ಪಾಕಿಸ್ತಾನದ ಒಬ್ಬ ಪ್ರಧಾನಿಯೂ ಐದು ವರ್ಷಗಳ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಿದ ಇತಿಹಾಸವಿಲ್ಲ. ಹಾಲಿ ಪ್ರಧಾನಿ ಇಮ್ರಾನ್ ಖಾನ್ ಅವರ ವಿಷಯದಲ್ಲೂ ಇದೇ ಪುನರಾವರ್ತನೆಯಾಗುವುದು ನಿಚ್ಚಳವಾಗಿದೆ. ಪಾಕಿಸ್ತಾನದಲ್ಲಿ ಈವರೆಗೆ ಪ್ರಧಾನಿಯಾಗಿದ್ದವರಲ್ಲಿ ಬಹುತೇಕ ಎಲ್ಲರೂ, ಐದು ವರ್ಷಕ್ಕಿಂತ ಮೊದಲೇ ಅಧಿಕಾರ ತೊರೆದಿದ್ದಾರೆ ಅಥವಾ ಅವರು ಅಧಿಕಾರ ತೊರೆಯುವಂತೆ ಮಾಡಲಾಗಿದೆ.
ಕೆಲವು ಪ್ರಧಾನಿಗಳು ಅಧಿಕಾರದಲ್ಲಿ ಇದ್ದಾಗಲೇ ಹತ್ಯೆಯಾಗಿದ್ದಾರೆ. ಕೆಲವರನ್ನು ಪಾಕಿಸ್ತಾನದ ಸೇನೆ ಬೆಂಬಲಿತ ಅಧ್ಯಕ್ಷರು ವಜಾ ಮಾಡಿದ್ದಾರೆ. ಕೆಲವರು ಭ್ರಷ್ಟಾಚಾರದ ಆರೋಪ ಹೊತ್ತು ಅಧಿಕಾರದಿಂದ ಇಳಿದಿದ್ದಾರೆ. ಇನ್ನೂ ಕೆಲವರು ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿ ಅಧಿಕಾರ ಕಳೆದುಕೊಂಡಿದ್ದಾರೆ. ಈ ಹಿಂದಿನ ಪ್ರಧಾನಿ ನವಾಜ್ ಷರೀಫ್ ಅವರು ಭ್ರಷ್ಟಾಚಾರ ಮತ್ತು ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಗುರಿಯಾಗಿ ಅಧಿಕಾರ ಕಳೆದುಕೊಂಡಿದ್ದರು.
ಐದು ವರ್ಷಕ್ಕಿಂತ ಮೊದಲೇ ಅಧಿಕಾರ ಕಳೆದುಕೊಳ್ಳುತ್ತಿದ್ದರೂ, ಇಮ್ರಾನ್ ಖಾನ್ ಅವರು ಈ ಯಾವ ಸಾಲಿಗೂ ಸೇರುತ್ತಿಲ್ಲ. ಈಗಾಗಲೇ ಬಹುಮತ ಕಳೆದುಕೊಂಡಿರುವ ಇಮ್ರಾನ್ ಖಾನ್ ಅವರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿವೆ. ಈ ಗೊತ್ತುವಳಿಯನ್ನು ಇದೇ ಸೋಮವಾರ ಮತಕ್ಕೆ ಹಾಕಲಾಗುತ್ತಿದೆ.
ಇಮ್ರಾನ್ ಖಾನ್ ಅವರು ವಿಶ್ವಾಸ ಸಾಬೀತು ಮಾಡದೇ ಇದ್ದರೆ, ಅವರ ಸರ್ಕಾರ ಪತನವಾಗಲಿದೆ. ಆದರೆ ಇದ್ಯಾವುದಕ್ಕೂ ಇಮ್ರಾನ್ ಅವಕಾಶ ನೀಡುವುದಿಲ್ಲ ಎಂದು ಅವರ ಆಪ್ತರು ಹೇಳುತ್ತಿದ್ದಾರೆ. ಜತೆಗೆ ಪಾಕಿಸ್ತಾನ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸುವಂತೆ ಶಿಫಾರಸು ಮಾಡಿ, ಅವಧಿಗೂ ಮುನ್ನವೇ ಚುನಾವಣೆಗೆ ಹೋಗುವ ಆಯ್ಕೆಯನ್ನೂ ಮುಕ್ತವಾಗಿ ಇರಿಸಿಕೊಂಡಿದ್ದಾರೆ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ. ಆದರೆ, ಬಹುಮತ ಸಾಬೀತು ಮಾಡುವ ಮುನ್ನವೇ ಇಮ್ರಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ವಿಶ್ವಾಸಮತ ನಿರ್ಣಯವನ್ನು ಸಂಸತ್ತಿನಲ್ಲಿ ಎದುರಿಸುತ್ತೇನೆ ಎಂದು ಇಮ್ರಾನ್ ಹೇಳಿದ್ದಾರೆ. ಈ ಮೂರರಲ್ಲಿ ಏನು ಸಂಭವಿಸಿದರೂ, ಹೊಸ ರೀತಿಯಲ್ಲಿ ಅಧಿಕಾರ ಕಳೆದುಕೊಂಡ ಪ್ರಧಾನಿಯ ಸಾಲಿಗೆ ಇಮ್ರಾನ್ ಖಾನ್ ಸೇರಲಿದ್ದಾರೆ.
ಇಮ್ರಾನ್ ಖಾನ್‌ಗೆ ಮುಳುವಾದ ಆರ್ಥಿಕತೆ
ದೇಶದ ಆರ್ಥಿಕ ಪರಿಸ್ಥಿತಿಯು ಪಾಕಿಸ್ತಾನ ಸರ್ಕಾರವನ್ನು ಪತನದ ಅಂಚಿಗೆ ತಂದು ನಿಲ್ಲಿಸಿದೆ. 2018ರಲ್ಲಿ ‘ನಯಾ ಪಾಕಿಸ್ತಾನ’ದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಸರ್ಕಾರವು ನಾಲ್ಕು ವರ್ಷ ಕಳೆಯುವಷ್ಟರಲ್ಲಿ ಅಲ್ಲಿನ ಜನರಿಗೆ ಹೊರೆ ಎನಿಸಿದೆ.ಜನರು ಪ್ರಮುಖವಾಗಿ ಬೇಡಿಕೆಯಿಟ್ಟಿದ್ದ, ಬೆಲೆಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಯಿತು.
ಪ್ರಸಕ್ತ ಆರ್ಥಿಕ ವರ್ಷದನವೆಂಬರ್–ಫೆಬ್ರುವರಿ ಅವಧಿಯಲ್ಲಿ ಪಾಕಿಸ್ತಾನದ ಹಣದುಬ್ಬರವು ದಾಖಲೆಯ ಶೇ 12.2ಕ್ಕೆ ಏರಿಕೆಯಾಯಿತು. ದೇಶದ ಹದಗೆಟ್ಟಿರುವ ಹಣಕಾಸು ಪರಿಸ್ಥಿತಿಗೆ ಇದು ನಿದರ್ಶನ. ಹಣದುಬ್ಬರ ವಿಪರೀತ ಏರಿದ್ದರಿಂದ ದೇಶದಲ್ಲಿ ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ತೀವ್ರವಾಗಿ ಏರಿಕೆಯಾಯಿತು. ಇದರ ಅತ್ಯಂತ ಕೆಟ್ಟ ಪರಿಣಾಮ ಎದುರಿಸಿದ್ದು ದೇಶದ ಬಡಜನರು.
ಕಳೆದ ಜುಲೈ–ಅಕ್ಟೋಬರ್ ಅವಧಿಯಲ್ಲಿ ಶೇ 8.7ರಷ್ಟಿದ್ದ ಹಣದುಬ್ಬರವು ಈ ಪ್ರಮಾಣದಲ್ಲಿ ಏರಿಕೆಯಾಗಲುತೈಲಬೆಲೆ, ಆಹಾರ, ಅಗತ್ಯ ವಸ್ತುಗಳ ಬೆಲೆ ಏರಿಕೆಯಂತಹ ಅಂತರರಾಷ್ಟ್ರೀಯ ವಿದ್ಯಮಾನಗಳು ಕಾರಣವಾಗಿವೆ. ಈಗ ಉದ್ಭವವಾಗಿರುವ ರಾಜಕೀಯ ಅನಿಶ್ಚಿತತೆಯು ಇನ್ನಷ್ಟು ಬೆಲೆ ಏರಿಕೆಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸರಕು ಮತ್ತು ಸೇವೆಗಳ ರಫ್ತು ಪ್ರಮಾಣವು ಜನವರಿಯಲ್ಲಿ ನಿರೀಕ್ಷೆಗಿಂತ ಕಡಿಮೆ ಮಟ್ಟಕ್ಕೆ ಕುಸಿದಿತ್ತು. ಹಣಕಾಸು ವರ್ಷದ ಏಳು ತಿಂಗಳಲ್ಲಿ ಅನುದಾನಗಳು, ಸಬ್ಸಿಡಿ ಮೇಲಿನ ವೆಚ್ಚ ಏರಿಕೆಯಾಗಿದ್ದು, ಸಾರ್ವಜನಿಕ ವಲಯದ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಅಧಿಕ ಹಣವನ್ನು ವಿನಿಯೋಗಿಸಲಾಗಿದೆ.
ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವ ಉದ್ದೇಶದಿಂದ ಇಮ್ರಾನ್ ಖಾನ್ ಕೆಲವು ಅಚ್ಚರಿಯ ಕ್ರಮಗಳನ್ನು ತೆಗೆದುಕೊಂಡು ಕೈಸುಟ್ಟುಕೊಂಡರು. ಈ ನಾಲ್ಕು ವರ್ಷಗಳಲ್ಲಿ ಇಮ್ರಾನ್ ಅವರು ನಾಲ್ಕು ಹಣಕಾಸು ಸಚಿವರನ್ನು, 10ಕ್ಕೂ ಹೆಚ್ಚು ಹಣಕಾಸು ಕಾರ್ಯದರ್ಶಿಗಳನ್ನು ನೇಮಿಸಿಕೊಂಡಿದ್ದಾರೆ. ತೆರಿಗೆ ಮುಖ್ಯಸ್ಥರನ್ನು ಆಗಾಗ್ಗೆ ಬದಲಾಯಿಸಿ ಸುದ್ದಿಯಾಗಿದ್ದರು.
ಸಿಗದ ನೆರವು: ದೇಶದ ಆರ್ಥಿಕತೆಗೆ ಚೈತನ್ಯ ತುಂಬಲ ಉದ್ದೇಶಿಸಿದ್ದ ಇಮ್ರಾನ್, 2019ರಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಹಣಕಾಸು ನೆರವು ಕೋರಿದ್ದರು. ಐಎಂಎಫ್ ಷರತ್ತುಗಳನ್ನು ಪೂರೈಸಲು ವಿಫಲವಾಗಿದ್ದರಿಂದ ನೆರವು ಸಿಗಲಿಲ್ಲ.
ಕಳೆದ ವರ್ಷ, ತೈಲದರ, ವಿದ್ಯುತ್ ದರಗಳನ್ನು ಏರಿಸುವ ಮೂಲಕ ಇಮ್ರಾನ್ ಖಾನ್ ಅವರು ಬೊಕ್ಕಸ ತುಂಬಿಸಲು ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದರು. ಇದರಿಂದ, ಜೀವನ ನಡೆಸುವುದೇ ಕಷ್ಟವಾಗಿ, ಜನರ ಆಕ್ರೋಶ ಸ್ಫೋಟಗೊಂಡಿತು. ಹೀಗಾಗಿ ಏರಿಸಿದ್ದ ಬೆಲೆಗಳನ್ನು ಸರ್ಕಾರ ಇಳಿಸಬೇಕಾಯಿತು.
ತಕ್ಷಣಕ್ಕೆ ಅತ್ಯಗತ್ಯವಾಗಿ ಬೇಕಿರುವ 1 ಲಕ್ಷಕೋಟಿ ರೂಪಾಯಿ (600 ಕೋಟಿ ಡಾಲರ್) ಆರ್ಥಿಕ ನೆರವು (ಬೇಲ್‌ಔಟ್ ಪ್ಯಾಕೇಜ್) ನೀಡುವಂತೆ ಐಎಂಎಫ್ ಜೊತೆ ಮಾತುಕತೆಯನ್ನು ಸರ್ಕಾರ ಈಗಲೂ ಮುಂದುವರಿಸಿದೆ. ಈ ನೆರವಿನ ಭರವಸೆ ಸಿಗುವ ಮೊದಲೇ ಸರ್ಕಾರವು ಪತನದ ಅಂಚಿಗೆ ಬಂದು ನಿಂತಿದ್ದು, ಐಎಂಎಫ್ ನೆರವು ಡೋಲಾಯಮಾನವಾಗಿದೆ.
ಆರ್ಥಿಕ ಬಿಕ್ಕಟ್ಟೊಂದೇ ಕಾರಣವಲ್ಲ
ಆರ್ಥಿಕ ಬಿಕ್ಕಟ್ಟನ್ನು ನಿಯಂತ್ರಿಸಲು ವಿಫಲವಾಗಿದ್ದೇಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಪ್ರಮುಖ ಕಾರಣ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಆದರೆ, ಕಾರಣ ಇಷ್ಟು ಸರಳವಾಗಿಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಪಾಕಿಸ್ತಾನವನ್ನು ಅಥವಾ ಪಾಕಿಸ್ತಾನದ ಸರ್ಕಾರವನ್ನು ಮುನ್ನಡೆಸುವವರು ಯಾರು ಎಂಬುದು, ಪ್ರತಿ ಸರ್ಕಾರ ಬದಲಾವಣೆಯಾದಾಗಲೆಲ್ಲಾ ಬದಲಾಗುತ್ತದೆ. ಒಮ್ಮೆ ಪ್ರಧಾನಿ ಇವೆಲ್ಲವನ್ನೂ ನಿಯಂತ್ರಿಸಿದರೆ, ಮತ್ತೊಂದು ಅವಧಿಯಲ್ಲಿ ದೇಶದ ಅಧ್ಯಕ್ಷರು ಇಡೀ ಸರ್ಕಾರವನ್ನು ನಿಯಂತ್ರಿಸುತ್ತಾರೆ. ಈ ಎರಡೂ ಹುದ್ದೆಗಳ ಮಧ್ಯೆ ಅಧಿಕಾರ ಕೇಂದ್ರವು ಅನಧಿಕೃತವಾಗಿ ಅದಲುಬದಲಾಗುತ್ತಿರುತ್ತದೆ. ಆದರೆ ಈ ಎರಡೂ ಹುದ್ದೆಯಲ್ಲಿ ಇರುವವರನ್ನು ನಿಯಂತ್ರಿಸುವುದು ಪಾಕಿಸ್ತಾನ ಸೇನೆ ಎಂಬುದು ಮಾತ್ರ ನಿಶ್ಚಿತ. ಸೇನೆಯೊಂದಿಗೆ ವಿಶ್ವಾಸ ಉಳಿಸಿಕೊಂಡವರು ಮಾತ್ರ ಅಧಿಕಾರದಲ್ಲಿ ಉಳಿಯುತ್ತಾರೆ.
ಪ್ರಜಾಸತ್ತಾತ್ಮಕವಾಗಿ ಚುನಾವಣೆ ಎದುರಿಸಿ, ಆರಿಸಿ ಬಂದ ಇಮ್ರಾನ್ ಖಾನ್ ಅವರು ಈಚಿನವರೆಗೂ ಸರ್ಕಾರದ ಚುಕ್ಕಾಣಿಯನ್ನು ತಮ್ಮ ಬಳಿಯೇ ಭದ್ರವಾಗಿ ಇರಿಸಿಕೊಂಡಿದ್ದರು. ಅವರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಪಾಕಿಸ್ತಾನವು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಇತ್ತು. ಸಂಪತ್ತು ಕ್ರೋಡೀಕರಣಕ್ಕಾಗಿ ಅವರು ಆಸ್ತಿ ನಗದೀಕರಣದ ಮೊರೆ ಹೋಗಿದ್ದರು. ಪ್ರಧಾನಿ ಕಚೇರಿಯಲ್ಲಿ ಅನುಪಯುಕ್ತವಾಗಿ ಇದ್ದ ಹತ್ತಾರು ಐಷಾರಾಮಿ ಕಾರುಗಳನ್ನು ಹರಾಜಿಗಿಟ್ಟರು. ಹರಾಜಿನಲ್ಲಿ ಬಂದ ಮೊತ್ತವನ್ನು, ದೇಶದ ಬೊಕ್ಕಸಕ್ಕೆ ಜಮೆ ಮಾಡಿದರು. ‘ಇಮ್ರಾನ್ ಅವರು ಆಡಳಿತದಲ್ಲಿ ಆರ್ಥಿಕ ಶಿಸ್ತು ತರಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರ ಆಡಳಿತದಲ್ಲಿ ದೇಶದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಹೀಗಾಗಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ’ ಎಂದು ಪ್ರಮುಖ ವಿರೋಧ ಪಕ್ಷ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಹೇಳಿದೆ.
‘ಇದೆಲ್ಲಕ್ಕಿಂತ ಮುಖ್ಯವಾಗಿ ಸೇನೆಯ ಜತೆಗೆ ಉತ್ತಮ ಸಂಬಂಧ ಕಾಯ್ದುಕೊಳ್ಳದೇ ಇದ್ದದ್ದೇ ಇಮ್ರಾನ್ ಅವರ ಇಂದಿನ ಬಿಕ್ಕಟ್ಟಿಗೆ ಕಾರಣ’ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಪಾಕಿಸ್ತಾನದ ಆಡಳಿತವನ್ನು ಅಲ್ಲಿನ ಸೇನೆ ನಿಯಂತ್ರಿಸುತ್ತದೆ. ಸರ್ಕಾರದ ಯಾವುದೇ ನೀತಿಗಳಲ್ಲಿ ಆಗುವ ಬದಲಾವಣೆಯು, ಸೇನೆಯ ಬಲವನ್ನೂ ಬದಲಿಸುತ್ತದೆ. ಪಾಕಿಸ್ತಾನದ ಆರ್ಥಿಕತೆಯನ್ನು ಜಾಗತಿಕ ಮಾರುಕಟ್ಟೆಗೆ ಮುಕ್ತವಾಗಿಸುವ ನೀತಿಯು ಸೇನೆಯ ಹಿಡಿತವನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಆರ್ಥಿಕತೆಯನ್ನು ಬಲಪಡಿಸಲೇಬೇಕು ಎಂಬ ಇಮ್ರಾನ್ ಖಾನ್ ಅವರ ಹಠ, ಸೇನೆಯು ಅವರ ಮೇಲಿನ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿತು.
‘ಪ್ರಧಾನಿ ಇಮ್ರಾನ್ ಹೇಳಿದಂತೆಯೇ ಸೇನೆ ನಡೆದುಕೊಳ್ಳುತ್ತದೆ’ ಎಂದು ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ ಈಚೆಗೆ ಹೇಳಿದ್ದರು.ಆದರೆ ಈಗಿನ ಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಅವಿಶ್ವಾಸ ನಿರ್ಣಯ ಮಂಡನೆಯ ನಂತರ ಇಮ್ರಾನ್ ಖಾನ್, ಎರಡು ಬಾರಿ ಸೇನಾ ಮುಖ್ಯಸ್ಥರನ್ನು ತಾವೇ ಹೋಗಿ ಭೇಟಿ ಮಾಡಿದ್ದಾರೆ. ಮಂಗಳವಾರ ಸಂಜೆ ಇಮ್ರಾನ್ ಖಾನ್ ಅವರು ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ, ಭಾಷಣ ಮಾಡುವ ಅವಶ್ಯಕತೆ ಇಲ್ಲ ಎಂದು ಕೊನೆಯ ಕ್ಷಣದಲ್ಲಿ ಸೇನೆಯಿಂದ ಸೂಚನೆ ಬಂದಿತು. ಜನರಿಂದ ಚುನಾಯಿತರಾದ ಪ್ರಧಾನಿ ಇಮ್ರಾನ್ ಅವರು, ಸೇನೆಯ ಈ ಸೂಚನೆಯನ್ನು ಚಾಚೂತಪ್ಪದೇ ಪಾಲಿಸಿದರು. ಪಾಕಿಸ್ತಾನದಲ್ಲಿ ಚುನಾಯಿತ ಸರ್ಕಾರಕ್ಕಿಂತ, ಸೇನೆಯೇ ಹೆಚ್ಚು ಪ್ರಬಲ ಎಂಬುದು ಮತ್ತೊಮ್ಮೆ ಸಾಬೀತಾಯಿತು.
ಮುಂದಿನ ಪ್ರಧಾನಿ ಯಾರು?
2018ರ ಚುನಾವಣೆಯಲ್ಲಿ, 342 ಸದಸ್ಯಬಲದ ಪಾಕಿಸ್ತಾನದ ಕೆಳಮನೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ (ಪಾಕಿಸ್ತಾನ್ ತೆಹ್ರಿಕ್–ಎ–ಇನ್ಸಾಫ್) 155 ಸ್ಥಾನಗಳನ್ನು ಗಳಿಸಿತ್ತು. ಆದರೆ ಬಹುಮತಕ್ಕೆ 172 ಸ್ಥಾನಗಳು ಬೇಕಿದ್ದವು. ಇತರ 6 ಪಕ್ಷಗಳ 23 ಸದಸ್ಯರ ಬೆಂಬಲದೊಂದಿಗೆ ಸರಳ ಬಹುಮತದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು.
ಆರ್ಥಿಕ ಪರಿಸ್ಥಿತಿ, ಹಣದುಬ್ಬರ, ಬೆಲೆ ಏರಿಕೆ ಮೊದಲಾದ ವಿಚಾರಗಳು ಇಮ್ರಾನ್ ಸರ್ಕಾರವನ್ನು ಇಕ್ಕಟ್ಟಿಗೆ ತಳ್ಳಿದವು. ಈ ಕಾರಣಗಳನ್ನು ಇಟ್ಟುಕೊಂಡು ಇಮ್ರಾನ್ ಖಾನ್ ಪಕ್ಷದ 20ಕ್ಕೂ ಹೆಚ್ಚು ಸದಸ್ಯರು ಸರ್ಕಾರದ ವಿರುದ್ಧ ಬಂಡಾಯ ಎದ್ದರು. ಮೈತ್ರಿಕೂಟದ ಇತರ ಪಕ್ಷಗಳೂ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯಲು ಮುಂದಾಗಿವೆ. ಈ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಪಾಕಿಸ್ತಾನದ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿವೆ.ಪಕ್ಷದ ಭಿನ್ನಮತೀಯರು, ಮೈತ್ರಿಪಕ್ಷಗಳು ಹಾಗೂ ಪ್ರತಿಪಕ್ಷಗಳ ಸದಸ್ಯರು ಸೇರಿದಂತೆ 172 ಸಂಸದರುಇಮ್ರಾನ್ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿಯನ್ನು ಬೆಂಬಲಿಸಿದರೆ, ಸರ್ಕಾರ ಪತನವಾಗುವುದು ಖಚಿತ.
ದೇಶದ ಪ್ರಬಲ ಸೇನೆಯ ಜೊತೆಗೆ ಇಮ್ರಾನ್ ಖಾನ್ ಅವರ ಹಳಸಿರುವ ಸಂಬಂಧ ಹಾಗೂ ಐಎಸ್‌ಐ ಮುಖ್ಯಸ್ಥರ ನೇಮಕಾತಿ ಕುರಿತ ಅಸಮಾಧಾನಗಳೂ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಕಾರಣಗಳಾಗಿವೆ.
ಪ್ರತಿಪಕ್ಷ ಪಿಎಂಎಲ್–ಎನ್ ಮುಖ್ಯಸ್ಥ ಶಹಬಾಜ್ ಷರೀಫ್ ಹಾಗೂ ಪಿಪಿಪಿಯ ಬಿಲಾವರ್ ಭುಟ್ಟೊ ಅವರುಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಕೈಜೋಡಿಸಿದ್ದಾರೆ. ಈ ಎರಡೂ ಪಕ್ಷಗಳ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಶಹಬಾಜ್ ಅವರು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರ. ಬಿಲಾವಲ್ ಅವರು ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಮಗ. ಶಹಬಾಜ್ ಹಾಗೂ ಬಿಲಾವಲ್ ಅವರು ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಆಧಾರ: ಬಿಬಿಸಿ, ರಾಯಿಟರ್ಸ್, ಪಿಟಿಐ, ಎಎಫ್‌ಪಿ, ಪಾಕಿಸ್ತಾನ ಸಂಸತ್ ಜಾಲತಾಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.