ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶವು ಬಿಜೆಪಿಯ ವಿರುದ್ಧದ, ಆಡಳಿತ ಪಕ್ಷದ ವಿರೋಧದ ಜನಾದೇಶ ಎಂದು ಪರಿಭಾವಿಸುವುದು ಸೂಕ್ತವೇ? ಈ ಲೇಖನದ ಲೇಖಕರಲ್ಲಿ ಒಬ್ಬರಾದ, ಯೋಗೇಂದ್ರ ಯಾದವ್ ಅವರು ಈ ಪ್ರಶ್ನೆಗೆ ‘ಹೌದು’ ಎಂದೇ ಉತ್ತರಿಸುತ್ತಾರೆ. ಎನ್‌ಡಿಎ ಮೈತ್ರಿಕೂಟದ ಬಳಿ ಸರ್ಕಾರ ರಚನೆ ಮಾಡುವಷ್ಟು ಸಂಖ್ಯೆ ಇರಬಹುದು. ಆದರೆ, ಬಿಜೆಪಿಯು ತನ್ನ ಬಹುಮತವನ್ನು ಕಳೆದುಕೊಂಡಿದೆ. ತಮ್ಮ ಜನಪ್ರಿಯತೆಯನ್ನು ಕಾಪಾಡಿಕೊಳ್ಳುವಲ್ಲಿ ಸೋತಿದೆ.
ವಿರೋಧ ಪಕ್ಷಗಳಿಗೆ ಹೋಲಿಸಿದರೆ, ಬಿಜೆಪಿಯು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ನಿಜ. ಆದರೆ, ಈ ಬಾರಿ 400ಕ್ಕೂ ಅಧಿಕ ಸ್ಥಾನಗಳಿಂದ ಗೆಲ್ಲುತ್ತೇವೆ ಎಂದು ತಾನೇ ಸಾರ್ವಜನಿಕವಾಗಿ ಹೇಳಿಕೊಂಡಿದ್ದ ಅಂಕಿಯನ್ನೂ ಬಿಜೆಪಿಗೆ ಮುಟ್ಟಲಾಗಲಿಲ್ಲ. ಶೇ 50ರಷ್ಟು ಮತಗಳೂ ಬರಲಿಲ್ಲ. ಈ ಎಲ್ಲ ವಿಚಾರಗಳಿಗಿಂತ ಮುಖ್ಯವಾದುದು ಬೇರೆಯದಿದೆ. ಹಣದ ಪ್ರಾಬಲ್ಯ, ಮಾಧ್ಯಮ, ಇಡೀ ಸರ್ಕಾರಿ ವ್ಯವಸ್ಥೆ, ಅದರಲ್ಲೂ ಚುನಾವಣಾ ಆಯೋಗ ಸಾಲು ಸಾಲಾಗಿ ಈ ಚುನಾವಣೆಯಲ್ಲಿ ವಿರೋಧ ಪಕ್ಷಗಳ ವಿರುದ್ಧ ನಿಂತಿದ್ದವು.
ಈ ವಿಶ್ಲೇಷಣೆಗಳಿಗೆ ವ್ಯತಿರಿಕ್ತವಾದ ವಿಚಾರವೂ ಒಂದಿದೆ. ಅದು ಬಿಜೆಪಿಯ ಮತ ಪ್ರಮಾಣಕ್ಕೆ ಸಂಬಂಧಿಸಿದ್ದು. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ 37.4ರಷ್ಟು ಮತ ಪ್ರಮಾಣವನ್ನು ಗಳಿಸಿಕೊಂಡಿತ್ತು. ಈ ಪ್ರಮಾಣವು ತುಸುವೇ ಕುಸಿದು, ಶೇ 36.6ರಷ್ಟಕ್ಕೆ ನಿಂತಿದೆ. ಒಡಿಶಾ ರಾಜಕಾರಣದಲ್ಲಿ ಬಿಜೆಪಿಯು ನಾಟಕೀಯ ಎನ್ನುವಂತೆ ಪ್ರವೇಶ ಪಡೆದಿದೆ. ಕೇರಳದ ಗೋಡೆಯನ್ನು ಒಡೆದಿದೆ. ಆಂಧ್ರ ಪ್ರದೇಶ ಹಾಗೂ ಪಂಜಾಬ್‌ನಲ್ಲಿ ಬಿಜೆಪಿಯು ತನ್ನ ಅಸ್ತಿತ್ವವನ್ನು ಇನ್ನಷ್ಟು ಆಳವಾಗಿಸಿಕೊಂಡಿದೆ. ಭಾರತದ ಎಲ್ಲ ರಾಜ್ಯಗಳಲ್ಲೂ ತನ್ನ ಮತ ಪ್ರಮಾಣವನ್ನು ಎರಡಂಕಿಗೆ ಏರಿಸಿಕೊಳ್ಳುವ ಮೂಲಕ ಬಿಜೆಪಿಯು ರಾಷ್ಟ್ರಮಟ್ಟದಲ್ಲಿ ಹೆಜ್ಜೆಗುರುತನ್ನು ಮೂಡಿಸಿದೆ. ಈ ಎಲ್ಲ ಹಿನ್ನೆಲೆಯಲ್ಲಿಯೇ ಬಿಜೆಪಿಯು ತಾನು ಜಯಸಾಧಿಸಿದ್ದೇನೆ ಎಂದು ಹೇಳುತ್ತಿರುವುದು. ಬಿಜೆಪಿಯು ತನ್ನ ಬೇರುಗಳನ್ನು ಇನ್ನಷ್ಟು ಚಾಚಿಕೊಂಡು, ಇನ್ನಷ್ಟು ಆಳಕ್ಕೆ ಇಳಿದಿದೆ. ಇದೇ ಕಾರಣಕ್ಕೆ, ಬಿಜೆಪಿಗೆ ಸ್ಥಾನಗಳು ಕಡಿಮೆ ಬಂದಿವೆ ಎಂದು ಸಂಭ್ರಮ ಪಡುವುದು ಆತುರವಾದೀತು ಎಂದು ಹಲವು ವಿಶ್ಲೇಷಕರು ಎಚ್ಚರಿಸಿದ್ದಾರೆ.
ಈ ಎಲ್ಲ ಲೆಕ್ಕಾಚಾರವು, ಪಕ್ಷವೊಂದು ಕೆಲವು ಪ್ರದೇಶದಲ್ಲಿ ಸೋತಿತು, ಕೆಲವು ಪ್ರದೇಶಗಳಲ್ಲಿ ಗೆದ್ದಿತು ಎಂಬ ವಿಶ್ಲೇಷಣೆ ಅಷ್ಟೇ ಅಲ್ಲ ಎಂಬುದು ರಾಜ್ಯವಾರು ಮತ ಪ್ರಮಾಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ ತಿಳಿಯುತ್ತದೆ. ಆಯಾ ರಾಜ್ಯಗಳ ಆಡಳಿತ ಪಕ್ಷದ ವಿರುದ್ಧ ಜನರು ಮತ ಹಾಕಿದ್ದಾರೆ. ಬಿಜೆಪಿಯು ಎಲ್ಲ ರಾಜ್ಯಗಳಲ್ಲಿ ಆಡಳಿತದಲ್ಲಿ ಇಲ್ಲ ಎನ್ನುವುದನ್ನೂ ಗಮನಿಸಬೇಕು.
ಈ ಲೋಕಸಭಾ ಚುನಾವಣೆಯಲ್ಲಿ ಎರಡು ಭಿನ್ನ ರೀತಿಯ ಬಿಜೆಪಿಯು ಕಣಕ್ಕಿಳಿದಿತ್ತು. ಒಂದು: ಅಧಿಕಾರದಲ್ಲಿರುವ ಬಿಜೆಪಿ (ಪ್ರಭುತ್ವ ಬಿಜೆಪಿ). ಎರಡು: ವಿರೋಧ ಪಕ್ಷದಲ್ಲಿದ್ದು, ಸವಾಲೊಡ್ಡಿದ್ದ ಬಿಜೆಪಿ (ಸವಾಲುಗಾರ ಬಿಜೆಪಿ). ಅಧಿಕಾರದಲ್ಲಿರುವ ಬಿಜೆಪಿಗೆ ಚುನಾವಣಾ ಹಿನ್ನಡೆಯಾಗಿದೆ. ಆದರೆ, ಸವಾಲೊಡ್ಡಿದ್ದ ಬಿಜೆಪಿಗೆ ಒಳ್ಳೆಯ ಫಲಿತಾಂಶವೇ ಬಂದಿದೆ. ಕೆಲವು ರಾಜ್ಯಗಳಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇತ್ತು. ಈ ಕಾರಣಕ್ಕಾಗಿ ಅದಕ್ಕೆ ಕಡಿಮೆ ಸ್ಥಾನಗಳು ದೊರೆತವು. ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಆದ ಮತ ಮತ್ತು ಸ್ಥಾನ ನಷ್ಟವನ್ನು, ಕೆಲವು ರಾಜ್ಯಗಳಲ್ಲಿ ಅದರ ಪಾಲಿಗೆ ಬಂದ ಉತ್ತಮ ಫಲಿತಾಂಶವು ಮರೆಮಾಚಿಸಿದೆ. ಆದರೆ, ಇದು ಅಲ್ಪಾವಧಿಯಾಗಿರಲಿದೆ. ವಿವಿಧ ರಾಜ್ಯಗಳಲ್ಲಿ ಬಂದ ಹೆಚ್ಚುವರಿ ಸ್ಥಾನಗಳು ಮತ್ತು ಮತಗಳು ಮುಂದೆಯೂ ದೊರೆಯುತ್ತಲೇ ಇರುತ್ತವೆ ಎಂದು ನಂಬಿಕೊಂಡು ಕೂರಲು ಸಾಧ್ಯವಿಲ್ಲ.
ಒಂದನೇ ಚಾರ್ಟ್‌ನಲ್ಲಿ ನಮೂದಿಸಲಾದ ಸಂಖ್ಯೆಗಳನ್ನೇ ನೋಡೋಣ. ದೇಶದ ಮೂರನೇ ಎರಡರಷ್ಟು ಭಾಗದಲ್ಲಿ (ನಿರ್ದಿಷ್ಟವಾಗಿ 356 ಸ್ಥಾನಗಳು) ಬಿಜೆಪಿಯು ಪ್ರಧಾನ ಪಕ್ಷವಾಗಿದೆ. ಇಲ್ಲಿ ಹಲವು ರಾಜ್ಯಗಳಲ್ಲಿ ಬಿಜೆಪಿಯು ಆಡಳಿತ ಪಕ್ಷದಲ್ಲಿ ಇಲ್ಲ. ಆದರೂ ಬಿಜೆಪಿಯೇ ಪ್ರಬಲ ಪಕ್ಷ. ಈ ಪ್ರದೇಶವು ಮಹಾರಾಷ್ಟ್ರದಿಂದ ಗುಜರಾತ್‌ವರೆಗೆ, ಬಿಹಾರದಿಂದ ಜಾರ್ಖಂಡ್‌ವರೆಗೆ ಇದೆ. ಜೊತೆಗೆ, ಕರ್ನಾಟಕದದಿಂದ ಹಿಮಾಚಲದವರೆಗೂ ವ್ಯಾಪಿಸಿದೆ. ಆದರೆ, ಈ ಕೆಲವು ರಾಜ್ಯಗಳಲ್ಲಿ ಬಿಜೆಪಿಯು ಆಡಳಿತದಲ್ಲಿ ಇಲ್ಲ. ತಾನು ಆಡಳಿತದಲ್ಲಿ ಇರುವ ರಾಜ್ಯಗಳಲ್ಲಿನ ಒಟ್ಟು ಕ್ಷೇತ್ರಗಳಲ್ಲಿ ಬಿಜೆಪಿಯು ಕಳೆದ ಲೋಕಸಭಾ ಚುನಾವಣೆಯಲ್ಲಿ 271 ಸ್ಥಾನಗಳನ್ನು ಗಳಿಸಿತ್ತು. ಈ ಬಾರಿ ಈ 271 ಸ್ಥಾನಗಳಲ್ಲಿ 75 ಸ್ಥಾನಗಳನ್ನು ಕಳೆದುಕೊಂಡಿದೆ. ಕರ್ನಾಟಕದಿಂದ ಬಿಹಾರದವರೆಗೆ ವ್ಯಾಪ್ತಿಯಲ್ಲಿ ಶೇ 5ರಷ್ಟು ಮತಗಳು ಬಿಜೆಪಿಗೆ ವಿರುದ್ಧವಾಗಿ ಬಿದ್ದಿವೆ.
ಆದರೆ, ಇನ್ನುಳಿದ ಮೂರನೇ ಒಂದು ಭಾಗದ ದೇಶದಲ್ಲಿ (187 ಸ್ಥಾನಗಳು) ಬಿಜೆಪಿಯು ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಈ ರಾಜ್ಯಗಲ್ಲಿ ಬಿಜೆಪಿಯು ಸವಾಲುಗಾರನಾಗಿತ್ತು. ಪ್ರಬಲ ಪಕ್ಷಗಳಾದ ಒಡಿಶಾದ ಬಿಜೆಡಿ, ಆಂಧ್ರ ಪ್ರದೇಶದ ವೈಎಸ್‌ಆರ್ ಕಾಂಗ್ರೆಸ್, ಪಶ್ಚಿಮ ಬಂಗಾಳದ ಟಿಎಂಸಿಯ ಆಡಳಿತಕ್ಕೆ ಬಿಜೆಪಿಯು ತೀವ್ರ ಸವಾಲೊಡ್ಡಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಗಳಿಸಿಕೊಂಡ ಸ್ಥಾನಗಳಿಗಿಂತ ಹೆಚ್ಚುವರಿಯಾಗಿ 12 ಸ್ಥಾನಗಳನ್ನು ಅದು ಗಳಿಸಿಕೊಂಡಿದೆ. ಶೇ 6ರಷ್ಟು ಮತಗಳೂ ಹೆಚ್ಚಿಗೆ ಬಿದ್ದಿವೆ. ಈ ರಾಜ್ಯಗಳಲ್ಲಿ ಹೆಚ್ಚಿಸಿಗೊಂಡ ಮತಪ್ರಮಾಣವೇ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಆದ ಮತನಷ್ಟವನ್ನು ಕೇವಲ 1 ಶೇಕಡಾವಾರು ಅಂಶಕ್ಕಷ್ಟೇ ಸೀಮಿತವಾಗಲು ಕಾರಣವಾಗಿದೆ.
ನಮ್ಮ ಮುಂದಿರುವ ಪ್ರಶ್ನೆ: ವಿರೋಧ ಪಕ್ಷದಲ್ಲಿದ್ದುಕೊಂಡು ಆಡಳಿತ ಪಕ್ಷಕ್ಕೆ ಸವಾಲೊಡ್ಡುವ ‘ಸವಾಲುಗಾರ ಬಿಜೆಪಿ’ಯು, ಅಧಿಕಾರದಲ್ಲಿರುವ ‘ಪ್ರಭುತ್ವ ಬಿಜೆಪಿ’ಯನ್ನು ಎಲ್ಲಿಯವರೆಗೆ ರಕ್ಷಿಸುತ್ತದೆ? ಈ ಪರಿಸ್ಥಿತಿಯು ಹೆಚ್ಚು ಕಾಲ ಇರುವುದಿಲ್ಲ ಮತ್ತು ಈ ರಾಜ್ಯಗಳಲ್ಲಿ ಇನ್ನಷ್ಟು ಸ್ಥಾನಗಳನ್ನು ಗಳಿಸಿಕೊಳ್ಳುವ ಅವಕಾಶವೂ ಬಿಜೆಪಿಗಿಲ್ಲ.
ಬಿಜೆಪಿಯು ತಕ್ಕಮಟ್ಟಿಗೆ ಎಲ್ಲ ರಾಜ್ಯಗಳಲ್ಲಿಯೂ ಪ್ರಬಲ ಪಕ್ಷವಾಗಿಯೇ ಬೆಳೆದಿದೆ. ಆದರೆ, ಈ ಲಾಭವೂ ಹೆಚ್ಚು ದಿನ ಇರುವುದಿಲ್ಲ. ನರೇಂದ್ರ ಮೋದಿ ಅವರ ವರ್ಚಸ್ಸು ಕ್ಷೀಣಿಸುತ್ತಿದೆ. ಹಿಂದೆ ಕಾಂಗ್ರೆಸ್ ಸರ್ಕಾರಗಳು ಉದುರಿದಂತೆ, ಇಂದಿಲ್ಲ ನಾಳೆ ಬಿಜೆಪಿಯ ಸರ್ಕಾರಗಳೂ ಉದುರುತ್ತವೆ. ಹೀಗಾಗದಂತೆ ತಡೆಯಬೇಕು ಮತ್ತು ತಾನು ಸರ್ಕಾರದಲ್ಲಿಯೇ ಉಳಿಯಬೇಕು ಎಂದಾದರೆ ಬಿಜೆಪಿಯು ಬೇರೆ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಆದರೆ ಈ ಚುನಾವಣೆ ಮತ್ತು ಅದರ ಫಲಿತಾಂಶವು ಬಿಜೆಪಿ ಅಂತಹ ಆತ್ಮವಿಶ್ವಾಸವನ್ನಂತೂ ಒದಗಿಸುತ್ತದೆ ಅನಿಸುವುದಿಲ್ಲ.
ಲೇಖಕರು: ಮೊದಲ ಲೇಖಕ– ಭಾರತ ಜೋಡೊ ಯಾತ್ರೆಯ ರಾಷ್ಟ್ರೀಯ ಸಂಚಾಲಕ, ಎರಡನೇ ಲೇಖಕ– ಸಮೀಕ್ಷಾ ಸಂಶೋಧನೆ ಸಂಶೋಧಕ, ಮೂರನೇ ಲೇಖಕ–ಸಂಶೋಧಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.