2019ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ನೆಲೆ ಗಟ್ಟಿಗೊಳಿಸಿಕೊಂಡಿದ್ದ ಬಿಜೆಪಿ, ಈ ಬಾರಿಯೂ ಅದನ್ನೇ ಪುನರಾವರ್ತಿಸುವ ಉತ್ಸಾಹದಲ್ಲಿ ಇದೆ. ಟಿಎಂಸಿ ತನ್ನ ಸ್ಥಾನಗಳನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ರಾಜ್ಯದಲ್ಲಿ ಇನ್ನೇನು ನೆಲೆ ಕಳೆದುಕೊಂಡೇಬಿಟ್ಟವು ಎಂಬಂತಿದ್ದ ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ತಾವಿನ್ನೂ ಪ್ರಸ್ತುತ ಎಂಬುದನ್ನು ಸಾಬೀತುಮಾಡುವ ಅವಕಾಶ ಸಿಕ್ಕಿದೆ. ಚುನಾವಣೆ ಎದುರಿಸಲು ಬಿಜೆಪಿ, ಟಿಎಂಸಿ ಮತ್ತು ಕಾಂಗ್ರೆಸ್+ಎಡಪಕ್ಷಗಳು ಪರಸ್ಪರ ಭಿನ್ನವಾದ ಸಂಕಥನಗಳನ್ನು ಆತುಕೊಂಡಿವೆ. ಅವುಗಳ ಆಧಾರದಲ್ಲೇ ರಾಜ್ಯದಲ್ಲಿ ಚುನಾವಣಾ ತಂತ್ರ ರೂಪುಗೊಳ್ಳುತ್ತಿದೆ
ಈ ಬಾರಿಯ ಲೋಕಸಭಾ ಚುನಾವಣೆಯು ರಾಜಕೀಯ ಪಕ್ಷಗಳ ವ್ಯತಿರಿಕ್ತ ನಿಲುವುಗಳಿಗೆ ಸಾಕ್ಷಿಯಾಗಿದೆ. ದೇಶದಾದ್ಯಂತ ‘ಇಂಡಿಯಾ’ ಮೈತ್ರಿಕೂಟದ ಜತೆಗಿದ್ದೇನೆ ಎಂದು ಘೋಷಿಸಿಕೊಂಡಿರುವ ಟಿಎಂಸಿಯು, ಪಶ್ಚಿಮ ಬಂಗಾಳದಲ್ಲಿ ಮಾತ್ರ ಸ್ವತಂತ್ರವಾಗಿ ಎಲ್ಲಾ 42 ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಇನ್ನೊಂದೆಡೆ ದೇಶದಾದ್ಯಂತ ‘ಇಂಡಿಯಾ’ ಮೈತ್ರಿಕೂಟದ ಭಾಗ ಎಂದು ಘೋಷಿಸಿಕೊಂಡಿರುವ ಎಡಪಕ್ಷಗಳು ಕೇರಳದಲ್ಲಿ ಸ್ವತಂತ್ರವಾಗಿ ಕಣಕ್ಕೆ ಇಳಿದಿದ್ದರೆ, ಪಶ್ಚಿಮ ಬಂಗಾಳದಲ್ಲಿ ‘ಇಂಡಿಯಾ’ದ ಮಿತ್ರಪಕ್ಷ ಕಾಂಗ್ರೆಸ್‌ನೊಟ್ಟಿಗೆ ಕಣಕ್ಕೆ ಇಳಿದಿವೆ. ಇಲ್ಲಿ ಬಿಜೆಪಿ ಚುನಾವಣೆಯನ್ನು ಎದುರಿಸಲು ತನ್ನದೇ ಒಂದು ಸಂಕಥನವನ್ನು ಸೃಷ್ಟಿಸಿಕೊಂಡು, ಜನರಲ್ಲಿ ಮತ ಕೇಳುತ್ತಿದೆ. ಅದೇ ರೀತಿ ಟಿಎಂಸಿ ಸಹ ಇನ್ನೊಂದು ಸಂಕಥನವನ್ನು ರೂಪಿಸಿಕೊಂಡು ಚುನಾವಣೆ ಎದುರಿಸುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಮತ್ತು ಎಡಪಕ್ಷಗಳು ಈ ಎರಡೂ ಸಂಕಥನಗಳನ್ನು ಬಳಸಿಕೊಂಡು ಮತದಾರರನ್ನು ಪ್ರಭಾವಿಸಲು ಯತ್ನಿಸುತ್ತಿವೆ.
ಭ್ರಷ್ಟಾಚಾರವನ್ನೇ ಟಿಎಂಸಿ ಉಸಿರಾಡುತ್ತಿದೆ. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಸಂದೇಶ್‌ಖಾಲಿಯಲ್ಲಿ ಹತ್ತಾರು ವರ್ಷಗಳಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ನಡೆಯುತ್ತಿದ್ದರೂ, ಟಿಎಂಸಿ ಸರ್ಕಾರವು ಆರೋಪಿಗಳನ್ನು ರಕ್ಷಿಸಿಕೊಂಡು ಬಂದಿತ್ತು. ಈ ರೀತಿ ಟಿಎಂಸಿ ತನ್ನ ಹಿತಕ್ಕಾಗಿ ರಾಜ್ಯದ ಜನರ ಹಿತವನ್ನು ಬಲಿಕೊಡುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ. ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯದ ನಾಯಕರೆಲ್ಲರೂ ಪಕ್ಷದ ಪ್ರಚಾರ ಸಭೆಗಳಲ್ಲಿ ಈ ಮಾತುಗಳನ್ನೇ ಆಡುತ್ತಿದ್ದಾರೆ.
ಜತೆಗೆ ರಾಜ್ಯದ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರವು ಒದಗಿಸಿದ ಅನುದಾನವನ್ನು ಟಿಎಂಸಿ ಸರ್ಕಾರ ದುರುಪಯೋಗ ಮಾಡಿಕೊಂಡಿದೆ. ಈ ಮೂಲಕ ರಾಜ್ಯದ ಜನರಿಗೆ ಟಿಎಂಸಿ ಸರ್ಕಾರ ಅನ್ಯಾಯ ಎಸಗುತ್ತಿದೆ. ಕೇಂದ್ರದ ಅನುದಾನದ ದುರುಪಯೋಗವನ್ನು ತಡೆಯಲೆಂದೇ ಅನುದಾನವನ್ನು ತಡೆಹಿಡಿಯಲಾಗಿದೆ ಎಂದೂ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಪಕ್ಷವು ರಾಜ್ಯದಲ್ಲಿ ನೀಡುತ್ತಿರುವ ಜಾಹೀರಾತುಗಳಲ್ಲೂ ಈ ವಿಚಾರಗಳನ್ನೇ ಹೇಳುತ್ತಿದೆ. ಟಿಎಂಸಿಯದ್ದು ಒಂದು ಭ್ರಷ್ಟ ಸರ್ಕಾರ ಮತ್ತು ಟಿಎಂಸಿಗೆ ಮತ್ತೆ ಮತಹಾಕಿದರೆ ರಾಜ್ಯದ ಜನರಿಗೆ ಅನ್ಯಾಯವಾಗುತ್ತದೆ ಎಂಬ ಸಂಕಥನವನ್ನು ಬಿಜೆಪಿ ಇಲ್ಲಿ ಸೃಷ್ಟಿಸಿದೆ. ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಭ್ರಷ್ಟಾಚಾರವನ್ನು ನಿಲ್ಲಿಸಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿಗಳು ಮತ ಕೇಳುತ್ತಿದ್ದಾರೆ. ಈವರೆಗೆ ಬಿಜೆಪಿ ನೆಲೆ ಗಟ್ಟಿ ಇರದ ಕ್ಷೇತ್ರಗಳಲ್ಲಿ ಈ ಸಂಕಥನವು ಮತದಾನವನ್ನು ಪ್ರಭಾವಿಸುತ್ತದೆ. ಟಿಎಂಸಿಯ ಮತಗಳನ್ನು ಸೆಳೆಯಲು ನೆರವಾಗುತ್ತದೆ ಎನ್ನಲಾಗುತ್ತಿದೆ.
ಇದೇ ವಿಷಯಗಳನ್ನೇ ಬಳಸಿಕೊಂಡು ಟಿಎಂಸಿ ಸಹ ತನ್ನದೊಂದು ಸಂಕಥನವನ್ನು ಸೃಷ್ಟಿಸಿಕೊಂಡಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಭರಪೂರ ಜಯಗಳಿಸಿತ್ತು. ತಾನು ಹೀನಾಯವಾಗಿ ಸೋತಿದ್ದರಿಂದ ಬಿಜೆಪಿ ಅದರ ಸೇಡನ್ನು ರಾಜ್ಯದ ಜನರ ಮೇಲೆ ತೀರಿಸಿಕೊಳ್ಳುತ್ತಿದೆ ಎಂದು ಟಿಎಂಸಿ ಆರೋಪಿಸುತ್ತಿದೆ. ಇದೇ ಕಾರಣಕ್ಕಾಗಿಯೇ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಈ ಮೂಲಕ ರಾಜ್ಯವನ್ನು ಬಿಜೆಪಿ ಸಂಕಷ್ಟಕ್ಕೆ ದೂಡುತ್ತಿದೆ. ಈ ಬಾರಿಯೂ ಲೋಕಸಭೆಗೆ ರಾಜ್ಯದಿಂದ ಬಿಜೆಪಿಯ ಹೆಚ್ಚಿನ ಸಂಸದರು ಆಯ್ಕೆಯಾದರೆ, ರಾಜ್ಯದ ಮೇಲೆ ಮತ್ತಷ್ಟು ದೌರ್ಜನ್ಯ ಎಸಗುತ್ತಾರೆ ಎಂದು ಟಿಎಂಸಿ ನಾಯಕರು ಆರೋಪಿಸುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಎಡಪಕ್ಷಗಳು ಈ ಮೇಲಿನ ಸಂಕಥನಗಳನ್ನು ಬಳಸಿಕೊಂಡೇ ಮತ ಕೇಳುತ್ತಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು, ವಿಧಾನಸಭಾ ಚುನಾವಣೆಯಲ್ಲಿನ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುತ್ತಿದೆ. 2021ರ ನಂತರ ಪಶ್ಚಿಮ ಬಂಗಾಳಕ್ಕೆ ಹಲವು ಯೋಜನೆಗಳ ಅನುದಾನವನ್ನು ಕೇಂದ್ರದ ಬಿಜೆಪಿ ರದ್ದುಪಡಿಸಿದೆ. ನರೇಗಾ, ಬೇಟಿ ಬಚಾವೊ–ಬೇಟಿ ಪಢಾವೊ, ಜಲಜೀವನ ಅಭಿಯಾನ, ಪಡಿತರ ಯೋಜನೆಯ ಅನುದಾನ ಸೇರಿ ಒಟ್ಟು ₹1.50 ಲಕ್ಷ ಕೋಟಿಯಷ್ಟು ಅನುದಾನವನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ. ಹೀಗೆ ಕೇಂದ್ರ ಸರ್ಕಾರವು ಜನರಿಗೆ ಅನ್ಯಾಯ ಮಾಡುತ್ತಿದ್ದರೆ, ಈ ಬಗ್ಗೆ ಟಿಎಂಸಿಯ 22 ಸಂಸದರು ಲೋಕಸಭೆಯಲ್ಲಿ ಚಕಾರವೇ ಎತ್ತಿಲ್ಲ. ಎರಡೂ ಪಕ್ಷಗಳು ಚುನಾವಣೆಗೆ ಬಳಸಿಕೊಳ್ಳುವ ಉದ್ದೇಶದಿಂದ ಅನುದಾನದ ಸಮಸ್ಯೆಯನ್ನು ಜೀವಂತವಾಗಿ ಇರಿಸಿವೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ನಿವಾರಿಸಲು ಎರಡೂ ಪಕ್ಷಗಳನ್ನು ಅಧಿಕಾರದಿಂದ ದೂರವಿಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಈಗ ಸ್ಪರ್ಧೆ ತ್ರಿಕೋನ
ಲೋಕಸಭಾ ಚುನಾವಣೆಯು ಘೋಷಣೆಯಾದ ಹೊತ್ತಿಗೆ ಪಶ್ಚಿಮ ಬಂಗಾಳದಲ್ಲಿ ನೇರಾನೇರ ಸ್ಪರ್ಧೆ ಇದ್ದದ್ದು ಬಿಜೆಪಿ ಮತ್ತು ಟಿಎಂಸಿ ಮಧ್ಯೆ ಮಾತ್ರ. ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಬಿಜೆಪಿಯಾಗಲೀ, ಟಿಎಂಸಿಯಾಗಲೀ ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ. ಬಿಜೆಪಿ ತನ್ನ ಪ್ರಚಾರದಲ್ಲಿ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದರೆ, ಟಿಎಂಸಿ ತನ್ನ ಪ್ರಚಾರ ಕಾರ್ಯಕ್ರಮಗಳಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ‘ಇಂಡಿಯಾ’ ಮೈತ್ರಿಕೂಟದ ಅಡಿಯಲ್ಲಿ ಒಟ್ಟಿಗೇ ಬಂದಿರುವ ಕಾಂಗ್ರೆಸ್ ಮತ್ತು ಎಡಪಕ್ಷಗಳು ಹಲವೆಡೆ ಪ್ರಬಲ ಸ್ಪರ್ಧೆ ಒಡ್ಡುವ ಮಟ್ಟಕ್ಕೆ ಬಂದಿವೆ. ಹೀಗಾಗಿ ರಾಜ್ಯದ 30ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇರಲಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ 12 ಮತ್ತು ಎಡಪಕ್ಷಗಳು 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಈ ಹಿಂದಿನ ಚುನಾವಣೆಗಳಲ್ಲಿ ಇವುಗಳ ಮತಪ್ರಮಾಣ ಕಡಿಮೆಯಾಗುತ್ತಲೇ ಬಂದಿತ್ತು. ಹೀಗಾಗಿ 2024ರ ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ಮತ್ತು ಎಡಪಕ್ಷಗಳು ಅಪ್ರಸ್ತುತ ಆಗಿಬಿಡುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ ನೀತಿಗಳು ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಟಿಎಂಸಿ ಸರ್ಕಾರದ ನಡೆಗಳು ಕಾಂಗ್ರೆಸ್ ಮತ್ತು ಎಡಪಕ್ಷಗಳ ಪರವಾಗಿ ಕೆಲಸ ಮಾಡಿವೆ. ಹೀಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಗಂಭೀರವಾಗಿ ಪರಿಗಣಿಸುವ ಸ್ಥಿತಿ ಬಂದೊದಗಿದೆ. ಇದನ್ನು ಈ ಎರಡೂ ಪಕ್ಷಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೇಂದ್ರದ ಬಿಜೆಪಿ ವಿರುದ್ಧ ಮತ್ತು ರಾಜ್ಯದ ಟಿಎಂಸಿ ವಿರುದ್ಧ ಪಶ್ಚಿಮ ಬಂಗಾಳದ ಹಲವು ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ರೂಪುಗೊಳ್ಳುತ್ತಿದೆ.ಇದರಿಂದಾಗಿ ಹಲವು ಕೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ಅನುಕೂಲವಾಗಲಿದೆ. ಅವು ಗೆದ್ದೇ ಬಿಡುತ್ತವೆ ಎನ್ನಲಾಗದು. ಆದರೆ ಅವುಗಳ ಮತಪ್ರಮಾಣ ಸುಧಾರಿಸಲಿದೆ. ಪರಿಣಾಮವಾಗಿ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಾಗಬಹುದು, ಇನ್ನು ಕೆಲವು ಕ್ಷೇತ್ರಗಳಲ್ಲಿ ಟಿಎಂಸಿಗೆ ಸೋಲಾಗಬಹುದು. ಹೀಗೆ ಈ ಮೈತ್ರಿಯು ಒಟ್ಟಾರೆ ಫಲಿತಾಂಶಕ್ಕೆ ದೊಡ್ಡ ತಿರುವು ನೀಡಲಿದೆ ಎಂದು ಅಂದಾಜಿಸಲಾಗಿದೆ.
ಎರಡನೇ ಹಂತದ ಮತದಾನದ ನಂತರ ಟಿಎಂಸಿಯು ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಟೀಕಿಸುತ್ತಿದೆ. ಈ ಪಕ್ಷಗಳ ಸ್ಪರ್ಧೆಯಿಂದ ಬಿಜೆಪಿಗೆ ಅನುಕೂಲ ಎಂದು ಟಿಎಂಸಿ ನಾಯಕರು ಟೀಕಿಸುತ್ತಿದ್ದಾರೆ. ಬಿಜೆಪಿ ನಾಯಕರು ಸಹ ಇಂಥದ್ದೇ ಮಾತುಗಳನ್ನಾಡುತ್ತಿದ್ದಾರೆ. ಒಟ್ಟಾರೆ ಇದು ತ್ರಿಕೋನ ಸ್ಪರ್ಧೆ ಪ್ರಬಲವಾಗುತ್ತಿರುವುದನ್ನು ಸೂಚಿಸುತ್ತಿದೆ ಎಂಬುದು ತಜ್ಞರ ಅಭಿಪ್ರಾಯ.
ಪ್ರತಿಷ್ಠೆಯ ಕಣ ‘ಕೃಷ್ಣನಗರ’
ಕೃಷ್ಣನಗರ ಲೋಕಸಭಾ ಕ್ಷೇತ್ರವು ಬೇರೆಲ್ಲಾ ಕ್ಷೇತ್ರಗಳಿಗಿಂತ ತುಸು ವಿಭಿನ್ನ. ಇದು ಟಿಎಂಸಿ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣ. ಪ್ರಶ್ನೆಗಾಗಿ ಹಣ ಪ್ರಕರಣದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸಂಸತ್ತಿನ ನೈತಿಕ ಸಮಿತಿಯ ಶಿಫಾರಸಿನಂತೆ ಸಂಸತ್ತಿನಿಂದ ಅಮಾನತು ಮಾಡಲಾಗಿತ್ತು. ಅದನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಟಿಎಂಸಿ ಮಹುವಾ ಅವರನ್ನು ಮತ್ತೆ ಕಣಕ್ಕೆ ಇಳಿಸಿದೆ.
ವಿದೇಶದಲ್ಲಿ ಉನ್ನತ ಉದ್ಯೋಗದಲ್ಲಿದ್ದ ಮಹುವಾ, ರಾಜಕಾರಣದಲ್ಲಿ ಆಸಕ್ತಿಯ ಕಾರಣಕ್ಕಾಗಿ ಭಾರತಕ್ಕೆ ಮರಳುತ್ತಾರೆ. ವಿದೇಶದಲ್ಲಿದ್ದ ಅವರ ಜೀನಶೈಲಿಯ ಕಾರಣಕ್ಕಾಗಿ ಬಿಜೆಪಿಯು ಇವರನ್ನು ‘ಎಲೀಟ್ ರಾಜಕಾರಣಿ’ ಅಂತಲೂ ಕರೆಯುತ್ತದೆ. ಕೃಷ್ಣನಗರ ರಾಜಸಂಸ್ಥಾನದವರಾದ ಅಮೃತಾ ರಾಯ್ ಅವರನ್ನು ಮಹುವಾ ಎದುರು ಬಿಜೆಪಿ ಕಣಕ್ಕಿಳಿಸಿದೆ. ‘ನಮ್ಮ ವಂಶಸ್ಥರು ಸನಾತನ ಧರ್ಮದ ರಕ್ಷಣೆಗೆ ನಿಂತವರು’ ಎಂದು ಅವರು ಪ್ರಚಾರದುದ್ದಕ್ಕೂ ಹೇಳುತ್ತಿದ್ದಾರೆ. 1757ರ ಪ್ಲಾಸಿ ಕದನದಲ್ಲಿ ಅಮೃತಾ ರಾಯ್ ಮನೆತನದವರು ಬ್ರಿಟಿಷರ ಪರವಾಗಿ ನಿಂತಿದ್ದರು.
ಪ್ರಭಾವ ಬೀರುವುದೇ ಸಂದೇಶ್‌ಖಾಲಿ ಪ್ರಕರಣ...
ಸಂದೇಶ್‌ಖಾಲಿಯ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣವು ದೇಶದ ಮಟ್ಟದಲ್ಲಿ ದೊಡ್ಡ ಸುದ್ದಿಯನ್ನೇ ಮಾಡಿತ್ತು. ಅಲ್ಲಿನ ಮಹಿಳೆಯರು ಬಿಚ್ಚಿಟ್ಟ ದೌರ್ಜನ್ಯದ ಕಥನಗಳು ದೇಶದ ಜನರನ್ನು ಆಘಾತಗೊಳಿಸಿತ್ತು. ಅಲ್ಲಿನ ಟಿಎಂಸಿ ನಾಯಕ ಶೇಖ್ ಶಹಜಾನ್ ವಿರುದ್ಧ ಮಹಿಳೆಯರು ಗಂಭೀರ ಆರೋಪಗಳನ್ನು ಮಾಡಿದ್ದರು. ಈ ವಿದ್ಯಮಾನವು ರಾಜಕೀಯವಾಗಿಯೂ ಹಲವು ಮಜಲುಗಳನ್ನು ಪಡೆದುಕೊಂಡು, ಟಿಎಂಸಿ–ಬಿಜೆಪಿ ನಡುವೆ ವಾಕ್ಸಮರಕ್ಕೆ, ರಾಜಕೀಯ ದಾಳಗಳ ಪ್ರಯೋಗಕ್ಕೆ ಬಳಕೆಯಾಗುತ್ತಿದೆ.
ಸಂದೇಶ್‌ಖಾಲಿ ವಿಧಾನಸಭಾ ಕ್ಷೇತ್ರವನ್ನೂ ಒಳಗೊಂಡ ಬಶೀರ್‌ಹಾಟ್ ಲೋಕಸಭಾ ಕ್ಷೇತ್ರದಲ್ಲಿ ರೇಖಾ ಪಾತ್ರ ಅವರಿಗೆ ಬಿಜೆಪಿಯು ಟಿಕೆಟ್ ನೀಡಿದೆ. ರೇಖಾ ಅವರು ಸಂದೇಶ್‌ಖಾಲಿಯ ದೌರ್ಜನ್ಯದ ಸಂತ್ರಸ್ತೆ ಎಂದು ಬಿಜೆಪಿ ಹೇಳುತ್ತಿದೆ. 2009ರ ಚುನಾವಣೆಯಲ್ಲಿ ಗೆದ್ದಿದ್ದ ಹಾಜಿ ನೂರುಲ್ ಇಸ್ಲಾಂ ಅವರಿಗೆ ಟಿಎಂಸಿ ಈ ಬಾರಿ ಟಿಕೆಟ್ ನೀಡಿದೆ. ಇವರು ಈ ಭಾಗದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಜನರ ನಡುವೆ ಹೆಸರು ಗಳಿಸಿರುವ ಸಿಪಿಎಂನ ನಿರಪದ ಸರ್ದಾರ್ ಅವರು ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ.
ಶೇಖ್ ಶಹಜಾನ್‌ನನ್ನು ಪಕ್ಷದಿಂದ ಟಿಎಂಸಿ ಉಚ್ಚಾಟಿಸಿದೆ. ಆದರೂ ಸಂದೇಶ್‌ಖಾಲಿಯ ಮಹಿಳೆಯರ ಆರೋಪವನ್ನು ಟಿಎಂಸಿ ಒಪ್ಪಿಕೊಂಡಿಲ್ಲ. ಇವೆಲ್ಲವೂ ಬಿಜೆಪಿ ಪಿತೂರಿ ಅಂತಲೇ ಹೇಳುತ್ತಿದೆ. ‘ಬಿಜೆಪಿಯ ಸುವೇಂದು ಅಧಿಕಾರಿಯೇ ಈ ಎಲ್ಲದರ ಹಿಂದೆ ಇದ್ದಾರೆ. ಇಲ್ಲಿನ ಟಿಎಂಸಿ ನಾಯಕರ ವಿರುದ್ಧ ಅತ್ಯಾಚಾರದ ಆರೋಪಗಳನ್ನು ಮಾಡಲು ನಾಲ್ಕಾರು ಮಹಿಳೆಯರನ್ನು ಆಯ್ಕೆ ಮಾಡು ಎಂದು ನನಗೆ ಹೇಳಿದ್ದರು’ ಎಂದು ಬಿಜೆಪಿಯ ಮಂಡಲ ಅಧ್ಯಕ್ಷರೊಬ್ಬರು ಹೇಳಿರುವ ವಿಡಿಯೊ ಹರಿದಾಡುತ್ತಿದೆ. ಟಿಎಂಸಿ ಈ ವಿಡಿಯೊವನ್ನು ಇಟ್ಟುಕೊಂಡು, ಬಿಜೆಪಿಯೇ ಈ ಪ್ರಕರಣದ ಹಿಂದಿದೆ ಎನ್ನುತ್ತಿದೆ. ಇದು ಕೃತಕ ಬುದ್ಧಿಮತ್ತೆ ಬಳಸಿಕೊಂಡು ಸೃಷ್ಟಿಸಿದ ವಿಡಿಯೊ ಎಂದು ಬಿಜೆಪಿ ಹೇಳುತ್ತಿದೆ.
ದೌರ್ಜನ್ಯದ ಪ್ರಕರಣವು ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಸಂದೇಶ್‌ಖಾಲಿಗೆ ಭೇಟಿ ನೀಡಿ, ಇಲ್ಲಿನ ಮಹಿಳೆಯರೊಂದಿಗೆ ಮಾತನಾಡಿದ್ದರು. ರೇಖಾ ಅವರಿಗೆ ಟಿಕೆಟ್ ನೀಡಿದ ಬಳಿಕವೂ, ಪ್ರಧಾನಿ ಮೋದಿ ಅವರು ರೇಖಾ ಅವರಿಗೆ ಕರೆ ಮಾಡಿದ್ದರು. ಈಗ ಈ ಕ್ಷೇತ್ರ ಕೂಡ ಬಿಜೆಪಿ–ಟಿಎಂಸಿಗೆ ಪ್ರತಿಷ್ಠೆಯ ಕಣವಾಗಿದೆ.
ನಾನು ಇಲ್ಲಿ ಗೆದ್ದೇ ಗೆಲ್ಲುತ್ತೇನೆ. ಎಷ್ಟು ಅಂತರದಲ್ಲಿ ಗೆಲ್ಲುತ್ತೇನೆ ಎನ್ನುವುದೇ ವಿಷಯ. ಇ.ಡಿ ಹಾಗೂ ಸಿಬಿಐ ಅನ್ನು ಬಳಸಿಕೊಂಡು ನನ್ನನ್ನು ಹಿಂಸಿಸಲಾಯಿತು, ನನ್ನನ್ನು ಅಮಾನತು ಮಾಡಲಾಯಿತು. ಇದಕ್ಕೆಲ್ಲಾ ನನ್ನ ಗೆಲುವೇ ತಕ್ಕ ಉತ್ತರ ನೀಡಲಿದೆ.-ಮಹುವಾ ಮಾಯಿತ್ರಾ, ಟಿಎಂಸಿ ಅಭ್ಯರ್ಥಿ
ಮಹಾರಾಜ ಕೃಷ್ಣಚಂದ್ರ ರಾಯ್ ಅವರು ಬ್ರಿಟಿಷರ ಪರ ಇದ್ದರು. ಯಾಕಾಗಿ ಅವರು ಹಾಗೆ ಮಾಡಿದರು? ಯಾಕೆಂದರೆ, ಸಿರಾಜ್ ಉದ್ ದೌಲಾ ನಡೆಸುತ್ತಿದ್ದ ದೌರ್ಜನ್ಯ ಅಷ್ಟರ ಮಟ್ಟಿಗೆ ಇತ್ತು. ಮಹಾರಾಜರು ಆ ರೀತಿ ಮಾಡಿರಲಿಲ್ಲ ಎಂದಿದ್ದರೆ, ಬಂಗಾಳದಲ್ಲಿ ಇಂದು ಹಿಂದೂ ಧರ್ಮ ಮತ್ತು ಬಂಗಾಳಿ ಭಾಷೆ ಇರುತ್ತಿರಲಿಲ್ಲ.-ಅಮೃತಾ ರಾಯ್, ಬಿಜೆಪಿ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.