ADVERTISEMENT

ಆಳ–ಅಗಲ| ಏರುತ್ತಲೇ ಇದೆ LPG ಬೆಲೆ: 3 ವರ್ಷಗಳಲ್ಲಿ ಶೇ 90 ರಷ್ಟು ಏರಿಕೆ

ಮೂರು ವರ್ಷಗಳಲ್ಲಿ ಶೇ 90ರಷ್ಟು ಏರಿಕೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2023, 2:59 IST
Last Updated 2 ಮಾರ್ಚ್ 2023, 2:59 IST
   

ಗೃಹ ಬಳಕೆಯ, 14.2 ಕೆ.ಜಿ. ತೂಕದ ಸಬ್ಸಿಡಿರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತೊಮ್ಮೆ ಏರಿಕೆಯಾಗಿದೆ. ಪ್ರತಿ ಸಿಲಿಂಡರ್ ಬೆಲೆಯು ₹1,053ರಿಂದ (ದೆಹಲಿ ನಗರಕ್ಕೆ ಅನ್ವಯಿಸಿ) ₹1,103ಗೆ ಏರಿಕೆಯಾಗಿದೆ. ಈ ಬಾರಿಯ ಏರಿಕೆಯ ಪ್ರಮಾಣ ಶೇ 4.7ರಷ್ಟು. ಹಲವು ವರ್ಷಗಳಿಂದ ಸಿಲಿಂಡರ್ ಬೆಲೆ ಏರುಮುಖವಾಗಿಯೇ ಇದೆ.

ಕಳೆದ ಮೂರು ವರ್ಷಗಳ ಅವಧಿಯ ದತ್ತಾಂಶಗಳನ್ನು ಗಮನಿಸಿದರೆ, ಸಿಲಿಂಡರ್ ಬೆಲೆಯಲ್ಲಿ ಸರಿಸುಮಾರು ಒಂದು ಪಟ್ಟು ಹೆಚ್ಚಳ ಕಂಡುಬಂದಿದೆ. ಮೂರು ವರ್ಷಗಳ ಹಿಂದೆ ಅಂದರೆ, 2020ರ ಮೇ ತಿಂಗಳಲ್ಲಿ ಪ್ರತಿ ಎಲ್‌ಪಿಜಿ ಸಿಲಿಂಡರ್ ಬೆಲೆ ₹581 ಇತ್ತು. 2023ರ ಮಾರ್ಚ್‌ನಲ್ಲಿ ಸಿಲಿಂಡರ್ ಬೆಲೆ ₹1,103ಕ್ಕೆ ತಲುಪಿದೆ. ಅಂದರೆ, ಶೇ 90ರಷ್ಟು ಬೆಲೆ ಹೆಚ್ಚಳವಾಗಿದೆ.

ಕಳೆದ ಒಂದು ವರ್ಷದ ದತ್ತಾಂಶವನ್ನು ಗಮನಿಸಿದರೆ, ಸಿಲಿಂಡರ್ ಬೆಲೆಯಲ್ಲಿ ಶೇ 16ರಷ್ಟು ಏರಿಕೆ ದಾಖಲಾಗಿದೆ. 2022ರ ಮಾರ್ಚ್‌ನಲ್ಲಿ ₹950ಕ್ಕೆ ಸಿಗುತ್ತಿದ್ದ ಒಂದು ಸಿಲಿಂಡರ್‌ಗೆ ಸರಿಯಾಗಿ ಒಂದು ವರ್ಷದ ಬಳಿಕ, ₹1,103 ತೆರಬೇಕಿದೆ. ಎರಡು ವರ್ಷಗಳ ಹಿಂದೆ ಅಂದರೆ, 2021ರ ಮಾರ್ಚ್‌ನಲ್ಲಿ ಇದ್ದ ಬೆಲೆಗೆ ಹೋಲಿಸಿದರೆ, 2023ರ ಮಾರ್ಚ್‌ ಹೊತ್ತಿಗೆ ಶೇ 35ರಷ್ಟು ಬೆಲೆ ಏರಿಕೆ ಕಂಡುಬಂದಿದೆ. ಸಿಲಿಂಡರ್ ಬೆಲೆಯು ₹819ರಿಂದ ₹1,103ಕ್ಕೆ ಜಿಗಿದಿದೆ.

ADVERTISEMENT

2022ರ ಜುಲೈನಲ್ಲಿ ಕೊನೆಯದಾಗಿ ಸಿಲಿಂಡರ್ ಬೆಲೆ ಏರಿಸಲಾಗಿತ್ತು. ಅಲ್ಲಿಂದ ಎಂಟು ತಿಂಗಳ ಕಾಲ ಬೆಲೆ ಏರಿಕೆಯಾಗಿರಲಿಲ್ಲ. ಈ ಮೂರು ವರ್ಷಗಳ ಅವಧಿಯಲ್ಲಿ ದರ ಇಳಿಕೆಯಾಗಿದ್ದು ಒಮ್ಮೆ ಮಾತ್ರ. ಅದೂ ಅತ್ಯಲ್ಪ. 2021ರ ಮಾರ್ಚ್ ತಿಂಗಳಲ್ಲಿ ₹819 ಇದ್ದ ಸಿಲಿಂಡರ್ ಬೆಲೆಯನ್ನು ಏಪ್ರಿಲ್ ತಿಂಗಳಲ್ಲಿ ₹809ಕ್ಕೆ ತಗ್ಗಿಸಲಾಗಿತ್ತು. 10 ರೂಪಾಯಿ ಇಳಿಕೆಯ ಲಾಭ ಮೂರು ತಿಂಗಳಿಗೇ ಕರಗಿತ್ತು. ಅದೇ ವರ್ಷದ ಜುಲೈ ಹೊತ್ತಿಗೆ ಬೆಲೆಯನ್ನು ₹834ಕ್ಕೆ ಏರಿಸಲಾಯಿತು. ಇದೊಂದು ಪ್ರಕರಣವನ್ನು ಹೊರತುಪಡಿಸಿದರೆ, ಬೆಲೆ ಕಡಿಮೆಯಾಗಿದ್ದೇ ಇಲ್ಲ.

ವಾಣಿಜ್ಯ ಸಿಲಿಂಡರ್: 2 ವರ್ಷಗಳಲ್ಲಿ ₹805 ಹೆಚ್ಚಳ

ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಸಿಲಿಂಡರ್ ಬೆಲೆಯಲ್ಲಿ ಈ ಬಾರಿ ಶೇ 18ರಷ್ಟು ಹೆಚ್ಚಳ ಮಾಡಲಾಗಿದೆ. ₹1,917ಕ್ಕೆ ಸಿಗುತ್ತಿದ್ದ ಸಿಲಿಂಡರ್‌ ಬೆಲೆ ₹2,268ಕ್ಕೆ ಜಿಗಿದಿದೆ. ಅಂದರೆ ಪ್ರತಿ ಸಿಲಿಂಡರ್‌ಗೆ 351 ರೂಪಾಯಿಯನ್ನು ಹೆಚ್ಚುವರಿಯಾಗಿ ಪಾವತಿಸಬೇಕಿದೆ.

ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಏರಿಳಿತ ಸಾಮಾನ್ಯವಾಗಿದೆ. ಆದರೂ, ಹಿಂದಿನ ಎರಡು ವರ್ಷಗಳ ದತ್ತಾಂಶವನ್ನು ಗಮನಿಸಿದರೆ, ಶೇ 55ರಷ್ಟು ಏರಿಕೆ ಕಂಡುಬಂದಿದೆ. 2021ರ ಜನವರಿಯಲ್ಲಿ ₹1,463 ಪಾವತಿಸಿದರೆ 19 ಕೆ.ಜಿ.ಯ ಒಂದು ಸಿಲಿಂಡರ್ ಖರೀದಿಸಬಹುದಿತ್ತು. ಅದರೆ, ಈಗ ಅದೇ ಸಿಲಿಂಡರ್‌ಗೆ ₹2,268 ಪಾವತಿಸಬೇಕಿದೆ. ಅಂದರೆ ಈ ಎರಡು ವರ್ಷಗಳಲ್ಲಿ ₹805 ಬೆಲೆ ಹೆಚ್ಚಳವಾಗಿರುವುದನ್ನು ಗಮನಿಸಬಹುದು.

ಚುನಾವಣೆ ಸಮಯದಲ್ಲಿ ಬೆಲೆ ಇಳಿಸುವ ಹಾಗೂ ಫಲಿತಾಂಶದ ಬಳಿಕ ಬೆಲೆ ಏರಿಸುವ ಪ್ರವೃತ್ತಿ ಸಾಮಾನ್ಯವಾಗಿದೆ. 2022ರ ಫೆಬ್ರುವರಿಯಿಂದ ಮಾರ್ಚ್‌ ಅವಧಿಯಲ್ಲಿ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಿತು. ಈ ಅವಧಿಯಲ್ಲಿ ₹2,000 ಆಸುಪಾಸಿನಲ್ಲಿದ್ದ ಸಿಲಿಂಡರ್ ದರವು, ಫಲಿತಾಂಶ ಪ್ರಕಟವಾದ ಕೂಡಲೇ ಏರಿತು. ಏಪ್ರಿಲ್ ತಿಂಗಳಲ್ಲಿ ಸುಮಾರು ₹269ಯಷ್ಟು ಹೆಚ್ಚಳವಾಗಿ, ₹2,409ಕ್ಕೆ ತಲುಪಿತ್ತು.‌ ನಂತರ, 2022ರ ಮೇ ತಿಂಗಳಲ್ಲಿ ಸಿಲಿಂಡರ್ ಬೆಲೆ ಅತ್ಯಧಿಕ ಅಂದರೆ, ₹2,508ಕ್ಕೆ ತಲುಪಿತ್ತು. ಇದು ಈವರೆಗಿನ ದುಬಾರಿ ದರ ಎನಿಸಿದೆ.

ಎಲ್‌ಪಿಜಿ ಬಳಕೆ ಇಳಿಕೆ

ದೇಶದಲ್ಲಿ ಎಲ್‌ಪಿಜಿ ಬಳಕೆ ಇಳಿಕೆಯಾಗಿದೆ. 2022ರ ಜನವರಿಯಲ್ಲಿ ಬಳಕೆಯಾಗಿದ್ದ ಮನೆ ಎಲ್‌ಪಿಜಿ ಪ್ರಮಾಣಕ್ಕೆ ಹೋಲಿಸಿದರೆ, 2023ರ ಜನವರಿಯಲ್ಲಿ ಬಳಕೆಯಾದ ಮನೆ ಎಲ್‌ಪಿಜಿಯಲ್ಲಿ ಶೇ 3.80ರಷ್ಟು ಇಳಿಕೆಯಾಗಿದೆ. ಈ ಅವಧಿಯಲ್ಲಿ ಮನೆಬಳಕೆ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ ಶೇ 17ರಷ್ಟು ಏರಿಕೆಯಾಗಿದೆ. ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಆದ ಏರಿಕೆಗೂ, ಎಲ್‌ಪಿಜಿ ಬಳಕೆಯಲ್ಲಿ ಆದ ಇಳಿಕೆಗೂ ಸಂಬಂಧವಿದೆ ಎಂದು ವಿಶ್ಲೇಷಿಸಲಾಗಿದೆ.

2022ರ ಜನವರಿಯಲ್ಲಿ ದೇಶದಾದ್ಯಂತ ಒಟ್ಟು 26 ಲಕ್ಷ ಟನ್‌ಗಳಷ್ಟು ಮನೆಬಳಕೆ ಎಲ್‌ಪಿಜಿ ಬಿಕರಿಯಾಗಿತ್ತು. ಅದು ಆವರೆಗಿನ ಗರಿಷ್ಠ ಪ್ರಮಾಣದ ಬಳಕೆಯಾಗಿತ್ತು. ಆದರೆ, ನಂತರದ ಪ್ರತಿ ತಿಂಗಳಲ್ಲಿ ಬಿಕರಿಯಾದ ಎಲ್‌ಪಿಜಿ ಪ್ರಮಾಣ ಭಾರಿ ಏರಿಳಿತದಿಂದ ಕೂಡಿತ್ತು. 2022ರ ಡಿಸೆಂಬರ್‌ನಲ್ಲಿ ಬಿಕರಿಯಾದ ಎಲ್‌ಪಿಜಿ ಪ್ರಮಾಣವೂ ಅದೇ ಮಟ್ಟವನ್ನು (26 ಲಕ್ಷ ಟನ್‌) ಮುಟ್ಟಿತ್ತಾದರೂ, 2023ರ ಜನವರಿಯಲ್ಲಿ 25.01 ಲಕ್ಷ ಟನ್‌ಗಳಿಗೆ ಇಳಿಕೆಯಾಗಿದೆ.

ದೇಶದಲ್ಲಿ ಡಿಸೆಂಬರ್‌ ಮತ್ತು ಜನವರಿಯಲ್ಲಿ ಚಳಿ ಅತ್ಯಧಿಕ ಮಟ್ಟದಲ್ಲಿ ಇರುತ್ತದೆ. ಆ ಅವಧಿಯಲ್ಲಿ ದೇಶದಾದ್ಯಂತ ಎಲ್‌ಪಿಜಿ ಮತ್ತು ಡೀಸೆಲ್‌ ಬಳಕೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಯಾವುದೇ ವರ್ಷದಲ್ಲಿ ಅತಿಹೆಚ್ಚು ಎಲ್‌ಪಿಜಿ ಬಿಕರಿಯಾಗುವುದು ಈ ಎರಡು ತಿಂಗಳಲ್ಲೆ. ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಬಿಕರಿಯಾದ ಎಲ್‌ಪಿಜಿಗಿಂತ, ಹೆಚ್ಚು ಎಲ್‌ಪಿಜಿ ಜನವರಿಯಲ್ಲಿ ಬಿಕರಿಯಾಗುತ್ತದೆ. 2021ರ ಡಿಸೆಂಬರ್‌ನಲ್ಲಿ 25 ಲಕ್ಷ ಟನ್‌ಗಳಷ್ಟು ಎಲ್‌ಪಿಜಿ ಬಿಕರಿಯಾಗಿದ್ದರೆ, 2022ರ ಜನವರಿಯಲ್ಲಿ 26 ಲಕ್ಷ ಟನ್‌ಗಳಷ್ಟು ಎಲ್‌ಪಿಜಿ ಬಿಕರಿಯಾಗಿತ್ತು. ಆದರೆ 2022ರ ಡಿಸೆಂಬರ್‌ನಲ್ಲಿ 26 ಲಕ್ಷ ಟನ್‌ ಎಲ್‌ಪಿಜಿ ಬಿಕರಿಯಾಗಿದ್ದರೆ, 2023ರ ಜನವರಿಯಲ್ಲಿ ಆ ಪ್ರಮಾಣ 25.01 ಲಕ್ಷ ಟನ್‌ಗಳಿಗೆ ಕುಸಿದಿದೆ. ಅಂದಾಜು 1 ಲಕ್ಷ ಟನ್‌ಗಳಷ್ಟು ಎಲ್‌ಪಿಜಿ ಬಳಕೆ ಕಡಿಮೆಯಾಗಿದೆ.

ಎಲ್‌ಪಿಜಿ ಬೆಲೆಯಲ್ಲಿ ಆಗುವ ಬದಲಾವಣೆಯು, ಎಲ್‌ಪಿಜಿ ಬಳಕೆಯನ್ನು ಪ್ರಭಾವಿಸುತ್ತದೆ. 2022ರ ಮಾರ್ಚ್‌ನಲ್ಲಿ ಮನೆ ಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಏರಿಕೆಯಾಗಿತ್ತು. ಆಗ ಎಲ್‌ಪಿಜಿ ಬಳಕೆಯಲ್ಲಿ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿತ್ತು. 2022ರ ಮಾರ್ಚ್‌, ಏಪ್ರಿಲ್‌ನಲ್ಲಿ ಪ್ರತಿ ತಿಂಗಳು ಬಿಕರಿಯಾದ ಎಲ್‌ಪಿಜಿ ಪ್ರಮಾಣ 22 ಲಕ್ಷ ಟನ್‌ಗಳಿಗೆ ಕುಸಿದಿತ್ತು.

ಸಹಾಯಧನ ಶೇ 93ರಷ್ಟು ಕಡಿತ

ಕೇಂದ್ರ ಸರ್ಕಾರವು ಎಲ್‌ಪಿಜಿಗೆ ನೀಡುತ್ತಿರುವ ಸಹಾಯಧನದಲ್ಲಿ ಭಾರಿ ಕಡಿತ ಮಾಡಿದೆ. 2020–21ರ ಬಜೆಟ್‌ನಲ್ಲಿ ಎಲ್‌ಪಿಜಿ ಸಹಾಯಧನಕ್ಕೆ ಮೀಸಲಿರಿಸಿದ್ದ ಅನುದಾನಕ್ಕೆ ಹೋಲಿಸಿದರೆ, 2023–24ರ ಬಜೆಟ್‌ನಲ್ಲಿ ಮೀಸಲಿರಿಸಿರುವ ಅನುದಾನದಲ್ಲಿ ಶೇ 93.5ರಷ್ಟು ಕಡಿತ ಮಾಡಲಾಗಿದೆ. ಆದರೆ ಸಹಾಯಧನವನ್ನು ಕಡಿತ ಮಾಡುತ್ತಿರುವ ಕಾರಣ, ಎಲ್‌ಪಿಜಿ ಬಳಕೆ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಆಧಾರ: ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ‘ಪೆಟ್ರೋಲಿಯಂ ಪ್ಲ್ಯಾನಿಂಗ್ ಅಂಡ್‌ ಅನಲಿಸಿಸ್ ಸೆಲ್‌’ನ ವರದಿಗಳು, ಪಿಟಿಐ, ಐಒಸಿಎಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.