ADVERTISEMENT

ಆಳ–ಅಗಲ: ಕರ್ನಾಟಕದಲ್ಲಿ ನಕ್ಸಲರ ಜಾಡು...

​ಪ್ರಜಾವಾಣಿ ವಾರ್ತೆ
ವಿಜಯಕುಮಾರ್ ಎಸ್.ಕೆ.
Published 19 ನವೆಂಬರ್ 2024, 20:11 IST
Last Updated 19 ನವೆಂಬರ್ 2024, 20:11 IST
<div class="paragraphs"><p>ಉಪ್ಪಿನಂಗಡಿ ಸಮೀಪದ ಶಿಶಿಲ ಗ್ರಾಮದ ಹೊಳೆಗಂಡಿ ಪ್ರದೇಶದಲ್ಲಿ 2012ರಲ್ಲಿ ನಕ್ಸಲರು ಮನೆ ಭೇಟಿ ಮಾಡಿದ ಬಳಿಕ ನಕ್ಸಲ್ ನಿಗ್ರಹ ಪಡೆಯ ಕಮಾಂಡೆಂಟ್ ಆಗಿದ್ದ ಅಲೋಕ್ ಕುಮಾರ್ ನೇತೃತ್ವದಲ್ಲಿ ಕೂಬಿಂಗ್ ನಡೆದಿತ್ತು.</p></div>

ಉಪ್ಪಿನಂಗಡಿ ಸಮೀಪದ ಶಿಶಿಲ ಗ್ರಾಮದ ಹೊಳೆಗಂಡಿ ಪ್ರದೇಶದಲ್ಲಿ 2012ರಲ್ಲಿ ನಕ್ಸಲರು ಮನೆ ಭೇಟಿ ಮಾಡಿದ ಬಳಿಕ ನಕ್ಸಲ್ ನಿಗ್ರಹ ಪಡೆಯ ಕಮಾಂಡೆಂಟ್ ಆಗಿದ್ದ ಅಲೋಕ್ ಕುಮಾರ್ ನೇತೃತ್ವದಲ್ಲಿ ಕೂಬಿಂಗ್ ನಡೆದಿತ್ತು.

   

(ಸಂಗ್ರಹ ಚಿತ್ರ)

ಕರ್ನಾಟಕದಲ್ಲಿ ನಕ್ಸಲ್ ಚಳವಳಿಗೆ ಸುಮಾರು ನಾಲ್ಕು ದಶಕಗಳ ಇತಿಹಾಸವಿದೆ. ಬೆಂಗಳೂರು, ಮೈಸೂರಿನಲ್ಲಿ ಆರಂಭವಾದ ಪ್ರಯತ್ನಗಳು ಬೀದರ್‌ನಲ್ಲಿ ಸಂಘಟಿತ ಹೋರಾಟದ ರೂಪ ಪಡೆದವು. ಆದರೆ, ಅಲ್ಲಿ ನೆಲೆ ನಿಲ್ಲಲಾಗದೆ ರಾಯಚೂರಿಗೆ ವಾಸ್ತವ್ಯ ಬದಲಿಸಿದ ನಕ್ಸಲೀಯರಿಗೆ ಅಲ್ಲೂ ನೆಲೆ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ನಕ್ಸಲರ ಹೆಜ್ಜೆ ಗುರುತು ಕಂಡುಬಂದಿದ್ದು ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ. 

ADVERTISEMENT

ನಕ್ಸಲ್ ಚಳವಳಿ ಪಶ್ಚಿಮ ಘಟ್ಟದಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದರೂ, 2002ರಲ್ಲಿ ತರಬೇತಿ ವೇಳೆ ಹಾರಿದ ಗುಂಡಿನಿಂದ ಮಲೆನಾಡಿನಲ್ಲಿ ಶಸ್ತ್ರಾಸ್ತ್ರ ಚಟುವಟಿಕೆ ನಡೆಯುತ್ತಿರುವುದು ಮೊದಲ ಬಾರಿ ಬೆಳಕಿಗೆ ಬಂದಿತ್ತು. ಕೊಪ್ಪ ತಾಲ್ಲೂಕಿನ ಮೆಣಸಿನಹಾಡ್ಯ ಗ್ರಾಮದ ಚೀರಮ್ಮ ಅವರ ಕಾಲಿಗೆ ಗುಂಡು ತಗುಲಿತ್ತು. ಅವರು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದ ಬಳಿಕ ಪ್ರಕರಣ ಬಯಲಿಗೆ ಬಂದಿತ್ತು.

1980ರಿಂದ 2024ರವರೆಗೆ

1980ರಲ್ಲಿ ಪೀಪಲ್ಸ್‌ ವಾರ್‌ ಪಕ್ಷದ ಪ್ರಭಾವಕ್ಕೆ ಒಳಗಾಗಿ ಬೆಂಗಳೂರಿನಲ್ಲಿ ಪ್ರಗತಿಪರ ವಿದ್ಯಾರ್ಥಿ ಕೇಂದ್ರ ಆರಂಭ. ದೆಹಲಿಯ ಜವಾಹರಲಾಲ್‌ ನೆಹರು ವಿವಿಯಲ್ಲಿ ಓದಿದ್ದ ಸಾಕೇತ್‌ ರಾಜನ್‌ ರಾಜ್ಯದಲ್ಲಿ ನಕ್ಸಲ್‌ ಚಳವಳಿ ಕಟ್ಟಿದ ರೂವಾರಿ. ನಂತರದ ವರ್ಷಗಳಲ್ಲಿ ಮೈಸೂರಿನಲ್ಲೂ
ಚಳವಳಿ ಆರಂಭವಾಯಿತು.

1990 ದಶಕದ ಆರಂಭದಲ್ಲಿ ಬೀದರ್‌ನಲ್ಲಿ ಚಳವಳಿ ಕಟ್ಟುವ ಪ್ರಯತ್ನಕ್ಕೆ ಯಶಸ್ಸು ದೊರಕದೇ ಇದ್ದುದರಿಂದ ಚಳವಳಿಗಾರರ ತಂಡ ರಾಯಚೂರಿನತ್ತ ಮುಖಮಾಡಿತು. ಅಲ್ಲಿನ ಚಂದ್ರಬಂಡ ಪ್ರದೇಶದಲ್ಲಿ ಹೋರಾಟದ ಪಡೆಯನ್ನೇ ಕಟ್ಟಲಾಯಿತು.

1990ರ ದಶಕದಲ್ಲೇ ನಕ್ಸಲ್‌ ಚಳವಳಿಯ ಕಾವು ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಪ್ರದೇಶವನ್ನೂ ವ್ಯಾಪಿಸಿತು. ‘ಕರ್ನಾಟಕ ವಿಮೋಚನಾ ರಂಗ’ದ ಬೆಂಬಲದಲ್ಲಿ ಚಳವಳಿಗಾರರು ಮಲೆನಾಡಿನ ಆದಿವಾಸಿಗಳ ವಿಶ್ವಾಸವನ್ನು ಪಡೆದುಕೊಂಡು ಸಂಘಟನೆಯನ್ನು ಬಲಪಡಿಸಿದರು.

2000 ದಶಕದಲ್ಲಿ ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆ ಜೋರಾಯಿತು.

2003: ಕುದುರೆಮುಖ ಬಳಿಯ ಸಿಂಗ್ಸಾರ್ ಗ್ರಾಮದ ರಾಮಚಂದ್ರಗೌಡ್ಲು ಮನೆ ಸಮೀಪ ನಕ್ಸಲರು ಮತ್ತು ಪೊಲೀಸರ ನಡುವೆ 2003ರ ಆಗಸ್ಟ್ 6ರಂದು ಗುಂಡಿನ ಚಕಮಕಿ ನಡೆದಿತ್ತು. ನವೆಂಬರ್ 17ರಂದು ಕಾರ್ಕಳ ತಾಲ್ಲೂಕಿನ ಈದು ಗ್ರಾಮದ ಬೊಲ್ಲೊಟ್ಟೋದಲ್ಲಿ ನಡೆದ ಎನ್‌ಕೌಂಟರ್‌ಗೆ ಪಾರ್ವತಿ ಮತ್ತು ಹಾಜಿಮಾ ಬಲಿಯಾಗಿದ್ದರು. ಅದೇ ವರ್ಷ ಡಿಸೆಂಬರ್ 29ರಂದು ಶೃಂಗೇರಿ ತಾಲ್ಲೂಕಿನ ನೆಮ್ಮಾರು ಅರಣ್ಯ ಪ್ರವಾಸಿ ಮಂದಿರಕ್ಕೆ ನಕ್ಸಲರು ಬೆಂಕಿ ಹಾಕಿದ್ದರು.

2004: ಶೃಂಗೇರಿ ತಾಲ್ಲೂಕಿನ ಬುಕಡಿಬೈಲು ಸಮೀಪ ತಲಗಾರು ರಾಮೇಗೌಡ್ಲು ಅವರ ಮನೆ ಸಮೀಪ 2004ರ ಆಗಸ್ಟ್‌ 27ರಂದು ನಕ್ಸಲರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಅಕ್ಟೋಬರ್ 7 ರಂದು ಶೃಂಗೇರಿ ತಾಲ್ಲೂಕಿನ ಕಿಗ್ಗ ಸಮೀಪದ ಮಘೇಬೈಲು ಬಳಿಯಿಂದ ಪೊಲೀಸ್‌ ಮುದ್ದಪ್ಪ ಅವರನ್ನು ನಕ್ಸಲರ ತಂಡ ಅಪಹರಿಸಿತ್ತು. ಅವರ ಬಳಿ ಇದ್ದ ಬಂದೂಕು ಕಸಿದುಕೊಂಡು ಬಿಡುಗಡೆ ಮಾಡಿದ್ದರು. ಅಕ್ಟೋಬರ್ 11ರಂದು ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬರ್ಕಣ ಜಲಪಾತ ಬಳಿ ನಕ್ಸಲರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ನವೆಂಬರ್ 21ರಂದು ಬಕಡಿಬೈಲು ಸಮೀಪದ ಹೆಮ್ಮಿಗೆ ಬಳಿ ಪೊಲೀಸರಿಗೆ ಮಾಹಿತಿದಾರ ಎಂಬ ಆರೋಪದಲ್ಲಿ ಚಂದ್ರಕಾಂತ ಎಂಬವರ ಮೇಲೆ ನಕ್ಸಲರ ತಂಡ ಮಾರಣಾಂತಿಕ ಹಲ್ಲೆ ನಡೆಸಿತ್ತು. 

2005: ಶೃಂಗೇರಿ ತಾಲ್ಲೂಕಿನ ‌ಸಿರಿಮನೆ ಬಳಿ ದೇವರಹಕ್ಲು ಗ್ರಾಮದ ಸಿಂಗಪ್ಪಗೌಡ ಅವರ ಮನೆಗೆ 7 ಜನರ ನಕ್ಸಲರ ತಂಡ ಜನವರಿ 1ರಂದು ಭೇಟಿ ನೀಡಿತ್ತು. ಜ.29 ರಂದು ಶೃಂಗೇರಿ ತಾಲ್ಲೂಕು ಕಿಗ್ಗ ಸಮೀಪ ಅರಣ್ಯ ಇಲಾಖೆ ಕಳ್ಳಬೇಟೆ ನಿಗ್ರಹ ದಳ ಬಿಡಾರದ ಮೇಲೆ ನಕ್ಸಲರು ದಾಳಿ ನಡೆಸಿದ್ದರು. ಜೂ.23ರಂದು ಕುಂದಾಪುರ ತಾಲ್ಲೂಕಿನ ಶಂಕರನಾರಾಯಣ ಸಮೀಪದ ದೇವರಬಾಳು ಬಳಿ ನಡೆದ ಎನ್‌ಕೌಂಟರ್‌ಗೆ ಮೂಡಿಗೆರೆ ತಾಲ್ಲೂಕಿನ ಸಬ್ಲಿ ಉಮೇಶ್ ಮತ್ತು ರಾಯಚೂರಿನ ಅಜಿತ್‌ ಕುಸಬಿ ಬಲಿಯಾಗಿದ್ದರು. ಜುಲೈ 28ರಂದು ಕಾರ್ಕಳ ತಾಲ್ಲೂಕಿನ ಹೆಬ್ರಿ ಬಳಿಕ ಕಬ್ಬಿನಾಲೆ ಬಳಿಯ ಮತ್ತಾವು ಬಳಿ ಪೊಲೀಸ್ ಜೀಪ್‌ವೊಂದನ್ನು ನಕ್ಸಲರು ಸ್ಫೋಟಿಸಿದ್ದರು. ಸೆ. 24 ರಂದು ಮೂಡಿಗೆರೆ ತಾಲ್ಲೂಕಿನ ಕಚೇರಿ ಗೋಡೆ ಮೇಲೆ ನಕ್ಸಲರು ಭಿತ್ತಿಪತ್ರ ಅಂಟಿಸಿದ್ದರು. ನ.4ರಂದು ಶೃಂಗೇರಿ ತಾಲ್ಲೂಕಿನ ತನಿಕೋಡು ಅರಣ್ಯ ತನಿಖಾ ಠಾಣೆ ಕಟ್ಟಡವನ್ನು ನಕ್ಸಲರು ಸ್ಫೋಟಿಸಿದ್ದರು.

2006: ಮೇ 30ರಂದು ಕೊಪ್ಪ ತಾಲ್ಲೂಕು ಹೆಗ್ಗಾರು ಕೊಡಿಗೆ ಕೃಷ್ಣ ನಾರಾಯಣಗೌಡ ಮನೆಗೆ 8 ನಕ್ಸಲರು ಭೇಟಿ ನೀಡಿ ಬಂದೂಕು ಅಪಹರಿಸಿದ್ದರು. ಆಗಸ್ಟ್ 23 ರಂದು ಶೃಂಗೇರಿ ತಾಲ್ಲೂಕು ಕೆರೆಕಟ್ಟೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಕಚೇರಿ ಮೇಲೆ ನಕ್ಸಲರು ದಾಳಿ ನಡೆಸಿ ಬೆಂಕಿ ಹಚ್ಚಿದ್ದರು. ಅರಣ್ಯ ಇಲಾಖೆ ವಾಹನ ಹಾಗೂ ಕಡತಗಳು ನಾಶವಾಗಿದ್ದವು. ಅ.12ರಂದು ಮೂಡಿಗೆರೆ ತಾಲ್ಲೂಕಿನ ಸಾರಗೋಡು-ಕುಂದೂರು ಬಳಿ ಚೆಕ್‌ಪೋಸ್ಟ್ ಮೇಲೆ ದಾಳಿ ನಡೆಸಿದ್ದರು. ಡಿಸೆಂಬರ್ 25ರಂದು ಶೃಂಗೇರಿ ತಾಲ್ಲೂಕಿನ ಕಿಗ್ಗ ಸಮೀಪದ ಕೆಸಮುಡಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್ ತಂಡದ ಬೆಳ್ತಂಗಡಿ ತಾಲ್ಲೂಕಿನ ನಾರಾವಿಯ ದಿನಕರ್ ಬಲಿಯಾಗಿದ್ದರು.

2007: ನಕ್ಸಲ್ ಶಂಕಿತ ಚನ್ನಮ್ಮ ಎಂಬುವರನ್ನು ಮಾ.13ರಂದು ಪೊಲೀಸರು ಬಂಧಿಸಿದ್ದರು. ಶೃಂಗೇರಿ ತಾಲ್ಲೂಕಿನ ಕಿಗ್ಗಾ ಸಮೀಪ ಗಂಡಘಟ್ಟದಲ್ಲಿ ಜೂನ್‌ 3ರಂದು ಕಾಂಗ್ರೆಸ್ ಮುಖಂಡ ವೆಂಕಟೇಶ್ ಅವರನ್ನು ನಕ್ಸಲರ ತಂಡ ಹತ್ಯೆ ಮಾಡಿತ್ತು. ಜುಲೈ 10 ರಂದು ಕೊಪ್ಪ ತಾಲ್ಲೂಕಿನ ಒಡೆಯರಮಠದ (ಮೆಣಸಿನಹಾಡ್ಯ) ಬಳಿ ನಡೆದ ಎನ್‌ಕೌಂಟರ್‌ಗೆ ನಕ್ಸಲ್ ಯುವಕ ಸಿಂಧನೂರಿನ ಗೌತಮ್, ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪರಮೇಶ್ವರ್ ಮತ್ತು ಸುಂದರೇಶ್ ಹತ್ಯೆಯಾಗಿತ್ತು. ಅವರೊಂದಿಗೆ ಗ್ರಾಮಸ್ಥರಾದ ಕಾವೇರಮ್ಮ ಮತ್ತು ರಾಮೇಗೌಡ ಎಎನ್‌ಎಫ್ ಗುಂಡಿಗೆ ಬಲಿಯಾಗಿದ್ದರು. ಇದೇ ವೇಳೆ ಗುಂಡಿನ ಚಕಮಕಿಯಲ್ಲಿ ಸಬ್‌ಇನ್‌ಸ್ಪೆಕ್ಟರ್‌ ವೆಂಕಟೇಶ್ ಕೂಡ ಮೃತಪಟ್ಟಿದ್ದರು.

2008: ಹೊರನಾಡು ಸಮೀಪದ ಮಾವಿನಹೊಲ ಪ್ರದೇಶದಲ್ಲಿ ನ.19ರಂದು ನಡೆದ ಗುಂಡಿನ ಕಾಳಗದಲ್ಲಿ ನಕ್ಸಲರಾದ ರವಿ ದೇವಯ್ಯ ಮತ್ತು ಮನೋಹರ್ ಹತ್ಯೆಯಾಗಿತ್ತು. ಭಾಗಮಂಡಲದ ಕೆಎಸ್‌ಆರ್‌ಪಿ ಸಿಬ್ಬಂದಿ ಗುರುಪ್ರಸಾದ್ ಕೂಡ ಮೃತಪಟ್ಟಿದ್ದರು.  

2010: ಮಾರ್ಚ್ 1ರಂದು ಕುಂದಾಪುರದ ಮುಟ್ಲುಪಾಡಿಯಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಪಂಜಾಲು ಗ್ರಾಮದ ವಸಂತಗೌಡ ಅವರ ಹತ್ಯೆಯಾಯಿತು.

2011: ಕಬ್ಬಿನಾಲೆಯ ಸದಾಶಿವಗೌಡ ಎಂಬುವರನ್ನು ನಕ್ಸಲರು ಹತ್ಯೆ ಮಾಡಿದ್ದರು. ನಂತರ ಮಡಾಮಕ್ಕಿಯಲ್ಲಿ ಅರಣ್ಯ ಕಚೇರಿ ಹಾಗೂ ವಸತಿ ಗೃಹಗಳನ್ನು ನಕ್ಸಲರು ಧ್ವಂಸಗೊಳಿಸಿದ್ದರು. ಆಗುಂಬೆ ಸಮೀಪದ ಬಿದರಗೋಡು ಬಳಿ ಸರ್ಕಾರಿ ಬಸ್‌ಗೆ ಬೆಂಕಿ ಹಚ್ಚಿದ್ದರು.

2014: ಸುಬ್ರಹ್ಮಣ್ಯದ ಐನೆಕಿದು ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಮನೆಗೆ ಶಂಕಿತ ನಕ್ಸಲರು ಭೇಟಿ ನೀಡಿದ್ದಾರೆ ಎಂಬ ಸುದ್ದಿಯ ನಂತರ ಎಎನ್‌ಎಫ್ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿತು. 

2018: ಶಿರಾಡಿಯ ಮಿತ್ತಮಜಲು ಬಳಿ ಮೂರು ಮನೆಗಳಿಗೆ ಭೇಟಿ ನೀಡಿದ್ದರು.

2024: ನ.7ರಂದು ಉಡುಪಿಯ ಈದು ಗ್ರಾಮದಲ್ಲಿ ಶಂಕಿತ ನಕ್ಸಲರ ಚಲನವಲನ ಕಂಡುಬಂದ ನಂತರ ಎಎನ್‌ಎಫ್ ಕೂಂಬಿಂಗ್ ಅನ್ನು ತೀವ್ರಗೊಳಿಸಿತ್ತು. ನ.9ರಂದು ಚಿಕ್ಕಮಗಳೂರು ಜಿಲ್ಲೆಯ ಕಡೆಗುಂದಿ ಗ್ರಾಮದ ಮನೆಯೊಂದಕ್ಕೆ ಮುಂಡಗಾರು ಲತಾ ಮತ್ತು ಜಯಣ್ಣ ಭೇಟಿ ನೀಡಿದ್ದರಿಂದ ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದರು.

ಸಾಕೇತ್‌ ರಾಜನ್ ಎನ್‌ಕೌಂಟರ್‌

2005ರ  ಫೆ.6ರಂದು ಕೊಪ್ಪ ತಾಲ್ಲೂಕಿನ ಮೆಣಸಿನಹಾಡ್ಯದ ಬಲಿಗೆ ಬಳಿ ನಕ್ಸಲ್ ನಾಯಕ ಸಾಕೇತ್‌ರಾಜನ್ ಮತ್ತು ಶಿವಲಿಂಗು ಪೊಲೀಸರ ಗುಂಡಿಗೆ ಬಲಿಯಾಗಿದ್ದರು. 

ಇದು ನಕ್ಸಲ್ ಚಳವಳಿಯ ಜಂಘಾಬಲವನ್ನೇ ಕುಸಿಯುವಂತೆ ಮಾಡಿತ್ತು. ಬಳಿಕ 2006ರಲ್ಲಿ ಅದೇ ಜಾಗದಲ್ಲಿ ನಕ್ಸಲರ ತಂಡ ಇಬ್ಬರ ಸ್ಮಾರಕ ನಿರ್ಮಿಸಿ ಶ್ರದ್ಧಾಂಜಲಿ ಸಲ್ಲಿಸಿತ್ತು. ಸಾಕೇತ್‌ರಾಜನ್ ಹತ್ಯೆ ಬಳಿಕ ಚಳವಳಿಗೆ ರಾಜ್ಯದಲ್ಲಿ ಹಿನ್ನಡೆಯಾಗಿತ್ತು.

ಬಂಗಾಳದ ನಕ್ಸಲ್ಬರಿಯಲ್ಲಿ ಆರಂಭವಾಗಿದ್ದ ನಕ್ಸಲಿಸಂ

ಪಶ್ಚಿಮ ಬಂಗಾಳದ ನಕ್ಸಲ್ಬರಿ ಎನ್ನುವ ಹಳ್ಳಿಯಲ್ಲಿ 1967ರಲ್ಲಿ ಕೃಷಿ ಕೂಲಿ ಕಾರ್ಮಿಕರು ಭೂಮಾಲೀಕರ ವಿರುದ್ಧ ಸಿಡಿದೆದ್ದು, ಸಶಸ್ತ್ರ ಹೋರಾಟದ ಘೋಷಣೆ ಮೊಳಗಿಸಿದರು. ಆ ಹಿಂಸಾತ್ಮಕ ಹೋರಾಟದ ನೇತೃತ್ವ ವಹಿಸಿದ್ದು ರಷ್ಯಾ ಹಾಗೂ ಚೀನಾದ ಹೋರಾಟದ ಮಾದರಿಯಿಂದ ಪ್ರಭಾವಿತರಾಗಿದ್ದ ಕಮ್ಯುನಿಸ್ಟ್ ಮುಖಂಡರಾಗಿದ್ದ ಚಾರು ಮಜುಂದಾರ್. ಮುಂದಿನ ದಿನಗಳಲ್ಲಿ ಅವರೊಂದಿಗೆ ಕನು ಸನ್ಯಾಲ್ ಮತ್ತು ಜಂಗಲ್ ಸಂತಾಲ್ ಅವರು ಸೇರಿದರು. ಈ ಹೋರಾಟ ‘ನಕ್ಸಲಿಸಂ’ ಎಂದು, ಹೋರಾಟಗಾರರನ್ನು ‘ನಕ್ಸಲೀಯರು’ ಎಂದು ಕರೆಯಲಾಯಿತು. ಮುಂದೆ ಈ ಹೋರಾಟದ ಮಾದರಿ ಇಡೀ ರಾಜ್ಯಕ್ಕೆ ಮತ್ತು ದೇಶದ ವಿವಿಧ ಭಾಗಗಳಿಗೆ ಹರಡಿತು. ವಿವಿಧ ಪಕ್ಷ, ಗುಂಪುಗಳ ಅಡಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಕ್ರಿಯವಾಗಿದ್ದವರೆಲ್ಲ 1969ರಲ್ಲಿ ಸಿಪಿಐ (ಎಂಎಲ್‌) ಪಕ್ಷ ಸ್ಥಾಪಿಸಿದರು.

ಪ್ರಸ್ತುತ ನಕ್ಸಲೀಯರು ಜಾರ್ಖಂಡ್, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ದೇಶದ 9 ರಾಜ್ಯಗಳ 38 ಜಿಲ್ಲೆಗಳಲ್ಲಿ ವ್ಯಾಪಿಸಿದ್ದಾರೆ. ಘತ್ತೀಸಗಢದ ಬಸ್ತಾರ್ ಅರಣ್ಯ ಪ್ರದೇಶ ನಕ್ಸಲೀಯರ ಪ್ರಮುಖ ಅಡಗುದಾಣವಾಗಿದೆ. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಕ್ಸಲೀಯರನ್ನು ಉಗ್ರವಾದಿಗಳು ಎಂದು ಪರಿಗಣಿಸುತ್ತಿದ್ದು, ನಕ್ಸಲಿಸಂ ಎನ್ನುವುದು ಒಂದು ಕಾನೂನು ಸುವ್ಯವಸ್ಥೆಯ ಸಮಸ್ಯೆ ಎಂದು ನೋಡುತ್ತಿವೆ. ಆದರ ಜತೆಗೆ, ಇದನ್ನು ಒಂದು ಸಾಮಾಜಿಕ ಆರ್ಥಿಕ ಸಮಸ್ಯೆ ಎಂದೂ ಪರಿಗಣಿಸಿದರೆ, ಈ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವುದು ಒಂದು ವರ್ಗದ ವಾದ.      

ವಿಕ್ರಂನಿಂದ ಜೈಲಿಗೆ ಹೋಗಬೇಕಾಯಿತು

ಉಡುಪಿ: ವಿಕ್ರಂಗೆ ದುಡಿದು ತಿನ್ನು ಇದೆಲ್ಲ ಬೇಡ ಎಂದು ಬುದ್ಧಿವಾದ ಹೇಳಿದ್ದೆ. ಅವನು ಕೇಳಲಿಲ್ಲ. ಅವನಿಂದಾಗಿ ನಾನು, ನನ್ನ ಮಗ ಆರು ತಿಂಗಳು ಜೈಲುವಾಸ ಅನುಭವಿಸಬೇಕಾಯಿತು...

ಇದು ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತನಾದ ನಕ್ಸಲ್ ನಾಯಕ ವಿಕ್ರಂ ಗೌಡನ ಸೋದರ ಮಾವ ಕರಿಯಗೌಡರ ನೋವಿನ ಮಾತು.

‘ವಿಕ್ರಂ ನನ್ನ ತಂಗಿಯ ಮಗ, ಅವನಿಗೆ ಗಂಜಿಕೊಟ್ಟಿರುವ ಆರೋಪಕ್ಕಾಗಿ ನಾವು ಸೆರೆವಾಸ ಅನುಭವಿಸಬೇಕಾಯಿತು. ಅವನು ನಕ್ಸಲ್‌ ಚಟುವಟಿಕೆಯಲ್ಲಿದ್ದಾನೆ ಎಂಬುದು ತಿಳಿದ ಬಳಿಕ ನಾವು ಅವನ ಜೊತೆ ಸಂಪರ್ಕ ಇಟ್ಟುಕೊಂಡಿಲ್ಲ’ ಎಂದರು.

‘ಅವನಿಗೆ ಯಾವುದೇ ತೊಂದರೆ ಇರಲಿಲ್ಲ. ಮೈಮುರಿದು ದುಡಿದಿದ್ದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದಿತ್ತು. 20 ವರ್ಷಗಳಿಂದ ಆತ ಇಲ್ಲಿಗೆ ಬಂದಿಲ್ಲ. ಏಳು ವರ್ಷಗಳ ಹಿಂದೆ ಅವನ ತಾಯಿ ತೀರಿಕೊಂಡಾಗಲೂ ಬರಲಿಲ್ಲ’ ಎಂದರು.

20 ವರ್ಷದ ಹಿಂದೆ ನಡೆದಿತ್ತು ಹತ್ಯಾಕಾಂಡ

ತುಮಕೂರು: ಆಂಧ್ರ ಗಡಿಭಾಗದಲ್ಲಿ ನಕ್ಸಲ್‌ ಚಟುವಟಿಕೆ ತೀವ್ರ ಸ್ವರೂಪ ಪಡೆದುಕೊಂಡಿದ್ದ ಸಂದರ್ಭದಲ್ಲಿ ನಡೆದ ನಕ್ಸಲ್‌ ದಾಳಿಯಲ್ಲಿ ಏಳು ಪೊಲೀಸರು ಸೇರಿ ಎಂಟು ಜನ ಹತರಾಗಿದ್ದರು. 2005ರ ಫೆಬ್ರುವರಿ 10ರಂದು ರಾತ್ರಿ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿ ವೆಂಕಟಮ್ಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬೀಡುಬಿಟ್ಟಿದ್ದ ಕೆಎಸ್‌ಆರ್‌ಪಿ 9ನೇ ಕ್ಯಾಂಪ್‌ ಸಿಬ್ಬಂದಿ ಮೇಲೆ ನಕ್ಸಲರು ದಾಳಿ ನಡೆಸಿದ್ದರು. 300ಕ್ಕೂ ಹೆಚ್ಚು ನಕ್ಸಲರ ತಂಡ ಒಮ್ಮೆಲೇ ದಾಳಿ ನಡೆಸಿತ್ತು.

ಪೊಲೀಸರ ಬಳಿ ಇದ್ದ ಬಂದೂಕು, ಮದ್ದು ಗುಂಡುಗಳನ್ನು ದೋಚಿದ್ದರು. ನಂತರ ಮನ ಬಂದಂತೆ ಗುಂಡು ಹಾರಿಸಿದ್ದರು. ಇದರಲ್ಲಿ ಒಬ್ಬ ಖಾಸಗಿ ಬಸ್‌ ಕ್ಲೀನರ್‌ ಹಾಗೂ ಏಳು ಪೊಲೀಸರು ಮೃತಪಟ್ಟಿದ್ದರು.

ಊಟ ನೀಡಿದ್ದು ಮುಳುವಾಯಿತೇ...

ಚಿಕ್ಕಮಗಳೂರು: ‘ಬಂದೂಕುಧಾರಿಗಳಿಬ್ಬರು ರಾತ್ರಿ ಬಂದು ಊಟ ಕೇಳಿದರು ಕೊಟ್ಟೆವು. ಮರುದಿನವೂ ಅದೇ ಹೊತ್ತಿಗೆ ಬಂದು ಊಟ ಮಾಡಿದರು, ಇದೇ ನಮಗೆ ಮುಳುವಾಯಿತು...’

ನಕ್ಸಲರಿಬ್ಬರು ನ.9 ಮತ್ತು 10ರಂದು ಭೇಟಿ ನೀಡಿದ್ದ ಕೊಪ್ಪ ತಾಲ್ಲೂಕಿನ ಕಡೆಗುಂದಿ ಗ್ರಾಮದ ಸುಬ್ಬೇಗೌಡ ‌ಕುಟುಂಬದ ಅಳಲು ಇದು.

ನಕ್ಸಲ್ ಚಳವಳಿಯಲ್ಲಿ ಸಕ್ರಿಯರಾಗಿದ್ದ ಮುಂಡಗಾರು ಲತಾ ಮತ್ತು ಜಯಣ್ಣ (ಜಾನ್) ಬಂದುಹೋದ ಜಾಡು ಹಿಡಿದು ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್‌) ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ವಾರವಿಡೀ ಸುಬ್ಬೇಗೌಡರ ಮನೆಯ ಹಟ್ಟಿ ಸವೆಸಿದ್ದರು. ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಜಾಲಾಡಿದ್ದರು. ಇದರಿಂದ ರೋಸಿ ಹೋಗಿದ್ದ ಸುಬ್ಬೇಗೌಡ ಮತ್ತು ಅವರ ಪತ್ನಿ ರತ್ನಾ ಅವರ ಮುಖದಲ್ಲಿ ಉತ್ಸಾಹ ಇಲ್ಲವಾಗಿತ್ತು. ಮೊದಲಿಗೆ ಮಾತನಾಡಲು ಹಿಂಜರಿದ ದಂಪತಿ ನಿಧಾನಕ್ಕೆ ತಮ್ಮ ಅಳಲು ಹೇಳಿಕೊಂಡರು.

‘ನ.9ರಂದು ಶನಿವಾರ ಊಟ ಮುಗಿಸಿ ಟಿ.ವಿ ನೋಡುತ್ತಾ ಕುಳಿತಿದ್ದೆವು. ನೇರವಾಗಿ ಮನೆಯೊಳಗೆ ಬಂದ ಇಬ್ಬರು ಬಂದೂಕು ಹೊಂದಿದ್ದರು. ನಮ್ಮಿಂದ ನಿಮಗೆ ಏನೂ ತೊಂದರೆ ಆಗುವುದಿಲ್ಲ. ಊಟ ಮಾಡಿ ಹೋಗುತ್ತೇವೆ ಎಂದರು. ಅವರು ನಕ್ಸಲರು ಎಂಬುದು ನಮಗೆ ಅರ್ಥವಾಯಿತು. ಮನೆಯಲ್ಲಿದ್ದ ಅನ್ನ, ತರಕಾರಿ ಸಾರು ಬಡಿಸಿದೆವು, ಊಟ ಮಾಡಿ ಹೊರಟರು’ ಎಂದು ರತ್ನಾ ಹೇಳಿದರು.

‘ಮರುದಿನ ಅದೇ ಹೊತ್ತಿಗೆ ಮತ್ತೆ ಬಂದರು. ಭಾನುವಾರ ಆಗಿದ್ದರಿಂದ ಕೋಳಿ ಸಾರು ಮಾಡಿದ್ದೆವು. ಊಟ ಮುಗಿಸಿ ಹೊರಟರು. ಆ ದಿನ ಮಧ್ಯರಾತ್ರಿ ಪೊಲೀಸರು ಬಂದು ತಡಕಾಡಿದರು. ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಕೆದಕಿದರು. ಅನುಮಾನ ಬಂದ ವಸ್ತುಗಳನ್ನು (ಔಷಧಿ ಚೀಟಿ, ಔಷಧಿ ಬಾಟಲಿ) ಕೊಂಡೊಯ್ದರು’ ಎಂದು ವಿವರಿಸಿದರು.

‘ಮನೆಗೆ ಮೊದಲು ಬಂದಿದ್ದವರು ಯಾರು ಎಂಬುದು ಗೊತ್ತಿರಲಿಲ್ಲ. ಪೊಲೀಸರು ಬಂದು ಫೋಟೊಗಳನ್ನು ತೋರಿಸಿದ ಬಳಿಕ ಅವರು ಮುಂಡಗಾರು ಲತಾ ಮತ್ತು ಜಯಣ್ಣ ಎಂಬುದು ಗೊತ್ತಾಯಿತು. ನಡೆದ ವಿಷಯವನ್ನೆಲ್ಲಾ ಪೊಲೀಸರಿಗೆ ತಿಳಿಸಿದ್ದೇವೆ. ಊಟ ಹಾಕಿದ್ದೆ ನಮ್ಮ ತಪ್ಪು ಎಂಬಂತಾಗಿದೆ. ಬಂದೂಕು ಹೊಂದಿದ್ದವರಿಗೆ ಊಟ ಕೊಡುವುದಿಲ್ಲ ಎಂದು ಹೇಳಲು ಆಗಲಿಲ್ಲ’ ಎಂದರು.

ವಾರದಿಂದ ವಿದ್ಯುತ್ ಕಡಿತ: ‘ಅಂದಿನಿಂದ ವಿದ್ಯುತ್‌ ಕಡಿತಗೊಂಡಿದೆ. ನಮ್ಮ ಮನೆ ಮಾತ್ರವಲ್ಲ ಸುತ್ತಮುತ್ತಲ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಇಲ್ಲ. ಕತ್ತಲಲ್ಲೇ ಜೀವನ ನಡೆಸುತ್ತಿದ್ದೇವೆ’ ಎಂದು ರತ್ನಾ ಹೇಳಿದರು.

ಉಳಿದಿರುವುದು ಎಂಟೇ ಜನ
ಚಿಕ್ಕಮಗಳೂರು: ‘ಕೇರಳದಲ್ಲಿದ್ದ ನಕ್ಸಲರ ತಂಡದಲ್ಲಿ ಬಹುತೇಕರ ಬಂಧನ, ರಾಷ್ಟ್ರ ಮಟ್ಟದಲ್ಲಿ ಕಾರ್ಯಕಾರಿ ಸಮಿತಿಯೊಂದಿಗೆ ಸಂಪರ್ಕ ಕಡಿತಗೊಂಡ ಬಳಿಕ ಕರ್ನಾಟಕದ ನಕ್ಸಲರು ಮತ್ತೆ ತಾಯ್ನಾಡಿನತ್ತ ಮರಳಲು ಯತ್ನಿಸಿದ್ದಾರೆ. ವಿಕ್ರಂ ಗೌಡ ಹತ್ಯೆ ಬಳಿಕ ಈಗ ದಕ್ಷಿಣ ಭಾರತದಲ್ಲಿ ಉಳಿದಿರುವುದು ಎಂಟು ನಕ್ಸಲರು ಮಾತ್ರ, ಅವರಲ್ಲಿ ಏಳು ಜನ ಈಗ ಉಡುಪಿ–ಚಿಕ್ಕಮಗಳೂರು ಜಿಲ್ಲೆಯಲ್ಲೇ ಇದ್ದಾರೆ’ ಎಂದು ಹೇಳುತ್ತವೆ ಮೂಲಗಳು. ಕೇರಳದ ನಕ್ಸಲ್ ನಾಯಕ ಸಂಜೊಯ್‌ ದೀಪಕ್, ಮೊಹಿಯುದ್ದೀನ್ ಸೇರಿ ಬಹುತೇಕರ ಬಂಧನವಾಯಿತು. ಅಲ್ಲಿ ಉಳಿದಿರುವುದು ಸಂತೋಷ್ ಮಾತ್ರ. ರಾಷ್ಟ್ರ ಮಟ್ಟದ ನಕ್ಸಲ್ ನಾಯಕರೊಂದಿಗೆ ಸಂಜೊಯ್ ದೀಪಕ್ ಸಂಪರ್ಕ ಹೊಂದಿದ್ದ. ಇವರ ಬಂಧನದ ಬಳಿಕ ಎಲ್ಲವೂ ಕಡಿತಗೊಂಡಿತು. ವಯೋಸಹಜ ಅನಾರೋಗ್ಯವೂ ಉಳಿದವರನ್ನು ಕಾಡುತ್ತಿದೆ. ಕೇರಳದಲ್ಲಿ ಮುಂದುವರಿಯಲು ಯಾವುದೇ ಅವಕಾಶ ಇಲ್ಲದ್ದರಿಂದ 8 ಜನರ ತಂಡ ಕರ್ನಾಟಕದತ್ತ ಹೊರಟಿತು. ತಂಡದಲ್ಲಿ ಮುಂಡಗಾರು ಲತಾ, ಜಯಣ್ಣ (ಜಾನ್), ‌ವನಜಾಕ್ಷಿ, ಸುಂದರಿ, ದಿಶಾ (ಕೇರಳ), ಕೋಟೆವುಂಡ ರವಿ, ರಮೇಶ್ (ತಮಿಳುನಾಡು), ವಿಕ್ರಂ ಗೌಡ ಸೇರಿ ಎಂಟು ಜನ ಇದ್ದರು. ಸಂತೋಷ್ ಎಲ್ಲಿದ್ದಾನೆ ಎಂಬ ಮಾಹಿತಿ ಇಲ್ಲ ಎಂದು ಮೂಲಗಳು ಖಚಿತಪಡಿಸಿವೆ. ಎಂಟು ಜನ ಮಾರ್ಚ್‌ನಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು, ಒಂದು ಪ್ರಕರಣ ದಾಖಲಾಯಿತು. ನ. 7ರಂದು ಉಡುಪಿ ಜಿಲ್ಲೆಯಲ್ಲಿ ಕಾಣಿಸಿಕೊಂಡರು. ಮಾರ್ಚ್ 9 ಮತ್ತು 10ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕಡೆಗುಂದಿಯ ಮನೆಯೊಂದಕ್ಕೆ ಭೇಟಿ ನೀಡಿದ್ದರು. ಕೇರಳದಿಂದ ಕರ್ನಾಟಕದತ್ತ ತಂಡ ಹೊರಟಿದೆ ಎಂಬ ಮಾಹಿತಿ ಅರಿತು ನಕ್ಸಲ್ ನಿಗ್ರಹ ಪಡೆಯ (ಎಎನ್‌ಎಫ್‌) ಸಿಬ್ಬಂದಿ ನಿಗಾ ವಹಿಸಿದ್ದರು. ಈ ಎಂಟರಲ್ಲಿ ಈಗ ವಿಕ್ರಂ ಗೌಡ ಹತ್ಯೆಯಾಗಿದೆ. ಉಳಿದವರು ಇದೇ ತಂಡದಲ್ಲಿ ಇದ್ದರು. ಕಡೆಗುಂದಿಯಲ್ಲಿ ಮುಂಡಗಾರು ಲತಾ ಮತ್ತು ಜಯಣ್ಣ ಮಾತ್ರ ಕಾಣಿಸಿಕೊಂಡಿದ್ದು, ಉಳಿದವರೂ ಸುತ್ತಮುತ್ತಲ ಕಾಡಿನಲ್ಲೇ ಇರಬಹುದು ಎಂಬ ಅನುಮಾನ ಇದೆ ಎಂದು ಮೂಲಗಳು ಹೇಳುತ್ತವೆ. ‘ಮಲೆನಾಡಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ಸಂದರ್ಭವನ್ನು ಬಳಸಿಕೊಂಡು ಚಳವಳಿ ಕಟ್ಟಲು ಸಾಧ್ಯವೆ ಎಂಬ ಬಗ್ಗೆಯೂ ನಕ್ಸಲ್ ತಂಡ ಆಲೋಚಿಸಿರಬಹುದು. ಸದ್ಯದಲ್ಲೇ ಈ ಎಲ್ಲ ನಕ್ಸಲರು ಸಿಕ್ಕಿಬೀಳುವ ಸಾಧ್ಯತೆಗಳಿವೆ. ತಾವಾಗಿಯೇ ಶರಣಾಗುವುದು ಉತ್ತಮ’ ಎನ್ನುತ್ತವೆ ಈ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.