ADVERTISEMENT

ಆಳ–ಅಗಲ: ನಕ್ಸಲರ ನಿಗ್ರಹ ಮತ್ತು ಪುನರ್ವಸತಿ– ಸರ್ಕಾರದ ಆದ್ಯತೆ ಬದಲಾಯಿತೇ?

ನಕ್ಸಲರನ್ನು ಇನ್ನೆರಡು ವರ್ಷಗಳಲ್ಲಿ ದೇಶದಿಂದ ನಿರ್ಮೂಲನೆ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಘೋಷಿಸಿದ್ದಾರೆ.

ಜಯಸಿಂಹ ಆರ್.
Published 20 ಏಪ್ರಿಲ್ 2024, 0:21 IST
Last Updated 20 ಏಪ್ರಿಲ್ 2024, 0:21 IST
<div class="paragraphs"><p><strong>29 Naxals killed in encounter in Chhattisgarh</strong></p></div>

29 Naxals killed in encounter in Chhattisgarh

   

PTI

ನಕ್ಸಲರನ್ನು ಇನ್ನೆರಡು ವರ್ಷಗಳಲ್ಲಿ ದೇಶದಿಂದ ನಿರ್ಮೂಲನೆ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಘೋಷಿಸಿದ್ದಾರೆ. ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರು ಈ ಹಿಂದೆಯೂ ಈ ರೀತಿಯ ಮಾತುಗಳನ್ನಾಡಿದ್ದರು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ನಂತರ ನಕ್ಸಲರ ನಿರ್ವಹಣೆ ವಿಧಾನ ಬದಲಾಗಿತ್ತು. ಈ ಅವಧಿಯಲ್ಲಿ ನಕ್ಸಲರ ದಾಳಿ ಮತ್ತು ದಾಳಿಯಲ್ಲಿ ನಾಗರಿಕರು ಮೃತಪಟ್ಟ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಸರ್ಕಾರಕ್ಕೆ ಶರಣಾಗುವ ನಕ್ಸಲರ ಸಂಖ್ಯೆಯೂ ದೊಡ್ಡದೇ ಇತ್ತು. ನಕ್ಸಲರ ಚಟುವಟಿಕೆ ಕಡಿಮೆಯಾಗಿತ್ತು. ಆದರೆ ಛತ್ತೀಸಗಡದಲ್ಲಿ ಈಚೆಗೆ ನಡೆದ ಎನ್‌ಕೌಂಟರ್ ಬೇರೆಯದ್ದೇ ಕತೆ ಹೇಳುತ್ತದೆ. 2024ರ ಹೊತ್ತಿಗೆ ನಕ್ಸಲರ ನಿರ್ವಹಣೆಯ ವಿಧಾನವನ್ನು ಸರ್ಕಾರ ಮತ್ತೆ ಬದಲಿಸಿತೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.

ADVERTISEMENT

–––––

ನಕ್ಸಲ್‌ವಾದವನ್ನು ದೇಶದ ಕಾನೂನು ಉಗ್ರವಾದ ಎಂದೇ ಪರಿಗಣಿಸುತ್ತದೆ. ಸರ್ಕಾರಿ ದಾಖಲೆಗಳಲ್ಲಿ ನಕ್ಸಲರನ್ನು ಎಡಪಂಥೀಯ ತೀವ್ರಗಾಮಿಗಳು ಎಂದೇ ಕರೆಯಲಾಗುತ್ತದೆ. ಆದರೆ ಉಗ್ರರನ್ನು ನಿಗ್ರಹಿಸುವ ರೀತಿಗೂ, ನಕ್ಸಲರ ನಿಗ್ರಹದ ರೀತಿಗೂ ಭಾರಿ ಅಂತರವಿದೆ. ಈ ಹಿಂದಿನ ಎಲ್ಲಾ ಸರ್ಕಾರಗಳು ಈ ಅಂತರವನ್ನು ಕಾಯ್ದುಕೊಂಡೇ ಬಂದಿವೆ. 2014ಕ್ಕೂ ಮುನ್ನ ಅಧಿಕಾರದಲ್ಲಿದ್ದ ಯುಪಿಎ–2 ಸರ್ಕಾರವೂ ನಕ್ಸಲರ ಶರಣಾಗತಿ ಮತ್ತು ಪುನರ್ವಸತಿಗೆ ಆದ್ಯತೆ ನೀಡಿತ್ತು. ಪರಿಸ್ಥಿತಿ ಅದನ್ನು ಮೀರಿದಾಗ ಬಲಪ್ರಯೋಗದ ಮೊರೆ ಹೋಗುತ್ತಿತ್ತು. 2014ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದಾಗಲೂ ಇದೇ ನೀತಿಯನ್ನು ಇನ್ನಷ್ಟು ತೀವ್ರವಾಗಿ ಜಾರಿಗೆ ತಂದಿತು. ಇದರ ಪರಿಣಾಮವಾಗಿ 10 ವರ್ಷಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಕ್ಸಲರು ಶರಣಾಗಿ, ಪುನರ್ವಸತಿ ಕಂಡುಕೊಂಡರು. ನಕ್ಸಲರ ಚಟುವಟಿಕೆಗಳೂ ಕಡಿಮೆಯಾಗಿತ್ತು ಎನ್ನುತ್ತದೆ ಸರ್ಕಾರದ ದತ್ತಾಂಶಗಳು.

2004ರಿಂದ 2014ರ ನಡುವೆ ನಕ್ಸಲರು ದೇಶದಾದ್ಯಂತ ನಡೆಸಿದ್ದ ದಾಳಿಗಳ ಸಂಖ್ಯೆ 16 ಸಾವಿರಕ್ಕೂ ಹೆಚ್ಚು. ಆದರೆ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ನಕ್ಸಲರ ಪುನರ್ವಸತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ಕಾರಣ 2014ರಿಂದ 2024ರ ನಡುವೆ ನಕ್ಸಲರ ದಾಳಿಗಳ ಸಂಖ್ಯೆ ಇಳಿಕೆಯಾಯಿತು. ಈ ಅವಧಿಯಲ್ಲಿ ನಕ್ಸಲರು ದೇಶದಾದ್ಯಂತ ನಡೆಸಿದ ದಾಳಿಗಳ ಸಂಖ್ಯೆ ಸುಮಾರು 7,900ಕ್ಕೆ ಇಳಿಯಿತು ಎಂದು ಸರ್ಕಾರವು ಹೇಳಿಕೊಂಡಿತ್ತು. 2014ರ ನಂತರ ಸುಮಾರು 11 ಸಾವಿರ ನಕ್ಸಲರು ಸರ್ಕಾರಕ್ಕೆ ಶರಣಾಗಿದ್ದಾರೆ ಎಂದು ಕೆಲವು ಸ್ವಯಂ ಸೇವಾ ಸಂಸ್ಥೆಗಳು ಅಂಕಿ–ಅಂಶ ನೀಡುತ್ತವೆ. ನಕ್ಸಲರ ನಿಗ್ರಹದಲ್ಲಿ ಇದು ಗಮನಾರ್ಹ ಪ್ರಗತಿಯೇ.

ಈ ಎಲ್ಲಾ ಪ್ರಗತಿಗಳ ಜತೆಗೆ ವರ್ಷಗಳ ಹಿಂದೆಯೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌, ಇನ್ನು ಮೂರು ವರ್ಷದಲ್ಲಿ ನಕ್ಸಲರನ್ನು ಸಂ‍ಪೂರ್ಣವಾಗಿ ನಿರ್ಮೂಲನೆ ಮಾಡುತ್ತೇವೆ ಎಂದು ಘೋಷಿಸಿದ್ದರು. ಆನಂತರದ ವರ್ಷಗಳಲ್ಲಿ ನಕ್ಸಲರ ಚಟುವಟಿಕೆಗಳು, ದಾಳಿಗಳ ಸುದ್ದಿಗಳು ಇಲ್ಲವೇ ಇಲ್ಲ ಎನಿಸುವಷ್ಟು ಕಡಿಮೆಯಾಗಿತ್ತು. ಆದರೆ ಈಚೆಗೆ ಛತ್ತೀಸಗಡ ಬಸ್ತಾರ್‌ ಪ್ರದೇಶದಲ್ಲಿ ಭದ್ರತಾ ಪಡೆಗಳು 29 ನಕ್ಸಲರನ್ನು ಎನ್‌ಕೌಂಟರ್‌ನಲ್ಲಿ ಹೊಡೆದುಉರುಳಿಸಿದವು. ಈ ಬಗ್ಗೆ ಮಾತನಾಡುತ್ತಲೇ ಗೃಹ ಸಚಿವ ಅಮಿತ್ ಶಾ, ‘ಇನ್ನೆರಡು ವರ್ಷಗಳಲ್ಲಿ ನಕ್ಸರನ್ನು ದೇಶದಿಂದ ನಿರ್ಮೂಲನೆ ಮಾಡುತ್ತೇವೆ. ಅವರು ಶಸ್ತ್ರಾಸ್ತ್ರ ಕೆಳಗಿರಿಸದೇ ಇದ್ದರೆ, ಭದ್ರತಾ ಪಡೆಗಳು ಮಾತನಾಡುತ್ತವೆ’ ಎಂದು ಘೋಷಿಸಿದ್ದರು.

ಇದಕ್ಕಿಂತ ಗಮನಾರ್ಹ ಸಂಗತಿ ಎಂದರೆ ಈ ವರ್ಷದ ಆರಂಭದಿಂದ ಈವರೆಗೆ ಛತ್ತೀಸಗಡ ಒಂದರಲ್ಲೇ 79 ನಕ್ಸಲರನ್ನು ಭದ್ರತಾ ಪಡೆಗಳು ಮತ್ತು ರಾಜ್ಯ ಪೊಲೀಸರು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದು. ಈಚಿನ ವರ್ಷಗಳಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ನಕ್ಸಲರ ಹತ್ಯೆ ನಡೆಸಿದ ಉದಾಹರಣೆ ಇದೊಂದೆ. 2022ರಲ್ಲಿ ದೇಶದಾದ್ಯಂತ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಮೃತಪಟ್ಟ ನಕ್ಸಲರ ಸಂಖ್ಯೆ 66. 2023ರಲ್ಲಿ ಹಾಗೆ ಮೃತಪಟ್ಟ ನಕ್ಸಲರ ಸಂಖ್ಯೆ 56ರಷ್ಟು ಇತ್ತು. ಆದರೆ 2024ರ ಮೊದಲ ನಾಲ್ಕು ತಿಂಗಳಲ್ಲಿ, ಛತ್ತೀಸಗಡ ಒಂದರಲ್ಲೇ ಒಟ್ಟು 79 ನಕ್ಸಲರು ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾರೆ. ದೇಶದ ಬೇರೆಡೆ ಹತರಾದ ನಕ್ಸಲರ ಸಂಖ್ಯೆಯನ್ನು ಪರಿಗಣಿಸಿದರೆ ಈ ಸಂಖ್ಯೆ ಇನ್ನೂ ಹೆಚ್ಚುತ್ತದೆ.

ಈ ಸಂಖ್ಯೆ ದಿಢೀರ್ ಎಂದು ಹೆಚ್ಚಾದುದರ ಬಗ್ಗೆ ಹಲವು ಸಾಮಾಜಿಕ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರವೂ ತಾನೇ ಪಟ್ಟು ಹಿಡಿದು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದ ನಕ್ಸಲರ ಪುನರ್ವಸತಿ ಕಾರ್ಯಕ್ರಮದಿಂದ ದೂರ ಸರಿಯುತ್ತಿದೆಯೇ ಎಂದು ಹಲವರು ಪ್ರಶ್ನೆ ಎತ್ತಿದ್ದಾರೆ. ಛತ್ತೀಸಗಡದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಉಳಿದಿದ್ದ ಸಂದರ್ಭದಲ್ಲಿ ನಕ್ಸಲರ ವಿರುದ್ಧ ಕಾರ್ಯಚರಣೆ ನಡೆದಿದೆ. ಕಾರ್ಯಾಚರಣೆಯ ನಂತರ ಕೇಂದ್ರ ಸರ್ಕಾರದ ಹಲವು ಪ್ರತಿನಿಧಿಗಳು ನಕ್ಸಲರು ಹತರಾದ ಬಗ್ಗೆ ಹೆಮ್ಮೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ಈ ಕಾರ್ಯಾಚರಣೆ ನಡೆದ ಸಮಯದ ಬಗ್ಗೆ ಛತ್ತೀಸಗಡದಲ್ಲಿ ವಿರೋಧ ಪಕ್ಷಗಳು ಪ್ರಶ್ನೆ ಎತ್ತಿವೆ.

ಶರಣಾಗತಿ ಇಳಿಕೆ

2014ರಲ್ಲಿ ಬಿಜೆಪಿ ಸರ್ಕಾರವು ನಕ್ಸಲರ ಪುನರ್ವಸತಿಗೆ ಒತ್ತು ನೀಡಿದ್ದರಿಂದ ಪ್ರತಿ ವರ್ಷ ಸರ್ಕಾರಕ್ಕೆ ಶರಣಾಗುವ ನಕ್ಸಲರ ಸಂಖ್ಯೆ ಏರಿಕೆಯಾಗಿತ್ತು. ಅಲ್ಲಿಯವರೆಗೆ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿನ ಭದ್ರತಾ ವೆಚ್ಚ, ವಿಶೇಷ ಅನುದಾನ ಕಾರ್ಯಕ್ರಮಗಳು ಮತ್ತು ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳ ವೆಚ್ಚವನ್ನು ಕೇಂದ್ರ ಸರ್ಕಾರವೇ ಪೂರ್ಣ ಪ್ರಮಾಣದಲ್ಲಿ ಭರಿಸುತ್ತಿತ್ತು.

ಆದರೆ 2017ರಿಂದ ಈ ಅನುದಾನದಲ್ಲಿ ತನ್ನ ಪಾಲನ್ನು ಕೇಂದ್ರ ಸರ್ಕಾರವು ಕಡಿಮೆ ಮಾಡಿತು. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ರಾಜ್ಯ ಸರ್ಕಾರಗಳು ಭದ್ರತೆಗೆ ಮಾಡುವ ವೆಚ್ಚವನ್ನು ಮಾತ್ರ ಕೇಂದ್ರ ಸರ್ಕಾರವು ಭರಿಸತೊಡಗಿತು. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ರಾಜ್ಯ ಸರ್ಕಾರಗಳು ನಡೆಸುವ ಮೂಲಸೌಕರ್ಯ ಅಭಿವೃದ್ಧಿ ಚಟುವಟಿಕೆಗಳ ವೆಚ್ಚದಲ್ಲಿ ಕೇಂದ್ರ ಸರ್ಕಾರವು ತನ್ನ ಪಾಲನ್ನು ಶೇ 100ರಿಂದ ಶೇ 60ಕ್ಕೆ ಇಳಿಸಿತು. ಉಳಿದ ಶೇ40ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರಗಳೇ ಭರಿಸಿಕೊಳ್ಳಬೇಕು ಎಂದು ಹೇಳಿತು. 

ಇದಲ್ಲದೇ ವಿಶೇಷ ಅನುದಾನಿತ ಕಾರ್ಯಕ್ರಮಗಳ ವೆಚ್ಚದಲ್ಲೂ ಕೇಂದ್ರ ಸರ್ಕಾರವು ತನ್ನ ಪಾಲನ್ನು ಶೇ 100ರಿಂದ ಶೇ 60ಕ್ಕೆ ಇಳಿಸಿತು. ಉಳಿದ
ಶೇ 40ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರಗಳೇ ಹೊಂದಿಸಿಕೊಳ್ಳಬೇಕು ಎಂದು ಸೂಚಿಸಿತು. ರಾಜ್ಯ ಸರ್ಕಾರಗಳು ನಕ್ಸಲರ ಶರಣಾಗತಿ ಮತ್ತು ಪುನರ್ವಸತಿಗೆ ಆಗುವ ವೆಚ್ಚವನ್ನು ಈ ಅನುದಾನದ ಮೂಲಕವೇ ಭರಿಸಿಕೊಳ್ಳುತ್ತಿದ್ದವು. ಈ ಅನುದಾನದ ಪಾಲನ್ನು ಕೇಂದ್ರ ಸರ್ಕಾರವು ಶೇ 40ರಷ್ಟು ಕಡಿಮೆ ಮಾಡಿದ್ದರ ಪರಿಣಾಮವು ಕೇಂದ್ರ ಸರ್ಕಾರದ್ದೇ ದತ್ತಾಂಶಗಳಲ್ಲಿ ಕಾಣುತ್ತದೆ. 2017ರ ನಂತರ ಶರಣಾಗುವ ನಕ್ಸಲರ ಸಂಖ್ಯೆ ಇಳಿಕೆಯಾಗಿದೆ. ಇದಕ್ಕೆ ಅಪವಾದವೆಂದರೆ 2022 ಮಾತ್ರ. ಆ ವರ್ಷ 2,800ಕ್ಕೂ ಹೆಚ್ಚು ನಕ್ಸಲರು ಶರಣಾಗಿದ್ದರು. ನಂತರ, ಶರಣಾಗುವ ನಕ್ಸಲರ ಸಂಖ್ಯೆ ಮತ್ತೆ ಇಳಿದಿದೆ.

ಕೇಂದ್ರ ಸರ್ಕಾರವು ನಕ್ಸಲರ ಶರಣಾಗತಿ ಮತ್ತು ಪುನರ್ವಸತಿಗೆ ನೀಡುತ್ತಿದ್ದ ಆದ್ಯತೆಯನ್ನು ಬದಲಿಸಿದೆ ಎಂಬುದನ್ನೇ ಅನುದಾನ ಪಾಲು ಕಡಿತ ಮಾಡಿದ ಕ್ರಮ ಸೂಚಿಸುತ್ತದೆ. ಅದರ ಪರಿಣಾಮವಾಗಿ ಕೇಂದ್ರ ಸರ್ಕಾರದ್ದೇ ನೀತಿಗೆ ಹಿನ್ನಡೆಯಾಗಿದೆ ಎಂಬುದೂ ಢಾಳಾಗಿ ಕಾಣುತ್ತದೆ. ಇದರ ಬೆನ್ನಲ್ಲೇ ಸರ್ಕಾರವು ಶಸ್ತ್ರಾಸ್ತ್ರಗಳ ಮೂಲಕ ನಕ್ಸಲರ ನಿಗ್ರಹಕ್ಕೆ ಒತ್ತು ನೀಡುತ್ತಿದೆ ಎಂಬುದನ್ನು ಕೇಂದ್ರದ ಸಚಿವರ ಹೇಳಿಕೆಗಳು ಪುಷ್ಟೀಕರಿಸುತ್ತವೆ.

ಹತ್ತು ರಾಜ್ಯಗಳ 70 ಜಿಲ್ಲೆಗಳನ್ನು ನಕ್ಸಲ್‌ ಪೀಡಿತ ಪ್ರದೇಶ ಎಂದು ಗುರುತಿಸಲಾಗಿದೆ. 2013ರ ಹೊತ್ತಿಗೆ ಒಟ್ಟು 126 ಜಿಲ್ಲೆಗಳನ್ನು ನಕ್ಸಲ್‌ ಪೀಡಿತ ಎಂದು ಗುರುತಿಸಲಾಗಿತ್ತು. ಅದಕ್ಕೂ ಮೊದಲು ಕರ್ನಾಟಕದ ಕೆಲವು ಜಿಲ್ಲೆಗಳೂ ನಕ್ಸಲ್‌ ಪೀಡಿತ ಪ್ರದೇಶದ ವ್ಯಾಪ್ತಿಯಲ್ಲಿ ಇದ್ದವು. ನಕ್ಸಲ್‌ ಚಟುವಟಿಕೆ ಸಂಪೂರ್ಣವಾಗಿ ಇಲ್ಲವಾದ ಕಾರಣ, ಕರ್ನಾಟಕದ ಜಿಲ್ಲೆಗಳನ್ನು ಆ ವರ್ಗದಿಂದ ಕೈಬಿಡಲಾಗಿತ್ತು.

ಮೂಲಸೌಕರ್ಯ ಅಭಿವೃದ್ಧಿ ಮತ್ತು ಪುನರ್ವಸತಿ ಕಾರ್ಯಕ್ರಮಗಳ ಕಾರಣದಿಂದ ಬೇರೆ ರಾಜ್ಯಗಳ ನಕ್ಸಲ್‌ ಪೀಡಿತ ಪ್ರದೇಶಗಳಲ್ಲೂ ಪರಿಸ್ಥಿತಿ ಸುಧಾರಿಸಿದೆ. ಆದರೆ ಈಚಿನ ವರ್ಷಗಳಲ್ಲಿ ನಕ್ಸಲರ ಚಟುವಟಿಕೆ ಮತ್ತೆ ಏರಿಕೆಯಾಗುತ್ತಿದೆ ಎಂಬ ವರದಿಗಳೂ ಇವೆ. ಈಚೆಗಷ್ಟೇ ಕರ್ನಾಟಕ–ಕೇರಳ ಗಡಿಯಲ್ಲಿನ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ರಾಜ್ಯ ಪೊಲೀಸರು ಶೋಧ ಕಾರ್ಯವನ್ನೂ ನಡೆಸಿದ್ದರು. 

ಛತ್ತೀಸಗಢ ಮತ್ತು ಒಡಿಸಾದಲ್ಲೂ ಇಂಥದ್ದೇ ಬೆಳವಣಿಗೆಗಳನ್ನು ಮಾಧ್ಯಮಗಳು ವರದಿ ಮಾಡಿವೆ. ಕೇಂದ್ರ ಸರ್ಕಾರದ ಬದಲಾದ ನೀತಿಯ ಪರಿಣಾಮವಾಗಿಯೇ ನಕ್ಸಲ್‌ ಚಟುವಟಿಕೆ ಏರಿಕೆಯಾಗುತ್ತಿದೆ ಎಂದೂ ವಿರೋಧ ಪಕ್ಷಗಳು ಆರೋಪಿಸುತ್ತಿವೆ.

ಆಧಾರ: ಕೇಂದ್ರ ಗೃಹ ಸಚಿವಾಲಯವು ಲೋಕಸಭೆ ಮತ್ತು ರಾಜ್ಯಸಭೆಗಳಿಗೆ ನೀಡಿದ ಲಿಖಿತ ಉತ್ತರಗಳು, ಕೇಂದ್ರ ಗೃಹ ಸಚಿವಾಲಯದ ಎಡಪಂಥೀಯ ತೀವ್ರವಾದ ನಿಗ್ರಹ ಘಟಕದ ವರದಿಗಳು, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.