್ದರೂ, ಆ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಈಚೆಗೆ ಮುಂಬೈನಲ್ಲಿ ಮಾಜಿ ಸಚಿವ, ಸಲ್ಮಾನ್‌ ಖಾನ್‌ ಅವರ ಆಪ್ತ ಎನ್ನಲಾದ ಬಾಬಾ ಸಿದ್ದೀಕಿ ಅವರ ಹತ್ಯೆ ಪ್ರಕರಣವು ಬಾಲಿವುಡ್ ಸೇರಿದಂತೆ ಪೊಲೀಸ್ ವಲಯವನ್ನೂ ಬೆಚ್ಚಿಬೀಳಿಸಿದೆ. ಘಟನೆಯ ನಂತರ ಸಲ್ಮಾನ್ ಖಾನ್ ಮನೆಯ ಬಳಿ ಭದ್ರತೆ ಹೆಚ್ಚಿಸಲಾಗಿದೆ. 

ಸಲ್ಮಾನ್ ಖಾನ್ ಅವರನ್ನು ಲಾರೆನ್ಸ್ ಬಿಷ್ಣೋಯಿ ಗುರಿ ಮಾಡಿಕೊಂಡಿರುವುದು ಏಕೆ? ಇದಕ್ಕೆ ಸಿಕ್ಕ ಉತ್ತರ ಪೊಲೀಸರು ಸೇರಿದಂತೆ ಅನೇಕರು ಅಚ್ಚರಿಗೊಂಡಿದ್ದಾರೆ. ಅದೇನೆಂದರೆ, ಸಲ್ಮಾನ್‌ ಖಾನ್‌ 1998ರಲ್ಲಿ ಕೃಷ್ಣಮೃಗಗಳನ್ನು ಬೇಟೆಯಾಡಿದ್ದು. ಕೃಷ್ಣಮೃಗ ಬಿಷ್ಣೋಯಿ ಸಮುದಾಯಕ್ಕೆ ದೈವ ಸಮಾನವಾದುದು. ಅದನ್ನು ಕೊಂದ ತಪ್ಪಿಗೆ ಲಾರೆನ್ಸ್, ಸಲ್ಮಾನ್ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದಾನೆ ಎನ್ನುವುದು ಒಂದು ವಾದ. ‘ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆಯಾಡಿದ ಘಟನೆ ನಡೆದಾಗ ಲಾರೆನ್ಸ್ ಐದು ವರ್ಷದ ಪುಟ್ಟ ಬಾಲಕ. ಕೃಷ್ಣಮೃಗ ಕೊಂದಿದ್ದಕ್ಕಾಗಿ ಒಬ್ಬ ವಕೀಲ/ಗ್ಯಾಂಗ್‌ಸ್ಟರ್, ಬಾಲಿವುಡ್‌ನ ಸೂಪರ್ ಸ್ಟಾರ್‌ ಒಬ್ಬರನ್ನು ಕೊಲ್ಲಲು ಹೊರಡುತ್ತಾನೆ ಮತ್ತು ಆತ ಪೊಲೀಸರ ವಶದಲ್ಲಿದ್ದುಕೊಂಡೇ ಇದನ್ನೆಲ್ಲ ಮಾಡುತ್ತಿದ್ಧಾನೆ ಎಂದರೆ ಇದು ಸಿನಿಮಾದವರು ಕೂಡ ನಂಬಲಾಗದ ಕಥೆಯಂತಿದೆ’ ಎಂದು ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಹೇಳಿದ್ದಾರೆ. ಅವರಂತೆಯೇ, ಹಲವರು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ತನಗೆ ಭಗತ್ ಸಿಂಗ್ ಸ್ಫೂರ್ತಿಯ ವ್ಯಕ್ತಿ ಎಂದು ಲಾರೆನ್ಸ್‌ ಹೇಳುತ್ತಾನೆ. ಆದರೆ, ಪೊಲೀಸರು ಹೇಳುವಂತೆ, ಲಾರೆನ್ಸ್‌ ಭೂಗತ ಪಾತಕಿ ದಾವೂದ್ ಇಬ್ರಾಹಿಂ ದಾರಿಯಲ್ಲಿ ಸಾಗುತ್ತಿದ್ದಾನೆ. ದಾವೂದ್ ಬಾಲಿವುಡ್‌ನಲ್ಲಿ ಹಲವರ ಸ್ನೇಹ ಮಾಡುವ ಮೂಲಕ ಮತ್ತು ಹಲವರನ್ನು ಗುರಿಯಾಗಿಸಿಕೊಳ್ಳುವ ಮೂಲಕ ಕುಖ್ಯಾತಿ ಗಳಿಸಿದ್ದ; ಚಿತ್ರರಂಗದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ್ದ. ಲಾರೆನ್ಸ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದು, ಬಾಲಿವುಡ್ ಮೇಲೆ ಹಿಡಿತ ಸಾಧಿಸಲು ಹೊರಟಿದ್ದಾನೆ. ಅದರ ಭಾಗವಾಗಿಯೇ ಚಿತ್ರರಂಗದ ಹಲವರಿಗೆ ಹತ್ತಿರವಾಗಿದ್ದ ಬಾಬಾ ಸಿದ್ದೀಕಿ ಅವರನ್ನು ಹತ್ಯೆ ಮಾಡಿರುವುದು ಮತ್ತು ಸಲ್ಮಾನ್ ಖಾನ್‌ ಅವರಂಥ ಸ್ಟಾರ್‌ ಅನ್ನು ಗುರಿಯಾಗಿಸಿಕೊಂಡಿರುವುದು ಎನ್ನಲಾಗುತ್ತಿದೆ.

ಸಮಾಜದ ಖ್ಯಾತನಾಮರನ್ನು, ಉದ್ಯಮಿಗಳನ್ನು, ನಟ ನಟಿಯರನ್ನು ಗುರಿಯಾಗಿಸಿಕೊಂಡು ಭಯದ ವಾತಾವರಣ ನಿರ್ಮಿಸುವುದು ಲಾರೆನ್ಸ್ ಗ್ಯಾಂಗ್‌ನ ಗುರಿ ಎಂದು ಹೇಳುತ್ತದೆ ಎನ್‌ಐಎ. 

ವಾಸ್ತವ, ವದಂತಿ, ಕಲ್ಪನೆ, ದಂತಕಥೆ ಎಲ್ಲವೂ ಬೆರೆತಂತಿರುವ ಲಾರೆನ್ಸ್ ಬಿಷ್ಣೋಯಿ ಕಥೆ ಏಕಕಾಲಕ್ಕೆ ಅಚ್ಚರಿಯನ್ನೂ, ಆತಂಕವನ್ನೂ ಉಂಟುಮಾಡುತ್ತಿದೆ. ಒಬ್ಬ ಸಾಧಾರಣ ಯುವಕ ಅಂತರರಾಷ್ಟ್ರೀಯ ಪಾತಕಿಯಾಗಿ ಬೆಳೆದ ಕಥೆ ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. 

ಮರಗಿಡ ಪ್ರಾಣಿಪಕ್ಷಿಗಳೇ ದೇವರು ಎನ್ನುವ ಬಿಷ್ಣೋಯಿಗಳು..

ಬಿಷ್ಣೋಯಿ ಒಂದು ಬುಡಕಟ್ಟು ಸಮುದಾಯವಾಗಿದ್ದು ಈ ಸಮುದಾಯದವರು ಮುಖ್ಯವಾಗಿ ರಾಜಸ್ಥಾನದ ಥಾರ್ ಮರುಭೂಮಿಯ ಸುತ್ತಮುತ್ತ ವಾಸಿಸುತ್ತಾರೆ. 15ನೇ ಶತಮಾನದಲ್ಲಿ ಗುರು ಜಂಭೇಶ್ವರ ಅವರಿಂದ ಆರಂಭವಾದ ಈ ಪಂಗಡದಲ್ಲಿ ಇಂದು ಸುಮಾರು 15 ಲಕ್ಷ ಮಂದಿ ಇದ್ದಾರೆ. ಮರಗಿಡ ಪ್ರಾಣಿಪಕ್ಷಿಗಳು ವನ್ಯಮೃಗಗಳು ಇವರಿಗೆ ದೇವರ ಸಮಾನ. ಅವುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಅವುಗಳೊಂದಿಗೆ ಸಹಬಾಳ್ವೆ ನಡೆಸುವುದು ತಮ್ಮ ಧಾರ್ಮಿಕ ಕರ್ತವ್ಯ ಎಂದೇ ಇವರು ಭಾವಿಸುತ್ತಾರೆ. ಬಿಬಿಸಿ ಇವರನ್ನು ‘ಭಾರತದ ಮೂಲ ಪರಿಸರ ಸಂರಕ್ಷಕರು’ ಎಂದು ಕರೆದಿದೆ. ಪರಿಸರ ಸಂರಕ್ಷಣೆ ಎನ್ನುವುದು ಮುಖ್ಯವಾಹಿನಿಯ ಚರ್ಚೆಯ ವಿಚಾರ ಆಗುವುದಕ್ಕೆ ಮುಂಚೆಯೇ ಆ ಕೆಲಸ ಮಾಡುತ್ತಿದ್ದವರು ಇವರು. ಇವರು ವಾಸ ಮಾಡುವ ಹಳ್ಳಿಗಳಲ್ಲಿ ಪ್ರಾಣಿ ಪಕ್ಷಗಳು ಯಾವುದೇ ಭಯ ಇಲ್ಲದೇ ಓಡಾಡಿಕೊಂಡಿರುತ್ತವೆ. ವಿಷ್ಣುವಿನ ಆರಾಧಕರಾದ ಇವರು ಸಸ್ಯಾಹಾರಿಗಳಾಗಿದ್ದು ಪರಿಸರಕ್ಕೆ ಮತ್ತು ಪ್ರಾಣಿ ಸಂಕುಲಕ್ಕೆ ತೊಂದರೆಯಾಗದಂತೆ ಸರಳ ಜೀವನ ಶೈಲಿ ರೂಢಿಸಿಕೊಂಡಿದ್ದಾರೆ. 1730ರಲ್ಲಿ ರಾಜನೊಬ್ಬ ಅರಮನೆಯನ್ನು ಕಟ್ಟಲು ಮರಗಳನ್ನು ಕಡಿಯಲು ಆಜ್ಞಾ‍ಪಿಸುತ್ತಾನೆ. ಮರ ಕಡಿಯಬಾರದು ಎಂದು ಬಿಷ್ಣೋಯಿ ಸಮುದಾಯ ವಿರೋಧ ವ್ಯಕ್ತಪಡಿಸುತ್ತದೆ. ಆಗ ನಡೆದ ಸಂಘರ್ಷದಲ್ಲಿ ಸಮುದಾಯದ ಮಹಿಳೆಯರು ಪುರುಷರು ಮಕ್ಕಳು ಸೇರಿ 363 ಮಂದಿ ಹತರಾಗುತ್ತಾರೆ. ಈಗಲೂ ‍ಪ್ರಾಣಿಬೇಟೆಯನ್ನು ತೀವ್ರವಾಗಿ ವಿರೋಧಿಸುವ ಇವರು ಬೇಟೆಗಾರರ ವಿರುದ್ಧ ನ್ಯಾಯಾಲಯಗಳಲ್ಲಿ ಹೋರಾಟ ನಡೆಸಿದ್ದಿದೆ. ತನ್ನ ಸಂಗಡಿಗರೊಂದಿಗೆ ಕೃಷ್ಣಮೃಗ ಬೇಟೆಯಾಡಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಪ್ರಕರಣದಲ್ಲಿಯೂ ನ್ಯಾಯಾಲಯದಲ್ಲಿ ಪಟ್ಟು ಬಿಡದೇ ಹೋರಾಡಿದ್ದು ಇದೇ ಸಮುದಾಯ.

ಜೈಲಿನಿಂದಲೇ ಮಾಧ್ಯಮ ಸಂದರ್ಶನ!

2022ರ ಸೆಪ್ಟೆಂಬರ್‌ 3 ಮತ್ತು 4ರಂದು ಲಾರೆನ್ಸ್ ಬಿಷ್ಣೋಯಿ ಜೈಲಿನಲ್ಲಿರುವಾಗಲೇ ಸುದ್ದಿ ವಾಹಿನಿಯೊಂದು ಆತನನ್ನು ಮೊಬೈಲ್‌ ಮೂಲಕ ಸಂದರ್ಶನ ನಡೆಸಿತ್ತು. ಮೊದಲ ಸಂದರ್ಶನದ ವೇಳೆ ಸಂದರ್ಶಕ ಖಾರಾರ್‌ನಲ್ಲಿರುವ ಪಂಜಾಬ್‌ನ ಅಪರಾಧ ತನಿಖಾ ಸಂಸ್ಥೆ (ಸಿಎಐ) ಕಚೇರಿ ಆವರಣದಲ್ಲಿದ್ದರು. ಎರಡನೇ ಸಂದರ್ಶನವನ್ನು ರಾಜಸ್ಥಾನದಿಂದ ಮಾಡಿದ್ದರು. ಕುಟುಕು ಕಾರ್ಯಾಚರಣೆಯ ಭಾಗವಾಗಿ ವಾಹಿನಿಯು ಈ ಸಂದರ್ಶನ ನಡೆಸಿತ್ತು ಎಂದು ಹೇಳಲಾಗಿದೆ. ವಾಹಿನಿಯು 2023ರ ಮಾರ್ಚ್‌ನಲ್ಲಿ ಸಂದರ್ಶನವನ್ನು ಪ್ರಸಾರ ಮಾಡಿತ್ತು. ನಂತರ ವಿಡಿಯೊವನ್ನು ಯುಟ್ಯೂಬ್‌ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿತ್ತು.  ಪ್ರಕರಣವು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಇದರ ತನಿಖೆಗಾಗಿ ಪಂಜಾಬ್‌ ಹರಿಯಾಣ ಹೈಕೋರ್ಟ್‌ ವಿಶೇಷ ತನಿಖಾ ತಂಡವನ್ನೂ ರಚಿಸಿತ್ತು.   ಆ ಸಂದರ್ಶನದಲ್ಲಿ ಬಿಷ್ಣೋಯಿ ತಾನು ಪ್ರತ್ಯೇಕ ಖಾಲಿಸ್ತಾನದ ಪರ ಇಲ್ಲ ಎಂದು ಹೇಳಿಕೆ ನೀಡಿದ್ದ.

ಬಿಷ್ಣೋಯಿ ಮತ್ತು ತಂಡದೊಂದಿಗೆ ತಳಕು ಹಾಕಿಕೊಂಡಿರುವ ಪ್ರಕರಣಗಳು
  • ಪಂಜಾಬ್‌ ರಾಜ್ಯವೊಂದರಲ್ಲೇ ಲಾರೆನ್ಸ್‌ ಬಿಷ್ಣೋಯಿ ವಿರುದ್ಧ ಕೊಲೆ ಕೊಲೆ ಯತ್ನ ಬೆದರಿಕೆ ಸುಲಿಗೆ ಸೇರಿದಂತೆ 71 ಪ್ರಕರಣಗಳು ದಾಖಲಾಗಿವೆ. ನಾಲ್ಕು ಪ್ರಕರಣಗಳಲ್ಲಿ ಆತ ತಪ್ಪಿತಸ್ಥ ಎಂದು ಸಾಬೀತಾಗಿದೆ. ದೆಹಲಿ ರಾಜಸ್ಥಾನ ಹರಿಯಾಣ ಗುಜರಾತ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಷ್ಣೋಯಿ ಮತ್ತು ತಂಡದ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ

  • ದೆಹಲಿ ಪೊಲೀಸರು ಪಟ್ಟಿ ಮಾಡಿರುವ 11 ಕ್ರಿಮಿನಲ್‌ ಗ್ಯಾಂಗ್‌ಗಳಲ್ಲಿ ಮೊದಲ ಹೆಸರು ಬಿಷ್ಣೋಯಿ ಮತ್ತು ಗೋಲ್ಡಿ ಬ್ರಾರ್‌ ಗ್ಯಾಂಗ್‌ನದ್ದು

  • ಭಯೋತ್ಪಾದಕರು ಮತ್ತು ಸಂಘಟಿತ ಅಪರಾಧಗಳನ್ನು ನಡೆಸುವ ತಂಡಗಳ ಸಂಪರ್ಕದ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಲಾರೆನ್ಸ್‌ ಬಿಷ್ಣೋಯಿ ಮತ್ತು ತಂಡದ ವಿರುದ್ಧವೂ ತನಿಖೆ ನಡೆಸುತ್ತಿದೆ. ಈ ವರ್ಷಾರಂಭದಲ್ಲಿ ಮೂರು ರಾಜ್ಯಗಳಲ್ಲಿ ಬಿಷ್ಣೋಯಿ ಗ್ಯಾಂಗ್‌ ಸದಸ್ಯರಿಗೆ ಸೇರಿದ ನಾಲ್ಕು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು

  • ಕಾಲೇಜು ದಿನಗಳಲ್ಲೇ ಅಪರಾಧ ಜಗತ್ತಿಗೆ ಬಿಷ್ಣೋಯಿ ಕಾಲಿಟ್ಟಿದ್ದ. 2010ರಲ್ಲಿ ಪಂಜಾಬ್‌ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯ ವೇಳೆ ತನ್ನ ಪ್ರತಿಸ್ಪರ್ಧಿಯ ಮೇಲೆ ಗುಂಡಿನ ದಾಳಿ ಮೂರು ತಿಂಗಳು ಜೈಲು ವಾಸ 

  • 2022ರ ಮೇ 19: ಪಂಜಾಬ್‌ನ ಖ್ಯಾತ ರ‍್ಯಾಪರ್‌ ಗಾಯಕ ಶುಭ್‌ದೀಪ್‌ ಸಿಂಗ್‌ ಸಿಧು ಅಲಿಯಾಸ್‌ ಸಿಧು ಮೂಸೇವಾಲ ಹತ್ಯೆ 

  • 2022ರ ಸೆಪ್ಟೆಂಬರ್‌: 39 ಕೆಜಿ ಹೆರಾಯಿನ್‌ ಜಪ್ತಿ ಮಾಡಿದ್ದ ಗುಜರಾತ್‌ ಪೋಲಿಸರು (ಈ ಪ್ರಕರಣದಲ್ಲೂ ಎನ್‌ಐಎ ಬಿಷ್ಣೋಯಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು)

  • 2023ರ ಮೇ 22: ದೆಹಲಿಯ ಉದ್ಯಮಿಯೊಬ್ಬರಿಗೆ ವಿಡಿಯೊ ಕರೆ ಮಾಡಿ ಬೆದರಿಕೆ ಹಾಕಿ ₹2.5 ಕೋಟಿಗೆ ಬೇಡಿಕೆ

  • 2023ರ ಸೆ.23: ಕೆನಡಾದ ವಿನ್ನಿಪೆಗ್‌ನಲ್ಲಿ ಗ್ಯಾಂಗ್‌ಸ್ಟರ್‌ ಪ್ರತ್ಯೇಕ ಖಾಲಿಸ್ತಾನದ ಪರ ಸಹಾನೂಭೂತಿ ಹೊಂದಿದ್ದ ಸಿಕ್ಖಾ ದುನುಕೆ ಕೊಲೆ

  • 2023ರ ಡಿ.5: ರಾಜಸ್ಥಾನದಲ್ಲಿ ರಜಪೂತ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್‌ ಸಿಂಗ್‌ ಗೊಗಾಮೆಡಿ ಹತ್ಯೆ

  • 2024ರ ಏಪ್ರಿಲ್‌ 14: ಮುಂಬೈನ ಬಾಂದ್ರಾದಲ್ಲಿರುವ ನಟ ಸಲ್ಮಾನ್‌ ಖಾನ್‌ ಮನೆಯ ಹೊರಗಡೆ ಗುಂಡಿನ ದಾಳಿ

  • 2024ರ ಸೆ.12: ದೆಹಲಿಯ ಗ್ರೇಟರ್‌ ಕೈಲಾಶ್‌ ಪ್ರದೇಶದಲ್ಲಿ ಜಿಮ್‌ ನಡೆಸುತ್ತಿದ್ದ ಉದ್ಯಮಿ ನಾದಿರ್‌ ಶಾ  ಗುಂಡಿಟ್ಟು ಹತ್ಯೆ

  • 2024ರ ಸೆ.18: ಮುಂಬೈನಲ್ಲಿ ನಟ ಸಲ್ಮಾನ್‌ ಖಾನ್‌ ಅವರ ತಂದೆ ಚಿತ್ರಕಥೆಗಾರ ಸಲೀಂ ಖಾನ್‌ ಅವರಿಗೆ ಜೀವ ಬೆದರಿಕೆ (ಬುರ್ಖಾ ಧರಿಸಿದ್ದ ಮಹಿಳೆ ಮತ್ತು ಮತ್ತೊಬ್ಬ ಪುರುಷ ಬಿಷ್ಣೋಯಿ ಹೆಸರು ಹೇಳಿ ಬೆದರಿಕೆ ಹಾಕಿದ್ದರು)

  • 2024ರ ಸೆ.3: ಕೆನಡಾದಲ್ಲಿ ನೆಲಸಿರುವ ಭಾರತೀಯ ಸಂಜಾತ ಗಾಯಕ ಎ.ಪಿ.ಧಿಲ್ಲೋನ್‌ ಅವರ ವ್ಯಾಂಕೂವರ್‌ನಲ್ಲಿರುವ ಮನೆಯ ಮುಂದೆ ಗುಂಡಿನ ದಾಳಿ

  • 2024ರ ಅ.12: ಮುಂಬೈನಲ್ಲಿ ಮಾಜಿ ಸಚಿವ ಎನ್‌ಸಿಪಿ ಮುಖಂಡ ಬಾಬಾ ಸಿದ್ದೀಕಿ ಹತ್ಯೆ

ಆಧಾರ: ಪಿಟಿಐ, ಬಿಬಿಸಿ, ಎನ್‌ಐಎ ಪ್ರಕಟಣೆ, ರಾಯಿಟರ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.