ADVERTISEMENT

ಆಳ–ಅಗಲ | ನೀರಿನ ಬರ: ಆರ್ಥಿಕತೆಗೆ ಗರ

ಜಗತ್ತಿನಾದ್ಯಂತ ಹೆಣ್ಣುಮಕ್ಕಳ ಉತ್ಪಾದಕತೆಗೆ ಪೆಟ್ಟು; ಕೃಷಿ, ಕೈಗಾರಿಕೆಗಳಿಗೆ ಹೊಡೆತ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 1:06 IST
Last Updated 12 ಜುಲೈ 2024, 1:06 IST
   
ವ್ಯಕ್ತಿಯೊಬ್ಬನಿಗೆ ಪ್ರತಿ ದಿನ ಕುಡಿಯಲು ಕನಿಷ್ಠ 3ರಿಂದ 4 ಲೀಟರ್ ನೀರಿನ ಅಗತ್ಯವಿದೆ ಹಾಗೂ ನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಕೊನೆಯ ಪಕ್ಷ 40 ಲೀಟರ್ ನೀರು ಬೇಕಾಗುತ್ತದೆ. ಇಷ್ಟು ನೀರನ್ನು ಸಂಗ್ರಹಿಸುವುದು ಜಗತ್ತಿನ ಮಹಿಳೆಯರ ಪಾಲಿಗೆ ಮಹಾ ಕಷ್ಟದ ಕೆಲಸವಾಗಿದೆ. 

ವಿಶ್ವಸಂಸ್ಥೆಯು 20230ರೊಳಗೆ ಸಾಧಿಸಬೇಕಾದ ಸುಸ್ಥಿರ ಅಭಿವೃದ್ದಿ ಗುರಿಗಳ (ಎಸ್‌ಡಿಜಿ) ಪೈಕಿ ಆರನೆಯ ಗುರಿ ಶುದ್ಧ ನೀರು ಮತ್ತು ಶುಚಿತ್ವಕ್ಕೆ ಸಂಬಂಧಿಸಿದ್ದು. ಎಲ್ಲರಿಗೂ ಶುದ್ಧ ನೀರಿನ ನಿರಂತರ ಲಭ್ಯತೆ ಮತ್ತು ಶುಚಿತ್ವ ನಿರ್ವಹಣೆಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸುವುದು ಇದರ ಉದ್ದೇಶ. ಈ ಗುರಿ ಸಾಧನೆಯ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಾಗಲಿ ಅಥವಾ ಭಾರತದ ಮಟ್ಟದಲ್ಲಾಗಲಿ ಆಶಾದಾಯಕ ಬೆಳವಣಿಗೆ ಕಂಡುಬರುತ್ತಿಲ್ಲ.

ಎಸ್‌ಡಿಜಿ 6ರ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಆಗಿರುವ ಬೆಳವಣಿಗೆಯನ್ನು ಪರಿಶೀಲಿಸುವ ಜಂಟಿ ಕಾರ್ಯಕ್ರಮವನ್ನು (ಡಬ್ಲ್ಯುಎಎಸ್‌ಎಚ್‌ 2020–22) ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಹಾಕಿಕೊಂಡಿತ್ತು. ನೀರು ಸಂಗ್ರಹಣೆಯ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿ ಲಿಂಗ ತಾರತಮ್ಯ ಅನುಸರಿಸಲಾಗುತ್ತಿದೆ ಎನ್ನುವ ಅಂಶದತ್ತ ಈ ಅಧ್ಯಯನ ವರದಿಯು ಬೊಟ್ಟು ಮಾಡಿದೆ. ಮನೆ ಬಳಕೆಯ ನೀರನ್ನು ಸಂಗ್ರಹಿಸುವ ಕೆಲಸವನ್ನು ಹೆಚ್ಚಾಗಿ ನಿಭಾಯಿಸುತ್ತಿರುವುದು ಹೆಣ್ಣುಮಕ್ಕಳು. ಜತೆಗೆ, ಮನೆಯ ಹೊರಗೆ ಹೆಣ್ಣುಮಕ್ಕಳು ಶೌಚಾಲಯ ಬಳಸುವುದೂ ಸೇರಿದಂತೆ ಹಲವು ಸಂದರ್ಭಗಳಲ್ಲಿ ನೈರ್ಮಲ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ವಿಚಾರದ ಬಗ್ಗೆ ಬೆಳಕು ಚೆಲ್ಲಿದೆ.

ನೀರು ಸಂಗ್ರಹದ ಕಾಯಕವು ಮಹಿಳೆಯರ ಸಾಮರ್ಥ್ಯವನ್ನು ಕಸಿಯುತ್ತಿದೆ ಎಂದು ವರದಿ ವಿಶ್ಲೇಷಿಸಿದೆ. ನೀರು ಸಂಗ್ರಹಕ್ಕಾಗಿ ಹೆಣ್ಣುಮಕ್ಕಳು ದೂರದ ಹಾದಿಯನ್ನು ಕ್ರಮಿಸುತ್ತಿದ್ದು, ಈ ದಿಸೆಯಲ್ಲಿ ಇಡುವ ಪ್ರತಿ ಹೆಜ್ಜೆಯೂ ಆಕೆಯನ್ನು ಶಿಕ್ಷಣದಿಂದ, ಆಟದಿಂದ, ರಕ್ಷಣೆಯಿಂದ ವಂಚಿತರನ್ನಾಗಿಸುತ್ತಿದೆ ಎಂದು ಹೇಳಿದೆ. ನೀರಿನ ಕೊರತೆಯು ಮಹಿಳೆಯರ ಖಾಸಗಿತನ, ಘನತೆ ಮತ್ತು ರಕ್ಷಣೆಗೆ ಕಂಟಕವಾಗಿದೆ. 

ADVERTISEMENT

ಜಗತ್ತಿನ 22 ದೇಶಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಸುಮಾರು 50 ಕೋಟಿ ಮಂದಿಯು ಶೌಚಾಲಯವನ್ನು ಇತರ ಕುಟುಂಬಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಬಡ ಕುಟುಂಬಗಳ ಅಂಗವಿಕಲ ಮತ್ತು ಪ್ರೌಢಾವಸ್ಥೆಯ ಹೆಣ್ಣುಮಕ್ಕಳಿಗೆ ಸ್ನಾನ ಮಾಡಲು ಮತ್ತು ಬಟ್ಟೆ ಬದಲಿಸಲು ನಾಲ್ಕು ಗೋಡೆಗಳ ಸುರಕ್ಷೆಯಿರುವ ಜಾಗದ ಕೊರತೆ ಇದೆ.

ಭಾರತದ ಆರ್ಥಿಕತೆಗೆ ಪೆಟ್ಟು ನೀಡುತ್ತಿರುವ ನೀರು

ಭಾರತದ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ. ದೇಶದಲ್ಲಿ ಕುಟುಂಬದ ಬಳಕೆಗಾಗಿ ನೀರು ಸಂಗ್ರಹಿಸುವುದೇ ಮಹಿಳೆಯರ ಮುಖ್ಯ ಕಸುಬಾಗಿದೆ. ಗ್ರಾಮೀಣ ಪ್ರದೇಶದ ಜನ ಮತ್ತು ನಗರದ ಬಡವರ ಮಟ್ಟಿಗೆ ಇದು ದೊಡ್ಡ ಸಮಸ್ಯೆಯಾಗಿದೆ. ಪ್ರತಿನಿತ್ಯ ಹೆಣ್ಣುಮಕ್ಕಳು ಹಲವು ಮೈಲಿ ನಡೆದುಹೋಗಿ ನೀರು ತಂದು ಕುಟುಂಬದ ಅಗತ್ಯಗಳನ್ನು ಪೂರೈಸುತ್ತಿದ್ದಾರೆ. ಮನೆಕೆಲಸ ಭಾರತದ ಮಹಿಳೆಯರ ಮುಖ್ಯ ಕೆಲಸವಾಗಿದ್ದರೆ, ಅನೇಕ ಕುಟುಂಬಗಳ ಮಹಿಳೆಯರ ದಿನದ ಐದಾರು ಗಂಟೆ ನೀರು ಸಂಗ್ರಹಣೆಯಲ್ಲಿಯೇ ಕಳೆದುಹೋಗುತ್ತಿದೆ. ಅದಕ್ಕಾಗಿ ಮಹಿಳೆಯರು ಅಪಾರ ಶ್ರಮವನ್ನೂ ವ್ಯಯಿಸಬೇಕಿದೆ. ಬೇರೆ ಉದ್ಯೋಗ ಮಾಡಲು ಅವರಿಗೆ ಸಮಯ ಹಾಗೂ ಸಾಮರ್ಥ್ಯವೇ ಉಳಿಯುತ್ತಿಲ್ಲ.  

2023 ಎಸ್‌ಬಿಐ ಇಕೋವ್ರಾಪ್ ವರದಿಯ ಪ್ರಕಾರ, ಭಾರತದ ಆರ್ಥಿಕತೆಗೆ ವೇತನರಹಿತ ಮಹಿಳೆಯರ ಕೊಡುಗೆ ₹22.7 ಲಕ್ಷ ಕೋಟಿ. ಇದರಲ್ಲಿ ಗ್ರಾಮೀಣ ಮಹಿಳೆಯರ ‍ಪಾಲು ₹14.7 ಲಕ್ಷ ಕೋಟಿ ಆಗಿದ್ದರೆ, ನಗರದ ಮಹಿಳೆಯರ ಪಾಲು ₹8.0 ಲಕ್ಷ ಕೋಟಿ ಆಗಿದೆ. ಇದು ಜಿಡಿಪಿಯ ಶೇ 7.5ರಷ್ಟು ಎಂದು ವರದಿ ತಿಳಿಸಿದೆ.

ಅಂತರರಾಷ್ಟ್ರೀಯ ಆರ್ಥಿಕ ಸಂಶೋಧನೆ ಮತ್ತು ವಿಶ್ಲೇಷಣಾ ಸಂಸ್ಥೆಯಾದ ಮೂಡೀಸ್ ಪ್ರಕಾರ, ರಾಜಕಾರಣ ಮತ್ತು ಬಡ್ಡಿ ದರಗಿಳಿಗಿಂತಲೂ ಹೆಚ್ಚಾಗಿ ನೀರಿನ ಬಿಕ್ಕಟ್ಟು ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತದ ಆರ್ಥಿಕತೆಗೆ ದೊಡ್ಡ ಅಡ್ಡಿಯಾಗಲಿದೆ.  

ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶವಾಗಿರುವ ಭಾರತದಲ್ಲಿ ನೀರಿನ ಸಮಸ್ಯೆ ದಶಕಗಳಿಂದಲೂ ಇದೆ. ಆದರೆ, ಜಾಗತಿಕ ತಾಪಮಾನ ಏರಿಕೆಯ ಜತೆಜತೆಯಲ್ಲೇ ನೀರಿನ ಬವಣೆಯೂ ಹೆಚ್ಚುತ್ತಿದೆ. ದೇಶದ ರಾಜಧಾನಿ ದೆಹಲಿಯಿಂದ ಹಿಡಿದು, ಸಿಲಿಕಾನ್ ಸಿಟಿ ಎಂದೇ ಹೆಸರಾಗಿರುವ ಬೆಂಗಳೂರಿನವರೆಗೆ ಬಹುತೇಕ ರಾಜ್ಯಗಳಲ್ಲಿ ನೀರಿನ ತೀವ್ರ ಕೊರತೆ ಇದೆ. ಈ ಬಾರಿಯ ಬೇಸಿಗೆಯಲ್ಲಿ ಬೆಂಗಳೂರು ಹಿಂದೆಂದೂ ಇಲ್ಲದ ರೀತಿಯಲ್ಲಿ ನೀರಿನ ಸಮಸ್ಯೆಯನ್ನು ಎದುರಿಸಿತು. 

ನೀರಿನ ಕೊರತೆಯು ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡಲ್ಲೂ ವ್ಯಾಪಕವಾಗಿದ್ದು, ಜನರ ದೈನಿಕ ಬದುಕನ್ನು ಕಂಗೆಡಿಸುತ್ತಿದೆ. ಕೃಷಿ ಉತ್ಪಾದನೆ ಮತ್ತು ಕೈಗಾರಿಕೆಗಳ ಕಾರ್ಯಾಚರಣೆಗೆ ಅಡ್ಡಿ ಉಂಟುಮಾಡುತ್ತಿದ್ದು, ಆಹಾರದ ಹಣದುಬ್ಬರಕ್ಕೆ ಕಾರಣವಾಗುತ್ತಿದೆ. ಜತೆಗೆ, ಉದ್ಯಮಗಳ ಆದಾಯ ಖೋತಾ ಆಗಲು ಕಾರಣವಾಗುತ್ತಿದ್ದು, ರೈತರು ಮತ್ತು ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ. ಸಾಮಾಜಿಕ ಅಶಾಂತಿಗೂ ಕಾರಣವಾಗುತ್ತಿದೆ. ಸರ್ಕಾರದ ಮಾಹಿತಿಯ ಪ್ರಕಾರ, ಕಲುಷಿತ ನೀರಿನ ಸೇವನೆಯಿಂದ ಪ್ರತಿವರ್ಷ 2 ಲಕ್ಷ ಮಂದಿ ಸಾಯುತ್ತಿದ್ದಾರೆ. ಇದರಿಂದ ಜನ ಮತ್ತು ದೇಶದ ಆರ್ಥಿಕತೆ ನಲುಗುವಂತಾಗಿದೆ.

ಭಾರತದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಅಂತರ್ಜಲ ಬಳಕೆ (ಶೇ 66) ಇದ್ದು, ಅದನ್ನು ಶೇ 50ಕ್ಕಿಂತಲೂ ಕಡಿಮೆ ಮಟ್ಟಕ್ಕೆ ಇಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಜತೆಗೆ ದೇಶದಲ್ಲಿ 785 ಜಿಲ್ಲೆಗಳ ಪೈಕಿ ಪ್ರತಿ ಜಿಲ್ಲೆಯಲ್ಲಿಯೂ 75 ಕೆರೆಗಳ ಪುನರುಜ್ಜೀವನಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ರೂಪಿಸಿದ್ದಾರೆ. ಈ ದಿಸೆಯಲ್ಲಿ ಈಗಾಗಲೇ ಕೆಲಸ ಆರಂಭವಾಗಿದ್ದು, 83,000 ಕೆರೆಗಳ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. 

ಜಲ ಜೀವನ್ ಮಿಷನ್: ನಲ್ಲಿ ಇರಲಿ ನೀರು ಬರಲಿ  

2019ರ ಸ್ವಾತಂತ್ರ ದಿನಾಚರಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಜಲ ಜೀವನ್ ಮಿಷನ್‌ ಯೋಜನೆ ಆರಂಭಿಸಿದ್ದರು. 2024ರ ಒಳಗೆ ದೇಶದ ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನಲ್ಲಿ ಸಂಪರ್ಕ ನೀಡಿ ನೀರು ಪೂರೈಸುವುದು ಯೋಜನೆಯ ಗುರಿ ಎಂದು ಪ್ರಕಟಿಸಿದ್ದರು. ನೀರು ಪೂರೈಕೆಯ ಜತೆಗೆ ನೀರಿನ ಮೂಲಗಳ ರಕ್ಷಣೆ ಮಳೆ ನೀರು ಸಂಗ್ರಹ ಇತ್ಯಾದಿಗಳ ಕಡೆಗೂ ಗಮನ ಹರಿಸುವುದು ಯೋಜನೆಯ ಭಾಗವಾಗಿತ್ತು. ಮೋದಿ ಅವರ ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು ಕೇಂದ್ರ ಜಲ ಶಕ್ತಿ ಇಲಾಖೆ ಅನುಷ್ಠಾನ ಮಾಡುತ್ತಿದೆ.  ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ 19.31 ಕೋಟಿ ಕುಟುಂಬಗಳ ಪೈಕಿ ಇದುವರೆಗೆ 14.96 ಕೋಟಿ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ. ಸರ್ಕಾರದ ಪ್ರಕಾರ ಯೋಜನೆಯಲ್ಲಿ ‌ಶೇ 77.48 ಪ್ರಗತಿ ಸಾಧಿಸಲಾಗಿದೆ. ಸಮರ್ಪಕ ರೀತಿಯಲ್ಲಿ ಅನುಷ್ಠಾನಕ್ಕೆ ಬಂದರೆ ಇದು ನಿಜಕ್ಕೂ ಉತ್ತಮ ಯೋಜನೆಯೇ. ಆದರೆ ಯೋಜನೆಯ ಅನುಷ್ಠಾನದ ಬಗ್ಗೆ ಹಲವು ಆಕ್ಷೇಪಣೆಗಳು ಆರೋಪಗಳು ಕೇಳಿಬಂದಿವೆ. ನಲ್ಲಿ ಸಂಪರ್ಕ ನೀಡಲಾಗಿದ್ದರೂ ಅವುಗಳಲ್ಲಿ ನೀರು ಬರುತ್ತಿಲ್ಲ ಎನ್ನುವ ವ್ಯಾಪಕ ದೂರುಗಳಿವೆ.       

ನೀರಿನ ಕೊರತೆ ನಿರಂತರ

ಭಾರತದ 142 ಕೋಟಿ ಜನರಿಗೆ ಮಳೆಗಾಲದ ಕೃಷಿಯೇ ಮುಖ್ಯ ಆಸರೆ. ಲಭ್ಯ ನೀರಿನ ಪೈಕಿ ಶೇ 80ಕ್ಕೂ ಹೆಚ್ಚಿನ ಪಾಲು ಭತ್ತ, ಗೋಧಿ, ಕಬ್ಬು ಬೆಳೆಗಳಿಗೆ ಬಳಕೆಯಾಗುತ್ತಿದೆ. ತೀವ್ರವಾದ ಹವಾಮಾನ ವೈಪರೀತ್ಯಗಳು ಮುಂಗಾರು ಮಳೆಯ ಮೇಲೆ ಪರಿಣಾಮ ಬೀರುತ್ತಿರುವುದು ಒಂದೆಡೆ ಇದ್ದರೆ, ನಗರೀಕರಣದಿಂದ ಕೃಷಿ ಯೋಗ್ಯ ಭೂಮಿ ಕಡಿಮೆ ಆಗುತ್ತಿರುವುದು ಮತ್ತೊಂದೆಡೆ ನಡೆಯುತ್ತಿದೆ. ಹೀಗಾಗಿ ಉತ್ತಮ ಮಳೆ ಸುರಿದರೂ ಹೆಚ್ಚಿನ ನೀರು ಸಮುದ್ರ ಸೇರುತ್ತಿದೆ. 

ಭಾರತದ ಸದ್ಯದ ತಲಾ ವಾರ್ಷಿಕ ನೀರಿನ ಲಭ್ಯತೆ 1,486 ಕ್ಯುಬಿಕ್ ಮೀಟರ್‌ ಇದ್ದು, ಜನಸಂಖ್ಯೆಯ ಹೆಚ್ಚಳದಿಂದ 2031ರ ವೇಳೆಗೆ ಇದು 1,367 ಕ್ಯುಬಿಕ್ ಮೀಟರ್‌ಗೆ ಕುಸಿಯಲಿದೆ. 2011ರಿಂದಲೂ ದೇಶದ ತಲಾ ನೀರಿನ ಲಭ್ಯತೆ 1,700 ಕ್ಯುಬಿಕ್ ಮೀಟರ್‌ಗಿಂತ ಕಡಿಮೆ ಇದ್ದು, ಇದನ್ನು ‘ನೀರಿನ ಕೊರತೆ’ ಎಂದು ವರ್ಗೀಕರಿಸಲಾಗಿದೆ.

ಈ ಹಿಂದೆ ನೀರಿನ ವಿಚಾರದಲ್ಲಿ, ಬರಗಾಲದ ವರ್ಷ ಮತ್ತು ಸಹಜ ಮಳೆಯ ವರ್ಷ ಎಂಬ ಪರಿಗಣನೆ ಇತ್ತು. ಈಗ ಪ್ರತಿ ವರ್ಷ ನೀರಿನ ಬಿಕ್ಕಟ್ಟು ಸಾಮಾನ್ಯ ಆಗಿದ್ದು, ವರ್ಷದಿಂದ ವರ್ಷಕ್ಕೆ ಅದರ ತೀವ್ರತೆ ಹೆಚ್ಚುತ್ತಿದೆ. 

ಮನೆಬಳಕೆಯ ಶೇ 90ರಷ್ಟು ನೀರನ್ನು ಶುದ್ಧೀಕರಿಸಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ, ಬೆಳೆಯುತ್ತಿರುವ ಜನಸಂಖ್ಯೆಗೆ ತಕ್ಕಂತೆ ನೀರು ಪೂರೈಕೆ ಮತ್ತು ಅದನ್ನು ಶುದ್ಧೀಕರಣ ಮಾಡುವ ವಿಚಾರದಲ್ಲಿ ಸರ್ಕಾರಗಳು ವಿಫಲವಾಗಿವೆ. ಹೀಗಾಗಿ ಮನೆಬಳಕೆಯ ಮಲಿನ ನೀರು ಹರಿದು ನದಿಗಳ ಒಡಲು ಸೇರುವಂತಾಗಿದೆ.

Graphic text / Statistics - 180 ಕೋಟಿ  ಮನೆಯ ಬಳಿ ನೀರಿನ ಸೌಲಭ್ಯ ಇಲ್ಲದ ಕುಟುಂಬಗಳು  ಪ್ರತಿ 10 ರಲ್ಲಿ 7 ಕುಟುಂಬ  ನೀರಿನ ಸಂಗ್ರಹದ ಜವಾಬ್ದಾರಿ ಹೆಣ್ಣುಮಕ್ಕಳದು  ಪ್ರತಿ 10ರಲ್ಲಿ 3 ಕುಟುಂಬ ನೀರಿನ ಸಂಗ್ರಹದ ಜವಾಬ್ದಾರಿ ಗಂಡುಮಕ್ಕಳದು ಶೇ 7 ನೀರು ಸಂಗ್ರಹವೇ ಕಾಯಕವಾಗಿರುವ 15 ವರ್ಷದ ಕೆಳಗಿನ ಹೆಣ್ಣುಮಕ್ಕಳು ಶೇ 4 ನೀರು ಸಂಗ್ರಹವೇ ಕಾಯಕವಾಗಿರುವ 15 ವರ್ಷದ ಕೆಳಗಿನ ಗಂಡುಮಕ್ಕಳು 14 ಲಕ್ಷ ನೀರು ನೈರ್ಮಲ್ಯದ ಕೊರತೆಯಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ

ಆಧಾರ: ರಾಯಿಟರ್ಸ್, ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್, ಜಲಜೀವನ್ ಮಿಷನ್ ವೆಬ್‌ಸೈಟ್, ಬಿಬಿಸಿ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.