ADVERTISEMENT

ಆಳ–ಅಗಲ | ಪ್ರಾಥಮಿಕ ಶಾಲೆಗೆ ಪ್ರವೇಶ: ರಾಜ್ಯಕ್ಕೆ 2ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 0:08 IST
Last Updated 13 ನವೆಂಬರ್ 2024, 0:08 IST
   

ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್‌ನ (ಎನ್‌ಎಸ್‌ಎಸ್‌ಒ) 79ನೇ ಸಮಗ್ರ ವಾರ್ಷಿಕ ಸ್ಥಿತಿಗತಿ ಸಮೀಕ್ಷೆ (ಸಿಎಎಂಎಸ್‌)-2022-23ನೇ ಸಾಲಿನ ವರದಿಯು ದೇಶ ಮತ್ತು ರಾಜ್ಯಗಳಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಸ್ತುಸ್ಥಿತಿಯನ್ನು ಬಿಂಬಿಸುತ್ತದೆ. ಶಿಕ್ಷಣ, ಆರೋಗ್ಯ, ಆರ್ಥಿಕ ಒಳಗೊಳ್ಳುವಿಕೆ, ಮೊಬೈಲ್ ಇಂಟರ್‌ನೆಟ್‌, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆಗಿರುವ ಸಾಧನೆ ಮತ್ತು ಕೊರತೆಯ ಬಗೆಗಿನ ಮಾಹಿತಿಗಳನ್ನು ವರದಿ ಒಳಗೊಂಡಿದೆ. ಮೊಬೈಲ್ ಮತ್ತು ಇಂಟರ್‌ನೆಟ್‌ ಬಳಕೆಯ ಅಂಕಿಅಂಶಗಳು ಉತ್ತಮವಾಗಿದ್ದರೆ, ಶಿಕ್ಷಣಕ್ಕೆ ಸಂಬಂಧಿಸಿದ ಅಂಕಿಅಂಶಗಳು ಖಾಸಗಿ ಶಾಲೆಗಳ ಪ್ರಭಾವ ಹೆಚ್ಚಾಗಿರುವುದು ಮತ್ತು ನಗರ–ಗ್ರಾಮೀಣ ಅಂತರ ಹೆಚ್ಚಿರುವುದನ್ನು ಸೂಚಿಸುತ್ತಿವೆ. ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳ ಜನ ಹೆಚ್ಚು ಸಾಲಗಾರರಾಗಿರುವ ಬಗ್ಗೆಯೂ ವರದಿ ಗಮನ ಸೆಳೆಯುತ್ತದೆ.

2022ರ ಜೂನ್‌ನಿಂದ –2023ರ ಜುಲೈ ನಡುವೆ 6ರಿಂದ 10 ವರ್ಷದವರೆಗಿನ ಮಕ್ಕಳು ಪ್ರಾಥಮಿಕ ಶಾಲೆಗೆ ಪ್ರವೇಶ ಪಡೆಯುವುದರಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನ ಗಳಿಸಿದೆ. 1ರಿಂದ 5ನೇ ತರಗತಿವರೆಗೆ ಶೇ 97.4ರಷ್ಟು ಮಕ್ಕಳು ದಾಖಲಾಗಿದ್ದಾರೆ. ತ್ರಿಪುರಾ (ಶೇ 97.9) ಮೊದಲ ಸ್ಥಾನದಲ್ಲಿದೆ. ಸಿಕ್ಕಿಂ (ಶೇ 96),  ಪುದುಚೇರಿ (ಶೇ 95.5) ನಂತರದ ಸ್ಥಾನಗಳಲ್ಲಿವೆ. 

ಕರ್ನಾಟಕದಲ್ಲಿ ಶೇ 64.4 ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರಿದ್ದರೆ, ಶೇ 10.1ರಷ್ಟು ಮಕ್ಕಳು ಅನುದಾನಿತ, ಶೇ 25.5 ಮಕ್ಕಳು ಖಾಸಗಿ ಹಾಗೂ ಶೇ 0.3ರಷ್ಟು ಇತರ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರಿದ್ದರೆ, ನಗರ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆದವರ ಪ್ರಮಾಣ ಜಾಸ್ತಿ ಇದೆ. 

ADVERTISEMENT

ಗ್ರಾಮೀಣ ಭಾಗದಲ್ಲಿ ಶೇ 17ರಷ್ಟು ಬಾಲಕರು ಖಾಸಗಿ ಶಾಲೆಗಳಿಗೆ ಸೇರಿದರೆ, ಬಾಲಕಿಯರ ಪ್ರಮಾಣ ಶೇ 13ರಷ್ಟಿದೆ. ನಗರ ಪ್ರದೇಶದಲ್ಲಿ ಈ ಅಂತರ ಕಡಿಮೆ ಇದೆ. ಶೇ 46.3ರಷ್ಟು ಬಾಲಕರು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದರೆ, ಈ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕಿಯರ ಪ್ರಮಾಣ ಶೇ 46ರಷ್ಟಿದೆ. 

ಎಸ್‌ಎಸ್‌ಎಲ್‌ಸಿ ಆದವರು ಕಡಿಮೆ

ದೇಶದಲ್ಲಿ 25 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಶೇ 38.6 ಮಂದಿಯಷ್ಟೇ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಲಿಂಗವಾರು ಅಂಕಿ ಅಂಶಗಳನ್ನು ನೋಡುವುದಾದರೆ,  ಶೇ 31ರಷ್ಟು ಮಹಿಳೆಯರು ಮತ್ತು ಶೇ 46.2ರಷ್ಟು ಪುರುಷರು ಪ್ರೌಢ ಶಿಕ್ಷಣ ಪಡೆದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 22.4 ಮಹಿಳೆಯರು, ಶೇ 38.4 ಪುರುಷರು, ನಗರ ಪ್ರದೇಶದಲ್ಲಿ ಶೇ 50.1ರಷ್ಟು ಮಹಿಳೆಯರು, ಶೇ 63ರಷ್ಟು ಪುರುಷರು 10ನೇ ತರಗತಿ ಪೂರ್ಣಗೊಳಿಸಿದ್ದಾರೆ.

ರಾಜ್ಯದಲ್ಲಿನ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಪ್ರೌಢ ಶಿಕ್ಷಣ ಪಡೆದವರ ಪ್ರಮಾಣ ಇಲ್ಲಿ ಶೇ 43.65ರಷ್ಟಿದೆ. ಇದರಲ್ಲಿ ಶೇ 51.7ರಷ್ಟು ಪುರುಷರು ಮತ್ತು ಶೇ 35.6ರಷ್ಟು ಮಹಿಳೆಯರು. ಗ್ರಾಮೀಣ ಕರ್ನಾಟಕದ ಶೇ 25.1ರಷ್ಟು ಮಹಿಳೆಯರು ಮತ್ತು ಶೇ 43.1 ರಷ್ಟು ಪುರುಷರು ಮಾತ್ರ ಮಾತ್ರ ಎಸ್‌ಎಸ್‌ಎಲ್‌ಸಿ ಪೂರೈಸಿದ್ದಾರೆ. ನಗರ ಪ್ರದೇಶದಲ್ಲಿ ಈ ಪ್ರಮಾಣ ಕೊಂಚ ಹೆಚ್ಚಾಗಿದೆ. ಕ್ರಮವಾಗಿ ಶೇ 55.3ರಷ್ಟು ಶೇ 62.5ರಷ್ಟು ಇದೆ.

ದೇಶದಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಶೇ 81.6ರಷ್ಟು ಜನರು (ಶೇ 88.3ರಷ್ಟು ಪುರುಷರು, ಶೇ 74.8ರಷ್ಟು ಮಹಿಳೆಯರು) ತಮ್ಮ ದೈನಂದಿನ ಬದುಕಿನಲ್ಲಿ ಸಣ್ಣ ಮತ್ತು ಸರಳ ವಾಕ್ಯಗಳನ್ನು ಓದಲು ಮತ್ತು ಬರೆಯಲು ಸಾಮರ್ಥ್ಯ ಹೊಂದಿದ್ದರೆ, ಕರ್ನಾಟಕದಲ್ಲಿ ಈ ಪ್ರಮಾಣ ಶೇ 82.1ರಷ್ಟಿದೆ. ಇದರಲ್ಲಿ ಶೇ 87.6ರಷ್ಟು ಪುರುಷರು ಮತ್ತು ಶೇ 76.7ರಷ್ಟು ಮಹಿಳೆಯರು.

ಕರ್ನಾಟಕದಲ್ಲಿ ಶಿಕ್ಷಣ, ನೌಕರಿ ಮತ್ತು ತರಬೇತಿಯಲ್ಲಿ ಇಲ್ಲದ ಯುವಜನರ (15–29 ವರ್ಷ ವಯಸ್ಸು) ಸಂಖ್ಯೆ ಶೇ 18.2 ಆಗಿದೆ. ಇದರಲ್ಲಿ ಪುರುಷರ ಸಂಖ್ಯೆ ಶೇ 2.8 ಆಗಿದ್ದರೆ, ಮಹಿಳೆಯರ ಸಂಖ್ಯೆ ಶೇ 34.6 ಆಗಿದೆ. 

ಸಮೀಕ್ಷೆಯ ಭಾಗವಾಗಿ ಕರ್ನಾಟಕದ ಗ್ರಾಮೀಣ ಪ್ರದೇಶದ 6,828 ಕುಟುಂಬಗಳ 30,171ಮಂದಿ, ನಗರ ಪ್ರದೇಶದ 5,618 ಕುಟುಂಬಗಳ 19,817 ಮಂದಿ ಸೇರಿದಂತೆ 49,988 ಜನರನ್ನು ಸಂದರ್ಶಿಸಲಾಗಿದೆ.

ಸಮೀಕ್ಷೆಯ ಭಾಗವಾಗಿ ಕರ್ನಾಟಕದ ಗ್ರಾಮೀಣ ಪ್ರದೇಶದ 6,828 ಕುಟುಂಬಗಳ 30,171 ಮಂದಿ, ನಗರ ಪ್ರದೇಶದ 5,618 ಕುಟುಂಬಗಳ 19,817 ಮಂದಿ ಸೇರಿದಂತೆ 49,988 ಜನರಿಂದ ಮಾಹಿತಿ ಕಲೆ ಹಾಕಲಾಗಿದೆ.

ಮೊಬೈಲ್‌ ಬಳಕೆಯಲ್ಲಿ ಮುಂದು

ಮೊಬೈಲ್‌ ಫೋನ್‌, ಇಂಟರ್‌ನೆಟ್‌ ಸೇರಿದಂತೆ ಮಾಹಿತಿ ತಂತ್ರಜ್ಞಾನ ಬಳಕೆ ಕೌಶಲದ ಬಗ್ಗೆಯೂ ಸಮೀಕ್ಷೆ ಮಾಹಿತಿ ಕಲೆಹಾಕಿದೆ. ಭಾರತದ ಶೇ 95ರಷ್ಟು ಕುಟುಂಬಗಳು ಮೊಬೈಲ್ ಫೋನ್ ಹೊಂದಿವೆ ಎಂದೂ ಅದು ಹೇಳಿದೆ. 

  • ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ರಾಷ್ಟ್ರೀಯ ಮಟ್ಟದಲ್ಲಿ ಶೇ 86.5ರಷ್ಟು ಜನರಿಗೆ (15 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರು) ಸ್ಮಾರ್ಟ್‌ಫೋನ್‌ ಸೇರಿದಂತೆ ಮೊಬೈಲ್‌ ಬಳಸುವುದು ತಿಳಿದಿದೆ. ಇದರಲ್ಲಿ ಶೇ 92.2ರಷ್ಟು ಮಹಿಳೆಯರು ಮತ್ತು ಶೇ 80.6ರಷ್ಟು ಪುರುಷರು.

  • 15 ಮತ್ತು ಅದಕ್ಕಿಂತ ಹೆಚ್ಚು ವರ್ಷ ವಯಸ್ಸಿನ ಶೇ 59.8 ಮಂದಿಗೆ ಇಂಟರ್‌ನೆಟ್‌ ಬಳಕೆ ತಿಳಿದಿದೆ. ಪುರುಷರಿಗೆ ಹೋಲಿಸಿದರೆ (ಶೇ 67.6) ಇಂಟರ್‌ನೆಟ್‌ ಬಳಕೆ ಬಗ್ಗೆ ಅರಿವಿರುವ ಮಹಿಳೆಯರ ಪ್ರಮಾಣ (ಶೇ 51.8) ಕಡಿಮೆ ಇದೆ 

  • ಮೊಬೈಲ್‌, ಕಂಪ್ಯೂಟರ್‌ಗಳಲ್ಲಿ ಸಂದೇಶಗಳು, ಇ–ಮೇಲ್‌ಗಳು, ಫೋಟೊ, ವಿಡಿಯೊ, ಡಾಕ್ಯುಮೆಂಟ್‌ಗಳನ್ನು ಕಳುಹಿಸುವ ಕೌಶಲಗಳನ್ನು 15 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಶೇ 52.5ರಷ್ಟು ಮಂದಿ ಅರಿತಿದ್ದಾರೆ. 15ರಿಂದ 24 ವರ್ಷ ವಯೋಮಾನದ ಶೇ 78.4ರಷ್ಟು ಜನರಿಗೆ ಇದು ತಿಳಿದಿದೆ

  • 15 ಮತ್ತು ಅದಕ್ಕಿಂತ ಹೆಚ್ಚು ವರ್ಷ ವಯಸ್ಸಿನ ಶೇ 63.3ರಷ್ಟು ಜನರಿಗೆ ಇಂಟರ್‌ನೆಟ್‌ನಲ್ಲಿ ಮಾಹಿತಿಗಳನ್ನು ಹೇಗೆ ಹುಡುಕಬೇಕು ಎಂಬುದು ಗೊತ್ತಿದೆ. ಗ್ರಾಮೀಣ ಭಾಗದಲ್ಲಿ ಶೇ 56.1 ಮತ್ತು ನಗರ ಪ್ರದೇಶದ ಶೇ 66.7ರಷ್ಟು ಜನರಿಗೆ ಇದರ ಅರಿವಿದೆ 

  • ಕರ್ನಾಟಕದಲ್ಲಿ 15  ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಶೇ 89.5ರಷ್ಟು ಜನರಿಗೆ ಮೊಬೈಲ್‌ ಫೋನ್‌ ಬಳಕೆ ತಿಳಿದಿದೆ. ಇದರಲ್ಲಿ ಶೇ 94.3ರಷ್ಟು ಪುರುಷರು ಮತ್ತು ಶೇ 84.8ರಷ್ಟು ಮಹಿಳೆಯರು. ಶೇ 63.4ರಷ್ಟು ಮಂದಿಗೆ ಇಂಟರ್‌ನೆಟ್‌ ಬಳಕೆಯ ಅರಿವಿದ್ದು, ಶೇ 72.4ರಷ್ಟು ಪುರುಷರು ಮತ್ತು ಶೇ 54.4ರಷ್ಟು ಮಹಿಳೆಯರು

  • ಯುವಜನರ ಪೈಕಿ (15 ಮತ್ತು ಹೆಚ್ಚು ವಯಸ್ಸಿನ 29 ವರ್ಷ ವಯಸ್ಸಿನವರು) ಇಂಟರ್‌ನೆಟ್‌ ಸಂಪರ್ಕ ಹೊಂದಿದವರ ಪ್ರಮಾಣ ಶೇ 84.2ರಷ್ಟಿದ್ದರೂ, ಅದರ ಮೂಲಕ ಆನ್‌ಲೈನ್ ವ್ಯವಹಾರ ಮಾಡುವವರ ಸಂಖ್ಯೆ ರಾಷ್ಟ್ರೀಯ ಮಟ್ಟದಲ್ಲಿ ಶೇ 25.0 ಮಾತ್ರ. ಗೋವಾ, ಕೇರಳ, ತಮಿಳುನಾಡುನಂತಹ ಕೆಲವು ರಾಜ್ಯಗಳಲ್ಲಿ ಈ ಪ್ರಮಾಣ ಹೆಚ್ಚಿದ್ದರೆ, ಮೇಘಾಲಯ, ಉತ್ತರ ಪ್ರದೇಶ, ಛತ್ತೀಸಗಢದಂತಹ ರಾಜ್ಯಗಳಲ್ಲಿ ಕಡಿಮೆ ಇದೆ. ಕರ್ನಾಟಕದಲ್ಲಿ ಇವರ ಪ್ರಮಾಣವು ಶೇ 33.4 ಆಗಿದೆ.   

ವೈದ್ಯಕೀಯ ವೆಚ್ಚದ ಹೊರೆ

ಅನಾರೋಗ್ಯಪೀಡಿತರಾಗಿ ಆಸ್ಪತ್ರೆಗೆ ದಾಖಲಾದರೆ ದೇಶದ ಗ್ರಾಮೀಣ ಪ್ರದೇಶದ ಕುಟುಂಬವೊಂದು ವರ್ಷಕ್ಕೆ ₹4,129 ಅನ್ನು ತಮ್ಮ ಕೈಯಿಂದಲೇ (ಔಟ್ ಆಫ್ ಪಾಕೆಟ್) ಭರಿಸುತ್ತಿದ್ದರೆ, ನಗರ ಪ್ರದೇಶದ ಕುಟುಂಬವೊಂದು ₹5,290ರಷ್ಟು ವ್ಯಯಿಸುತ್ತಿದೆ. ಹೊರರೋಗಿಗಳಾಗಿ ಗ್ರಾಮೀಣ ಪ್ರದೇಶದ ಕುಟುಂಬ ತಿಂಗಳೊಂದಕ್ಕೆ ₹539 ವೆಚ್ಚ ಮಾಡಿದರೆ, ನಗರ ಪ್ರದೇಶದ ಕುಟುಂಬವೊಂದು ತಿಂಗಳಿಗೆ ₹606 ಖರ್ಚು ಮಾಡುತ್ತಿದೆ. ಕುಟುಂಬದ ಆದಾಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿ ಕೈಯಿಂದ ಮಾಡುವ ವೆಚ್ಚವು ಗಣನೀಯವಾಗಿದೆ ಎನ್ನುವುದರ ಬಗ್ಗೆ ವರದಿ ಗಮನ ಸೆಳೆಯುತ್ತದೆ.

ಕರ್ನಾಟಕದಲ್ಲಿ ಗ್ರಾಮೀಣ ಕುಟುಂಬವೊಂದು ಒಳರೋಗಿಯಾಗಿ ವರ್ಷಕ್ಕೆ ₹5,059 ವೆಚ್ಚ ಮಾಡಿದರೆ, ನಗರ ಪ್ರದೇಶದ ಕುಟುಂಬವು ₹4,486 ವೆಚ್ಚ ಮಾಡುತ್ತದೆ. ಹೊರರೋಗಿಯಾಗಿ ರಾಜ್ಯದ ಗ್ರಾಮೀಣ ಕುಟುಂಬವು ₹1,201 ಖರ್ಚು ಮಾಡಿದರೆ, ನಗರದ ಕುಟುಂಬವೊಂದು ₹1,385 ವೆಚ್ಚ ಮಾಡುತ್ತದೆ. 

ಹೆಚ್ಚು ಸಾಲಗಾರರು

ಕರ್ನಾಟಕದಲ್ಲಿ ಶೇ 99.3 ಮಂದಿ ಬ್ಯಾಂಕ್ ಅಥವಾ ಇತರೆ ಸರ್ಕಾರಿ/ಖಾಸಗಿ ಸಂಸ್ಥೆಗಳಲ್ಲಿ ಖಾತೆ ಹೊಂದಿದ್ದಾರೆ. ರಾಜ್ಯದಲ್ಲಿ ಸಾಲ (₹500 ಮತ್ತು ಅದಕ್ಕಿಂತ ಹೆಚ್ಚು) ಮಾಡಿದವರ ಸಂಖ್ಯೆ ಹೆಚ್ಚಾಗಿದ್ದು, ಜನಸಂಖ್ಯೆಯಲ್ಲಿ ಸುಮಾರು ಮೂರನೇ ಒಂದರಷ್ಟಿದೆ. ರಾಜ್ಯದ ಒಂದು ಲಕ್ಷ ಜನಸಂಖ್ಯೆಗೆ 35,480 ಮಂದಿ ಸಾಲಗಾರರಾಗಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ (18,322) ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ವಿಶೇಷ ಎಂದರೆ, ಸಾಲಗಾರರ ಪಟ್ಟಿಯಲ್ಲಿ ದಕ್ಷಿಣದ– ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ– ರಾಜ್ಯಗಳೇ ಮುಂದಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.