ADVERTISEMENT

ಆಳ–ಅಗಲ | ಬಿಪಿಎಲ್‌ ಕಾರ್ಡ್‌: ನಕಲಿಯೇ ಹೆಚ್ಚು?

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 23:36 IST
Last Updated 9 ಜುಲೈ 2024, 23:36 IST
   
ಅನರ್ಹ ಬಿಪಿಎಲ್‌ (ಆದ್ಯತಾ) ಕಾರ್ಡ್‌ ರಾಜ್ಯದಲ್ಲಿ ಮತ್ತೆ ಸದ್ದು ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದರ ವಿರುದ್ಧವಾಗಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದ ಬಡತನದ ಅಂಕಿ ಅಂಶಗಳು ಒಂದು ರೀತಿಯಲ್ಲೇ ಇದ್ದರೆ, ಬಡತನದ ಆಧಾರದಲ್ಲೇ ನೀಡಲಾಗುವ ಪಡಿತರ ಕಾರ್ಡ್‌ಗಳು, ಫಲಾನುಭವಿಗಳ ಸಂಖ್ಯೆಗಳು ಇನ್ನೊಂದು ರೀತಿ ಇವೆ. ದೇಶ ಮತ್ತು ರಾಜ್ಯದಲ್ಲಿರುವ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ಗಳು ಮತ್ತು ಫಲಾನುಭವಿಗಳ ಚಿತ್ರಣವನ್ನು ಇಲ್ಲಿ ಕಟ್ಟಿ ಕೊಡಲಾಗಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಆದ್ಯತಾ (ಬಿಪಿಎಲ್‌) ಕಾರ್ಡ್‌ಗಳ ಪೈಕಿ ಬೋಗಸ್‌ ಇರುವವುದನ್ನು ರದ್ದು ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿರುವ ಒಟ್ಟು ಪಡಿತರ ಕಾರ್ಡ್‌ಗಳ ಪೈಕಿ ಶೇ 80ರಷ್ಟು ಕಾರ್ಡ್‌ಗಳು ಬಿಪಿಎಲ್‌ ಕಾರ್ಡ್‌ಗಳು. ಈ ವರ್ಷದ ಆರಂಭದಲ್ಲಿ ನೀತಿ ಆಯೋಗ ಬಿಡುಗಡೆಮಾಡಿರುವ ಬಹು ಆಯಾಮ ಬಡತನ ಸೂಚ್ಯಂಕದ ವರದಿಯು, 2022–23ರಲ್ಲಿ ಕರ್ನಾಟಕದಲ್ಲಿ ಶೇ 5.67ರಷ್ಟು ಜನರು ಬಡತನ ರೇಖೆಗಿಂತ ಕೆಳಗಿರಬಹುದು ಎಂದು ಅಂದಾಜಿಸಿದೆ. ಸಭೆಯಲ್ಲಿ ಈ ಎರಡೂ ಅಂಶಗಳನ್ನು ಪ್ರಸ್ತಾಪಿಸಿರುವ ಸಿಎಂ, ಬಡತನದ ಪ್ರಮಾಣ ಇಷ್ಟು ಕಡಿಮೆ ಇದ್ದರೂ, ಬಿಪಿಎಲ್‌ ಕಾರ್ಡ್‌ಗಳು ಯಾಕೆ ಹೆಚ್ಚಿವೆ ಎಂದು ಪ್ರಸ್ತಾಪಿಸಿದ್ದಾರೆ. ತಮಿಳುನಾಡಿನ ಉದಾಹರಣೆಯನ್ನೂ (ಅಲ್ಲಿ ಶೇ 40ರಷ್ಟು ಬಿಪಿಎಲ್‌ ಕಾರ್ಡ್‌ಗಳಿವೆ) ನೀಡಿದ್ದಾರೆ. 

ಬೋಗಸ್‌ ಬಿಪಿಎಲ್‌ ಕಾರ್ಡ್‌ಗಳ ಹಾವಳಿ ನಿನ್ನೆ ಮೊನ್ನೆಯದಲ್ಲ. ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಸರ್ಕಾರಿ ಅಧಿಕಾರಿಗಳು, ಶ್ರೀಮಂತರು ಸೇರಿದಂತೆ ಅನರ್ಹರು ತಮ್ಮ ಪ್ರಭಾವ ಬೀರಿ ಬಿಪಿಎಲ್‌ ಕಾರ್ಡ್‌ಗಳನ್ನು ಮಾಡಿಸಿಕೊಂಡಿದ್ದಾರೆ. ನ್ಯಾಯ ಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಸಿಗುವ ಅಕ್ಕಿಗಳನ್ನು ಮಾರುವ ನಕಲಿ ಕಾರ್ಡ್‌ದಾರರು, ಶಿಕ್ಷಣ, ಉದ್ಯೋಗ ಸೇರಿದಂತೆ ಇತರ ಸೌಲಭ್ಯಗಳನ್ನು ಪಡೆಯುತ್ತಿರುತ್ತಾರೆ. ನಕಲಿ ಕಾರ್ಡ್‌ ರದ್ದತಿ ಅಭಿಯಾನವನ್ನು ಸರ್ಕಾರ ಕೈಗೊಂಡರೂ ಹೆಚ್ಚು ಪ್ರಯೋಜನವಾಗುತ್ತಿಲ್ಲ. 2022ರಲ್ಲಿ 3.17 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ ಎಂದು ಸರ್ಕಾರ ಹೇಳಿತ್ತು. 

ಹೊಸ ಬಿಪಿಎಲ್‌ ಕಾರ್ಡ್‌ಗಳಿಗೆ ಬರುವ ಅರ್ಜಿಗಳ ಸಂಖ್ಯೆಗೆ ಹೋಲಿಸಿದರೆ, ರದ್ದಾಗುತ್ತಿರುವ ಕಾರ್ಡ್‌ಗಳ ಸಂಖ್ಯೆ ಕಡಿಮೆ. ನಕಲಿ ಕಾರ್ಡ್‌ದಾರರನ್ನು ಪತ್ತೆ ಹಚ್ಚಿದ ಬಳಿಕ ಅವರ ವಿರುದ್ಧ ಆಹಾರ, ನಾಗರಿಕ ಸರಬರಾಜು ಇಲಾಖೆ ಕಠಿಣ ಕ್ರಮ ಕೈಗೊಂಡ ಉದಾಹರಣೆಯೂ ಇಲ್ಲ. 

ADVERTISEMENT

ಇದು ದೇಶದ ಸಮಸ್ಯೆ

ಕರ್ನಾಟಕ ಮಾತ್ರವಲ್ಲ, ದೇಶದ ಎಲ್ಲ ರಾಜ್ಯಗಳಲ್ಲೂ ಈ ಸಮಸ್ಯೆ ಇದೆ. ನೀತಿ ಆಯೋಗದ ವರದಿ ಹಾಗೂ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ದೇಶದಾದ್ಯಂತ ವಿತರಿಸಲಾಗಿರುವ ಅಂತ್ಯೋದಯ ಮತ್ತು ಆದ್ಯತಾ ಕಾರ್ಡ್‌ಗಳು ಮತ್ತು ಫಲಾನುಭವಿಗಳ ಅಂಕಿ ಅಂಶಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. 

ಬಹು ಆಯಾಮ ಬಡತನ ಸೂಚ್ಯಂಕ ವರದಿಯ ಬಗ್ಗೆ ಹಲವು ಆಕ್ಷೇಪಗಳಿವೆ. ವರದಿಯು ವಾಸ್ತವದಿಂದ ಕೂಡಿಲ್ಲ ಎಂಬ ವಾದ ಇದೆ. ಹಾಗಿದ್ದರೂ, ರಾಜ್ಯವಾರು ಬಿಪಿಎಲ್‌ ಕಾರ್ಡ್‌ಗಳು ಮತ್ತು ಫಲಾನುಭವಿಗಳ ಸಂಖ್ಯೆಗಳು ಕೂಡ ವಾಸ್ತವದ್ದಲ್ಲ ಎಂಬುದು ಸ್ಪಷ್ಟ.

ದೇಶದಾದ್ಯಂತ ಆಹಾರ ಭದ್ರತಾ ಕಾಯ್ದೆಯಡಿ 20,16,54,435 ಕೋಟಿ ಅಂತ್ಯೋದಯ ಮತ್ತು ಆದ್ಯತಾ ಕಾರ್ಡ್‌ಗಳನ್ನು ವಿತರಿಸಲಾಗಿದೆ. 80,96,83,394 ಫಲಾನುಭವಿಗಳಿದ್ದಾರೆ. 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ಪ್ರತಿ ತಿಂಗಳು 81 ಕೋಟಿಯಷ್ಟು ಜನರು ಪಡಿತರ ಪಡೆಯುತ್ತಿದ್ದಾರೆ.

ಆಧಾರ: ನೀತಿಆಯೋಗದ ಬಹುಆಯಾಮ ಬಡತನ ಸೂಚ್ಯಂಕ ವರದಿ, ಆಹಾರ ಭದ್ರತಾ ಕಾಯ್ದೆ ಪೋರ್ಟಲ್‌, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.