ADVERTISEMENT

ಆಳ–ಅಗಲ | ವಾರದಲ್ಲಿ 70 ಗಂಟೆ ಕೆಲಸ: ಕೆಲವರ ಬೆಂಬಲ, ಹಲವರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2023, 6:09 IST
Last Updated 31 ಅಕ್ಟೋಬರ್ 2023, 6:09 IST
   

ದೇಶವನ್ನು ಮುಂದಕ್ಕೆ ತರಲು ವಾರದಲ್ಲಿ 70 ಗಂಟೆ ದುಡಿಯಬೇಕು ಎಂಬ ಸಲಹೆಯನ್ನು ಹಲವು ಉದ್ಯಮಿಗಳು ಬೆಂಬಲಿಸುತ್ತಿದ್ದಾರೆ. ದುಡಿಯುವ ವರ್ಗವು ಇದು ಶೋಷಣೆ ಎಂದು ಹೇಳುತ್ತಿದೆ. ವಾರವೆಲ್ಲಾ ಹೀಗೆ ದುಡಿದರೆ ಉತ್ಪಾದಕತೆ ಕುಸಿದು, ದೇಶದ ಆರ್ಥಿಕತೆಗೆ ಧಕ್ಕೆಯಾಗುತ್ತದೆ ಎನ್ನುತ್ತಿದೆ ವೈದ್ಯಲೋಕ. ವಾರಕ್ಕೆ 70 ಗಂಟೆ ದುಡಿಯಬೇಕು ಎಂಬುದೂ ಕಾನೂನುಬಾಹಿರವೂ ಹೌದು.

ಇನ್ಫೊಸಿಸ್ ಸಹ ಸಂಸ್ಥಾಪಕರಾದ ಎನ್‌.ಆರ್‌.‌ನಾರಾಯಣಮೂರ್ತಿ ಅವರು ಈಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಭಾರತವು ಆರ್ಥಿಕವಾಗಿ ಉತ್ತುಂಗಕ್ಕೆ ಏರಿದ ಶಕ್ತಿಯಾಗಬೇಕಾದರೆ ಯುವಜನರು ವಾರವೊಂದರಲ್ಲಿ 70 ತಾಸು ದುಡಿಯಬೇಕು ಎಂದು ಹೇಳಿದ್ದರು. ಅವರ ಈ ಮಾತು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದ ಸದ್ದು ಮಾಡಿದೆ. ಯುವಕರು ವಾರಕ್ಕೆ 70 ತಾಸು ದುಡಿಯಬೇಕು ಎಂಬುದನ್ನು ಕೆಲವರು ಬೆಂಬಲಿಸಿದರೆ, ಹಲವರು ವಿರೋಧಿಸುತ್ತಿದ್ದಾರೆ. ಇದು ಒಂದು ಚರ್ಚೆಯನ್ನು ಹುಟ್ಟುಹಾಕಿದೆ. ದೇಶದ ಮಾಹಿತಿ ತಂತ್ರಜ್ಞಾನ ವಲಯದಲ್ಲಿನ ದುಡಿಮೆಯ ಸಂಸ್ಕೃತಿ, ದುಡಿಮೆಯಲ್ಲಿನ ತೊಡಕುಗಳು ಮತ್ತು ವೇತನದ ಸ್ಥಿತಿಗತಿಯ ಬಗ್ಗೆಯೂ ಚರ್ಚೆಯನ್ನು ಈ ಮಾತು ಹುಟ್ಟುಹಾಕಿದೆ.

70 ತಾಸು ದುಡಿಯಬೇಕು ಎಂಬ ಮಾತಿಗೆ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಕಾರ್ಯಕರ್ತರು, ಉದ್ಯೋಗಿಗಳು, ಐಟಿ–ಕೈಗಾರಿಕಾ ವಲಯದಲ್ಲಿ ದುಡಿಯುತ್ತಿರುವ ಸಾಮಾನ್ಯ ಜನರು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರಂಭದ ದಿನಗಳಲ್ಲಿ ನಾರಾಯಣಮೂರ್ತಿಯವರು ವಾರದಲ್ಲಿ 80–90 ತಾಸು ದುಡಿಯುತ್ತಿದ್ದರು ಎಂದು ಸುಧಾಮೂರ್ತಿ ಅವರು ನೀಡಿದ ಸಮರ್ಥನೆಗೂ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಬಹುತೇಕ ಮಂದಿ ಇದು ಶೋಷಣೆ ಮತ್ತು ಬಂಡವಾಳಶಾಹಿ ಮನಃಸ್ಥಿತಿ ಎಂದು ಕರೆದಿದ್ದಾರೆ.

ADVERTISEMENT
ಇಡೀ ಜಗತ್ತು ವಾರದಲ್ಲಿ ನಾಲ್ಕು ದಿನ ದುಡಿಮೆಯತ್ತ ಹೊರಳುತ್ತಿದ್ದರೆ, ಇವರು ವಾರದ ಏಳು ದಿನವೂ ದುಡಿಯುವ ಮಾತನಾಡುತ್ತಿದ್ದಾರೆ. ಒಬ್ಬ ಉದ್ಯೋಗದಾತನಾಗಿ ಉದ್ಯೋಗಿಯಿಂದ ಗರಿಷ್ಠ ದುಡಿಮೆ ಮಾಡಿಸಿಕೊಳ್ಳುವುದು ಸರಿ ಎನಿಸುತ್ತದೆ. ಆದರೆ ಉದ್ಯೋಗಿಗಳ ಮಾನಸಿಕ ಆರೋಗ್ಯ ಏನಾಗಬೇಕು? ಅವರ ಕೌಟುಂಬಿಕ ಜೀವನ ಏನಾಗಬೇಕು?
ಕಮಲ್‌ ಕುಮಾರ್ (@kamalkumarBJD), ಖಾಸಗಿ ಕಂಪನಿ ಉದ್ಯೋಗಿ ಮತ್ತು ಬಿಜೆಡಿ ಕಾರ್ಯಕರ್ತ

2022ರಲ್ಲಿ ಕೇಂದ್ರ ಸರ್ಕಾರವು ಕಾರ್ಮಿಕ ಸಂಹಿತೆಯನ್ನು ಜಾರಿಗೆ ತಂದಿತು. ಆ ಪ್ರಕಾರ ಯಾವುದೇ ವ್ಯಕ್ತಿ ವಾರವೊಂದರಲ್ಲಿ ದುಡಿಯುವ ಒಟ್ಟು ಅವಧಿ 48 ಗಂಟೆಗಳನ್ನು ಮೀರಬಾರದು. ಅದು ದಿನಕ್ಕೆ 12 ತಾಸಿನಂತೆ ವಾರಕ್ಕೆ ನಾಲ್ಕು ದಿನ, ದಿನಕ್ಕೆ 9.6 ತಾಸಿನಂತೆ ವಾರಕ್ಕೆ ಐದು ದಿನ ಮತ್ತು ದಿನಕ್ಕೆ 8 ತಾಸಿನಂತೆ ವಾರಕ್ಕೆ ಆರು ದಿನ ಕೆಲಸ ಮಾಡಬಹುದು ಎಂದು ಕಾರ್ಮಿಕ ಸಂಹಿತೆ ಹೇಳುತ್ತದೆ. ಓವರ್‌ಟೈಮ್‌ ಪಾವತಿ ಇಲ್ಲದ ವಾರಕ್ಕೆ 48 ಗಂಟೆಗಿಂತ ಹೆಚ್ಚಿನ ಅವಧಿಯ ದುಡಿಮೆ ದಂಡಾರ್ಹ ಮತ್ತು ಶಿಕ್ಷಾರ್ಹ ಅಪರಾಧವಾಗುತ್ತದೆ. ಓವರ್‌ಟೈಮ್‌ ಪಾವತಿ ಇದ್ದರೂ ದಿನವೊಂದರ ದುಡಿಮೆಯ ಅವಧಿ 12 ತಾಸು ಮೀರಬಾರದು. ಆದರೆ ವಾರಕ್ಕೆ 70 ಗಂಟೆ ಆಗಬೇಕಾದರೆ ದಿನವೊಂದರಲ್ಲಿ 14 ತಾಸಿನಂತೆ ವಾರದಲ್ಲಿ ಐದು ದಿನ ದುಡಿಯಬೇಕು. ಅದೇ ರೀತಿ ವಾರದಲ್ಲಿ ಆರು ದಿನ 11.9 ತಾಸು ದುಡಿಯಬೇಕಾಗುತ್ತದೆ.

ವಾರಕ್ಕೆ 70 ತಾಸು ದುಡಿದರೆ ದೇಶವು ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹಲವು ಉದ್ಯಮಿಗಳು ಹೇಳಿದ್ದಾರೆ. ಆದರೆ, ಒಬ್ಬ ವ್ಯಕ್ತಿ ಅಷ್ಟು ತಾಸು ದುಡಿದರೆ ಅವನ ಆರೋಗ್ಯದಲ್ಲಿ ಏರುಪೇರಾಗುತ್ತದೆ, ಅವನ ಉತ್ಪಾದಕತೆ ಕುಸಿಯುತ್ತದೆ. ಇದು ಯಾವುದೇ ಉದ್ಯಮದ ಉತ್ಪಾದಕತೆಯನ್ನು ಕುಗ್ಗಿಸುತ್ತದೆ. ವಾರವೊಂದರಲ್ಲಿ 70 ತಾಸಿನಷ್ಟು ದುಡಿಮೆ ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ ಎಂದು ಹಲವು ವೈದ್ಯರು ಸಾಮಾಜಿಕ ಜಾಲತಾಣಗಳಲ್ಲಿನ ಚರ್ಚೆಯಲ್ಲಿ ತಮ್ಮ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ. ಮಾನಸಿಕ ಒತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಬೊಜ್ಜು, ಅಧಿಕ ರಕ್ತದೊತ್ತಡದಂತಹ ಆರೋಗ್ಯದ ಸಮಸ್ಯೆಗಳು ತಲೆದೋರಬಹುದು. ಅಂತಿಮವಾಗಿ ಇದು ದೇಶದ ಪ್ರಗತಿಗೆ ಮಾರಕ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಐಟಿ ಉದ್ಯಮವು ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿದೆ. ಇಲ್ಲಿನ ಐಟಿ ಕಂಪನಿಗಳಿಗೆ ಕೆಲಸಕ್ಕೆ ಹೋಗಿ, ಮನೆಗೆ ಬರಲೇ ನಾಲ್ಕು ತಾಸು ಬೇಕು. ಹೀಗಿರುವಾಗ 14 ತಾಸು ಕೆಲಸ, 4 ತಾಸು ಪ್ರಯಾಣ ಮಾಡಬೇಕಾಗುತ್ತದೆ. ನೀವು ಎಂದಾದರೂ ಹೀಗೆ ಮಾಡಿದ್ದೀರಾ ಎಂದು ಟ್ವಿಟರ್‌ನಲ್ಲಿ ಹಲವರು ಪ್ರಶ್ನಿಸಿದ್ದಾರೆ

‘ನಮ್ಮ ಯುವಕರು ಏನನ್ನೂ ಕಲಿಯುತ್ತಿಲ್ಲ’

‘3ಒನ್‌4 ಕ್ಯಾಪಿಟಲ್‌’ ನವೋದ್ಯಮದ ಯೂಟ್ಯೂಬ್‌ ಚಾನೆಲ್‌ ಅ.27ರಂದು ಆಯೋಜಿಸಿದ್ದ ‘ದಿ ರೆಕಾರ್ಡ್‌’ ಕಾರ್ಯಕ್ರಮದಲ್ಲಿ ನಾರಾಯಣ ಮೂರ್ತಿ ಅವರು ಮಾತನಾಡಿದ್ದರು. ಉದ್ಯಮಿ ಮೋಹನ್‌ದಾಸ್‌ ಪೈ ಅವರು ನಾರಾಯಣ ಮೂರ್ತಿ ಅವರ ಸಂದರ್ಶನ ನಡೆಸಿದ್ದರು.  ಸ್ವಾತಂತ್ರ್ಯೋತ್ತರ ಭಾರತ, ಜವಾಹರ ಲಾಲ್‌ ನೆಹರೂ ಅವರ ಆಡಳಿತ ಮತ್ತು 1991ರ ಜಾಗತೀಕರಣದ ಬಗ್ಗೆಯೂ ಅವರು ಮಾತನಾಡಿದ್ದರು. ತಾವು ಸಮಾಜವಾದಿ ಸಿದ್ಧಾಂತ ಬಿಟ್ಟು ಬಂಡವಾಳಶಾಹಿ ಸಿದ್ಧಾಂತಕ್ಕೆ ಹೇಗೆ ಬದಲಾದೆ ಎಂದೂ ಹೇಳಿಕೊಂಡಿದ್ದರು. 1991ಕ್ಕೂ ಮೊದಲು ಭಾರತವು ಉದ್ಯಮಿಸ್ನೇಹಿ ಆಗಿರಲಿಲ್ಲ ಎಂದೂ ಅವರು ಸಂದರ್ಶನದಲ್ಲಿ ಹೇಳಿದ್ದರು.

ವಾರದಲ್ಲಿ 70 ತಾಸು ದುಡಿಯಬೇಕು ಎಂಬುದು ಅತಿ ಮಹತ್ವಾಕಾಂಕ್ಷೆಯಾಗಿ ಹೋಯಿತು. ಕಷ್ಟಪಟ್ಟು ದುಡಿ ಎಂಬುದು, ಆರೋಗ್ಯವನ್ನು ಬಲಿಗೊಟ್ಟು ದುಡಿ ಎಂದರ್ಥವಲ್ಲ.
ಡಾ.ಸುರಂಜಿತ್ ಚಟರ್ಜಿ, ಅಪೋಲೊ ಆಸ್ಪತ್ರೆ, ದೆಹಲಿ

ಇಷ್ಟೆಲ್ಲಾ ವಿಷಯಗಳ ಕುರಿತು ನಾರಾಯಣ ಮೂರ್ತಿ ಅವರು ಮಾತನಾಡಿದ್ದರೂ, 70 ಗಂಟೆಗಳ ದುಡಿಮೆ ಎನ್ನುವ ಮಾತು ಜನರು ಹೆಚ್ಚು ಆಕ್ರೋಶ ತೋರಲು ಕಾರಣವಾಯಿತು. ಹಾಗಾದರೆ, ನಾರಾಯಣ ಮೂರ್ತಿ ಅವರು ಈ ವಿಷಯದ ಕುರಿತು ಸಂದರ್ಶನದಲ್ಲಿ ಏನು ಹೇಳಿದ್ದರು ಎಂಬುದರ ಸಂಕ್ಷಿಪ್ತ ರೂಪ ಇಲ್ಲಿದೆ:

‘ಸಣ್ಣಮಟ್ಟದಲ್ಲಿ ಇರಬಹುದು. ಆದರೆ, ನಾವು ಇದನ್ನು ಇನ್ಫೊಸಿಸ್‌ನಲ್ಲಿ ಮಾಡಿದ್ದೇವೆ. ಕಳೆದ 20–30 ವರ್ಷಗಳಲ್ಲಿ ಆರ್ಥಿಕವಾಗಿ ಉತ್ತುಂಗಕ್ಕೆ ಬೆಳೆದ ಚೀನಾ ಸೇರಿದಂತೆ ಹಲವು ದೇಶಗಳನ್ನು ಗಮನಿಸಬೇಕು. ಇಂಥ ಸ್ಥಿತಿಗೆ ತಲುಪಲು ಅವುಗಳನ್ನು ಸಾಧ್ಯವಾಗಿಸಿದ ನೀತಿಗಳನ್ನು ಗಮನಿಸಬೇಕು. ಹೀಗೆ ಮಾಡಿದರೆ, ನಮ್ಮ ದೇಶದ ಬೆಳವಣಿಗೆ ಸಾಧ್ಯ ಎಂಬುದು ನನ್ನ ನಂಬಿಕೆ.

‘ಇಲ್ಲಿ ಇನ್ನೊಂದು ವಿಷಯವಿದೆ. ಪಶ್ಚಿಮದ ದೇಶಗಳ ಅಭ್ಯಾಸಗಳಿಂದ ನಮ್ಮ ಯುವಕರು ಏನನ್ನೂ ಕಲಿಯುತ್ತಿಲ್ಲ. ಆ ಮೂಲಕ ದೇಶಕ್ಕೆ ಯಾವ ಸಹಾಯವನ್ನೂ ಮಾಡುತ್ತಿಲ್ಲ. ಭಾರತದ ಉತ್ಪಾದಕತೆಯು ಜಗತ್ತಿನಲ್ಲೇ ಕಡಿಮೆ ಇದೆ. ಇದನ್ನು ಸರಿಪಡಿಸಿಕೊಳ್ಳದೆ, ಸರ್ಕಾರದಲ್ಲಿ ಭ್ರಷ್ಟಾಚಾರ ನಿಲ್ಲದೆ, ಅಧಿಕಾರಶಾಹಿಯು ತನ್ನ ನಿರ್ಧಾರಗಳನ್ನು ಕ್ಷಿಪ್ರವಾಗಿ ತೆಗೆದುಕೊಳ್ಳದಿದ್ದರೆ ನಾವು ಆರ್ಥಿಕವಾಗಿ ಪ್ರಬಲವಾಗಿರುವ ದೇಶಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ.

ನಾರಾಯಣಮೂರ್ತಿ ಅವರ ಹೇಳಿಕೆಯನ್ನು ನಾನು ತುಂಬು ಹೃದಯದಿಂದ ಬೆಂಬಲಿಸುತ್ತೇನೆ. ಇದು ಶೋಷಣೆಯಲ್ಲ, ಬದಲಿಗೆ ಇದು ಸಮರ್ಪಣೆ. 2047ರ ವೇಳೆಗೆ ನಾವೆಲ್ಲರೂ ಹೆಮ್ಮೆ ಪಡಬಹುದಾದ ಆರ್ಥಿಕ ಸೂಪರ್‌ಪವರ್‌ ಆಗಿ ಭಾರತವನ್ನು ರೂಪಿಸಬೇಕಿದೆ. ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶಕ್ಕೆ ವಾರಕ್ಕೆ ಐದು ದಿನದ ದುಡಿಮೆಯ ಸಂಸ್ಕೃತಿ ಸರಿಹೊಂದುವುದಿಲ್ಲ. ನಮ್ಮ ಪ್ರಧಾನಿ ನರೇಂದ್ರ ಮೋದಿ ದಿನಕ್ಕೆ 14–16 ತಾಸು ದುಡಿಯುತ್ತಾರೆ. ನನ್ನ ತಂದೆ ವಾರದ ಏಳು ದಿನವೂ, ದಿನಕ್ಕೆ 12–14 ತಾಸು ದುಡಿಯುತ್ತಿದ್ದರು. ನಾನು ಪ್ರತಿದಿನ 10–12 ತಾಸು ದುಡಿಯುತ್ತೇನೆ. ನಾವು ನಮ್ಮ ಕೆಲಸದ ಬಗ್ಗೆ ಮತ್ತು ರಾಷ್ಟ್ರ ನಿರ್ಮಾಣದ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು.
ಸಜ್ಜನ್‌ ಜಿಂದಾಲ್‌,ಜೆಎಸ್‌ಡಬ್ಲ್ಯು ಮುಖ್ಯಸ್ಥ

‘ಇದಕ್ಕಾಗಿಯೇ ನನ್ನ ಮನವಿ ಏನೆಂದರೆ, ‘ಇದು ನನ್ನ ದೇಶ, ನಾನು ವಾರಕ್ಕೆ 70 ಗಂಟೆ ದುಡಿಯುತ್ತೇನೆ’ ಎಂದು ನಮ್ಮ ಯುವಕರು ಹೇಳಬೇಕು. ವಿಶ್ವದ ಎರಡನೇ ಮಹಾಯುದ್ಧದ ಬಳಿಕ ಜರ್ಮನಿ ಹಾಗೂ ಜಪಾನ್‌ ಇದೇ ರೀತಿ ಮಾಡಿತು. ‘ನಾವು ಹೊಸದಾಗಿ ನಮ್ಮ ದೇಶವನ್ನು ಕಟ್ಟಬೇಕು’ ಎಂದು ಜರ್ಮನಿಯ ನಾಯಕ ಹೇಳಿದ. ಆಗ ಪ್ರತಿಯೊಬ್ಬ ಜರ್ಮನ್‌ ಕೂಡ ಕೆಲವು ವರ್ಷಗಳ ಕಾಲ ಕೆಲವು ಗಂಟೆಗಳ ಹೆಚ್ಚಿನ ದುಡಿಮೆ ಮಾಡಿದ.

‘ನಮ್ಮ ದೇಶಕ್ಕೆ ಮೊದಲ ಬಾರಿಗೆ ಇಷ್ಟೊಂದು ಗೌರವ ದೊರೆಯುತ್ತಿದೆ. ಇದೇ ಸಮಯ, ನಾವು ಒಗ್ಗಟ್ಟಾಗಬೇಕು. ದೇಶದ ಪ್ರಗತಿಗೆ ವೇಗ ನೀಡಬೇಕು. ಇದನ್ನು ಸಾಧ್ಯವಾಗಿಸಲು ನಾವು ಹೆಚ್ಚು ಶ್ರಮ ಪಡಬೇಕು ಎಂದೆಲ್ಲಾ ನಮ್ಮ ಕಾರ್ಪೊರೇಟ್‌ ವಲಯದ ಮುಂದಾಳುಗಳು ನಮ್ಮ ಯುವಕರಿಗೆ ಹೇಳಬೇಕು. ನಾವು ಇದನ್ನೆಲ್ಲಾ ಮಾಡದೇ, ನಮ್ಮ ಅಸಹಾಯಕ ಸರ್ಕಾರ ಏನು ತಾನೆ ಮಾಡಲು ಸಾಧ್ಯ. ಬದಲಾವಣೆಗಳು ಯುವಕರಿಂದಲೇ ಆಗಬೇಕು. ನಮ್ಮ ಜನಸಂಖ್ಯೆಯ ಪ್ರಮುಖ ಭಾಗವಾದ ಯುವಕರೇ ನಮ್ಮ ದೇಶವನ್ನು ಕಟ್ಟಲು ಸಾಧ್ಯ. ಅವರು ನಮ್ಮ ದೇಶವನ್ನು ಹೆಚ್ಚು ಉತ್ಸಾಹದಿಂದ ಕಟ್ಟಬಹುದು’.

ನಾರಾಯಣಮೂರ್ತಿ ಅವರ ನಿಲುವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಕಡಿಮೆ ಕೆಲಸ ಮಾಡಿ, ಮೋಜುಮಾಡುವ ಸ್ಥಿತಿಯಲ್ಲಿ ನಾವಿಲ್ಲ. ಬದಲಿಗೆ ನಾವು ನಮ್ಮೆಲ್ಲಾ ಶಕ್ತಿಯನ್ನು ಒಗ್ಗೂಡಿಸಿ ದುಡಿಯಬೇಕಾದ ಪರಿಸ್ಥಿತಿಯಲ್ಲಿದ್ದೇವೆ. ಬೇರೆ ದೇಶಗಳು ಹಲವು ತಲೆಮಾರುಗಳಲ್ಲಿ ಸಾಧಿಸಿದ್ದನ್ನು ನಾವು ಒಂದೇ ತಲೆಮಾರಿನಲ್ಲಿ ಸಾಧಿಸಬೇಕಾದ ಸ್ಥಿತಿಯಲ್ಲಿದ್ದೇವೆ..
ಭವೇಶ್ ಅಗರ್ವಾಲ್‌, ಒಲಾ ಕ್ಯಾಬ್ಸ್‌ ಸಿಇಒ

ಮಹಿಳೆಯರ ಆಕ್ರೋಶ

ನಾರಾಯಣ ಮೂರ್ತಿ ಅವರ ಹೇಳಿಕೆಯು ಮಹಿಳಾ ಆಯಾಮವನ್ನೂ ಪಡೆದುಕೊಂಡಿದೆ. ಎಡೆಲ್ವೀಸ್‌ ಮ್ಯುಚುವಲ್‌ ಫಂಡ್‌ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ರಾಧಿಕಾ ಗುಪ್ತ ಅವರ ‘ಎಕ್ಸ್‌’ ಪೋಸ್ಟ್‌ವೊಂದರಿಂದ ಇಂಥದೊಂದ್ದು ಚರ್ಚೆ ಆರಂಭವಾಯಿತು. ಅವರ ಹೇಳಿಕೆ ಇಂತಿದೆ:

‘ಕಚೇರಿ ಹಾಗೂ ಮನೆಯ ನಡುವೆ, ಭಾರತವನ್ನು ಕಟ್ಟಲು, ಮುಂದಿನ ಪೀಳಿಗೆಯನ್ನು ಬೆಳೆಸಲು ದೇಶದ ಹಲವು ಮಹಿಳೆಯರು ವಾರಕ್ಕೆ 70ಕ್ಕೂ ಹೆಚ್ಚು ಗಂಟೆಗಳ ದುಡಿಮೆ ಮಾಡುತ್ತಿದ್ದಾರೆ, ನಗುತ್ತಲೇ ಮತ್ತು ಯಾವುದೇ ಹೆಚ್ಚುವರಿ ಸಂಬಳದ ಆಕಾಂಕ್ಷೆ ಇಲ್ಲದೆ. ಕುಚೋದ್ಯದ ವಿಷಯವೇನೆಂದರೆ, ಟ್ವಿಟರ್‌ನಲ್ಲಿ ನಡೆಯುತ್ತಿರುವ ಯಾವ ಚರ್ಚೆಯಲ್ಲಿಯೂ ಈ ವಿಷಯ ಉಲ್ಲೇಖವಿಲ್ಲ’ ಎಂದಿದ್ದರು.

‘ಇದರಿಂದ ಮಹಿಳೆಯರಂತೂ ಹೆಚ್ಚಿನ ಸಮಸ್ಯೆಗೆ ಒಳಗಾಗುತ್ತಾರೆ. ಬಹುಶಃ ಅವರಿಗೆ ಉದ್ಯೋಗವೋ ಅಥವಾ ಕುಟುಂಬವೋ ಎಂದು ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ತಲೆದೋರಬಹುದು’ ಎನ್ನುವುದು ಬೆಂಗಳೂರಿನಲ್ಲಿ ಐಟಿ ಉದ್ಯೋಗದಲ್ಲಿ ಇರುವ ಮಹಿಳೆಯೊಬ್ಬರ ಅಭಿಪ್ರಾಯ.

ಮಕ್ಕಳನ್ನು ಬೆಳೆಸಲು ಸಮಯ ಸಿಗುತ್ತಿಲ್ಲ ಎಂಬುದೂ ಸೇರಿ ಹಲವು ಕೌಟುಂಬಿಕ ಕಾರಣಗಳಿಗಾಗಿ ಈಗಾಗಲೇ ಮಹಿಳೆಯರು ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಈ ಎಲ್ಲಾ ಕಾರಣದಿಂದಾಗಿ ಉದ್ಯೋಗದ ಸ್ಥಳಗಳಲ್ಲಿ ಮಹಿಳಾ ಸ್ನೇಹಿ ನೀತಿಗಳು ಇರಬೇಕು ಎಂದು ಚರ್ಚಿಸುತ್ತಿರುವ ಈ ಹೊತ್ತಿನಲ್ಲಿ ನಾರಾಯಣ ಮೂರ್ತಿ ಅವರು ಈ ಹೇಳಿಕೆಯು ಮಹಿಳೆಯರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಇವತ್ತು ದುಡಿ, ನಾಳೆ ಅನುಭವಿಸು ಎಂಬ ದಿನಗಳೆಲ್ಲಾ ಹೋಗಿವೆ. ಈ ರೀತಿ ಸುಮ್ಮನೇ ಬಡಬಡಿಸಬೇಡಿ. ನೌಕರರು ಹೆಚ್ಚು ತಾಸು ದುಡಿಯಬೇಕು ಎಂದು ಬಯಸುವುದಾದರೆ, ತಾಸಿನ ಲೆಕ್ಕದಲ್ಲಿ ಸಂಬಳ ನೀಡಿ. ದುಡಿಮೆ ಏಕಮುಖವಾಗಿರಬಾರದು..
ಪಂಕಜ್‌ ಪಾಂಡೆ (@pp479w), ಖಾಸಗಿ ಕಂಪನಿಯೊಂದರ ಉದ್ಯೋಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.