ADVERTISEMENT

ಆಳ–ಅಗಲ | ಲೋಕ ರಾಜಕಾರಣ ಸರಣಿ–5: ಕುಲುಕಾಡಿದ ಮತಬುಟ್ಟಿಗಳು...

ಪ್ರಜಾವಾಣಿ ವಿಶೇಷ
Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
   

ಬಿಜೆಪಿ ಈ ಹಿಂದೆ ಅಧಿಕಾರಕ್ಕೆ ಬರುವಲ್ಲಿ ಅದು ಸೃಷ್ಟಿಸಿಕೊಂಡ ಮತದಾರರ ಸಮುದಾಯದ್ದೇ ಪ್ರಮುಖ ಪಾತ್ರ. 90ರ ದಶಕದಲ್ಲಿ ‘ಮೇಲ್ಜಾತಿ’ಗಳು, ಮಧ್ಯಮ ವರ್ಗ, ನಗರ ಪ್ರದೇಶದ ಮತದಾರರು ಮತ್ತು ಪುರುಷ ಮತದಾರರನ್ನು ಒಳಗೊಂಡ ಒಂದು ‘ಪ್ರಬಲ ಮತ ಸಮುದಾಯ’ವನ್ನು ಬಿಜೆಪಿ ರೂಪಿಸಿತ್ತು. ಆನಂತರದ ಚುನಾವಣೆ ಗಳಲ್ಲಿ ಈ ಪ್ರಬಲ ಮತ ಸಮುದಾಯವೇ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಾ ಬಂದಿದೆ. 2014 ಮತ್ತು 2019ರ ಚುನಾವಣೆಯಲ್ಲಿ ಈ ವರ್ಗದ ಮತಗಳು ಬಿಜೆಪಿಗೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದನ್ನು ಚುನಾವಣಾ ದತ್ತಾಂಶಗಳು ಹೇಳುತ್ತವೆ. ಆದರೆ ಇವುಗಳಲ್ಲಿ ಕೆಲವು ವರ್ಗದ ಮತಗಳು ಬಿಜೆಪಿಯಿಂದ ತುಸು ದೂರ ಸರಿದಿರುವುದಕ್ಕೆ 2024ರ ಚುನಾವಣೆ ಸಾಕ್ಷಿಯಾಗಿದೆ.

ಚುನಾವಣಾ ಫಲಿತಾಂಶ ವರದಿಗಳು ಮತ್ತು ಲೋಕನೀತಿ–ಸಿಎಸ್‌ಡಿಎಸ್‌ ಮತದಾನೋತ್ತರ ಸಮೀಕ್ಷಾ ವರದಿಗಳಲ್ಲಿನ ದತ್ತಾಂಶ ಗಳನ್ನು ಬಳಸಿಕೊಂಡು ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ಎಲ್ಲಾ ದತ್ತಾಂಶಗಳು ಸಂಬಂಧಿತ ಜಾಲತಾಣಗಳಲ್ಲಿ ಲಭ್ಯವಿವೆ. ಸಮೀಕ್ಷಾ ವರದಿಗಳು ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಅದರ ಜಾಲತಾಣದಲ್ಲಿ ಸಂಬಂಧಿತ ದತ್ತಾಂಶಗಳು ಲಭ್ಯವಿವೆ.

ನರೇಂದ್ರ ಮೋದಿ ಅವರು ರಾಷ್ಟ್ರರಾಜಕಾರಣದಲ್ಲಿ ಮುನ್ನೆಲೆಗೆ ಬಂದ ನಂತರ ಮತ್ತು ಅವರು ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯ ಈ ‘ಪ್ರಬಲ ಮತ ಸಮುದಾಯ’ವು ಮತ್ತಷ್ಟು
ವಿಸ್ತರಣೆಯಾಯಿತು. ಅತ್ಯಂತ ಹಿಂದುಳಿದ ವರ್ಗಗಳು (ಇಬಿಸಿ), ಬಡವರು ಮತ್ತು ಆದಿವಾಸಿಗಳನ್ನು ಬಿಜೆಪಿ ತನ್ನತ್ತ ಸೆಳೆದುಕೊಂಡಿತು. ಈ ವರ್ಗದ ಮತದಾರರು ಬಿಜೆಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತಹಾಕಿದ್ದಾರೆ ಎಂಬುದನ್ನು ದತ್ತಾಂಶಗಳು ಹೇಳುತ್ತವೆ.

ADVERTISEMENT

2024ರ ಚುನಾವಣೆಯಲ್ಲಿ ಬಿಜೆಪಿಗೆ ಗಣನೀಯ ಮಟ್ಟದಲ್ಲಿ ಹಿನ್ನಡೆ ಆಗಿದ್ದರೂ, ವಿವಿಧ ಸಾಮಾಜಿಕ ಸಮುದಾಯಗಳಲ್ಲಿ ಅದರ ಮತ ಬೆಂಬಲಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಈ ಮತ ಸಮುದಾಯಗಳಿಂದ ಹೊರಗೆ ಉಳಿದ ಬಡವರು, ದಲಿತರು, ಇತರೆ ಹಿಂದುಳಿದ ವರ್ಗಗಳು, ಗ್ರಾಮೀಣ ಮತ್ತು ಅಲ್ಪಸಂಖ್ಯಾತರ ಮತಗಳನ್ನು ಒಗ್ಗೂಡಿಸುವುದು ಸುಲಭದ ಕೆಲಸವೇನಲ್ಲ. ಸಾಮಾಜಿಕವಾಗಿ ಬಹುಸಂಖ್ಯಾತರಾಗಿರುವ ಈ ಸಮುದಾಯಗಳನ್ನು ಇನ್ನೊಂದು ‘ಪ್ರಬಲ ಮತ ಸಮುದಾಯ’ವನ್ನಾಗಿ ರೂಪಿಸಲು ಅವಕಾಶವಿದೆ. ಅಂತಹ ಒಂದು ಸವಾಲು ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳ ಎದುರು ಇದೆ.

  • ಪ್ರಧಾನಿಯಾದಿಯಾಗಿ ಬಿಜೆಪಿಯ ಎಲ್ಲ ನಾಯಕರು ಮುಸ್ಲಿಮರ ಮೇಲೆ ವಾಗ್ದಾಳಿ ನಡೆಸಿದ್ದು, ಮುಸ್ಲಿಮರ ಮತಗಳು ಬಿಜೆಪಿ–ಎನ್‌ಡಿಎ ವಿರುದ್ಧವಾಗಿ ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದೆ. ಪರಿಣಾಮವಾಗಿ ಹಲವು ಕ್ಷೇತ್ರಗಳಲ್ಲಿ ಬಿಜೆಪಿಯು ಸೋಲಬೇಕಾಯಿತು

  • ರಾಷ್ಟ್ರಮಟ್ಟದಲ್ಲಿ ಮುಸ್ಲಿಂ ಮತಗಳ ಪ್ರಮಾಣ ಕಡಿಮೆ ಇದ್ದರೂ  ಬಿಜೆಪಿ ವಿರುದ್ಧ ಚಲಾವಣೆಯಾದ ಮುಸ್ಲಿಮರ ಮತ ಶೇ 65ರಷ್ಟಾಗಿದೆ. ಇದು ಈವರೆಗಿನ ಗರಿಷ್ಠ ಪ್ರಮಾಣ. ‘ಇಂಡಿಯಾ’ ಮೈತ್ರಿಕೂಟಕ್ಕೆ ಟಿಎಂಸಿಯ ಮುಸ್ಲಿಂ ಮತಗಳನ್ನೂ ಸೇರಿಸಿದರೆ, ಈ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ

  • ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಮತ್ತು ಎಸ್‌ಪಿ ಒಟ್ಟಿಗೇ ಕಣಕ್ಕೆ ಇಳಿದ ಕಾರಣ, ಮುಸ್ಲಿಮರ ಮತ ವಿಭಜನೆಗೆ ತಡೆಬಿದ್ದಿತು. ಪರಿಣಾಮವಾಗಿಯೇ ಈ ಪಕ್ಷದ ಅಭ್ಯರ್ಥಿಗಳ ಪರವಾಗಿ ಮುಸ್ಲಿಮರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿದ್ದವು

  • ಅಸ್ಸಾಂನ ಮುಸ್ಲಿಮರು ಧರ್ಮಾಧಾರಿತ ಪಕ್ಷದಿಂದ (ಎಐಯುಡಿಎಫ್‌) ದೂರ ಸರಿದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಆಲ್‌ ಇಂಡಿಯಾ ಸೆಕ್ಯುಲರ್ ಫ್ರಂಟ್‌ ಮುಸ್ಲಿಮರ ಕೆಲವು ಮತಗಳನ್ನು ಸೆಳೆದುಕೊಂಡರೂ ಟಿಎಂಸಿಗೆ ಅದು ಹೊಡೆತವನ್ನೇನೂ ನೀಡಿಲ್ಲ

  • ಚಲಾವಣೆಯಾದ ಮುಸ್ಲಿಂ ಮತಗಳಲ್ಲಿ ಕಾಂಗ್ರೆಸ್‌ಗೇ ಗರಿಷ್ಠ ಶೇ 38ರಷ್ಟು ಮತಗಳು ಬಿದ್ದಿವೆ. ಆದರೆ, ಕಾಂಗ್ರೆಸ್‌ಗೆ ದೊರೆತ ಒಟ್ಟು ಮತಗಳಲ್ಲಿ ಮುಸ್ಲಿಮರ ಮತಗಳ ಪ್ರಮಾಣ ಶೇ 25ರ ಆಸುಪಾಸಿನಲ್ಲಷ್ಟೇ ಇದೆ

  • ಬಿಜೆಪಿಯೂ ಮುಸ್ಲಿಂ ಮತದಾರರನ್ನು ಹೊಂದಿದ್ದು, ಅದರಲ್ಲಿ ಗಣನೀಯ ಬದಲಾವಣೆ ಏನಾಗಿಲ್ಲ. 2019ಕ್ಕೆ ಹೋಲಿಸಿದರೆ 2024ರಲ್ಲಿ ಬಿಜೆಪಿಗೆ ಬಿದ್ದ ಮುಸ್ಲಿಮರ ಮತ ಪ್ರಮಾಣದಲ್ಲಿ 1 ಶೇಕಡಾವಾರು ಅಂಶದಷ್ಟು ಏರಿಕೆಯಾಗಿದೆ

  • ಕಾಂಗ್ರೆಸ್ ಕಳೆದುಕೊಂಡಿದ್ದ ಅತ್ಯಂತ ಬಡವರ ಮತಗಳಲ್ಲಿ ಸ್ವಲ್ಪ ಪ್ರಮಾಣವನ್ನು ಮರುಗಳಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಡವರ ಪರವಾದ ಗ್ಯಾರಂಟಿಗಳ ಅಭಿಯಾನ ಕಾಂಗ್ರೆಸ್‌ಗೆ ಅನುಕೂಲವಾಗಿದೆ

  • ಈ ಸ್ವರೂಪದ ಅಭಿಯಾನ ಮತ್ತು ಘೋಷಣೆಗಳು ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಟ್ಟಿದ್ದರೂ ಇದನ್ನು ಪ್ರಬಲ ಮತನೆಲೆಯನ್ನಾಗಿ ರೂಪಿಸಿಕೊಳ್ಳಲು ಇನ್ನಷ್ಟು ಕೆಲಸ ಮಾಡಬೇಕಿದೆ

  • ಕಾಂಗ್ರೆಸ್‌ಗೆ ಮತ ನೀಡಿದ ಅತಿಬಡವ ಮತದಾರರ ಪ್ರಮಾಣ ಹೆಚ್ಚಾಗಿರುವಂತೆ, ಕಾಂಗ್ರೆಸ್‌ಗೆ ಮತ ನೀಡಿದ ಅತಿಶ್ರೀಮಂತ ಮತದಾರರ ಪ್ರಮಾಣವೂ ತುಸು ಏರಿಕೆಯಾಗಿದೆ

  • ಬಡವರಲ್ಲಿ ಬಿಜೆಪಿ ಮೊದಲಿಗೆ ಜನಪ್ರಿಯವಾಗಿಯೇನೂ ಇರಲಿಲ್ಲ. ನರೇಂದ್ರ ಮೋದಿ ಅವರನ್ನು ಕರೆತಂದ ನಂತರ ಅತ್ಯಂತ ಬಡವರ ಮತಗಳನ್ನು ಬಿಜೆಪಿ ಸೆಳೆಯಲು ಆರಂಭಿಸಿತು

  • 2014ರಿಂದ ಬಿಜೆಪಿಗೆ ಮತ ನೀಡುವ ಅತ್ಯಂತ ಬಡವ ಮತದಾರರ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಆದರೆ 2024ರ ಚುನಾವಣೆಯಲ್ಲಿ ಈ ಏರಿಕೆ ಪ್ರಮಾಣ ಕುಸಿದಿದೆ

  • ಸಿರಿವಂತರ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೇ ಬೀಳುತ್ತವೆ. ಆದರೆ ಈ ಹಿಂದಿನ ಲೋಕಸಭಾ ಚುನಾವಣೆಗೆ ಹೋಲಿಸಿದರೆ, 2024ರ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದ ಅತಿಶ್ರೀಮಂತರ ಪ್ರಮಾಣ ತುಸು ಕಡಿಮೆಯಾಗಿದೆ

ಬಿಜೆಪಿಗೆ ಮಹಿಳಾ ಮತ್ತು ಪುರುಷರ ಮತ: ಕುಸಿದ ಅಂತರ

ಚುನಾವಣಾ ವರ್ಷ;ಚಲಾವಣೆಯಾದ ಒಟ್ಟು ಮತಗಳಲ್ಲಿ ಬಿಜೆಪಿಗೆ ಮತ ನೀಡಿದ ಮಹಿಳೆಯರ ಪ್ರಮಾಣ;ಚಲಾವಣೆಯಾದ ಒಟ್ಟು ಮತಗಳಲ್ಲಿ ಬಿಜೆಪಿಗೆ ಮತ ನೀಡಿದ ಪುರುಷರ ಪ್ರಮಾಣ

1996;19%;22%

1998;23%;28%

1999;22%;25%

2004;22%;23%

2009;18%;20%

2014;29%;33%

2019;36%;39%

2024;36%;37%

* ಚಲಾವಣೆಯಾದ ಒಟ್ಟು ಮತಗಳಲ್ಲಿ ಬಿಜೆಪಿಗೆ ಮತ ಹಾಕಿದ ಮಹಿಳೆಯರಿಗಿಂತ, ಪುರುಷ ಮತದಾರರ ಪ್ರಮಾಣವೇ ಸದಾ ಹೆಚ್ಚು

* ಮಹಿಳಾ ಮತದಾರರನ್ನು ಸೆಳೆಯಲು ಬಿಜೆಪಿ ಹಲವು ಘೋಷಣೆಗಳನ್ನು ಮಾಡಿತ್ತು. ಮಹಿಳೆಯರಿಗೆಂದೇ ಹಲವು ಯೋಜನೆಗಳನ್ನು ಆರಂಭಿಸಿತ್ತು. ಆದರೆ ಅದರಿಂದ ಬಿಜೆಪಿಗೆ ನಿರೀಕ್ಷಿತ ಮಟ್ಟದಲ್ಲಿ ಲಾಭವಾದಂತೆ ಕಾಣುವುದಿಲ್ಲ

* ಆದರೆ ಒಟ್ಟು ಮತಗಳಲ್ಲಿ ಬಿಜೆಪಿಗೆ ಮತ ನೀಡಿದ ಮಹಿಳೆಯರು ಮತ್ತು ಪುರುಷ ಮತದಾರರ ಪ್ರಮಾಣದ ಮಧ್ಯೆ ಇದ್ದ ಅಂತರ ಗಣನೀಯ ಮಟ್ಟಕ್ಕೆ ಇಳಿಕೆಯಾಗಿದೆ

  • ಬಿಜೆಪಿಯು ನಗರ ಪ್ರದೇಶದಲ್ಲಿ ತನಗಿರುವ ಬೆಂಬಲವನ್ನು ಸರಿಸುಮಾರು ಅದೇ ಮಟ್ಟದಲ್ಲಿ ಕಾಯ್ದುಕೊಂಡಿದೆ. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲೂ ತನ್ನ ಬೆಂಬಲವನ್ನು ಸರಿಸುಮಾರು ಅದೇ ಮಟ್ಟದಲ್ಲಿ ಕಾಯ್ದುಕೊಂಡಿದೆ. ಆದರೆ ಮೂರೂ ಪ್ರದೇಶಗಳ ಮತ ಪ್ರಮಾಣದಲ್ಲಿ
    1 ಶೇಕಡಾವಾರು ಅಂಶದಷ್ಟು ಇಳಿಕೆಯಾಗಿದೆ

  • ಶಿವಸೇನಾ (ಯುಬಿಟಿ) ಮುಂಬೈನಲ್ಲಿ ಮತ್ತು ಚೆನ್ನೈನಲ್ಲಿ ಡಿಎಂಕೆ ಪ್ರಬಲ ಪೈಪೋಟಿ ನೀಡಿದ್ದರೂ ‘ಇಂಡಿಯಾ’ ಮೈತ್ರಿಕೂಟವು ನಗರ ಪ್ರದೇಶಗಳಲ್ಲಿ ತನ್ನ ಮತ ಬೆಂಬಲವನ್ನು ಹೆಚ್ಚಿಸಿಕೊಂಡಿದ್ದು ತುಸು ಮಾತ್ರ. ಆದರೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಮತ ಪ್ರಮಾಣವು ಗಮನಾರ್ಹ ಮಟ್ಟದಲ್ಲಿ ಏರಿಕೆಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.