ADVERTISEMENT

ಆಳ–ಅಗಲ: ‘ಕಲ್ಯಾಣ’ ವೈಭೋಗ; ಒಂದೇ ತಿಂಗಳಲ್ಲಿ 48 ಲಕ್ಷ ಮದುವೆ

ಸಿಎಐಟಿ ಸಮೀಕ್ಷೆ: ಒಂದೇ ತಿಂಗಳಲ್ಲಿ 48 ಲಕ್ಷ ವಿವಾಹಗಳು, ₹5.90 ಲಕ್ಷ ಕೋಟಿ ವಹಿವಾಟು ನಿರೀಕ್ಷೆ

ಕೆ.ಎಚ್.ಓಬಳೇಶ್
Published 17 ನವೆಂಬರ್ 2024, 19:21 IST
Last Updated 17 ನವೆಂಬರ್ 2024, 19:21 IST
   

ಮದುವೆ ಎನ್ನುವುದು ಭಾರತದಲ್ಲಿ ವಧು ಮತ್ತು ವರ ಅಥವಾ ಎರಡು ಕುಟುಂಬಗಳ ನಡುವಿನ ವೈಯಕ್ತಿಕ ವಿಚಾರವಷ್ಟೇ ಆಗಿ ಉಳಿದಿಲ್ಲ. ದೇಶದ ಆರ್ಥಿಕತೆ ಬೆಳವಣಿಗೆಗೆ ವಿವಾಹ ಉದ್ಯಮವು ಅತಿಹೆಚ್ಚು ಕೊಡುಗೆ ನೀಡುತ್ತಿದೆ. ಭಾರತದ ಮದುವೆ ಮಾರುಕಟ್ಟೆಯ ಮೌಲ್ಯವು ಅಮೆರಿಕದ ಮದುವೆ ಮಾರುಕಟ್ಟೆಗಿಂತ ಎರಡು ಪಟ್ಟು ದೊಡ್ಡದಿದೆ.

ಮದುವೆ ಋತುವಿನಲ್ಲಿ ಆಭರಣದ ಅಂಗಡಿ, ಸೀರೆ ಅಂಗಡಿ, ವಾಲಗದವರು, ಮದುವೆ ಆಹ್ವಾನಪತ್ರ ಮುದ್ರಿಸುವವರು, ಕೇಟರಿಂಗ್‌, ಹೋಟೆಲ್‌, ರೆಸಾರ್ಟ್‌, ಕಲ್ಯಾಣ ಮಂಟಪದ ಬುಕಿಂಗ್‌… ಹೀಗೆ ಕೋಟ್ಯಂತರ ರೂಪಾಯಿ ಹಣ ಕೈಬದಲಾಗುತ್ತದೆ. ದೇಶದಲ್ಲಿ ಪ್ರತಿ ವರ್ಷವೂ ಈ ಉದ್ಯಮದ ವಹಿವಾಟು ದ್ವಿಗುಣಗೊಳ್ಳುತ್ತಿದೆ. ಸರಕು ಮತ್ತು ಸೇವಾ ವಲಯದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತವೆ.

ಭಾರತದಲ್ಲಿ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಮದುವೆ ಸಂಭ್ರಮ ಗರಿಗೆದರುತ್ತದೆ; ದೇಶದಲ್ಲಿ ನಡೆಯುತ್ತಿರುವ ವೈಭವೋಪೇತ ಮದುವೆಗಳು ವಿಶ್ವದ ಗಮನ ಸೆಳೆಯುತ್ತಿವೆ.  

ADVERTISEMENT

ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ನಡೆಸಿರುವ ಸಮೀಕ್ಷೆ ಪ್ರಕಾರ, ಈ ಬಾರಿಯ ನವೆಂಬರ್‌ 12ರಿಂದ ಡಿಸೆಂಬರ್‌ 16ರವರೆಗೆ ದೇಶದಲ್ಲಿ 48 ಲಕ್ಷ ಮದುವೆಗಳು ಜರುಗಲಿವೆ. ಒಟ್ಟು ₹5.90 ಲಕ್ಷ ಕೋಟಿ ವಹಿವಾಟು ನಡೆಯಬಹುದು ಎಂದು ಅಂದಾಜಿಸಿದೆ.

ಈ ಅವಧಿಯಲ್ಲಿ ದೆಹಲಿಯೊಂದರಲ್ಲೇ 4.5 ಲಕ್ಷ ವಿವಾಹಗಳು ನಡೆಯುತ್ತವೆ. ಒಟ್ಟಾರೆ ₹1.50 ಲಕ್ಷ ಕೋಟಿ ವಹಿವಾಟು ನಡೆಯಲಿದೆ. ಈ ವಹಿವಾಟು ಫ್ಯಾಷನ್‌, ಪ್ರವಾಸ, ಆತಿಥ್ಯ, ಮನರಂಜನೆ ಹೀಗೆ ವಿವಿಧ ವಲಯಗಳಿಗೆ ವಿಸ್ತರಿಸಿಕೊಳ್ಳುತ್ತದೆ ಎಂದು ತಿಳಿಸಿದೆ.

ಮದುವೆ ಎನ್ನುವುದನ್ನು ತಮ್ಮ ಜೀವನದ ಬಹು ಮುಖ್ಯ ಘಟ್ಟ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ. ವಿವಾಹವು ಭಾರತದಲ್ಲಿ ಪ್ರಮುಖ ಆರ್ಥಿಕ ಚಟುವಟಿಕೆಯೂ ಆಗಿದೆ. ನೂರಾರು ಉದ್ಯೋಗಗಳ ಸೃಷ್ಟಿಗೆ, ಲಕ್ಷಾಂತರ ಕೋಟಿ ರೂಪಾಯಿ ವಹಿವಾಟಿಗೆ ಕಾರಣವಾಗುತ್ತಿದೆ. ವಾರ್ಷಿಕವಾಗಿ ಅತಿ ಹೆಚ್ಚು ಮದುವೆಗಳು ನಡೆಯುವ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ; ದೇಶದ ಮದುವೆ ಮಾರುಕಟ್ಟೆಯ ಮೌಲ್ಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲೇ ಮದುವೆ ಮಾಡಿಕೊಳ್ಳುವಂತೆ ಶ್ರೀಮಂತರಿಗೆ ಕರೆ ನೀಡಿರುವುದು ಮದುವೆ ಮಾರುಕಟ್ಟೆಯ ಮಹತ್ವವನ್ನು ಸೂಚಿಸುತ್ತದೆ

ಪ್ರತಿ ಕುಟುಂಬವು ಜೀವನದಲ್ಲಿ ಜತನದಿಂದ ಕೂಡಿಟ್ಟ ಹಣವನ್ನು ಮದುವೆಗೆ ವ್ಯಯಿಸುತ್ತದೆ. ಕೆಲವರು ವಿವಾಹ ನೋಂದಣಿ ಕಚೇರಿಯಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡು ಸರಳವಾಗಿ ವೈವಾಹಿಕ ಜೀವನಕ್ಕೆ ಅಡಿ ಇಡುತ್ತಾರೆ. ಮತ್ತೆ ಕೆಲವರು ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಕೆಲವರ ಮದುವೆಯು ಆಪ್ತರು, ಪರಿಚಿತರ ಆಹ್ವಾನಕ್ಕಷ್ಟೇ ಸೀಮಿತಗೊಂಡಿರುತ್ತದೆ. ಆದರೆ, ಸಿರಿವಂತರು ವಿವಾಹಕ್ಕಾಗಿಯೇ ಕೋಟ್ಯಂತರ ರೂಪಾಯಿ ವ್ಯಯಿಸುತ್ತಾರೆ.

ಭಾರತದಲ್ಲಿ ಮಧ್ಯಮ ವರ್ಗದ ಕುಟುಂಬಗಳು ಮದುವೆಗೆ ₹5ರಿಂದ ₹25 ಲಕ್ಷದವರೆಗೆ ವ್ಯಯಿಸಿದರೆ, ಮೇಲ್ಮಧ್ಯಮ ವರ್ಗದ ಕುಟುಂಬಗಳು ₹25 ಲಕ್ಷದಿಂದ ₹2.50 ಕೋಟಿವರೆಗೂ ವೆಚ್ಚ ಮಾಡುತ್ತವೆ ಎಂದು ಸಿಎಐಟಿ ವರದಿ ಹೇಳಿದೆ.

ಪ್ರಸ್ತುತ ಪ್ರೀ ವೆಡ್ಡಿಂಗ್‌ ಕಾರ್ಯಕ್ರಮಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಬಾಲಿವುಡ್ ಸಿನಿಮಾಗಳ ಶೈಲಿಯಲ್ಲಿ ವಿವಾಹ ಮಾಡುವವರೂ ಇದ್ದಾರೆ. ಮದುವೆಗೂ ಮೊದಲು ತಿಂಗಳುಗಟ್ಟಲೆ ಕಾರ್ಯಕ್ರಮ ಆಯೋಜಿಸುತ್ತಾರೆ.

ಇತ್ತೀಚೆಗೆ ನಡೆದ ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ-ನೀತಾ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅವರ ಮದುವೆ ಇದಕ್ಕೊಂದು ತಾಜಾ ನಿದರ್ಶನ. ಈ ವಿವಾಹ ಮಹೋತ್ಸವದಲ್ಲಿ ದೇಶದ ಸಿನಿ ತಾರೆಯರು, ರಾಜಕಾರಣಿಗಳು, ಉದ್ಯಮದ ಗಣ್ಯರು ಸೇರಿ ಜಾಗತಿಕ ಮಟ್ಟದ ತಾರಾಮಣಿಗಳು ಪಾಲ್ಗೊಂಡಿದ್ದರು.

ಭಾರತದಲ್ಲಿ ಮದುವೆ ಮಾಡುವುದನ್ನು ಪ್ರತಿಷ್ಠೆಯ ವಿಚಾರ ಎನ್ನುವಂತೆ, ಸಾಧನೆ ಎನ್ನುವಂತೆ ಭಾವಿಸಲಾಗುತ್ತದೆ. ದೇಶದ ಬಹುತೇಕ ಜಾತಿ, ಧರ್ಮ, ಪಂಗಡಗಳು ಮದುವೆಗೆ ತಮ್ಮ ಶಕ್ತಿ ಮೀರಿ ಖರ್ಚು ಮಾಡುತ್ತವೆ.         

ಕೋವಿಡ್‌ ಬಳಿಕ ಚೇತರಿಕೆ

ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶದ ವಿವಾಹ ಉದ್ಯಮಕ್ಕೆ ತೀವ್ರ ಪೆಟ್ಟು ಬಿದ್ದಿತ್ತು. ಸದ್ಯ ಈ ವಲಯವು ಚೇತರಿಕೆಯ ಹಳಿಗೆ ಮರಳಿದೆ. ಮದುವೆಯ ಬಜೆಟ್‌ನಲ್ಲಿ ಅಡುಗೆ, ಹೋಟೆಲ್‌, ರೆಸಾರ್ಟ್‌ಗಳ ಬುಕಿಂಗ್‌ (ಆತಿಥ್ಯ ವಲಯ) ಪಾಲು ಶೇ 20ರಷ್ಟಿದ್ದರೆ, ಆಭರಣಗಳ ಖರೀದಿಯ ಪಾಲು ಶೇ 15ರಷ್ಟಿದೆ.

ಮದುವೆ ಋತುವಿನಲ್ಲಿ ಛಾಯಾಗ್ರಹಣ/ವಿಡಿಯೊಗ್ರಫಿ, ಸಿಹಿ ಪದಾರ್ಥ, ಎಲೆಕ್ಟ್ರಾನಿಕ್ಸ್‌, ತರಕಾರಿ, ಉಡುಗೊರೆ, ಅಲಂಕಾರ, ಇವೆಂಟ್‌ ಮ್ಯಾನೇಜ್‌ಮೆಂಟ್‌, ಮನರಂಜನೆ, ಪ್ರವಾಸೋದ್ಯಮ ಹೀಗೆ ವಿವಿಧ ಕ್ಷೇತ್ರದಲ್ಲಿ ದುಡಿಯುವವರಿಗೆ ಕೆಲಸ ದೊರೆಯುತ್ತದೆ.

ಸರಕು ಸಾಗಣೆ: ಈ ಅವಧಿಯಲ್ಲಿ ಸರಕು ಸಾಗಣೆ ವಲಯದಲ್ಲೂ ಹೆಚ್ಚು ವಹಿವಾಟು ನಡೆಯುತ್ತದೆ. ಮದುವೆಗಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಮಗ್ರಿಗಳ ಸಾಗಣೆ ನಡೆಯುತ್ತದೆ. ಅತಿಥಿಗಳ ಸಂಚಾರಕ್ಕೂ ಸಾರಿಗೆ ಇತ್ಯಾದಿ ಬಳಸಲಾಗುತ್ತದೆ. ಇದರಿಂದ ಹೊಸ ಉದ್ಯೋಗ ಸೃಷ್ಟಿಯ ಜೊತೆಗೆ ಈ ಉದ್ಯಮದ ಆದಾಯ ಹೆಚ್ಚಳವಾಗುತ್ತದೆ.

ಶಿಕ್ಷಣಕ್ಕಿಂತಲೂ ಮದುವೆಗೆ ಹೆಚ್ಚು ವೆಚ್ಚ

ಮದುವೆಯಲ್ಲಿ ಯಾವುದಕ್ಕೂ ಕೊರತೆಯಾಗಬಾರದು ಎಂಬುದು ಹೆತ್ತವರ ಬಯಕೆ. ಈ ಸಂಭ್ರಮವನ್ನು ಸ್ಮರಣೀಯವಾಗಿಸುವುದು ಅವರ ಆಸೆ. ಇದಕ್ಕಾಗಿ ಉಳಿತಾಯದ ಹಣವನ್ನೆಲ್ಲಾ ಖಾಲಿ ಮಾಡಿಕೊಳ್ಳುತ್ತಾರೆ. ಭಾರತದಲ್ಲಿ ಮಕ್ಕಳ ಶಿಕ್ಷಣಕ್ಕೆ ವ್ಯಯಿಸುವ ವೆಚ್ಚಕ್ಕಿಂತ ಅವರ ಮದುವೆಗೆ ಹೆಚ್ಚಿನ ಖರ್ಚು ಮಾಡುವವರ ಸಂಖ್ಯೆ ದೊಡ್ಡದು.

ಭಾರತದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿ ಹಂತದವರೆಗೆ ಹೆಣ್ಣು ಅಥವಾ ಗಂಡು ಮಕ್ಕಳ ಶಿಕ್ಷಣಕ್ಕೆ ವ್ಯಯಿಸುವ ಖರ್ಚಿಗಿಂತ ಅವರ ಮದುವೆಗೆ ಮಾಡುವ ವೆಚ್ಚವು ಎರಡು ಪಟ್ಟು ಹೆಚ್ಚಿದೆ ಎನ್ನುತ್ತದೆ ಜಾಗತಿಕ ಬ್ರೋಕರೇಜ್‌ ಸಂಸ್ಥೆ ಜೆಫರಿಸ್‌ ವರದಿ. ಪ್ರಸ್ತುತ ಭಾರತದ ತಲಾ ವಾರ್ಷಿಕ ಆದಾಯ 2,730 ಡಾಲರ್‌ (₹2.30 ಲಕ್ಷ) ಆಗಿದೆ. ತಲಾ ಆದಾಯದ ಐದು ಪಟ್ಟು ಹಣವನ್ನು ಮದುವೆಗೆ ವೆಚ್ಚ ಮಾಡಲಾಗುತ್ತದೆ. ಕುಟುಂಬದ ವಾರ್ಷಿಕ ಆದಾಯ
₹4 ಲಕ್ಷವಿದ್ದು, ಇದರ ಮೂರು ಪಟ್ಟು ವ್ಯಯ ಮಾಡಲಾಗುತ್ತದೆ ಎನ್ನುತ್ತದೆ ವರದಿ.

ಭಾರತದಲ್ಲಿ ಸರಾಸರಿ ಮದುವೆ ವೆಚ್ಚ ₹12.50 ಲಕ್ಷ ಆಗಿದೆ. ಮದುವೆಯ ಮಾರುಕಟ್ಟೆ ಮೌಲ್ಯವು ವಾರ್ಷಿಕ
₹10 ಲಕ್ಷ ಕೋಟಿ ದಾಟಿದೆ. ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತಿಹೆಚ್ಚು ಮದುವೆಗಳು ನಡೆಯುತ್ತವೆ ಎಂದು ಹೇಳಿದೆ.‌ ಚೀನಾದಲ್ಲಿ ವಾರ್ಷಿಕವಾಗಿ 70 ಲಕ್ಷದಿಂದ 80 ಲಕ್ಷ ಮತ್ತು ಅಮೆರಿಕದಲ್ಲಿ 20 ಲಕ್ಷದಿಂದ 25 ಲಕ್ಷ ವಿವಾಹಗಳು ನಡೆಯುತ್ತವೆ. ಭಾರತದಲ್ಲಿ 80 ಲಕ್ಷದಿಂದ ಒಂದು ಕೋಟಿ ಮದುವೆಗಳು ನಡೆಯುತ್ತವೆ ಎಂದು ವಿವರಿಸಿದೆ.


ವೆಡ್‌ ಇನ್‌ ಇಂಡಿಯಾ

ವಿದೇಶದಲ್ಲಿ ಮಕ್ಕಳ ಮದುವೆ ಮಾಡುವುದು ಕೆಲವು ಶ್ರೀಮಂತ ಭಾರತೀಯರಿಗೆ ಪ್ರತಿಷ್ಠೆಯ ವಿಷಯ. ಪ್ರತಿ ವರ್ಷ ಸುಮಾರು 5000 ಮದುವೆಗಳು ಹೊರದೇಶಗಳಲ್ಲಿ (ಡೆಸ್ಟಿನೇಷನ್‌ ವೆಡ್ಡಿಂಗ್‌) ನಡೆಯುತ್ತವೆ. ಇವುಗಳ ವೆಚ್ಚ ಸುಮಾರು ₹1 ಲಕ್ಷ ಕೋಟಿ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ.

ಭಾರತೀಯ ಶ್ರೀಮಂತರ ಪೈಕಿ ಶೇ 10ರಷ್ಟು ಮಂದಿ ಮಾತ್ರ ವಿದೇಶದಲ್ಲಿ ಮದುವೆ ಮಾಡುತ್ತಾರೆ. ಬಹುತೇಕರ ಆಯ್ಕೆ ಥಾಯ್ಲೆಂಡ್‌, ಬಾಲಿ, ಇಟಲಿ, ದುಬೈ. 

ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ‘ಮನದ ಮಾತು’ ಮಾಸಿಕ ರೇಡಿಯೊ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಮೇಕ್‌ ಇನ್‌ ಇಂಡಿಯಾ ಮಾದರಿಯಲ್ಲಿ ‘ವೆಡ್‌ ಇನ್‌ ಇಂಡಿಯಾ’ ಬಗ್ಗೆ ಪ್ರಸ್ತಾಪಿಸಿದ್ದರು. ಅದೇ ವರ್ಷದ ಡಿಸೆಂಬರ್‌ನಲ್ಲಿ ಉತ್ತರಾಖಂಡದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲೂ ಈ ಮಾತನ್ನು ಪುನರುಚ್ಚರಿಸಿದ್ದರು. ದೇಶದ ಸಂಸ್ಕೃತಿ, ಪರಂಪರೆ ರಕ್ಷಣೆ ಹಾಗೂ ಆದಾಯ ವೃದ್ಧಿಗೊಳಿಸುವುದಕ್ಕಾಗಿ ವಿದೇಶದ ಬದಲು ಭಾರತದಲ್ಲಿಯೇ ವಿವಾಹ ಮಾಡುವಂತೆ ಒತ್ತಿ ಹೇಳಿದ್ದರು.

ದೇಶದಲ್ಲಿಯೇ ಮದುವೆ ಸಮಾರಂಭ ಹಮ್ಮಿಕೊಳ್ಳುವ ಕುರಿತಂತೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಗಳು ಜಾಗತಿಕ ಹೂಡಿಕೆದಾರರ
ಸಮಾವೇಶಗಳಲ್ಲಿ ಜಾಗೃತಿ ಮೂಡಿಸುತ್ತಿವೆ. 


ಯಾವ ಸ್ಥಳಗಳು ಪ್ರಸಿದ್ಧ?

ಮದುವೆಗಾಗಿ ಬೆಡಗಿನ ತಾಣಗಳ ಮೊರೆಹೋಗುವವರೇ ಹೆಚ್ಚು. ರಾಜಸ್ಥಾನ, ಕೇರಳ, ಉತ್ತರಾಖಂಡ, ಗೋವಾ ವಿವಾಹಪ್ರಿಯರ ನೆಚ್ಚಿನ ರಾಜ್ಯಗಳಾಗಿವೆ.

ಜೈಪುರ, ಉದಯಪುರ, ಜೋಧ್‌ಪುರ, ಗೋವಾ, ಮಹಾಬಲಿಪುರ ಮೆಚ್ಚಿನ ತಾಣಗಳಾಗಿವೆ. ಡೆಹ್ರಾಡೂನ್‌, ಹೃಷಿಕೇಶ, ಕರ್ನಾಟಕದ ಕೊಡಗು ಕೂಡ ವಿವಾಹಕ್ಕೆ ಹೇಳಿ ಮಾಡಿದ ಸ್ಥಳಗಳಾಗಿವೆ. ಇತ್ತೀಚೆಗೆ ಬೆಂಗಳೂರು ಕೂಡ ವೆಡ್ಡಿಂಗ್ ಡೆಸ್ಟಿನೇಷನ್‌ ಆಗಿ ರೂಪುಗೊಂಡಿದೆ. ಇಲ್ಲಿನ ಹೋಟೆಲ್‌, ರೆಸಾರ್ಟ್‌, ಸಾರಿಗೆ ಸೇವೆಯು ಹೊರರಾಜ್ಯದವರನ್ನು ಆಕರ್ಷಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.