ಚಿಕಿತ್ಸೆಗಾಗಿ ತಮ್ಮ ಬಳಿ ಬಂದ ರೋಗಿಗಳಿಗೆ ಪ್ರೀತಿ, ಶ್ರದ್ಧೆ, ಕಾಳಜಿಯಿಂದ ಆರೈಕೆ ಮಾಡಿ, ಅವರ ಕಾಯಿಲೆ ಗುಣಪಡಿಸಿ, ಪ್ರಾಣ ಉಳಿಸುವ ವೈದ್ಯರ ಸಂಖ್ಯೆ ದೊಡ್ಡದಿದೆ. ಆದರೆ, ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣಗಳು ವೈದ್ಯಕೀಯ ರಂಗದ ಮತ್ತೊಂದು ಮಗ್ಗುಲನ್ನು ತೆರೆದಿಡುತ್ತವೆ. ನಿರ್ಲಕ್ಷ್ಯದ ಪ್ರಕರಣಗಳು ವರದಿಯಾಗುತ್ತಿರುವ ರೀತಿ ಮತ್ತು ಈ ವಿಚಾರದಲ್ಲಿ ನೊಂದವರು ನ್ಯಾಯ ಪಡೆಯಲು ಇರುವ ತೊಡಕುಗಳನ್ನು ಗಮನಿಸಿದರೆ ಆತಂಕ ಉಂಟಾಗುತ್ತದೆ...
ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಕರ್ತವ್ಯಲೋಪವು ರೋಗಿಗಳನ್ನು ಶಾಶ್ವತ ಅಂಗವೈಕಲ್ಯಕ್ಕೆ, ಕೆಲವೊಮ್ಮೆ ಸಾವಿಗೂ ಈಡು ಮಾಡುತ್ತಿದೆ. ತಮಗೆ ಆದ ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯ ಪಡೆಯುವುದು ಕೂಡ ರೋಗಿಗಳ ಪಾಲಿಗೆ ಕಷ್ಟಸಾಧ್ಯವಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರಿನ ನಿದರ್ಶನವನ್ನೇ ತೆಗೆದುಕೊಂಡರೆ, 2015ರಿಂದ ಇಲ್ಲಿಯರೆಗೆ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ 25 ಎಫ್‌ಐಆರ್ ದಾಖಲಾಗಿವೆ. ಆದರೆ, ಯಾವ ಪ್ರಕರಣದಲ್ಲೂ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ.
ಕಾಯಿಲೆ ಬಂದ ವ್ಯಕ್ತಿ, ರೋಗ ಉಲ್ಬಣಗೊಂಡು, ಇಲ್ಲವೇ ಚಿಕಿತ್ಸೆಗೆ ಸ್ಪಂದಿಸದೇ ಸಾಯಬಹುದು. ಅದನ್ನು ವೈದ್ಯಕೀಯ ನಿರ್ಲಕ್ಷ್ಯ ಎನ್ನಲಾಗುವುದಿಲ್ಲ. ಆದರೆ, ವೈದ್ಯರು ತಮ್ಮ ಕರ್ತವ್ಯದ ನಿರ್ವಹಣೆಯಲ್ಲಿ ತೋರುವ ಉದಾಸೀನತೆ ಅಥವಾ ಲೋಪ ಮತ್ತು ಅದರಿಂದ ರೋಗಿಗೆ ಉಂಟಾಗುವ ಹಾನಿಯನ್ನು ವೈದ್ಯಕೀಯ ನಿರ್ಲಕ್ಷ್ಯ ಎನ್ನಲಾಗುತ್ತದೆ. ವೈದ್ಯರು, ದಾದಿಯರು, ತಂತ್ರಜ್ಞರು, ದಂತವೈದ್ಯರು, ಆಸ್ಪತ್ರೆಯ ಸಿಬ್ಬಂದಿಯ ಕರ್ತವ್ಯಲೋಪಗಳು ಇದರ ವ್ಯಾಪ್ತಿಗೆ ಬರುತ್ತವೆ.
ಬ್ರಿಟಿಷ್ ಮೆಡಿಕಲ್ ಜರ್ನಲ್‌ನ ಅಧ್ಯಯನ ಗುರುತಿಸಿರುವಂತೆ, ಜನರ ಸಾವಿಗೆ ಕಾರಣವಾಗುತ್ತಿರುವ ಅಂಶಗಳಲ್ಲಿ, ವೈದ್ಯಕೀಯ ನಿರ್ಲಕ್ಷ್ಯವು ಮೂರನೇ ಅತಿ ದೊಡ್ಡ ಕಾರಣವಾಗಿದೆ. ‘ಫೋಬ್ಸ್’ ವರದಿಯ ಪ್ರಕಾರ, ಅಮೆರಿಕದಲ್ಲಿ ಪ್ರತಿವರ್ಷ 2.51 ಲಕ್ಷ ಮಂದಿ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಬಲಿಯಾಗುತ್ತಿದ್ದಾರೆ. ಅಮೆರಿಕದಲ್ಲಿ ಸಂಭವಿಸುತ್ತಿರುವ ಸಾವುಗಳ ಪೈಕಿ ಶೇ 9.5ರಷ್ಟು ಸಾವುಗಳಿಗೆ ಇದುವೇ ಕಾರಣವಾಗಿದೆ.
ರೋಗಿಗಳ ಹಕ್ಕು ಮತ್ತು ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಪ್ರತಿವರ್ಷ ಸೆಪ್ಟೆಂಬರ್ 17ರಂದು
ವಿಶ್ವ ಆರೋಗ್ಯ ಸಂಸ್ಥೆಯು ರೋಗಿಗಳ ಜಾಗತಿಕ ಸುರಕ್ಷತಾ ದಿನವನ್ನು ಆಚರಿಸುತ್ತಿದೆ. ಜತೆಗೆ, ರೋಗಿಗಳ ಸುರಕ್ಷತೆಗೆ 2021–2030ರ ಅವಧಿಗಾಗಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿದೆ.
ನ್ಯಾಯ ದುರ್ಲಭ: ಒಂದೆಡೆ, ವೈದ್ಯಕೀಯ ನಿರ್ಲಕ್ಷ್ಯದ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದರೆ, ಮತ್ತೊಂದೆಡೆ, ಅದರಿಂದ ತೊಂದರೆಗೊಳಗಾದವರಿಗೆ ಸುಲಭವಾಗಿ ನ್ಯಾಯ ಸಿಗುತ್ತಿಲ್ಲ. ಕರ್ನಾಟಕದಾದ್ಯಂತ 319 ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣಗಳು ಕರ್ನಾಟಕ ವೈದ್ಯಕೀಯ ಮಂಡಳಿಯಲ್ಲಿ (ಕೆಎಂಸಿ) ದಾಖಲಾಗಿವೆ. ಬೆಂಗಳೂರಿನಲ್ಲಿ ದಾಖಲಾಗಿರುವ 25 ಪ್ರಕರಣಗಳ ಪೈಕಿ 10 ಪ್ರಕರಣಗಳು ವಜಾಗೊಂಡಿವೆ. ಉಳಿದ 15 ಪ್ರಕರಣಗಳ ವಿಚಾರಣೆ ವಿಪರೀತ ಎನ್ನುವಷ್ಟು ವಿಳಂಬವಾಗುತ್ತಿದೆ. ಗಮನಿಸಬೇಕಾದ ಅಂಶ ಎಂದರೆ, ಈ 15 ಪ್ರಕರಣಗಳ ಪೈಕಿ 9 ಪ್ರಕರಣಗಳು ರೋಗಿ ಮೃತಪಟ್ಟ ಗಂಭೀರ ಸ್ವರೂಪದ್ದಾಗಿವೆ. 2015ರಿಂದ 2021ರವರೆಗೆ 12 ಪ್ರಕರಣಗಳು ದಾಖಲಾಗಿದ್ದರೆ, ಕಳೆದ ಮೂರು ವರ್ಷಗಳಲ್ಲಿ ವರ್ಷಕ್ಕೊಂದು ಪ್ರಕರಣ ದಾಖಲಾಗಿದೆ. ಇವುಗಳಲ್ಲಿ ಸರ್ಕಾರದ ಸ್ವಾಧೀನದಲ್ಲಿರುವ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ 2019ರಲ್ಲಿ ವರದಿಯಾದ ಪ್ರಕರಣಗಳೂ ಸೇರಿವೆ. ರೋಗಿ ಸಾವಿಗೆ ಸಂಬಂಧಿಸಿದ ಕೆಲವು ಪ್ರಕರಣಗಳು ಖಾಸಗಿ ಆಸ್ಪತ್ರೆಗಳಿಂದ ವರದಿಯಾಗಿವೆ.
ಕರ್ನಾಟಕ ವೈದ್ಯಕೀಯ ನೋಂದಣಿ ಕಾಯ್ದೆಯ ಪ್ರಕಾರ, ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳನ್ನು ತನಿಖೆ ಮಾಡುವ ಅಧಿಕಾರ ಪೊಲೀಸರಿಗೆ ಇಲ್ಲ. ಆ ಅಧಿಕಾರ ಇರುವುದು ಕೆಎಂಸಿಯ 16 ಮಂದಿ ಸದಸ್ಯರ ಅರೆನ್ಯಾಯಿಕ ಮಂಡಳಿಗೆ. ಇದರಲ್ಲಿ ವೈದ್ಯಕೀಯ ವೃತ್ತಿಗೆ ಸಂಬಂಧಿಸಿದವರು 15 ಮಂದಿ ಇದ್ದರೆ, ಒಬ್ಬರು ಮಾತ್ರ ನ್ಯಾಯಾಂಗಕ್ಕೆ ಸೇರಿದವರಾಗಿರುತ್ತಾರೆ. ಮಂಡಳಿಯ ಅಭಿಪ್ರಾಯ ಪಡೆದು ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸುತ್ತಾರೆ. ಪ್ರಕರಣದ ತನಿಖೆಗೆ ಯಾವುದೇ ಗಡುವು ಇಲ್ಲದಿರುವುದರಿಂದ ಮಂಡಳಿಯು ವರ್ಷಾನುಗಟ್ಟಲೇ ವಿಚಾರಣೆ ನಡೆಸುತ್ತದೆ.
‘ಕೆಎಂಸಿಯು ಉದ್ದೇಶಪೂರ್ವಕವಾಗಿ ಪ್ರಕರಣಗಳ ವಿಚಾರಣೆಯನ್ನು ವಿಳಂಬ ಮಾಡುತ್ತಿದೆ. ದೂರುದಾರರು ವಿಳಂಬದಿಂದ ಬೇಸತ್ತು ಹಾಜರಾಗುವುದನ್ನು ನಿಲ್ಲಿಸಿದರೆ, ಆಗ ಕೆಎಂಸಿಯು ಪ್ರಕರಣವನ್ನು ವಜಾಗೊಳಿಸುತ್ತದೆ’ ಎಂದು ಇಂಥ ಪ್ರಕರಣಗಳ ಬಗ್ಗೆ ತಿಳಿವಳಿಕೆ ಇರುವ ಬೆಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ. ಪ್ರಕರಣಗಳ ವಿಚಾರಣೆಯ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲ. ಪೊಲೀಸ್ ಅಧಿಕಾರಿಗಳನ್ನೂ ವಿಚಾರಣೆಯಲ್ಲಿ ಸೇರಿಸಿಕೊಂಡರೆ, ಪಾರದರ್ಶಕತೆ ಸಾಧ್ಯ ಎನ್ನುವುದು ಅವರ ಅಭಿಪ್ರಾಯ. ಶನಿವಾರ ಮಾತ್ರ ನಡೆಯುವ ಪ್ರಕರಣಗಳ ವಿಚಾರಣೆಗೆ ದೂರುದಾರರು ಮತ್ತು ಪ್ರತಿವಾದಿಗಳು ಸರಿಯಾಗಿ ಹಾಜರಾಗದಿರುವುದು ವಿಳಂಬಕ್ಕೆ ಕಾರಣ ಎನ್ನುವುದು ಕೆಎಂಸಿಯ ವಾದ.
ಕೆಎಂಸಿ ಒಂದು ಸ್ವತಂತ್ರ, ಅರೆ ನ್ಯಾಯಿಕ ಸಂಸ್ಥೆ ಆಗಿರುವುದರಿಂದ ಏನೂ ಮಾಡಲಾಗದು ಎಂದು ರಾಜ್ಯ ಸರ್ಕಾರವೂ ಅಸಹಾಯಕತೆ ವ್ಯಕ್ತಪಡಿಸುತ್ತದೆ. ಈ ವಿಚಾರದಲ್ಲಿ ಸರ್ಕಾರಕ್ಕೆ ಇರುವ ಅಧಿಕಾರ ಎಂದರೆ, ವಿಚಾರಣಾ ಮಂಡಳಿಗೆ ಒಬ್ಬರನ್ನು ನೇಮಿಸುವುದು ಮಾತ್ರ ಆಗಿದೆ.
ಶಿಕ್ಷೆ ಇಳಿಕೆಗೆ ವೈದ್ಯರ ಬೇಡಿಕೆ
ವೈದ್ಯಕೀಯ ನಿರ್ಲಕ್ಷ್ಯಕ್ಕೆ ಶಿಕ್ಷೆ ವಿಧಿಸುವ ಸಂಬಂಧದ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 106 (1) ಬಗ್ಗೆ ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ಆಕ್ಷೇಪಣೆ ವ್ಯಕ್ತಪಡಿಸಿತ್ತು. ಚಿಕಿತ್ಸೆ ನೀಡುವಾಗ ವೈದ್ಯರ ನಿರ್ಲಕ್ಷ್ಯದಿಂದ ಒಂದು ವೇಳೆ ರೋಗಿ ಸಾವಿಗೀಡಾದರೆ, ಈ ಸೆಕ್ಷನ್ ಅನ್ವಯ ವೈದ್ಯರಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದರೆ, ಹಿಂದಿನ ಭಾರತೀಯ ದಂಡ ಸಂಹಿತೆಯ (ಐಪಿಸಿ) 304ಎ ಅಡಿಯಲ್ಲಿಯೂ ವೈದ್ಯರಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತಿತ್ತು. ಬಿಎನ್‌ಎಸ್ ಮಸೂದೆಯಲ್ಲಿ ಜೈಲು ಶಿಕ್ಷೆಯ ಅವಧಿಯನ್ನು ಐದು ವರ್ಷಕ್ಕೆ ಹೆಚ್ಚಿಸಲಾಗಿತ್ತು. ನಂತರ ವೈದ್ಯರ ಒತ್ತಾಯದ ಮೇರೆಗೆ ಅದನ್ನು ಎರಡು ವರ್ಷಕ್ಕೆ ಇಳಿಸಲಾಗಿದೆ.
ಬಿಎನ್‌ಎಸ್‌ನ ಸೆಕ್ಷನ್ 26 ಅನ್ವಯ ಕ್ರಿಮಿನಲ್ ವಿಚಾರಣೆಯಿಂದ ವೈದ್ಯರಿಗೆ ರಕ್ಷಣೆ ಒದಗಿಸಬೇಕು ಎನ್ನುವುದು ವೈದ್ಯರ ಬೇಡಿಕೆ. ಈ ನಿಟ್ಟಿನಲ್ಲಿ ತಿದ್ದುಪಡಿ ತರಬೇಕು ಎಂದು ಐಎಂಎ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಆದರೆ, ಕೇಂದ್ರವು ವೈದ್ಯರ ಬೇಡಿಕೆಯನ್ನು ತಿರಸ್ಕರಿಸಿದೆ.
ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಹೆಚ್ಚು ಪ್ರಕರಣ
ಭಾರತದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳು ವರದಿಯಾಗುತ್ತಿರುವ ಪ್ರಮಾಣ ಗಾಬರಿ ಹುಟ್ಟಿಸುವಂತಿದೆ. ಪ್ರೊ.ಅಶೀಶ್ ಝಾ ಅವರ ಅಧ್ಯಯನ ವರದಿಯ ಪ್ರಕಾರ, ಭಾರತದಲ್ಲಿ ವಾರ್ಷಿಕವಾಗಿ 52 ಲಕ್ಷ ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣಗಳು ವರದಿಯಾಗುತ್ತಿವೆ. ಬ್ರಿಟಿಷ್ ಮೆಡಿಕಲ್ ಜರ್ನಲ್ ಕೂಡ ಭಾರತದಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಿದೆ.
ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 2015ರಿಂದ 2019ರ ನಡುವೆ ವಿಚಾರಣೆಗೆ ಒಳಪಡಿಸಿದ 253 ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳನ್ನು ಅಧ್ಯಯನ ಮಾಡಿ ಅದರ ವರದಿಯನ್ನು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್ ಪ್ರಕಟಿಸಿದೆ.
ವರ್ಷಕ್ಕೆ 30 ಲಕ್ಷ ಸಾವು
ವೈದ್ಯಕೀಯ ನಿರ್ಲಕ್ಷ್ಯ ಎನ್ನುವುದು ಜಾಗತಿಕ ಸಮಸ್ಯೆಯಾಗಿದೆ. ಈ ದಿಸೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಅಂಕಿಅಂಶಗಳು ಸಮಸ್ಯೆಯ ವ್ಯಾಪಕತೆಗೆ ಕನ್ನಡಿ ಹಿಡಿಯುತ್ತವೆ. ವೈದ್ಯಕೀಯ ನಿರ್ಲಕ್ಷ್ಯದ ಪರಿಣಾಮಗಳನ್ನು ಡಬ್ಲ್ಯುಎಚ್‌ಒ ಪಟ್ಟಿ ಮಾಡಿದೆ.
* ಜಾಗತಿಕವಾಗಿ ಪ್ರತಿ ವರ್ಷ 30 ಲಕ್ಷ ಸಾವುಗಳು ಸಂಭವಿಸುತ್ತಿವೆ
* ಪ್ರತಿ 10 ರೋಗಿಗಳ ಪೈಕಿ ಒಬ್ಬರಿಗೆ ಹಾನಿ
* ಕಡಿಮೆ ಆದಾಯದ ದೇಶಗಳಲ್ಲಿ 100ರಲ್ಲಿ 4 ಮಂದಿ ಸಾವು
* ಇಂಥ ಸಾವುಗಳ ಪೈಕಿ ಶೇ 50ರಷ್ಟು ತಡೆಯಬಹುದಾಗಿದೆ
* ರೋಗಿಗಳಿಗೆ ಆಗುತ್ತಿರುವ ಹಾನಿಯಿಂದ ಜಾಗತಿಕ ಆರ್ಥಿಕ ಬೆಳವಣಿಗೆ ಶೇ 0.7ರಷ್ಟು ಕುಂಠಿತ
ಗ್ರಾಹಕ ಕಾಯ್ದೆಯ ವ್ಯಾಪ್ತಿಗೆ ವೈದ್ಯಕೀಯ ಲೋಪ
ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳು ಗ್ರಾಹಕ ಕಾಯ್ದೆಯ ವ್ಯಾಪ್ತಿಯಡಿ ಬರುತ್ತವೆಯೇ ಎನ್ನುವುದು ಹಲವು ವರ್ಷಗಳ ಕಾಲ ಚರ್ಚೆಯ ವಿಚಾರವಾಗಿತ್ತು. ಈ ಸಂಬಂಧ ವಸಂತ ಪಿ.ನಾಯರ್ ಮತ್ತು ಶ್ರೀಮತಿ ನಾಯರ್ ಪ್ರಕರಣದಲ್ಲಿ ಕೇರಳ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ನೀಡಿರುವ ತೀರ್ಪನ್ನು ಎತ್ತಿಹಿಡಿದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು, ವೈದ್ಯಕೀಯ ನಿರ್ಲಕ್ಷ್ಯವು ಗ್ರಾಹಕ ಕಾಯ್ದೆಯ ಅಡಿಯಲ್ಲಿ ಬರುತ್ತದೆ ಎಂದಿತ್ತು. ವೈದ್ಯಕೀಯ ಚಿಕಿತ್ಸೆಯನ್ನು ಒಂದು ಸೇವೆ ಎಂದು, ರೋಗಿಯನ್ನು ಗ್ರಾಹಕ ಎಂದು ಆಯೋಗವು ತಿಳಿಸಿತ್ತು. ಸೇವೆಯಲ್ಲಿ ಏನೇ ವ್ಯತ್ಯಯವಾದರೂ ಅದು ಗ್ರಾಹಕ ನ್ಯಾಯಾಲಯಗಳ ಅಡಿಯಲ್ಲಿ ವಿಚಾರಣೆಗೆ ಅರ್ಹ ಎಂದು ಸ್ಪಷ್ಟಪಡಿಸಿತು.
ನಂತರ 1995ರಲ್ಲಿ, ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ವಿ.ಪಿ.ಶಾಂತ ಮತ್ತು ಇತರರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗ್ರಾಹಕ ನ್ಯಾಯಾಲಯದ ಆದೇಶವನ್ನು ಪುನರುಚ್ಚರಿಸಿತು. ಖಾಸಗಿ ಆಸ್ಪತ್ರೆಗಳಲ್ಲಾಗಲಿ, ಸರ್ಕಾರಿ ಆಸ್ಪತ್ರೆಗಳಲ್ಲಾಗಲಿ, ರೋಗಿಗೆ ಚಿಕಿತ್ಸೆ ನೀಡುವಾಗ ಯಾವುದೇ ಲೋಪವಾದಲ್ಲಿ, ಅವರು ಗ್ರಾಹಕ ಸಂರಕ್ಷಣಾ ಕಾಯ್ದೆ 1986ರ ಅಡಿ ಪರಿಹಾರಕ್ಕೆ ಅರ್ಹರು ಎಂದಿತು. ಗ್ರಾಹಕ ಸಂರಕ್ಷಣಾ ಕಾಯ್ದೆ –1986 ಅನ್ನು ನಂತರ ಗ್ರಾಹಕ ಸಂರಕ್ಷಣಾ ಕಾಯ್ದೆ –2019 ಎಂದು ಬದಲಾವಣೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.