ಅಂಕಣ ಸಾಹಿತ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲಿಗರು ಯಾರು? ಕನ್ನಡ–ಕರ್ನಾಟಕ ಕುರಿತ ರಸಪ್ರಶ್ನೆಗಳಲ್ಲಿ ಪುನರಾವರ್ತನೆಗೊಳ್ಳುವ ಈ ಪ್ರಶ್ನೆಗೆ ಉತ್ತರ: ಹಾ.ಮಾ. ನಾಯಕ. ‘ಸಂಪ್ರತಿ’ ಕೃತಿಗಾಗಿ 1989ರಲ್ಲಿ ಅವರಿಗೆ ಅಕಾಡೆಮಿ ಪ್ರಶಸ್ತಿ ದೊರಕಿತು. ಅಂಕಣ ಬರಹಗಳಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮತ್ತಿಬ್ಬರು ಬರಹಗಾರರು ಕನ್ನಡದಲ್ಲಿದ್ದಾರೆ: ಕೀರ್ತಿನಾಥ ಕುರ್ತಕೋಟಿ (‘ಉರಿಯ ನಾಲಿಗೆ’, 1995) ಮತ್ತು ಮೂಡ್ನಾಕೂಡು ಚಿನ್ನಸ್ವಾಮಿ (‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ’, 2022). ಈ ಮೂರು ಕೃತಿಗಳಲ್ಲಿ ‘ಸಂಪ್ರತಿ’ ಮತ್ತು ‘ಉರಿಯ ನಾಲಿಗೆ’ ಕೃತಿಗಳಿಗೆ ಸಂಬಂಧಿಸಿದಂತೆ ವಿಶೇಷವೊಂದಿದೆ. ಇವೆರಡೂ ಅಂಕಣಬರಹಗಳಾಗಿ ಪ್ರಕಟಗೊಂಡಿದ್ದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ. ಮೂಡ್ನಾಕೂಡು ಅವರ ಕೃತಿಯ ಬರಹಗಳು ಪ್ರಕಟಗೊಂಡಿದ್ದು ‘ಪ್ರಜಾವಾಣಿ’ಯ ಸೋದರ ಪತ್ರಿಕೆ ‘ಸುಧಾ’ದಲ್ಲಿ. ಒಂದೇ ಬಳಗದ ಪತ್ರಿಕೆಗಳ ಮೂರು ಅಂಕಣಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿರುವುದು ಭಾರತೀಯ ಪತ್ರಿಕೋದ್ಯಮದಲ್ಲೂ ದಾಖಲೆ, ಸಾಹಿತ್ಯದಲ್ಲೂ ದಾಖಲೆ. ಕನ್ನಡದ ಮಟ್ಟಿಗಂತೂ ‘ಪ್ರಜಾವಾಣಿ’, ‘ಸುಧಾ’ ಹೊರತುಪಡಿಸಿದರೆ ಬೇರೆ ಯಾವ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣ ಸಾಹಿತ್ಯವು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿಲ್ಲ.
ಭಾರತೀಯ ಭಾಷೆಗಳಲ್ಲಿಯೇ ಅಂಕಣ ಸಾಹಿತ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲಿಗರು ಎನ್ನುವ ಹೆಮ್ಮೆ ಹಾ.ಮಾ. ನಾಯಕ ಅವರದ್ದು, ಕನ್ನಡದ್ದು. ಈ ಅಗ್ಗಳಿಕೆ ಅಂಕಣ ಪ್ರಕಾರಕ್ಕೊಂದು ಮಾನ್ಯತೆ ತಂದುಕೊಟ್ಟಿತಲ್ಲದೆ, ಅಂಕಣ ಬರಹಗಳನ್ನು ಸಹೃದಯರು ಗಂಭೀರವಾಗಿ ಪರಿಗಣಿಸಲು ಪ್ರೇರಣೆಯಾಯಿತು. ಕುರ್ತಕೋಟಿಯವರಿಗೆ ದೊರೆತ ಪ್ರಶಸ್ತಿ, ಅಂಕಣ ಸಾಹಿತ್ಯದ ಸಾಧ್ಯತೆಗಳನ್ನು ಮತ್ತಷ್ಟು ನಿಚ್ಚಳಗೊಳಿಸಿತು.
ಬಹುತೇಕ ವಿಷಯಗಳಿಗೆ ಸಂಬಂಧಿಸಿದಂತೆ ಕನ್ನಡ ಪತ್ರಿಕೋದ್ಯಮಕ್ಕೆ ಮೊದಲಗಿತ್ತಿಯಂತಿರುವ ‘ಪ್ರಜಾವಾಣಿ’, ಅಂಕಣಗಳ ಪ್ರಕಟಣೆಗೆ ಸಂಬಂಧಿಸಿದಂತೆಯೂ ಮುಂಚೂಣಿಯಲ್ಲಿದೆ. ಕನ್ನಡದ ಅನೇಕ ಉತ್ತಮ ಬರಹಗಾರರಿಗೆ ಅಂಕಣಕಾರರ ಪೋಷಾಕು ತೊಡಿಸುವ ಮೂಲಕ, ಅವರ ಸೃಜನಶೀಲತೆಯ ವಿಸ್ತರಣೆಗೆ ಪತ್ರಿಕೆ ಆಡುಂಬೊಲವಾಗಿದೆ. ಆಯಾ ಕಾಲದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಆಗುಹೋಗುಗಳಿಗೆ ಸೃಜನಶೀಲ ಪ್ರತಿಸ್ಪಂದನಗಳೂ ಆಗಿರುವುದರಿಂದ, ‘ಆಧುನಿಕ ಕರ್ನಾಟಕ’ದ ಚರಿತ್ರೆಯ ರೂಪದಲ್ಲಿ ‘ಪ್ರಜಾವಾಣಿ’ ಅಂಕಣ ಬರಹಗಳನ್ನು ನೋಡಲು ಸಾಧ್ಯವಿದೆ. ವಿಷಯ ವೈವಿಧ್ಯದ ದೃಷ್ಟಿಯಿಂದಲೂ ಪತ್ರಿಕೆಯ ಅಂಕಣಗಳು ಬಹುಮೂಲ್ಯವಾದವು. ಕುಲದೀಪ್ ನಯ್ಯರ್ (‘ಅಂತರಂಗ’) ಹಾಗೂ ರಾಮಚಂದ್ರ ಗುಹಾ ಅವರ (‘ಗುಹಾಂಕಣ’) ಅಂಕಣಗಳು ಹಲವು ತಲೆಮಾರುಗಳ ಓದುಗರ ಚಾರಿತ್ರಿಕ ಹಾಗೂ ರಾಜಕೀಯ ಪ್ರಜ್ಞೆಯನ್ನು ಹರಿತಗೊಳಿಸಿವೆ. ಎ. ನಾರಾಯಣ ಅವರ ‘ಅನುರಣನ’ ಸಮಕಾಲೀನ ರಾಜಕೀಯ ಘಟನೆಗಳ ತಾತ್ವಿಕತೆಯನ್ನು ಒಳನೋಟಗಳೊಂದಿಗೆ ವಿಶ್ಲೇಷಿಸುವ ಜನಪ್ರಿಯ ಅಂಕಣ. ಶೇಖರ್ ಗುಪ್ತಾ ಅವರ ‘ರಾಷ್ಟ್ರಕಾರಣ’ ಹಾಗೂ ಆಕಾರ್ ಪಟೇಲ್ ‘ದೂರ ದರ್ಶನ’ ಅಂಕಣಗಳು ಕೂಡ ಸಮಕಾಲೀನ ರಾಜಕಾರಣದ ಬಗ್ಗೆ ಓದುಗರ ಸಂವೇದನೆಯನ್ನು ಸೂಕ್ಷ್ಮಗೊಳಿಸುವಂತಿದ್ದವು.
ಭಾಷೆಗೆ ಸಂಬಂಧಿಸಿದಂತೆಯೂ ‘ಪ್ರಜಾವಾಣಿ’ ಅಂಕಣಗಳು ಬಾಳಿಕೆಯುಳ್ಳಂಥವು. ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ‘ಇಗೋ ಕನ್ನಡ’, ಕೆ.ವಿ. ನಾರಾಯಣರ ‘ಪದಸಂಪದ’, ಓ.ಎಲ್. ನಾಗಭೂಷಣ ಸ್ವಾಮಿ ಅವರ ‘ನುಡಿಯೊಳಗಾಗಿ’ ಕನ್ನಡ ನುಡಿಯನ್ನು ಶ್ರೀಮಂತಗೊಳಿಸಿರುವ ಅಂಕಣಗಳು. ಕುರ್ತಕೋಟಿ ಅವರ ‘ಸಮ್ಮುಖ’ ಅಂಕಣ, ಲೇಖಕರು ತಮ್ಮ ಕಾಲದ ಸಾಂಸ್ಕೃತಿಕ ವಿದ್ಯಮಾನಗಳೊಂದಿಗೆ ನಡೆಸಿದ ಅಪೂರ್ವ ಅನುಸಂಧಾನವಾಗಿದೆ. ಭಾಷೆ, ಸಾಹಿತ್ಯ, ಕಲೆ, ಸಿನಿಮಾ, ಶಿಲ್ಪ, ಪುರಾಣ, ಕಾವ್ಯಮೀಮಾಂಸೆ – ಹೀಗೆ, ಕುರ್ತಕೋಟಿ ಅವರ ಅಂಕಣ ಬರಹಗಳು ಎಲ್ಲ ದಿಕ್ಕಿಗೂ ತಮ್ಮ ನಾಲಿಗೆ ಚಾಚಿಕೊಂಡಿವೆ; ‘ಉರಿಯ ನಾಲಿಗೆ’ ಶೀರ್ಷಿಕೆಯಲ್ಲಿ ಪುಸ್ತಕವಾಗಿವೆ. ‘ಬೇವು ಬೆಲ್ಲ’ ಹೆಸರಿನಲ್ಲಿ 1962ರಿಂದ 1966ರವರೆಗೆ ನಿರಂಜನರು ಬರೆದ ಅಂಕಣಬರಹಗಳು ಪುಸ್ತಕ ರೂಪದಲ್ಲೂ ಪ್ರಕಟಗೊಂಡು ಸಹೃದಯರ ಗಮನಸೆಳೆದಿವೆ. ‘ವಿಚಾರಸರಣಿ’ ಹೆಸರಿನಲ್ಲಿ ಜಿ.ಪಿ. ರಾಜರತ್ನಂ ಬರೆದ ಅಂಕಣಬರಹಗಳೂ ಜನಪ್ರಿಯಗೊಂಡಿದ್ದವು.
‘ಹಲವು ಕನ್ನಡಂಗಳ’ ಚೆಲುವನ್ನು ಅಂಕಣಗಳ ಮೂಲಕ ಹಿಡಿದಿಡುವ ಪ್ರಯತ್ನವನ್ನೂ ‘ಪ್ರಜಾವಾಣಿ’ ನಡೆಸಿದೆ. ಈ ನಿಟ್ಟಿನಲ್ಲಿ ನೆನಪಿಸಿಕೊಳ್ಳಬಹುದಾದ ಪ್ರಮುಖ ಅಂಕಣ: 1966ರಿಂದ 1999ರವರೆಗೆ ಪ್ರತಿ ರವಿವಾರ ಪ್ರಕಟಗೊಂಡ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ‘ಚಹಾದ ಜೋಡಿ ಚೂಡಾದ್ಹಾಂಗ’. ನಾ. ದಾಮೋದರ ಶೆಟ್ಟಿ ಅವರ ‘ತೆಂಕಣದ ಸುಳಿಗಾಳಿ’ ಹಾಗೂ ವೀರಣ್ಣ ದಂಡೆ ಅವರ ‘ಕಲ್ಬುರ್ಗಿಯ ಕಲರವ’ ಅಂಕಣಗಳು ಪ್ರಾದೇಶಿಕ ಸ್ವಾದವನ್ನು ಹೊಂದಿದ್ದವು. ಪ್ರಾದೇಶಿಕ ಅನನ್ಯತೆಯನ್ನು ಹಿಡಿದಿಡುವ ಉದ್ದೇಶದ ಈ ಅಂಕಣ ಬರಹಗಳು ಎಲ್ಲ ಭಾಗಗಳ ಕನ್ನಡಿಗರಿಗೂ ರುಚಿಸಿದವು. ರಹಮತ್ ತರೀಕೆರೆ ಅವರ ‘ನಡೆದಷ್ಟೂ ನಾಡು’ ಕನ್ನಡನಾಡಿನ ಸಾಂಸ್ಕೃತಿಕ ಚಹರೆಗಳನ್ನು ದಾಖಲಿಸುವ ಮತ್ತೊಂದು ವಿಶಿಷ್ಟ ಪ್ರಯತ್ನ. ‘ಸಾಪ್ತಾಹಿಕ ಪುರವಣಿ’ಯಲ್ಲಿ ಪ್ರಕಟಗೊಂಡ ಈ ಅಂಕಣ ಮಾಲಿಕೆಯಲ್ಲಿ ರಹಮತ್ ಅವರು ತಮ್ಮ ವಿಮರ್ಶಕನ ಚಾಳೀಸನ್ನು ತೆರೆದಿಟ್ಟು, ಪತ್ರಿಕೆಯ ಓದುಗರೊಂದಿಗಿನ ಸಂವಹನಕ್ಕೆ ತಮ್ಮನ್ನು ರೂಪಿಸಿಕೊಂಡ ಬಗೆ ವಿಶಿಷ್ಟವಾದುದು. ಅಕಡೆಮಿಕ್ ಗಾಂಭೀರ್ಯವನ್ನು ಬಿಟ್ಟುಕೊಟ್ಟಿದ್ದರೂ ಜನಪ್ರಿಯ ಶೈಲಿಯಲ್ಲೇ ಮಹತ್ವದ ಸಂಗತಿಗಳನ್ನು ತಮ್ಮ ಒಳನೋಟಗಳೊಂದಿಗೆ ದಾಖಲಿಸಲು ಸಾಧ್ಯವಾದುದು ರಹಮತ್‌ರ ವಿಶೇಷ. ಅವರ ಅಲೆದಾಟದ ಬರಹಗಳು ಸಹೃದಯರನ್ನು ಊರಿಂದ ಊರಿಗೆ ಕೈಹಿಡಿದು ನಡೆಸಿದಷ್ಟು ಆಪ್ತವಾಗಿದ್ದವು. ಕೃಪಾಕರ– ಸೇನಾನಿ ಜೋಡಿಯ ‘ಅವ್ಯಕ್ತ ಭಾರತ’ ಅಂಕಣ ಬರಹಗಳು ಕಾಡಿನ ದಾರಿಗಳಲ್ಲಿ ಮಾನವೀಯ ನಾಡಿಮಿಡಿತಗಳ ಗುರುತಿಸುವ ಅಪೂರ್ವ ಪ್ರಯತ್ನ. ನಾಗತಿಹಳ್ಳಿ ಚಂದ್ರಶೇಖರ ಅವರ ‘ರೆಕ್ಕೆ-ಬೇರು’ ಅಂಕಣ ಬರಹಗಳು ಜನಮನ್ನಣೆ ಗಳಿಸಿವೆ, ಪುಸ್ತಕ ರೂಪದಲ್ಲೂ ಸಂಕಲನಗೊಂಡಿವೆ. ಎಂ.ಎಸ್. ಶ್ರೀರಾಮ್ ಅವರ ಅಂಕಣ ಬರಹಗಳು ಸಹಕಾರ ಹಾಗೂ ಆರ್ಥಿಕ ಕ್ಷೇತ್ರದ ಬಗ್ಗೆ ವಿಶಿಷ್ಟ ಒಳನೋಟಗಳನ್ನು ಹೊಂದಿವೆ.
ರಾಜಕಾರಣ ಹಾಗೂ ಸಾಂಸ್ಕೃತಿಕ ಸಂವಾದಗಳಿಗೆ ಆಸ್ಪದ ಕೊಡುವಂತಿದ್ದ ಬರಗೂರು ರಾಮಚಂದ್ರಪ್ಪನವರ ‘ಸಂವೇದನೆ’ ಹಾಗೂ ‘ಪರಂಪರೆಯೊಂದಿಗಿನ ಪಿಸುಮಾತು’ ಅಂಕಣ ಬರಹಗಳ ವೈವಿಧ್ಯದ ಜೊತೆಗೆ ಸಾಧ್ಯತೆಗಳಿಗೆ ನಿದರ್ಶನದಂತಿದ್ದವು. ‘ಪರಂಪರೆಯೊಂದಿಗಿನ ಪಿಸುಮಾತು’ ಪುಸ್ತಕ ರೂಪದಲ್ಲೂ ಪ್ರಕಟಗೊಂಡಿದೆ.
ಎಚ್.ಎಸ್. ಶಿವಪ್ರಕಾಶ್ ಅವರ ‘ಪ್ರತಿಸ್ಪಂದನ’ ಶೀರ್ಷಿಕೆಯ ಅಂಕಣ ಬರಹಗಳನ್ನು ಕೂಡ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಗುರುತಿಸಬಹುದು. ಲಿಂಗದೇವರು ಹಳೆಮನೆ ಅವರ ‘ಬೆಳಕು ಬೆರಗು’, ನಟರಾಜ್ ಹುಳಿಯಾರ್ ಅವರ ‘ಕನ್ನಡಿ’ ಸಾಂಸ್ಕೃತಿಕ ವಾಗ್ವಾದಗಳಿಗೆ ಅನುವು ಕಲ್ಪಿಸಿದ ಬರಹಗಳ ಅಂಕಣಗಳು. ಯು.ಆರ್. ಅನಂತಮೂರ್ತಿ ಅವರು ‘ಪ್ರಜಾವಾಣಿ’ ಪತ್ರಿಕೆಗೆ ಬರೆದ ‘ಅನುಸಂಧಾನ’ ಅಂಕಣ ಬರಹಗಳು ತಮ್ಮ ವೈಚಾರಿಕ ಪ್ರಖರತೆಯಿಂದ ಸಹೃದಯರ ಗಮನಸೆಳೆದಿದ್ದು, ‘ರುಚಿಕರ ಸತ್ಯಗಳ ಕಾಲ’ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಪಿ. ಲಂಕೇಶ್ ಅವರು ಅಂಕಣ ಬರವಣಿಗೆಯ ಸಾಮು ಆರಂಭಿಸಿದ್ದು ‘ಪ್ರಜಾವಾಣಿ’ಯಲ್ಲೇ. ಎಸ್. ದಿವಾಕರ್, ಜಯಂತ ಕಾಯ್ಕಿಣಿ ಹಾಗೂ ವಿವೇಕ ಶಾನಭಾಗ ಅವರು ಕೂಡ ‘ಪ್ರಜಾವಾಣಿ’ಯ ಅಂಕಣ ಪ್ರಯೋಗಗಳ ಭಾಗವಾಗಿದ್ದರು.
ವೈದೇಹಿ ಅವರ ‘ಹರಿವ ನೀರು’– ಪ್ರಖರ ಸ್ತ್ರೀ ಸಂವೇದನೆಯೊಂದಿಗೆ, ಕಥನ, ಕಾವ್ಯ, ವಿಮರ್ಶೆ, ವ್ಯಕ್ತಿ ಪರಿಚಯ, ನೆನಪು – ಹೀಗೆ ಭಾವಲೋಕದ ಹರಿವಿಗೆ ಸಿಕ್ಕಿದ್ದನ್ನೆಲ್ಲ ಒಳಗೊಳ್ಳುವ ಹಂಬಲದಿಂದ, ಆರ್ದ್ರತೆಯಿಂದ ಸಹೃದಯರ ಗಮನಸೆಳೆದ ಅಂಕಣ. ಎಂ.ಎಸ್. ಆಶಾದೇವಿ ಅವರ ‘ನಾರೀಕೇಳಾ’ ಭಾರತೀಯ ಸಾಹಿತ್ಯದ ವಿಶಿಷ್ಟ ಸಂಕಥನಗಳನ್ನು ಹೆಣ್ಣಿನ ವೈಚಾರಿಕತೆಯಲ್ಲಿ ಪರಿಶೀಲಿಸುವ ಭಿನ್ನ ಪ್ರಯೋಗ ಹಾಗೂ ಓದುಗರ ದೃಷ್ಟಿಕೋನಗಳಿಗೆ ಹೊಸ ಚಾಚುಗಳನ್ನು ನೀಡುವ ಹಂಬಲದ ಮಹತ್ವಾಕಾಂಕ್ಷೆಯ ಬರವಣಿಗೆ. ಡಾ. ಆಶಾ ಬೆನಕಪ್ಪ ಅವರ ‘ಅಂತಃಕರಣ’ ಕನ್ನಡ ಅಂಕಣ ನಕಾಶೆಯಲ್ಲಿ ಭಿನ್ನ ನಮೂನೆ. ಮಕ್ಕಳ ತಜ್ಞೆಯಾಗಿ ತಮ್ಮ ಅಪಾರ ಅನುಭವಗಳನ್ನು ಆಶಾ ಬೆನಕಪ್ಪ ಅಂಕಣ ಬರಹಗಳಲ್ಲಿ ಹಂಚಿಕೊಂಡಿದ್ದರು. ಓದುಗರ ಅಂತಃಕರಣವನ್ನು ಮಿಡಿಯುವುದರ ಜೊತೆಗೆ, ಸಮಾಜದೊಂದಿಗಿನ ನಮ್ಮ ಉತ್ತರದಾಯಿತ್ವವನ್ನು ಆತ್ಮವಿಮರ್ಶೆಗೆ ಒಳಪಡಿಸುವಷ್ಟು ‘ಅಂತಃಕರಣ’ದ ಬರಹಗಳು ಪರಿಣಾಮಕಾರಿಯಾಗಿದ್ದವು.
ಸಮಾಜದ ಹಲವು ವಲಯಗಳಿಗೆ ವೇದಿಕೆಯಾಗುವ ಪತ್ರಿಕೆಯ ಹಂಬಲದಲ್ಲಿ ಗುರ್ತಿಸಬಹುದಾದ ಕೆಲವು ಪ್ರಯೋಗಗಳ ರೂಪದಲ್ಲಿ – ಡಾ. ಅನುಪಮಾ ನಿರಂಜನ (ಮಹಿಳಾವಾಣಿ – ಸ್ವಾಸ್ಥ್ಯ, ಸಮಸ್ಯೆ, ಸಲಹೆ), ಲಕ್ಷ್ಮೀಶ ತೋಳ್ಪಾಡಿ (ಭಾರತ ಯಾತ್ರೆ), ಪ್ರಸನ್ನ (ಸಂಭಾಷಣೆ), ಪ್ರಕಾಶ್ ರೈ (ಅವರವರ ಭಾವಕ್ಕೆ), ಪೃಥ್ವಿದತ್ತ ಚಂದ್ರಶೋಭಿ (ನಿಜದನಿ), ಜಿ.ಎಸ್. ಜಯದೇವ (ಹಳ್ಳಿಹಾದಿ), ಡಾ. ದೇವಿ ಶೆಟ್ಟಿ (ಹೃದಯ ಸಂವಾದ), ಮನು ಬಳಿಗಾರ (ಸಾಕ್ಷಿಪ್ರಜ್ಞೆ), ಗುರುರಾಜ ಕರಜಗಿ (ಕರುಣಾಳು ಬಾ ಬೆಳಕೆ), ಐ.ಎಂ. ವಿಠಲಮೂರ್ತಿ (ಆಡಳಿತದ ನೆನಪುಗಳು), ಬಿ.ಕೆ. ಶಿವರಾಂ (ಪೊಲೀಸ್ ಕಂಡ ಕಥೆಗಳು), ಪ್ರೀತಿ ನಾಗರಾಜ್ (ಮಿರ್ಚಿ ಮಂಡಕ್ಕಿ), ಕಲೀಮ್ ಉಲ್ಲಾ (ಕ್ಲಾಸ್ ಟೀಚರ್) ಅವರ ಅಂಕಣ ಬರಹಗಳನ್ನು ಗುರುತಿಸಬಹುದಾಗಿದೆ.
ಆಯಾ ಕಾಲದ ಬಹುತೇಕ ಅತ್ಯುತ್ತಮ ಬರಹಗಾರರು ‘ಪ್ರಜಾವಾಣಿ’ಯ ಅಂಕಣಪ್ರಯೋಗಕ್ಕೆ ತಮ್ಮನ್ನೊಡ್ಡಿಕೊಂಡವರೇ ಆಗಿದ್ದಾರೆ. ಬಹುತೇಕ ಅಂಕಣಗಳು ಪುಸ್ತಕ ರೂಪದಲ್ಲೂ ಪ್ರಕಟಗೊಂಡು ಸಹೃದಯರ ಮೆಚ್ಚುಗೆ ಹಾಗೂ ಪ್ರಶಸ್ತಿ ಪುರಸ್ಕಾರಗಳ ಮನ್ನಣೆಗೆ ಪಾತ್ರವಾಗಿವೆ.
ವಸು ಮಳಲಿ (ಕಳ್ಳುಬಳ್ಳಿ) ಅಂಕಣ ಬರಹಗಳಿಗೆ ದೇವನೂರ ಮಹಾದೇವ ಅವರ ಪ್ರತಿಕ್ರಿಯೆ: ‘ವಸು ಮಳಲಿ ಅವರು ತಮ್ಮ ಅಂಕಣದಲ್ಲಿ ನಾನು ಬರೆಯಬಹುದಾಗಿದ್ದ ಲೇಖನಗಳನ್ನು ಬರೆಯುತ್ತಿದ್ದರು. ಆದರೆ, ಅವು ನಾನು ಬರೆಯಬಹುದಾಗಿದ್ದಕ್ಕಿಂತ ಹೆಚ್ಚು ಪ್ರಬುದ್ಧವಾಗಿರುತ್ತಿದ್ದವು’ – ಈ ಮೆಚ್ಚುಗೆ ವಸು ಮಳಲಿ ಅವರಿಗೆ ಸಂದದ್ದೂ ಹೌದು, ಪತ್ರಿಕೆಯ ಅಂಕಣಗಳ ಘನತೆಯನ್ನು ಗುರುತಿಸುವಂತಹದ್ದೂ ಹೌದು. ಸಾಹಿತಿಗಳು ಹಾಗೂ ವಿವಿಧ ಕ್ಷೇತ್ರಗಳ ಸೃಜನಶೀಲರನ್ನು ಜನರೊಂದಿಗೆ ನೇರವಾಗಿ ಮುಖಾಮುಖಿಯಾಗಿಸಿದ್ದು ‘ಪ್ರಜಾವಾಣಿ’ ಅಂಕಣ ಬರಹಗಳ ಮತ್ತೊಂದು ಸಾಧನೆ.
ನಾಡಿನ ಬರಹಗಾರರು ಮಾತ್ರವಲ್ಲದೆ, ಪತ್ರಿಕೆಯ ಭಾಗವಾದ ಪತ್ರಕರ್ತರೂ ಅಂಕಣಕಾರರಾಗಿ ಯಶಸ್ಸು ಕಂಡಿರುವ, ಜನಮನ ತಲುಪಿರುವ ಹಲವು ಉದಾಹರಣೆಗಳಿವೆ. ಅದು ಬೇರೆಯದೇ ಅಧ್ಯಾಯ.
ನಂ ನಮಸ್ಕಾರ ನಿಮಗ
ನನ್ನ ಸಾಹಿತ್ಯಿಕ ವ್ಯಕ್ತಿತ್ವ ಹಾಗೂ ಹೆಸರಿಗೆ ಹೊಸ ಆಯಾಮ ನೀಡಿದ ಅಂಕಣ ‘ಚಹಾದ ಜೋಡಿ ಚೂಡಾದ್ಹಾಂಗ’. ಈ ಲೇಖನಗಳನ್ನು ಲಕ್ಷಗಟ್ಟಲೆ ಕೋಟಿಗಟ್ಟಲೆ ಕನ್ನಡಿಗರು ಓದಿದ್ದಾರೆ, ಮೆಚ್ಚಿದ್ದಾರೆ. ನಾಡಿನ ತುಂಬ ನಾನು ಹೋದಲ್ಲೆಲ್ಲ ನನ್ನನ್ನು ಗುರುತಿಸಿ ತಮ್ಮ ಬಳಗದವನೇ ಎಂಬಂತೆ ಪ್ರೀತಿಸಿದ್ದಾರೆ.
ಸಿದ್ಧಲಿಂಗ ಪಟ್ಟಣಶೆಟ್ಟಿ,
ಚಹಾದ ಜೋಡಿ ಚೂಡಾದ್ಹಾಂಗ
5ನೇ ಸಂಪುಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.