ADVERTISEMENT

ಆಳ–ಅಗಲ| ಪ್ಯಾನ್‌–ಆಧಾರ್‌ ಜೋಡಣೆಗೆ ಶುಲ್ಕ: ಸರ್ಕಾರ ಸಂಗ್ರಹಿಸಿದ್ದೆಷ್ಟು?

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 19:53 IST
Last Updated 27 ಮಾರ್ಚ್ 2023, 19:53 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್‌ ಹೊಂದಿರುವುದನ್ನು ತಪ್ಪಿಸುವ ಉದ್ದೇಶದಿಂದ, ಪ್ಯಾನ್‌ ಜತೆಗೆ ಆಧಾರ್ ಜೋಡಿಸುವ ವ್ಯವಸ್ಥೆಯನ್ನು 2017ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿತ್ತು. ಪ್ಯಾನ್‌–ಆಧಾರ್ ಜೋಡಣೆಗೆ ಆಗ ಸರ್ಕಾರವು ಯಾವುದೇ ಶುಲ್ಕ ವಿಧಿಸಿರಲಿಲ್ಲ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಜೋಡಣೆ ಕಾರ್ಯಗತವಾಗಲಿಲ್ಲ. ಹೀಗಾಗಿ ಪ್ಯಾನ್‌–ಆಧಾರ್ ಜೋಡಣೆಗೆ ನೀಡಿದ್ದ ಗಡುವನ್ನು ಸರ್ಕಾರವು ಹಲವು ಬಾರಿ ವಿಸ್ತರಿಸಿತ್ತು. ಕೊನೆಯ ಹಂತದ್ದು ಎಂದು ಹೇಳಿ 2022ರ ಮಾರ್ಚ್‌ನಲ್ಲಿ ವಿಸ್ತರಿಸಿದ ಗಡುವು 2023ರ ಮಾರ್ಚ್‌ 31ಕ್ಕೆ ಕೊನೆಯಾಗಲಿದೆ. ‘ಆಧಾರ್‌ ಜೊತೆಗೆ ಜೋಡಣೆಯಾಗದ ಪ್ಯಾನ್‌ಗಳನ್ನು ಇದೇ ಮಾರ್ಚ್‌ 31ರ ನಂತರ ಬಳಸಲು ಸಾಧ್ಯವಿಲ್ಲ. ಆನಂತರ ವ್ಯಾವಹಾರಿಕ ಮತ್ತು ತೆರಿಗೆ ಲಾಭಗಳನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷ ನಿತಿನ್ ಗುಪ್ತಾ ಈಚೆಗೆ ಹೇಳಿದ್ದರು.

ಪ್ಯಾನ್‌ ಅನ್ನು ಆಧಾರ್‌ ಜತೆಗೆ ಜೋಡಿಸಲು ಶುಲ್ಕವನ್ನೇಕೆ ತೆರಬೇಕು ಎಂದು ಟ್ವಿಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಹಲವರು ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ನ ಲೋಕಸಭಾ ಸದಸ್ಯ ಅಧೀರ್ ರಂಜನ್‌ ಚೌಧರಿ ಸಹ ಇದೇ ಪ್ರಶ್ನೆಯನ್ನು ಎತ್ತಿದ್ದರು. ಶುಲ್ಕವನ್ನು ರದ್ದುಪಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಆಗ್ರಹಿಸಿದ್ದರು. ಪತ್ರವನ್ನೂ ಬರೆದಿದ್ದರು. ಶುಲ್ಕ ಏಕೆ ತೆರಬೇಕು ಎಂಬ ಪ್ರಶ್ನೆಯೂ ಆನಂತರ ದೊಡ್ಡಮಟ್ಟದಲ್ಲಿ ಕೇಳಿಬರುತ್ತಿದೆ.

ಪ್ಯಾನ್‌ ಜೊತೆಗೆ ಆಧಾರ್ ಜೋಡಿಸಲು ಮೊದಲು ₹500 ಶುಲ್ಕವನ್ನು ನಿಗದಿ ಮಾಡಲಾಗಿತ್ತು. ನಂತರ ಅದನ್ನು ₹1,000ಕ್ಕೆ ಹೆಚ್ಚಿಸಲಾಯಿತು. ಈ ಕಾರ್ಯಕ್ಕೆ ಶುಲ್ಕ ವಿಧಿಸಲು ಮೂಲ ಕಾಯ್ದೆ ಅಥವಾ ನಿಯಮಗಳಲ್ಲಿ ಅವಕಾಶವಿರಲಿಲ್ಲ. ಹೀಗಾಗಿ 2021ರ ಹಣಕಾಸು ಕಾಯ್ದೆಯಲ್ಲಿ ತಿದ್ದುಪಡಿಯನ್ನು ತರಲಾಗಿತ್ತು. 1961ರ ಆದಾಯ ತೆರಿಗೆ ಕಾಯ್ದೆಗೆ ಹೊಸದಾಗಿ 234ಎಚ್‌ ಎಂಬ ಸೆಕ್ಷನ್‌ ಅನ್ನು ಸೇರಿಸಲಾಯಿತು. ‘ಸರ್ಕಾರವು ನಿಗದಿ ಮಾಡಿದ ಗಡುವಿನ ಒಳಗೆ ಪ್ಯಾನ್‌–ಆಧಾರ್ ಜೋಡಣೆ ಮಾಡದೇ ಇದ್ದವರು, ನಂತರದ ಅವಧಿಯಲ್ಲಿ ಶುಲ್ಕ ಪಾವತಿಸಬೇಕಾಗುತ್ತದೆ’ ಎಂದು ಈ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ. ಹೀಗಾಗಿ ಈಗ ಪ್ಯಾನ್‌–ಆಧಾರ್ ಜೋಡಣೆ ಮಾಡುವವರು ₹1,000 ಶುಲ್ಕ ಪಾವತಿಸಲೇಬೇಕು.

ADVERTISEMENT

ಸರ್ಕಾರದ ಮಾಹಿತಿ ಪ್ರಕಾರ 2022ರ ಜನವರಿ 24ರ ವೇಳೆಗೆ 43.34 ಕೋಟಿ ಪ್ಯಾನ್‌ಗಳನ್ನು ಆಧಾರ್ ಜತೆಗೆ ಜೋಡಿಸಲಾಗಿತ್ತು. 2023ರ ಫೆಬ್ರುವರಿ ವೇಳೆಗೆ 48 ಕೋಟಿ ಪ್ಯಾನ್‌ಗಳನ್ನು ಆಧಾರ್‌ ಜೊತೆಗೆ ಜೋಡಿಸಲಾಗಿದೆ. ಅಂದರೆ ಈ ಅವಧಿಯಲ್ಲಿ ನಾಲ್ಕು ಕೋಟಿಗೂ ಹೆಚ್ಚು ಪ್ಯಾನ್‌ಗಳನ್ನು ಆಧಾರ್‌ ಜತೆಗೆ ಜೋಡಿಸಲಾಗಿದೆ. ಅಂದರೆ ಈ ಅವಧಿಯಲ್ಲಿ ಸರ್ಕಾರಕ್ಕೆ, ಶುಲ್ಕದ ರೂಪದಲ್ಲಿ ₹4,000 ಕೋಟಿಗೂ ಹೆಚ್ಚು ಮೊತ್ತ ಪಾವತಿಯಾಗಿರಬೇಕು. ‘ಇನ್ನೂ 13 ಕೋಟಿಯಷ್ಟು ಪ್ಯಾನ್‌ಗಳನ್ನು ಆಧಾರ್‌ ಜತೆಗೆ ಜೋಡಿಸಬೇಕಿದೆ. ಇದರಲ್ಲಿ ಆಧಾರ್‌ ಜೋಡಣೆಯಿಂದ ವಿನಾಯಿತಿ ಪಡೆದ ಪ್ಯಾನ್‌ಗಳೂ ಇವೆ’ ಎಂದು ನಿತಿನ್‌ ಗುಪ್ತಾ ಅವರು ಹೇಳಿದ್ದರು. ಈ ಪ್ರಕಾರ ಸರ್ಕಾರಕ್ಕೆ ಇನ್ನೂ ₹13,000 ಕೋಟಿ ಸಂಗ್ರಹಕ್ಕೆ ಅವಕಾಶವಿದೆ.

ಆದರೆ, ಎಷ್ಟು ಪ್ಯಾನ್‌ಗಳು ಆಧಾರ್‌ಗೆ ಜೋಡಣೆಯಾಗಿವೆ ಮತ್ತು ಇನ್ನೆಷ್ಟು ಜೋಡಣೆ ಆಗಬೇಕು ಎಂಬ ನಿಖರ ಮಾಹಿತಿಯನ್ನು ಸರ್ಕಾರ ನೀಡಿಲ್ಲ. ನಿತಿನ್ ಗುಪ್ತಾ ಅವರು ಮಾಧ್ಯಮಗೋಷ್ಠಿಯಲ್ಲಿ ನೀಡಿದ್ದ ಮಾಹಿತಿಯೇ ಈಗ ಲಭ್ಯವಿರುವ ಏಕೈಕ ದತ್ತಾಂಶ. ‘ದೇಶದಲ್ಲಿ ಈವರೆಗೆ ಸುಮಾರು 61 ಕೋಟಿ ಪ್ಯಾನ್‌ಗಳನ್ನು ನೀಡಲಾಗಿದೆ. ಅವುಗಳಲ್ಲಿ ಸುಮಾರು 48 ಕೋಟಿ ಪ್ಯಾನ್‌ಗಳನ್ನಷ್ಟೇ ಆಧಾರ್‌ ಜತೆಗೆ ಜೋಡಿಸಲಾಗಿದೆ’ ಎಂದಷ್ಟೇ ಅವರು ಹೇಳಿದ್ದರು. ಆದರೆ, ಯಾವುದೇ ನಿಖರ ಸಂಖ್ಯೆಯನ್ನು ಹೇಳಿರಲಿಲ್ಲ. ಅಲ್ಲದೆ, ಪ್ಯಾನ್‌–ಆಧಾರ್ ಜೋಡಣೆಗೆ ₹500 ಶುಲ್ಕವಿದ್ದಾಗ ಎಷ್ಟು ಮೊತ್ತ ಸಂಗ್ರಹವಾಗಿದೆ ಎಂಬುದರ ಮಾಹಿತಿಯೂ ಲಭ್ಯವಿಲ್ಲ.

‘ಪ್ಯಾನ್‌ ಬಳಸುವಂತಹ ಎಲ್ಲಾ ಪ್ರಕ್ರಿಯೆಗಳಲ್ಲಿ, ಅದಕ್ಕೆ ಬದಲಾಗಿ ಆಧಾರ್ ಬಳಸಬಹುದು. ಪ್ಯಾನ್‌ ಇಲ್ಲದೇ ಇದ್ದವರಿಗೆ ಮತ್ತು ಆಧಾರ್‌ ಜತೆಗೆ ಪ್ಯಾನ್‌ ಜೋಡಿಸದೇ ಇದ್ದವರಿಗೂ ಇದು ಅನ್ವಯವಾಗುತ್ತದೆ’ ಎಂದು 2019ರ ಆರ್ಥಿಕ ಮಸೂದೆಯಲ್ಲಿ ವಿವರಿಸಲಾಗಿತ್ತು. ಅದು ಕಾಯ್ದೆಯೂ ಆಗಿತ್ತು. ಹೀಗಿದ್ದೂ, ಈ ಮೇಲೆ ವಿವರಿಸಲಾದ ಕಾರ್ಯಗಳಲ್ಲಿ ಅಡಚಣೆ ಹೇಗಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ.

ಮತ್ತೆ ಮತ್ತೆ ಶುಲ್ಕ

ಪ್ಯಾನ್‌ ಮತ್ತು ಆಧಾರ್ ಜೋಡಣೆ ವೇಳೆ ತಪ್ಪಾದರೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ಒಬ್ಬರ ಪ್ಯಾನ್‌ಗೆ ಬೇರೊಬ್ಬರ ಆಧಾರ್ ಸಂಖ್ಯೆ ನಮೂದಿಸಿದರೆ, ಅದು ಹಾಗೆಯೇ ನೋಂದಣಿಯಾಗುತ್ತದೆ. ಒಬ್ಬರ ಆಧಾರ್‌ ಸಂಖ್ಯೆಗೆ ಬೇರೊಬ್ಬರ ಪ್ಯಾನ್‌ ಸಂಖ್ಯೆ ನಮೂದಿಸಿದರೆ, ಅದು ಹಾಗೆಯೇ ನೋಂದಣಿಯಾಗುತ್ತದೆ. ಎರಡೂ ಸಂದರ್ಭದಲ್ಲಿ ಪರಸ್ಪರ ಜೋಡಿಸಲಾದ ಮಾಹಿತಿ ತಪ್ಪಾಗಿಯೇ ಇರುತ್ತದೆ.

ಹೀಗೆ ತಪ್ಪಾಗಿ ಜೋಡಿಸಲಾದ ಮಾಹಿತಿಯನ್ನು ಸರಿಪಡಿಸಲು ಮತ್ತೆ ಶುಲ್ಕ ಪಾವತಿಸಬೇಕು. ಹೀಗಾಗಿ ಒಮ್ಮೆ ₹1,000 ವಾಪತಿಸಿ ಪ್ಯಾನ್‌–ಆಧಾರ್ ಜೋಡಿಸಿದರೆ, ಆ ಶುಲ್ಕದ ಅವಧಿ ಮುಗಿದಂತೆ. ಮತ್ತೆ ಸರಿಯಾದ ಪ್ಯಾನ್‌ ಮತ್ತು ಆಧಾರ್ ಜೋಡಿಸಲು ಹೊಸದಾಗಿ ₹1,000 ಶುಲ್ಕ ಪಾವತಿಸಬೇಕು. ಹಳೆಯ ಶುಲ್ಕದ ರಸೀದಿಯನ್ನೇ ಇಲ್ಲಿ ಬಳಸಲು ಸಾಧ್ಯವಿಲ್ಲ. ಹಲವು ಬಾರಿ ತಪ್ಪು ಸರಿಪಡಿಸಲೂ, ಪದೇ ಪದೇ ಶುಲ್ಕ ಪಾವತಿಸಬೇಕಾಗಿದೆ.

ಜೋಡಿಸದಿದ್ದರೆ...

ಗಡುವಿನ ಒಳಗೆ ಪ್ಯಾನ್‌–ಆಧಾರ್ ಜೋಡಣೆ ಆಗದಿದ್ದರೆ, ಕೆಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹಣಕಾಸು ಸಚಿವಾಲಯವು 2022ರ ಮಾರ್ಚ್‌ 30ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ವಿವರಿಸಿತ್ತು. ಅಂತಹ ಸಮಸ್ಯೆಗಳು ಕೆಳಗಿನಂತಿವೆ.

l ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಲು ಸಾಧ್ಯವಾಗುವುದಿಲ್ಲ

l ಈಗಾಗಲೇ ಬಾಕಿ ಇರುವ ರಿಟರ್ನ್ಸ್‌ಗಳ ಪ್ರಕ್ರಿಯೆ ಪೂರ್ಣವಾಗುವುದಿಲ್ಲ

l ಬಾಕಿ ಮೊತ್ತಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ

l ಹೆಚ್ಚಿನ ದರದ ತೆರಿಗೆ ಪಾವತಿ ಮಾಡಬೇಕಾಗುತ್ತದೆ

l ಬ್ಯಾಂಕ್‌ ಮತ್ತು ಸಂಬಂಧಿತ ಆರ್ಥಿಕ ವ್ಯವಹಾರಗಳಿಗೆ ಅಡಚಣೆಯಾಗುತ್ತದೆ. ಕೆವೈಸಿ ಪ್ರಕ್ರಿಯೆಯಲ್ಲಿ ಅಡಚಣೆಯಾಗಲಿದೆ.

ಪ್ಯಾನ್–ಆಧಾರ್ ಜೋಡಣೆ ಪ್ರಕ್ರಿಯೆ

ಆದಾಯ ತೆರಿಗೆ ಇಲಾಖೆಯ ಇ–ಫೈಲಿಂಗ್ ಪೋರ್ಟಲ್‌ ಮೂಲಕ ಪ್ಯಾನ್–ಆಧಾರ್ ಜೋಡಣೆ ಮಾಡಬಹುದು. ಇದಕ್ಕಾಗಿ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕಾದ ಅಗತ್ಯವಿಲ್ಲ. ವೆಬ್‌ಸೈಟ್‌ಗೆ ನೋಂದಣಿ ಮಾಡಿಕೊಂಡಿರಬೇಕು ಎಂಬ ನಿಯಮವೂ ಇಲ್ಲ. ಇದೇ 31ರೊಳಗೆ ₹1,000 ಶುಲ್ಕ ಪಾವತಿಯೊಂದಿಗೆ ಪ್ಯಾನ್–ಆಧಾರ್ ಜೋಡಣೆ ಮಾಡಬೇಕಿದೆ. ಪ್ಯಾನ್–ಆಧಾರ್ ಜೋಡಣೆಯ ಸಂಪೂರ್ಣ ಪ್ರಕ್ರಿಯೆಯನ್ನು ಚಿತ್ರಸಹಿತವಾಗಿ ಪೋರ್ಟಲ್‌ನಲ್ಲಿ ವಿವರಿಸಲಾಗಿದೆ.

l ಮೊದಲಿಗೆ, ಆದಾಯ ತೆರಿಗೆ ಇಲಾಖೆಯ ಇ–ಪೋರ್ಟಲ್‌ಗೆ ಭೇಟಿ ನೀಡಿ https://www.incometax.gov.in/iec/foportal/

l ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ನಿಗದಿತ ಜಾಗದಲ್ಲಿ ನಮೂದಿಸಬೇಕು

l ಶುಲ್ಕ ಪಾವತಿಗೆ ಇರುವ ಆಯ್ಕೆಯ ಮೇಲೆ (Continue to Pay Through e-Pay Tax) ಕ್ಲಿಕ್ ಮಾಡಬೇಕು

l ಶುಲ್ಕ ಪಾವತಿಗಾಗಿ, ನಿಮ್ಮ ಪ್ಯಾನ್, ಆಧಾರ್ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ

l ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿದ ನಂತರ ‘ಇ–ಪೇ ಟ್ಯಾಕ್ಸ್’ ಪುಟ ತೆರೆದುಕೊಳ್ಳುತ್ತದೆ

l ಮೊದಲಿಗೆ ಕಾಣಿಸುವ ‘ಇನ್‌ಕಮ್ ಟ್ಯಾಕ್ಸ್’ ಬಾಕ್ಸ್‌ನ ಕೊನೆಯಲ್ಲಿರುವ ‘ಪ್ರೊಸೀಡ್’ ಮೇಲೆ ಕ್ಲಿಕ್ ಮಾಡಿ

l ಅಸೆಸ್‌ಮೆಂಟ್ ಇಯರ್ ‘ಎವೈ 2023–24’ ಆಯ್ಕೆ ಮಾಡಿ, ಪೇಮೆಂಟ್ ವಿಧಾನದಲ್ಲಿ ‘ಅದರ್ ರೆಸಿಪ್ಟ್ಸ್(500)’ ಆಯ್ಕೆ ಮಾಡಿ ಕ್ಲಿಕ್ ಮಾಡಿ

l ₹1,000 ಶುಲ್ಕದ ಚಲನ್‌ ಕಾಣಿಸುವ ಪುಟದ ಕೊನೆಯಲ್ಲಿ ‘ಕಂಟಿನ್ಯೂ’ ಮೇಲೆ ಕ್ಲಿಕ್ ಮಾಡಿ. ಇದು ನಿಮ್ಮ ಖಾತೆ ಇರುವ ಬ್ಯಾಂಕ್ ವೆಬ್‌ಸೈಟ್‌ಗೆ ಹೋಗುತ್ತದೆ. ಆ್ಯಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಸಿಟಿ ಯೂನಿಯನ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಬಿಐ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಜಮ್ಮು&ಕಾಶ್ಮೀರ್ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಕೊಟಕ್ ಮಹೀಂದ್ರ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯುಕೊ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ–ಈ ಯಾವುದಾದರೂ ಒಂದು ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರೆ ಇ–ಪೇ ಟ್ಯಾಕ್ಸ್‌ ಮೂಲಕ ಪಾವತಿ ಮಾಡಿ

l ಒಂದು ವೇಳೆ, ಮೇಲೆ ಹೇಳಿದ ಬ್ಯಾಂಕ್‌ಗಳನ್ನು ಹೊರತುಪಡಿಸದ ಬ್ಯಾಂಕ್‌ಗಳಲ್ಲಿ ನಿಮ್ಮ ಖಾತೆ ಇದ್ದಲ್ಲಿ,
‘ಇ–ಪೇ ಟ್ಯಾಕ್ಸ್’ ಪುಟದ ಕೆಳಭಾಗದಲ್ಲಿರುವ ಎನ್‌ಎಸ್‌ಡಿಎಲ್ ಪೋರ್ಟಲ್‌ನ ಹೈಪರ್‌ಲಿಂಕ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಕಾಣಿಸುವ ಚಲನ್ ನಂಬರ್‌ ITNS 280 ಆಯ್ಕೆ ಮಾಡಿ

l ಟ್ಯಾಕ್ಸ್‌ ಅಪ್ಲಿಕೇಬಲ್ ಎಂಬಲ್ಲಿ ‘0021’ ಎಂದೂ, ಪೇಮೆಂಟ್ ಟೈಪ್‌ನಲ್ಲಿ ‘500’ ಎಂದು ಆಯ್ಕೆ ಮಾಡಿ. ಅಸೆಸ್‌ಮೆಂಟ್ ಇಯರ್ ಎಂಬ ಜಾಗದಲ್ಲಿ ‘2023–24’ ಎಂದು ಆಯ್ಕೆ ಮಾಡಿಕೊಂಡು, ಬ್ಯಾಂಕ್‌ ಖಾತೆಗೆ ಸಂಬಂಧಿಸಿದಂತೆ ನೀಡಲಾಗಿರುವ ಕಾಲಂ ಭರ್ತಿ ಮಾಡಿ ‘ಪ್ರೊಸೀಡ್’ ಕ್ಲಿಕ್ ಮಾಡಿ

l ಶುಲ್ಕ ಪಾವತಿಸಿದ ಬಳಿಕ ಪುನಃ ಇ–ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಬೇಕು. ಲಾಗಿನ್ ಆಗಿ, ಪ್ರೊಫೈಲ್‌ ವಿಭಾಗದಲ್ಲಿ ಪ್ಯಾನ್–ಆಧಾರ್ ಜೋಡಣೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಥವಾ ವೈಯಕ್ತಿಕ ಮಾಹಿತಿ ವಿಭಾಗದಲ್ಲಿ ‘ಲಿಂಕ್ ಆಧಾರ್’ ಮೇಲೆ ಕ್ಲಿಕ್ ಮಾಡಿ

l ಆಧಾರ್‌ ಸಂಖ್ಯೆ ನಮೂದಿಸಿ. ‘ವ್ಯಾಲಿಡೇಟ್’ ಮೇಲೆ ಕ್ಲಿಕ್ ಮಾಡಿ. ಅಗತ್ಯ ಮಾಹಿತಿ ಭರ್ತಿ ಮಾಡಿದ ಬಳಿಕ ‘ಲಿಂಕ್ ಆಧಾರ್’ ಮೇಲೆ ಕ್ಲಿಕ್ ಮಾಡಿ

l ಮತ್ತೆ ಒಟಿಪಿ ನಮೂದಿಸಿ, ವ್ಯಾಲಿಡೇಟ್ ಮೇಲೆ ಕ್ಲಿಕ್ ಮಾಡಿ. ‘ಪ್ಯಾನ್–ಆಧಾರ್ ಜೋಡಣೆ ಮನವಿ ಯಶಸ್ವಿಯಾಗಿ ಸ್ವೀಕೃತವಾಗಿದ್ದು, ಜೋಡಣೆಯ ಸ್ಥಿತಿಯನ್ನು (ಸ್ಟೇಟಸ್) ಪರಿಶೀಲಿಸಿ’ ಎಂಬ ಸಂದೇಶ ಕಾಣಿಸುತ್ತದೆ.

l ಒಂದು ವೇಳೆ ಯಶಸ್ವಿಯಾಗದಿದ್ದಲ್ಲಿ, ಶುಲ್ಕ ಪಾವತಿಯಲ್ಲಿಲ್ಲ ಎಂಬ ಸಂದೇಶ ಕಾಣಿಸುತ್ತದೆ. ಒಂದು ವೇಳೆ ಎನ್‌ಎಸ್‌ಡಿಎಲ್ ಪೋರ್ಟಲ್‌ ಮೂಲಕ ಪಾವತಿಸಿ‌ದ್ದರೆ ನಾಲ್ಕೈದು ದಿನಗಳ ಬಳಿಕ ‘ವ್ಯಾಲಿಡೇಟ್‌’ ಮಾಡಬೇಕು

l ಒಂದು ವೇಳೆ ಬೇರೊಂದು ಪ್ಯಾನ್‌ ಅಥವಾ ಆಧಾರ್ ಜೋಡಣೆಯಾಗಿದ್ದರೆ, ಸಮೀಪದ ಆದಾಯ ತೆರಿಗೆ ಇಲಾಖೆ ಕಚೇರಿಯನ್ನು ಸಂಪರ್ಕಿಸಿ

ಸ್ಟೇಟಸ್ ಪರಿಶೀಲನೆ

ಪ್ಯಾನ್–ಆಧಾರ್ ಜೋಡಣೆ ಆಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬಹುದು. ಆದಾಯ ತೆರಿಗೆ ಇಲಾಖೆಯ ಇ–ಫೈಲಿಂಗ್ ಪೋರ್ಟಲ್‌ನಲ್ಲಿ ‘ಲಿಂಕ್ ಆಧಾರ್ ಸ್ಟೇಟಸ್’ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇಲ್ಲಿ ಪ್ಯಾನ್ ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸಿದರೆ, ಇವರೆಡೂ ಜೋಡಣೆ ಆಗಿವೆಯೇ ಅಥವಾ ಇಲ್ಲವೇ ಎಂಬ ಮಾಹಿತಿ ತಿಳಿಯುತ್ತದೆ.

ಆಧಾರ: ಹಣಕಾಸು ಸಚಿವಾಲಯದ ಸುತ್ತೋಲೆ ಸಂಖ್ಯೆ:07 ಆಫ್ 2022, 2019ರ ಹಣಕಾಸು ಕಾಯ್ದೆ, 2021ರ ಹಣಕಾಸು ಕಾಯ್ದೆ, ಪಿಐಬಿ, ಪಿಟಿಐ, ಆದಾಯ ತೆರಿಗೆ ಇಲಾಖೆಯ ಪ್ರಕಟಣೆಗಳು, ಆದಾಯ ತೆರಿಗೆ ಇಲಾಖೆಯ ಇ–ಫೈಲಿಂಗ್ ಜಾಲತಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.