ADVERTISEMENT

ಆಳ-ಅಗಲ | ಡಬ್ಲ್ಯುಎಚ್‌ಒ ಕಳವಳ - ಆಹಾರದಲ್ಲಿ ಕೀಟನಾಶಕ

ಪ್ರಜಾವಾಣಿ ವಿಶೇಷ
Published 19 ಫೆಬ್ರುವರಿ 2023, 22:30 IST
Last Updated 19 ಫೆಬ್ರುವರಿ 2023, 22:30 IST
   

ಜಗತ್ತಿನಾದ್ಯಂತ ಸಾವಿರಕ್ಕೂ ಹೆಚ್ಚು ರೀತಿಯ ಕೀಟನಾಶಕ ಹಾಗೂ ಕಳೆನಾಶಕಗಳನ್ನು ಬಳಕೆ ಮಾಡಲಾಗುತ್ತಿದೆ. ಬೆಳೆಗಳನ್ನು ಕೀಟಗಳಿಂದ ರಕ್ಷಣೆ ಮಾಡಲು ಹಾಗೂ ಕಳೆಗಿಡಗಳನ್ನು ನಾಶ ಮಾಡುವ ಉದ್ದೇಶಕ್ಕೆ ಬಳಕೆಯಾಗುವ ಇವು ಮನುಷ್ಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ.

ಹಳೆಯ ಹಾಗೂ ಅಗ್ಗದ ದರದಲ್ಲಿ ಸಿಗುವ ಕೀಟನಾಶಕದ ಅಂಶಗಳು ಭೂಮಿ ಹಾಗೂ ನೀರಿನಲ್ಲಿ ವರ್ಷಗಳ ಕಾಲ ಉಳಿದುಬಿಡುತ್ತವೆ. ದೀರ್ಘಕಾಲದವರೆಗೆ ಉಳಿಯುವ ಡಿಡಿಟಿ, ಲಿಂಡೇನ್‌ನಂತಹ ರಾಸಾಯನಿಕಗಳನ್ನು 2001ರ ಸ್ಟಾಕ್‌ಹೋಮ್ ಅಧಿವೇಶನದಲ್ಲಿ ನಿಷೇಧಿಸಲಾಗಿತ್ತು. ಇಂತಹ
ಹಲವು ರಾಸಾಯನಿಕಗಳ ಉತ್ಪಾದನೆ ಹಾಗೂ ಬಳಕೆಯನ್ನು ಮುಂದುವರಿದ ದೇಶಗಳು ನಿಷೇಧಿಸಿವೆ. ಆದರೆ, ಅಭಿವೃದ್ಧಿಶೀಲ ದೇಶಗಳಲ್ಲಿ ಇವು ಇನ್ನೂ ಬಳಕೆಯಲ್ಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕಳವಳ ವ್ಯಕ್ತಪಡಿಸಿದೆ.

ಕೀಟಗಳ ಹಾವಳಿಯಿಂದ ಫಸಲು ರಕ್ಷಿಸುವಲ್ಲಿ ಕೀಟನಾಶಕಗಳು ಮಹತ್ವದ ಪಾತ್ರ ವಹಿಸುತ್ತವೆ. ಬೆಳೆ ನಷ್ಟ ತಪ್ಪಿ, ಇಳುವರಿ ಹೆಚ್ಚುತ್ತದೆ. ಆಹಾರ ಕೊರತೆಯನ್ನು ಎದುರಿಸುತ್ತಿರುವ ಹಲವು ದೇಶಗಳ ಸಮಸ್ಯೆ ಪರಿಹರಿಸುವಲ್ಲಿ ಕೀಟನಾಶಕಗಳು ಮಹತ್ವದ ಪಾತ್ರ ವಹಿಸುತ್ತವೆ. ಆದರೆ, ಈ ಆಹಾರವನ್ನು ಬಳಕೆ ಮಾಡುವ ಗ್ರಾಹಕರನ್ನು ಕೀಟನಾಶಕಗಳ ಅಪಾಯದಿಂದ ರಕ್ಷಿಸುವುದೂ ಅಷ್ಟೇ ಮುಖ್ಯ ಎನ್ನುತ್ತದೆ ಡಬ್ಲ್ಯುಎಚ್‌ಒ.

ADVERTISEMENT

ಕೀಟಗಳಿಗೆ ಮಾರಕವಾಗಿರುವ ಕೀಟನಾಶಕಗಳು ಮನುಷ್ಯನ ಆರೋಗ್ಯದ ಮೇಲೂ ತೀವ್ರ ಹಾಗೂ ದೀರ್ಘ
ಕಾಲೀನ ಪರಿಣಾಮ ಉಂಟು ಮಾಡಬಹುದು. ಜಮೀನುಗಳಲ್ಲಿ ರಾಸಾಯನಿಕ ಔಷಧಗಳನ್ನು ಬೆಳೆಗಳಿಗೆ ಸಿಂಪಡಿಸುವ ಕೃಷಿಕರು ಹಾಗೂ ಕಾರ್ಮಿಕರು ನೇರ ಸಂತ್ರಸ್ತರು. ಇವರ ಮೇಲೆ ರಾಸಾಯನಿಕಗಳು ಹೆಚ್ಚು ಪರಿಣಾಮ ಬೀರುತ್ತವೆ. ಬೆಳೆಗಳಿಗೆ ಸಿಂಪಡಣೆಯಾದ ಔಷಧವು ಫಸಲಿನಲ್ಲೂ ಸೇರುತ್ತದೆ. ಇಂತಹ ಔಷಧ ಸಿಂಪಡಿಸಿದ ಆಹಾರ ಪದಾರ್ಥಗಳನ್ನು ಬಳಸುವ ಗ್ರಾಹಕರಿಗೂ ಅದು ತೊಂದರೆ ನೀಡುತ್ತದೆ.

ಆಹಾರ ಪದಾರ್ಥಗಳನ್ನು ಬಳಸುವ ಗ್ರಾಹಕರ ಮೇಲೆ ಕೀಟನಾಶಕಗಳು ವ್ಯತಿರಿಕ್ತ ಪರಿಣಾಮ ಉಂಟು ಮಾಡುವುದನ್ನು ತಡೆಯುವುದು ಅತಿಮುಖ್ಯ. ಆಹಾರ ಪದಾರ್ಥವೊಂದರಲ್ಲಿ ರಾಸಾಯನಿಕ ಅಂಶದ ಉಳಿಕೆಯ ಗರಿಷ್ಠ ಮಿತಿ ಎಷ್ಟಿದ್ದರೆ ಅದು ಸುರಕ್ಷಿತ ಎಂಬುದನ್ನು ಮೌಲ್ಯಮಾಪನ ಮಾಡಲಾಗಿದೆ. ಅಂತರರಾಷ್ಟ್ರೀಯ ಒಪ್ಪಿತ ನಿಯಮಗಳನ್ನು ಅನುಷ್ಠಾನ ಮಾಡಿ ಪಾಲಿಸಬೇಕು ಎಂಬುದಕ್ಕೆ ಡಬ್ಲ್ಯುಎಚ್‌ಒ ಒತ್ತು ಚೆಲ್ಲಿದೆ.

ರಾಸಾಯನಿಕಗಳು ಎಲ್ಲಿ ಬಳಕೆಯಾಗುತ್ತವೆ ಎಂಬುದರ ಮೇಲೆ ಅವುಗಳಲ್ಲಿನ ವಿಷಕಾರಿ ಅಂಶ ನಿರ್ಧಾರವಾಗುತ್ತದೆ. ಕಳೆನಾಶಕಗಳಿಗೆ ಹೋಲಿಸಿದರೆ, ಕೀಟನಾಶಕಗಳು ಮನುಷ್ಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ರಾಸಾಯನಿಕದ ಅಂಶ ಎಷ್ಟಿದೆ ಎಂಬುದರ ಮೇಲೆ ಅದು ಮನುಷ್ಯರ ಮೇಲೆ ಬೀರುವ ಪರಿಣಾಮದ ತೀವ್ರತೆ ನಿರ್ಧಾರವಾಗುತ್ತದೆ. ಅದು ಯಾವ ಸ್ವರೂಪದಲ್ಲಿ ಮನುಷ್ಯದ ದೇಹವನ್ನು ಸೇರುತ್ತದೆ ಎಂಬುದರ ಮೇಲೂ ಪರಿಣಾಮದ ತೀವ್ರತೆಯ ಮಟ್ಟ ಅವಲಂಬಿಸಿರುತ್ತದೆ.

ನಿರಂತರ ನಿಗಾ ಮುಖ್ಯ: ಡಿಎನ್‌ಎಗೆ ಹಾನಿ ಮಾಡಬಲ್ಲ ಮತ್ತು ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಅಂಶಗಳನ್ನು ಹೊಂದಿರುವ ರಾಸಾಯನಿಕಗಳನ್ನು ಅಂತರರಾಷ್ಟ್ರೀಯ ಮಟ್ಟದ ವ್ಯಾಪಾರದ ಆಹಾರ ಪದಾರ್ಥಗಳಿಗೆ ಬಳಸುವಂತಿಲ್ಲ. ಒಂದು ಹಂತದವರೆಗೆ ಇವು ಸುರಕ್ಷಿತವಾಗಿದ್ದು, ರಾಸಾಯನಿಕ ಪ್ರಮಾಣ ಹೆಚ್ಚಾದಂತೆಲ್ಲಾ, ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಇಂತಹ ಕೀಟನಾಶಕಗಳು ಸಾವಿಗೂ ಕಾರಣವಾಗುತ್ತವೆ. ದೀರ್ಘಕಾಲದವರೆಗೆ ಪರಿಸರದಲ್ಲಿ ಉಳಿದುಬಿಡುವ ಇಂತಹ ರಾಸಾಯನಿಕಗಳ ಉತ್ಪಾದನೆ, ವಿತರಣೆ ಹಾಗೂ ಬಳಕೆಗೆ ಕಠಿಣ ನಿರ್ಬಂಧ ಇಂದಿನ ಅಗತ್ಯ. ಆಹಾರ ಪದಾರ್ಥವೊಂದರಲ್ಲಿ ಉಳಿದುಕೊಂಡಿರುವ ರಾಸಾಯನಿಕದ ಅಂಶಗಳ ಮೇಲೆ ನಿರಂತರವಾಗಿ ನಿಗಾ ಇಡಬೇಕಾದುದು ಅಗತ್ಯ ಎಂದು
ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಆಹಾರದಲ್ಲಿ ರಾಸಾಯನಿಕ ಅಂಶದ ನಿರ್ವಹಣೆ

ಅಹಾರ ಪದಾರ್ಥವೊಂದರಲ್ಲಿ ಗರಿಷ್ಠ ಎಷ್ಟು ಪ್ರಮಾಣದ ರಾಸಾಯನಿಕ ಉಳಿದಿದ್ದರೆ ಅದು ಬಳಕೆಗೆ ಯೋಗ್ಯ ಎಂಬುದನ್ನು ಸ್ವತಂತ್ರ, ಅಂತರರಾಷ್ಟ್ರೀಯ ತಜ್ಞರ ತಂಡವಾದ ಜೆಎಂಪಿಆರ್ ಮೌಲ್ಯಮಾಪನ ಮಾಡಿದೆ. ಸರ್ಕಾರಗಳು ಹಾಗೂ ಅಂತರರಾಷ್ಟ್ರೀಯ ಆಹಾರ ಗುಣಮಟ್ಟವನ್ನು ನಿಗದಿಪಡಿಸುವ ‘ಕೊಡೆಕ್ಸ್ ಅಲಿಮೆಂಟರಿಯಸ್ ಕಮಿಷನ್‌’ ಇದನ್ನು ಒಪ್ಪಿಕೊಂಡಿವೆ. ಕೊಡೆಕ್ಸ್ ಮಾನದಂಡವನ್ನು ಅಂತರರಾಷ್ಟ್ರೀಯ ಮಟ್ಟದ ಆಹಾರ ಪದಾರ್ಥಗಳ ವ್ಯಾಪಾರದ ಸಂದರ್ಭದಲ್ಲಿ ಪಾಲಿಸಲಾಗುತ್ತದೆ. ಕೊಡೆಕ್ಸ್ ಗುಣಮಟ್ಟ ಪಾಲಿಸಿ ಉತ್ಪಾದಿಸಿದ ಪದಾರ್ಥಗಳು ಸುರಕ್ಷಿತ ಎಂಬ ನಂಬಿಕೆಯಿದೆ. ನೂರಕ್ಕೂ ಹೆಚ್ಚು ಕೀಟನಾಶಕ ಹಾಗೂ ಬೆಳೆನಾಶಕಗಳು ಕೊಡೆಕ್ಸ್ ಮಾನದಂಡದ ಪರಿಧಿಯಲ್ಲಿದ್ದು, ಅವುಗಳ ಸೇವನೆ ಹಾನಿಕರವಲ್ಲ ಎಂದು ಪರಿಗಣಿಸಲಾಗಿದೆ. ಕೀಟನಾಶಕ ನಿರ್ವಹಣೆಯ ಅಂತರರಾಷ್ಟ್ರೀಯ ನಿಯಮಗಳ ಪರಿಷ್ಕೃತ ಆವೃತ್ತಿ ಪ್ರಕಟವಾಗಿದ್ದು, ಆಹಾರ ಉತ್ಪಾದನೆಯಿಂದ ಬಳಕೆಯವರೆಗೆ ಕೃಷಿಕರು, ಜನರು, ಸರ್ಕಾರಗಳು, ಖಾಸಗಿ ವಲಯದವರು ಪಾಲಿಸಬೇಕಾದ ಕೀಟನಾಶಕ ನಿರ್ವಹಣಾ ನಿಯಮಗಳನ್ನು ವಿವರಿಸಲಾಗಿದೆ.



ಕೀಟಗಳು ಸಾಯುವುದು ಹೀಗೆ...

ಈಗ ಭಾರತದಲ್ಲಿ ನ್ಯಾನೊ ಕೀಟನಾಶಕಗಳ ಬಳಕೆಯೇ ವ್ಯಾಪಕವಾಗಿದೆ. ನ್ಯಾನೊ ಕೀಟನಾಶಕಗಳಲ್ಲೂ ಹಲವು ವಿಧಗಳಿವೆ. ಮುಖ್ಯವಾಗಿ ಅವುಗಳನ್ನು ದ್ರವರೂಪದ ಕೀಟನಾಶಕ ಮತ್ತು ಘನ ರೂಪದ ಕೀಟನಾಶಕ ಎಂದು ವರ್ಗೀಕರಿಸಲಾಗುತ್ತದೆ. ಇವುಗಳಲ್ಲಿ ದ್ರವರೂಪದ ಕೀಟನಾಶಕಗಳ ಬಳಕೆಯೇ ಹೆಚ್ಚು.

ದ್ರವ ರೂಪದ ನ್ಯಾನೊ ಕೀಟನಾಶಕಗಳು ವಿಷವೇ ಆಗಿರುತ್ತದೆ. ನೀರು ಮತ್ತು ವಾತಾವರಣದ ಸಂಪರ್ಕಕ್ಕೆ ಬಂದ ನಂತರ ಇವು ಸಸಿಗಳ ಮೇಲೆ ಮತ್ತು ಮಣ್ಣಿನಲ್ಲಿಯೇ ಉಳಿಯುತ್ತವೆ. ಸಸಿ ಮತ್ತು ಮಣ್ಣಿನ ಸಂಪರ್ಕಕ್ಕೆ ಬಂದ ಕೀಟಗಳಿಗೆ ವಿಷ ಅಂಟುತ್ತದೆ. ವಿಷ ಸೇವಿಸಿದ ತಕ್ಷಣ ಅಥವಾ ಕೆಲವೇ ನಿಮಿಷಗಳಲ್ಲಿ ಕೀಟಗಳು ಸಾಯುತ್ತವೆ.

ಘನರೂಪದ ನ್ಯಾನೊ ಕೀಟನಾಶಕಗಳ ಕೆಲಸ ಮಾಡುವ ಸ್ವರೂಪ ಭಿನ್ನವಾದುದು. ಇಂತಹ ಕೀಟನಾಶಕಗಳ ತಯಾರಿಕೆಯಲ್ಲಿ ಭಾರಲೋಹಗಳನ್ನು ಮತ್ತು ಕೆಲವು ವಿಷಗಳ ಮಿಶ್ರಣವನ್ನು ಬಳಸಲಾಗುತ್ತದೆ. ಆದರೆ, ಜಮೀನಿನಲ್ಲಿ ಬಳಕೆ ವೇಳೆ ಇವು ವಿಷದಂತೆ ಕೆಲಸ ಮಾಡುವುದಿಲ್ಲ. ಇವುಗಳನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಸಿಂಪಡಿಸಿದ ನಂತರ, ಸಸಿಗಳು ಮತ್ತು ಮಣ್ಣಿನ ಮೇಲ್ಮೈನಲ್ಲಿ ಇವು ಉಳಿಯುತ್ತವೆ. ಕೀಟಗಳು ಇವುಗಳ ಸಂಪರ್ಕಕ್ಕೆ ಬಂದಾಗ, ಕೀಟಗಳ ಉಸಿರಾಟದ ನಳಿಕೆ, ಬಾಯಿ, ಕಣ್ಣುಗಳಿಗೆ ಇವು ಅಂಟಿಕೊಳ್ಳುತ್ತವೆ. ಏನನ್ನೂ ತಿನ್ನಲಾಗದೆ ಅಥವಾ ಉಸಿರಾಡಲು ಸಾಧ್ಯವಾಗದೆ ಕೀಟಗಳು ಸಾಯುತ್ತವೆ.

ದೀರ್ಘಾವಧಿ ಪರಿಣಾಮ ತಿಳಿದಿಲ್ಲ: ನ್ಯಾನೊ ಕೀಟನಾಶಕಗಳ ಬಳಕೆ ಹೆಚ್ಚುತ್ತಿದ್ದರೂ, ದೀರ್ಘಾವಧಿಯಲ್ಲಿ ಅವುಗಳಿಂದಾಗುವ ದುಷ್ಪರಿಣಾಮಗಳು ಏನು ಎಂಬುದರ ಬಗ್ಗೆ ಅಧ್ಯಯನಗಳು ನಡೆದಿಲ್ಲ. ಸಾಂಪ್ರದಾಯಿಕ ಕೀಟನಾಶಕಗಳು ಹೇಗೆ ದುಷ್ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಜನರಲ್ಲಿ ಮಾಹಿತಿ ಇದೆ. ಹೀಗಾಗಿ ಆ ಪರಿಣಾಮಗಳನ್ನು ಕಡಿಮೆ ಮಾಡುವ ಪದ್ಧತಿಗಳು ರೂಢಿಯಲ್ಲಿವೆ.

ಆದರೆ, ‘ನ್ಯಾನೊ ಕೀಟನಾಶಕಗಳು ದೀರ್ಘಾವಧಿಯಲ್ಲಿ ಮಣ್ಣಿನ ಮೇಲ್ಮೈನಲ್ಲಿ ಉಳಿಯುತ್ತವೆಯೇ ಅಥವಾ ಮಣ್ಣಿನಾಳ ಸೇರುತ್ತವೆಯೇ ಎಂಬುದು ತಿಳಿದಿಲ್ಲ. ಜತೆಗೆ, ಸಮೀಪದ ಜಲಮೂಲಗಳನ್ನು ಸೇರುತ್ತವೆಯೇ ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ. ಅಲ್ಲದೆ, ಸಸ್ಯ ಪ್ರಬೇಧಗಳ ಮೇಲೆ ಇವು ದೀರ್ಘಾವಧಿಯಲ್ಲಿ ಬೀರುವ ಪರಿಣಾಮಗಳೇನು ಎಂಬುದೂ ತಿಳಿದಿಲ್ಲ’ ಎನ್ನುತ್ತದೆ ನ್ಯಾನೊ ಕೀಟನಾಶಕಗಳ ಮೇಲೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ನಡೆಸಿದ ಅಧ್ಯಯನ ವರದಿ.

ಕೀಟನಾಶಕ: ಇಳಿಯುತ್ತಿದೆ ತೂಕ, ಏರುತ್ತಿದೆ ಬಳಕೆ

ತೂಕದ ಲೆಕ್ಕಾಚಾರದಲ್ಲಿ ನೋಡಿದರೆ ಭಾರತದಲ್ಲಿ ಕೀಟನಾಶಕಗಳ ಬಳಕೆ ಇಳಿಕೆಯತ್ತ ಸಾಗುತ್ತಿದೆ ಎಂದು ಭಾಸವಾಗುತ್ತದೆ. ಆದರೆ, ವಾಸ್ತವಾಂಶ ಇದಕ್ಕಿಂತ ಭಿನ್ನವಾಗಿದೆ. ತೂಕದ ಲೆಕ್ಕಾಚಾರದಲ್ಲಷ್ಟೇ ಕೀಟನಾಶಕಗಳ ಬಳಕೆ ಕಡಿಮೆಯಾಗಿದೆ. ಆದರೆ, ಕೀಟನಾಶಕಗಳನ್ನು ಬಳಸುತ್ತಿರುವ ಕೃಷಿ ಜಮೀನಿನ ವಿಸ್ತೀರ್ಣ ಮತ್ತು ಕೀಟನಾಶಕಗಳ ವಹಿವಾಟು ಏರಿಕೆಯತ್ತ ಸಾಗಿದೆ.

2017–18ಕ್ಕೆ ಹೋಲಿಸಿದರೆ 2021–22ರ ವೇಳೆಗೆ ಕೀಟನಾಶಕಗಳ ಬಳಕೆ ಕ್ರಮೇಣ ಕಡಿಮೆಯಾಗಿದೆ. ಇದಕ್ಕೆ ಹಲವು ಕಾರಣಗಳನ್ನು ಗುರುತಿಸಲಾಗಿದೆ. ಕೀಟನಾಶಕಗಳ ರಚನೆಯ ಸ್ವರೂಪದಲ್ಲಿ ಹಲವು ವಿಧಗಳಿವೆ. ಘನ ಸ್ವರೂಪ ಮತ್ತು ದ್ರವ ಸ್ವರೂಪದಲ್ಲಿ ಇವು ದೊರೆಯುತ್ತವೆ. ಕೆಲವು ಕೀಟನಾಶಕಗಳು ನ್ಯಾನೊ ಸ್ವರೂಪದಲ್ಲೂ ದೊರೆಯುತ್ತವೆ. ಈ ಮೊದಲು ದೇಶದಲ್ಲಿ ಘನ ಸ್ವರೂಪದ ಕೀಟನಾಶಕಗಳ ಬಳಕೆ ವ್ಯಾಪಕವಾಗಿತ್ತು. ಹೀಗಾಗಿ ಕೀಟನಾಶಗಳ ಬಳಕೆ ಪ್ರಮಾಣ ಹೆಚ್ಚು ಇತ್ತು. ನಂತರದ ವರ್ಷಗಳಲ್ಲಿ ದ್ರವ ಸ್ವರೂಪದ ಮತ್ತು ನ್ಯಾನೊ ತಂತ್ರಜ್ಞಾನದ ಕೀಟನಾಶಕಗಳ ಬಳಕೆ ಹೆಚ್ಚಾಗಿದೆ.

ಒಂದು ನಿಗದಿತ ವಿಸ್ತೀರ್ಣದ ಜಮೀನಿಗೆ ಘನ ಸ್ವರೂಪದ ಕೀಟನಾಶಕ ಬಳಸುವುದಾದರೆ, ಅಗತ್ಯವಿರುವ ಕೀಟನಾಶಕದ ತೂಕ ಪರಿಮಾಣ ಹೆಚ್ಚು. ಆದರೆ, ಅಷ್ಟೇ ವಿಸ್ತೀರ್ಣದ ಜಮೀನಿಗೆ ದ್ರವ ಸ್ವರೂಪದ ಮತ್ತು ನ್ಯಾನೊ ತಂತ್ರಜ್ಞಾನದ ಕೀಟನಾಶಕಗಳನ್ನು ಬಳಸುವುದಾದರೆ ಅದಕ್ಕೆ ಬೇಕಾಗುವ ಕೀಟನಾಶಕಗಳ ಪರಿಮಾಣ ಕಡಿಮೆ. ಈಚಿನ ವರ್ಷಗಳಲ್ಲಿ ದ್ರವ ಮತ್ತು ನ್ಯಾನೊ ತಂತ್ರಜ್ಞಾನದ ಕೀಟನಾಶಕಗಳ ಬಳಕೆ ಹೆಚ್ಚುತ್ತಿದೆ. ಒಂದು ಕೆ.ಜಿ. ತೂಕದಷ್ಟು ಘನ ಕೀಟನಾಶಕವು ಕೊಲ್ಲುವಷ್ಟು ಕೀಟಗಳನ್ನು, 10 ಮಿಲಿ ಲೀಟರ್‌ನಷ್ಟು ನ್ಯಾನೊ ಕೀಟನಾಶಕ ಕೊಲ್ಲುತ್ತದೆ. ಇವುಗಳ ಸಾಗಾಟ ಮತ್ತು ಬಳಕೆ ಸುಲಭ. ಜತೆಗೆ ಇವುಗಳ ಬಳಕೆಗೆ ತಗಲುವ ವೆಚ್ಚವೂ ಕಡಿಮೆ. ಹೀಗಾಗಿ ರೈತರು ಇಂತಹ ಕೀಟನಾಶಕಗಳ ಬಳಕೆಯತ್ತ ವಾಲುತ್ತಿದ್ದಾರೆ. ನಾಲ್ಕಾರು ಲೀಟರ್‌ ಅಥವಾ ಹತ್ತಾರು ಕೆ.ಜಿ. ಕೀಟನಾಶಕ ಕೊಳ್ಳುವ ಬದಲಿಗೆ 10 ಮಿಲಿಲೀಟರ್‌ನ ಒಂದೆರಡು ಪೊಟ್ಟಣಗಳು ಸಾಕಾಗುತ್ತವೆ. ಹೀಗಾಗಿಯೇ ದೇಶದಲ್ಲಿ ಮಾರಾಟವಾಗುತ್ತಿರುವ ಕೀಟನಾಶಕಗಳ ಒಟ್ಟು ತೂಕ ಕಡಿಮೆಯಾಗಿದೆ. ಆದರೆ, ಭೂಮಿ ಸೇರುತ್ತಿರುವ ಕೀಟನಾಶಕಗಳ ಪ್ರಮಾಣ ಹೆಚ್ಚುತ್ತಲೇ ಇದೆ.

ನ್ಯಾನೊ ತಂತ್ರಜ್ಞಾನದ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಕೀಟನಾಶಕಗಳ ಪ್ರತಿ ಅಣುವೂ ಅತ್ಯಂತ ಸಾಂದ್ರತೆಯಿಂದ ಕೂಡಿರುತ್ತದೆ. ನೀರು ಮತ್ತು ವಾತಾವರಣದ ಸಂಪರ್ಕಕ್ಕೆ ಬಂದಾಗ ಆ ಅಣುಗಳು ವಿದಳನ ಕ್ರಿಯೆಗೆ ಒಳಗಾಗುತ್ತವೆ. ಒಂದು ಅಣುವೇ ಹಲವು ಅಣುಗಳಾಗಿ ವಿದಳನವಾಗುತ್ತವೆ. ಆ ಎಲ್ಲಾ ಅಣುಗಳು ಮತ್ತಷ್ಟು ಅಣುಗಳಾಗುತ್ತವೆ. ಆ ಮತ್ತಷ್ಟು ಅಣುಗಳಿಂದ ಇನ್ನೂ ಹಲವು ಅಣುಗಳು ಸೃಷ್ಟಿಯಾಗುತ್ತವೆ. ಹೀಗೆ ಹಲವು ಹಂತಗಳವರೆಗೆ ವಿದಳನ ಕ್ರಿಯೆ ನಡೆಯುತ್ತದೆ. ನಿರ್ದಿಷ್ಟ ಸಮಯದೊಳಗೆ ವಿದಳನ ಕ್ರಿಯೆಯು ಗರಿಷ್ಠಮಟ್ಟ ಮುಟ್ಟುತ್ತದೆ. ಹೀಗಾಗಿ 100 ಎಂ.ಎಲ್‌.ನಷ್ಟು ನ್ಯಾನೊ ಕೀಟನಾಶಕವನ್ನು ಬಳಸಿಕೊಂಡು, ಸಾವಿರಾರು ಲೀಟರ್‌ನಷ್ಟು ಕೀಟನಾಶಕ ಸಿದ್ಧಪಡಿಸಲು ಸಾಧ್ಯ. ಈ ಸ್ವರೂಪದ ಕೀಟನಾಶಕಗಳ ಬಳಕೆ ತೀವ್ರಮಟ್ಟದಲ್ಲಿ ಏರಿಕೆಯಾಗಿರುವುದರಿಂದಲೇ ದೇಶದಲ್ಲಿ ಮಾರಾಟವಾಗುತ್ತಿರುವ ಕೀಟನಾಶಕಗಳ ಒಟ್ಟು ಪ್ರಮಾಣ ಕಡಿಮೆಯಾಗಿದೆ. ಆದರೆ, ಭೂಮಿ ಸೇರುತ್ತಿರುವ ಕೀಟನಾಶಕಗಳ ಪ್ರಮಾಣ ಏರಿಕೆಯಾಗಿದೆ.

ರಕ್ಷಣೆ ಹೇಗೆ

ಕೀಟನಾಶಕಗಳಿಗೆ ಜನರು ನೇರವಾಗಿ ತೆರೆದುಕೊಳ್ಳುವುದನ್ನು ತಡೆಯಲು ಕೆಲವು ಕ್ರಮಗಳನ್ನು ಡಬ್ಲ್ಯುಎಚ್‌ಒ ವಿವರಿಸಿದೆ

*ಕೀಟನಾಶಕಗಳನ್ನು ಹೊಲ ಅಥವಾ ಕೈತೋಟಗಳಲ್ಲಿ ಸಿಂಪಡಿಸುವಾಗ, ಜನರು ಸಾಧ್ಯವಾದಷ್ಟು ಈ ಪ್ರದೇಶಗಳಿಂದ ದೂರವಿರುವುದು ಒಳಿತು. ಮಾಸ್ಕ್ ಧರಿಸಿ, ಕೈಗಳಿಗೆ ಕೈಗವಸು ಧರಿಸಿ ಔಷಧ ಸಿಂಪಡಿಸಬೇಕು

*ಆಹಾರ ಪದಾರ್ಥ ಮಾರಾಟದ ವೇಳೆ, ರಾಸಾಯನಿಕ ಅಂಶ ಉಳಿಕೆಯ ಗರಿಷ್ಠ ಮಿತಿಯನ್ನು ಪಾಲಿಸುವುದು ಕಡ್ಡಾಯ ಮಾಡಬೇಕು

*ಆಹಾರ ಹಾಗೂ ಹಣ್ಣುಗಳನ್ನು ಚೆನ್ನಾಗಿ ತೊಳೆದು ಸೇವಿಸುವುದರಿಂದ, ಅವುಗಳಲ್ಲಿ ಉಳಿದಿರುವ ರಾಸಾಯನಿಕ ಅಂಶವು ದೇಹ ಸೇರುವುದನ್ನು ತಡೆಯಬಹುದು. ಇದರಿಂದ ಬ್ಯಾಕ್ಟೀರಿಯಾಗಳನ್ನೂ ನಿಯಂತ್ರಿಸಿದಂತೆ ಆಗುತ್ತದೆ

*ರೈತರು ತಮ್ಮ ಬೆಳೆಗಳಿಗೆ ಅಗತ್ಯವಿರುವಷ್ಟು ಕೀಟನಾಶಕಗಳನ್ನು ಮಾತ್ರ ಬಳಸಬೇಕು; ಬಳಕೆಯಲ್ಲಿ ನಿಯಂತ್ರಣ ವಿಧಿಸಿಕೊಳ್ಳಬೇಕು

*ಎಲ್ಲ ದೇಶಗಳು ಕೃಷಿಯಲ್ಲಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.