ADVERTISEMENT

ಆಳ–ಅಗಲ: ಬಾಂಗ್ಲಾ ವಿಮೋಚನೆಗಾಗಿ ಯುದ್ಧ ಗೆದ್ದ ಭಾರತ

ಬಾಂಗ್ಲಾ ವಿಮೋಚನಾ ಯುದ್ಧಕ್ಕೆ 50 ವರ್ಷ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 19:45 IST
Last Updated 15 ಡಿಸೆಂಬರ್ 2021, 19:45 IST
ಬಾಂಗ್ಲಾ ವಿಮೋಚನೆಯ 50ನೇ ವರ್ಷಾಚರಣೆಯಲ್ಲಿ ಪಾಲ್ಗೊಳ್ಳಲು ಢಾಕಾಗೆ ತೆರಳಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬಂಗಬಂಧು ರಾಷ್ಟ್ರೀಯ ಸ್ಮಾರಕಕ್ಕೆ ಬುಧವಾರ ಭೇಟಿ ನೀಡಿದ್ದರು –ಪಿಟಿಐ ಚಿತ್ರ
ಬಾಂಗ್ಲಾ ವಿಮೋಚನೆಯ 50ನೇ ವರ್ಷಾಚರಣೆಯಲ್ಲಿ ಪಾಲ್ಗೊಳ್ಳಲು ಢಾಕಾಗೆ ತೆರಳಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬಂಗಬಂಧು ರಾಷ್ಟ್ರೀಯ ಸ್ಮಾರಕಕ್ಕೆ ಬುಧವಾರ ಭೇಟಿ ನೀಡಿದ್ದರು –ಪಿಟಿಐ ಚಿತ್ರ   

ಆಧುನಿಕ ಪ್ರಪಂಚದ ಯುದ್ಧಗಳ ಇತಿಹಾಸದಲ್ಲಿ ಭಾರತದ ಪ್ರಧಾನಿ ಇಂದಿರಾಗಾಂಧಿ ಮತ್ತುಇಸ್ರೇಲ್‌ ಪ್ರಧಾನಿ ಗೋಲ್ಡಾಮೇರ ಅವಿಸ್ಮರಣೀಯರು. ಇಂದಿರಾ ಗಾಂಧಿ ಅವರು ಬಾಂಗ್ಲಾ ವಿಮೋಚನೆಗಾಗಿ 1971 ಡಿಸೆಂಬರ್ 3 ರಿಂದ 16ರವರೆಗೆ ನಡೆಸಿದ ಯುದ್ಧದಲ್ಲಿ ಇತಿಹಾಸ ಸೃಷ್ಟಿಸಿದರು. ಅಲ್ಲದೆ ಜಗತ್ತಿನ ಭೂಗೋಳ ಬದಲಿಸಿದ ಶ್ರೇಯಸ್ಸಿಗೆ ಪಾತ್ರರಾದ ಭಾರತದ ದುರ್ಗೆಯಾದರು.ಗೋಲ್ಡಾಮೇರ ಅವರು ಆರು ದಿನಗಳ ಯುದ್ದದಲ್ಲಿ ತಮ್ಮ ಸುತ್ತಲಿನ ಆರು ದೇಶಗಳನ್ನು ಸೋಲಿಸಿ ದಾಖಲೆ ಬರೆದರು. ಈ ಇಬ್ಬರು ಮಹಿಳೆಯರ ಸಾಧನೆ ಅದ್ಭುತ, ಅನನ್ಯ, ಅಸಾದೃಶ್ಯ ಮತ್ತು ಅಸಾಧಾರಣ.

ಬಾಂಗ್ಲಾದೇಶ ಉದಯವಾಗಿ ಅರ್ಧ ಶತಮಾನವಾಗುತ್ತಿರುವ ಈ ಸಂದರ್ಭದಲ್ಲಿ ಬಾಂಗ್ಲಾ ವಿಮೋಚನಾ ಯುದ್ಧದ ಸ್ಮರಣೆ ಮಾಡಬೇಕಾಗಿದೆ. ಬಾಂಗ್ಲಾ ವಿಮೋಚನಾ ಯುದ್ಧಕ್ಕಿಂತ ಮೊದಲು, ಈಗ ನಾವು ಬಾಂಗ್ಲಾದೇಶ ಎಂದು ಕರೆಯುವ ಪ್ರದೇಶವು ಪಾಕಿಸ್ತಾನದ ಭಾಗವಾಗಿತ್ತು. ಅದನ್ನು ಪೂರ್ವ ಪಾಕಿಸ್ತಾನವೆಂದು ಕರೆಯಲಾಗುತ್ತಿತ್ತು. 1970ರಲ್ಲಿ ನಡೆದ ಚುನಾವಣೆಯಲ್ಲಿ ಪೂರ್ವ ಪಾಕಿಸ್ತಾನದಲ್ಲಿ ನೆಲೆಯಾಗಿದ್ದ ಶೇಕ್‌ ಮುಜೀಬರ್ ರಹಮಾನರ ನೇತೃತ್ವದ ಅವಾಮಿ ಲೀಗ್‌ ಸ್ಪಷ್ಟ ಬಹುಮತ ಪಡೆಯಿತು. ಆದರೆ ಸೇನೆಯ ಮೇಲೆ ಹಿಡಿತ ಹೊಂದಿದ್ದ ಪಾಕಿಸ್ತಾನವು,ಅವಾಮಿ ಲೀಗ್‌ ಅಧಿಕಾರ ಸ್ವೀಕರಿಸುವುದನ್ನು ಹತ್ತಿಕ್ಕಲು ಢಾಕಾದಲ್ಲಿ ‘ಆಪರೇಷನ್ ಸರ್ಚ್‌ಲೈಟ್‌’ ಹೆಸರಿನಲ್ಲಿ ನರಮೇಧ ನಡೆಸಿತು. ಢಾಕಾ ವಿಶ್ವವಿದ್ಯಾಲಯದ ಬುದ್ಧಿಜೀವಿಗಳನ್ನು ಚಿಂತ್ರಹಿಂಸೆ ನೀಡಿ ಕೊಲ್ಲಲಾಯಿತು.

1971ರ ಮಾರ್ಚ್‌ 25ರಂದು ಪೂರ್ವ ಪಾಕಿಸ್ತಾನವನ್ನು ಸ್ವತಂತ್ರ, ಸಾರ್ವಭೌಮ ಬಾಂಗ್ಲಾದೇಶ ಎಂದು ಘೋಷಿಸಲಾಯಿತು. ಇದರ ವಿರುದ್ಧ ಪಾಕಿಸ್ತಾನವು ಬಾಂಗ್ಲಾದೇಶದಲ್ಲಿ ಇತಿಹಾಸದಲ್ಲಿ ಕೇಳರಿಯದಂತಹ ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ ಆರಂಭಿಸಿತು. ಆ ಅವಧಿಯಲ್ಲಿ 10 ಲಕ್ಷದಷ್ಟು ಬಂಗಾಳಿಗಳು ಜೀವ ಉಳಿಸಿಕೊಳ್ಳುವ ಸಲುವಾಗಿ ಭಾರತಕ್ಕೆ ವಲಸೆ ಬಂದರು. 1971ರ ಮಾರ್ಚ್‌ 26ರಿಂದ ಡಿಸೆಂಬರ್ 16ರಂದು ಬಾಂಗ್ಲಾದೇಶ ಉದಯವಾಗುವವರೆಗೆ ಲಕ್ಷಾಂತರ ನಿರಾಶ್ರಿತರನ್ನು ನೋಡಿಕೊಳ್ಳಬೇಕಾದ ಅನಿವಾರ್ಯ ಭಾರತದ ಹೆಗಲೇರಿತ್ತು.

ADVERTISEMENT

ಬಾಂಗ್ಲಾದೇಶದ ಜನರು ದೇಶದ ರಕ್ಷಣೆಗಾಗಿ ಪಾಕಿಸ್ತಾನ ಸೇನೆಯ ವಿರುದ್ಧ ಹೋರಾಡಲು ಸಂಘಟಿತರಾದರು. ಈ ಹೋರಾಟಕ್ಕೆ ಭಾರತವು ಎಲ್ಲಾ ರೀತಿಯ ನೆರವು ಮತ್ತು ತರಬೇತಿ ನೀಡಿತು.

ಬಾಂಗ್ಲಾ ವಿಮೋಚನಾ ಯುದ್ಧದ ತುರ್ತು ಸಂದರ್ಭವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಅತ್ಯಂತ ಚಾಣಾಕ್ಷತನ ಮತ್ತು ರಾಜತಾಂತ್ರಿಕ ನೈಪುಣ್ಯದಿಂದ ನಿರ್ವಹಿಸಿದರು. ರಷ್ಯಾ ಜತೆಗೆ ಮೈತ್ರಿ ಮಾಡಿಕೊಂಡರು. ಅಮೆರಿಕದ ಅಂದಿನ ಅಧ್ಯಕ್ಷ ರಿಚರ್ಡ್‌ ನಿಕ್ಸನ್ ಆಡಳಿತವು ಆಗ ಪಾಕಿಸ್ತಾನದ ಪರವಾಗಿತ್ತು. ಈ ಸಲುವಾಗಿ ನಿಕ್ಸನ್ ಜತೆಗೆ ಇಂದಿರಾ ಗಾಂಧಿ ಮಾತುಕತೆ ನಡೆಸಿದರು. ‘ಭಾರತವು ಅಭಿವೃದ್ಧಿಶೀಲವಾಗಿರಬಹುದು. ಆದರೆ ತನ್ನ ಆತ್ಮಗೌರವ ಮತ್ತು ಸ್ವಾಭಿಮಾನವನ್ನು ಕಾಪಾಡಿಕೊಳ್ಳಲು ಭಾರತಕ್ಕೆ ಬರುತ್ತದೆ’ ಎಂದು ನಿಕ್ಸನ್‌ಗೆ ದಿಟ್ಟ ಉತ್ತರ ನೀಡಿದ್ದರು.ಪಾಕಿಸ್ತಾನಕ್ಕೆ ಆಪ್ತವಾಗಿದ್ದ ಚೀನಾ ಸಹ ಯುದ್ಧ ಪ್ರವೇಶಿಸದಂತೆ ಇಂದಿರಾ ಎಚ್ಚರವಹಿಸಿದರು. ಮುಸ್ಲಿಂ ದೇಶಗಳು ತಟಸ್ಥವಾಗಿರುವಂತೆ ನೋಡಿಕೊಂಡರು.

ಪಾಕಿಸ್ತಾನವು ಡಿಸೆಂಬರ್ 3ರಂದು ಭಾರತದ ವಾಯುನೆಲೆಗಳ ಮೇಲೆ ದಾಳಿ ನಡೆಸಿತು. ತಕ್ಷಣವೇ ಎಚ್ಚೆತ್ತ ಭಾರತೀಯ ಸೇನೆಯು ಪಾಕಿಸ್ತಾನದ ಮೇಲೆ ದಾಳಿ ಆರಂಭಿಸಿತು. ನೌಕಾಪಡೆ ಮತ್ತು ವಾಯುಪಡೆಗಳೂ ಬಾಂಗ್ಲಾ ವಿಮೋಚನೆಗಾಗಿ ಕಾರ್ಯಾಚರಣೆ ಆರಂಭಿಸಿದವು. ಇದರ ಬೆನ್ನಲ್ಲೇ ಸೋಲೊಪ್ಪಿಕೊಂಡ ಪಾಕಿಸ್ತಾನ ಸೇನೆಯು ಡಿಸೆಂಬರ್ 16ರಂದು ಭಾರತೀಯ ಸೇನೆಗೆ ಶರಣಾಯಿತು.

ಪಾಕಿಸ್ತಾನದ ಲೆಫ್ಟಿನೆಂಟ್ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ ಅವರು 93,000 ಸೈನಿಕರೊಂದಿಗೆ ಭಾರತೀಯ ಸೇನೆಗೆ ಶರಣಾದರು. ಭಾರತೀಯ ಸೇನೆಯ ಲೆಫ್ಟಿನೆಂಟ್‌ ಜನರಲ್ ಜಗಜಿತ್ ಸಿಂಗ್ ಅರೋರಾ ಅವರ ಎದುರು ನಿಯಾಜಿ ಶರಣಾಗತಿ ಪತ್ರಕ್ಕೆ ಸಹಿ ಹಾಕಿದರು.

1972ರಲ್ಲಿ ನಡೆದ ಶಿಮ್ಲಾ ಒಪ್ಪಂದದಲ್ಲಿ ಪಾಕಿಸ್ತಾನವು, ಬಾಂಗ್ಲಾದೇಶವನ್ನು ಸ್ವತಂತ್ರ ದೇಶವೆಂದು ಮಾನ್ಯ ಮಾಡಿತು. ಭಾರತಕ್ಕೆ ಶರಣಾಗಿದ್ದ ಪಾಕಿಸ್ತಾನ ಸೇನೆಯ ಸಾವಿರಾರು ಯುದ್ಧಕೈದಿಗಳನ್ನು ನಂತರದ ಐದು ತಿಂಗಳಲ್ಲಿ ಬಿಡುಗಡೆ ಮಾಡಲಾಯಿತು. ಯುದ್ಧಕೈದಿಗಳನ್ನು ಬಿಡುಗಡೆ ಮಾಡುವಲ್ಲಿ ಭಾರತ ಉದಾರವಾಗಿ ನಡೆದುಕೊಂಡಿತೆಂಬ ಟೀಕೆ ವ್ಯಕ್ತವಾದರೂ, ಗೆದ್ದವರು ಯಾವಾಗಲೂ ಉದಾರವಾಗಿ ಇರಬೇಕೆಂಬ ತತ್ವವನ್ನು ಇಂದಿರಾ ಗಾಂಧಿ ಅವರು ಜಗತ್ತಿಗೆ ಸಾರಿದರು. ಈ ಮೂಲಕ ಪ್ರಪಂಚದಾದ್ಯಂತ ಭಾರತದ ಖ್ಯಾತಿ ವಿಜೃಂಭಿಸುವಂತೆ ಮಾಡಿದರು.

ಭಾರತ–ಬಾಂಗ್ಲಾ: ಅರ್ಧ ಶತಮಾನದ ಬಂಧ
ಬಾಂಗ್ಲಾ ವಿಮೋಚನೆಯ 50ನೇ ವರ್ಷಾಚರಣೆಯ ಸಂಭ್ರಮದಲ್ಲಿ, ಭಾರತ–ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಮೈತ್ರಿಗೆ ಅರ್ಧ ಶತಮಾನ ಸಂದಿರುವ ಮೈಲಿಗಲ್ಲೂ ಸೇರಿಕೊಂಡಿದೆ. 1971ರ ಡಿಸೆಂಬರ್ 6ರಂದು ಬಾಂಗ್ಲಾದೇಶವನ್ನು ಸಾರ್ವಭೌಮ ದೇಶ ಎಂದು ಮೊದಲು ಪರಿಗಣಿಸಿದ್ದು ಭಾರತ.ಐತಿಹಾಸಿಕ ಮತ್ತು ಭೌಗೋಳಿಕ ದೃಷ್ಟಿಯಿಂದ ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಸಾಮಾಜಿಕ, ಸಾಂಸ್ಕೃತಿಕ, ಭಾಷಿಕ ಅಂಶಗಳಲ್ಲಿ ನಂಟಿದೆ.

ವಿಮೋಚನೆಯ ನಂತರ ಬಾಂಗ್ಲಾದೇಶಕ್ಕೆ ಪೆಟ್ಟು ನೀಡಿದ್ದು 1975ರಲ್ಲಿ ನಡೆದ ಶೇಕ್ ಮುಜೀಬರ್ ರಹಮಾನ್ ಅವರ ಹತ್ಯೆ. ಇದು ಭಾರತಕ್ಕೂ ಆಘಾತ ನೀಡಿತು. ವಿವಿಧ ರಾಜಕೀಯ ಬದಲಾವಣೆಗಳ ಬಳಿಕ, ಬಾಂಗ್ಲಾದೇಶವು ಸೇನಾ ಆಡಳಿತಕ್ಕೊಳಪಟ್ಟಿದ್ದರಿಂದ ಮೈತ್ರಿ ಮೇಲೆ ಗಂಭೀರ ಪರಿಣಾಮ ಉಂಟಾಯಿತು.1990ರ ದಶಕದಲ್ಲಿ ಬಾಂಗ್ಲಾ ದೇಶದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆ, ನಂತರದ ದಿನಗಳಲ್ಲಿ ತೆಗೆದುಕೊಂಡ ಪಕ್ವ ನಿರ್ಧಾರಗಳು ಮತ್ತು ಆರ್ಥಿಕತೆಯಲ್ಲಿ ಕಂಡುಬಂದ ಚೇತರಿಕೆ ಮೊದಲಾದ ಅಂಶಗಳು ಢಾಕಾ ಮತ್ತು ದೆಹಲಿ ನಡುವಿನ ಸಂಬಂಧಗಳಲ್ಲಿ ಹೊಸಯುಗಕ್ಕೆ ಕಾರಣವಾದವು.

* ಕೋವಿಡ್ ನಿಯಂತ್ರಿಸುವ ಲಸಿಕೆಗಳು ಸಿದ್ಧವಾದ ತಕ್ಷಣ ಬಾಂಗ್ಲಾ ಸೇರಿದಂತೆ ಅಕ್ಕಪಕ್ಕದ ದೇಶಗಳಿಗೆ ಆದ್ಯತೆ ನೀಡುವುದಾಗಿ ಭಾರತ ಘೋಷಿಸಿತ್ತು
*2015ರ ಭೂ ಗಡಿ ಒಪ್ಪಂದವು (ಎಲ್‌ಬಿಎ) ಉಭಯ ದೇಶಗಳ ಗಾಢ ಮೈತ್ರಿಗೆ ಪ್ರಮುಖ ನಿದರ್ಶನ. ಪ್ರಾದೇಶಿಕ ಭದ್ರತೆ ಹಾಗೂ ಅಭಿವೃದ್ಧಿಯಲ್ಲಿ ಇದರ ಪಾತ್ರ ಮಹತ್ವದ್ದು
*ಭಾರತದ 72ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬಾಂಗ್ಲಾದೇಶಸೇನೆ ಭಾಗಿಯಾಗಿತ್ತು. ಈವರೆಗೆ ಪರೇಡ್‌ನಲ್ಲಿ ಫ್ರಾನ್ಸ್ ಮತ್ತು ಯುಎಇ ಸೇನೆ ಮಾತ್ರ ಭಾಗಿಯಾದ ಶ್ರೇಯ ಹೊಂದಿದ್ದವು
* ಉಭಯ ದೇಶಗಳು ಹಲವು ಬಾರಿ ಜಂಟಿ ಸೇನಾ (ಸಂಪ್ರೀತಿ) ಮತ್ತು ನೌಕಾ ಕಸರತ್ತು (ಮಿಲಾನ್) ನಡೆಸಿವೆ
* ಎರಡೂ ದೇಶಗಳು 54 ನದಿಗಳಲ್ಲಿ ಪಾಲು ಹೊಂದಿವೆ. ದ್ವಿಪಕ್ಷೀಯ ಜಂಟಿ ನದಿ ಆಯೋಗವು (ಜೆಆರ್‌ಸಿ) ನದಿ ವ್ಯವಸ್ಥೆಯಲ್ಲಿ ಉಭಯ ದೇಶಗಳಿಗೂ ಗರಿಷ್ಠ ಪ್ರಯೋಜನಗಳನ್ನು ಒದಗಿಸುವ ಸಂಪರ್ಕ ಕೊಂಡಿಯಾಗಿ 1972ರಿಂದಲೂ ಕೆಲಸ ಮಾಡುತ್ತಿದೆ
* 2011ರಿಂದ ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ವಲಯ (ಎಸ್‌ಎಎಫ್‌ಟಿಎ) ಒಪ್ಪಂದದಡಿ ಭಾರತದ ಜೊತೆ ಸುಂಕರಹಿತ ವ್ಯಾಪಾರ ಮಾಡಲು ಬಾಂಗ್ಲಾಕ್ಕೆ ಅವಕಾಶ ಮಾಡಿಕೊಡಲಾಗಿದೆ
* ಭಾರತದ ಹಲ್ದಿಬಾಡಿ ಮತ್ತು ಬಾಂಗ್ಲಾದ ಚಿಲಾಹಟಿ ನಡುವೆ ರೈಲ್ವೆ ಸಂಪರ್ಕ ಯೋಜನೆಯನ್ನು ಜಂಟಿಯಾಗಿ ಉದ್ಘಾಟಿಸಲಾಯಿತು
* ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಚುನಾವಣೆಯಲ್ಲಿ ಭಾರತವನ್ನು ಬಾಂಗ್ಲಾದೇಶ ಬೆಂಬಲಿಸಿದೆ

ಬಾಂಗ್ಲಾ ವಿಮೋಚನೆಯ ಹಾದಿ
1947:
ಭಾರತದಲ್ಲಿ ಬ್ರಿಟಿಷರ ಅಧಿಪತ್ಯ ಅಂತ್ಯವಾಗಿ, ದೇಶವು ವಿಭಜನೆಯಾಯಿತು. ಬಹುಸಂಖ್ಯಾತ ಮುಸ್ಲಿಮರಿಂದ ಕೂಡಿದ ‘ಪಾಕಿಸ್ತಾನ’ ಉದಯವಾಯಿತು

1949: ಪಶ್ಚಿಮ ಪಾಕಿಸ್ತಾನದಿಂದ ಪ್ರತ್ಯೇಕಗೊಂಡು ಪೂರ್ವ ಪಾಕಿಸ್ತಾನವನ್ನು ಅಸ್ತಿತ್ವಕ್ಕೆ ತರುವ ಉದ್ದೇಶದಿಂದ ‘ಅವಾಮಿ ಲೀಗ್ ಸಂಘಟನೆ’ ಹುಟ್ಟಿಕೊಂಡಿತು

1970: ಪೂರ್ವ ಪಾಕಿಸ್ತಾನದಲ್ಲಿ ನಡೆದ ಚುನಾವಣೆಗಳಲ್ಲಿ ಅವಾಮಿ ಲೀಗ್ ಪ್ರಚಂಡ ಜಯಭೇರಿ ಬಾರಿಸಿತು. ಆದರೆ ಫಲಿತಾಂಶವನ್ನು ಒಪ್ಪಲು ಪಶ್ಚಿಮ ಪಾಕಿಸ್ತಾನ ಸಿದ್ಧವಿರಲಿಲ್ಲ. ಇದು ಗಲಭೆಗೆ ಕಾರಣವಾಯಿತು. ಈ ವೇಳೆ ಅಪ್ಪಳಿಸಿದ ದೊಡ್ಡ ಚಂಡಮಾರುತವು ಈ ಭಾಗದ 5 ಲಕ್ಷ ಜನರನ್ನು ಬಲಿ ಪಡೆಯಿತು

1971: ಸ್ವತಂತ್ರ ‘ಬಾಂಗ್ಲಾದೇಶ’ ಉದಯವನ್ನು ಅವಾಮಿ ಲೀಗ್ ಘೋಷಿಸಿತು. ಆದರೆ ಇದಕ್ಕೆ ಪಶ್ಚಿಮ ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸಿತು. ಆದರೆ ಭಾರತದ ಸೇನಾ ಸಹಕಾರದೊಂದಿಗೆ ನಡೆದ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಸೋಲಾಯಿತು. ಈ ಯುದ್ಧದಲ್ಲಿ ಭಾರತದ ಬಲಿಷ್ಠ ಸೇನಾ ಸಾಮರ್ಥ್ಯ ಅನಾವರಣಗೊಂಡಿತು

1972: ಶೇಕ್ ಮುಜೀಬರ್ ರಹಮಾನ್ ಅವರು ದೇಶದ ಮೊದಲ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಪ್ರಮುಖ ಉದ್ದಿಮೆಗಳನ್ನು ಅವರು ರಾಷ್ಟ್ರೀಕರಣ ಮಾಡಿದರು ಆದರೆ,1975ರಲ್ಲಿ ನಡೆದ ಸೇನಾ ದಂಗೆಯಲ್ಲಿ ಅವರ ಹತ್ಯೆಯಾಯಿತು

ಮಂಡಿಯೂರಿ ಶರಣಾಗಿದ್ದ ಪಾಕಿಸ್ತಾನ ಸೇನೆ
ಬಾಂಗ್ಲಾ ವಿಮೋಚನಾ ಯುದ್ಧವನ್ನು ಗೆಲ್ಲುವಲ್ಲಿ ಭಾರತೀಯ ಸೇನೆಯ ಮೂರೂ ಪಡೆಗಳು ಮಹತ್ವದ ಪಾತ್ರ ವಹಿಸಿದ್ದವು. ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಭಾರತೀಯ ಸೇನೆಯ ಪಡೆಗಳು ನೇರವಾಗಿ ಭಾಗಿಯಾಗಿರಲಿಲ್ಲ. ಆದರೆ 1971ರ ಡಿಸೆಂಬರ್ 3ರಂದು ಪಾಕಿಸ್ತಾನ ಸೇನೆಯು ಭಾರತದ 11 ವಾಯನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿತು. ತಕ್ಷಣವೇ ಎಚ್ಚೆತ್ತುಕೊಂಡ ಸರ್ಕಾರವು ಪಾಕಿಸ್ತಾನದ ಮೇಲೆ ಪ್ರತಿದಾಳಿಗೆ ಆದೇಶಿಸಿತು. ಕರಾಚಿ ಬಂದರನ್ನು ಗುರಿ ಮಾಡಿಕೊಂಡು ನೌಕಾಪಡೆಯ ಯುದ್ಧನೌಕೆಗಳು ಮತ್ತು ವಾಯುಪಡೆಯ ಬಾಂಬರ್‌ ವಿಮಾನಗಳು ದಾಳಿ ನಡೆಸಿದವು.

ಈ ದಾಳಿಯಲ್ಲಿ ಪಾಕಿಸ್ತಾನದ ಕರಾಚಿ ಬಂದರು, ಯುದ್ಧನೌಕೆಗಳು ನಾಶವಾದವು. ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ಸೇನಾ ಕಾರ್ಯಚರಣೆ ನಡೆಸುತ್ತಿದ್ದ ಪಾಕಿಸ್ತಾನದ ಸೇನೆಗೆ ಪೂರೈಸಲು ಸಂಗ್ರಹಿಸಿದ್ದ ಇಂಧನವಿದ್ದ ಟ್ಯಾಂಕರ್ ಹಡಗುಗಳು ನಾಶವಾದವು. ಇದರಿಂದ ಪಾಕಿಸ್ತಾನ ಸೇನೆಗೆ ಇಂಧನ ಪೂರೈಕೆ ಸ್ಥಗಿತವಾಯಿತು. ಇದೇ ವೇಳೆ ಪೂರ್ವ ಪಾಕಿಸ್ತಾನದ ಬಂದರನ್ನು ಭಾರತೀಯ ನೌಕಪಡೆಯ ಯುದ್ಧನೌಕೆ, ವಿಮಾನವಾಹನ ನೌಕೆ ಐಎನ್‌ಎಸ್ ವಿಕ್ರಾಂತ್ ಮತ್ತು ಜಲಾಂತರ್ಗಾಮಿ ನೌಕೆಗಳು ಸುತ್ತುವರಿದವು. ಈ ಮೂಲಕ ಪೂರ್ವ ಪಾಕಿಸ್ತಾನದಲ್ಲಿದ್ದ ಪಾಕಿಸ್ತಾನದ ಸೈನಿಕರು ಪಲಾಯನ ಆಗುವುದನ್ನು ತಡೆಯಲಾಯಿತು.

ಮತ್ತೊಂದೆಡೆ ವಾಯುಪಡೆಯ ಸೀ ಹ್ಯಾಕ್‌ ಯುದ್ಧವಿಮಾನಗಳು ಢಾಕಾದಲ್ಲಿ ನೆರೆದಿದ್ದ ಪಾಕಿಸ್ತಾನ ಸೇನೆಯ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿದವು. ಮತ್ತೊಂದೆಡೆ ಭೂಸೇನೆಯು ಪೂರ್ವ ಪಾಕಿಸ್ತಾನದ ಗಡಿಯನ್ನು ಸುತ್ತುವರಿಯಿತು. ಈ ಮೂಲಕ ಪಾಕಿಸ್ತಾನ ಸೈನಿಕರ ಶಿಬಿರಗಳನ್ನು ನಾಶ ಮಾಡಲಾಯಿತು. ಅವರಿಗೆ ಮದ್ದುಗುಂಡು, ಆಹಾರ ಮತ್ತು ಇಂಧನ ಪೂರೈಕೆಯಾಗದಂತೆ ತಡೆಯಲಾಯಿತು. ಈ ಎಲ್ಲವನ್ನೂ ಅತ್ಯಂತ ಕ್ಷಿಪ್ರವಾಗಿ ಮಾಡಿದ್ದರಿಂದ ದಿಗ್ಭ್ರಾಂತವಾದ ಪಾಕಿಸ್ತಾನ ಸೇನೆಯು, ಭಾರತೀಯ ಸೇನೆಯ ಎದುರು ಮಂಡಿಯೂರಿತು.

ಆಧಾರ: ರಾಯಿಟರ್ಸ್, ಬಿಬಿಸಿ
ವರದಿ: ಜಯಸಿಂಹ ಆರ್‌. ಅಮೃತ ಕಿರಣ್ ಬಿ.ಎಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.