ಇತ್ತೀಚಿನ ವರ್ಷಗಳಲ್ಲಿ ಆಟ ಎಂಬುದು ಮಕ್ಕಳ ಬದುಕಿನ ಭಾಗವಾಗಿ ಉಳಿದಿಲ್ಲ. ಆಟವು ಯಾವುದೇ ಕುಟುಂಬದ, ಸರ್ಕಾರದ, ಶಾಲೆಯ, ಒಟ್ಟಿನಲ್ಲಿ ಇಡೀ ಸಮಾಜದ ಆದ್ಯತೆಯಾಗಿಯೂ ಉಳಿದಿಲ್ಲ. ಮಕ್ಕಳು ಆಟವಾಡುತ್ತಾರೆ ಎಂದರೆ, ಅದು ಸಮಯ ವ್ಯರ್ಥ ಮಾಡಿದಂತೆಯೇ ಎಂದು ಭಾವಿಸುವ ಸ್ಥಿತಿಯಲ್ಲಿ ಸಮಾಜವಿದೆ. ಮಕ್ಕಳು ಆಟ ಆಡುವುದು ಅವರ ಹಕ್ಕು ಎಂಬುದಾಗಿ ವಿಶ್ವಸಂಸ್ಥೆ ಪರಿಗಣಿಸಿದೆ. ಆದರೆ, ವಿಶ್ವದೆಲ್ಲೆಡೆ ಮಕ್ಕಳ ಈ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ.
‘ಆರಾಮ ಮಾಡುವುದು ಮತ್ತು ವಿರಾಮ ಪಡೆದುಕೊಳ್ಳುವುದು, ಆಟವಾಡುವುದು ಮತ್ತು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳುವುದು ಮಕ್ಕಳ ಹಕ್ಕು. ಈ ಮೂಲಕ ಅವರು ಸಾಂಸ್ಕೃತಿಕ ಜೀವನಕ್ಕೆ ಮತ್ತು ಕಲೆಗಳಿಗೆ ಯಾವುದೇ ನಿರ್ಬಂಧ ಇಲ್ಲದೆ ತೆರೆದುಕೊಳ್ಳಬೇಕು’ ಎನ್ನುತ್ತದೆ ವಿಶ್ವಸಂಸ್ಥೆ. ಆದರೆ, ಸಮಾಜದ ಇಡೀ ವ್ಯವಸ್ಥೆಯು ಮಕ್ಕಳನ್ನು ಅಂಕ ಗಳಿಸುವ
ಯಂತ್ರಗಳನ್ನಾಗಿಸುತ್ತಿದೆ.
ಶಾಲೆಗಳಲ್ಲಿ ಆಟದ ಸಮಯವನ್ನೇ ತೆಗೆದುಹಾಕಲಾಗುತ್ತಿದೆ ಇಲ್ಲವೆ ಕಡಿತಗೊಳಿಸಲಾಗುತ್ತಿದೆ. ಶಾಲೆಯೆಂದರೆ, ಆಟದಂಗಳ ಇರಲೇಬೇಕು ಎಂಬ ನಿಯಮವು ಈಗ ಸಡಿಲಗೊಂಡಿದೆ. ಆಟದ ಸಮಯವನ್ನು ಈಗ ಪಠ್ಯಗಳೇ ನುಂಗುತ್ತಿವೆ. ಇನ್ನು ತಾನು ಆಟಗಾರನಾಗಬೇಕು, ಆಟಗಾರ್ತಿ ಆಗಬೇಕು ಎಂದು ಮಕ್ಕಳು ಕನಸು ಕಾಣುವುದು ತಪ್ಪು ಎನ್ನುವ ಪರಿಸ್ಥಿತಿ ಇದೆ. ಆಟವನ್ನೇ ಪ್ರಧಾನ ವಾಗಿಸಿ, ಪಠ್ಯಗಳನ್ನು ಆಟದ ಮೂಲಕವೇ ಹೇಳಿಕೊಡುವ ಶಾಲೆಗಳು ಇತ್ತೀಚೆಗೆ ತೆರೆಯುತ್ತಿವೆ. ಆದರೆ, ಇಂಥ ಶಾಲೆಗಳಿಗೆ ಮಕ್ಕಳನ್ನು ಸೇರಿಸು ವುದು ಭವಿಷ್ಯಕ್ಕೆ ಹಾನಿ ಎನ್ನುವ ಮನಃಸ್ಥಿತಿ ಇದೆ.
‘ಪಠ್ಯವನ್ನು ಆಟದ ಮೂಲಕ ಹೇಳಿಕೊಡುವ ಶಾಲೆಗೆ ನಮ್ಮ ಮಕ್ಕಳನ್ನು ಸೇರಿಸಿದ್ದೆವು. ಇದಕ್ಕಾಗಿ ನಮ್ಮ ಸಂಬಂಧಿಕರು, ಸ್ನೇಹಿತರು ನಮ್ಮನ್ನು ದೂರಿದರು. ನಮ್ಮ ಮಗಳೊಬ್ಬಳು ಬ್ಯಾಡ್ಮಿಂಟನ್ ಆಟಗಾರ್ತಿ ಆಗಬೇಕು ಎಂದು ನಮ್ಮ ಬಳಿ ಹೇಳಿದಾಗ ನಮಗೆ ಸಂತೋಷವೇ ಆಯಿತು. ಆದರೆ, ಮತ್ತದೇ ಸಂಬಂಧಿಕರು, ಸ್ನೇಹಿತರು ದೂರಿದರು. ನನ್ನ ಗಂಡ ವೈದ್ಯ. ವೈದ್ಯನ ಮಗಳು ಆಟಗಾರ್ತಿಯಾಗುವುದು ಎಂದರೆ ಹೇಗೆ? ಓದು ಮುಖ್ಯ, ಮಗಳಿಗೆ ಓದಿಸಿ ಎಂದವರೇ ಹೆಚ್ಚು’ ಎನ್ನುತ್ತಾರೆ ಹೈದರಾಬಾದ್‌ನ ಪ್ರತೀಕಾ.
ಕ್ರೀಡೆ ಎಂಬುದು ಸಮಯ ವ್ಯರ್ಥದ ಚಟುವಟಿಕೆ, ಆಟಗಾರ, ಆಟಗಾರ್ತಿ ಆಗಬೇಕು ಎನ್ನುವುದು ತಪ್ಪು ನಿರ್ಧಾರ ಎನ್ನುವ ಈ ಗದ್ದಲದ ನಡುವೆ ಮಕ್ಕಳಿಗೆ ಏನು ಬೇಕು ಎಂದು ಕೇಳುವ ಗೊಡವೆಗೇ ಹೋಗದ ಸ್ಥಿತಿ ಇದೆ. ಆದರೆ, ‘ರೈಟ್ ಟು ಪ್ಲೇ’ ಎನ್ನುವ ಅಂತರರಾಷ್ಟ್ರೀಯ ಮಟ್ಟದ ಸ್ವಯಂ ಸೇವಾ ಸಂಸ್ಥೆಯೊಂದು ಈ ಕೆಲಸ ಮಾಡಿದೆ. ಅವರು ವರದಿಯೊಂದನ್ನು ತಯಾರಿಸಿದ್ದು, ‘ನಮಗೆ ಯಾಕೆ ಆಟ ಬೇಕು’ ಎಂಬುದನ್ನು ಮಕ್ಕಳೇ ಹೇಳಿಕೊಂಡಿದ್ದಾರೆ.
‘ಆಟವಾಡುತ್ತಲೇ ನಾವು ಸಂವಹನ ಕಲೆಯನ್ನು ಕರಗತ ಮಾಡಿಕೊಳ್ಳುತ್ತೇವೆ. ಆಡುವ ಸಮಯದಲ್ಲಿ ಜಗಳವಂತೂ ಆಗೇ ಆಗುತ್ತದೆ. ಆ ಸಂದರ್ಭದಲ್ಲಿ ನಾವೇ ನಮ್ಮ ಜಗಳಗಳನ್ನು ಇತ್ಯರ್ಥ ಮಾಡಿಕೊಳ್ಳುತ್ತೇವೆ. ನಮ್ಮ ಸ್ನೇಹವನ್ನು ನಾವು ಇನ್ನಷ್ಟು ಗಟ್ಟಿ ಮಾಡಿಕೊಳ್ಳುತ್ತೇವೆ’
‘ಆಟವಾಡುವಾಗ ನಾವು ನಮ್ಮ ಮನೆಯ ಪರಿಧಿಯನ್ನು ದಾಟಿ, ಎಲ್ಲರೊಟ್ಟಿಗೂ ಸೇರಿಕೊಳ್ಳಲು, ಎಲ್ಲರೊಂದಿಗೂ ಒಂದಾಗಲು ಸಾಧ್ಯವಾಗುತ್ತದೆ’
‘ಮನೆಯ ಮುಂದಿನ ರಸ್ತೆಯಲ್ಲೊ, ಮನೆಯ ಹತ್ತಿರದ ಮೈದಾನದಲ್ಲೊ ಆಟವಾಡುವಾಗ ಅಕ್ಕ–ಪಕ್ಕದ ಮನೆಯವರು, ನಮ್ಮ ಸ್ನೇಹಿತರೂ ಸೇರಿಯೇ ಆಟವಾಡುತ್ತೇವೆ. ನಮಗೆ ಜಾತಿ–ಧರ್ಮಗಳೆಂಬ ಸಾಮಾಜಿಕ ಕಟ್ಟಳೆ ಇಲ್ಲ’
‘ಆಟದ ಕಾರಣಕ್ಕಾಗಿ ನಾವು ಅಳುತ್ತೇವೆ, ನಗುತ್ತೇವೆ, ಸೋತರೆ ನೋವಾಗುತ್ತದೆ, ಬಿದ್ದಾಗ ಪೆಟ್ಟಾಗುತ್ತದೆ.. ಹೀಗೆ ನಮ್ಮ ಹಲವು ಭಾವನೆಗಳನ್ನು ನಾವು ನಿರ್ವಹಣೆ ಮಾಡಿಕೊಳ್ಳುತ್ತೇವೆ. ನಮ್ಮ ಈ ಭಾವನೆಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ ಕೂಡ’
‘ಆಟದ ಸಮಯದಲ್ಲಿ ನಾವು ಏಕಾಗ್ರತೆಯಿಂದ ಇರುತ್ತೇವೆ. ಆಟವಾಡುವಾಗ ನಮ್ಮ ಅನುಭವಕ್ಕೆ ಬಂದಿದ್ದನ್ನು, ಅದರಿಂದ ಕಲಿತ ಪಾಠವನ್ನು ನಾವು ನಮ್ಮ ಜೀವನದಲ್ಲಿಯೂ ಅಳವಡಿಸಿ
ಕೊಳ್ಳಲು ಪ್ರಯತ್ನಿಸುತ್ತೇವೆ’
‘ತಪ್ಪುಗಳು ಆಗುತ್ತವೆ. ಅದರಿಂದ ಕಲಿಯುತ್ತೇವೆ. ಮತ್ತೆ ಅದೇ ತಪ್ಪುಗಳು ಆಗದಂತೆ ಎಚ್ಚರವನ್ನೂ ವಹಿಸುತ್ತೇವೆ. ಸಮಸ್ಯೆಗಳಿಗೆ ವಿನೂತನಉಪಕ್ರಮಗಳನ್ನೂ ಕಂಡುಕೊಳ್ಳುತ್ತೇವೆ’ ಎಂಬುದು ಮಕ್ಕಳ ಅಭಿಪ್ರಾಯ.
ಮಕ್ಕಳ ಈ ಮೇಲಿನ ಅಭಿಪ್ರಾಯಗಳು ಹಲವು ಮುಖ್ಯ ವಿಚಾರಗಳನ್ನು ತೆರೆದಿಟ್ಟಿವೆ. ಆಟ ಎನ್ನುವುದು ಕೇವಲ ದೈಹಿಕ ಚಟುವಟಿಕೆಯಲ್ಲ, ಇದು ಮಕ್ಕಳಿಗೆ ಸಾಮರಸ್ಯದ ಪಾಠವೂ ಹೌದು ಎಂಬುದನ್ನು ಮಕ್ಕಳ ಈ ಅಭಿಪ್ರಾಯಗಳು ಹೇಳುತ್ತಿವೆ.
16 ಕೋಟಿ ಮಕ್ಕಳು ವಿಶ್ವದಾದ್ಯಂತ ಆಟದ ಬದಲಿಗೆ ದುಡಿಮೆಯಲ್ಲಿ ತೊಡಗಿದ್ದಾರೆ
71%ರಷ್ಟು ಮಕ್ಕಳು ಆಟವಾಡುವುದರಿಂದ ಖುಷಿಯಾಗಿರುತ್ತೇವೆ ಎಂದು ಹೇಳಿದ್ದಾರೆ
58%ರಷ್ಟು ಮಕ್ಕಳು ಆಟದ ಮೂಲಕ ತಾವು ಹೊಸ ಸ್ನೇಹಿತರನ್ನು ಹುಡುಕಿಕೊಂಡಿದ್ದೇವೆ ಎಂದು ಹೇಳಿದ್ದಾರೆ
41%ರಷ್ಟು ಮಕ್ಕಳು ತಮ್ಮ ಪೋಷಕರು ಮತ್ತು ಅಕ್ಕ–ಪಕ್ಕದ ಮನೆಯ ಹಿರಿಯರು ಆಟವಾಡುವುದನ್ನು ನಿಲ್ಲಿಸಿ ಎಂದು ಹೇಳುತ್ತಾರೆ ಎಂದು ಹೇಳಿಕೊಂಡಿದ್ದಾರೆ
‘ಆಟಕ್ಕೆ ಸಮಯ, ವ್ಯವಸ್ಥೆ ಬೇಕು’
ಒಂದು ಕಟುಂಬವನ್ನೇ ತೆಗೆದುಕೊಳ್ಳುವುದಾದರೆ, ಆಟ ಎಂಬುದು ನಿಕೃಷ್ಟ ಎನ್ನುವ ಭಾವನೆ ಇದೆ. ಆದರೆ, ಸಣ್ಣ ಮಕ್ಕಳು ಆಡಿ ಆಡಿಯೇ ಕಲಿಯುವುದು. ಮನೆಯಲ್ಲಿಯೂ ಆಟಕ್ಕೆ ಸಮಯವಿಲ್ಲ, ಶಾಲೆಗಳಲ್ಲಿಯೂ ಆಟಕ್ಕೆ ಸಮಯವಿಲ್ಲ. ಕಲಿಕಾ ವಿಧಾನದಲ್ಲಿಯೂ ಆಟಕ್ಕೆ ಪ್ರಾಮುಖ್ಯ ಇಲ್ಲದೇ ಇರುವುದು ಸಮಸ್ಯೆ. ಇನ್ನು ಬಾಲ್ಯ ವಿವಾಹ ಮಾಡುತ್ತಾರೆ. ಆಗ ವಿವಾಹವಾದ ಸಣ್ಣ ವಯಸ್ಸಿನ ಮಕ್ಕಳಿಗೆ ಯಾಕೆ ಆಟಬೇಕು ಎಂದು ಕೇಳಲಾಗುತ್ತದೆ. ಇನ್ನು ಯುದ್ಧದ ಸಮಯದಲ್ಲಿ ನಿರಾಶ್ರಿತರ ಶಿಬಿರಗಳಲ್ಲಿ ಇರುವ ಮಕ್ಕಳ ಆಟದ ಬಗ್ಗೆ ಯಾರು ಯೋಚಿಸುತ್ತಾರೆ? ಅಂಗವಿಕಲ ಮಕ್ಕಳು ಇರುತ್ತಾರೆ ಅವರು ಎಲ್ಲಿ ಆಡಬೇಕು? ಇಂಥ ಮಕ್ಕಳಿಗಾಗಿ ನಮ್ಮ ಬಳಿ ಯಾವ ವ್ಯವಸ್ಥೆ ಇದೆ? ನಮಗೆ ತಿಳಿಯದೆಯೇ ಹಕ್ಕುಗಳನ್ನು ಕಸಿದುಕೊಳ್ಳುವುದು ಒಂದು. ಆಟವು ಯಾವುದೇ ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಭಾಗ ಎಂದು ಭಾವಿಸದೇ ಅವರ ಹಕ್ಕುಗಳನ್ನು ಕಸಿದು ಕೊಳ್ಳುವುದು ಇನ್ನೊಂದು. ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಬೇಡಿ ಎನ್ನುತ್ತೇವೆ. ಆದರೆ, ಅವರು ಹೊರಗೆ ಎಲ್ಲಿಗೆ ಆಡಲು ಹೋಗಬೇಕು? ಅದಕ್ಕೇನು ವ್ಯವಸ್ಥೆ ಮಾಡಿದ್ದೇವೆ? ಇದಕ್ಕೆಲ್ಲಾ ಉತ್ತರ ಕಂಡುಕೊಳ್ಳಬೇಕಿದೆಕವಿತಾರತ್ನ, ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ನಿರ್ದೇಶಕಿ
ಆಧಾರ: ವಿಶ್ವ ಸಂಸ್ಥೆ, ‘ರೈಟ್ ಟು ಪ್ಲೇ’ ಮತ್ತು ‘ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್’ ಸ್ವಯಂ ಸೇವಾ ಸಂಸ್ಥೆಗಳ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.