ADVERTISEMENT

ಆಳ ಅಗಲ | ಮತಕ್ಕಾಗಿ ಲಂಚ ಅಪರಾಧವೇ ಸರಿ...

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 22:57 IST
Last Updated 4 ಮಾರ್ಚ್ 2024, 22:57 IST
   
ಸಂಸತ್ತಿನಲ್ಲಿ ಮತ ಚಲಾಯಿಸಲು ಮತ್ತು ಮಾತನಾಡಲು ಲಂಚ ಪಡೆದುಕೊಂಡ ಸಂಸದರಿಗೆ ಕಾನೂನು ಕ್ರಮದಿಂದ ವಿನಾಯಿತಿ ಇದೆ ಎಂದು 1998ರಲ್ಲಿ ಸಂವಿಧಾನ ಪೀಠವು ಬಹುಮತದ (ಮೂವರು ನ್ಯಾಯಮೂರ್ತಿಗಳು) ತೀರ್ಪು ನೀಡಿದ್ದು ಸರಿಯಷ್ಟೆ. ಆದರೆ ಅದೇ ಪೀಠದ ಇನ್ನಿಬ್ಬರು ನ್ಯಾಯಮೂರ್ತಿಗಳು ಲಂಚ ಪಡೆದುಕೊಂಡ ಸಂಸದರಿಗೆ ಅಂತಹ ವಿನಾಯಿತಿ ನೀಡಬಾರದು ಎಂದೇ ಹೇಳಿದ್ದರು

ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿಯ ವಿರುದ್ಧ ಮತ ಚಲಾಯಿಸಲು ಲಂಚ ಪಡೆದ ಸಂಸದರ ವಿರುದ್ಧ ಯಾವುದೇ ಕಾನೂನು ಕ್ರಮವನ್ನು ತೆಗೆದುಕೊಳ್ಳುವಂತಿಲ್ಲ ಎಂದು 1998ರ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ತೀರ್ಪು ನೀಡಿತ್ತು. ಈಗ ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಇದಕ್ಕೆ ಸಂಪೂರ್ಣ ವಿರುದ್ಧವಾದ ತೀರ್ಪನ್ನು ನೀಡಿದೆ. ಲಂಚ ಪಡೆದು ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮತ ಚಲಾಯಿಸುವುದು ಮತ್ತು ಭಾಷಣ ಮಾಡುವುದು ಅಪರಾಧ ಎಂದು ಏಳು ನ್ಯಾಯಮೂರ್ತಿಗಳ ಪೀಠವು ಈಗ ತೀರ್ಪು ನೀಡಿದೆ. ಆದರೆ 1998ರಲ್ಲಿ ನೀಡಲಾಗಿದ್ದ ತೀರ್ಪು ಬಹುಮತದ ತೀರ್ಪಾಗಿತ್ತು. ಐವರು ನ್ಯಾಯಮೂರ್ತಿಗಳಲ್ಲಿ ಮೂವರು ಇದನ್ನು ಅಪರಾಧವಲ್ಲ ಎಂದು ಹೇಳಿದ್ದರು. ಉಳಿದ ಇಬ್ಬರು ನ್ಯಾಯಮೂರ್ತಿಗಳು ಇದು ಅಪರಾಧ ಎಂದೇ ಹೇಳಿದ್ದರು.

ಸಂಸದರೊಬ್ಬರು ಸಂಸತ್ತಿನಲ್ಲಿ ಮಾಡಿದ ಭಾಷಣ, ಚಲಾಯಿಸಿದ ಮತ ಮತ್ತು ಸಂಸದೀಯ ಸಮಿತಿಗಳಲ್ಲಿ ಚಲಾಯಿಸಿದ ಮತಗಳನ್ನು ದೇಶದ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಈ ಸಂಬಂಧ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದು ಸಂವಿಧಾನದ 105ನೇ ವಿಧಿ ಹೇಳುತ್ತದೆ. ಈ ಎಲ್ಲಾ ಕ್ರಿಯೆಗಳು ಸಂಸದರೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದೇ ಈ ವಿಧಿ ಹೇಳುತ್ತದೆ. ಮತ ಚಲಾಯಿಸುವುದು ಸಹ ಒಂದು ಸ್ವರೂಪದ ಅಭಿವ್ಯಕ್ತಿ ಸ್ವಾತಂತ್ರ್ಯ. ಸಂವಿಧಾನವು ನೀಡಿದ ವಿವಿಧ ಅವಕಾಶಗಳು ಮತ್ತು ಸಂಸತ್ತಿನ ನಡಾವಳಿಗೆ ಸಂಬಂಧಪಟ್ಟ ನಿಯಮಗಳಿಗೆ ಒಳಪಟ್ಟು ಎಲ್ಲಾ ಸಂಸದರಿಗೂ ಇಂತಹ ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು ಎಂದು 105(1) ವಿಧಿಯಲ್ಲಿ ವಿವರಿಸಲಾಗಿದೆ. ಈ ಪ್ರಕಾರ ಸಂಸದರು ಚಲಾಯಿಸಿದ ಮತವನ್ನು ನ್ಯಾಯಾಲಯಗಳಲ್ಲಿ ಕಾನೂನಿನ ವಿಮರ್ಶೆಗೆ ಒಳಪಡಿಸುವಂತಿಲ್ಲ. ರಾಜ್ಯ ವಿಧಾನಸಭೆಯ ಶಾಸಕರಿಗೆ ಇಂಥದ್ದೇ ವಿನಾಯಿತಿಯನ್ನು ಸಂವಿಧಾನದ 194ನೇ ವಿಧಿ ನೀಡುತ್ತದೆ.

1993ರಲ್ಲಿ ಪಿ.ವಿ.ನರಸಿಂಹರಾವ್ ಸರ್ಕಾರದ ಪರವಾಗಿ ಸಂಸತ್ತಿನಲ್ಲಿ ಮತ ಚಲಾಯಿಸಲು ಹಣ ಪಡೆದುಕೊಂಡಿದ್ದ ಜೆಎಂಎಂನ ಸಂಸದರು ಮತ್ತು ಇತರ ಕೆಲವು ಸಂಸದರ ವಿರುದ್ಧದ ಪ್ರಕರಣದಲ್ಲಿ ಸಂವಿಧಾನದ 105ನೇ ವಿಧಿಯಡಿ ಸಂಸದರಿಗೆ ರಕ್ಷಣೆ ನೀಡಲಾಗಿತ್ತು. ಈ ಸಂಸದರ ವಿರುದ್ಧ ಕಾನೂನು ಕ್ರಮ ಜರುಗಿಸುವಂತಿಲ್ಲ ಎಂದು ಮೂವರು ನ್ಯಾಯಮೂರ್ತಿಗಳು 1998ರಲ್ಲಿ ತೀರ್ಪು ನೀಡಿದ್ದರು.

ADVERTISEMENT

ಅದೇ ಪೀಠದಲ್ಲಿದ್ದ ಇನ್ನಿಬ್ಬರು ನ್ಯಾಯಮೂರ್ತಿಗಳು ಇದಕ್ಕೆ ವ್ಯತಿರಿಕ್ತವಾಗಿದ್ದ ತೀರ್ಪು ನೀಡಿದ್ದರು. ‘ಸಂಸತ್ತಿನಲ್ಲಿ ಮಾತನಾಡಲು ಅಥವಾ ಮತ ಚಲಾಯಿಸಲು ಲಂಚ ಪಡೆದಿದ್ದರೆ, ಅಂತಹ ಸಂಸದರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು. ಲಂಚ ಪಡೆದು ಸಂಸತ್ತಿನಲ್ಲಿ ಮತ ಚಲಾಯಿಸಿದ್ದರೆ ಅಥವಾ ಮಾತನಾಡಿದ್ದರೆ ಸಂವಿಧಾನದ 105ನೇ ವಿಧಿಯ ಅಡಿ ವಿನಾಯಿತಿ ಪಡೆಯಲು ಸಾಧ್ಯವಿಲ್ಲ’ ಎಂದು ಆ ಇಬ್ಬರು ನ್ಯಾಯಮೂರ್ತಿಗಳು ಹೇಳಿದ್ದರು. ಅಲ್ಲದೆ ಸಂಸತ್ತಿನಲ್ಲಿ ಸಂಪೂರ್ಣ ಸ್ವತಂತ್ರವಾಗಿ ಚಲಾಯಿಸಿದ ಮತ ಅಥವಾ ಆಡಿದ ಮಾತುಗಳನ್ನು ಮಾತ್ರ ದೇಶದ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಆದರೆ ಲಂಚ ಪಡೆದುಕೊಂಡು ಯಾವುದೋ ವ್ಯಕ್ತಿ/ಗುಂಪು/ಸರ್ಕಾರಕ್ಕೆ ಅನುಕೂಲವಾಗುವಂತೆ ವರ್ತಿಸುವಾಗ ಸಂಸದನ ಕ್ರಿಯೆಯು ಸ್ವತಂತ್ರವಾಗಿ ಇರುವುದಿಲ್ಲ. ಆತನ ಕ್ರಿಯೆಯು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವ್ಯತಿರಿಕ್ತವಾಗಿ ಇರುತ್ತದೆ. ಹೀಗಾಗಿ ಅಂತಹ ಸಂಸದರ ವಿರುದ್ಧ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕ್ರಮ ಜರುಗಿಸಬೇಕು ಎಂದು ಆ ಇಬ್ಬರು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಹೇಳಿದ್ದರು.

‘ಸಂಸದ ಅಥವಾ ಶಾಸಕ ಲಂಚ ಪಡೆದ ತಕ್ಷಣವೇ ಅಲ್ಲಿ ಅಪರಾಧ ನಡೆದುಹೋಗಿರುತ್ತದೆ. ಲಂಚ ಪಡೆದುಕೊಂಡು ಮತ್ತು ಲಂಚ ಸ್ವೀಕರಿಸಿದ ಉದ್ದೇಶಕ್ಕೆ ಬದ್ಧವಾಗಿರುತ್ತೇನೆ ಎಂದು ಒಪ್ಪಿಕೊಂಡ ತಕ್ಷಣವೇ ಅದು ಅಪರಾಧ ಕೃತ್ಯವಾಗಿಬಿಡುತ್ತದೆ. ಅದು ಸಂಸತ್ತಿನ ಹೊರಗೆ ನಡೆದ ಅಪರಾಧ ಕೃತ್ಯ. ಸಂವಿಧಾನದ 105ನೇ ವಿಧಿಯಲ್ಲಿ ನೀಡಲಾಗುವ ವಿನಾಯಿತಿಗಳು ಸಂಸತ್ತಿನ ಒಳಗೆ ನಡೆಯುವ ಚಟುವಟಿಕೆಗಳಿಗೆ ಅನ್ವಯವಾಗುತ್ತದೆ. ಆ ವಿನಾಯಿತಿಗಳು ಸಂಸತ್ತಿನ ಹೊರಗೆ ನಡೆದ ಈ ಅಪರಾಧ ಕೃತ್ಯಕ್ಕೆ ಅನ್ವಯವಾಗುವುದಿಲ್ಲ’ ಎಂದು ಆ ಇಬ್ಬರು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಹೇಳಿದ್ದರು. 

ಆ ತೀರ್ಪಿಗೆ ಬಹುಮತ ದೊರೆಯದೇ ಇದ್ದ ಕಾರಣ, ಅದು ಮಾನ್ಯವಾಗಲಿಲ್ಲ. ಆದರೆ ಈಗ ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ನೀಡಿರುವ ತೀರ್ಪು ಸರಿಸುಮಾರು ಇದೇ ರೀತಿ ಇದೆ. ಸಂಸತ್ತಿನಲ್ಲಿ ಮತ ಚಲಾಯಿಸಲು ಮತ್ತು ಮಾತನಾಡಲು ಅಥವಾ ಪ್ರಶ್ನೆ ಕೇಳಲು ಲಂಚ ಪಡೆದರೂ ಕಾನೂನು ಕ್ರಮದಿಂದ ವಿನಾಯಿತಿ ಪಡೆಯಲು ಸಂಸದರಿಗೆ 1998ರ ಬಹುಮತದ ತೀರ್ಪು ನೆರವಾಗುತ್ತಿತ್ತು. ಈಗ ಅಂತಹ ವಿನಾಯಿತಿಯನ್ನು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠವು ತೆಗೆದುಹಾಕಿರುವುದರಿಂದ, ಸಂಸದರೂ ಕಾನೂನು ಕ್ರಮದ ವ್ಯಾಪ್ತಿಗೆ ಒಳಪಡುತ್ತಾರೆ.

ಲಂಚಕ್ಕೆ ವಿರುದ್ಧವಾಗಿ ವರ್ತಿಸಿದವರ ಮೇಲೇಯೇ ಕ್ರಮ

1993ರಲ್ಲಿ ನರಸಿಂಹರಾವ್ ಅವರ ಸರ್ಕಾರದ ಪರವಾಗಿ ಮತ ಚಲಾಯಿಸಲು ಅಜಿತ್ ಸಿಂಗ್ ಅವರು ಲಂಚ ಪಡೆದುಕೊಂಡಿದ್ದರು ಎಂದು ಪ್ರಕರಣದಲ್ಲಿ ವಿವರಿಸಲಾಗಿತ್ತು. ಆದರೆ ಅವರು ಮತ ಚಲಾವಣೆಯಿಂದ ದೂರ ಉಳಿದಿದ್ದರು. ಆದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು 1998ರಲ್ಲಿ ಸಂವಿಧಾನ ಪೀಠವು ನೀಡಿದ್ದ ಬಹುಮತದ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ‘ಈ ಸಂಸದರಿಗೆ ಸಂವಿಧಾನದ 105ನೇ ವಿಧಿಯ ಅಡಿ ಇರುವ ಕಾನೂನು ಕ್ರಮದ ವಿನಾಯಿತಿ ಅನ್ವಯವಾಗುವುದಿಲ್ಲ. ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಮೂವರು ನ್ಯಾಯಮೂರ್ತಿಗಳ ಬಹುಮತದ ತೀರ್ಪಿನಲ್ಲಿ ಆದೇಶಿಸಲಾಗಿತ್ತು.

ಆಗ ಅಲ್ಪಮತದ ತೀರ್ಪು ನೀಡಿದ್ದ ಇಬ್ಬರು ನ್ಯಾಯಮೂರ್ತಿಗಳು, ಲಂಚ ಪಡೆದುಕೊಂಡ ಆರೋಪದ ಅಡಿಯಲ್ಲಿ ಎಲ್ಲಾ ಸಂಸದರ ವಿರುದ್ಧವೂ ಪ್ರಕರಣ ದಾಖಲಾಗಬೇಕು ಮತ್ತು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.

1998ರ ತೀರ್ಪಿನಲ್ಲಿನ ಈ ಅಂಶವನ್ನು ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ತನ್ನ ತೀರ್ಪಿನಲ್ಲಿ ಪ್ರಸ್ತಾಪಿಸಿದೆ. ‘ಲಂಚ ಪಡೆದುಕೊಂಡು ಮತ ಚಲಾಯಿಸಿದ ಸಂಸದರಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡಲಾಗಿದೆ. ಆದರೆ ಲಂಚ ಪಡೆದುಕೊಂಡರೂ, ಅದಕ್ಕೆ ಅಡಿಯಾಳಾಗದೇ ಸ್ವತಂತ್ರವಾಗಿ ತನ್ನಿಚ್ಛೆಯಂತೆ ಮತ ಚಲಾಯಿಸಿದ ಸಂಸದ ಮಾತ್ರ ಕಾನೂನು ಕ್ರಮವನ್ನು ಎದುರಿಸಬೇಕಾಯಿತು. ಅದು ವಿರೋಧಭಾಸದ ತೀರ್ಪು’ ಎಂದು ಏಳುನ್ಯಾಯಮೂರ್ತಿಗಳ ಸಂವಿಧಾನ ಪೀಠವು ಅಭಿಪ್ರಾಯಪಟ್ಟಿದೆ. 

‘ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ’

‘ಲಂಚ ಪಡೆದುಕೊಂಡು, ಅದರ ಪ್ರಕಾರ ಸಂಸತ್ತಿನಲ್ಲಿ ಮತ ಚಲಾಯಿಸಿದ ಅಥವಾ ಮಾತನಾಡಿದ ಸಂಸದರಿಗೆ ಕಾನೂನು ಕ್ರಮದ ವಿನಾಯಿತಿ ನೀಡುವುದು ಸರಿಯಲ್ಲ. ಲಂಚ ಪಡೆದುಕೊಂಡ ಅಪರಾಧವೆಸಗಿದ ಸಂಸದನನ್ನು ದೇಶದ ಕಾನೂನಿಗಿಂತ ಮೇಲೆ ಎಂದು ಪರಿಗಣಿಸುವುದು ಸಂಸದೀಯ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾದುದು. ಅಲ್ಲದೆ ಅದರಿಂದ ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ತರುವಂತಹ ನಿರೂಪಣೆ ಇದು. ಹೀಗಾಗಿ ಇಂತಹ ಅಪರಾಧ ಕೃತ್ಯವೆಸಗಿದ ಸಂಸದರನ್ನು ಕಾನೂನು ವಿಮರ್ಶೆಗೆ ಒಳಪಡಿಸಿ, ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು 1998ರ ಅಲ್ಪಮತದ ತೀರ್ಪಿನಲ್ಲಿ ಇಬ್ಬರು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದರು.

ಈಗಿನ ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠವೂ ಇದೇ ಸ್ವರೂಪದ ಅಭಿಪ್ರಾಯಗಳನ್ನು ತನ್ನ ತೀರ್ಪಿನಲ್ಲಿ ವ್ಯಕ್ತಪಡಿಸಿದೆ. ‘ಸಂಸದರು ಮತ್ತು ಶಾಸಕರು ಲಂಚ ಪಡೆಯುವುದು ಮತ್ತು ಭ್ರಷ್ಟಾಚಾರ ಎಸಗುವುದು ಸಂಸದೀಯ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಯನ್ನು ಧ್ವಂಸಗೊಳಿಸುತ್ತದೆ’ ಎಂದು ಪೀಠವು ಹೇಳಿದೆ.

ಜೆಎಂಎಂ ಲಂಚ ಪ್ರಕರಣ

1991ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಅದರ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲಾಗಿತ್ತು. ಅವಿಶ್ವಾಸ ಗೊತ್ತುವಳಿಯ ವಿರುದ್ಧ 265 ಮತಗಳು ಬಂದಿದ್ದರೆ, ಗೊತ್ತುವಳಿಯ ಪರವಾಗಿ 251 ಮತಗಳು ಬಂದಿದ್ದವು. ಪಿ.ವಿ.ನರಸಿಂಹರಾವ್ ಅವರ ಸರ್ಕಾರವು ಉಳಿದಿತ್ತು.

ಆದರೆ ನರಸಿಂಹರಾವ್ ಮತ್ತಿತರರು ಅವಿಶ್ವಾಸ ಗೊತ್ತುವಳಿ ವಿರುದ್ಧ ಮತ ಚಲಾಯಿಸುವಂತೆ ಕೆಲವು ಸಂಸದರನ್ನು ಒತ್ತಾಯಿಸಲು ಸಂಚು ರೂಪಿಸಿದ್ದರು ಎಂದು ದೂರು ದಾಖಲಿಸಲಾಗಿತ್ತು. ಸಿಬಿಐ ಆ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಲಂಚ ನೀಡಿದವರು ಮತ್ತು ಲಂಚ ಪಡೆದುಕೊಂಡವರ ವಿರುದ್ಧ ಪ್ರಕರಣ ದಾಖಲಿಸ ಲಾಗಿತ್ತು. ಲಂಚ ಪಡೆದುಕೊಂಡು ಮತ ಚಲಾಯಿಸಿದ್ದವರಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಸಂಸದರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಹೀಗಾಗಿ ಅದನ್ನು ಜೆಂಎಂಎಂ ಲಂಚ ಪ್ರಕರಣ ಎಂದೇ ಕರೆಯಲಾಗುತ್ತಿತ್ತು. ಈ ಪ್ರಕರಣದಲ್ಲಿ ಒಟ್ಟು ₹2.80 ಕೋಟಿಯಷ್ಟು ಮೊತ್ತವನ್ನು ಲಂಚವಾಗಿ ನೀಡಲಾಗಿತ್ತು  ಎಂದು ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು.

ಆಧಾರ: 1998ರಲ್ಲಿ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ನೀಡಿದ್ದ ತೀರ್ಪು, ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ತೀರ್ಪು, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.