ಒಂದು ವರ್ಷದ ನಂತರವೂ ಇಸ್ರೇಲ್–ಪ್ಯಾಲೆಸ್ಟೀನ್‌ನ ಹಮಾಸ್ ಬಂಡುಕೋರರ ಸಂಘರ್ಷ ನಿಲ್ಲುವ ಸಾಧ್ಯತೆ ಕಾಣುತ್ತಿಲ್ಲ. ಯುದ್ಧ ಹಲವು ತಿರುವು ಪಡೆಯುತ್ತಿದ್ದು, ಮಧ್ಯಪ್ರಾಚ್ಯಕ್ಕೂ ಹರಡಿದೆ. ತನ್ನ ಬೆಂಬಲಿಗ ದೇಶಗಳಾದ ಅಮೆರಿಕ, ಫ್ರಾನ್ಸ್ ಯುದ್ಧ ನಿಲ್ಲಿಸಲು ಒತ್ತಾಯ ಮಾಡುತ್ತಿದ್ದರೂ ಇಸ್ರೇಲ್ ಕಿವಿಗೊಡುತ್ತಿಲ್ಲ. ಮಧ್ಯಪ್ರಾಚ್ಯದ ಯಾವ ಭಾಗವೂ ತನಗೆ ನಿಲುಕದ್ದೇನಲ್ಲ ಎನ್ನುತ್ತಿದೆ. ಇನ್ನೊಂದೆಡೆ, ಫೀನಿಕ್ಸ್‌ನಂತೆ ಬೂದಿಯಿಂದ ಎದ್ದುಬರುವುದಾಗಿ ಹಮಾಸ್ ಘೋಷಿಸಿದೆ. ಇವರ ನಡುವೆ ಗಾಜಾ ಪಟ್ಟಿಯ ಜನರ ಬದುಕು ಮತ್ತಷ್ಟು ನರಕವಾಗಿದೆ
ಇಸ್ರೇಲ್–ಪ್ಯಾಲೆಸ್ಟೀನ್‌ನ ಹಮಾಸ್ ಬಂಡುಕೋರರ ಸಂಘರ್ಷ ಆರಂಭವಾಗಿ ಒಂದು ವರ್ಷ ಕಳೆದಿದೆ. ಯುದ್ಧ ನಿಲ್ಲುವ ಸಾಧ್ಯತೆ ಮಸುಕಾಗುತ್ತಾ ಸಾಗುತ್ತಿದ್ದು, ಇನ್ನಷ್ಟು ದೇಶಗಳು ಸಂಘರ್ಷದ ಭಾಗವಾಗುವ ಮೂಲಕ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಬಹುದು ಎನ್ನಲಾಗುತ್ತಿದೆ. ಅಮೆರಿಕ, ಯೂರೋಪ್‌ನ ಕೆಲವು ದೇಶಗಳು ಇಸ್ರೇಲ್ ಪರ ನಿಂತಿದ್ದರೆ, ಇರಾನ್ ಸೇರಿದಂತೆ ಹಲವು ದೇಶಗಳು ಪ್ಯಾಲೆಸ್ಟೀನ್ ಬೆಂಬಲಕ್ಕೆ ನಿಂತು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇಸ್ರೇಲ್ ವಿರುದ್ಧ ಯುದ್ಧ ಸಾರಿವೆ. ಇದು ಮಧ್ಯ ಪ್ರಾಚ್ಯದಲ್ಲಿ ಬಿಕ್ಕಟ್ಟಿಗೆ ಕಾರಣವಾಗಿದೆ.
2023ರ ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ನಡೆಸಿದ ದಾಳಿಯಿಂದ ಸಂಘರ್ಷ ಆರಂಭವಾಗಿತ್ತು. ಹಮಾಸ್ ದಾಳಿಯ ಮೊದಲ ದಿನವೇ 1,200 ಮಂದಿ ಇಸ್ರೇಲಿಯನ್ನರು ಸಾವಿಗೀಡಾಗಿ ದ್ದರು. ಅದರ ನಂತರ ಇಸ್ರೇಲ್‌ನ 350 ಸೈನಿಕರು ಗಾಜಾದಲ್ಲಿ ಸತ್ತಿದ್ದಾರೆ. 2 ಲಕ್ಷ ಇಸ್ರೇಲಿಗರನ್ನು ಗಡಿಭಾಗದಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಗಾಜಾದಲ್ಲಿ ಪರಿಸ್ಥಿತಿ ಇನ್ನೂ ಘೋರವಾಗಿದೆ. ಹಮಾಸ್ ದಾಳಿಗೆ ಪ್ರತೀಕಾರವಾಗಿ ಮತ್ತು ಹಮಾಸ್ ಒತ್ತೆಯಿರಿಸಿ ಕೊಂಡಿದ್ದ 251 ಇಸ್ರೇಲಿಗರ ಬಿಡುಗಡೆಗಾಗಿ ಇಸ್ರೇಲ್, ಗಾಜಾ ಪಟ್ಟಿ ಮೇಲೆ ನಡೆಸಿದ ತೀವ್ರ ದಾಳಿಗಳಿಂದ ಅಲ್ಲಿನ ಬದುಕು ಅಲ್ಲೋಲಕಲ್ಲೋಲವಾಗಿದೆ. ಸುಮಾರು 42 ಸಾವಿರ ಪ್ಯಾಲೆಸ್ಟೀನಿಯರು ಸತ್ತಿದ್ದರೆ, ಅದರ ಎರಡರಷ್ಟು ಮಂದಿ ಗಾಯಗೊಂಡಿದ್ದಾರೆ. ಇದರ ನಡುವೆ ಕದನವು ಜಗತ್ತಿನ ಹಲವು ದೇಶಗಳಿಗೂ ಹರಡಿದೆ. ಲೆಬನಾನಿನಲ್ಲಿ ಪೇಜರ್, ವಾಕಿಟಾಕಿ ಸ್ಫೋಟಗಳು ಹಿಜ್ಬುಲ್ಲಾ ಬಂಡುಕೋರರ ವಿರುದ್ಧ ಇಸ್ರೇಲ್ ಸಮರ ಸಾರಿರುವುದನ್ನು ಬಹಿರಂಗಪಡಿಸಿವೆ. ಹಮಾಸ್ ನಂತರ ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆಯನ್ನು ಗುರಿಯಾಗಿಸಿ ಕೊಂಡಿರುವ ಇಸ್ರೇಲ್, ಅದರ ಮುಖ್ಯಸ್ಥ ಹಸನ್ ನಸ್ರುಲ್ಲಾನನ್ನು ಹತ್ಯೆ ಮಾಡಿದೆ. ಸಂಘಟನೆಯನ್ನು ಗುರಿಯಾಗಿಸಿಕೊಂಡು ತನ್ನ ದಾಳಿ ಮುಂದುವರಿಸಿದೆ.
ಇಸ್ರೇಲ್ ಹಲವು ದಿಕ್ಕಿನಲ್ಲಿ ಸಂಘರ್ಷ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇರಾನ್, ಗಾಜಾದಲ್ಲಿ ಹಮಾಸ್, ಯೆಮನ್‌ನಲ್ಲಿ ಹೌಥಿಗಳು, ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಬಂಡುಕೋರರು, ಸಿರಿಯಾ ಮತ್ತು ಇರಾಕ್‌ನಲ್ಲಿ ಶಿಯಾಗಳು ಇಸ್ರೇಲ್ ವಿರುದ್ಧದ ಕದನದಲ್ಲಿ ಪ್ಯಾಲೆಸ್ಟೀನ್ ಪರ ನಿಂತಿದ್ದು, ಸಂಘರ್ಷವು ಮಧ್ಯಪ್ರಾಚ್ಯಕ್ಕೆ ವ್ಯಾಪಿಸಿದೆ. ‘ಮಧ್ಯಪ್ರಾಚ್ಯದಲ್ಲಿ ನಾವು ತಲುಪಲಾಗದ ಜಾಗ ಎಂಬುದೇ ಇಲ್ಲ’ ಎನ್ನುವ ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಹೇಳಿಕೆಯು ಯುದ್ಧ ಮತ್ತಷ್ಟು ದೇಶ ಗಳಿಗೆ ವಿಸ್ತರಿಸ ಬಹುದು ಎಂಬುದರ ಸೂಚನೆ.
ಗಾಜಾ ಪಟ್ಟಿಯ ಪರಿಸ್ಥಿತಿಯನ್ನು ಸುಧಾರಿಸಲು ಶ್ರಮಿಸುತ್ತಿರುವ ವಿಶ್ವಸಂಸ್ಥೆ, ಯುದ್ಧವನ್ನು ನಿಲ್ಲಿಸಲು ಹಲವು ರೀತಿಯಲ್ಲಿ ಪ್ರಯತ್ನ ನಡೆಸುತ್ತಲೇ ಇದೆ. ಆದರೆ, ಯಾರ ಯಾವ ಮಾತಿಗೂ ಕಿವಿಗೊಡದ ಇಸ್ರೇಲ್, ಕನದ ವಿರಾಮಕ್ಕೆ ಸಮ್ಮತಿಸದೇ ದಾಳಿಗಳನ್ನು ಮುಂದುವರಿಸುತ್ತಿದೆ.
ಅಮೆರಿಕ ಕದನ ವಿರಾಮಕ್ಕೆ ಪ್ರಯತ್ನ ನಡೆಸಿದರೂ ಅದು ಫಲಪ್ರದವಾಗಲಿಲ್ಲ. ತನ್ನ ಪ್ರಯತ್ನಗಳ ಹೊರತಾಗಿಯೂ ಅಮೆರಿಕ, ಇಸ್ರೇಲ್‌ಗೆ ಸೇನಾ ಸಂಪನ್ಮೂಲ ಸೇರಿದಂತೆ ಹಲವು ವಿಧಗಳಲ್ಲಿ ನೆರವು ನೀಡಿದೆ. ಬ್ರಿಟನ್ ಕೂಡ ನೇರವಾಗಿಯೇ ಇಸ್ರೇಲ್ ಅನ್ನು ಬೆಂಬಲಿಸಿದೆ. ಆದರೆ, ಈಗ ಈ ಎರಡೂ ದೇಶಗಳು ನಿಲುವು ಬದಲಿಸಿದ್ದು, ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸುತ್ತಿವೆ. ಇಸ್ರೇಲ್‌ನ ಹಳೆಯ ಮಿತ್ರನಾದ ಫ್ರಾನ್ಸ್ ಕೂಡ ಈಗ ಇಸ್ರೇಲ್ ನಡೆಯನ್ನು ಟೀಕಿಸುತ್ತಿದೆ.
ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆ ಸ್ಥಗಿತಗೊಳಿಸುವಂತೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಕರೆ ನೀಡಿದ್ದರು. ಜತೆಗೆ, ಲೆಬನಾನ್ ಮತ್ತು ಗಾಜಾ ಮೇಲಿನ ದಾಳಿಯನ್ನು ನಿಲ್ಲಿಸಬೇಕು ಎಂತಲೂ ಬೆಂಜಮಿನ್ ನೆತನ್ಯಾಹು ಅವರನ್ನು ಒತ್ತಾಯಿಸಿದ್ದರು. ಆದರೆ, ನೆತನ್ಯಾಹು ಯುದ್ಧವನ್ನು ಮತ್ತಷ್ಟು ವಿಸ್ತರಿಸುವ ಮಾತುಗಳನ್ನು ಆಡುತ್ತಿದ್ದಾರೆ. ಗಾಜಾ ಮಾದರಿಯಲ್ಲಿ ಲೆಬನಾನ್ ಮೇಲೂ ದಾಳಿ ನಡೆಸುವ ಸೂಚನೆ ನೀಡುತ್ತಿದ್ದಾರೆ.
ಯಾವಾಗಲೂ ಹಮಾಸ್, ಹಿಜ್ಬುಲ್ಲಾ ಬಂಡುಕೋರರಿಗೆ ಬೆಂಬಲ ನೀಡುತ್ತಾ ಬಂದಿದ್ದ ಇರಾನ್, ನಸ್ರುಲ್ಲಾ ಹತ್ಯೆ ಬಳಿಕ ಇಸ್ರೇಲ್ ವಿರುದ್ಧ ನೇರ ಸಂಘರ್ಷಕ್ಕೆ ಇಳಿದಿದೆ. ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದರಿಂದ ಮಧ್ಯಪ್ರಾಚ್ಯದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ತನ್ನ ದೇಶದ ಪರಮಾಣು ಮತ್ತು ಇಂಧನ ನೆಲೆಗಳ ಮೇಲೆ ಇಸ್ರೇಲ್ ದಾಳಿ ಮಾಡಿದರೆ, ಪರಿಣಾಮ ತೀವ್ರವಾಗಿರುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಇರಾನ್ ಜಗತ್ತಿನ 10 ಅಗ್ರಶ್ರೇಣಿಯ ಕಚ್ಛಾ ತೈಲ ರಫ್ತುದಾರ ದೇಶಗಳಲ್ಲಿ ಒಂದಾಗಿದ್ದು, ಅದರ ಇಂಧನ ನೆಲೆಗಳ ಮೇಲೆ ದಾಳಿ ನಡೆಸದಂತೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಕೂಡ ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ಏನಾದರೂ ಇರಾನ್ ಮೇಲೆ ದಾಳಿ ನಡೆಸಿದರೆ, ಅದರ ಪರಿಣಾಮ ಜಗತ್ತಿನ ಹಲವು ದೇಶಗಳ ಮೇಲಾಗಲಿದೆ. ಆರ್ಥಿಕ ಬಿಕ್ಕಟ್ಟಿನಿಂದ ಈಗತಾನೇ ಚೇತರಿಸಿಕೊಳ್ಳುತ್ತಿರುವ ದೇಶಗಳಿಗೆ ಇದು ಭಾರಿ ಹೊಡೆತ ನೀಡಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಇನ್ನೊಂದು ತುದಿಯಲ್ಲಿ, ಯುದ್ಧ ಆರಂಭವಾಗಿ ವರ್ಷ ಪೂರೈಸಿದ ಸಂದರ್ಭದಲ್ಲಿ ಮಾತನಾಡಿರುವ ಹಮಾಸ್‌ನ ಮುಖ್ಯಸ್ಥ ಖಲೀದ್ ಮೆಶಾಲ್, ತಮ್ಮ ಸಂಘಟನೆಯು ಫೀನಿಕ್ಸ್‌ನಂತೆ ಬೂದಿಯಿಂದ ಎದ್ದು ಬರುವುದಾಗಿ ಘೋಷಿಸಿದ್ದಾರೆ. ‘ನಾವು ಅಪಾರ ಶಸ್ತಾಸ್ತ್ರ ಕಳೆದುಕೊಂಡಿದ್ದೇವೆ. ಕಳೆದ ಒಂದು ವರ್ಷದಲ್ಲಿ ನಮಗೆ ಹಿನ್ನಡೆಯಾಗಿದೆ, ನಿಜ. ಆದರೆ, ನಾವು ಹೋರಾಟ ಮುಂದುವರಿಸಲಿದ್ದು, ಗಾಜಾದಲ್ಲಿ ಗೆಲುವು ನಮ್ಮದೇ’ ಎಂದಿದ್ದಾರೆ. ಗಾಜಾದಲ್ಲಿ ಗುರಿ ಸಾಧನೆ ವಿಫಲವಾದ ನಂತರ ಇಸ್ರೇಲ್ ದೇಶವು ಲೆಬನಾನ್, ಈಜಿಪ್ಟ್ ಮತ್ತು ಜೋರ್ಡನ್ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದೂ ಅವರು ದೂರಿದ್ದಾರೆ.
ನೆತನ್ಯಾಹು ಮತ್ತು ಖಲೀದ್ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಯುದ್ಧ ನಿಲ್ಲುವ ಸಾಧ್ಯತೆಗಳು ಕ್ಷೀಣ ಎನ್ನಿಸುತ್ತದೆ.
ಗಾಜಾಪಟ್ಟಿಯ ಜನರಲ್ಲಿ ಶೇ 90ರಷ್ಟು ಮಂದಿ ಸ್ಥಳಾಂತರಗೊಂಡಿದ್ದು, ತುತ್ತು ಅನ್ನ, ಗುಟುಕು ನೀರಿಗಾಗಿ ಹಪಹಪಿಸು ತ್ತಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮುಗಿದ ಮೇಲೆ ಕದನ ವಿರಾಮದ ಮಾತುಕತೆಗಳು ಮತ್ತೆ ಆರಂಭವಾಗುವ ಸಾಧ್ಯತೆ ಇದೆ. ಅಷ್ಟರಲ್ಲಿ ಅಲ್ಲಿನ ಬದುಕು ಮತ್ತಷ್ಟು ನರಕವಾಗಲಿದೆ. ಅಲ್ಲಿನ ಬದುಕು ಮತ್ತೆ ಎಂದಾದರೂ ಯಥಾಸ್ಥಿತಿಗೆ ಮರಳುವುದೇ ಎನ್ನುವ ಬಗ್ಗೆ ಅನುಮಾನಗಳಿವೆ.
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟು ಇನ್ನಷ್ಟು ತೀವ್ರಗೊಂಡರೆ, ಅದು ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಕಾಡುತ್ತಿದೆ. ಇಸ್ರೇಲ್–ಹಮಾಸ್ ಬಂಡುಕೋರರ ನಡುವೆ ವರ್ಷದಿಂದ ಮತ್ತು ಕೆಲವು ವಾರಗಳಿಂದ ಇಸ್ರೇಲ್–ಹಿಜ್ಬುಲ್ಲಾ ಬಂಡುಕೋರರ ನಡುವೆ ಸಂಘರ್ಷ ನಡೆಯುತ್ತಿದ್ದರೂ ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬಹುತೇಕ ಸ್ಥಿರವಾಗಿಯೇ ಇತ್ತು. ಬಂಡುಕೋರರಿಗೆ ಬೆಂಬಲ ನೀಡುತ್ತಾ ಬಂದಿದ್ದ ಇರಾನ್ ನೇರವಾಗಿ ಇಸ್ರೇಲ್ ಜೊತೆ ಸಂಘರ್ಷಕ್ಕೆ ಇಳಿದ ನಂತರ ಕಚ್ಚಾ ತೈಲದ ಬೆಲೆ ಕೊಂಚ ಏರಿಕೆ ಕಂಡರೂ, ಮತ್ತೆ ಇಳಿದಿದೆ (ಸದ್ಯ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 77.85 ಡಾಲರ್ ಇದೆ).
ಆದರೆ, ಸಂಘರ್ಷ ತೀವ್ರಗೊಳ್ಳುತ್ತಿರುವುದು ಅಂತರ ರಾಷ್ಟ್ರೀಯ ತೈಲ ಮಾರುಕಟ್ಟೆಯ ಸ್ವರೂಪವನ್ನೇ ಬದಲಾಯಿ ಸಬಹುದು ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಇರಾನ್ ಸೇರಿದಂತೆ ಮಧ್ಯಪ್ರಾಚ್ಯದ ರಾಷ್ಟ್ರಗಳು ಕಚ್ಚಾ ತೈಲ ಉತ್ಪಾದಕ ರಾಷ್ಟ್ರಗಳಾಗಿದ್ದು, ಅಲ್ಲಿ ನಡೆಯುವ ವಿದ್ಯಮಾನಗಳು ಜಾಗತಿಕ ತೈಲ ಪೂರೈಕೆಯ ಮೇಲೆ ಮತ್ತು ಅದರ ಬೆಲೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿವೆ.
ಆಧಾರ: ಬಿಬಿಸಿ, ಎಎಫ್‌ಪಿ, ರಾಯಿಟರ್ಸ್, ಸೆಂಟರ್ ಫಾರ್ ಸ್ಟ್ರ್ಯಾಟೆಜಿಕ್ ಆ್ಯಂಡ್ ಇಂಟರ್ ನ್ಯಾಷನಲ್ ಸ್ಟಡೀಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.