ADVERTISEMENT

ಆಳ-ಅಗಲ: ತೈಲೋತ್ಪಾದನೆ ಕುಬೇರರ ಕಚ್ಚಾಟ

ತೈಲ ಉತ್ಪಾದನೆ ಹೆಚ್ಚಳ ವಿಚಾರದಲ್ಲಿ ಸೌದಿ–ಯುಎಇ ಭಿನ್ನಮತ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 19:31 IST
Last Updated 8 ಜುಲೈ 2021, 19:31 IST
ಸೌದಿ ಅರೇಬಿಯಾದ ಅರಮ್ಕೊ ರಾಸ್‌ ತನುರಾ ತೈಲ ಸಂಸ್ಕರಣ ಘಟಕ ರಾಯಿಟರ್ಸ್‌ ಚಿತ್ರ
ಸೌದಿ ಅರೇಬಿಯಾದ ಅರಮ್ಕೊ ರಾಸ್‌ ತನುರಾ ತೈಲ ಸಂಸ್ಕರಣ ಘಟಕ ರಾಯಿಟರ್ಸ್‌ ಚಿತ್ರ   

ಕೋವಿಡ್‌ ನಿಯಂತ್ರಣಕ್ಕೆ ಬರುತ್ತಿದ್ದಂತೆ ಜಾಗತಿಕವಾಗಿ ಪೆಟ್ರೋಲಿಯಂ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಕೋವಿಡ್ ಕಾರಣದಿಂದ ತೈಲ ಉತ್ಪಾದನೆಯನ್ನು ನಿಯಂತ್ರಿಸಿದ್ದ ಒಪೆಕ್ ದೇಶಗಳು (ತೈಲೋತ್ಪನ್ನ ರಫ್ತು ದೇಶಗಳ ಒಕ್ಕೂಟ), ಬೆಲೆಯನ್ನು ಅದೇ ಮಟ್ಟದಲ್ಲಿ ಇರುವಂತೆ ನೋಡಿಕೊಂಡಿದ್ದವು. ಆದರೆ ಈಗ ಬೇಡಿಕೆ ಹೆಚ್ಚುತ್ತಿರುವ ಕಾರಣ ಉತ್ಪಾದನೆ ಹೆಚ್ಚಿಸುವ ಪ್ರಸ್ತಾವವಿದೆ. ಇದೇ ವಿಚಾರವು ಒಪೆಕ್ ದೇಶಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ.

2022ರ ಏಪ್ರಿಲ್‌ ನಂತರವೂ ತೈಲ ಉತ್ಪಾದನೆಯನ್ನು ಹೆಚ್ಚಿಸಬಾರದು ಎಂದು ಒಪೆಕ್ ಒಕ್ಕೂಟದ ಸದಸ್ಯ ದೇಶಗಳು ಇರಿಸಿದ್ದ ಪ್ರಸ್ತಾವವು ಈಗ ವಿವಾದ ಸೃಷ್ಟಿಸಿದೆ. ಈ ಪ್ರಸ್ತಾವಕ್ಕೆ ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ) ವಿರೋಧ ವ್ಯಕ್ತಪಡಿಸಿದೆ. ಬೇಡಿಕೆ ಇದ್ದಾಗಲೂ ತೈಲ ಉತ್ಪಾದನೆ ಹೆಚ್ಚಿಸದಿರುವುದು ಅನ್ಯಾಯ ಎಂದು ಯುಎಇ ವಾದಿಸಿದೆ. ಆದರೆ ಒಪೆಕ್‌+ನ ಪ್ರಮುಖ ಸದಸ್ಯ ದೇಶವಾದ ಸೌದಿ ಅರೇಬಿಯಾವು ಯುಎಇ ವಾದವನ್ನು ಒಪ್ಪುತ್ತಿಲ್ಲ. ತೈಲ ಉತ್ಪಾದನೆ ನಿಯಂತ್ರಣದಲ್ಲಿ ಇರಿಸಬೇಕು ಎಂದು ಅದು ಪ್ರತಿಪಾದಿಸಿದೆ.

ಈ ಬಗ್ಗೆ ಚರ್ಚಿಸಲು ಕಳೆದ ಸೋಮವಾರ ನಿಗದಿಯಾಗಿದ್ದ ಒಪೆಕ್ ಸಭೆಯನ್ನು ರದ್ದುಪಡಿಸಲಾಗಿತ್ತು. ಮತ್ತೆ ಸಭೆ ಯಾವಾಗ ನಡೆಯುತ್ತದೆ ಎಂಬ ಮಾಹಿತಿ ಇಲ್ಲ. ಹೀಗಾಗಿ ಇದು ಮಾರುಕಟ್ಟೆಯ ಅನಿಶ್ಚಿತತೆಗೆ ಕಾರಣವಾಗಿದೆ.

ADVERTISEMENT

ಒಪೆಕ್‌+ ದೇಶಗಳ ತೈಲ ಉತ್ಪಾದನೆ ಕಡಿತ ಒಪ್ಪಂದ
2020ರ ಮಾರ್ಚ್‌ನಲ್ಲಿ ವಿಶ್ವದ ಬಹುತೇಕ ಎಲ್ಲಾ ದೇಶಗಳನ್ನು ಕೋವಿಡ್‌ ಆವರಿಸಿತ್ತು. ಕೋವಿಡ್‌ ಹರಡುವುದನ್ನು ತಡೆಯಲು ಬಹುತೇಕ ಎಲ್ಲಾ ದೇಶಗಳು ಲಾಕ್‌ಡೌನ್‌ನ ಮೊರೆ ಹೋಗಿದ್ದವು. ಲಾಕ್‌ಡೌನ್‌ ಮೊರೆ ಹೋದ ಎಲ್ಲಾ ದೇಶಗಳ ಆರ್ಥಿಕತೆಯು ಸ್ಥಗಿತಗೊಂಡಿದ್ದವು. ಪರಿಣಾಮವಾಗಿ ಪೆಟ್ರೋಲ್‌ ಮತ್ತು ಡೀಸೆಲ್ ಬಳಕೆ ವಿಪರೀತ ಮಟ್ಟದಲ್ಲಿ ಕುಸಿಯಿತು. ತತ್ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲಕ್ಕೂ ಬೇಡಿಕೆ ಕುಸಿಯಿತು.ಬೇಡಿಕೆ ಇಲ್ಲದ ಕಾರಣ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ನೆಲಕಚ್ಚಿತು. 2020ರ ಮಾರ್ಚ್‌-ಏಪ್ರಿಲ್‌ನಲ್ಲಿ ಪ್ರತಿ ಬ್ಯಾರೆಲ್ ಕಚ್ಚಾತೈಲವು 20 ಡಾಲರ್‌ಗಿಂತಲೂ ಕಡಿಮೆ ಬೆಲೆಗೆ ಬಿಕರಿಯಾಯಿತು. ಈ ಬೆಲೆ ಕುಸಿತದಿಂದ ಕಚ್ಚಾತೈಲ ಉತ್ಪಾದನಾ ರಾಷ್ಟ್ರಗಳು ಭಾರಿ ನಷ್ಟ ಅನುಭವಿಸಿದವು.

ಬೇಡಿಕೆ ಇಲ್ಲದೆ ಕಚ್ಚಾತೈಲ ಉತ್ಪಾದನೆ ಮಾಡುವುದರಿಂದಲೂ, ಕಚ್ಚಾತೈಲ ಉತ್ಪಾದನಾ ರಾಷ್ಟ್ರಗಳು ನಷ್ಟ ಅನುಭವಿಸಿದವು. ಅಲ್ಲದೆ, ಉತ್ಪಾದನೆಯಾದ ಕಚ್ಚಾತೈಲದ ದಾಸ್ತಾನು ದೊಡ್ಡ ಮಟ್ಟದಲ್ಲಿ ಇತ್ತು. ದಾಸ್ತಾನು ಕಡಿಮೆ ಮಾಡುವ ಮತ್ತು ಉತ್ಪಾದನೆಯ ನಷ್ಟವನ್ನು ಸರಿದೂಗಿಸುವ ಉದ್ದೇಶದಿಂದ ಉತ್ಪಾದನೆಯನ್ನು ಕಡಿಮೆ ಮಾಡಲು ಈ ದೇಶಗಳು ನಿರ್ಧರಿಸಿದ್ದವು. ಉತ್ಪಾದನೆ ಕಡಿತ ಮಾಡಿದರೆ ಬೇಡಿಕೆ ಹೆಚ್ಚುತ್ತದೆ ಎಂಬುದು ಈ ನಿರ್ಧಾರದ ಹಿಂದಿನ ಉದ್ದೇಶವಾಗಿತ್ತು.

ಕಚ್ಚಾತೈಲ ಉತ್ಪಾದನೆ ಮಾಡುವ ದೇಶಗಳ ಪರಮೋಚ್ಚ ಒಕ್ಕೂಟ, ತೈಲ ರಫ್ತು ರಾಷ್ಟ್ರಗಳ ಸಂಘಟನೆ (ಒಪೆಕ್+) ತೈಲ ಉತ್ಪಾದನೆ ಕಡಿತ ಒಪ್ಪಂದವನ್ನು ಮಂಡಿಸಿತು. 2020ರ ಏಪ್ರಿಲ್‌ನಲ್ಲಿ ಒಪೆಕ್+ ಸದಸ್ಯ ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಿದವು. ತೈಲ ಉತ್ಪಾದನೆ ಕಡಿತ ಜಾರಿಗೆ ಬಂದಿತು.

ಲಾಕ್‌ಡೌನ್‌ಗೂ ಮುನ್ನ ಒಪೆಕ್+ ದೇಶಗಳು ಪ್ರತಿದಿನ 1.68 ಕೋಟಿ ಬ್ಯಾರೆಲ್ ಕಚ್ಚಾತೈಲ ಉತ್ಪಾದನೆ ಮಾಡುತ್ತಿದ್ದವು. ಉತ್ಪಾದನೆ ಕಡಿತ ಒಪ್ಪಂದದ ಭಾಗವಾಗಿ ಎಲ್ಲಾ ದೇಶಗಳು ಒಟ್ಟು 1 ಕೋಟಿ ಕಚ್ಚಾತೈಲ ಬ್ಯಾರೆಲ್‌ ಉತ್ಪಾದನೆ ಕಡಿತ ಮಾಡಿದವು. ಇದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಯಿತು. ಬೇಡಿಕೆ ಮತ್ತು ಬೆಲೆ ಏರುತ್ತಿದ್ದರೂ 2021ರಲ್ಲಿ ಸೌದಿ ಅರೇಬಿಯಾ ಮತ್ತೆ ಪ್ರತಿದಿನ 10 ಲಕ್ಷ ಬ್ಯಾರೆಲ್ ಕಚ್ಚಾತೈಲ ಉತ್ಪಾದನೆಯನ್ನು ಕಡಿತ ಮಾಡಿತು.

ಒಡಕಿಗೆ ಕಾರಣಗಳೇನು?
ಈಗ ತೈಲ ಉತ್ಪಾದನೆ ಕಡಿತವನ್ನು ವಿಸ್ತರಿಸುವ ಮತ್ತು ಉತ್ಪಾದನೆಯನ್ನು ಹಂತಹಂತವಾಗಿ ಹೆಚ್ಚಿಸುವ ಸಂಬಂಧ ಒಪೆಕ್+ ದೇಶಗಳ ಮಧ್ಯೆ ಒಡಕು ಮೂಡಿದೆ. ಉತ್ಪಾದನೆ ಕಡಿತವನ್ನು ಮುಂದುವರಿಸಬೇಕು ಎಂದು ಸೌದಿ ಅರೇಬಿಯಾ ನೇತೃತ್ವದ ಬಣದ ದೇಶಗಳು ಒತ್ತಾಯಿಸುತ್ತಿವೆ. ಆದರೆ, ಉತ್ಪಾದನೆಯನ್ನು ಹಂತಹಂತವಾಗಿ ಹೆಚ್ಚಿಸಲು ಮತ್ತು ಉತ್ಪಾದನೆ ಕಡಿತದಲ್ಲಿ ಉತ್ಪಾದನಾ ಪಾಲನ್ನು ಮರುಹಂಚಿಕೆ ಮಾಡಬೇಕು ಎಂದು ಯುಎಇ ನೇತೃತ್ವದ ಬಣ ಒತ್ತಾಯಿಸುತ್ತಿದೆ. ಈಚೆಗೆ ನಡೆದ ಒಪೆಕ್‌+ ದೇಶಗಳ ಸಭೆಯಲ್ಲಿ ಈ ಸಂಬಂಧ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.

ಸೌದಿ ಅರೇಬಿಯಾ ಬಣದ ವಾದ
2020ರ ಏಪ್ರಿಲ್‌ನಲ್ಲಿ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ 2022ರ ಏಪ್ರಿಲ್‌ವರೆಗೂ ಉತ್ಪಾದನಾ ಕಡಿತವನ್ನು ಮುಂದುವರಿಸಬೇಕು. ಉತ್ಪಾದನೆ ಕಡಿತ ಮಾಡಿದ ಕಾರಣದಿಂದಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಬೇಡಿಕೆ ಮತ್ತು ಬೆಲೆ ಕುಸಿತದಿಂದ ಆಗಿದ್ದ ನಷ್ಟವನ್ನು ತುಂಬಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಸೌದಿ ಅರೇಬಿಯಾ ನೇತೃತ್ವದ ಬಣದ ರಾಷ್ಟ್ರಗಳು ಪ್ರತಿಪಾದಿಸುತ್ತಿವೆ.

ವಿಶ್ವದ ಹಲವೆಡೆ ಕೋವಿಡ್‌ನ ಮೂರನೇ ಮತ್ತು ನಾಲ್ಕನೇ ಅಲೆ ಕಾಣಿಸಿದೆ. ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಾಗಿಲ್ಲದ ಕಾರಣ ಆ ರಾಷ್ಟ್ರಗಳೆಲ್ಲವೂ ಮತ್ತೆ ಮತ್ತೆ ಲಾಕ್‌ಡೌನ್‌ ಮೊರೆ ಹೋಗಬಹುದು. ಅದರಿಂದ ಕಚ್ಚಾತೈಲದ ಬೇಡಿಕೆ ಮತ್ತು ಬೆಲೆಮತ್ತೆ ಕುಸಿಯುವ ಅಪಾಯವಿದೆ. ಹೀಗಾಗಿ ಉತ್ಪಾದನಾ ಕಡಿತವನ್ನು ಮುಂದುವರಿಸಬೇಕು. ಆಗಸ್ಟ್‌ನಿಂದ ಉತ್ಪಾದನೆಯನ್ನು ಹಂತಹಂತವಾಗಿ ಏರಿಕೆ ಮಾಡುವುದರಿಂದ ಮತ್ತೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಈ ಬಣವು ಕಳವಳ ವ್ಯಕ್ತಪಡಿಸಿದೆ.

ಬೇಡಿಕೆ ಮತ್ತೆ ಕುಸಿಯುವ ಅಪಾಯವಿರುವ ಕಾರಣ 2 ವರ್ಷದ ನಂತರ ಇನ್ನೂ ಆರು ತಿಂಗಳು ಉತ್ಪಾದನೆ ಕಡಿತವನ್ನು ವಿಸ್ತರಿಸಬೇಕು ಎಂದು ಈ ಬಣವು ಪ್ರತಿಪಾದಿಸಿದೆ. ಅಂದರೆ 2022ರ ಅಕ್ಟೋಬರ್‌ ಅಂತ್ಯದವರೆಗೂ ಉತ್ಪಾದನೆ ಕಡಿತ ಮುಂದುವರಿಸಲು ಈ ಬಣವು ಒಲವು ತೋರಿಸುತ್ತಿದೆ.

ಯುಎಇ ಬಣದ ಪ್ರತಿಪಾದನೆ
2020ರಲ್ಲಿ ಉತ್ಪಾದನೆ ಕಡಿತ ಒಪ್ಪಂದ ಮಾಡಿಕೊಂಡಾಗ ಒಪೆಕ್‌+ ಸದಸ್ಯ ರಾಷ್ಟ್ರಗಳು ಪ್ರತಿದಿನಒಟ್ಟು 60.8 ಲಕ್ಷ ಬ್ಯಾರೆಲ್‌ ಕಚ್ಚಾತೈಲ ಉತ್ಪಾದಿಸಬೇಕು ಎಂದು ನಿರ್ಧರಿಸಲಾಗಿತ್ತು. 60.8 ಲಕ್ಷ ಬ್ಯಾರೆಲ್‌ಗಳಲ್ಲಿ ಯಾವ ರಾಷ್ಟ್ರ ಎಷ್ಟು ಬ್ಯಾರೆಲ್ ಉತ್ಪಾದನೆ ಹಂಚಿಕೆ ಮಾಡಬೇಕು ಎಂಬುದನ್ನು ನಿಗದಿ ಮಾಡಲಾಗಿತ್ತು. ಆಯಾ ರಾಷ್ಟ್ರಗಳ ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ಬ್ಯಾರೆಲ್‌ಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಈ ಹಂಚಿಕೆ ಸರಿಯಾಗಿ ಆಗಿಲ್ಲ ಎಂಬುದು ಯುಎಇ ನೇತೃತ್ವದ ಬಣದ ವಾದ.

‘ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ಹಂಚಿಕೆ ಮಾಡದೇ ಇರುವ ಕಾರಣ ಕೆಲವು ರಾಷ್ಟ್ರಗಳಿಗೆ ಹೆಚ್ಚು ಬ್ಯಾರೆಲ್‌ಗಳು ಹಂಚಿಕೆಯಾಗಿವೆ. ಕೆಲವು ರಾಷ್ಟ್ರಗಳಿಗೆ ಕಡಿಮೆ ಬ್ಯಾರೆಲ್‌ಗಳು ಹಂಚಿಕೆಯಾಗಿವೆ. ನಮ್ಮ ಉತ್ಪಾದನಾ ಸಾಮರ್ಥ್ಯಕ್ಕೆ ಹೋಲಿಸಿದರೆ, ನಮಗೆ ಹಂಚಿಕೆ ಮಾಡಿರುವ ಬ್ಯಾರೆಲ್‌ಗಳ ಸಂಖ್ಯೆ ಅತ್ಯಂತ ಕಡಿಮೆ. ಇದರಿಂದ ನಮಗೆ ನಷ್ಟವಾಗುತ್ತಿದೆ. ಈಗ ಬೇಡಿಕೆ ಏರಿಕೆಯಾಗುತ್ತಿದ್ದರೂ, ನಮಗೆ ನಷ್ಟವನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಇದೇ ಸ್ವರೂಪದಲ್ಲಿ ಉತ್ಪಾದನೆ ಕಡಿತವನ್ನು ಮತ್ತಷ್ಟು ವಿಸ್ತರಿಸಲು ಸಾಧ್ಯವಿಲ್ಲ’ ಎಂದು ಯುಎಇ ಹೇಳಿದೆ. ಯುಎಇ ಬಣದ ರಾಷ್ಟ್ರಗಳೂ ಇದನ್ನೇ ಹೇಳಿವೆ.

‘ಆಗಸ್ಟ್‌ನಿಂದ ಹಂತಹಂತವಾಗಿ ಉತ್ಪಾದನೆಯನ್ನು ಹೆಚ್ಚಿಸಬೇಕು. ಇತರ ಸದಸ್ಯ ರಾಷ್ಟ್ರಗಳ ಒತ್ತಾಯದಂತೆ ಉತ್ಪಾದನಾ ಕಡಿತವನ್ನು ಆರು ತಿಂಗಳು ವಿಸ್ತರಿಸಬಹುದು. ಆದರೆ, ಪ್ರತಿದಿನ ಉತ್ಪಾದನೆ ಮಾಡುವ ಬ್ಯಾರೆಲ್‌ಗಳ ಸಂಖ್ಯೆಯನ್ನು ಸದಸ್ಯ ರಾಷ್ಟ್ರಗಳಿಗೆ ಮರುಹಂಚಿಕೆ ಮಾಡಲೇಬೇಕು. ಇಲ್ಲದಿದ್ದರೆ ಕಡಿತ ಒಪ್ಪಂದ ವಿಸ್ತರಿಸಲು ನಮ್ಮ ಒಪ್ಪಿಗೆ ಇಲ್ಲ’ ಎಂದು ಈ ಬಣದ ದೇಶಗಳು ಖಡಾಖಂಡಿತವಾಗಿ ಹೇಳಿವೆ.

ಸಂಘರ್ಷದ ಪರಿಣಾಮ
ಒಪೆಕ್‌+ ಸದಸ್ಯ ದೇಶಗಳ ಪೈಕಿ ತೈಲ ಉತ್ಪಾದನೆಯಲ್ಲಿ ದೈತ್ಯ ಎನಿಸಿಕೊಂಡಿರುವ ಸೌದಿ ಹಾಗೂ ಯುಎಇ ದೇಶಗಳು ಕಾದಾಟಕ್ಕೆ ಇಳಿದಿರುವುದು ಸ್ಪಷ್ಟ. ಈ ಸಂಘರ್ಷವು ಜಾಗತಿಕವಾಗಿ ಹಲವು ಪರಿಣಾಮಗಳನ್ನು ಉಂಟು ಮಾಡಲಿದೆ.

ಈ ಕಲಹ ತೈಲ ಉತ್ಪಾದನೆಗೆ ಮಾತ್ರ ಸೀಮಿತವಾಗಿಲ್ಲ. ಅದರಾಚೆಗೆ ಹಲವು ವಿಚಾರಗಳಲ್ಲಿ ಪ್ರಭುತ್ವ ಸಾಧಿಸುವ ಯತ್ನ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸೌದಿ ಅರೇಬಿಯಾದ ನೆರಳಿನಿಂದ ಹೊರಬಂದು, ಜಾಗತಿಕ ವ್ಯವಹಾರಗಳಲ್ಲಿ ತನ್ನದೇ ಛಾಪು ಮೂಡಿಸಲು ಯುಎಇ ಯತ್ನಿಸುತ್ತಿದೆ. ಒಪೆಕ್+ ಸಂಘಟನೆಯು ಸಂಘರ್ಷ ಮುಂದುವರಿಸಿದರೆ, ಒಪೆಕ್‌ಯೇತರ ಹಾಗೂ ಅಮೆರಿಕದ ತೈಲ ಮಾರುಕಟ್ಟೆಗೆ ಲಾಭವಾಗಲಿದೆ ಎಂಬ ಅಭಿಪ್ರಾಯವೂ ಇದೆ.

ತೈಲೋತ್ಪಾದನೆ ಹೆಚ್ಚಿಸುವ ಅಥವಾ ನಿಯಂತ್ರಿಸುವ ವಿಚಾರವು ಜಾಗತಿಕ ತೈಲ ಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಬೇಡಿಕೆ ಸತತವಾಗಿ ಏರಿಕೆಯಾಗುತ್ತಿದ್ದು, ಅದಕ್ಕೆ ತಕ್ಕಂತೆ ತೈಲ ಪೂರೈಕೆಯಾಗದಿದ್ದರೆ ತೈಲೋತ್ಪನ್ನಗಳ ಬೆಲೆ ಏರಿಕೆಯಾಗಲಿದೆ. ಭಾರತದ ಹಲವು ರಾಜ್ಯಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ ಲೀಟರ್‌ಗೆ ₹100 ಗಡಿ ದಾಟಿದೆ. ಒಪೆಕ್ ದೇಶಗಳ ಈ ಸಂಘರ್ಷ ಇನ್ನಷ್ಟು ದಿನ ಮುಂದುವರಿದರೆ, ತೈಲೋತ್ಪನ್ನಗಳ ಬೆಲೆ ಗರಿಷ್ಠ ಏರಿಕೆ ಕಾಣಲಿದೆ ಎಂಬುದು ತಜ್ಞರ ಅಭಿಪ್ರಾಯ.

ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳ ಈ ಸಂಘರ್ಷವು ತೈಲೋತ್ಪನ್ನ ದೇಶಗಳ ಮೈತ್ರಿಯ (ಒಪೆಕ್ ದೇಶಗಳ ಒಕ್ಕೂಟ) ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಪೆಕ್‌ನಲ್ಲಿ ಯುಎಇ ಮುಂದುವರಿಯುತ್ತದೆಯೇ ಎಂಬ ಕುತೂಹಲವಿದೆ. ಮೈತ್ರಿಕೂಟದಲ್ಲಿ ಯುಎಇ ಉಳಿಸಿಕೊಳ್ಳಲು ಹಿಂಬಾಗಿಲ ಚರ್ಚೆಗಳು ನಡೆಯುತ್ತಿವೆ.

ಸೌದಿ ಅರೇಬಿಯಾವು ಮತ್ತೊಂದು ವಿಮಾನಯಾನ ಸಂಸ್ಥೆ ಪ್ರಾರಂಭಿಸುವ ಯೋಜನೆ ಹಾಕಿಕೊಂಡಿದೆ. ಇದರಿಂದ ದೇಶದ ವಾಯು ಸರಕು ಸಾಮರ್ಥ್ಯ ದ್ವಿಗುಣವಾಗುತ್ತದೆ. ಈ ಮೂಲಕ ಲಾಜಿಸ್ಟಿಕ್ಸ್ ಹಬ್ ಆಗಿ ರಿಯಾದ್ ಹೊರಹೊಮ್ಮಲಿದೆ. ಈ ಬೆಳವಣಿಗೆಯಿಂದ ಯುಎಇ ದೇಶದ ಎರಡು ಪ್ರಮುಖ ವಿಮಾನ ಸಂಸ್ಥೆಗಳಾದ ಇತಿಹಾದ್ ಮತ್ತು ಎಮಿರೇಟ್ಸ್‌ಗೆ ಸಹಜವಾಗಿಯೇ ಸ್ಪರ್ಧೆ ಎದುರಾಗಲಿದೆ. ಸಂಘರ್ಷದ ಹಿಂದೆ ಈ ವಿಚಾರವೂ ಇದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.