ಯಾವುದು ಅಶ್ಲೀಲ, ಯಾವುದು ಶೀಲ ಎನ್ನುವುದು ಬಹಳ ಸಂಕೀರ್ಣವಾದ ವಿಚಾರ. ಈ ಎರಡರ ಪರಿಧಿಗೆ ಸ್ಪಷ್ಟವಾದ ವಿಭಜನೆ ರೇಖೆ ಇಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ, ಸಮಾಜದಿಂದ ಸಮಾಜಕ್ಕೆ ಇದು ಭಿನ್ನ. ಹಾಗಾಗಿಯೇ ಈ ವಿಚಾರ ಕೆಲವೊಮ್ಮೆ ವಿವಾದ ಸೃಷ್ಟಿಗೂ ಕಾರಣವಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ದೇಹವನ್ನು ನಗ್ನವಾಗಿ ಪ್ರದರ್ಶಿಸುವುದು, ನಗ್ನ ದೇಹದ ವಿಡಿಯೊಗಳನ್ನು ವೀಕ್ಷಿಸುವುದು, ಅಂತಹ ವಿಡಿಯೊಗಳನ್ನು ಚಿತ್ರೀಕರಿಸುವುದು ಎಲ್ಲವೂ ಪರ–ವಿರೋಧ ಚರ್ಚೆಗೆ ಹಲವು ಬಾರಿ ಕಾರಣವಾಗಿವೆ. ವ್ಯಕ್ತಿಗಳು ಬಟ್ಟೆ ಧರಿಸಿದ ರೀತಿಯನ್ನು, ನಡವಳಿಕೆಯನ್ನು ಕೂಡ ಈ ವ್ಯಾಪ್ತಿಗೆ ತಂದು ವಿಮರ್ಶಿಸಿದ ಉದಾಹರಣೆಗಳು ಇವೆ.
ಇತ್ತೀಚೆಗೆ ಇಂತಹ ಕೆಲವು ಪ್ರಕರಣಗಳು ವರದಿಯಾಗಿವೆ. ನಟ ಮತ್ತು ರೂಪದರ್ಶಿ ಮಿಲಿಂದ್ ಸೋಮನ್ ಅವರು ಗೋವಾದ ಕಡಲ ತೀರದಲ್ಲಿ ಬೆತ್ತಲಾಗಿ ಓಡಿ, ಅದರ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಈ ಚಿತ್ರವನ್ನು ತೆಗೆದವರು ಮಿಲಿಂದ್ ಹೆಂಡತಿ ಅಂಕಿತಾ ಕನ್ವರ್. ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಪ್ರದರ್ಶನದ ಆರೋಪದಲ್ಲಿ ಮಿಲಿಂದ್ ಮೇಲೆ ಪ್ರಕರಣ ದಾಖಲಾಗಿದೆ. ಭಾರತೀಯ ದಂಡ ಸಂಹಿತೆಯ 294ನೇ ಸೆಕ್ಷನ್‌ನಲ್ಲಿ ಅದಕ್ಕೆ ಅವಕಾಶವೂ ಇದೆ. ಅಣೆಕಟ್ಟೆಯೊಂದರ ನಿರ್ಬಂಧಿತ ಪ್ರದೇಶದಲ್ಲಿ ‘ಅಶ್ಲೀಲ’ವಾಗಿ ವಿಡಿಯೊ ಚಿತ್ರೀಕರಣ ನಡೆಸಿದ್ದಾರೆ ಎಂಬ ಆರೋಪದಲ್ಲಿ ನಟಿ ಮತ್ತು ರೂಪದರ್ಶಿ ಪೂನಂ ಪಾಂಡೆ ಮತ್ತು ಅವರ ಗಂಡ ಸ್ಯಾಮ್ ಬಾಂಬೆ ಅವರನ್ನೂ ಗೋವಾ ಪೊಲೀಸರು ಬಂಧಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇವೆರಡೂ ಭಿನ್ನ ಪ್ರಕರಣಗಳು. ಮಿಲಿಂದ್ ವಿರುದ್ಧ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಪ್ರದರ್ಶನ ಮತ್ತು ಅದರ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಆರೋಪ ಇದೆ. ಪೂನಂ ಪಾಂಡೆ ವಿರುದ್ಧ ಅಶ್ಲೀಲತೆ ಪ್ರದರ್ಶಿಸಿ ಅದನ್ನು ಚಿತ್ರೀಕರಿಸಿದ ಆಪಾದನೆ ಇದೆ. ಪೂನಂ ಅವರಿಗೆ ಕಾನಕೋನದ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಅವರು ಜಾಮೀನು ನೀಡಿದ್ದಾರೆ. ‘ವೃತ್ತಿಪರವಾದ ವಿಡಿಯೊ ಅಥವಾ ಸಿನಿಮಾ ನಿರ್ಮಾಣಕ್ಕಾಗಿ ನಡೆಸುವ ಚಿತ್ರೀಕರಣವು ಅಶ್ಲೀಲ ಅಥವಾ ಅನೈತಿಕ ಎಂದು ಕೆಲವು ಜನರು ಹೇಳುತ್ತಾರೆ ಎಂಬ ಕಾರಣಕ್ಕಾಗಿ ನಾವೂ ಅದನ್ನು ಸಾರಾಸಗಟಗಾಗಿ ಅಶ್ಲೀಲ ಎಂದೋ ಅನೈತಿಕ ಎಂದೋ ಪರಿಗಣಿಸಲು ಆಗದು. ಸಿನಿಮಾ ಮತ್ತು ವಿಡಿಯೊಗಳು ಅಭಿವ್ಯಕ್ತಿಯ ಹಕ್ಕಿನ ವ್ಯಾಪ್ತಿಯಲ್ಲಿ ಬರುತ್ತವೆ. ಅದು ಸಂವಿಧಾನ ನೀಡಿದ ಮೂಲಭೂತ ಹಕ್ಕಿನ ಭಾಗ’ ಎಂದು ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.
‘ಅಶ್ಲೀಲತೆ ಪ್ರದರ್ಶನ’ ಆರೋಪದಲ್ಲಿ ಮಿಲಿಂದ್ ಮತ್ತು ಮಧು ಸಪ್ರೆ ವಿರುದ್ಧ 1995ರಲ್ಲಿಯೂ ಒಂದು ಪ್ರಕರಣ ದಾಖಲಾಗಿತ್ತು. ಶೂ ಕಂಪನಿಯ ಜಾಹೀರಾತು ಒಂದರಲ್ಲಿ ಅವರು ದೇಹಕ್ಕೆ ಹಾವೊಂದನ್ನು ಸುತ್ತಿಕೊಂಡು ನಗ್ನವಾಗಿ ಫೋಟೊಗೆ ಪೋಸ್ ಕೊಟ್ಟಿದ್ದರು. ಸುಮಾರು 15 ವರ್ಷಗಳ ವಿಚಾರಣೆಯ ಬಳಿಕ ಅವರಿಬ್ಬರೂ ಈ ಪ್ರಕರಣದಲ್ಲಿ ಖುಲಾಸೆ ಆಗಿದ್ದಾರೆ.
ಹೆಣ್ಣಿನ ನಗ್ನ ದೇಹದ ಪ್ರದರ್ಶನವು ಅಶ್ಲೀಲತೆಯೇ ಮತ್ತು ಅದು ಶಿಕ್ಷಾರ್ಹವೇ, ಇಂತಹ ಪ್ರಕರಣಗಳಲ್ಲಿ ‘ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆ’ (ಪೋಕ್ಸೊ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅನ್ವಯ ಸಾಧ್ಯವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕೋರಿರುವ ಅರ್ಜಿಯೊಂದು ಸುಪ್ರೀಂ ಕೋರ್ಟ್‌ನಲ್ಲಿ ಇದೆ.
ಕೇರಳದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ ಅವರು ಈ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಅರೆನಗ್ನ ದೇಹವನ್ನು ಕ್ಯಾನ್ವಾಸ್‌ನಂತೆ ಬಳಸಿ ಚಿತ್ರ ಬಿಡಿಸಲು ಮಕ್ಕಳಿಗೆ ರೆಹಾನಾ ಅವಕಾಶ ನೀಡಿದ್ದರು. ಮಕ್ಕಳು ಚಿತ್ರ ಬಿಡಿಸುವ ವಿಡಿಯೊವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಇದು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲತೆ ಎಂದು ಆರೋಪಿಸಿ ರೆಹಾನಾ ವಿರುದ್ಧ ಪ್ರಕರಣ ದಾಖಲಾಗಿದೆ. ಕೇರಳದ ಹೈಕೋರ್ಟ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿಲ್ಲ. ಹಾಗಾಗಿ, ಅವರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ.
ತಾವು ಪ್ರಕಟಿಸಿರುವ ವಿಡಿಯೊ ಕಾಮಪ್ರಚೋದಕ ಎಂದು ಯಾರಾದರೂ ಭಾವಿಸಿದರೆ ಆ ವ್ಯಕ್ತಿ ವಿಕೃತನೇ/ಳೇ ಆಗಿರಬೇಕು ಎಂಬುದು ಫಾತಿಮಾ ಅವರ ವಾದವಾಗಿದೆ.
ನಗ್ನತೆ ಎಂದರೆ ಅಶ್ಲೀಲಕ್ಕೆ ಪರ್ಯಾಯ ಎಂದು ಭಾವಿಸಿದವರು ಇದ್ದಾರೆ. ದೇಹ ಪೂರ್ತಿ ಬಟ್ಟೆ ಇದ್ದರೂ ಅಶ್ಲೀಲವಾಗಿ ವರ್ತಿಸಬಹುದು ಎಂಬ ನಿಲುವಿನವರೂ ಇದ್ದಾರೆ. ನಗ್ನ ದೇಹದಲ್ಲಿ ಕಾಮವನ್ನಷ್ಟೇ ನೋಡುವವರು ಇದ್ದಾರೆ; ಅದೇ ದೇಹದಲ್ಲಿ ದೈವತ್ವವನ್ನು ಕಾಣುವವರೂ ಇದ್ದಾರೆ. ಹಾಗಾಗಿಯೇ ಈ ನೈತಿಕ ನಿಲುವಿನ ಪರಿಧಿ ಇದುವೇ ಎಂಬ ವ್ಯಾಖ್ಯಾನ ಇಲ್ಲ.
ಆದ್ದರಿಂದಲೇ, ಸಿನಿಮಾ, ಜಾಹೀರಾತು ಮತ್ತು ಇತರ ಕ್ಷೇತ್ರಗಳ ಹಲವು ಮಂದಿಯ ವಿರುದ್ಧ ಇಂತಹ ಪ್ರಕರಣ ದಾಖಲಾಗಿದ್ದರೂ ‘ಅಶ್ಲೀಲ’ವಾಗಿ ನಡೆದುಕೊಂಡದ್ದು ಸಾಬೀತಾಗಿ ಶಿಕ್ಷೆ ಆಗಿರುವುದು ಇತ್ತೀಚೆಗಂತೂ ವರದಿ ಆಗಿಲ್ಲ. ಹಾಗಿದ್ದರೂ, ಅಶ್ಲೀಲತೆ ಪ್ರದರ್ಶನದ ವಿರುದ್ಧ ದೂರು ದಾಖಲಾಗುವುದು ನಿಂತೂ ಇಲ್ಲ.
ನಗ್ನತೆಯ ಓಟ
*ಗೋವಾದಲ್ಲಿ ‘ಅಶ್ಲೀಲ’ವಾಗಿ ಫೋಟೊಶೂಟ್‌ನಲ್ಲಿ ತೊಡಗಿದ್ದ ಆರೋಪದ ಮೇಲೆ ನಟಿ ಪೂನಂ ಪಾಂಡೆ ಹಾಗೂ ಅವರ ಪತಿ ಸ್ಯಾಮ್ ಅವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ನಿರ್ಬಂಧಿತ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದ ಬಗ್ಗೆ ಸ್ಥಳೀಯರು ದೂರು ನೀಡಿದ್ದರು
*ಪೂನಂ ಪಾಂಡೆ ಅವರು ತಮ್ಮ ನಗ್ನ, ಅರೆನಗ್ನ ಚಿತ್ರ ಹಾಗೂ ವಿಡಿಯೊಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಯೂಟ್ಯೂಬ್‌ನಲ್ಲಿ ಅವರು ಪ್ರಕಟಿಸಿದ್ದ ವಯಸ್ಕರಿಗೆ ಸಂಬಂಧಿಸಿದ ಸರಣಿ ವಿಡಿಯೊಗಳು ‘ಭಾವನೆಗಳನ್ನು ಕೆರಳಿಸುವಂತಿವೆ’ ಎಂಬ ಕಾರಣಕ್ಕೆ ಅವುಗಳಿಗೆ ನಿಷೇಧ ಹೇರಲಾಗಿತ್ತು. 2011ರಲ್ಲಿ ಭಾರತ ತಂಡ ವಿಶ್ವಕಪ್ ಕ್ರಿಕೆಟ್ ಗೆದ್ದರೆ ಸಾರ್ವಜನಿಕವಾಗಿ ನಗ್ನಳಾಗುತ್ತೇನೆ ಎಂದು ಹೇಳಿ ಗಮನ ಸೆಳೆದಿದ್ದರು
*ತಮ್ಮ 55ನೇ ಹುಟ್ಟುಹಬ್ಬದ ಖುಷಿಯಲ್ಲಿದ್ದ ಮಾಡೆಲ್ ಮಿಲಿಂದ್ ಸೋಮನ್ ಅವರು ಗೋವಾದ ಕಡಲ ಕಿನಾರೆಯಲ್ಲಿ ನಗ್ನವಾಗಿ ಓಡಿದ್ದರು. ನಗ್ನಾವಸ್ಥೆಯಲ್ಲಿದ್ದ ಅವರ ಚಿತ್ರಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್ ಆಗುತ್ತಿದ್ದಂತೆ ಗೋವಾ ಸುರಕ್ಷಾ ಮಂಚ್ ಠಾಣೆ ಮೆಟ್ಟಿಲೇರಿತು. ಪ್ರಕರಣ ದಾಖಲಿಸಿಕೊಂಡಿರುವ ಗೋವಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
*ಸೋಮನ್ ಅವರು 25 ವರ್ಷಗಳ ಹಿಂದೆ ಮಾಡೆಲ್ ಮಧು ಸಪ್ರೆ ಜೊತೆ ನಡೆಸಿದ್ದ ನಗ್ನ ಫೊಟೊಶೂಟ್‌ನ ಚಿತ್ರ ಈಗಲೂ ತಾಜಾ ಎಂಬಂತಿದೆ. ಕಳೆದ ಮೇನಲ್ಲಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೆ ಆ ಚಿತ್ರಗಳನ್ನು ಶೇರ್ ಮಾಡಿದ್ದರು. ‘ಅಂದು ಸಾಮಾಜಿಕ ಜಾಲತಾಣ ಇರಲಿಲ್ಲ. ಈಗ ಇಂತಹವನ್ನೇನಾದರೂ ಪೋಸ್ಟ್ ಮಾಡಿದ್ದರೆ ಪ್ರತಿಕ್ರಿಯ ಬೇರೆಯೇ ಇರುತ್ತಿತ್ತು’ ಎಂದು ಬರೆದುಕೊಂಡಿದ್ದರು. ಇದಕ್ಕೆ ಪರ–ವಿರೋಧ ಚರ್ಚೆಗಳು ನಡೆದವು
*ಬೋಲ್ಡ್ ಅಂಡ್ ಬ್ಯೂಟಿಫುಲ್ ಎಂದು ಹೆಸರಾಗಿರುವ ನಟಿ ರಾಧಿಕಾ ಆಪ್ಟೆ ಅವರು 2016ರಲ್ಲಿ ಲಜ್ಜೊ ಎಂಬ ಗ್ರಾಮೀಣ ಹುಡುಗಿಯ ಪಾತ್ರ ಮಾಡಿದ್ದರು. ನಟ ಅದಿಲ್ ಹುಸೇನ್ ಅವರ ಜೊತೆಗಿನ ಆಪ್ತ ದೃಶ್ಯಗಳು ವಿವಾದದ ಕಿಡಿ ಹೊತ್ತಿಸಿದ್ದವು
*ಹಿಂದೂಗಳ ಭಾವನೆಗಳಗೆ ಧಕ್ಕೆ ತರುವ ರೀತಿಯಲ್ಲಿ ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಲಾಗಿದೆ ಎಂಬ ಆರೋಪ ಖ್ಯಾತ ಕಲಾವಿದ ಎಂ.ಎಫ್. ಹುಸೇನ್ ಮೇಲಿತ್ತು
*2007ರಲ್ಲಿ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದ ಕಲಾ ವಿದ್ಯಾರ್ಥಿ ಶ್ರೀಲಂನತುಲಾ ಚಂದ್ರಮೋಹನ್ ಎಂಬುವರನ್ನು ವಡೋದರದಲ್ಲಿ ಬಂಧಿಸಲಾಗಿತ್ತು. ಅಶ್ಲೀಲ ಚಿತ್ರಗಳನ್ನು ಚಿತ್ರಕಲಾ ಪ್ರದರ್ಶನದಲ್ಲಿ ಬಳಸಲಾಗಿದೆ ಎಂದು ಕೆಲವು ಹಿಂದೂ ಸಂಘಟನೆಗಳು ಆರೋಪಿಸಿದ್ದವು. ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದೂ ದೂರಲಾಗಿತ್ತು
*ಅಮೀರ್ ಖಾನ್ ನಟನೆಯ ಪಿಕೆ ಸಿನಿಮಾದ ಮೊದಲ ದೃಶ್ಯವೇ ನಾಯಕನ ಅರೆ ಬೆತ್ತಲೆ ದೇಹವನ್ನು ತೋರಿಸುತ್ತದೆ. ಅನ್ಯಗ್ರಹದಿಂದ ಬಂದ ಜೀವಿ ಎಂಬ ರೀತಿ ಪಾತ್ರವನ್ನು ಚಿತ್ರಿಸುವ ಭರದಲ್ಲಿ ಅಮೀರ್ ದೇಹಕ್ಕೆ ಒಂದು ರೇಡಿಯೊ ಉಪಕರಣವನ್ನು ಮಾತ್ರ ಅಡ್ಡಲಾಗಿ ಇರಿಸಿ ಚಿತ್ರೀಕರಿಸಲಾಗಿತ್ತು. ಆರಂಭದಲ್ಲಿ ಈ ದೃಶ್ಯಕ್ಕೆ ವಿರೋಧ ವ್ಯಕ್ತವಾಯಿತು
*ಬಿಗ್‌ಬಾಸ್ ಮಾಜಿ ಸ್ಪರ್ಧಿ ಸೋಫಿಯಾ ಹಯಾತ್ ಅವರು ಕೆಲವು ವರ್ಷಗಳ ಹಿಂದೆ ನಗ್ನವಾಗಿ ಕಾಣಿಸಿಕೊಳ್ಳುವ ನಿರ್ಧಾರ ಮಾಡಿ ಕಾನೂನಿನ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದರು. ಇತ್ತೀಚೆಗೆ ಅರೆಬೆತ್ತಲೆ ಫೋಟೊ ಪೋಸ್ಟ್ ಮಾಡಿ ಮತ್ತೆ ಸುದ್ದಿಯಾಗಿದ್ದರು. ‘ಓಂ’ ಚಿಹ್ನೆಯ ಮುಂದೆ ನಿಂತು ಫೊಟೊ ತೆಗೆಸಿಕೊಂಡಿದ್ದ ಅವರು ‘ನಗ್ನ ದೇವತೆ’ ಎಂದು ತಮ್ಮನ್ನು ಕರೆದುಕೊಂಡಿದ್ದರು. ಧಾರ್ಮಿಕ ಭಾವನೆಗಳಗೆ ಧಕ್ಕೆ ತಂದ ಆರೋಪದ ಮೇಲೆ ಸೋಫಿಯಾ ವಿರುದ್ಧ ದೂರು ದಾಖಲಾಗಿತ್ತು.
*ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಹಾಲಿವುಡ್ ನಟ ರಿಚರ್ಡ್ ಗೇರ್ ಅವರು ನಟಿ ಶಿಲ್ಪಾ ಶೆಟ್ಟಿ ಅವರನ್ನು ಚುಂಬಿಸಿದ್ದು ಸಾಕಷ್ಟು ವಿವಾದ ಸೃಷ್ಟಿಸಿತ್ತು. ಜೈಪುರದ ಕೋರ್ಟ್ ಗೇರ್ ಅವರ ಬಂಧನಕ್ಕೆ ವಾರಂಟ್ ಹೊರಿಡಿಸಿ, ಶಿಲ್ಪಾ ಶೆಟ್ಟಿಗೆ ನೋಟಿಸ್ ನೀಡಿತ್ತು
*ಕನ್ನಡ ಸಿನಿಮಾರಂಗದಲ್ಲೂ ಬೆತ್ತಲೆ ಬೆನ್ನಿನ ಚಿತ್ರಗಳಿಂದ ಕೆಲವು ನಟಿಯರು ಸುದ್ದಿಯಾಗಿದ್ದಿದೆ. ದಂಡುಪಾಳ್ಯ ಸಿನಿಮಾದಲ್ಲಿ ಪೂಜಾ ಗಾಂಧಿ, ಸಂಜನಾ ಗಲ್ರಾನಿ ಗುಲ್ಲೆಬ್ಬಿಸಿದ್ದರು. ಅನಿತಾ ಭಟ್ ಕೂಡ ಸದ್ದು ಮಾಡಿದ್ದರು.
ಪ್ರತಿಭಟನೆಯ ಅಸ್ತ್ರ
ನಗ್ನತೆ ಎಂಬುದು ಪ್ರತಿಭಟನೆಯ ಅಸ್ತ್ರವಾಗಿಯೂ ಬಳಕೆಯಾಗುತ್ತದೆ. ಅರೆ ನಗ್ನ ಅಥವಾ ನಗ್ನ ಪ್ರತಿಭಟನೆಯ ವರದಿಗಳು ಜಗತ್ತಿನ ಎಲ್ಲೆಡೆಯಿಂದಲೂ ಆಗಾಗ ಬರುತ್ತಿರುತ್ತವೆ. ಭಾರತದಲ್ಲಿ ನಗ್ನ ಪ್ರತಿಭಟನೆಗಳು ಕಡಿಮೆ. ಆದರೆ, ಅರೆನಗ್ನವಾಗಿ ಜನರು ಬಹಳ ಸಾರಿ ಪ್ರತಿಭಟನೆ ನಡೆಸಿದ್ದಾರೆ.
ಐಪಿಸಿ ಸೆಕ್ಷನ್ 292
ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 292, 293 ಮತ್ತು 294ನಲ್ಲಿ ಅಶ್ಲೀಲತೆ ತಡೆ, ಅಶ್ಲೀಲತೆಯ ವಿರುದ್ಧ ವಿಚಾರಣೆ ಮತ್ತು ಅಶ್ಲೀಲತೆಗೆ ನೀಡಬಹುದಾದ ಶಿಕ್ಷೆಗಳ ಬಗ್ಗೆ ವಿವರಣೆ ನೀಡಲಾಗಿದೆ. ಜತೆಗೆ ಈ ಸೆಕ್ಷನ್‌ಗಳನ್ನು ಯಾವ ಸಂದರ್ಭದಲ್ಲಿ ಅನ್ವಯಿಸುವಂತಿಲ್ಲ ಎಂಬುದನ್ನೂ ವಿವರಿಸಲಾಗಿದೆ.
ಐಪಿಸಿ 292 (1)ನೇ ಸೆಕ್ಷನ್ ಅಶ್ಲೀಲ ಪುಸ್ತಕ ಮತ್ತಿತರ ಪರಿಕರಗಳ ಮಾರಾಟಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುತ್ತದೆ. ಕಾಮಭಾವನೆಯನ್ನು ಉತ್ತೇಜಿಸುವ ಪುಸ್ತಕ, ಕರಪತ್ರ, ಬರಹ, ಚಿತ್ರ, ಪೇಂಟಿಂಗ್, ಪ್ರದರ್ಶನ ಅಥವಾ ಯಾವುದೇ ವಸ್ತುಗಳಿಗೆ ಇದು ಅನ್ವಯ. ಇವುಗಳನ್ನು ನೋಡಿದಾಗ, ಓದಿದಾಗ ಮತ್ತು ಕೇಳಿಸಿಕೊಂಡಾಗ ಕಾಮಭಾವನೆ ಉತ್ತೇಜನವಾವಂತಿದ್ದರೆ, ಅಂತಹ ವಸ್ತುಗಳಿಗೆ ಈ ಸೆಕ್ಷನ್ ಅನ್ವಯವಾಗುತ್ತದೆ. ಎರಡಕ್ಕಿಂತ ಹೆಚ್ಚು ವಸ್ತುಗಳು (ಮೇಲೆ ವಿವರಿಸಲಾದ ವಸ್ತುಗಳು) ಜತೆಗಿದ್ದು, ಅದರಲ್ಲಿ ಒಂದು ವಸ್ತುವು ಅಶ್ಲೀಲವಾಗಿದ್ದರೆ ಮತ್ತು ಅದರಿಂದಾಗಿ ಜತೆಗಿನ ವಸ್ತುವೂ ಅಶ್ಲೀಲವೆನಿಸಿದರೆ ಈ ಕಾನೂನು ಅನ್ವಯವಾಗುತ್ತದೆ.
ಇಂತಹ ವಸ್ತುಗಳನ್ನು ಮಾರಾಟ ಮಾಡುವ, ಬಾಡಿಗೆಗೆ ನೀಡುವ, ಸಾರ್ವಜನಿಕವಾಗಿ ಪ್ರದರ್ಶಿಸುವ ಅಥವಾ ಯಾವುದೇ ಸ್ವರೂಪದಲ್ಲಿ ಪ್ರಸಾರ ಮಾಡುವ, ವಿತರಣೆ ಮಾಡುವ, ತಯಾರಿಸುವ ಅಥವಾ ಇಂತಹ ವಸ್ತುಗಳನ್ನು ಹೊಂದಿರುವ ಹಾಗೂ ಇವುಗಳನ್ನು ರಫ್ತು ಮಾಡುವ-ಆಮದು ಮಾಡಿಕೊಳ್ಳುವ, ಇವುಗಳಿಂದ ಆರ್ಥಿಕ ಲಾಭ ಮಾಡಿಕೊಳ್ಳುವ ವ್ಯಕ್ತಿಗಳ ಮೇಲೆ 292 (2ಎ, 2ಬಿ, 2ಸಿ, 2ಡಿ) ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಬಹುದು.
ಇಂತಹ ಕೃತ್ಯಗಳನ್ನು ಎಸಗುವವರಿಗೆ ₹ 2 ಸಾವಿರ ದಂಡ ಮತ್ತು ಗರಿಷ್ಠ 2 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲು 292 (2ಇ) ಸೆಕ್ಷನ್ ಅವಕಾಶ ಮಾಡಿಕೊಡುತ್ತದೆ. ಎರಡನೇ ಬಾರಿ ಇಂತಹ ಕೃತ್ಯ ಎಸಗಿದರೆ ₹ 5 ಸಾವಿರ ದಂಡ ಮತ್ತು ಐದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಲು ಅವಕಾಶವಿದೆ.
ಸೆಕ್ಷನ್ 292ರಲ್ಲಿ ವಿವರಿಸಲಾದ ವಸ್ತುಗಳನ್ನು 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಜನರಿಗೆ ಮಾರಾಟ ಮಾಡುವ, ವಿತರಿಸುವ, ಬಾಡಿಗೆ ನೀಡುವ ವ್ಯಕ್ತಿಗಳಿಗೆ ₹ 2 ಸಾವಿರ ದಂಡ ಮತ್ತು 3 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ವಿಧಿಸಲು ಐಪಿಸಿ ಸೆಕ್ಷನ್ 293 ಅವಕಾಶ ಮಾಡಿಕೊಡುತ್ತದೆ. ಎರಡನೇ ಬಾರಿ ಇಂತಹ ಕೃತ್ಯ ಎಸಗಿದರೆ ₹ 5 ಸಾವಿರ ದಂಡ ಮತ್ತು ಗರಿಷ್ಠ 7 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ವಿಧಿಸಲು ಅವಕಾಶವಿದೆ.
ಸಾರ್ವಜನಿಕ ಸ್ಥಳಗಳಲ್ಲಿ ‘ಅಶ್ಲೀಲ’ವಾಗಿ ವರ್ತಿಸುವ, ‘ಅಶ್ಲೀಲ’ ಪದಗಳನ್ನು ಬಳಸಿ ಮಾತನಾಡುವ, ‘ಅಶ್ಲೀಲ’ವಾದ ಹಾಡನ್ನು ಹಾಡುವ ವ್ಯಕ್ತಿಗಳಿಗೆ ಗರಿಷ್ಠ ಮೂರು ತಿಂಗಳು ಕಾರಾಗೃಹ ಶಿಕ್ಷೆ ಅಥವಾ ದಂಡ ಅಥವಾ ಕಾರಾಗೃಹ ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಲು ಐಪಿಸಿ ಸೆಕ್ಷನ್ 294 ಅವಕಾಶ ಮಾಡಿಕೊಡುತ್ತದೆ.
ವಿನಾಯಿತಿ
ಸಾರ್ವಜನಿಕ ಹಿತಾಸಕ್ತಿ ಇರುವ ಮತ್ತು ಸಾರ್ವಜನಿಕರಿಗೆ ಒಳ್ಳೆಯದಾಗುತ್ತದೆ ಎಂದು ಸಾಬೀತಾದ, ವೈಜ್ಞಾನಿಕ ಸಂಶೋಧನೆ, ಸಾಹಿತ್ಯ, ಕಲೆ ಮತ್ತು ಕಲಿಕೆಯ ಉದ್ದೇಶದಿಂದ ಪ್ರಕಟಿಸಲಾದ ಪುಸ್ತಕ, ಕರಪತ್ರ, ಬರಹ, ಚಿತ್ರ, ಪೇಂಟಿಂಗ್‌ಗಳಿಗೆ ಈ ಸೆಕ್ಷನ್ ಅನ್ನು ಅನ್ವಯ ಮಾಡುವಂತಿಲ್ಲ.
ಧಾರ್ಮಿಕ ಉದ್ದೇಶದ ಇಂತಹ ಶಿಲ್ಪ, ಪೇಂಟಿಂಗ್‌ಗಳು ದೇವಾಲಯಗಳಲ್ಲಿ, ರಥಗಳಲ್ಲಿ ಇದ್ದರೆ ಅವುಗಳಿಗೆ ಈ ಸೆಕ್ಷನ್ ಅನ್ನು ಅನ್ವಯ ಮಾಡುವಂತಿಲ್ಲ. ಧಾರ್ಮಿಕ ಉದ್ದೇಶದಿಂದ ಇಂತಹ ವಸ್ತುಗಳನ್ನು ಇರಿಸಿಕೊಂಡಿದ್ದರೆ, ಧಾರ್ಮಿಕ ಉದ್ದೇಶದಿಂದ ಇಂತಹ ವಸ್ತುಗಳನ್ನು ಬಳಸುತ್ತಿದ್ದರೆ ಈ ಸೆಕ್ಷನ್ ಅನ್ವಯ ಆಗುವುದಿಲ್ಲ.
ಪುರಾತತ್ವ ಇಲಾಖೆಯ ಅಡಿಯಲ್ಲಿ ಗುರುತಿಸಲಾದ ಸ್ವಾರಕಗಳಲ್ಲಿ ಇಂತಹ ಶಿಲ್ಪ, ಚಿತ್ರಗಳು ಇದ್ದರೆ ಅವುಗಳಿಗೆ ಈ ಸೆಕ್ಷನ್ ಅನ್ನು ಅನ್ವಯ ಮಾಡುವಂತಿಲ್ಲ.
ಆಧಾರ: ಭಾರತೀಯ ದಂಡ ಸಂಹಿತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.