ADVERTISEMENT

ಆಳ–ಅಗಲ: ಭಾರತದ ಚೆಸ್‌ ಕಲಿಗಳ ಮೇಲೆ ಕೌತುಕದ ಕಣ್ಣು

ನಾಗೇಶ್ ಶೆಣೈ ಪಿ.
Published 2 ಏಪ್ರಿಲ್ 2024, 23:38 IST
Last Updated 2 ಏಪ್ರಿಲ್ 2024, 23:38 IST
   

ಕೆನಡಾದ ಟೊರಾಂಟೊದಲ್ಲಿ ಇಂದಿನಿಂದ (ಬುಧವಾರ) ಕ್ಯಾಂಡಿಡೇಟ್ಸ್ ಚೆಸ್‌ ಟೂರ್ನಿ ನಡೆಯಲಿದೆ. ಇದು ವಿಶ್ವದ ಪ್ರತಿಷ್ಠಿತ ಟೂರ್ನಿ. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಟೂರ್ನಿಯಲ್ಲಿ ವಿಶ್ವದ ಎಂಟು ಮಂದಿ ಆಟಗಾರರು ಮಾತ್ರ ಆಡುವ ಅರ್ಹತೆ ಪಡೆಯುತ್ತಾರೆ. ಇದರಲ್ಲಿ ಗೆಲ್ಲುವ ಆಟಗಾರ ವಿಶ್ವ ಚಾಂಪಿಯನ್‌ಗೆ ಸವಾಲು ಹಾಕುವ ಅರ್ಹತೆ ಪಡೆಯುತ್ತಾರೆ. 

ಭಾರತ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಐದು ಬಾರಿಯ ವಿಶ್ವ ಚಾಂಪಿಯನ್ ಆಗಿದ್ದ ವಿಶ್ವನಾಥನ್ ಆನಂದ್ ಮಾತ್ರ ಈ ಹಿಂದೆ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ನಿಯಮಿತವಾಗಿ ಆಡಿದ್ದರು. ಕೊನೆಯ ಬಾರಿ 2014ರಲ್ಲಿ ಅವರು ಕ್ಯಾಂಡಿಡೇಟ್ಸ್‌ ಟೂರ್ನಿ ಗೆದ್ದು ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರಿಗೆ ಸವಾಲಿಗ (ಚಾಲೆಂಜರ್‌) ಆಗಿದ್ದರು. ಆದರೆ ಅಷ್ಟರಲ್ಲಾಗಲೇ ವಿಶ್ವದ ಅಗ್ರಮಾನ್ಯ ಆಟಗಾರರಾಗಿ ಬೆಳೆದಿದ್ದ ಕಾರ್ಲ್‌ಸನ್ ಎದುರು ಫೈನಲ್‌ನಲ್ಲಿ ಅವರು ಗೆಲ್ಲಲಾಗಲಿಲ್ಲ. ನಂತರ ಭಾರತದ ಯಾರೂ ಈ ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆದಿರಲಿಲ್ಲ.

ಆದರೆ ಈ ಬಾರಿಯ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ, ಭಾರತದ ಒಬ್ಬರಲ್ಲ, ಮೂವರು ಓಪನ್ ವಿಭಾಗದಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳ ಕಣ್ಣು ಭಾರತದ ಆಟಗಾರರ ಕಡೆ ನೆಟ್ಟಿದೆ. ಡಿ.ಗುಕೇಶ್, ಪ್ರಜ್ಞಾನಂದ ಜೊತೆಗೆ ಹಿರಿಯ ಆಟಗಾರ ವಿದಿತ್ ಗುಜರಾತಿ ಅರ್ಹತೆ ಪಡೆದಿದ್ದಾರೆ. ಇದೇ ಮೊದಲ ಬಾರಿ ಕ್ಯಾಂಡಿಡೇಟ್ಸ್‌ ಓಪನ್ ವಿಭಾಗದ ಜೊತೆಜೊತೆಯಲ್ಲೇ ಮಹಿಳಾ ವಿಭಾಗದ ಟೂರ್ನಿಯನ್ನೂ ನಡೆಸಲಾಗುತ್ತಿದೆ. ಇದರಲ್ಲೂ ಮೊದಲ ಸಲ ಭಾರತದ ಇಬ್ಬರು ಆಟಗಾರ್ತಿಯರು– ವೈಶಾಲಿ ಆರ್. (ಪ್ರಜ್ಞಾನಂದನ ಅಕ್ಕ) ಮತ್ತು ಅನುಭವಿ ಆಟಗಾರ್ತಿ ಕೋನೇರು ಹಂಪಿ– ಪಾಲ್ಗೊಳ್ಳುತ್ತಿರುವುದು ವಿಶೇಷ.

ADVERTISEMENT

ಆಟಗಾರರ ಆಯ್ಕೆ ಹೇಗೆ?

ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಎಂಟು ಆಟಗಾರರು ವಿವಿಧ ಮಾನದಂಡಗಳ ಆಧಾರದಲ್ಲಿ ಆಯ್ಕೆಯಾಗುತ್ತಾರೆ. ವಿಶ್ವಕಪ್‌ನಲ್ಲಿ ಮೊದಲ ಮೂರು ಸ್ಥಾನ ಪಡೆದವರು, ಫಿಡೆ ಗ್ರ್ಯಾಂಡ್‌ ಸ್ವಿಸ್ ಟೂರ್ನಿಯಲ್ಲಿ ಮೊದಲ ಎರಡು ಸ್ಥಾನ ಗಳಿಸಿದವರು, ಕಳೆದ ಬಾರಿಯ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಸೋತ ಆಟಗಾರ, ಹಿಂದಿನ ವರ್ಷ ಫಿಡೆ ಟೂರ್ನಿಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ಆಟಗಾರ ಮತ್ತು 2024ರ ಜನವರಿ ರ್‍ಯಾಂಕಿಂಗ್ ಪ್ರಕಾರ (ಕ್ಲಾಸಿಕಲ್ ವಿಭಾಗದ ಮತ್ತು ಈಗಾಗಲೇ ಬೇರೆ ವಿಭಾಗದಿಂದ ಆಯ್ಕೆಯಾಗಿರದ) ಅಗ್ರ ಆಟಗಾರ.

ಮೊದಲ ಸಲ ವಿಶ್ವಕಪ್ ಗೆದ್ದಿದ್ದ ಕಾರ್ಲ್‌ಸನ್‌ ಅವರೂ ಕ್ಯಾಂಡಿಡೇಟ್ಸ್‌ನಲ್ಲಿ ಆಡಬೇಕಾಗಿತ್ತು. ಆದರೆ ಅವರು ವಿಶ್ವ ಚಾಂಪಿಯನ್‌ಷಿಪ್‌ ಮಾದರಿಗೆ ಅಸಮಾಧಾನ ವ್ಯಕ್ತಪಡಿಸಿದ್ದು ಹಿಂದೆ ಸರಿದಿದ್ದಾರೆ. ವಿಶ್ವ ಚಾಂಪಿಯನ್ ಆಗಿದ್ದಾಗಲೇ ಅವರು ತಾವು 2023ರಲ್ಲಿ ಪಟ್ಟ ಉಳಿಸಿಕೊಳ್ಳಲು ಕಣಕ್ಕಿಳಿಯುವುದಿಲ್ಲ. ಆಡುವ ಪ್ರೇರಣೆ ಕಳೆದುಕೊಂಡಿರುವುದಾಗಿ ಹೇಳಿದ್ದರು.

ಹೀಗಾಗಿ ವಿಶ್ವಕಪ್‌ನಲ್ಲಿ ಎರಡು, ಮೂರನೇ ಸ್ಥಾನ ಪಡೆದ ಪ್ರಜ್ಞಾನಂದ, ಅಮೆರಿಕದ ಫ್ಯಾಬಿಯಾನ ಕರುವಾನ ಜೊತೆ ನಾಲ್ಕನೇ ಸ್ಥಾನ ಪಡೆದ ನಿಜತ್ ಅಬಸೋವ್ (ಅಜರ್‌ಬೈಜಾನ್‌) ಕೂಡ ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆದರು. ವಿದಿತ್ ಗುಜರಾತಿ ಫಿಡೆ ಗ್ರ್ಯಾಂಡ್‌ ಸ್ವಿಸ್‌ನಲ್ಲಿ ಮೊದಲ ಸ್ಥಾನ ಪಡೆದರೆ, ಅಮೆರಿಕದ ಹಿಕಾರು ನಕಾಮುರಾ ಎರಡನೇ ಸ್ಥಾನ ಪಡೆದು ಟೊರಾಂಟೊಕ್ಕೆ ಟಿಕೆಟ್‌ ಪಡೆದರು. ನೆಪೊಮ್‌ನಿಯಾಚಿ ಕಳೆದ ವರ್ಷದ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಆಡಿದ್ದ ಕಾರಣ ಅರ್ಹತೆ ಪಡೆದರು. ಫಿಡೆ ಸರ್ಕ್ಯೂಟ್‌ ಟೂರ್ನಿಗಳಲ್ಲಿ ಉತ್ತಮ ಸಾಧನೆಗಾಗಿ ಗುಕೇಶ್ ಆಯ್ಕೆಯಾದರೆ, ಜನವರಿ ಕೊನೆಯಲ್ಲಿ ರ‍್ಯಾಂಕಿಂಗ್ ಆಧಾರದಲ್ಲಿ ಅಲಿರೇಜಾ ಫಿರೋಜ (ಇರಾನ್‌ ಸಂಜಾತ ಫ್ರಾನ್ಸ್‌ ಆಟಗಾರ) ಅವಕಾಶ ಪಡೆದರು.

ಮಹಿಳೆಯರ ವಿಭಾಗದಲ್ಲಿ ಪಾಲ್ಗೊಳ್ಳುವ ಎಂಟು ಮಂದಿ: ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ (ವಿಶ್ವಕಪ್ ವಿಜೇತೆ), ಬಲ್ಗೇರಿಯಾದ ಸಲಿಮೊವಾ (ವಿಶ್ವಕಪ್ ಎರಡನೇ ಸ್ಥಾನ) ಉಕ್ರೇನ್‌ನ ಅನ್ನಾ ಮುಝಿಚುಕ್ (ಮೂರನೇ ಸ್ಥಾನ), ಚೀನಾದ ಲೀ ಟಿಂಗ್ಜಿ (ವಿಶ್ವ ಚಾಂಪಿಯನ್‌ಷಿಪ್‌ ರನ್ನರ್‌ ಅಪ್‌), ಭಾರತದ ಆರ್‌.ವೈಶಾಲಿ (ಗ್ರ್ಯಾಂಡ್‌ ಚೆಸ್‌ ವಿಜೇತೆ), ಚೀನಾದ ತಾನ್‌ ಝೊಂಗ್‌ಯಿ (ಗ್ರ್ಯಾಂಡ್‌ ಚೆಸ್‌ ರನ್ನರ್ ಅಪ್‌), ಕೋನೇರು ಹಂಪಿ (ಶ್ರೇಷ್ಠ ರ‍್ಯಾಂಕಿಂಗ್‌), ರಷ್ಯಾದ ಕ್ಯಾತರಿನಾ ಲಾಗ್ನೊ (ಫಿಡೆ ಸರ್ಕಿಟ್‌ನಲ್ಲಿ ಉತ್ತಮ ಸಾಧನೆ).

ಆದರೆ ದಿಗ್ಗಜ ವಿಶ್ವನಾಥನ್ ಆನಂದ್ ಸೇರಿದಂತೆ ವಿಶ್ವದ ಘಟಾನುಘಟಿ ಆಟಗಾರರು ಭಾರತದ ಆಟಗಾರರಿಗೆ ಗೆಲ್ಲುವ ಸಾಧ್ಯತೆಯ ಬಗ್ಗೆ ಭರವಸೆಯ ಮಾತುಗಳನ್ನಾಡಿಲ್ಲ. ‘ಭಾರತದ ಆಟಗಾರರು ಪ್ರಶಸ್ತಿ ಗೆಲ್ಲುವ ಮೊದಲು ಸಾಕಷ್ಟು ಹಾದಿ ಸವೆಸಬೇಕಾಗಿದೆ. ಮೊದಲು ಹೊಂದಿಕೊಳ್ಳಲಿ, ನಂತರ ಪ್ರಶಸ್ತಿ ಗೆಲ್ಲುವ ಕಡೆ ಗಮನಹರಿಸಬೇಕು’ ಎಂದು ಆನಂದ್ ಕಿವಿಮಾತು ಹೇಳಿದ್ದಾರೆ.

‘ಕರುವಾನಾ (ಅಮೆರಿಕ) ಮತ್ತು ನಕಾಮುರಾ (ಅಮೆರಿಕ) ಅವರಿಗೆ ಉತ್ತಮ ಅವಕಾಶವಿದೆ. ಕಳೆದ ವರ್ಷ ಫೈನಲ್ ಆಡಿದ್ದ ನೆಪೊಮ್‌ನಿಯಾಚಿ ಅವರನ್ನೂ ಕಡೆಗಣಿಸುವಂತಿಲ್ಲ’ ಎಂಬರ್ಥದಲ್ಲಿ ಕಾರ್ಲ್‌ಸನ್‌ ಮಾತನಾಡಿದ್ದಾರೆ. ಕರುವಾನಾ ಮತ್ತ ನಕಾಮುರಾ ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಕಾರ್ಲ್‌ಸನ್‌ ನಂತರ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. 33 ವರ್ಷದ ನೆಪೊಮ್‌ನಿಯಾಚಿ ಸತತ ಮೂರನೇ ವರ್ಷ ಕ್ಯಾಂಡಿಡೇಟ್ಸ್‌ನಲ್ಲಿ ಆಡುತ್ತಿದ್ದಾರೆ. ಅಬಸೋವ್‌ 114ನೇ ಸ್ಥಾನದಲ್ಲಿದ್ದಾರೆ.

ಕ್ಯಾಂಡಿಡೇಟ್ಸ್ ಟೂರ್ನಿ ಇತಿಹಾಸ

ಮೊದಲ ಬಾರಿ ಕ್ಯಾಂಡಿಡೇಟ್ಸ್ ಟೂರ್ನಿ ನಡೆದಿದ್ದು 1950ರಲ್ಲಿ. ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆದ ಆ ಟೂರ್ನಿಯಲ್ಲಿ 10 ಆಟಗಾರರು ಕಣದಲ್ಲಿದ್ದರು. ವಿಶ್ವ ಚಾಂಪಿಯನ್‌ ಮೈಕೆಲ್ ಬೊಟ್ವಿನಿಕ್ ಅವರಿಗೆ ಸವಾಲು ಹಾಕುವ ಆಟಗಾರನನ್ನು ನಿರ್ಧರಿಸಲು ಟೂರ್ನಿ ನಡೆಯಿತು. ಸೋವಿಯತ್ ರಷ್ಯಾದ ಡೇವಿಡ್‌ ಬ್ರಾನ್‌ಸ್ಟೀನ್ ಅಧಿಕೃತವಾಗಿ ಮೊದಲ ಚಾಲೆಂಜರ್ ಆದರು.

ಅಂದಿನಿಂದ 1991ರವರೆಗೆ ಪ್ರತಿ ಮೂರು ವರ್ಷಕ್ಕೆ ಒಮ್ಮೆ ಟೂರ್ನಿ ನಡೆಯುತಿತ್ತು. 1990ರ ದಶಕದ ಆರಂಭದಲ್ಲಿ ಫಿಡೆಯಲ್ಲಿ ಒಡಕು ಕಾಣಿಸಿತು. ರಷ್ಯಾದ ವಿಶ್ವ ಚಾಂಪಿಯನ್ ಗ್ಯಾರಿ ಕ್ಯಾಸ್ಪರೋವ್ ಮತ್ತು ಬ್ರಿಟನ್‌ನ ನೈಜೆಲ್ ಶಾರ್ಟ್ ನೇತೃತ್ವದಲ್ಲಿ 1993ರಲ್ಲಿ ಪ್ರೊಫೆಷನಲ್ ಚೆಸ್ ಅಸೋಸಿಯೇಷನ್ ಸ್ಥಾಪಿಸಿದರು. 2007ರಲ್ಲಿ ಮತ್ತೆ ಒಗ್ಗಟ್ಟು ಮೂಡಿ ಏಕೀಕೃತ ಕ್ಯಾಂಡಿಡೇಟ್ಸ್ ಟೂರ್ನಿ ನಡೆಸಲಾಯಿತು. 2013 ರಿಂದ ಎರಡು ವರ್ಷಕ್ಕೊಮ್ಮೆ ಈ ಟೂರ್ನಿ ನಡೆಯುತ್ತಿದೆ.  2020–21ರ ಟೂರ್ನಿ ರಷ್ಯಾದ ಏಕತಾರಿನ್‌ಬರ್ಗ್‌ನಲ್ಲಿ 2022ರ ಟೂರ್ನಿ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆದಿತ್ತು.

ಟೈಗ್ರಾನ್‌ ಪೆಟ್ರೋಸಿಯಾನ್ (1962), ಬಾಬಿ ಫಿಷರ್ (1971), ಅನತೋಲಿ ಕಾರ್ಪೋವ್, ಗ್ಯಾರಿ ಕ್ಯಾಸ್ಪರೋವ್ (1983–84) ಕ್ಯಾಂಡಿಡೇಟ್ಸ್‌ ಗೆದ್ದ ಕೆಲವು ವಿಶ್ವಪ್ರಸಿದ್ಧರು.

ಈ ಬಾರಿಯ ಟೂರ್ನಿ ಟೊರಾಂಟೊದ 'ಗ್ರೇಟ್ ಹಾಲ್‌'ನಲ್ಲಿ ಏ. 3 ರಿಂದ 23ರವರೆಗೆ ನಡೆಯಲಿದೆ. ಡಬಲ್ ರೌಂಡ್‌ ರಾಬಿನ್ (14 ಸುತ್ತು) ಮಾದರಿಯ ಟೂರ್ನಿಯಲ್ಲಿ ನಾಲ್ಕು ವಿಶ್ರಾಂತಿ (ಏ. 8. 12, 16 19) ದಿನಗಳೂ ಇವೆ.

ಈ ಬಾರಿ ಓಪನ್ ವಿಭಾಗದಲ್ಲಿ ಬಹುಮಾನದ ಮೊತ್ತ ಸುಮಾರು ₹4.5 ಕೋಟಿ ಇದೆ. ಮಹಿಳಾ ವಿಭಾಗದಲ್ಲಿ ಬಹುಮಾನ ನಿಧಿ ಸುಮಾರು ₹2.25 ಕೋಟಿ ಇದೆ.

ಆರ್‌.ಪ್ರಜ್ಞಾನಂದ

ರೇಟಿಂಗ್‌: 2747

ಪ್ರಸ್ತುತ ವಿಶ್ವ ಚೆಸ್‌ನಲ್ಲಿ ಭರವಸೆ ಮೂಡಿಸಿರುವ ಪ್ರತಿಭಾನ್ವಿತರಲ್ಲಿ ಅಗ್ರಪಂಕ್ತಿಯಲ್ಲಿ ಇರುವ ಆಟಗಾರ. 18 ವರ್ಷದ ‘ಪ್ರಗ್ಗು’ ಕಳೆದ ವರ್ಷ ವಿಶ್ವಕಪ್‌ ಫೈನಲ್ ತಲುಪಿದ್ದ ಅತಿ ಕಿರಿಯ ಆಟಗಾರ ಎನಿಸಿದ್ದರು. ಫೈನಲ್‌ನಲ್ಲಿ ಕಾರ್ಲ್‌ಸನ್‌ ಅವರಿಗೆ ಸೋತರೂ ಚೆನ್ನೈನ ಆಟಗಾರ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಕಳೆದ ಕೆಲವು ವರ್ಷಗಳಿಂದ ವಿವಿಧ ಟೂರ್ನಿಗಳಲ್ಲಿ ಕಾರ್ಲ್‌ಸನ್‌, ವೆಸ್ಲಿ ಸೊ, ತೀಮೊರ್ ರಾಜಾಬೊವ್ ಮೊದಲಾದ ಉನ್ನತ ರ‍್ಯಾಂಕಿನ ಆಟಗಾರರನ್ನು ಸೋಲಿಸಿದ್ದಾರೆ. ಪ್ರತಿಷ್ಠಿತ ಟಾಟಾ ಸ್ಟೀಲ್ ಚೆಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಮೇಲೆ ಜಯಗಳಿಸಿದ್ದರು. ಸಹಜವಾಗಿ ಈ ಆಟಗಾರನ ಪ್ರದರ್ಶನದ ಮೇಲೆ ಕುತೂಹಲ ಇದೆ.

ಡಿ.ಗುಕೇಶ್

ರೇಟಿಂಗ್‌: 2743

ದೊಮ್ಮರಾಜು ಗುಕೇಶ್ (17) ಈ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಅತಿ ಕಿರಿಯ ಆಟಗಾರ. 12 ವರ್ಷ, 7 ತಿಂಗಳಿದ್ದಾಗ ಜಿಎಂ ಪಟ್ಟ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಅತಿ ಕಿರಿಯ ಆಟಗಾರ. 2750 ರೇಟಿಂಗ್ ದಾಟಿದ ಅತಿ ಕಿರಿಯ ಆಟಗಾರನೆಂಬ ಶ್ರೇಯ ಕಳೆದ ವರ್ಷದ ಆಗಸ್ಟ್‌ನಲ್ಲಿ ಈ ಆಟಗಾರನದಾಗಿತ್ತು. 44ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತ–2 ತಂಡದ ಪರ ಆಡಿ ಅಗ್ರ ರ್‍ಯಾಂಕಿನ ಅಮೆರಿಕದ ಮೇಲೆ ಜಯಗಳಿಸುವಲ್ಲಿ ಗುಕೇಶ್ ಪಾತ್ರ ಪ್ರಮುಖವಾಗಿತ್ತು. ಡಸೆಲ್‌ಡಾರ್ಫ್‌ನಲ್ಲಿ ನಡೆದ ಡಬ್ಲ್ಯುಆರ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಕಾರ್ಲ್‌ಸನ್‌ ಮೇಲೆ ಜಯಗಳಿಸಿದ್ದ ಗುಕೇಶ್ ಅಲ್ಲಿ ಟ್ರೋಫಿ ಗೆದ್ದುಕೊಂಡಿದ್ದರು.

ಫಿಡೆ ಸರ್ಕೀಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪರಿಣಾಮ ಅವರು ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

ಆರ್‌.ವೈಶಾಲಿ

ರೇಟಿಂಗ್‌: 2475

ಪ್ರಜ್ಞಾನಂದ ಅವರ ಅಕ್ಕ, ಚೆನ್ನೈನ ಆರ್‌.ವೈಶಾಲಿ ಅವರು ಫಿಡೆ ಗ್ರ್ಯಾಂಡ್‌ ಸ್ವಿಸ್‌ ಟೂರ್ನಿ ಗೆಲ್ಲುವ ಮೂಲಕ ಈ ಟೂರ್ನಿಗೆ ಅರ್ಹತೆ ಪಡೆದಿದ್ದಾರೆ. ಇಲ್ಲಿ 11 ಸುತ್ತುಗಳಿಂದ 8.5 ಅಂಕ ಗಳಿಸಿದ್ದ ಅವರು ಒಂದೂ ಪಂದ್ಯ ಸೋತಿರಲಿಲ್ಲ. ಈ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಗ್ರ್ಯಾಂಡ್‌ಮಾಸ್ಟರ್ ಪಟ್ಟವನ್ನೂ ಪಡೆದಿದ್ದಾರೆ. ಕೊನೇರು ಹಂಪಿ, ಹಾರಿಕಾ ಬಿಟ್ಟರೆ ಈ ಸಾಧನೆ ಮಾಡಿದ ಭಾರತದ ಮೂರನೇ ಆಟಗಾರ್ತಿ. ಸೋದರ–ಸೋದರಿ ಗ್ರ್ಯಾಂಡ್‌ಮಾಸ್ಟರ್‌ ಆಗಿದ್ದು ಅದೇ ಮೊದಲು. ಪ್ರಸ್ತುತ ವಿಶ್ವಕ್ರಮಾಂಕದಲ್ಲಿ 15ನೇ ಸ್ಥಾನದಲ್ಲಿದ್ದಾರೆ. ಆದರೆ ಉತ್ತಮ ಸಾಧನೆಯಿಂದ ಕಳೆದೊಂದು ವರ್ಷದಿಂದ ಸಾಕಷ್ಟು ರ್‍ಯಾಂಕಿಂಗ್ ಪಾಯಿಂಟ್ಸ್ ಸಂಪಾದಿಸಿದ್ದಾರೆ.

ವಿದಿತ್ ಎಸ್‌. ಗುಜರಾತಿ

ರೇಟಿಂಗ್: 2727

2023ರ ಫಿಡೆ ಗ್ರ್ಯಾಂಡ್‌ ಸ್ವಿಸ್‌ನಲ್ಲಿ ತೋರಿದ ಉತ್ತಮ ಸಾಧನೆಯಿಂದ 29 ವರ್ಷದ ವಿದಿತ್ ಈ ಟೂರ್ನಿಗೆ ಅರ್ಹತೆ ಪಡೆದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಭಾರತ ಒಲಿಂಪಿಯಾಡ್ ತಂಡದ ಕಾಯಂ ಆಟಗಾರರಾಗಿರುವ ವಿದಿತ್‌ ಎರಡು ವರ್ಷಗಳಿಂದ ಪ್ರಮುಖ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಗ್ರ್ಯಾಂಡ್ ಸ್ವಿಸ್‌ ಜೊತೆ ಅವರು ಅಜರ್‌ಬೈಜಾನ್‌ನಲ್ಲಿ ನಡೆದ ವುಗಾರ್ ಗಶಿಮೊವ್ ಸ್ಮಾರಕ ಟೂರ್ನಿಯಲ್ಲೂ ಪ್ರಶಸ್ತಿ ಗೆದ್ದಿದ್ದಾರೆ. ಸ್ಥಿರ ಪ್ರದರ್ಶನ ನೀಡಿದರೆ ನಾಸಿಕ್‌ನ ಈ ಆಟಗಾರನನ್ನು ಕಡೆಗಣಿಸುವಂತಿಲ್ಲ. ಏಪ್ರಿಲ್‌ ರೇಟಿಂಗ್ ಪ್ರಕಾರ ವಿಶ್ವದಲ್ಲಿ 25ನೇ ರ್‍ಯಾಂಕ್ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.