ADVERTISEMENT

ಆಳ–ಅಗಲ | Assembly Elections: ಮಹಾ ‘ಹಣಾಹಣಿ’

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 20:54 IST
Last Updated 27 ಅಕ್ಟೋಬರ್ 2024, 20:54 IST
<div class="paragraphs"><p><em><strong>ಚುನಾವಣೆ</strong></em></p></div>

ಚುನಾವಣೆ

   

ಮಹಾರಾಷ್ಟ್ರದಲ್ಲಿ ಇದು ಚುನಾವಣೆಯ ಸಮಯ. ರಾಜ್ಯದ 288 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 20ರಂದು ಮತದಾನ ನಡೆಯಲಿದ್ದು, ಮತದಾರರನ್ನು ಆಕರ್ಷಿಸಲು ಆಡಳಿತಾರೂಢ ‘ಮಹಾಯುತಿ’ ಮೈತ್ರಿಕೂಟ ಮತ್ತು ಪ್ರತಿಸ್ಪರ್ಧಿ ಮೈತ್ರಿಕೂಟವಾದ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ವ ಪ್ರಯತ್ನಗಳನ್ನೂ ಮಾಡುತ್ತಿವೆ; ಜಾತಿ ಲೆಕ್ಕಾಚಾರ, ಕುಟುಂಬ ರಾಜಕಾರಣ, ಜನಪ್ರಿಯ ಘೋಷಣೆಗಳ ಮೊರೆ ಹೋಗಿವೆ. ಇದೇ ಹೊತ್ತಿಗೆ ಅತ್ತ ಜಾರ್ಖಂಡ್‌ನಲ್ಲೂ ಜೆಎಂಎಂ ಮೈತ್ರಿಕೂಟ ಮತ್ತು ಬಿಜೆಪಿ ನಡುವಿನ ಹಣಾಹಣಿಗೆ ಅಖಾಡ ಸಿದ್ಧಗೊಂಡಿದೆ

ಮಹಾರಾಷ್ಟ್ರದಲ್ಲಿ ಕಳೆದ ಬಾರಿ (2019ರಲ್ಲಿ) ನಡೆದಿದ್ದ ವಿಧಾನಸಭಾ ಚುನಾವಣೆಗೂ ಈಗ ನಡೆಯುತ್ತಿರುವ ಚುನಾವಣೆಗೂ ಭಾರಿ ವ್ಯತ್ಯಾಸವಿದೆ. ಕಳೆದ ಚುನಾವಣೆಯ ವೇಳೆ ರಾಜ್ಯದ ಮುಖ್ಯ ಪಕ್ಷಗಳಾದ ಶಿವಸೇನಾ ಮತ್ತು ಎನ್‌ಸಿಪಿ ವಿಭಜನೆಗೊಂಡಿರಲಿಲ್ಲ. ಶಿವಸೇನಾದಿಂದ ಏಕನಾಥ್ ಶಿಂದೆ, ಎನ್‌ಸಿಪಿಯಿಂದ ಅಜಿತ್ ಪವಾರ್ ಹೊರಹೋಗಿ ಪಕ್ಷಗಳನ್ನು ಒಡೆದು, ಬಿಜೆಪಿ ಜತೆ ಸೇರಿ ‘ಮಹಾಯುತಿ’ ಹುಟ್ಟುಹಾಕಿ ಅಧಿಕಾರದ ಗದ್ದುಗೆಯನ್ನೂ ಹಿಡಿದದ್ದು ರಾಷ್ಟ್ರ ಮಟ್ಟದಲ್ಲಿಯೂ ಭಾರಿ ಸದ್ದು ಮಾಡಿತ್ತು. ಮೂಲ ಪಕ್ಷ ಯಾವುದು ಎನ್ನುವುದು ನ್ಯಾಯಾಲಯದ ಅಂಗಳದಲ್ಲಿ ನಿರ್ಣಯವಾಗಬೇಕಾಯಿತು. ಅದರ ಸೈದ್ಧಾಂತಿಕ ಮತ್ತು ನೈತಿಕ ಆಯಾಮಗಳ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು.

ADVERTISEMENT

ಅದರ ನಂತರ ಆರು ತಿಂಗಳ ಹಿಂದೆ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 48 ಸ್ಥಾನಗಳ ಪೈಕಿ ಮಹಾಯುತಿ 17 ಮತ್ತು ಎಂವಿಎ 31 ಸ್ಥಾನ ಗಳಿಸಿದ್ದವು. ಅದರಿಂದ ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಮತ್ತು ಶರದ್ ಪವಾರ ನೇತೃತ್ವದ ಎನ್‌ಸಿಪಿ ಒಂದಿಷ್ಟು ಹುರುಪಿನಿಂದ ಇದ್ದವು. ಆದರೆ, ಹರಿಯಾಣದಲ್ಲಿ ಬಿಜೆಪಿ ನಿರೀಕ್ಷೆ ಮೀರಿ ಮೂರನೇ ಬಾರಿ ಅಧಿಕಾರ ಹಿಡಿದಿರುವುದು ಕಾಂಗ್ರೆಸ್‌ ನೇತೃತ್ವದ ಮಹಾ ವಿಕಾಸ ಆಘಾಡಿಗೆ (ಎಂವಿಎ) ಎಚ್ಚರಿಕೆಯ ಸಂದೇಶ ರವಾನಿಸಿದೆ.    

ಕುಟುಂಬ ರಾಜಕಾರಣ: ಎರಡೂ ಕೂಟಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಾಗುತ್ತಿದೆ. ಸಮಯ ಸಿಕ್ಕಿದಾಗಲೆಲ್ಲ ಕುಟುಂಬ ರಾಜಕಾರಣದ ವಿರುದ್ಧ ತೀವ್ರ ಟೀಕೆ ಮಾಡುತ್ತಿದ್ದ ಬಿಜೆಪಿಯಿಂದ ಹಿಡಿದು ಕಾಂಗ್ರೆಸ್, ಶಿವಸೇನಾ ಮತ್ತು ಎನ್‌ಸಿಪಿಯ ಎರಡೂ ಬಣಗಳಲ್ಲಿಯೂ ಹಾಲಿ/ಮಾಜಿ ಸಚಿವರು, ಶಾಸಕರು/ಸಂಸದರ ಕುಟುಂಬದವರು, ಹತ್ತಿರದ ಬಂಧುಗಳನ್ನು ಕಣಕ್ಕಿಳಿಸಲಾಗಿದೆ. ಮಹಾಯುತಿ ಮತ್ತು ಎಂವಿಎ ಎರಡೂ ಮೈತ್ರಿಕೂಟಗಳಲ್ಲಿ ರಾಜಕೀಯ ಕುಟುಂಬಗಳಿಗೆ ಸೇರಿದ ನೂರಕ್ಕೂ ಹೆಚ್ಚು ಮಂದಿಗೆ ಟಿಕೆಟ್ ನೀಡಲಾಗಿದೆ.

ಬಾರಾಮತಿ ಕ್ಷೇತ್ರದಲ್ಲಿ ಪವಾರ್ ಸಂಬಂಧಿಗಳಲ್ಲೇ ಜಿದ್ದಾಜಿದ್ದಿ ಏರ್ಪಟ್ಟಿದೆ. ಎನ್‌ಸಿಪಿ ಮುಖಂಡ ಅಜಿತ್ ಪವಾರ್ ವಿರುದ್ಧ ಅವರ ಸಹೋದರ ಶ್ರೀನಿವಾಸ ಪವಾರ್ ಮಗ ಯುಗೇಂದ್ರ ಪವಾರ್ ಅವರನ್ನು ಎನ್‌ಸಿಪಿ (ಶರದ್‌ ಪವಾರ್ ಬಣ) ಕಣಕ್ಕಿಳಿಸಿದೆ. 

ಜಾತಿ ಲೆಕ್ಕಾಚಾರ: 2024ರ ಲೋಕಸಭಾ ಚುನಾವಣೆಯಲ್ಲಿ ಆದಂತೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಜಾತಿ ವಿವಾದಗಳು ಪ್ರಭಾವ ಬೀರಲಿವೆ ಎನ್ನಲಾಗುತ್ತಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಮರಾಠ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಮನೋಜ್ ಜಾರಂಗೆ ಮತ್ತು ಒಬಿಸಿ ಸಂಘಟನಾ ಸೇನಾ ಸಂಸ್ಥಾಪಕ ಲಕ್ಷ್ಮಣ್ ಹಾಕೆ ತಮ್ಮ ಬೇಡಿಕೆಗಳನ್ನು ಪಕ್ಷಗಳ ಮುಂದೆ ಮಂಡಿಸಿದ್ದಾರೆ. ದೇವೇಂದ್ರ ಫಡಣವೀಸ್ ಅವರು ಮರಾಠರಿಗೆ ಮೀಸಲಾತಿ ತಡೆದಿದ್ದಾರೆ ಎಂದು ಬಹಿರಂಗವಾಗಿ ದೂರುತ್ತಿದ್ದಾರೆ. ದಲಿತ, ಮುಸ್ಲಿಂ, ಹಿಂದುಳಿದವರೆಲ್ಲರೂ ಒಂದಾಗಬೇಕು ಎಂದು ಅವರು ಕರೆ ನೀಡಿದ್ದಾರೆ. ಮರಾಠವಾಡದಲ್ಲಿ ಮರಾಠರು ಮತ್ತು ಒಬಿಸಿಗಳ ನಡುವೆ ಸಂಘರ್ಷ ನಡೆಯುತ್ತಿದ್ದು, ಇದು ಎಂವಿಎಗಿಂತ ಮಹಾಯುತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದರ ನಡುವೆಯೇ, ಮರಾಠರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಜಾರಂಗೆ ಅವರು ಘೋಷಿಸಿದ್ದಾರೆ. ಹಾಗೇನಾದರೂ ಆದರೆ ಮತ ವಿಭಜನೆಯಾಗಿ ತಮಗೆ ಅನುಕೂಲವಾಗಲಿದೆ ಎನ್ನುವುದು ಮಹಾಯುತಿ ಲೆಕ್ಕಾಚಾರ.

ಎಂವಿಎಯು ಮಹಾರ್, ಮುಸ್ಲಿಂ, ಮರಾಠರನ್ನು ನೆಚ್ಚಿಕೊಂಡಿದೆ. ಹಾಗಾಗಿ, ಮರಾಠರನ್ನು ಬಿಟ್ಟು ಇತರ ಸಮುದಾಯಗಳತ್ತ ಗಮನ ಕೇಂದ್ರೀಕರಿಸಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಮಹಾಯುತಿ ಲೆಕ್ಕಾಚಾರ. ಹರಿಯಾಣದಲ್ಲಿ ಜಾಟರನ್ನು ನೆಚ್ಚಿಕೊಂಡಿದ್ದ ಕಾಂಗ್ರೆಸ್ ವಿರುದ್ಧ ಇತರ ಒಬಿಸಿ ಮತಗಳ ನೆರವಿನಿಂದ ಬಿಜೆ‍ಪಿ ಗೆದ್ದಿತ್ತು. ಅದೇ ಸೂತ್ರವನ್ನು ಮಹಾರಾಷ್ಟ್ರದಲ್ಲಿಯೂ ಅನ್ವಯಿಸಲು ಮಹಾಯುತಿ ಹೊರಟಿದೆ. ಎಂವಿಎ ದಲಿತ, ಮುಸ್ಲಿಂ, ಕುಣಬಿ (ಮರಾಠ ಉಪಪಂಗಡ) ಸಮುದಾಯಗಳನ್ನು ನೆಚ್ಚಿಕೊಂಡಿದ್ದರೆ, ಮಹಾಯುತಿ ಮಾಲಿ, ಧನಗಾರ, ವಂಜಾರಿ ಮುಂತಾದ ಒಬಿಸಿ ಮತಗಳನ್ನು ನೆಚ್ಚಿಕೊಂಡಿದೆ.   

ಎಂವಿಎ ಸೀಟು ಹಂಚಿಕೆ ಮಾತುಕತೆ ಬಹುತೇಕ ಅಂತಿಮಗೊಂಡಿದ್ದು, ಕಾಂಗ್ರೆಸ್, ಶಿವಸೇನಾ (ಯುಬಿಟಿ) ಮತ್ತು ಎನ್‌ಸಿಪಿ (ಎಸ್‌ಪಿ) ನಡುವೆ ಸಮನಾದ ಹಂಚಿಕೆ ನಡೆದಿದೆ ಎನ್ನಲಾಗಿದೆ. ಯಾವ ಪ್ರಾಂತ್ಯದಲ್ಲಿ ಯಾವ ಪಕ್ಷದ ಹಿಡಿತ ಹೆಚ್ಚಾಗಿದೆಯೋ ಅಲ್ಲಿ ಆ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಟಿಕೆಟ್‌ಗಳನ್ನು ನೀಡಲಾಗಿದೆ. ಇದರಿಂದ ಹೆಚ್ಚು ಮಂದಿ ಗೆಲ್ಲಲು ಅನುಕೂಲವಾಗಲಿದೆ ಎನ್ನುವುದು ಲೆಕ್ಕಾಚಾರ. ಇತ್ತೀಚೆಗೆ ಹತ್ಯೆಯಾದ ಬಾಬಾ ಸಿದ್ದೀಕಿ ಮಗ ಜೀಶನ್ ಸಿದ್ದೀಕಿ ಬಾಂದ್ರಾ ಪೂರ್ವದಿಂದ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿಯಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

‘ಇಂಡಿಯಾ’ ಕೂಟದ ಮಿತ್ರಪಕ್ಷಗಳ ಪೈಕಿ ಸಿಪಿಎಂಗೆ ಎರಡು ಸ್ಥಾನ ಬಿಟ್ಟುಕೊಡಲಾಗಿದೆ. ಆದರೆ, ಸಮಾಜವಾದಿ ಪಕ್ಷವು (ಎಸ್‌ಪಿ) ಕೂಡ ಒಂದಷ್ಟು ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಬೇಡಿಕೆ ಇಟ್ಟಿದ್ದು, ಒಪ್ಪಂದ ಕುದುರದಿದ್ದರೆ 25 ಕ್ಷೇತ್ರಗಳಲ್ಲಿ ಪ‍ಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ. ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ ಬಹುಜನ ಆಘಾಡಿ (ವಿಬಿಎ) ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. 

ಮತ್ತೊಮ್ಮೆ ಗದ್ದುಗೆ ಏರಲು ಹೋರಾಟ ನಡೆಸುತ್ತಿರುವ ಮಹಾಯುತಿ ಕೂಟವು, ಚುನಾವಣೆಯ ದೃಷ್ಟಿಯಿಂದ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಮುಂಬೈನ ಐದು ಟೋಲ್ ಪ್ಲಾಜಾಗಳಲ್ಲಿ ಲಘು ವಾಹನಗಳಿಗೆ ಶುಲ್ಕ ರದ್ದುಪಡಿಸಿದ್ದು, ಇದು ಮುಂಬೈ ನಗರದಲ್ಲಿ ತನಗೆ ಲಾಭ ತರುತ್ತದೆ ಎನ್ನುವುದು ಅದರ ಲೆಕ್ಕಾಚಾರ. ಹಾಗೆಯೇ ದಲಿತರಲ್ಲಿ ಎಡಗೈ ಪಂಗಡದ ಮೇಲೆ ಮಹಾಯುತಿ ಕೂಟವು ಕಣ್ಣು ನೆಟ್ಟಿದೆ; ಒಳಮೀಸಲಾತಿಯ ಜಾರಿ ಸಂಬಂಧ ಸರ್ಕಾರವು ಸಮಿತಿಯೊಂದನ್ನು ರಚಿಸಿರುವುದೂ ಸೇರಿದಂತೆ ಮಾತಂಗ ಸಮುದಾಯಕ್ಕೆ ಹಲವು ಯೋಜನೆಗಳನ್ನು ಘೋಷಿಸಿದೆ.

ಜಾರ್ಖಂಡ್‌

ಬುಡಕಟ್ಟು ಜನರೇ ಹೆಚ್ಚಾಗಿರುವ ಜಾರ್ಖಂಡ್‌ನ ವಿಧಾನಸಭಾ ಚುನಾವಣೆಯು ಈ ಬಾರಿ ಕುತೂಹಲ ಕೆರಳಿಸಿದೆ. 2019ರ ಚುನಾವಣೆಯಲ್ಲಿ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಮೈತ್ರಿಕೂಟವು ಹಿಂದಿನ ಅವಧಿಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗೆ ಸೋಲುಣಿಸಿ, ಅದು ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವಂತೆ ಮಾಡಿತ್ತು. ಈ ಚುನಾವಣೆಯಲ್ಲೂ ಜೆಎಂಎಂ ಮತ್ತು ಬಿಜೆಪಿಯ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. 

ಜೆಎಂಎಂ ಗೆಲುವಿನ ಲೆಕ್ಕಾಚಾರ: ಬುಡಕಟ್ಟು ಪ್ರದೇಶದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರುವ ಹೇಮಂತ್‌ ಸೊರೇನ್‌ ನೇತೃತ್ವದ ಜೆಎಂಎಂಗೆ ಕಾಂಗ್ರೆಸ್‌, ಆರ್‌ಜೆಡಿ, ಎಡಪಕ್ಷಗಳು ಸೇರಿದಂತೆ ಇಂಡಿಯಾ ಕೂಟದಲ್ಲಿ ಗುರುತಿಸಿಕೊಂಡಿರುವ ಪಕ್ಷಗಳ ಬೆಂಬಲ ಇದೆ. ಮೈತ್ರಿಕೂಟವು ಈ ಬಾರಿ ಮತ್ತೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿದೆ. 

ಮಹಿಳೆಯರಿಗೆ ತಿಂಗಳಿಗೆ ಧನ ಸಹಾಯ ನೀಡುವ (₹1,000) ‘ಮುಯಿಯಾ ಸಮ್ಮಾನ್‌ ಯೋಜನೆ’, ರಾಜ್ಯದ ಬಡ ಜನರಿಗೆ ಮನೆಗಳನ್ನು ನಿರ್ಮಿಸಿಕೊಡುವ ‘ಅಬುವಾ ಅವಾಸ್‌ ಯೋಜನೆ’ ಸೇರಿದಂತೆ ವಿವಿಧ ಜನ ಕಲ್ಯಾಣ ಯೋಜನೆಗಳು ಪಕ್ಷಕ್ಕೆ ಮತಗಳನ್ನು ತರಲಿವೆ ಎಂಬ ನಿರೀಕ್ಷೆಯಲ್ಲಿ ಜೆಎಂಎಂ ಇದೆ. ಮುಖ್ಯಮಂತ್ರಿಯಾಗಿದ್ದ ಹೇಮಂತ್‌ ಸೊರೇನ್‌ ಅವರನ್ನು ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿರುವುದು ಅನುಕಂಪದ ಅಲೆ ಸೃಷ್ಟಿಸಿದ್ದು, ಚುನಾವಣೆಯಲ್ಲಿ ಅದು ಪಕ್ಷಕ್ಕೆ ವರವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಮುಖಂಡರಿದ್ದಾರೆ. ಹೇಮಂತ್‌ ಸೊರೇನ್‌ ಅವರ ಪತ್ನಿ ಕಲ್ಪನಾ ಸೊರೇನ್‌ ಕೂಡ ಅಖಾಡಕ್ಕೆ ಇಳಿದಿದ್ದಾರೆ.

ನಗರ ಪ್ರದೇಶಗಳಲ್ಲಿ ಪಕ್ಷಕ್ಕೆ ಹೆಚ್ಚು ಬೆಂಬಲ ಇಲ್ಲದಿರುವುದು, ಪಕ್ಷ ಅಧಿಕಾರದಲ್ಲಿದ್ದರೂ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಲು ಸಾಧ್ಯವಾಗದಿರುವುದು, ಹೇಮಂತ್‌ ಸೊರೇನ್‌ ಬಂಧನದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದ ಚಂಪೈ ಸೊರೇನ್‌ ಬಿಜೆಪಿ ಸೇರಿರುವುದು ಚುನಾವಣೆಯಲ್ಲಿ ಜೆಎಂಎಂನ ಕಳವಳವನ್ನು ಹೆಚ್ಚಿಸಬಹುದು ಎನ್ನಲಾಗುತ್ತಿದೆ.  

2014ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ (ಆರು ಸ್ಥಾನಗಳು) ಜೆಎಂಎಂನ ಮೈತ್ರಿ ಪಕ್ಷ ಕಾಂಗ್ರೆಸ್‌ 2019ರಲ್ಲಿ 16 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಉತ್ತಮ ಪ್ರದರ್ಶನ ನೀಡಿತ್ತು. ಈ ಬಾರಿಯೂ ಅದೇ ರೀತಿಯ ಫಲಿತಾಂಶ ಪುನರಾವರ್ತನೆಯಾಗುವ ವಿಶ್ವಾಸವನ್ನು ಕಾಂಗ್ರೆಸ್‌ ನಾಯಕತ್ವ ಹೊಂದಿದೆ. 

ಗೆಲುವಿನ ವಿಶ್ವಾಸದಲ್ಲಿ ಬಿಜೆಪಿ: ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಏರಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಬಿಜೆಪಿಯು ಜೆಎಂಎಂನ ಪ್ರಮುಖ ಮುಖಂಡ, ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಹೇಮಂತ್‌ ಸೊರೇನ್‌ ಅವರನ್ನು ಇ.ಡಿ ಬಂಧಿಸಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಿರುವ ಬಿಜೆಪಿ, ಜೆಎಂಎಂ ನೇತೃತ್ವದ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಾ ಅಭಿವೃದ್ಧಿಗಾಗಿ ತನಗೆ ಮತ ನೀಡುವಂತೆ ಕೇಳುತ್ತಿದೆ. ಚುನಾವಣೆ ಘೋಷಣೆಗೂ ಮುನ್ನವೇ ಕೇಂದ್ರ ಸರ್ಕಾರವು ರಾಜ್ಯದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದೆ. 

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಜನರ ಮತ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ನೆಚ್ಚಿಕೊಂಡಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ತಾರಾ ಪ್ರಚಾರಕರಲ್ಲಿ ಒಬ್ಬರಾಗಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 14 ಸ್ಥಾನಗಳ ಪೈಕಿ ಎಂಟು ಸ್ಥಾನಗಳನ್ನು ಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಶೇ44.60ರಷ್ಟು ಮತಗಳನ್ನು ಗಳಿಸಿತ್ತು. ಅದೇ ಮಾದರಿಯ ಫಲಿತಾಂಶವನ್ನು ಪಕ್ಷ ನಿರೀಕ್ಷಿಸುತ್ತಿದೆ. ಪ್ರಬಲ ಕಾರ್ಯಕರ್ತರ ಪಡೆ ಅದಕ್ಕಿರುವ ದೊಡ್ಡ ಶಕ್ತಿಯಾದರೆ, ನಗರ ಕೇಂದ್ರಿತ ಪಕ್ಷ, ಬುಡಕಟ್ಟು ಸಮುದಾಯ, ಮುಸ್ಲಿಂ ಮತ್ತು ದಲಿತ ವಿರೋಧಿ ಎಂಬ ಹಣೆ‍‍ಪಟ್ಟಿ ಅದರ ದೌರ್ಬಲ್ಯ ಎಂದು ವಿಶ್ಲೇಷಿಸಲಾಗುತ್ತಿದೆ.

ಆಧಾರ: ‍ಪಿಟಿಐ, ಚುನಾವಣಾ ಆಯೋಗದ ವೆಬ್‌ಸೈಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.