ಲೋಕಸಭೆಯಲ್ಲಿ ಈ ಬಾರಿ ನೂತನ ಸಂಸದರ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆಯು ಹಲವು ಅಸಾಧಾರಣ ಸಂಗತಿಗಳಿಗೆ ಸಾಕ್ಷಿಯಾಯಿತು. ‘ಇಂಡಿಯಾ’ ಮೈತ್ರಿಕೂಟದ ಸಂಸದರು ಪ್ರಮಾಣ ವಚನ ಸ್ವೀಕಾರದ ಸಂದರ್ಭದಲ್ಲಿ ಕೆಲವು ಘೋಷಣೆಗಳನ್ನು ಕೂಗಿದ್ದಾರೆ. ಇದಕ್ಕೆ ಅವಕಾಶ ಇಲ್ಲದಿದ್ದರೂ ಸಂಸದರು ಈ ರೀತಿ ಹಲವು ವಿಷಯಗಳನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಈ ಪಕ್ಷಗಳು ರಾಜ್ಯಮಟ್ಟದ ವಿಷಯಗಳನ್ನು, ರಾಷ್ಟ್ರೀಯ ಮಟ್ಟದ ಕೆಲವು ಸಮಸ್ಯೆಗಳನ್ನು ಈ ಬಾರಿಯ ಲೋಕಸಭಾ ಚುನಾವಣೆಯ ವಿಷಯಗಳನ್ನಾಗಿಸಿದ್ದವು. ಅವುಗಳ ಆಧಾರದಲ್ಲೇ ಮತ ಕೇಳಿದ್ದವು. ಈಗ ಪ್ರಮಾಣ ವಚನ ಸ್ವೀಕಾರದ ಸಂದರ್ಭದಲ್ಲಿಯೂ ರಾಜ್ಯಮಟ್ಟದ, ರಾಷ್ಟ್ರಮಟ್ಟದ ಸಮಸ್ಯೆಗಳನ್ನು ಪ್ರಸ್ತಾಪಿಸಿ ಸದನಕ್ಕೆ ಧುಮುಕಿದ್ದಾರೆ.
––––
ಲೋಕಸಭೆ ಇರಲಿ, ರಾಜ್ಯಸಭೆ ಇರಲಿ ಅಥವಾ ರಾಜ್ಯ ವಿಧಾನಸಭೆ ಇರಲಿ ಚುನಾಯಿತ ಜನಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಸಿದ್ಧ ಮಾದರಿಯ ಪ್ರಮಾಣ ವಚನವನ್ನು ಸ್ವೀಕರಿಸುವುದು ವಾಡಿಕೆ. ಪ್ರಮಾಣ ವಚನದ ಸಂದರ್ಭದಲ್ಲಿ ಇತರ ಯಾವುದೇ ಮಾತು, ಘೋಷಣೆ ಮಾಡುವುದಿಲ್ಲ. ಮಾಡಿದರೂ ಅದನ್ನು ಕಡತದಿಂದ ತೆಗೆದು ಹಾಕಲಾಗುತ್ತದೆ. ಆದರೆ ಈ ಬಾರಿ ‘ಇಂಡಿಯಾ’ ಮೈತ್ರಿಕೂಟದ ಸಂಸದರಲ್ಲಿ ಹಲವು ಮಂದಿ ಪ್ರಮಾಣ ವಚನ ಸ್ವೀಕಾರದ ಸಂದರ್ಭದಲ್ಲಿ ಘೋಷಣೆ ಕೂಗಿದರು. ‘ಇಂಡಿಯಾ’ ಮೈತ್ರಿಕೂಟದ ಸಂಸದರು ತಾವು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಸಂವಿಧಾನದ ಪ್ರತಿ, ಸಂವಿಧಾನದ ಕಿರು ಹೊತ್ತಗೆ ಕೈಯಲ್ಲಿ ಹಿಡಿದಿದ್ದರು, ಮತ್ತು ‘ಸಂವಿಧಾನಕ್ಕೆ ಜಯವಾಗಲಿ’ ಎಂದು ಘೋಷಣೆ ಕೂಗಿದರು.
ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಸಂಸದರು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಘೋಷಣೆ ಕೂಗಿದ್ದಕ್ಕೆ ಆಡಳಿತಾರೂಢ ಎನ್‌ಡಿಎಯ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ನಿಷಿದ್ಧ, ಇಂತಹ ಘೋಷಣೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ಸ್ಪೀಕರ್ ಸ್ಥಾನದಲ್ಲಿ ಇರುವವರೂ, ‘ನಿಮ್ಮ ಕೈಯಲ್ಲಿರುವ ಪ್ರತಿಯಲ್ಲಿ ಇರುವಷ್ಟನ್ನೇ ಓದಿ’ ಎಂದು ವಿರೋಧ ಪಕ್ಷಗಳ ಸಂಸದರಿಗೆ ಸೂಚಿಸಿದರು. ಆದರೆ ಅದನ್ನು ಧಿಕ್ಕರಿಸಿದ ವಿರೋಧ ಪಕ್ಷಗಳ ಸಂಸದರು ಘೋಷಣೆಗಳನ್ನು ಕೂಗಿಯೇ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆಯನ್ನು ಪೂರೈಸಿದರು. ಇದಕ್ಕೆ ಬಿಜೆಪಿ ಮತ್ತು ಎನ್‌ಡಿಎಯ ಮಿತ್ರ ಪಕ್ಷಗಳ ಸಂಸದರು ಆಕ್ಷೇಪ ವ್ಯಕ್ತಪಡಿಸಿದಾಗ ಸ್ಪೀಕರ್ ಅವರು, ಇದನ್ನು ಕಡತಕ್ಕೆ ಸೇರಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಈ ಎಲ್ಲಾ ಘೋಷಣೆಗಳೂ ನೇರ ಪ್ರಸಾರದಲ್ಲಿ ಪ್ರಸಾರವಾದವು. ಸುದ್ದಿಸಂಸ್ಥೆಗಳೂ ಇವನ್ನು ಪ್ರಕಟಿಸಿದವು.
2014 ಮತ್ತು 2019ರಲ್ಲಿ ರಾಷ್ಟ್ರಮಟ್ಟದ ವಿಷಯಗಳೇ ಚುನಾವಣೆಯ ಚಾಲಕ ಶಕ್ತಿಗಳಾಗಿದ್ದವು. ಆದರೆ ಈ ಬಾರಿ ಹಾಗಾಗಲಿಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ಸಂವಿಧಾನವನ್ನು ಉಳಿಸಿ, ದಲಿತರು, ಆದಿವಾಸಿಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯ ವಿಷಯಗಳನ್ನು ಮುಂದು ಮಾಡಿದ್ದವು. ಮಣಿಪುರದಲ್ಲಿನ ಜನಾಂಗೀಯ ಸಂಘರ್ಷ, ಈಶಾನ್ಯದ ಇತರ ರಾಜ್ಯಗಳಲ್ಲಿನ ಸ್ಥಳೀಯ ಸಮಸ್ಯೆಗಳು, ಪಶ್ಚಿಮ ಬಂಗಾಳದ ಗುಡ್ಡಗಾಡು ಜನರ ಸಮಸ್ಯೆಗಳು, ದಕ್ಷಿಣದಲ್ಲಿ ನೀಟ್ ವಿರೋಧಿ ಹೋರಾಟ, ಉತ್ತರ ಮತ್ತು ವಾಯವ್ಯ ಭಾರತದಲ್ಲಿ ರೈತರ ಸಮಸ್ಯೆಗಳನ್ನು ಮುಂದಿರಿಸಿಕೊಂಡು ‘ಇಂಡಿಯಾ’ ಮೈತ್ರಿಕೂಟವು ಚುನಾವಣೆಯನ್ನು ಎದುರಿಸಿತ್ತು.
ಆಡಳಿತಾರೂಢ ಎನ್‌ಡಿಎಯನ್ನು ಅಧಿಕಾರದಿಂದ ಕೆಳಗೆ ಇಳಿಸುವಲ್ಲಿ ‘ಇಂಡಿಯಾ’ ಮೈತ್ರಿಕೂಟ ವಿಫಲವಾಯಿತು. ಆದರೆ ಎನ್‌ಡಿಎಯ ಬಲವನ್ನು ಗಣನೀಯ ಮಟ್ಟಕ್ಕೆ ಕುಸಿಯುವಂತೆ ಮಾಡಿದ್ದಲ್ಲದೇ, ತನ್ನ ಸ್ಥಾನವನ್ನೂ ಉತ್ತಮಪಡಿಸಿಕೊಂಡಿತು. ಆಗ ಚುನಾವಣೆಯಲ್ಲಿ ಪ್ರಸ್ತಾಪಿಸಿದ್ದ ವಿಷಯಗಳನ್ನೇ ಈಗ ಸದನದ ಒಳಗೆಯೂ ಪ್ರಸ್ತಾಪಿಸಿದ್ದಾರೆ. ಸ್ಪೀಕರ್ ಅವರಿಗೆ ಅಭಿನಂದನೆ ಸಲ್ಲಿಸುವ ಭಾಷಣದ ಸಂದರ್ಭದಲ್ಲೂ ಅದೇ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಒಂದು ವರ್ಷಕ್ಕೂ ಅಧಿಕ ಸಮಯದಿಂದ ಮಣಿಪುರವು ಹೊತ್ತಿ ಉರಿಯುತ್ತಿದೆ. ಬಹುಸಂಖ್ಯಾತ ಮೈತೇಯಿ ಸಮುದಾಯ ಹಾಗೂ ಕುಕಿ ಬುಡಕಟ್ಟು ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷವು ನಿಲ್ಲುವ ಸೂಚನೆಯನ್ನೂ ನೀಡುತ್ತಿಲ್ಲ. ಲೋಕಸಭಾ ಚುನಾವಣೆಯುದ್ದಕ್ಕೂ ಮಣಿಪುರದ ಸಂಘರ್ಷದ ವಿಚಾರಗಳು ಮುನ್ನೆಲೆಯಲ್ಲಿಯೇ ಇದ್ದವು. ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವು ಈ ಸಂಘರ್ಷದ ಕುರಿತು ನಡೆದುಕೊಂಡ ರೀತಿಯ ಕುರಿತು ಗಟ್ಟಿ ದನಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದವು ಮತ್ತು ಈಗಲೂ ವಿರೋಧಿಸುತ್ತಿವೆ. ಈ ಹಂತದಲ್ಲಿ ದೇಶದಲ್ಲಿ ಲೋಕಸಭಾ ಚುನಾವಣೆಯೂ ನಡೆಯಿತು. ಇನ್ನರ್ ಮಣಿಪುರ ಲೋಕಸಭಾ ಹಾಗೂ ಔಟರ್ ಮಣಿಪುರ ಲೋಕಸಭಾ ಕ್ಷೇತ್ರಗಳೆರಡರಲ್ಲಿಯೂ ಕಾಂಗ್ರೆಸ್ ಜಯಸಾಧಿಸಿದೆ.
ಮಣಿಪುರದ ಇಬ್ಬರೂ ಸಂಸದರು ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿಯೂ ‘ಜಸ್ಟೀಸ್ ಫಾರ್ ಮಣಿಪುರ’ ಘೋಷಣೆಯು ಸಂಸತ್ತಿನಲ್ಲಿ ಮೊಳಗಿದೆ. ಇನ್ನರ್ ಮಣಿಪುರ ಕ್ಷೇತ್ರದ ಸಂಸದ ಅಂಗೋಮ್ಚ ಬಿಮೋಲ್ ಅಕೋಯುಜಮ್ ಅವರ ಹೆಸರು ಕೂಗುತ್ತಿದ್ದಂತೆಯೇ ‘ಇಂಡಿಯಾ’ ಮೈತ್ರಿಕೂಟದ ಸಂಸದರು ‘ಮಣಿಪುರ, ಮಣಿಪುರ’ ಹಾಗೂ ‘ಜಸ್ಟೀಸ್ ಫಾರ್ ಮಣಿಪುರ’ ಎಂದು ಕೂಗಿದ್ದಾರೆ. ಮೈತೇಯಿ ಭಾಷೆಯಲ್ಲಿ ಪ್ರಮಾಣ ಸ್ವೀಕರಿಸಿದರು. ಈ ಬಳಿಕ, ‘ಜೈ ಹಿಂದ್, ಮಾತೃಭೂಮಿಗೆ ಜಯವಾಗಲಿ, ಮಣಿಪುರಕ್ಕೆ ಜಯವಾಗಲಿ’ ಎಂದು ಘೋಷಣೆ ಕೂಗಿದರು.
ಈ ಬಳಿಕ, ಔಟರ್ ಮಣಿಪುರ ಕ್ಷೇತ್ರದ ಸಂಸದ ಆಲ್ಫ್ರೆಡ್ ಕಂಗಮ್ ಆರ್ಥರ್ ಅವರು ಇಂಗ್ಲಿಷ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇವರು ಪ್ರಮಾಣವಚನ ಸ್ವೀಕರಿಸುವ ವೇಳೆಯೂ ‘ಇಂಡಿಯಾ’ ಸಂಸದರು ಘೋಷಣೆಗಳನ್ನು ಕೂಗಿದರು. ಸಾಂಪ್ರದಾಯಿಕ ಶಾಲನ್ನೂ ಇವರು ಹೊದ್ದಿದ್ದರು. ಕೊನೆಯಲ್ಲಿ, ‘ಮಣಿಪುರಕ್ಕೆ ನ್ಯಾಯ ದೊರಕಿಸಿಕೊಡಿ, ದೇಶವನ್ನು ರಕ್ಷಿಸಿ’ ಎಂದು ಹಿಂದಿಯಲ್ಲಿ ಆರ್ಥರ್ ಘೋಷಣೆ ಕೂಗಿದರು.
ಮೇಘಾಲಯದ ತುರಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಎಸ್. ಸಂಗ್ಮಾ ಅವರು ಸಂವಿಧಾನದ ಕಿರುಪ್ರತಿಯನ್ನು ಹಿಡಿದು ಪ್ರಮಾನವಚನ ಸ್ವೀಕರಿಸಿದರು. ಈ ಬಳಿಕ ಕೊನೆಯಲ್ಲಿ ಘೋಷಣೆ ಕೂಗಿದ ಸಂಗ್ಮಾ ಅವರು, ‘ಸಂವಿಧಾನವನ್ನು ರಕ್ಷಿಸಿ’ ಎಂದರು.
‘ಜಸ್ಟೀಸ್ ಫಾರ್ ಮಣಿಪುರ’
ವರ್ಷದ ಹಿಂದೆ ಮಣಿಪುರದಲ್ಲಿ ನಡೆದಿದ್ದ ಜನಾಂಗೀಯ ಸಂಘರ್ಷ ಈವರೆಗೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಬಹುಸಂಖ್ಯಾತ ಮೈತೇಯಿ ಸಮುದಾಯ ಹಾಗೂ ಕುಕಿ ಬುಡಕಟ್ಟು ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷವು ನಿಲ್ಲುವ ಸೂಚನೆಯನ್ನೂ ನೀಡುತ್ತಿಲ್ಲ. ಲೋಕಸಭಾ ಚುನಾವಣೆಯುದ್ದಕ್ಕೂ ಮಣಿಪುರದ ಸಂಘರ್ಷದ ವಿಚಾರಗಳು ಮುನ್ನೆಲೆಯಲ್ಲಿಯೇ ಇದ್ದವು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವು ಈ ಸಂಘರ್ಷದ ಕುರಿತು ನಡೆದುಕೊಂಡ ರೀತಿಯ ಕುರಿತು ವಿರೋಧ ಪಕ್ಷಗಳು ಗಟ್ಟಿ ದನಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದವು ಮತ್ತು ಈಗಲೂ ವಿರೋಧಿಸುತ್ತಿವೆ. ಈ ಹಂತದಲ್ಲಿ ದೇಶದಲ್ಲಿ ಲೋಕಸಭಾ ಚುನಾವಣೆಯೂ ನಡೆಯಿತು. ಇನ್ನರ್ ಮಣಿಪುರ ಲೋಕಸಭಾ ಹಾಗೂ ಔಟರ್ ಮಣಿಪುರ ಲೋಕಸಭಾ ಕ್ಷೇತ್ರಗಳೆರಡರಲ್ಲಿಯೂ ಕಾಂಗ್ರೆಸ್ ಜಯಸಾಧಿಸಿದೆ.
ಮಣಿಪುರದ ಇಬ್ಬರೂ ಸಂಸದರು ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿಯೂ ‘ಜಸ್ಟೀಸ್ ಫಾರ್ ಮಣಿಪುರ’ ಘೋಷಣೆಯು ಸಂಸತ್ತಿನಲ್ಲಿ ಮೊಳಗಿದೆ. ಇನ್ನರ್ ಮಣಿಪುರ ಕ್ಷೇತ್ರದ ಸಂಸದ ಅಂಗೋಮ್ಚ ಬಿಮೋಲ್ ಅಕೋಯುಜಮ್ ಅವರ ಹೆಸರು ಕೂಗುತ್ತಿದ್ದಂತೆಯೇ ‘ಇಂಡಿಯಾ’ ಮೈತ್ರಿಕೂಟದ ಸಂಸದರು ‘ಮಣಿಪುರ, ಮಣಿಪುರ’ ಹಾಗೂ ‘ಜಸ್ಟೀಸ್ ಫಾರ್ ಮಣಿಪುರ’ ಎಂದು ಕೂಗಿದ್ದಾರೆ. ಮೈತೇಯಿ ಭಾಷೆಯಲ್ಲಿ ಪ್ರಮಾಣ ಸ್ವೀಕರಿಸಿದರು. ಈ ಬಳಿಕ, ‘ಜೈ ಹಿಂದ್, ಮಾತೃಭೂಮಿಗೆ ಜಯವಾಗಲಿ, ಮಣಿಪುರಕ್ಕೆ ಜಯವಾಗಲಿ’ ಎಂದು ಘೋಷಣೆ ಕೂಗಿದರು.
ಈ ಬಳಿಕ, ಔಟರ್ ಮಣಿಪುರ ಕ್ಷೇತ್ರದ ಸಂಸದ ಆಲ್ಫ್ರೆಡ್ ಕಂಗಮ್ ಆರ್ಥರ್ ಅವರು ಇಂಗ್ಲಿಷ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇವರು ಪ್ರಮಾಣವಚನ ಸ್ವೀಕರಿಸುವ ವೇಳೆಯೂ ‘ಇಂಡಿಯಾ’ ಸಂಸದರು ಘೋಷಣೆಗಳನ್ನು ಕೂಗಿದರು. ಸಾಂಪ್ರದಾಯಿಕ ಶಾಲನ್ನೂ ಇವರು ಹೊದ್ದಿದ್ದರು. ಕೊನೆಯಲ್ಲಿ, ‘ಮಣಿಪುರಕ್ಕೆ ನ್ಯಾಯ ದೊರಕಿಸಿಕೊಡಿ, ದೇಶವನ್ನು ರಕ್ಷಿಸಿ’ ಎಂದು ಹಿಂದಿಯಲ್ಲಿ ಆರ್ಥರ್ ಘೋಷಣೆ ಕೂಗಿದರು.
ಮೇಘಾಲಯದ ತುರಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಎಸ್. ಸಂಗ್ಮಾ ಅವರು ಸಂವಿಧಾನದ ಕಿರುಪ್ರತಿಯನ್ನು ಹಿಡಿದು ಪ್ರಮಾನವಚನ ಸ್ವೀಕರಿಸಿದರು. ಈ ಬಳಿಕ ಕೊನೆಯಲ್ಲಿ ಘೋಷಣೆ ಕೂಗಿದ ಸಂಗ್ಮಾ ಅವರು, ‘ಸಂವಿಧಾನವನ್ನು ರಕ್ಷಿಸಿ’ ಎಂದರು.
ಜನರ ನ್ಯಾಯ ಮಹುವಾ ಮೊಯಿತ್ರಾ
ಪಶ್ಚಿಮ ಬಂಗಾಳದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಮೊದಲಿಗೇ, ‘ಜನರ ನ್ಯಾಯ’ ಎಂದು ಘೋಷಣೆ ಕೂಗಿದರು. ಆಗ ವಿರೋಧ ಪಕ್ಷದ ಪಾಳಯದಲ್ಲಿನ ಸಂಸದರು ಅದನ್ನು ಪುನರುಚ್ಚರಿಸಿದರು. ಮಹುವಾ ಅವರು ಪ್ರಮಾಣ ವಚನ ಸ್ವೀಕಾರದ ನಂತರ, ‘ಜೈ ಸಂವಿಧಾನ, ಜೈ ಬಾಂಗಾಳ’ ಎಂದು ಘೋಷಣೆ ಕೂಗಿದರು.
ಹಿಂದಿನ ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಪ್ರಕರಣದಲ್ಲಿ ಮಹುವಾ ಅವರನ್ನು ಅಮಾನತು ಮಾಡಲಾಗಿತ್ತು. ಆಗ ಸಂಸತ್ ಭವನದಿಂದ ಹೊರ ನಡೆದಿದ್ದ ಅವರು, ‘ನಾನು ಜನರ ಬಳಿ ನ್ಯಾಯ ಪಡೆದು ಇಲ್ಲಿಗೆ ವಾಪಸ್ ಬರುತ್ತೇನೆ’ ಎಂದು ಸವಾಲು ಹಾಕಿದ್ದರು. ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಆ ವಿಷಯವನ್ನೇ ಸೂಚ್ಯವಾಗಿ ಪ್ರಸ್ತಾವಿಸಿ, ಮಹುವಾ ಈ ಘೋಷಣೆ ಕೂಗಿದರು ಎನ್ನಲಾಗಿದೆ.
ಜೈ ಪ್ಯಾಲೆಸ್ಟೀನ್: ಬಿಜೆಪಿ ಸಂಸದರ ದೂರು, ವಿವಾದ
‘ಇಂಡಿಯಾ’ ಮೈತ್ರಿಕೂಟದ ಸಂಸದರು ಸಂವಿಧಾನದ ಕಿರುಪ್ರತಿಗಳನ್ನು ಹಿಡಿದು ಪ್ರಮಾಣ ವಚನ ಸ್ವೀಕರಿಸುತ್ತಿದ್ದರು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಹಲವು ಸಂಸದರು ಕೇಂದ್ರ ಸರ್ಕಾರದ ಕ್ರಮಗಳ ಕುರಿತು ವಿರೋಧ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. ಈ ಎಲ್ಲದರ ಮಧ್ಯೆ, ಎಐಎಂಐಎಂ ನಾಯಕ, ಹೈದರಾಬಾದ್‌ನ ಸಂಸದ ಅಸಾದುದ್ದೀನ್ ಒವೈಸಿ ಅವರು ಯುದ್ಧಪೀಡಿತ ಪ್ಯಾಲೆಸ್ಟೀನ್ ಪರ ಘೋಷಣೆಯನ್ನು ಕೂಗಿದ್ದು, ಆಡಳಿತ ಪಕ್ಷದ ವಿರೋಧಕ್ಕೆ, ನಂತರ ವಿವಾದಕ್ಕೆ ಕಾರಣವಾಯಿತು.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ‘ಜೈ ಭೀಮ್, ಜೈ ತೆಲಂಗಾಣ, ಜೈ ಪಾಲೆಸ್ಟೀನ್’ ಎಂದು ಒವೈಸಿ ಅವರು ಘೋಷಣೆ ಕೂಗಿದರು. ಇದು ಬಿಜೆಪಿ ಸದಸ್ಯರ ಸಿಟ್ಟಿಗೆ ಕಾರಣವಾಯಿತು. ಒವೈಸಿ ಅವರನ್ನು ಸಂಸದ ಸ್ಥಾನದಿಂದ ಅಮಾನತು ಮಾಡಬೇಕು ಎಂದು ಹಲವು ಹಿಂದೂಪರ ಸಂಘಟನೆಗಳೂ ಒತ್ತಾಯಿಸಿವೆ. ಜೊತೆಗೆ, ‘ಒವೈಸಿ ವಿರುದ್ಧ ಕೆಲವು ಸಂಸದರು ನನ್ನ ಬಳಿ ದೂರು ನೀಡಿದ್ದಾರೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಪ್ರತಿಕ್ರಿಯಿಸಿದ್ದಾರೆ.
‘ಪ್ಯಾಲೆಸ್ಟೀನ್ ಕುರಿತು ನಮಗೆ ವೈರತ್ವವಿಲ್ಲ. ಇದು ವಿಷಯವೇ ಅಲ್ಲ. ಆದರೆ, ಪ್ರಮಾಣ ವಚನ ಸ್ವೀಕರಿಸುವ ವೇಳೆ ಬೇರೊಂದು ದೇಶದ ಕುರಿತು ಘೋಷಣೆ ಕೂಗುವುದು ಉಚಿತವೇ? ಈ ಬಗ್ಗೆ ಇರುವ ನಿಯಮಗಳೇನು ಎನ್ನುವ ಬಗ್ಗೆ ತಿಳಿದುಕೊಳ್ಳಬೇಕಿದೆ’ ಎಂದು ಸಚಿವ ರಿಜಿಜು ಹೇಳಿದರು. ಭಾರತವು ಈಗಲೂ ಅಧಿಕೃತವಾಗಿ ಪ್ಯಾಲೆಸ್ಟೀನ್ ದೇಶದ ಪರವಾಗಿಯೇ ಇದೆ. ಇದನ್ನು ಕೇಂದ್ರ ವಿದೇಶಾಂಗ ಸಚಿವಾಲಯವೂ ಹಲವು ಬಾರಿ ಸ್ಪಷ್ಟಪಡಿಸಿದೆ.
ತಮ್ಮ ಹೇಳಿಕೆ ಬಗ್ಗೆ ಸಮರ್ಥಿಸಿಕೊಂಡಿರುವ ಒವೈಸಿ, ‘ಅವರು ಹಿಂಸೆಗೆ ತಳ್ಳಲ್ಪಟ್ಟ ಜನರು. ಪ್ಯಾಲೆಸ್ಟೀನ್ ಪರವಾಗಿ ಮಹಾತ್ಮ ಗಾಂಧಿ ಅವರು ಏನು ಹೇಳಿದ್ದಾರೆ ಎಂದು ಓದಿ ತಿಳಿದುಕೊಳ್ಳಿ. ಬೇರೆಲ್ಲಾ ಸಂಸದರು ವಿವಿಧ ವಿಚಾರಗಳ ಕುರಿತು ಘೋಷಣೆ ಕೂಗಿದರು. ನಾನು ಕೂಗಿದ್ದು ಮಾತ್ರವೇ ಯಾಕೆ ತಪ್ಪು? ಹೀಗೆ ಘೋಷಣೆ ಕೂಗಬಾರದು ಎಂದು ಸಂವಿಧಾನದಲ್ಲಿ ಇದೆಯೇ?’ ಎಂದರು.
ನೀಟ್ ನಿಷೇಧಿಸಿ: ದಯಾನಿಧಿ ಮಾರನ್
ತಮಿಳುನಾಡಿನ ಡಿಎಂಕೆ ಸಂಸದರಾದ ದಯಾನಿಧಿ ಮಾರನ್ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ನೀಟ್ ಪರೀಕ್ಷೆಯ ವಿಷಯವನ್ನು ಪ್ರಸ್ತಾಪಿಸಿದರು. ಪ್ರಮಾನ ವಚನ ಸ್ವೀಕಾರದ ನಂತರ, ‘ಜೈ ದ್ರಾವಿಡ, ಜೈ ಡಿಎಂಕೆ’ ಎಂದು ಘೋಷಣೆ ಕೂಗಿದರು. ನಂತರ ‘ನಮಗೆ ನೀಟ್ ಬೇಡ. ನೀಟ್ ಅನ್ನು ನಿಷೇಧಿಸಿ’ ಎಂದು ಗಟ್ಟಿಯಾಗಿ ಹೇಳಿದರು.
ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರಮಟ್ಟದಲ್ಲಿ ನಡೆಯುವ ನೀಟ್ ಪರೀಕ್ಷೆಗೆ ಆರಂಭದ ದಿನದಿಂದಲೂ ತಮಿಳುನಾಡಿನಲ್ಲಿ ವ್ಯಾಪಕ ವಿರೋಧವಿದೆ. ಅಲ್ಲಿನ ಎಲ್ಲಾ ಪಕ್ಷಗಳೂ ನೀಟ್ ಅನ್ನು ವಿರೋಧಿಸಿವೆ. ನೀಟ್ ಪರೀಕ್ಷೆಯನ್ನು ಬರೆದಿದ್ದ ತಮಿಳುನಾಡಿನ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ‘ನೀಟ್ ಭಾಷಾ ನೀತಿ ಮತ್ತು ಕೇಂದ್ರ ಸರ್ಕಾರದ ಕೋಟಾ ಕಾರಣಕ್ಕೆ ತಮಿಳುನಾಡಿನ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತಿಲ್ಲ. ಹೀಗಾಗಿಯೇ ನೀಟ್ ಅನ್ನು ನಿಷೇಧಿಸಬೇಕು’ ಎಂಬುದು ಇಲ್ಲಿನ ಪಕ್ಷಗಳ ಆಗ್ರಹವಾಗಿತ್ತು. ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಗಳು ಪ್ರಚಾರದ ವೇಳೆ, ‘ನಮ್ಮ ಒಕ್ಕೂಟ ಅಧಿಕಾರಕ್ಕೆ ಬಂದರೆ ನೀಟ್ ನಿಷೇಧಿಸುತ್ತೇವೆ’ ಎಂದು ಹೇಳಿದ್ದರು. ಈಗ ಪ್ರಮಾಣ ವಚನ ಸ್ವೀಕಾರದ ಸಂದರ್ಭದಲ್ಲಿ ನೀಟ್‌ಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ದೌರ್ಜನ್ಯ ನಿಲ್ಲಿಸಿ: ಶಶಿಕಾಂತ್ ಸೆಂಥಿಲ್
ತಮಿಳುನಾಡಿನ ತಿರುವಳ್ಳೂರು ಕ್ಷೇತ್ರದ ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್ ಅವರು ಪ್ರಮಾಣವಚನ ಸ್ವೀಕಾರದ ನಂತರ, ಸಂವಿಧಾನ ಉಳಿಸಿ ಎಂದು ಘೋಷಣೆ ಕೂಗಿದ್ದರು. ಮುಂದುವರೆದು, ‘ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿಗಳ ಮೇಲೆ ನಡೆಸುತ್ತಿರುವ ಹೇಯ ದೌರ್ಜನ್ಯಗಳನ್ನು ನಿಲ್ಲಿಸಿ’ ಎಂದು ಆಗ್ರಹಿಸಿದರು.
ನೀಟ್ ಮರುಪರೀಕ್ಷೆ ನಡೆಸಿ: ಪಪ್ಪು ಯಾದವ್
ಬಿಹಾರದ ಪಕ್ಷೇತರ ಸಂಸದ ಪಪ್ಪು ಯಾದವ್ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಸಂವಿಧಾನವನ್ನು ಉಳಿಸಿ ಎಂದು ಘೋಷಿಸಿದ್ದರು. ಪ್ರಮಾನ ವಚನ ಸ್ವೀಕಾರ ಸಂದರ್ಭದಲ್ಲಿ ಅವರು '#RENEET' ಎಂಬ ಬರಹ ಇದ್ದ ಟಿ–ಶರ್ಟ್ ಧರಿಸಿದ್ದರು. ಜತಗೆ, ‘ನೀಟ್ ಮರುಪರೀಕ್ಷೆ ನಡೆಸಿ ಮತ್ತು ಬಿಹಾರಕ್ಕೆ ವಿಶೇಷ ಸ್ಥಾನವನ್ನು ನೀಡಿ’ ಎಂದು ಆಗ್ರಹಿಸಿದರು.
ಆಡಳಿತಾರೂಢ ಬಿಜೆಪಿಯು ಬಿಹಾರಕ್ಕೆ ವಿಶೇಷ ಸ್ಥಾನ ನೀಡುವುದಾಗಿ ಹಲವು ಬಾರಿ ಘೋಷಿಸಿತ್ತು. ಈ ಹಿಂದಿನ ರಾಜ್ಯ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲೂ ಇದು ಪ್ರಮುಖ ವಿಷಯವಾಗಿತ್ತು. ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಗಳು ತಮ್ಮ ಒಕ್ಕೂಟ ಅಧಿಕಾರಕ್ಕೆ ಬಂದರೆ ಬಿಹಾರಕ್ಕೆ ವಿಶೇಷ ಸ್ಥಾನ ನೀಡುವುದಾಗಿ ಪ್ರಚಾರದಲ್ಲಿ ಹೇಳಿದ್ದರು. ‘ಇಂಡಿಯಾ’ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಯಾಗಿದ್ದ ಪಪ್ಪು ಯಾದವ್ ಸಹ ಪ್ರಚಾರದಲ್ಲಿ ಈ ಮಾತುಗಳನ್ನು ಹೇಳಿದ್ದರು.
ಲೋಕಸಭಾ ಚುನಾವಣೆಯ ಮತಎಣಿಕೆ ನಡೆದ ದಿನವೇ ನೀಟ್–ಯುಜಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿತ್ತು. ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಹಲವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಕೆಲವು ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿದು, ಮರುಪರೀಕ್ಷೆ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಹಲವರ ಬಂಧನವೂ ನಡೆದಿದೆ. ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ನೀಟ್ ಮರುಪರೀಕ್ಷೆಗೆ ಆಗ್ರಹಿಸುತ್ತಿದ್ದಾರೆ. ಇದನ್ನೇ ಪಪ್ಪು ಯಾದವ್ ಲೋಕಸಭೆಯಲ್ಲೂ ಪ್ರಸ್ತಾಪಿಸಿದರು.
ಜೈ ಜವಾನ್–ಜೈ ಕಿಸಾನ್: ಸಂಜನಾ ಜಾಟವ್
ರಾಜಸ್ಥಾನದ ಕಾಂಗ್ರೆಸ್ ಸಂಸದೆ ಸಂಜನಾ ಜಾಟವ್ ಅವರು ಪ್ರಮಾನ ವಚನ ಸ್ವೀಕರಿಸಿದ ನಂತರ, ‘ಜೈ ಜವಾನ್–ಜೈ ಕಿಸಾನ್, ಜೈ ಸಂವಿಧಾನ್’ ಎಂದು ಘೋಷಣೆ ಕೂಗಿದರು.
ರೈತಾಪಿ ಜಾಟವ್ ಸಮುದಾಯವು ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ (ಈಗ ರದ್ದಾಗಿರುವ) ವಿರುದ್ಧ ಪ್ರತಿಭಟನೆ ನಡೆಸಿತ್ತು. ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನಿನ ಭದ್ರತೆ ಒದಗಿಸುವಂತೆ ಹೋರಾಟ ನಡೆಸುತ್ತಿರುವ ರೈತ ಸಮುದಾಯಗಳಲ್ಲಿ ಇದೂ ಒಂದು. ಇದೇ ಸಮುದಾಯದ ಸಂಜನಾ ಅವರು ಪ್ರಚಾರದ ವೇಳೆ ತಮ್ಮ ಒಕ್ಕೂಟ ಅಧಿಕಾರಕ್ಕೆ ಬಂದರೆ ಎಂಎಸ್‌ಪಿಗೆ ಕಾನೂನಿನ ಖಾತರಿ ನೀಡುವುದಾಗಿ ಹೇಳಿದ್ದರು.
ಜೈ ಸಂವಿಧಾನ್: ಚಂದ್ರಶೇಖರ್
ಉತ್ತರ ಪ್ರದೇಶದ ನಾಗಿನಾ ಕ್ಷೇತ್ರದ ಸಂಸದರಾಗಿ ಚುನಾಯಿತರಾಗಿರುವ ಆಜಾದ್ ಸಮಾಜ್ ಪಾರ್ಟಿಯ ಚಂದ್ರಶೇಖರ್ ಅವರು ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡೇ ಪ್ರಮಾಣ ವಚನ ಸ್ವೀಕರಿಸಿದರು. ನಂತರ, ‘ಜೈ ಭೀಮ್, ಜೈ ಭಾರತ್, ಜೈ ಸಂವಿಧಾನ್, ಜೈ ಮಂಡಲ್, ಜೈ ಜೋಹರ್, ಜೈ ಜವಾನ್–ಜೈ ಕಿಸಾನ್’ ಎಂದು ಘೋಷಣೆ ಕೂಗಿದರು.
ಅವರು ಘೋಷಣೆ ಕೂಗುತ್ತಿರುವ ಸಂದರ್ಭದಲ್ಲೇ ಆಡಳಿತ ಪಕ್ಷದ ಬೆಂಚುಗಳ ಕಡೆಯಿಂದ ಸಂಸದರೊಬ್ಬರು, ‘ಪೂರ್ತಿ ಭಾಷಣ ಈಗಲೇ ಮಾಡಿಬಿಡುತ್ತೀರಾ’ ಎಂದು ಕೂಗಿದರು. ಸ್ಪೀಕರ್ ಕುರ್ಚಿಯ ಬಳಿಯಿಂದಲೇ ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರಶೇಖರ್ ಅವರು, ‘ಹೌದು ಸರ್, ಅದಕ್ಕಾಗಿಯೇ ಬಂದಿದ್ಧೇನೆ’ ಎಂದರು. ಬಳಿಕ, ‘ನೀವು ಅದನ್ನು ಕೇಳಲೇಬೇಕಾಗುತ್ತದೆ’ ಎಂದೂ ಹೇಳಿದರು.
ಇಂಡಿಯಾ ಅದು ಭಾರತ: ಧರಮ್‌ವೀರ್ ಗಾಂಧಿ
ಪಂಜಾಬ್ ಕಾಂಗ್ರೆಸ್ ಸಂಸದ ಧರಮ್‌ವೀರ್ ಗಾಂಧಿ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ, ‘ಇಂಡಿಯಾ ಅದು ಭಾರತ (INDIA that is BHARATH)’ ಎಂದು ಘೋಷಣೆ ಕೂಗಿದರು. ಜತೆಗೆ ಜೈ ಸಂವಿಧಾನ್ ಎಂದೂ ಘೋಷಣೆ ಕೂಗಿದರು.
2023ರಲ್ಲಿ ಭಾರತದಲ್ಲಿ ನಡೆದಿದ್ದ ಜಿ–20 ಶೃಂಗಸಭೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ‘ಇಂಡಿಯಾ’ ಎಂದು ಆಗ್ಲಭಾಷೆಯಲ್ಲಿ ಬರೆಯುವೆಡೆ ‘ಭಾರತ್’ ಎಂದು ಆಂಗ್ಲಭಾಷೆಯಲ್ಲಿ ಬರೆದಿತ್ತು. ಇದಕ್ಕೆ ವಿರೋಧ ಪಕ್ಷಗಳಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಸಂವಿಧಾನದಲ್ಲಿ ದೇಶದ ಹೆಸರನ್ನು, ‘ಇಂಡಿಯಾ ಅದು ಭಾರತ’ ಎಂದು ಇದೆ. ಇಂಡಿಯಾ ಎಂಬುದನ್ನು ಕೈಬಿಡುವ ಮೂಲಕ ಸರ್ಕಾರವು ಸಂವಿಧಾನಕ್ಕೆ ಅಪಮಾನ ಮಾಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಈಗ ಧರಮ್‌ವೀರ್ ಗಾಂಧಿ ಅವರು ಪ್ರಮಾಣ ವಚನ ಸ್ವೀಕಾರದ ಸಂದರ್ಭದಲ್ಲಿ ಆ ಮಾತನ್ನು ಪ್ರಸ್ತಾಪಿಸಿದರು.
ಆಧಾರ: ಸಂಸದ್ ಟಿ.ವಿ, ಪಿಟಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.