‘ಉದ್ಯೋಗಿಗಳ ಪಿಂಚಣಿ ಯೋಜನೆ’ಯ (ಇಪಿಎಸ್) ಲಾಭ–ನಷ್ಟದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಯಾರು ಆಯ್ಕೆ ಮಾಡಿಕೊಳ್ಳಬಹುದು, ಆಯ್ಕೆ ಮಾಡಿಕೊಳ್ಳುವ ಬಗೆ ಹೇಗೆ, ನಿವೃತ್ತಿಯ ಬಳಿಕ ಭವಿಷ್ಯನಿಧಿಯ ಇಡುಗಂಟು ಎಷ್ಟು ಸಿಗುತ್ತದೆ ಹಾಗೂ ಪಿಂಚಣಿ ಎಷ್ಟು ಬರಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.
ಎಲ್ಲರಿಗೂ ತಿಳಿದಿರುವ ಹಾಗೆ, ನೌಕರರ ಭವಿಷ್ಯ ನಿಧಿಗೆ (ಇಪಿಎಫ್) ಉದ್ಯೋಗಿಯ ಪ್ರತಿ ತಿಂಗಳ ಮೂಲವೇತನ ಮತ್ತು ತುಟ್ಟಿಭತ್ಯೆಯ (ಡಿ.ಎ) ಶೇ 12ರಷ್ಟನ್ನು ವಂತಿಗೆಯಾಗಿ ಪಾವತಿಸಲಾಗುತ್ತದೆ. ಇಷ್ಟೇ ಪ್ರಮಾಣದ ವಂತಿಗೆಯನ್ನು ಉದ್ಯೋಗಿ ಕೆಲಸ ಮಾಡುವ ಸಂಸ್ಥೆಯು ನೌಕರರ ಭವಿಷ್ಯ ನಿಧಿಗೆ (ಇಪಿಎಫ್) ನೀಡುತ್ತದೆ.
ಉದ್ಯೋಗದಾತ ಸಂಸ್ಥೆ ಪಾವತಿಸುವ ವಂತಿಗೆಯಿಂದ ಶೇ 8.33ರಷ್ಟು ಪ್ರಮಾಣವು ಇಪಿಎಫ್‌ನಿಂದ ಇಪಿಎಸ್‌ಗೆ ವರ್ಗಾವಣೆಯಾಗುತ್ತದೆ. ಆದರೆ, ಭವಿಷ್ಯ ನಿಧಿಗೆ ಪಾವತಿಯಾಗುವ ಉದ್ಯೋಗಿಯ ಪಾಲಿನ ಶೇ 12ರಷ್ಟು ಪ್ರಮಾಣವು ಇಪಿಎಫ್‌ನಲ್ಲಿಯೇ ಉಳಿಯುತ್ತದೆ. ಪಿಂಚಣಿ ನಿಧಿಗೆ ವರ್ಗಾವಣೆಯಾಗುವ ಮೊತ್ತವು, ಉದ್ಯೋಗಿ ನಿವೃತ್ತಿಯಾದ ಬಳಿಕ ಈ ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳು ಪಾವತಿಯಾಗುತ್ತದೆ.
ಈ ಮೊದಲು, ಉದ್ಯೋಗಿ ಪಡೆಯುತ್ತಿದ್ದ ಪಿಂಚಣಿ ಮೊತ್ತ ತೀರಾ ಕಡಿಮೆಯಿತ್ತು. ಮೂಲವೇತನದ ಮೇಲೆ ಇದ್ದ ಗರಿಷ್ಠ ಮಿತಿಯಿಂದಾಗಿ, ಹೆಚ್ಚಿನ ಪಿಂಚಣಿ ಪಡೆಯಲು ಉದ್ಯೋಗಿಗೆ ಸಾಧ್ಯವಾಗುತ್ತಿರಲಿಲ್ಲ. ಇದನ್ನು ಸಾಧ್ಯವಾಗಿಸಲು 2014ರ ಸೆಪ್ಟೆಂಬರ್ 1ರಂದು ನಿಯಮದಲ್ಲಿ ಮಾರ್ಪಾಡು ಮಾಡಲಾಯಿತು.
ಈಗ ಸೇವೆಯಲ್ಲಿರುವ ನೌಕರರು 2014ರ ಸೆ.1ರಿಂದ ಪೂರ್ವಾನ್ವಯವಾಗುವಂತೆ ಪಿಂಚಣಿ ಯೋಜನೆಗೆ ವಂತಿಗೆ ನೀಡಬೇಕಿದೆ. ಹಾಗೆಂದ ಮಾತ್ರಕ್ಕೆ ಕೈಯಿಂದ ಹಣ ಪಾವತಿಸಬೇಕು ಎಂದೇನಿಲ್ಲ. ಎಲ್ಲ ಉದ್ಯೋಗದಾತ ಸಂಸ್ಥೆಗಳು ಭವಿಷ್ಯ ನಿಧಿ ಖಾತೆಗೆ ಉದ್ಯೋಗಿಯ ವೇತನದ ಶೇ 12ರಷ್ಟು ವಂತಿಗೆಯನ್ನು ಪಾವತಿಸುತ್ತಾ ಬಂದಿವೆ. ಉದ್ಯೋಗಿಯೊಬ್ಬರು ಅಧಿಕ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಂಡ ಬಳಿಕ, ಈ ಮೊತ್ತವು (ಶೇ 8.33ರಷ್ಟು ವಂತಿಗೆ ಲೆಕ್ಕಾಚಾರದಲ್ಲಿ) ಉದ್ಯೋಗಿಗಳ ಪಿಂಚಣಿ ಯೋಜನೆಗೆ ವರ್ಗಾವಣೆಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಉದ್ಯೋಗಿಯ ಭವಿಷ್ಯ ನಿಧಿಯಲ್ಲಿ ಮೊತ್ತ ಕಡಿಮೆಯಾಗುತ್ತದೆ. ಹೀಗಾಗಿ, ನಿವೃತ್ತಿಯಾದ ಬಳಿಕ ಸಿಗುವ ಪಿ.ಎಫ್. ಇಡುಗಂಟಿನ ಪ್ರಮಾಣ ಸಹಜವಾಗಿ ಕಡಿಮೆ ಇರಲಿದೆ.
ಮೇ 3ರ ಒಳಗೆ ಉದ್ಯೋಗಿ ಹಾಗೂ ಉದ್ಯೋಗದಾತ ಸಂಸ್ಥೆಯು ಜಂಟಿಯಾಗಿ ನಿಗದಿತ ನಮೂನೆಯ ಅರ್ಜಿಯನ್ನು ನೌಕರರ ಭವಿಷ್ಯನಿಧಿ ಸಂಘಟನೆಗೆ (ಇಪಿಎಫ್‌ಒ) ಸಲ್ಲಿಸಬೇಕು. ಅರ್ಜಿ ಸ್ವೀಕೃತವಾದಲ್ಲಿ, ಉದ್ಯೋಗಿಗೆ 58 ವರ್ಷ ಪೂರ್ಣಗೊಂಡ ಬಳಿಕ ಪಿಂಚಣಿ ಶುರುವಾಗುತ್ತದೆ. ಒಂದು ವೇಳೆ ಉದ್ಯೋಗಿ ಮೃತಪಟ್ಟಲ್ಲಿ, ಆತನ ಸಂಗಾತಿಗೆ ಶೇ 50ರಷ್ಟು ಪಿಂಚಣಿ ನೀಡಲಾಗುತ್ತದೆ.
2014ರ ಸೆ. 1ರ ನಂತರ ನಿವೃತ್ತಿ ಹೊಂದಿದ ವರಿಗೂ ಹೊಸ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ (2014ಕ್ಕಿಂತ ಮೊದಲು ನಿವೃತ್ತರಾದವರು ಗರಿಷ್ಠ ಪಿಂಚಣಿಗಾಗಿ ಇಪಿಎಸ್–95ಗೆ ಅರ್ಜಿ ಸಲ್ಲಿಸಿದ್ದರೆ ಅವರಿಗೂ ಅರ್ಹತೆ ಇದೆ). ಉದ್ಯೋಗಿಯು ನಿವೃತ್ತಿಯಾಗಿದ್ದಲ್ಲಿ, 2014ರ ಸೆ.1ರಿಂದ ಪೂರ್ವಾನ್ವಯವಾಗುವಂತೆ ಪಿಂಚಣಿ ಯೋಜನೆಗೆ ನೀಡಬೇಕಿರುವ ಮೊತ್ತವನ್ನು ಕೈಯಿಂದ ಪಾವತಿಸಿ, ಪಿಂಚಣಿಗೆ ಅರ್ಹತೆ ಪಡೆಯಬಹುದು. ನಿವೃತ್ತಿಯಾದಾಗ ಸಿಕ್ಕ ಇಡುಗಂಟಿನ ಒಂದಿಷ್ಟು ಮೊತ್ತವನ್ನು ಪಿಂಚಣಿ ನಿಧಿಗೆ ಹಾಕಿದರೆ, ಅದು ಪ್ರತೀ ತಿಂಗಳು ಪಿಂಚಣಿ ರೂಪದಲ್ಲಿ ದೊರೆಯುತ್ತದೆ ಎಂದು ಹೇಳಲಾಗಿದೆ.
ನೌಕರರ ಭವಿಷ್ಯ ನಿಧಿಯಲ್ಲಿ ಜಮೆಯಾಗುವ ಮೊತ್ತಕ್ಕೆ ಬಡ್ಡಿ ಸಿಗುತ್ತದೆ. ಆದರೆ. ಪಿಂಚಣಿ ಯೋಜನೆಗೆ ವರ್ಗಾವಣೆಯಾಗುವ ಹಣಕ್ಕೆ ಬಡ್ಡಿ ಸೌಲಭ್ಯ ಸಿಗುವುದಿಲ್ಲ.
ಇಪಿಎಸ್ ಅಡಿ ಹೆಚ್ಚಿನ ಪಿಂಚಣಿ: ಒಳ್ಳೆಯ ಆಯ್ಕೆಯೇ?
ಉದ್ಯೋಗಿಗಳ ಪಿಂಚಣಿ ಯೋಜನೆಯ (ಇಪಿಎಸ್) ಅಡಿಯಲ್ಲಿ ಹೆಚ್ಚಿನ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಲು ಇದ್ದ ಕಡೆಯ ದಿನಾಂಕವನ್ನು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಮೇ 3ರವರೆಗೆ ವಿಸ್ತರಣೆ ಮಾಡಿದೆ. ಇದರ ಪರಿಣಾಮವಾಗಿ, ಈ ಯೋಜನೆಗೆ ಅರ್ಜಿಯನ್ನು ತುಸು ನಿರಾಳವಾಗಿ ಸಲ್ಲಿಸಲು ಒಂದಿಷ್ಟು ಕಾಲಾವಕಾಶ ಸಿಕ್ಕಂತಾಗಿದೆ. ಅಷ್ಟೇ ಅಲ್ಲದೆ, ಯೋಜನೆಗೆ ಅರ್ಜಿ ಸಲ್ಲಿಸಬೇಕೇ ಎಂಬ ಬಗ್ಗೆ ಸಾವಧಾನವಾಗಿ ಆಲೋಚಿಸಲು ಒಂದಿಷ್ಟು ಸಮಯ ಸಿಕ್ಕಂತಾಗಿದೆ!
ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸುವುದು ಎಲ್ಲರ ಪಾಲಿಗೂ ಅಷ್ಟೊಂದು ಲಾಭದಾಯಕ ಆಗಲಿಕ್ಕಿಲ್ಲ ಎಂದು ಹಣಕಾಸು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಅಭಿಪ್ರಾಯಕ್ಕೆ ಅವರು ನಿರ್ದಿಷ್ಟ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಆದರೆ, ನಿವೃತ್ತಿಗೆ ಹತ್ತಿರವಾದವರು ಹಾಗೂ ಮಾರುಕಟ್ಟೆ ಆಧಾರಿತ ಪಿಂಚಣಿ ಯೋಜನೆಗಳ ಬಗ್ಗೆ ಅಷ್ಟೊಂದು ಒಲವು ಇಲ್ಲದವರು ಇಪಿಎಸ್ ಅಡಿ ಹೆಚ್ಚಿನ ಪಿಂಚಣಿ ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಪಿಂಚಣಿಗೆ ಆಯ್ಕೆ ಮಾಡಿಕೊಂಡರೆ, ಇಪಿಎಸ್‌ಗೆ ಹೆಚ್ಚಿನ ವಂತಿಗೆಯನ್ನು ಕೊಡಬೇಕಾಗುತ್ತದೆ. ಹೆಚ್ಚಿನ ವಂತಿಗೆಯನ್ನು ನೌಕರ ಪಿ.ಎಫ್. ಸದಸ್ಯನಾದ ದಿನದಿಂದ ಅಥವಾ 2014ರ ಸೆಪ್ಟೆಂಬರ್ 1ರಿಂದ (ಇವೆರಡರಲ್ಲಿ ಯಾವುದು ತಡವೋ ಅದು) ಪೂರ್ವಾನ್ವಯವಾಗುವಂತೆ ಕೊಡಬೇಕಾಗುತ್ತದೆ. ಹಿಂಬಾಕಿ ಮೊತ್ತವನ್ನು ಇಪಿಎಫ್‌ಒ, ನೌಕರನ ಪಿ.ಎಫ್. ಖಾತೆಯಿಂದ ಕಡಿತ ಮಾಡಿಕೊಂಡು, ಇಪಿಎಸ್ ನಿಧಿಗೆ ವರ್ಗಾವಣೆ ಮಾಡುತ್ತದೆ. ಆಗ ಪಿ.ಎಫ್. ಮೊತ್ತ ಕಡಿಮೆ ಆಗುತ್ತದೆ. ಅಲ್ಲದೆ, ಪಿ.ಎಫ್.ನಿಂದ ಕಡಿತವಾಗುವ ಮೊತ್ತಕ್ಕೆ ಸಿಗುವ ಬಡ್ಡಿ ಹಾಗೂ ಚಕ್ರಬಡ್ಡಿಯ ಪ್ರಯೋಜನಗಳು ಇಲ್ಲವಾಗುತ್ತವೆ. ನೌಕರನ ಸೇವಾವಧಿಯು ಕಡಿಮೆ ಇದ್ದರೆ, ಬಡ್ಡಿ ಹಾಗೂ ಚಕ್ರಬಡ್ಡಿ ಹೆಚ್ಚು ನಷ್ಟವಾಗುವುದಿಲ್ಲ. ಆದರೆ, ಹೆಚ್ಚಿನ ಸೇವಾವಧಿ ಹೊಂದಿರುವವರಿಗೆ ಹೆಚ್ಚಿನ ಮೊತ್ತ ನಷ್ಟವಾಗಬಹುದು. ಇಪಿಎಸ್‌ಗೆ ವರ್ಗಾವಣೆ ಆದ ಮೊತ್ತಕ್ಕೆ ಬಡ್ಡಿ ಇರುವುದಿಲ್ಲ.
‘ಪಿ.ಎಫ್.ನಲ್ಲಿ ಹೆಚ್ಚಿನ ಮೊತ್ತ ಇರುವಂತೆ ನೋಡಿಕೊಂಡರೆ ಆಕರ್ಷಕ ಬಡ್ಡಿ ಸಿಗುತ್ತದೆ. ಪಿ.ಎಫ್.ನಲ್ಲಿ ಸಂಗ್ರಹವಾಗುವ ಮೊತ್ತವನ್ನು ಬಳಸಿ ನೌಕರನು ನಿವೃತ್ತಿಯ ನಂತರದಲ್ಲಿ ಪಿಂಚಣಿ ಯೋಜನೆಯನ್ನು (ಆನ್ಯುಟಿ) ಖರೀದಿಸಬಹುದು. ಇಪಿಎಸ್‌ಗೆ ಹಣ ಒಮ್ಮೆ ವರ್ಗಾವಣೆ ಆದ ನಂತರದಲ್ಲಿ ಅದನ್ನು ಹಿಂದಕ್ಕೆ ಪಡೆಯಲು ಅವಕಾಶ ಇಲ್ಲ. ಹೀಗಾಗಿ, ಈಗಿರುವ ಯೋಜನೆಯಲ್ಲಿಯೇ ಮುಂದುವರಿದು ಪಿಂಚಣಿಗಾಗಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್) ಆಶ್ರಯಿಸುವುದು ಸೂಕ್ತ’ ಎಂದು ಹಣಕಾಸು ತಜ್ಞ ವಸಂತ್ ಹೆಗಡೆ ಹೇಳುತ್ತಾರೆ.
ಇಪಿಎಸ್ ಅಡಿ ಸಿಗುವ ಪಿಂಚಣಿಗೆ ತೆರಿಗೆ ಅನ್ವಯವಾಗುತ್ತದೆ. ಆದರೆ ನಿವೃತ್ತಿಯ ಕೊನೆಯಲ್ಲಿ ಸಿಗುವ ಪಿ.ಎಫ್. ಇಡುಗಂಟಿಗೆ ತೆರಿಗೆ ವಿನಾಯಿತಿ ಇರುತ್ತದೆ.
ಹೆಚ್ಚಿನ ಸೇವಾವಧಿ ಇರುವ ನೌಕರರು ಪಿಂಚಣಿಗಾಗಿ ಎನ್‌ಪಿಎಸ್‌ನಲ್ಲಿ ಹಣ ತೊಡಗಿಸುವುದು ಒಳಿತು ಎಂಬ ಅಭಿಪ್ರಾಯವನ್ನು ಹಣಕಾಸು ಸಲಹೆಗಾರರು ನೀಡುತ್ತಾರೆ. ಎನ್‌ಪಿಎಸ್ ಮೂಲಕ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸುವ ಕಾರಣ, ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭವನ್ನು ಪಡೆಯುವ ಅವಕಾಶ ಇರುತ್ತದೆ.
‘ಮಾರುಕಟ್ಟೆಯ ಅಪಾಯಗಳಿಗೆ ಒಡ್ಡಿಕೊಳ್ಳಲು ಇಷ್ಟವಿಲ್ಲದವರು ಇಪಿಎಸ್ ಕಡೆ ಮುಖ ಮಾಡಬಹುದು. ಆದರೆ, ಇಪಿಎಸ್‌ನಲ್ಲಿ ತೊಡಗಿಸಿದ ಹಣವು ಬೇರೆ ಯಾವ ಉದ್ದೇಶಕ್ಕೂ ಸಿಗುವುದಿಲ್ಲ. ಇಪಿಎಫ್ ಅಡಿ ಈಗ ಬಹಳ ಆಕರ್ಷಕವಾದ ಬಡ್ಡಿ ಸಿಗುತ್ತಿದೆ. ಹೆಚ್ಚಿನ ಸೇವಾ ಅವಧಿ ಇರುವವರು, ಹಳೆಯ ವ್ಯವಸ್ಥೆಯಲ್ಲಿಯೇ ಉಳಿದುಕೊಂಡು ಆ ಬಡ್ಡಿ ದರದ ಪ್ರಯೋಜನ ಪಡೆದುಕೊಳ್ಳಬಹುದು. ವಿಪಿಎಫ್ ಮೂಲಕ ಪಿ.ಎಫ್. ನಿಧಿಗೆ ಹೆಚ್ಚಿನ ಹಣ ಹೋಗುವಂತೆ ಮಾಡುವುದು ಕೂಡ ಒಳ್ಳೆಯ ಆಯ್ಕೆ’ ಎಂದು ಇಂಡಿಯನ್‌ಮನಿ.ಕಾಂ ಕಂಪನಿಯ ಸಂಸ್ಥಾಪಕ ಸಿ.ಎಸ್. ಸುಧೀರ್ ಅಭಿಪ್ರಾಯ ಹಂಚಿಕೊಂಡರು.
ಚಾರ್ಟರ್ಡ್ ಅಕೌಂಟೆಂಟ್ ಕುಮಾರ್ ಪ್ರಸಾದ್ ಅವರು ಕೂಡ ಹೆಚ್ಚಿನ ಪಿಂಚಣಿ ಆಯ್ಕೆಯು ಎಲ್ಲರಿಗೂ ಅಂದುಕೊಂಡಷ್ಟು ಲಾಭದಾಯಕವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ‘ಇಪಿಎಸ್‌ನಲ್ಲಿ ತೊಡಗಿಸುವ ಹಣವನ್ನು ಹಿಂಪಡೆಯಲು ಅವಕಾಶವೇ ಇಲ್ಲ. ಆದರೆ ಪಿ.ಎಫ್ ಅಥವಾ ಎನ್‌ಪಿಎಸ್‌ನಲ್ಲಿ ತೊಡಗಿಸಿದ ಹಣವನ್ನು ಹಿಂದಕ್ಕೆ ಪಡೆಯಲು ಅವಕಾಶ ಇದೆ. ಈಗಿನ ಕಾಲಘಟ್ಟದಲ್ಲಿ ಹೆಚ್ಚಿನವರು ತಮ್ಮ ಹಣವನ್ನು ತಮ್ಮ ಇಚ್ಛೆಗೆ ತಕ್ಕಂತೆ ಬಳಸಿಕೊಳ್ಳುವುದನ್ನು ಬಯಸುತ್ತಾರೆ. ಈ ದೃಷ್ಟಿಕೋನದಿಂದ ನೋಡಿದಾಗ, ಹೊಸ ಆಯ್ಕೆಯು ಅಷ್ಟೇನೂ ಪ್ರಯೋಜನಕಾರಿಯಲ್ಲ’ ಎಂದು ಅವರು ಹೇಳಿದರು.
‘ಹಣ ಕೈಯಲ್ಲಿದ್ದರೆ ಖರ್ಚಾಗಿಬಿಡುತ್ತದೆ, ಬೇರೆ ಯಾರಾದರೂ ಅದನ್ನು ಇಸಿದುಕೊಳ್ಳಬಹುದು ಎಂಬ ಸ್ಥಿತಿಯಲ್ಲಿ ಇರುವವರು ಇಪಿಎಸ್‌ಗೆ ಹೆಚ್ಚಿನ ಮೊತ್ತ ವರ್ಗಾಯಿಸಬಹುದು. ನಿಶ್ಚಿತವಾದ ಪಿಂಚಣಿ ಬಂದೇ ಬರುತ್ತದೆ. ಆದರೆ, ತೊಡಗಿಸಿದ ಹಣಕ್ಕೆ ಹೆಚ್ಚಿನ ಲಾಭ ಅಥವಾ ಬಡ್ಡಿ ಸಿಗಬೇಕು ಎನ್ನುವವರಿಗೆ ಇದು ಒಳ್ಳೆಯ ಆಯ್ಕೆಯಲ್ಲ’ ಎಂದು ಅವರು ಹೇಳಿದರು.
ಇಪಿಎಸ್: ಹೆಚ್ಚುವರಿ ಪಿಂಚಣಿ ಲೆಕ್ಕಾಚಾರ
ನೌಕರನ ಪಿಂಚಣಿಗೆ ಅರ್ಹವಾದ ವೇತನ ಮತ್ತು ಪಿಂಚಣಿಗೆ ಅರ್ಹವಾದ ಸೇವಾವಧಿಯನ್ನು ಲೆಕ್ಕಹಾಕಿ ಪಿಂಚಣಿಯ ಮೊತ್ತವನ್ನು ನಿಗದಿ ಮಾಡಲಾಗುತ್ತದೆ. ಪಿಂಚಣಿಗೆ ಅರ್ಹವಾದ ವೇತನ ಮತ್ತು ಪಿಂಚಣಿಗೆ ಅರ್ಹವಾದ ಸೇವಾವಧಿ ಅಂದರೆ ಏನು ಎಂಬುದನ್ನು ವಿವರಿಸಲಾಗಿದೆ.
‘ಪಿಂಚಣಿಗೆ ಅರ್ಹವಾದ ವೇತನ’: ನೌಕರ ನಿವೃತ್ತಿಯಾದ ದಿನದ ಹಿಂದಿನ 60 ತಿಂಗಳ ಸರಾಸರಿ ವೇತನವನ್ನು ‘ಪಿಂಚಣಿಗೆ ಅರ್ಹವಾದ ವೇತನ’ ಎಂದು ಪರಿಗಣಿಸಲಾಗುತ್ತದೆ. ಈ 60 ತಿಂಗಳ ಅವಧಿಯಲ್ಲಿ ನೌಕರ ಪಡೆದ ಮೂಲವೇತನ ಮತ್ತು ತುಟ್ಟಿಭತ್ಯೆಯನ್ನು (ಅನ್ವಯವಾಗುವುದಿದ್ದರೆ) ಕೂಡಿಸಲಾಗುತ್ತದೆ. ಅದನ್ನು 60ರಿಂದ ಭಾಗಿಸಿದಾಗ ಬರುವ ಮೊತ್ತವೇ, ‘ಪಿಂಚಣಿಗೆ ಅರ್ಹವಾದ ವೇತನ’.
‘ಪಿಂಚಣಿಗೆ ಅರ್ಹವಾದ ಸೇವಾವಧಿ’: ಇಪಿಎಫ್‌ನಿಂದ ಇಪಿಎಸ್ ಖಾತೆಗೆ ವಂತಿಗೆ ಸಂದಾಯವಾದ ಅವಧಿಯನ್ನು ‘ಪಿಂಚಣಿಗೆ ಅರ್ಹವಾದ ಸೇವಾವಧಿ’ ಎಂದು ಕರೆಯಲಾಗುತ್ತದೆ. ಯಾವುದೇ ಇಪಿಎಸ್ ಖಾತೆಗೆ ಕನಿಷ್ಠ 10 ವರ್ಷವಾದರೂ ವಂತಿಗೆ ಸಂದಾಯವಾಗಿದ್ದರೆ ಮಾತ್ರ, ಆ ಖಾತೆದಾರ ಪಿಂಚಣಿಗೆ ಅರ್ಹವಾಗುತ್ತಾನೆ. ಅಂದರೆ, ಈ ಯೋಜನೆ ಅಡಿ ಪಿಂಚಣಿ ಪಡೆಯಲು ಕನಿಷ್ಠ 10 ವರ್ಷಗಳವರೆಗೆ ಕೆಲಸ ಮಾಡಿರಬೇಕು ಮತ್ತು ಇಪಿಎಸ್ ಖಾತೆಗೆ ವಂತಿಗೆ ಸಂದಾಯವಾಗಿರಬೇಕು. ಅದೇ ರೀತಿ ಪಿಂಚಣಿ ಲೆಕ್ಕಾಚಾರದ ವೇಳೆ, ಗರಿಷ್ಠ ಸೇವಾವಧಿಗೂ ಮಿತಿ ಹಾಕಲಾಗಿದೆ. ನೌಕರ 35 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ್ದರೂ, ಗರಿಷ್ಠ 35 ವರ್ಷಗಳನ್ನು ಮಾತ್ರ ಸೇವಾವಧಿ ಎಂದು ಪರಿಗಣಿಸಲಾಗುತ್ತದೆ. ಒಬ್ಬ ನೌಕರ 20 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ್ದರೆ, ಆತನ ಸೇವಾವಧಿಗೆ ಹೆಚ್ಚುವರಿಯಾಗಿ 2 ವರ್ಷಗಳನ್ನು ಕೃಪಾಂಕದಂತೆ ನೀಡಲಾಗುತ್ತದೆ. (ಉದಾಹರಣೆಗೆ ನೌಕರ 20 ವರ್ಷ ಸೇವೆ ಸಲ್ಲಿಸಿದ್ದರೆ, ಅದು 22 ವರ್ಷವಾಗುತ್ತದೆ. 25 ವರ್ಷ ಸೇವೆ ಸಲ್ಲಿಸಿದ್ದರೆ ಅದು 27 ವರ್ಷವಾಗುತ್ತದೆ).
* ನೌಕರ ನಿವೃತ್ತಿಯಾದ ದಿನದ ಹಿಂದಿನ 60 ತಿಂಗಳ ಸರಾಸರಿ ವೇತನವನ್ನು ಪರಿಗಣಿಸಲಾಗುತ್ತದೆ. 60 ತಿಂಗಳ ಸರಾಸರಿ ವೇತನ ₹ 50,000 ಎಂದು ಪರಿಗಣಿಸೋಣ
* ಆ ವ್ಯಕ್ತಿ ಒಟ್ಟು 25 ವರ್ಷ ಸೇವೆ ಸಲ್ಲಿಸಿದ್ದಾನೆ ಎಂದು ಪರಿಗಣಿಸೋಣ. 2 ಹೆಚ್ಚುವರಿ ವರ್ಷಗಳ ಕೃಪಾಂಕಗಳೂ ಸೇರಿ ಸೇವಾವಧಿ 27 ವರ್ಷವಾಗುತ್ತದೆ
* ಪಿಂಚಣಿಗೆ ಅರ್ಹವಾದ ವೇತನವನ್ನು (₹50,000), ಪಿಂಚಣಿಗೆ ಅರ್ಹವಾದ ಸೇವಾವಧಿಯೊಂದಿಗೆ (25+2=27 ವರ್ಷ) ಗುಣಿಸಲಾಗುತ್ತದೆ. ಬರುವ ಮೊತ್ತವನ್ನು 70ರಿಂದ ಭಾಗಿಸಲಾಗುತ್ತದೆ. ಆಗ ಉಳಿಯುವ ಮೊತ್ತವೇ ಇಪಿಎಸ್ ಪಿಂಚಣಿ ಮೊತ್ತ
ಉದಾಹರಣೆಗೆ...
₹50,000 X 27=13,50,000
13,50,000/70=₹19,285.7
* ಒಬ್ಬ ನೌಕರ ನಿವೃತ್ತಿಯಾಗುವುದಕ್ಕೂ ಮೊದಲಿನ 60 ತಿಂಗಳ ಸರಾಸರಿ ವೇತನ ₹50,000 ಆಗಿದ್ದು, ಆತನ ಒಟ್ಟು ಸೇವಾವಧಿ 27 ವರ್ಷಗಳಾಗಿದ್ದರೆ (ಹೆಚ್ಚುವರಿ 2 ವರ್ಷ ಸೇರಿಸಿ) ಆತನಿಗೆ ₹19,285.7 ಪಿಂಚಣಿ ದೊರೆಯುತ್ತದೆ
ಹೆಚ್ಚು ಪಿಂಚಣಿ ದೊರೆಯುವುದೆಲ್ಲಿಂದ?
ನೌಕರನ ವೇತನದ ಶೇ 12ರಷ್ಟು ಮೊತ್ತವನ್ನು ಆತನ ವೇತನದಿಂದಲೇ ಕಡಿತ ಮಾಡಿ, ನೌಕರರ ಭವಿಷ್ಯ ನಿಧಿ (ಇಪಿಎಫ್) ಖಾತೆಗೆ ಜಮೆ ಮಾಡಲಾಗುತ್ತದೆ. ಅಷ್ಟೇ ಪ್ರಮಾಣದ ಮೊತ್ತವನ್ನು ಉದ್ಯೋಗದಾತ ಸಂಸ್ಥೆಯೂ ನೌಕರನ ಇಪಿಎಫ್ ಖಾತೆಗೆ ದೇಣಿಗೆ ನೀಡುತ್ತದೆ. ಉದ್ಯೋಗದಾತ ಸಂಸ್ಥೆ ನೀಡುವ ಶೇ 12ರಷ್ಟು ವಂತಿಗೆಯಲ್ಲಿ ನೌಕರನ ಇಪಿಎಫ್ ಖಾತೆಗೆ ಜಮೆಯಾಗುವುದು ಶೇ 3.67ರಷ್ಟು ವಂತಿಗೆ ಮಾತ್ರ. ಉಳಿದ ಶೇ8.33ರಷ್ಟು ವಂತಿಗೆಯು ನೌಕರನ ಇಪಿಎಸ್ ಖಾತೆಗೆ ಜಮೆಯಾಗುತ್ತದೆ.
₹15,000 ಮಿತಿ ಅನ್ವಯವಾಗುತ್ತಿದ್ದಾಗ, ನೌಕರ ಎಷ್ಟೇ ವೇತನ ಪಡೆಯುತ್ತಿದ್ದರೂ ಆತನ ವೇತನದಲ್ಲಿ ಗರಿಷ್ಠ ₹15,000ಕ್ಕೆ ಅನ್ವಯವಾಗುವಂತೆ ಶೇ8.33ರಷ್ಟು ವಂತಿಗೆಯನ್ನು ಇಪಿಎಸ್ ಖಾತೆಗೆ ಜಮೆ ಮಾಡಲಾಗುತ್ತಿತ್ತು. ₹15,000ದಲ್ಲಿ ಶೇ 8.33ರಷ್ಟು ಅಂದರೆ, ₹1,250 ಆಗುತ್ತದೆ. ಆ ನೌಕರ ₹ 20,000 ವೇತನ (ಮೂಲವೇತನ ಮತ್ತು ತುಟ್ಟಿಭತ್ಯೆ) ಪಡೆಯುತ್ತಿದ್ದರೂ, ಆತನ ಇಪಿಎಸ್‌ಗೆ ಜಮೆಯಾಗುತ್ತಿದ್ದದ್ದು ₹1,250 ಮಾತ್ರ.
ಹೊಸ ಯೋಜನೆ ಅಡಿ, ₹15,000ದ ಗರಿಷ್ಠ ಮಿತಿಯನ್ನು ತೆಗೆದುಹಾಕಲಾಗಿದೆ. ನೌಕರ ₹20,000 ವೇತನ (ಮೂಲವೇತನ ಮತ್ತು ತುಟ್ಟಿಭತ್ಯೆ) ಪಡೆಯುತ್ತಿದ್ದರೆ, ಶೇ 8.33ರಂತೆ ಇಪಿಎಸ್ ಖಾತೆಗೆ ₹1,666 ಜಮೆಯಾಗುತ್ತದೆ. ನೌಕರ ₹40,000 ವೇತನ (ಮೂಲವೇತನ ಮತ್ತು ತುಟ್ಟಿಭತ್ಯೆ) ಪಡೆಯುತ್ತಿದ್ದರೆ, ಶೇ 8.33ರಂತೆ ಇಪಿಎಸ್ ಖಾತೆಗೆ ₹3,332 ಜಮೆಯಾಗುತ್ತದೆ. ಹೀಗೆ ಇಪಿಎಸ್ ಖಾತೆಗೆ ಹೆಚ್ಚು ವಂತಿಗೆ ಜಮೆಯಾಗುವ ಕಾರಣ, ನೌಕರ ಹೆಚ್ಚು ಪಿಂಚಣಿ ಪಡೆಯಲು ಸಾಧ್ಯವಾಗುತ್ತದೆ.
ಆಧಾರ: ಕ್ಲಿಯರ್‌ಟ್ಯಾಕ್ಸ್.ಕಾಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.