ADVERTISEMENT

ಆಳ–ಅಗಲ: ಮಹಾ ಗಡಿಪಾರು! 40 ಲಕ್ಷ ನಿರಾಶ್ರಿತರ ಹೊರದಬ್ಬುತ್ತಿರುವ ಪಾಕಿಸ್ತಾನ

ಅಫ್ಗಾನಿಸ್ತಾನಕ್ಕೂ ವಾಪಸಾಗಲು ಇಷ್ಟವಿಲ್ಲದೆ, ಇತ್ತ ಪಾಕಿಸ್ತಾನ ಸರ್ಕಾರದ ಹಿಂಸೆಯನ್ನೂ ತಾಳಲಾರದ ಹೀನ ಸ್ಥಿತಿಯಲ್ಲಿ ನಿರಾಶ್ರಿತರು ಅಫ್ಗಾನಿಸ್ತಾನಕ್ಕೆ ತೆರಳುತ್ತಿದ್ದಾರೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2023, 0:05 IST
Last Updated 16 ನವೆಂಬರ್ 2023, 0:05 IST
<div class="paragraphs"><p>ಅಫ್ಗಾನಿಸ್ತಾನಕ್ಕೆ ಹೋಗಲು ಸಜ್ಜಾಗಿರುವ ನಿರಾಶ್ರಿತರು</p></div>

ಅಫ್ಗಾನಿಸ್ತಾನಕ್ಕೆ ಹೋಗಲು ಸಜ್ಜಾಗಿರುವ ನಿರಾಶ್ರಿತರು

   

ಅತ್ತ ದರಿ;ಇತ್ತ ಪುಲಿ– ಇದು ಅಫ್ಗಾನ್‌ ನಿರಾಶ್ರಿತರ ಸ್ಥಿತಿ. ಅತ್ತ ಅಫ್ಗಾನಿಸ್ತಾನಕ್ಕೂ ವಾಪಸಾಗಲು ಇಷ್ಟವಿಲ್ಲದೆ, ಇತ್ತ ಪಾಕಿಸ್ತಾನ ಸರ್ಕಾರದ ಹಿಂಸೆಯನ್ನೂ ತಾಳಲಾರದ ಹೀನ ಸ್ಥಿತಿಯಲ್ಲಿ ನಿರಾಶ್ರಿತರು ಅಫ್ಗಾನಿಸ್ತಾನಕ್ಕೆ ತೆರಳುತ್ತಿದ್ದಾರೆ. ‘ಅಭಿವೃದ್ಧಿ ಹಾಗೂ ಭದ್ರತೆ’ಯ ಕಾರಣವೊಡ್ಡಿ ಪಾಕಿಸ್ತಾನವು ನಿರಾಶ್ರಿತರನ್ನು ಗಡಿಪಾರು ಮಾಡುತ್ತಿದೆ. ಹೀಗೆ ಅಫ್ಗಾನ್‌ ನಿರಾಶ್ರಿತರನ್ನು ವಾಪಸು ಅಟ್ಟುತ್ತಿರುವುದು ಪಾಕಿಸ್ತಾನ–ಅಫ್ಗಾನಿಸ್ತಾನ ಎರಡೂ ದೇಶಗಳ ಹಳಸಿದ ಸಂಬಂಧಕ್ಕೆ ವೈರತ್ವವನ್ನು ತಂದುಕೊಡವ ಲಕ್ಷಣಗಳಿವೆ

––––––––––

ADVERTISEMENT

1979ರಲ್ಲಿ ಸೋವಿಯತ್‌ ರಷ್ಯಾವು ಅಫ್ಗಾನಿಸ್ತಾನದ ಮೇಲೆ ಆಕ್ರಮಣ ಮಾಡಿತು. ಅಲ್ಲಿಂದ ಆರಂಭಗೊಂಡು 2021ರಲ್ಲಿ ತಾಲಿಬಾನ್‌ ಅಧಿಕಾರ ಹಿಡಿಯುವವರೆಗೆ ಅಫ್ಗಾನಿಸ್ತಾನದಿಂದ ಜನರು ಪಾಕಿಸ್ತಾನಕ್ಕೇ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದಿದ್ದಾರೆ. ಹೀಗೆ ಬಂದ ಸುಮಾರು 40 ಲಕ್ಷ ನಿರಾಶ್ರಿತರಿಗೆ ಪಾಕಿಸ್ತಾನದ ನೆಲೆ ನೀಡಿತ್ತು. ಭೂಕಂಪ, ಬರ, ಪದೇ ಪದೇ ನಡೆಯುವ ಯುದ್ಧಗಳು, ಹಿಂಸೆಗಳಿಂದ ರೋಸಿದ ಜನರು ಇರಾನ್‌, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಿಗೆ ವಲಸೆ ಹೋಗಿದ್ದಾರೆ. ಅಫ್ಗಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡ ಬಳಿಕವಂತೂ ಈ ಸಂಖ್ಯೆ ಅತ್ಯಧಿಕವಾಗಿದೆ. ವಿಶ್ವಸಂಸ್ಥೆ ಪ್ರಕಾರ, 2023ರಲ್ಲಿ 82 ಲಕ್ಷ ಜನರು ಸುಮಾರು 103 ದೇಶಗಳಿಗೆ ವಲಸೆ ಹೋಗಿದ್ದಾರೆ. ಊಟ, ಉದ್ಯೋಗ, ನೆಮ್ಮದಿಯ ಬದುಕು ಅರಿಸಿ ಅಫ್ಗಾನಿಸ್ತಾನದಿಂದ ಬಂದಿದ್ದ ಜನರನ್ನು ಸ್ವಾಗತಿಸಿದ್ದ ಪಾಕಿಸ್ತಾನವು ಈಗ ಏಕಾಏಕಿ ಅವರನ್ನು ಮರಳಿ ಅಫ್ಗಾನಿಸ್ತಾನಕ್ಕೆ ದೂಡುತ್ತಿದೆ.

‘ಕಾನೂನುಬಾಹಿರವಾಗಿ ಪಾಕಿಸ್ತಾನದಲ್ಲಿ ನೆಲೆಸಿರುವ ಎಲ್ಲ ನಿರಾಶ್ರಿತರು ಅಕ್ಟೋಬರ್‌ 31ರ ಒಳಗಾಗಿ ದೇಶವನ್ನು ಬಿಟ್ಟು ತಮ್ಮ ದೇಶಗಳಿಗೆ ಮರಳಬೇಕು. ಇಲ್ಲವೇ ಗಡಿಪಾರು ಮಾಡಲಾಗುವುದು’– ಪಾಕಿಸ್ತಾನ ಸರ್ಕಾರವು ಇದ್ದಕ್ಕಿದ್ದಂತೆ ಅಕ್ಟೋಬರ್‌ ಮೊದಲ ವಾರದಲ್ಲಿ ಹೊರಡಿಸಿದ ಆದೇಶ ಇದು. ಇವರಲ್ಲಿ ಅಫ್ಗಾನಿಸ್ತಾನದ ನಿರಾಶ್ರಿತರ ಸಂಖ್ಯೆಯೇ 17 ಲಕ್ಷ ದಾಟುತ್ತದೆ. 17 ಲಕ್ಷದ ಜತೆಗೆ ಉಳಿದ 23 ಲಕ್ಷ ಜನರನ್ನೂ ಹೊರಗಟ್ಟಲು ಪಾಕಿಸ್ತಾನ ಸರ್ಕಾರ ಸಿದ್ಧತೆ ನಡೆಸಿದೆ. ‘ಕಳೆದ 40 ವರ್ಷಗಳಿಂದ ಕಷ್ಟದಲ್ಲಿ ಬದುಕು ಕಟ್ಟಿಕೊಂಡಿದ್ದ ನಮ್ಮನ್ನು ಒಂದು ತಿಂಗಳಲ್ಲಿ ದೇಶದಿಂದ ಹೊರದಬ್ಬುವುದು ನ್ಯಾಯವೇ’ ಎಂದು ಕೇಳುತ್ತಾರೆ 73 ವರ್ಷ ಅಫ್ಗಾನ್‌ ನಿರಾಶ್ರಿತ ವೃದ್ಧ. ‘ಪಾಕಿಸ್ತಾನವೇ ನಮ್ಮ ಮನೆ. ಇದನ್ನು ಬಿಟ್ಟು ಹೇಗೆ ಹೊರಡುವುದು? ನಮಗೂ ಘನತೆ ಇದೆ. ಅವಮಾನಕರವಾಗಿ ಒಮ್ಮಿಂದೊಮ್ಮೆಲೇ ಈ ರೀತಿ ದೇಶದಿಂದ ಹೊರದಬ್ಬುವುದು ಸರಿಯಲ್ಲ’ ಎನ್ನವುದು ಅವರ ಸ್ಪಷ್ಟ ಅಭಿಪ್ರಾಯ.

ಕೇವಲ ಒಂದು ತಿಂಗಳ ಗಡುವು ನೀಡಿ, ನಿರಾಶ್ರಿತರಿಗೆ ಹಿಂಸೆ ನೀಡಿ, ಭಯಪಡಿಸಿ ಪಾಕಿಸ್ತಾನದಿಂದ ಓಡಿಸಲಾಗುತ್ತಿದೆ ಎನ್ನುತ್ತಾರೆ ಮಾನವಹಕ್ಕುಗಳ ಅಂತರರಾಷ್ಟ್ರೀಯ ಸಂಸ್ಥೆಗಳು. ಘನತೆಯ ಬದುಕು ಕಟ್ಟಿಕೊಳ್ಳುವುದು ನಿರಾಶ್ರಿತರ ಹಕ್ಕು ಎಂದು ‘1951 ನಿರಾಶ್ರಿತರ ಒಪ್ಪಂದ’ ಹೇಳುತ್ತದೆ. ಪಾಕಿಸ್ತಾನ ಈ ಒಪ್ಪಂದಕ್ಕೆ ಸಹಿಹಾಕಿಲ್ಲ. ಆದರೂ, ಅಫ್ಗಾನ್‌ ನಿರಾಶ್ರಿತರನ್ನು ಈವರೆಗೆ ಒಪ್ಪಂದದ ನಿಯಮಗಳಂತೆಯೇ ನಡೆಸಿಕೊಂಡಿತ್ತು. ಆದರೆ ಈಗ ನಿಲುವು ಬದಲಿಸಿದ ಪಾಕಿಸ್ತಾನ, ಅಫ್ಗಾನ್‌ ನಿರಾಶ್ರಿತರನ್ನು ಹೊರದೂಡುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿದ್ದ ಅಫ್ಗಾನಿಸ್ತಾನದವರನ್ನು ಹಲವು ತಿಂಗಳ ಹಿಂದೆಯೇ ಕೆಲಸದಿಂದ ತೆಗೆಯಲಾಗಿದೆ. ನವೆಂಬರ್‌ 1ರಿಂದಲೇ ನಿರಾಶ್ರಿತರ ಮನೆಗಳನ್ನು ಬುಲ್ಡೋಜರ್‌ಗಳಿಂದ ನೆಲಸಮ ಮಾಡಲಾಗಿದೆ. ಕಾನೂನುಬಾಹಿರವಾಗಿ ದೇಶದಲ್ಲಿ ನೆಲೆಸಿರುವ ನಿರಾಶ್ರಿತರನ್ನು ಮಾತ್ರವೇ ಹೊರದಬ್ಬಲಾಗುತ್ತಿದೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ. ಆದರೆ, ನಿರಾಶ್ರಿತರ ಗುರುತಿನ ಚೀಟಿ ಇರುವ ಅಫ್ಗಾನಿಸ್ತಾನದ ಜನರನ್ನೂ ಪಾಕಿಸ್ತಾನವು ದೇಶದಿಂದ ಹೊರಗೆ ಕಳುಹಿಸುತ್ತಿದೆ.

ಪಾಕಿಸ್ತಾನ–ಅಫ್ಗಾನಿಸ್ತಾನ ಗಡಿಗಳಲ್ಲಿ ನಿರಾಶ್ರಿತರ ಸಾಲು ಕಿ.ಮೀ ಗಟ್ಟಲೆ ಬೆಳೆಯುತ್ತಿದೆ. ಅ. 31ರಿಂದ ಮಾಧ್ಯಮಕ್ಕೆ ಪಾಕಿಸ್ತಾನ–ಅಫ್ಗಾನಿಸ್ತಾನ ಗಡಿಯ ಪ್ರವೇಶವನ್ನು ಪಾಕಿಸ್ತಾನ ನಿಷೇಧಿಸಿದೆ. ಅಫ್ಗಾನಿಸ್ತಾನದ ಗಡಿ ಒಳಗೆ ಬಿಡುವುದಕ್ಕೆ ಮೊದಲು ಪಾಕಿಸ್ತಾನದ ಗಡಿಯಲ್ಲೂ ನೋಂದಣಿ ಕಾರ್ಯನಡೆಯುತ್ತಿದೆ. ಅತ್ತ ಅಫ್ಗಾನಿಸ್ತಾನ ಗಡಿಯಲ್ಲೂ ಇದೇ ಪ್ರಕ್ರಿಯೆ ನಡೆಯುತ್ತಿದೆ. ಒಂದು ದಿನದಲ್ಲಿ ಸಾವಿರಾರು ಮಂದಿಯನ್ನು ಗಡಿ ಪಾರು ಮಾಡುತ್ತಿದ್ದಾರೆ. ಅಫ್ಗಾನಿಸ್ತಾನ ಗಡಿಗಳಲ್ಲಿ ಶಿಬಿರಗಳನ್ನು ಮಾಡಿ, ಟೆಂಟ್‌ಗಳನ್ನು ಹಾಕಲಾಗಿದೆ. ಆದರೆ, ಇದು ನಿರಾಶ್ರಿತರ ಸಂಖ್ಯೆಗೆ ಹೋಲಿಸಿದರೆ ಬಹಳ ಕಡಿಮೆ. ಗಡಿ ದಾಟಬೇಕು ಎಂದಾದರೆ, ಸುಮಾರು ಆರು–ಏಳು ದಿನಗಳು ಕಾಯುವ ಸ್ಥಿತಿ ಎದುರಾಗಿದೆ.

ಸರ್ಕಾರಿ ಪ್ರಾಯೋಜಿತ ‘ದಾಳಿ’

ನಿರಾಶ್ರಿತರನ್ನು ಹೊರದಬ್ಬಲು ಪಾಕಿಸ್ತಾನವು ಹಲವು ತಿಂಗಳಿನಿಂದ ತಯಾರಿ ನಡೆಸಿತ್ತು. ಇದಕ್ಕಾಗಿ ದೇಶದಾದ್ಯಂತ ಬಂಧನ ಕೇಂದ್ರಗಳನ್ನು ತೆರೆದಿತ್ತು. ಮನೆ ಮನೆಗೆ ‘ದಾಳಿ’ ಇಡುವುದು, ಮನೆಮಂದಿಯನ್ನು ಬಂಧಿಸಿ, ಬಂಧನ ಕೇಂದ್ರಗಳಿಗೆ ಹಾಕುವುದು... ಮಹಿಳೆಯರನ್ನು ಪುಟ್ಟ ಮಕ್ಕಳನ್ನೂ ಬಂಧಿಸಲಾಗಿದೆ. ‘ದಾಳಿ’ಯ ವೇಳೆ ನಿರಾಶ್ರಿತರಿಗೆ ಹಿಂಸೆಯನ್ನೂ ನೀಡಲಾಗಿದೆ ಎನ್ನುವುದು ಮಾನವಹಕ್ಕು ಆಯೋಗದ ಆರೋಪ. ‘ಕೆಲವು ಕಡೆ ಇಂಥ ಘಟನೆ ನಡೆದಿರಬಹುದು. ಆದರೆ, ಮಹಿಳೆಯರನ್ನು ಮಕ್ಕಳನ್ನು ‘ಭಾರಿ ಎಚ್ಚರ’ದಿಂದ ನೋಡಿಕೊಳ್ಳುವಂತೆ ಆದೇಶಿಸಲಾಗಿದೆ’ ಎನ್ನುತ್ತದೆ ಪಾಕಿಸ್ತಾನ ಸರ್ಕಾರ.

ಮಹಿಳೆಯರು ಹಾಗೂ ಮಕ್ಕಳು ಮನೆಯಲ್ಲಿ ಇರುವಾಗ ಕುಟುಂಬಕ್ಕೆ ಸಂಬಂಧಿಸಿದವರು ಮನೆಗೆ ಬರುವುದನ್ನು ಅಫ್ಗಾನಿಸ್ತಾನದ ಜನರು ಇಷ್ಟಪಡುವುದಿಲ್ಲ. ಇದು ಅವರ ಸಂಪ್ರದಾಯಕ್ಕೆ, ಧರ್ಮಕ್ಕೆ ವಿರುದ್ಧವಾದುದು. ಆದ್ದರಿಂದ, ಈ ಮುಜುಗರದಿಂದ, ಬಂಧನದ ಭೀತಿಯಿಂದ ಪಾರಾಗಲು ನಿರಾಶ್ರಿತರು ತಾವಾಗಿಯೇ ದೇಶವನ್ನು ಬಿಡುತ್ತಿದ್ದಾರೆ. ಕೆಲವೊಮ್ಮೆ ಕುಟುಂಬದ ಎಲ್ಲರನ್ನೂ, ಕೆಲವೊಮ್ಮೆ ಕುಟುಂಬದ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನ ಕೇಂದ್ರದಿಂದ ಪಾಕಿಸ್ತಾನ–ಅಫ್ಗಾನಿಸ್ತಾನದ ಗಡಿಗೆ ತಂದು ಬಿಟ್ಟಿದ್ದಾರೆ. ಇವರುಗಳು ಕುಟುಂಬದಿಂದ ದೂರವಾಗಿದ್ದಾರೆ. ನೂರಾರು ಸಂಖ್ಯೆಯಲ್ಲಿ ಬಂಧನದಲ್ಲಿರುವ ನಿರಾಶ್ರಿತರನ್ನು ಇನ್ನೂವರೆಗೂ ಪಾಕಿಸ್ತಾನ ಬಿಡುಗಡೆ ಮಾಡಿಲ್ಲ.

‘ಸಸಿಗಳು ಮರಗಳಾಗಿವೆ’ ಪಾಕಿಸ್ತಾನಕ್ಕೆ ಓಡಿಬಂದಾಗ ನಾನಿನ್ನೂ ಚಿಕ್ಕ ಹುಡುಗ. ಆಗಲೇ ಇಟ್ಟಿಗೆಗೂಡಿನಲ್ಲಿ ಕೆಲಸಕ್ಕೆ ಸೇರಿದ್ದೆ. ಮದುವೆಯೂ ಆದೆ. ನಾನೂ ನನ್ನ ಹೆಂಡತಿ ಕೈಯಾರೆ ಮಾಡಿದ ಇಟ್ಟಿಗೆಗಳಲ್ಲೇ ಮನೆ ಕಟ್ಟಿಕೊಂಡಿದ್ದೆವು. ಆಗ ನಾನು ನೆಟ್ಟ ಎರಡು ಸಸಿಗಳು ಈಗ ಮರಗಳಾಗಿವೆ. ನನ್ನ ಮಕ್ಕಳು–ಮೊಮ್ಮಕ್ಕಳು ಇಲ್ಲಿಯೇ ಹುಟ್ಟಿವೆ. ಈಗ 40 ವರ್ಷಗಳಾದ ಮೇಲೆ ನೀವು ಇಲ್ಲಿನವರಲ್ಲ ಎಂದು ಓಡಿಸುತ್ತಿದ್ದಾರೆ
ಅಬ್ದುಲ್ಲಾ, ಪೆಷಾವರದಲ್ಲಿ ನೆಲೆಸಿದ್ದ ಅಫ್ಗಾನ್‌ ನಿರಾಶ್ರಿತ

ಪರದೇಶಿ ಬದುಕು, ಪಾಸ್ತೊ ಹಾಡು

‘ಪಾಕಿಸ್ತಾನ ಇಂಥದ್ದೊಂದು ದಿನಕ್ಕೆ ಕಾರಣವಾಗುತ್ತದೆ ಎಂದು ನಾವು ಭಾವಿಸಿಯೇ ಇರಲಿಲ್ಲ’ ಎನ್ನುತ್ತಾರೆ ಅಫ್ಗಾನಿಸ್ತಾನದ ಮಹಿಳೆಯೊಬ್ಬರು. ಅಫ್ಗಾನಿಸ್ತಾನ ಹಾಗೂ ಪಾಕಿಸ್ತಾನದ ಜನರ ನಡುವೆ ವಿವಾಹ ನಡೆದಿದೆ. ಇವರಿಗೆ ಮಕ್ಕಳೂ ಆಗಿದ್ದಾವೆ. ಈ ಮಕ್ಕಳು ಎಂದಿಗೂ ಅಫ್ಗಾನಿಸ್ತಾನ ನೋಡಿದವರಲ್ಲ. ಪಾಕಿಸ್ತಾನದ ಹೆಣ್ಣುಮಗಳು ತನ್ನ ಅಫ್ಗಾನಿಸ್ತಾನದ ಗಂಡನಿಂದ ದೂರವಾಗಿದ್ದಾರೆ. ಅಫ್ಗಾನಿಸ್ತಾನದ ಹೆಣ್ಣುಗಳದ್ದೂ ಇದೇ ಕತೆ. ಬಂಧನದಿಂದ ಪಾರಾಗಲು ಹಲವು ನಿರಾಶ್ರಿತರು ನೆಲಮಹಡಿಯಲ್ಲಿ ‘ಬಂದಿ’ಯಾಗಿದ್ದಾರೆ.

‘ನನಗೆ 11 ವರ್ಷ ಇರುವಾಗಿನಿಂದ ಪಾಸ್ತೊ ಹಾಡುಗಳನ್ನು ಹಾಡುತ್ತಿದ್ದೇನೆ. ಅಫ್ಗಾನಿಸ್ತಾನದಲ್ಲಿ ಹೆಣ್ಣುಮಕ್ಕಳು ಸಾರ್ವಜನಿಕವಾಗಿ ಹಾಡುವುದು ನಿಷೇಧ. ಅದಕ್ಕಾಗಿಯೇ 2021ರಲ್ಲಿ ಇಲ್ಲಿಗೆ ಬಂದಿದ್ದೇನೆ. ನನ್ನ ವೀಸಾ ಕೂಡ ಮುಗಿಯುತ್ತಿದೆ. ಕೆನಡಾದಲ್ಲೋ, ಫ್ರಾನ್ಸ್‌ನಲ್ಲೋ ಆಶ್ರಯ ಸಿಗಬಹುದು ಎಂದು ಅಂದುಕೊಂಡಿದ್ದೇನ್ನೆ’ ಎನ್ನುತ್ತಾರೆ 28 ವರ್ಷದ ವಫಾ ಎನ್ನುವ ಯುವತಿ.

ಇಸ್ಲಾಂನಿಂದ ಬೇರೆ ಧರ್ಮಗಳಿಗೆ ಮತಾಂತರ ಆಗುವುದು ತಾಲಿಬಾನ್‌ ಆಡಳಿತದಲ್ಲಿ ನಿಷಿದ್ದ. ಅಂತಹವರನ್ನು ಅಲ್ಲಿ ಗಲ್ಲಿಗೇರಿಸಲಾಗುತ್ತದೆ. ಇಸ್ಲಾಂನಿಂದ ಕ್ರೈಸ್ತ ಧರ್ಮಕ್ಕೆ ಸಾವಿರಾರು ಮಂದಿ ಈಗಾಗಲೇ ಮತಾಂತರವಾಗಿದ್ದಾರೆ. ಇವರೂ ಈಗ ಅಫ್ಗಾನಿಸ್ತಾನಕ್ಕೆ ಹೊರಟಿದ್ದಾರೆ. ಸುನ್ನಿ ಹಾಗೂ ಹಝಾರಾ ಸಮುದಾಯಗಳ ಮಧ್ಯೆ ಅಫ್ಗಾನಿಸ್ತಾನದಲ್ಲಿ ವೈರತ್ವವಿದೆ. ಹಝಾರಾ ಸಮುದಾಯವರನ್ನು ಅಲ್ಲಿ ಹುಡುಕಿ ಹುಡುಕಿ ಕೊಲ್ಲಲಾಗುತ್ತಿದೆ. ಈಗ ಈ ಸಮುದಾಯದವರೂ ಅಲ್ಲಿಗೆ ತೆರಳಬೇಕಾಗಿದೆ.

ಅಫ್ಗಾನಿಸ್ತಾನಕ್ಕೆ ತೆರಳಿ ಮಾಡುವುದಾದರೂ ಏನು ಎನ್ನುವುದು ಹಲವರ ಪ್ರಶ್ನೆ. ‘ನಮ್ಮದಾದ ಭೂಮಿ ಇಲ್ಲ, ಮನೆಯಿಲ್ಲ, ಮಾಡಲು ಕೆಲಸವಿಲ್ಲ. ಅಲ್ಲಿಗೆ ಹೋಗಿ ಏನು ಮಾಡುವುದು. ಭೂಕಂಪ, ಬರದಿಂದ ಅಲ್ಲಿ ಈಗಾಗಲೇ ಹಲವು ಸಂಕಷ್ಟಗಳಿವೆ. ನಮಗೆ ಎಲ್ಲಿಂದ ಉದ್ಯೋಗ ಸಿಗುತ್ತದೆ. ಆ ದೇಶದಲ್ಲಿ ಎಲ್ಲಿಗೆ ಅಂತ ಹೋಗುವುದು’ ಹಲವರ ಪ್ರಶ್ನೆ.

ಪಾಕಿಸ್ತಾನದ ಆರೋಪ: ‘ಟಿಟಿಪಿ ಉಗ್ರರು ಎರಡು ವರ್ಷದಲ್ಲಿ ಪಾಕಿಸ್ತಾನದ ವಿರುದ್ಧ ಆತ್ಮಾಹುತಿ ಬಾಂಬ್‌ ದಾಳಿ ಸೇರಿ ಹಲವು ದಾಳಿಗಳನ್ನು ನಡೆಸಿದ್ದಾರೆ.ಖೈಬರ್‌ ಪ್ರಾಂತದಲ್ಲೇ ಇಂತಹ ದಾಳಿಗಳು ಹೆಚ್ಚು ನಡೆದಿವೆ. ಇದರಲ್ಲಿ 2,267 ನಮ್ಮ ಪ್ರಜೆಗಳು ಸಾವನ್ನಪ್ಪಿದ್ದಾರೆ. ಆತ್ಮಾಹುತಿ ದಾಳಿ ನಡೆಸಿದವರಲ್ಲಿ 15 ಮಂದಿ ಅಫ್ಗಾನಿಸ್ತಾನದವರಾಗಿದ್ದಾರೆ. ತಾಲಿಬಾನ್‌ ಕುಮ್ಮಕ್ಕಿನಿಂದಲೇ ಟಿಟಿಪಿ ದಾಳಿ ನಡೆಸುತ್ತಿದೆ’ ಎನ್ನುತ್ತಾರೆ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್‌ ಉಲ್‌ ಹಕ್‌ ಕಕ್ಕರ್‌. ಆದರೆ ಇದನ್ನು ತಾಲಿಬಾನ್‌ ನಿರಾಕರಿಸಿದೆ.

ಆಧಾರ: ಎಎಫ್‌ಪಿ, ರಾಯಿಟರ್ಸ್‌, ಎಪಿ, ಬಿಬಿಸಿ, ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.