ADVERTISEMENT

ಆಳ–ಅಗಲ | ಲೋಕ ರಾಜಕಾರಣ ಸರಣಿ–4: ಫಲಿತಾಂಶದ ಕತೆ ಹೇಳುವ ದತ್ತಾಂಶಗಳು

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 23:30 IST
Last Updated 16 ಜೂನ್ 2024, 23:30 IST
   

ಈ ಲೋಕಸಭಾ ಚುನಾವಣೆಯ ಅಚ್ಚರಿಯ ಫಲಿತಾಂಶದ ನಂತರ ಹಲವು ಪ್ರಶ್ನೆಗಳು ಮೂಡಿದ್ದವು. ರೈತರ ಸಿಟ್ಟು ಬಿಜೆಪಿಗೆ ಮುಳುವಾಯಿತೇ? ಅತ್ಯಂತ ಹಿಂದುಳಿದ ವರ್ಗಗಳ ಮತಗಳು ಬಿಜೆಪಿಯಿಂದ ದೂರ ಸರಿದವೇ? ಅಥವಾ ಮುಸ್ಲಿಂ ಮತಬ್ಯಾಂಕ್‌ ಈ ಅಚ್ಚರಿಗೆ ಕಾರಣವಾಯಿತೇ? ಬಿಜೆಪಿ ಹೊಸದಾಗಿ ಗಳಿಸಿಕೊಂಡಿದ್ದ ಮಹಿಳಾ ಮತಬುಟ್ಟಿಗೆ ಏನಾಯಿತು? ಅಚ್ಚರಿಯ ಫಲಿತಾಂಶದ ಮೇಲಿನ ವಿಶ್ಲೇಷಣೆಯಲ್ಲಿ ಈ ಮೇಲಿನ ಪ್ರಶ್ನೆಗಳೇ ರಾರಾಜಿಸಿದ್ದವು.

ಲೋಕನೀತಿ–ಸಿಎಸ್‌ಡಿಎಸ್‌ ನಡೆಸಿದ್ದ ಮತದಾನೋತ್ತರ ಸಮೀಕ್ಷೆಯ ದತ್ತಾಂಶಗಳನ್ನು ಇರಿಸಿಕೊಂಡು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯತ್ನಿಸಿದ್ದೇವೆ. ‘ದಿ ಹಿಂದೂ’ವಿನಲ್ಲಿ ಪ್ರಕಟವಾಗಿದ್ದ ಅವರ ಸಮೀಕ್ಷಾ ವರದಿಗಳು ಮತ್ತು ಅವರ ಜಾಲತಾಣದಲ್ಲಿ ಇದ್ದ ಆರ್ಕೈವ್‌ಗಳನ್ನು ಬಳಸಿಕೊಂಡು ಈ ದತ್ತಾಂಶಗಳನ್ನು ವಿಶ್ಲೇಷಿಸಲಾಗಿದೆ.

ಈ ವಿಶ್ಲೇಷಣೆಯು ಹಲವು ಮಿಥ್ಯೆಗಳನ್ನು ಒಡೆದುಹಾಕಿವೆ. ರಾಷ್ಟ್ರಮಟ್ಟದಲ್ಲಿ ಪ್ರಮುಖ ಸಾಮಾಜಿಕ ಸಮುದಾಯಗಳ ಮತ ಪ್ರಾಶಸ್ತ್ಯ ತೀರಾ ಬದಲಾವಣೆಯೇನೂ ಆಗಿಲ್ಲ. ಆದರೆ ದಲಿತರು ಮತ್ತು ಗ್ರಾಮೀಣ ಭಾರತದ ಭೂಮಿ ಸಹಿತ ಕೃಷಿಕ ಸಮುದಾಯಗಳು ಗಣನೀಯ ಮಟ್ಟದಲ್ಲಿ ಬಿಜೆಪಿಯಿಂದ ದೂರ ಸರಿದಿವೆ. ‘ಮೇಲ್ಜಾತಿ’ ಮತಗಳನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದರೂ ರಾಷ್ಟ್ರಮಟ್ಟದಲ್ಲಿ ಸಣ್ಣ ಮಟ್ಟದ ಇಳಿಕೆಗೆ ಬಿಜೆಪಿಗೆ ಸಾಕ್ಷಿಯಾಗಿದೆ. ಆದರೆ ಕುತೂಹಲಕಾರಿಯಾದ ಮತ್ತು ಫಲಿತಾಂಶವನ್ನು ಪ್ರಭಾವಿಸಿದ ಬದಲಾವಣೆ ಉಂಟಾಗಿರುವುದು ರಾಜ್ಯಮಟ್ಟದಲ್ಲಿ.

ADVERTISEMENT

ಬಿಜೆಪಿಯ ಕೈಬಿಡದ ‘ಮೇಲ್ಜಾತಿ’ ಮತಗಳು

ಹಿಂದೂ ‘ಮೇಲ್ಜಾತಿ’ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮತ ಪ್ರಮಾಣ

ವರ್ಷ; ಕಾಂಗ್ರೆಸ್‌;ಬಿಜೆಪಿ

1996;25%;35%

1998;22%;47%

1999;21%;40%

2004;23%;35%

2009;26%;28%

2014;13%;47%

2019;12%;53%

2024;14%;53%

* ರಜಪೂತರು ಬಿಜೆಪಿ ವಿರುದ್ಧ ಸಿಟ್ಟಾಗಿದ್ದಾರೆ, ಕ್ಷತ್ರಿಯರು ಗುಜರಾತ್‌ನಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸಲಿದ್ದಾರೆ ಎಂಬ ಸುದ್ದಿ–ಚರ್ಚೆಗಳಿಗೆ ವ್ಯತಿರಿಕ್ತವಾಗಿ ದೇಶದಾದ್ಯಂತ ‘ಮೇಲ್ಜಾತಿ’ ಸಮುದಾಯಗಳು ಬಿಜೆಪಿಗೇ ನಿಷ್ಠವಾಗಿವೆ. 2024ರ ಚುನಾವಣೆಯಲ್ಲಿ ಹೀಗೆಯೇ ಆಗಿದೆ.

* ಈ ಸಮುದಾಯಗಳ ಮತಗಳ ಸಂಖ್ಯೆಯು, ಕಾಂಗ್ರೆಸ್‌ಗೆ ಮತ್ತು ಅದರ ಮಿತ್ರಪಕ್ಷಗಳಿಗೆ ನಿಷ್ಠವಾಗಿರುವ ಮುಸ್ಲಿಮರ ಮತಗಳ ಸಂಖ್ಯೆಗಿಂತ ದೊಡ್ಡದು.

* ಆದರೆ ಈ ಹಿಂದಿನ ಚುನಾವಣೆಗಳಲ್ಲಿ ಈ ಜಾತಿ ಸಮುದಾಯಗಳ ಮತಗಳು ಬಿಜೆಪಿಯಿಂದ ದೂರ ಸರಿಯುತ್ತವೆ ಎಂಬ ಮಾತಿದ್ದಾಗ, ಅವು ನಿಜಕ್ಕೂ ದೂರ ಸರಿದಿವೆ.

2019ರ ಯುಪಿಎ ಮತ್ತು 2024ರ ‘ಇಂಡಿಯಾ’ ಕೂಟಗಳಿಗೆ


ಭೂಮಿ ಸಹಿತ ಕೃಷಿಕ ಸಮುದಾಯಗಳು ನೀಡಿದ ಮತ

ಸಮುದಾಯ ಮತ್ತು ರಾಜ್ಯ;ಯುಪಿಎ 2019;‘ಇಂಡಿಯಾ’ 2024

ಯಾದವ (ಉತ್ತರ ಪ್ರದೇಶ);62%;82%

ಯಾದವ (ಮಧ್ಯ ಪ್ರದೇಶ);24%;28%

ಯಾದವ (ಬಿಹಾರ);64%;73%

ಒಕ್ಕಲಿಗ (ಕರ್ನಾಟಕ);33%;56%

ಲಿಂಗಾಯತ (ಕರ್ನಾಟಕ);10%;20%

ಮರಾಠ (ಮಹಾರಾಷ್ಟ್ರ);39%;39%

ಕ್ಷತ್ರಿಯ (ಗುಜರಾತ್);36%;39%

ಪಾಟೀದಾರ್ (ಗುಜರಾತ್‌);25%;6%

ಜಾಟ್‌ (ಹರಿಯಾಣ);33%;64%

ಒಬಿಸಿ (ತೆಲಂಗಾಣ);25%;38%

ಒಬಿಸಿ (ರಾಜಸ್ಥಾನ);23%;39%

* ಗ್ರಾಮೀಣ ಭಾರತದಲ್ಲಿ ಪ್ರಬಲವಾಗಿರುವ ಸವರ್ಣೀಯರಲ್ಲದ ಮತ್ತು ಬಹುತೇಕ ಒಬಿಸಿ ಭೂಮಿಸಹಿತ ಕೃಷಿಕ ಸಮುದಾಯಗಳು ಈ ಬಾರಿ ‘ಇಂಡಿಯಾ’ ಮೈತ್ರಿಕೂಟದತ್ತ ಸರಿದಿವೆ ಎಂದು ಫಲಿತಾಂಶವು ಹೇಳುತ್ತದೆ. ಕೃಷಿ ಸಮಸ್ಯೆಗಳು ಮತ್ತು ರೈತ ಹೋರಾಟಗಳ ಕಾರಣದಿಂದ ಈ ಸಮುದಾಯಗಳು ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಂದ ದೂರ ಸರಿದಿವೆ.

* ರಾಜಸ್ಥಾನ, ಹರಿಯಾಣದಲ್ಲಿ ಜಾಟರು, ಉತ್ತರ ಪ್ರದೇಶದಲ್ಲಿ ಯಾದವರು, ಮಹಾರಾಷ್ಟ್ರದಲ್ಲಿ ಮರಾಠರು ಮತ್ತು ಕರ್ನಾಟಕದಲ್ಲಿ ಸ್ವಲ್ಪ ಮಟ್ಟಿಗೆ ಒಕ್ಕಲಿಗ ಮತ್ತು ಲಿಂಗಾಯತರು ಬಿಜೆಪಿಯಿಂದ ದೂರ ಸರಿದ ಪರಿಣಾಮವಾಗಿ ಎನ್‌ಡಿಎ ಹಲವು ಸ್ಥಾನಗಳನ್ನು ಕಳೆದುಕೊಂಡಿದೆ.

* ಆದರೂ ಗುಜರಾತ್‌ನಲ್ಲಿ ಪಾಟೀದಾರರು ಮತ್ತು ಮಧ್ಯಪ್ರದೇಶದಲ್ಲಿ ಯಾದವರ ಮತಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಆದರೆ ದೇಶದಾದ್ಯಂತ ಇದಕ್ಕೆ ವಿರುದ್ಧವಾದ ಪ್ರವೃತ್ತಿ ಇತ್ತು ಎಂಬುದು ಮತದಾನದಲ್ಲಿ ಕಾಣುತ್ತದೆ.

ಬಿಜೆಪಿಯಿಂದ ದೂರ ಸರಿಯುತ್ತಿರುವ ಇಬಿಸಿ

ಅತ್ಯಂತ ಹಿಂದುಳಿದ ವರ್ಗಗಳಲ್ಲಿ ಬಿಜೆಪಿ ಮತ ಪ್ರಮಾಣ ಬದಲಾವಣೆ: 2019ರಲ್ಲಿ ಬಿಜೆಪಿಗೆ ದೊರೆತಿದ್ದ ಮತ ಪ್ರಮಾಣಕ್ಕೆ ಹೋಲಿಸಿದರೆ 2024ರಲ್ಲಿ ಬಿಜೆಪಿಗೆ ದೊರೆತ ಮತ ಪ್ರಮಾಣದಲ್ಲಿ ಆದ ಬದಲಾವಣೆ
(ಶೇಕಡಾವಾರು ಅಂಶಗಳಲ್ಲಿ)

ಉತ್ತರ ಪ್ರದೇಶ;-15

ಮಹಾರಾಷ್ಟ್ರ;-31

ಬಿಹಾರ;-21

ಮಧ್ಯಪ್ರದೇಶ; 2

ಕರ್ನಾಟಕ; 29

ಗುಜರಾತ್;-8

* ಗ್ರಾಮೀಣ ಭಾರತದಲ್ಲಿನ ಭೂರಹಿತ ಕೃಷಿ ಕಾರ್ಮಿಕ ಸಮುದಾಯಗಳು, ಕರಕುಶಲ ಸಮುದಾಯಗಳು ಮತ್ತು ಇತರ ಸಣ್ಣ ಜಾತಿಗಳನ್ನು ಒಳಗೊಂಡ ಅತ್ಯಂತ ಹಿಂದುಳಿದ ವರ್ಗಗಳು ಬಿಜೆಪಿಯ ಮತಬುಟ್ಟಿಗಳು. ರಾಷ್ಟ್ರಮಟ್ಟದಲ್ಲಿ ಗಮನಿಸಿದರೆ ಈ ಸಮುದಾಯಗಳು ಬಿಜೆಪಿಗೇ ಮತ ನೀಡಿವೆ.

* ದೇಶದ ಆಯ್ದ ಕೆಲವು ರಾಜ್ಯಗಳಲ್ಲಿ (ಉತ್ತರ ಪ್ರದೇಶ, ಹರಿಯಾಣ, ಬಿಹಾರ, ಮಹಾರಾಷ್ಟ್ರ) ಅತ್ಯಂತ ಹಿಂದುಳಿದ ವರ್ಗಗಳಲ್ಲಿ ಬಿಜೆಪಿಯು ತನ್ನ ಮತ ಪ್ರಮಾಣವನ್ನು ಕಳೆದುಕೊಂಡಿರುವುದು ಢಾಳಾಗಿ ಕಾಣುತ್ತದೆ. ಇದಲ್ಲದೇ ಉತ್ತರದ ಕೆಲವು ರಾಜ್ಯಗಳಲ್ಲಿ ಈ ಸಮುದಾಯಗಳು ಬಿಜೆಪಿಯಿಂದ ದೂರ ಸರಿದಿವೆ. 2019ರಲ್ಲಿ ಈ ಸಮುದಾಯಗಳು ಬಿಜೆಪಿಗೆ ನೀಡಿದ್ದ ಮತ ಪ್ರಮಾಣವು 2024ರ ಚುನಾವಣೆಯಲ್ಲಿ ಗಣನೀಯ ಮಟ್ಟದಲ್ಲಿ ಕುಸಿತವಾಗಿದೆ.

* ದಕ್ಷಿಣದ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮಾತ್ರ ಈ ಸಮುದಾಯಗಳು ಬಿಜೆಪಿಯತ್ತ ವಾಲಿವೆ. ಕೇರಳದ ಈಳವ ಸಮುದಾಯವು ಗಣನೀಯ ಮಟ್ಟದಲ್ಲಿ ಬಿಜೆಪಿಗೆ ಮತ ನೀಡಿದೆ.

ದಲಿತರ ಮತ ಅತ್ತ–ಇತ್ತ

32 ವರ್ಷಗಳ ಅಂತರದಲ್ಲಿ ದಲಿತ ಸಮುದಾಯಗಳ ಮತ ಪ್ರಾಶಸ್ತ್ಯ ಬದಲಾದ ಬಗೆ

ಲೋಕಸಭಾ ಚುನಾವಣಾ ವರ್ಷ;ಯುಪಿಎ/‘ಇಂಡಿಯಾ’ ಪಡೆದ ದಲಿತ ಸಮುದಾಯಗಳ ಮತ ಪ್ರಮಾಣ;ಎನ್‌ಡಿಎ ಪಡೆದ ದಲಿತ ಸಮುದಾಯಗಳ ಮತ ಪ್ರಮಾಣ;ಬಿಎಸ್‌ಪಿ ಪಡೆದ ದಲಿತ ಸಮುದಾಯಗಳ ಮತ ಪ್ರಮಾಣ

1996;34%;15%;7%;

1998;29%;18%;23%;

1999;35%;25%;18%;

2004;35%;23%;22%;

2009;34%;15%;21%;

2014;20%;30%;14%;

2019;25%;41%;11%;

2024;32%;36%;8%;

* ಉತ್ತರ ಪ್ರದೇಶ ಮತ್ತು ಉತ್ತರದ ಕೆಲವು ರಾಜ್ಯಗಳಲ್ಲಿ ದಲಿತ ಮತದಾರರು ಬಿಎಸ್‌ಪಿಯಿಂದ ದೂರ ಸರಿದಿದ್ದಾರೆ. ಮಹಾರಾಷ್ಟ್ರದಲ್ಲಿ ವಂಚಿತ ಬಹುಜನ ಆಘಾಡಿಯಿಂದ (ವಿಬಿಎ) ಬೌದ್ಧ ಮತದಾರರು ದೂರ ಸರಿದಿದ್ದಾರೆ.

* ಬಿಎಸ್‌ಪಿ ಮತ್ತು ವಿಬಿಎಯ ಕುಸಿತದಿಂದ ಬಿಜೆಪಿಗೆ ಸ್ವಲ್ಪ ಲಾಭವಾಗಿದ್ದರೂ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ದೇಶದಾದ್ಯಂತ ಒಟ್ಟಾರೆ 5 ಶೇಕಡಾವಾರು ಅಂಶಗಳಷ್ಟು ದಲಿತ ಮತಗಳನ್ನು ಕಳೆದುಕೊಂಡಿವೆ. ಉತ್ತರ ಪ್ರದೇಶದಲ್ಲಿ ಜಾಟವೇತರ ಪರಿಶಿಷ್ಟ ಜಾತಿಗಳು, ದುಸಾಧರು ಮತ್ತು ಪಾಸ್ವಾನ್‌ಗಳು, ಬಿಹಾರ ಮತ್ತು ಹರಿಯಾಣದ ದಲಿತ ಸಮುದಾಯಗಳು ಎನ್‌ಡಿಎಯಿಂದ ದೂರ ಸರಿದು, ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತ ನೀಡಿವೆ.

* ಮಧ್ಯ ಪ್ರದೇಶ ಮತ್ತು ಗುಜರಾತ್‌ನಲ್ಲಿ ದಲಿತ ಸಮುದಾಯಗಳು ಬಿಜೆಪಿಯನ್ನೇ ನೆಚ್ಚಿಕೊಂಡಿವೆ. ಎರಡೂ ರಾಜ್ಯಗಳಲ್ಲಿ ಬಿಜೆಪಿಯು ದಲಿತ ಸಮುದಾಯದ ಮತ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ. ತೆಲಂಗಾಣದಲ್ಲಿ ಮಾದಿಗ ಸಮುದಾಯದ ಮತಗಳನ್ನು ಸೆಳೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

* ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳು ದಲಿತರ ಮತಗಳನ್ನು ಕಳೆದುಕೊಂಡಿವೆ. ಈಗ ಆ ಮತಗಳನ್ನು ಮರು ಗಳಿಸಿಕೊಳ್ಳುವಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಯಶಸ್ವಿಯಾಗಿವೆ. ಜತೆಗೆ ದಲಿತ ಮತದಾರರನ್ನು ಸೆಳೆಯುವಲ್ಲಿ ಎರಡೂ ಮೈತ್ರಿಕೂಟಗಳು ಸರಿಸುಮಾರು ಸಮಾನವಾಗಿಯೇ ಇವೆ.

ಎನ್‌ಡಿಎಯತ್ತ ಹಿಂದೂ ಆದಿವಾಸಿ ಸಮುದಾಯಗಳ ಮತ 2024

ವಿವರ;‘ಇಂಡಿಯಾ’ಗೆ ದೊರೆತ ಮತಗಳ ಪ್ರಮಾಣ;ಎನ್‌ಡಿಎಗೆ ದೊರೆತ ಮತಗಳ ಪ್ರಮಾಣ

ದೇಶದಾದ್ಯಂತ;31%;51%

ಮಹಾರಾಷ್ಟ್ರ;55%;35%

ಮಧ್ಯಪ್ರದೇಶ;24%;70%

ಕರ್ನಾಟಕ;44%;56%

ಗುಜರಾತ್;41%;49%

ರಾಜಸ್ಥಾನ;40%;46%

ತೆಲಂಗಾಣ;58%;29%

* ಈ ಬದಲಾವಣೆ ಬಗ್ಗೆ ಕಾಂಗ್ರೆಸ್‌ ಗಂಭೀರವಾಗಿ ಪರಾಮರ್ಶೆ ನಡೆಸಲೇಬೇಕು. ಬಹುತೇಕ ಬೇರೆಲ್ಲಾ ಸಮುದಾಯಗಳಲ್ಲಿ ಬಿಜೆಪಿ ವಿರುದ್ಧವಾಗಿ ಮತನಿರ್ಣಯ ಬದಲಾವಣೆಯಾಗಿದ್ದರೆ, ಆದಿವಾಸಿ ಸಮುದಾಯಗಳು ಬಿಜೆಪಿಗೆ ಇನ್ನಷ್ಟು ಹತ್ತಿರವಾಗಿವೆ.

* 2009ರಲ್ಲಿ ಒಟ್ಟು ಆದಿವಾಸಿ ಸಮುದಾಯಗಳ ಮತಗಳಲ್ಲಿ ಬಿಜೆಪಿಗೆ ಬಿದ್ದಿದ್ದು ಸುಮಾರು ಶೇ 25ರಷ್ಟು ಮತಗಳು ಮಾತ್ರ. 2024ರಲ್ಲಿ ಈ ಪ್ರಮಾಣವು ಶೇ 50ರ ಆಸುಪಾಸಿನಲ್ಲಿದೆ.

* ಆದಿವಾಸಿ ಸಮುದಾಯಗಳ ಮತಗಳು ಬಿಜೆಪಿಯತ್ತ ಹೋದ ಕಾರಣದಿಂದಲೇ ಬಿಜೆಡಿ ಮತ್ತು ಬಿಆರ್‌ಎಸ್‌ ಸೋಲಬೇಕಾಯಿತು. ಕೆಲವು ಕ್ಷೇತ್ರಗಳಲ್ಲಿ ಟಿಎಂಸಿಯ ಗೆಲುವು ದೂರವಾಯಿತು. ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲೂ ಕಾಂಗ್ರೆಸ್‌ ಇದರ ನಷ್ಟವನ್ನು ಅನುಭವಿಸಬೇಕಾಯಿತು.

‘ಇಂಡಿಯಾ’ ಪರವಾಗಿ ಒಗ್ಗೂಡಿದ ಮುಸ್ಲಿಮರ ಮತ 

ಲೋಕಸಭಾ ಚುನಾವಣೆ ನಡೆದ ವರ್ಷ;ಯುಪಿಎ/‘ಇಂಡಿಯಾ’ ಕೂಟಕ್ಕೆ ದೊರೆತ ಮುಸ್ಲಿಮರ ಮತಗಳ ಪ್ರಮಾಣ;ಎನ್‌ಡಿಎಗೆದೊರೆತ ಮುಸ್ಲಿಮರ ಮತಗಳ ಪ್ರಮಾಣ

1996;37%;2%

1998;38%;11%

1999;54%;14%

2004;51%;11%

2009;47%;6%

2014;45%;9%

2019;45%;9%

2024;65%;10%

* ಪ್ರಧಾನಿಯಾದಿಯಾಗಿ ಬಿಜೆಪಿಯ ಎಲ್ಲ ನಾಯಕರು ಮುಸ್ಲಿಮರ ಮೇಲೆ ವಾಗ್ದಾಳಿ ನಡೆಸಿದ್ದು, ಮುಸ್ಲಿಮರ ಮತಗಳು ಬಿಜೆಪಿ–ಎನ್‌ಡಿಎ ವಿರುದ್ಧವಾಗಿ ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದೆ. ಪರಿಣಾಮವಾಗಿ ಹಲವು ಕ್ಷೇತ್ರಗಳಲ್ಲಿ ಬಿಜೆಪಿಯು ಸೋಲಬೇಕಾಯಿತು.

* ರಾಷ್ಟ್ರಮಟ್ಟದಲ್ಲಿ ಮುಸ್ಲಿಂ ಮತಗಳ ಪ್ರಮಾಣ ಕಡಿಮೆ ಇದ್ದರೂ (ರಾಷ್ಟ್ರೀಯ ಸರಾಸರಿ 65%, ಮುಸ್ಲಿಮರ ಒಟ್ಟು ಮತ ಪ್ರಮಾಣ 62%), ಬಿಜೆಪಿ ವಿರುದ್ಧ ಚಲಾವಣೆಯಾದ ಮುಸ್ಲಿಮರ ಮತ ಶೇ 65ರಷ್ಟಾಗಿದೆ. ಇದು ಈವರೆಗಿನ ಗರಿಷ್ಠ ಪ್ರಮಾಣ. ‘ಇಂಡಿಯಾ’ ಮೈತ್ರಿಕೂಟಕ್ಕೆ ಟಿಎಂಸಿಯ ಮುಸ್ಲಿಂ ಮತಗಳನ್ನೂ ಸೇರಿಸಿದರೆ, ಈ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ.

* ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಮತ್ತು ಎಸ್‌ಪಿ ಒಟ್ಟಿಗೇ ಕಣಕ್ಕೆ ಇಳಿದ ಕಾರಣ, ಮುಸ್ಲಿಮರ ಮತ ವಿಭಜನೆಗೆ ತಡೆಬಿದ್ದಿತು. ಪರಿಣಾಮವಾಗಿಯೇ ಈ ಪಕ್ಷದ ಅಭ್ಯರ್ಥಿಗಳ ಪರವಾಗಿ ಮುಸ್ಲಿಮರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿದ್ದವು.

* ಅಸ್ಸಾಂನ ಮುಸ್ಲಿಮರು ಧರ್ಮಾಧಾರಿತ ಪಕ್ಷದಿಂದ (ಎಐಯುಡಿಎಫ್‌) ದೂರ ಸರಿದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಆಲ್‌ ಇಂಡಿಯಾ ಸೆಕ್ಯುಲರ್ ಫ್ರಂಟ್‌ ಮುಸ್ಲಿಮರ ಕೆಲವು ಮತಗಳನ್ನು ಸೆಳೆದುಕೊಂಡರೂ ಟಿಎಂಸಿಗೆ ಅದು ಹೊಡೆತವನ್ನೇನೂ ನೀಡಿಲ್ಲ.

* ಚಲಾವಣೆಯಾದ ಮುಸ್ಲಿಂ ಮತಗಳಲ್ಲಿ ಕಾಂಗ್ರೆಸ್‌ಗೇ ಗರಿಷ್ಠ ಶೇ 38ರಷ್ಟು ಮತಗಳು ಬಿದ್ದಿವೆ. ಆದರೆ, ಕಾಂಗ್ರೆಸ್‌ಗೆ ದೊರೆತ ಒಟ್ಟು ಮತಗಳಲ್ಲಿ ಮುಸ್ಲಿಮರ ಮತಗಳ ಪ್ರಮಾಣ ಶೇ 25ರ ಆಸುಪಾಸಿನಲ್ಲಷ್ಟೇ ಇದೆ.

* ಬಿಜೆಪಿಯೂ ಮುಸ್ಲಿಂ ಮತದಾರರನ್ನು ಹೊಂದಿದ್ದು, ಅದರಲ್ಲಿ ಗಣನೀಯ ಬದಲಾವಣೆ ಏನಾಗಿಲ್ಲ. 2019ಕ್ಕೆ ಹೋಲಿಸಿದರೆ 2024ರಲ್ಲಿ ಬಿಜೆಪಿಗೆ ಬಿದ್ದ ಮುಸ್ಲಿಮರ ಮತ ಪ್ರಮಾಣದಲ್ಲಿ 1 ಶೇಕಡಾವಾರು ಅಂಶದಷ್ಟು ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.