ವಲಸೆಯು ಜೀವ ವಿಕಾಸದಷ್ಟೇ ಹಳೆಯದು. ಶಿಕ್ಷಣ, ಕೆಲಸ, ಆಂತರಿಕ ಬಿಕ್ಕಟ್ಟು, ಹವಾಮಾನ ವೈಪರೀತ್ಯ ಮುಂತಾದ ಕಾರಣಗಳಿಗಾಗಿ ಹಳ್ಳಿಯಿಂದ ನಗರಕ್ಕೆ, ನಗರದಿಂದ ನಗರಕ್ಕೆ, ದೇಶದಿಂದ ದೇಶಕ್ಕೆ ವಲಸೆ ಹೋಗುತ್ತಾರೆ. ಭಾರತದಿಂದ ವಲಸೆ ಹೋಗುವವರು ಜಗತ್ತಿನಲ್ಲಿಯೇ ಅತಿ ಹೆಚ್ಚು. ವಲಸಿಗರಿಂದ ಭಾರತಕ್ಕೆ ಅತಿ ಹೆಚ್ಚು ಹಣ ಹರಿದುಬರುತ್ತಿದ್ದು, ಅದರ ಮೊತ್ತ ಹೊಸ ದಾಖಲೆ ನಿರ್ಮಿಸಿದೆ. ವಿಶ್ವ ವಲಸೆಯ ಅಂಕಿಅಂಶಗಳು ಆಯಾ ದೇಶಗಳ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಯನ್ನೂ ಹೇಳುತ್ತವೆ
ಜಗತ್ತಿನಲ್ಲಿ ಬಹುತೇಕರು ತಾವು ಹುಟ್ಟಿದ ನೆಲದಲ್ಲಿಯೇ ಜೀವಿಸುತ್ತಿದ್ದು, 30 ಮಂದಿಯಲ್ಲಿ ಒಬ್ಬರು ಮಾತ್ರ ವಲಸಿಗರಾಗಿದ್ದಾರೆ. ಆದರೂ ಜಾಗತಿಕ ಮಟ್ಟದಲ್ಲಿ ವಲಸಿಗರ ಸಂಖ್ಯೆ ದೊಡ್ಡದಾಗಿದ್ದು, ವರ್ಷದಿಂದ ವರ್ಷಕ್ಕೆ ಅವರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯು ಜಾಗತಿಕ ಮಟ್ಟದಲ್ಲಿ ವಲಸೆಗೆ ಬಹಳ ದೊಡ್ಡ ಕಾರಣವಾಗಿದೆ. ಇವುಗಳ ಜತೆಗೆ ರಾಜಕೀಯ ಅಧಿಕಾರ, ಅಸಮರ್ಥ ಸರ್ಕಾರಗಳು, ಆಹಾರ ಉತ್ಪಾದನೆಯ ಜಾಗತೀಕರಣ ಮತ್ತು ಇತರ ಸಾಮಾಜಿಕ ಅಂಶಗಳೂ ದೊಡ್ಡ ಮಟ್ಟದ ವಲಸೆಗೆ ಕಾರಣವಾಗಿವೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಸ್ಥೆಯ (ಐಒಎಂ) ‘ವಿಶ್ವ ವಲಸೆ ವರದಿ– 2024’ ಉಲ್ಲೇಖಿಸಿದೆ.
ಜಗತ್ತಿನ ಶೇ 3.6ರಷ್ಟು ಮಂದಿ ವಲಸಿಗರಾಗಿದ್ದಾರೆ. ಅಂತರರಾಷ್ಟ್ರೀಯ ವಲಸೆಯು ಹೆಚ್ಚು ಸುರಕ್ಷಿತ, ವ್ಯವಸ್ಥಿತ ಹಾಗೂ ನಿರಂತರವಾಗಿರುತ್ತದೆ. ಆದರೆ, ವಿಪತ್ತು, ಬಿಕ್ಕಟ್ಟು ಮತ್ತು ಶಿಕ್ಷೆಯ ಕಾರಣಕ್ಕೆ ಅಂತರರಾಷ್ಟ್ರೀಯ ವಲಸೆಗೆ ಗುರಿಯಾಗುವವರೂ ಇದ್ದಾರೆ. 1970ರಲ್ಲಿ ಜನಸಂಖ್ಯೆಯ ಶೇ 2.3ರಷ್ಟಿದ್ದ ಅಂತಾರಾಷ್ಟ್ರೀಯ ವಲಸಿಗರ ಸಂಖ್ಯೆಯು 2000ದ ಹೊತ್ತಿಗೆ ಶೇ 2.8 ಆಗಿತ್ತು. 2020ರ ಹೊತ್ತಿಗೆ ಅದು ಶೇ 3.6 ಆಗಿದೆ.
ಜಗತ್ತಿನಾದ್ಯಂತ ವಲಸೆ ಎನ್ನುವುದು ಒಂದೇ ರೀತಿ ಇಲ್ಲ. ಆರ್ಥಿಕ, ಭೌಗೋಳಿಕ, ಜನಸಂಖ್ಯೆಗೆ ಸಂಬಂಧಿಸಿದ ಕಾರಣಗಳಿಂದ ಜನ ವಲಸೆ ಹೋಗುತ್ತಿದ್ದಾರೆ. ಇದು ವಲಸೆ ಕಾರಿಡಾರ್‌ಗಳ ಸೃಷ್ಟಿಗೆ ಕಾರಣವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಮುಂದುವರಿದ ಆರ್ಥಿಕತೆಗಳುಳ್ಳ ದೇಶಗಳಿಗೆ ವಲಸೆ ಹೋಗುವುದು ದೊಡ್ಡ ವಲಸೆ ಕಾರಿಡಾರ್‌ಗಳ ಸೃಷ್ಟಿಗೆ ಕಾರಣವಾಗಿದ್ದರೆ, (ಉದಾಹರಣೆಗೆ, ಅಮೆರಿಕ, ಯುಎಒ, ಸೌದಿ ಅರೇಬಿಯಾ, ಜರ್ಮನಿಯಂಥ ದೇಶಗಳಿಗೆ ಹೋಗುವುದು), ಸಂಘರ್ಷಪೀಡಿತ ಪ್ರದೇಶಗಳಿಂದ ಸುರಕ್ಷಿತವಾಗಿರುವ ದೇಶಗಳಿಗೆ ಹೋಗುವುದು ಮತ್ತೊಂದು ರೀತಿಯ ದೊಡ್ಡ ವಲಸೆ ಕಾರಿಡಾರ್‌ಗೆ ಕಾರಣವಾಗಿದೆ (ಸಿರಿಯಾದಿಂದ ಟರ್ಕಿಗೆ ಹೋಗುವುದು– ಇದು ಜಗತ್ತಿನ ಎರಡನೇ ಅತಿ ದೊಡ್ಡ ವಲಸೆ ಕಾರಿಡಾರ್ ಆಗಿದೆ).
ಯುರೋಪ್ ಮತ್ತು ಏಷ್ಯಾ ಖಂಡಗಳಿಂದ ವಲಸೆ ಹೋಗುವವರ ಪ್ರಮಾಣ ಹೆಚ್ಚಾಗಿದೆ. ಈ ಖಂಡಗಳಿಂದ ಕ್ರಮವಾಗಿ 8.7 ಕೋಟಿ ಮತ್ತು 8.6 ಕೋಟಿ ಮಂದಿ ಹೊರದೇಶಗಳಿಗೆ ವಲಸೆ ಹೋಗಿದ್ದಾರೆ. ಜಗತ್ತಿನ ಶೇ 61ರಷ್ಟು ಅಂತರರಾಷ್ಟ್ರೀಯ ವಲಸಿಗರು ಈ ಎರಡು ಖಂಡಗಳಿಗೆ ಸೇರಿದ್ದಾರೆ. 460 ಕೋಟಿ ಜನಸಂಖ್ಯೆ ಇರುವ ಏಷ್ಯಾದಲ್ಲಿ ಶೇ 40ರಷ್ಟು ಮಂದಿ ಅಂತರ
ರಾಷ್ಟ್ರೀಯ ವಲಸಿಗರಾಗಿದ್ದಾರೆ. ಇದರಲ್ಲಿ ಆರು ದೇಶಗಳ ಜನರೇಶೇ 20ರಷ್ಟು ಮಂದಿ ಇದ್ದಾರೆ. ಅದರಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ, ಭಾರತಕ್ಕೆ ಹೊರದೇಶಗಳಿಂದ 48.78 ಲಕ್ಷ ವಲಸಿಗರು ಬಂದಿದ್ದು, ಅವರ ಪ್ರಮಾಣವು ಶೇ 0.4 ಆಗಿದೆ. ಅತಿ ಹೆಚ್ಚು ಮಂದಿ ವಲಸೆ ಹೋಗುತ್ತಿರುವುದು (ಶೇ 79.6) ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮುಂದಿರುವ ದೇಶಗಳಿಗೆ ಎನ್ನುವುದು ಗಮನಾರ್ಹ. ಐಒಎಂ ವರದಿಯಲ್ಲಿ ಜಗತ್ತಿನ ದೇಶಗಳನ್ನು ಅವುಗಳ ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್‌ಡಿಐ 2022), ಜಾಗತಿಕ ಶಾಂತಿ ಸೂಚ್ಯಂಕ (ಜಿಪಿಐ 2023), ಇನ್‌ಫರ್ಮ್ ರಿಸ್ಕ್ ಇಂಡೆಕ್ಸ್ (ಇನ್‌ಫರ್ಮ್ 2024), ಪಾಸ್‌ಪೋರ್ಟ್ ಸೂಚ್ಯಂಕ (2024) ಮುಂತಾದವನ್ನು ಆಧರಿಸಿ ಪಟ್ಟಿ ಮಾಡಲಾಗಿದೆ. ಅದರಲ್ಲಿ ಭಾರತದ ಸ್ಥಾನ ಸಾಧಾರಣವಾಗಿದ್ದು, ಮಧ್ಯಮ ದೇಶಗಳ ಪಟ್ಟಿಯಲ್ಲಿದೆ.
ವಲಸೆಯ ಜತೆಗೆ ಕೆಲವು ದೇಶಗಳಲ್ಲಿ ನಿರ್ವಸಿತರಾಗುತ್ತಿರುವವರ ಸಂಖ್ಯೆಯೂ ದೊಡ್ಡದಿದೆ. ಭಾರತವೂ ಸೇರಿದಂತೆ ಪಾಕಿಸ್ತಾನ, ಬಾಂಗ್ಲಾದೇಶ ಮುಂತಾದ ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಪ್ರವಾಹದಿಂದ; ಯುರೋಪ್, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದಲ್ಲಿ ಸಂಘರ್ಷದ ಸ್ಥಿತಿ, ಹಿಂಸಾಚಾರ, ಹವಾಮಾನ ವೈಪರೀತ್ಯಗಳು ಮತ್ತು ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟಿನಂಥ ಕಾರಣಗಳಿಂದ ಲಕ್ಷಾಂತರ ಮಂದಿ ನಿರ್ವಸಿತರಾದ ಬಗ್ಗೆ ಐಒಎಂ ವರದಿ ಉಲ್ಲೇಖಿಸಿದೆ.
ಮಾನವನ ಇತಿಹಾಸದಲ್ಲಿ ಎಂದೂ ಇಲ್ಲದ ರೀತಿಯಲ್ಲಿ ಇಂದು ಹೆಚ್ಚು ಮಂದಿಯನ್ನು ಬಲವಂತವಾಗಿ ನಿರ್ವಸಿತರನ್ನಾಗಿ ಮಾಡಲಾಗುತ್ತಿದೆ. ಹವಾಮಾನ ಬದಲಾವಣೆ, ಪ್ರಾಕೃತಿಕ ವಿಕೋಪಗಳು ಸೇರಿದಂತೆ ಹಲವು ಕಾರಣಗಳಿಂದ 2050ರ ಹೊತ್ತಿಗೆ ಆರು ಖಂಡಗಳ 21.6 ಕೋಟಿ ಮಂದಿ ತಮ್ಮ ದೇಶಗಳನ್ನು ತೊರೆದು ವಲಸೆ ಹೋಗಲಿದ್ದಾರೆ ಎಂದು ವರದಿ ಅಂದಾಜಿಸಿದೆ.
ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ, 2020ರ ಜುಲೈ ಮಧ್ಯಭಾಗದಲ್ಲಿ, ಜಾಗತಿಕವಾಗಿ 27.5 ಲಕ್ಷ ಮಂದಿ ವಲಸಿಗರು ಸ್ವದೇಶಕ್ಕೆ ಮರಳಲಾಗದೇ ಬಿಕ್ಕಟ್ಟಿನಲ್ಲಿ ಸಿಲುಕಿದ್ದರು. ಹೆಚ್ಚು ಜನರು ಸಿಲುಕಿದ್ದು ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ. ಭಾರತದ ಹಲವು ಭಾಗಗಳಲ್ಲಿ ಕೋವಿಡ್‌ನಿಂದ (ಆಂತರಿಕ ವಲಸಿಗರ) ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಹೆಣ್ಣುಮಕ್ಕಳು ವಿದ್ಯಾಭ್ಯಾಸ ತ್ಯಜಿಸಬೇಕಾಯಿತು. ಅನೇಕ ಹೆಣ್ಣುಮಕ್ಕಳು ಬಾಲ್ಯವಿವಾಹಕ್ಕೆ ಗುರಿಯಾದರು ಎಂದು ಮಕ್ಕಳ ಹಕ್ಕು ರಕ್ಷಣಾ ಸಮಿತಿಗಳು ವರದಿ ನೀಡಿದವು. ಅನೇಕ ಸಾವುಗಳು ಸಂಭವಿಸಿದ್ದು ಕೂಡ ವರದಿಯಾಗಿವೆ.
ಉದ್ಯೋಗನಷ್ಟ, ಸಂಬಳ ಕಡಿತ, ಸಾಮಾಜಿಕ ಭದ್ರತೆಯ ಕೊರತೆ ಅನೇಕ ಭಾರತೀಯ ವಲಸಿಗರನ್ನು ಸಾಲ ಮತ್ತು ಅಭದ್ರತೆಗೆ ಈಡುಮಾಡಿತು. ಅಂತರರಾಷ್ಟ್ರೀಯ ವಲಸಿಗರು ಭಾರತಕ್ಕೆ ವಾಪಸ್ಸಾಗಲು ವಿಮಾನದ ಟಿಕೆಟ್‌ಗಳಿಗಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಬೇಕಾಗಿ ಬಂತು. ಜತೆಗೆ ಕ್ವಾರಂಟೈನ್ ಕೇಂದ್ರಗಳಿಗೆ, ಕೋವಿಡ್ ಪರೀಕ್ಷೆಗೂ ಹಣ ವೆಚ್ಚ ಮಾಡಿದರು. ವಿದೇಶಾಂಗ ಸಚಿವಾಲಯದ ಮಾಹಿತಿಯ ಪ್ರಕಾರ, ಲಾಕ್‌ಡೌನ್ ಘೋಷಣೆ ಮಾಡಿದ ನಂತರದ ಆರು ತಿಂಗಳಲ್ಲಿ 13.85 ಲಕ್ಷ ಭಾರತೀಯ ಪೌರರು ದೇಶಕ್ಕೆ ವಾಪಸ್ ಆಗಿದ್ದರು. ದೇಶದ ಒಳಗಿನ ವಲಸಿಗರು ಸಂಚಾರ ನಿರ್ಬಂಧಗಳಿಂದಾಗಿ ತೀವ್ರ ಬಿಕ್ಕಟ್ಟನ್ನು ಎದುರಿಸಿದರು. ಅದರಿಂದ ಗ್ರಾಮೀಣ ಭಾಗದಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ಕೆಲಸದ ಮೇಲೆ ತೀವ್ರವಾದ ಪರಿಣಾಮಗಳು ಉಂಟಾದವು.
ನಗರಗಳಿಗೆ ವಲಸೆ ಹೋಗುತ್ತಿದ್ದ ಕಾರ್ಮಿಕ ವರ್ಗದ ಕೆಲಸಗಾರರಲ್ಲಿ ಶೇ 10ರಷ್ಟು ಕುಸಿತ ಉಂಟಾಗಿತ್ತು. ಇದರಿಂದ ನಿರ್ಮಾಣ ವಲಯ ಸೇರಿದಂತೆ ಹಲವು ವಲಯಗಳು ಕಾರ್ಮಿಕರ ಕೊರತೆಯನ್ನು ಅನುಭವಿಸಿದವು. ದೇಶದ ಆಂತರಿಕ ಪುರುಷ ವಲಸಿಗರ ಮರುವಲಸೆಯ ಪ್ರಮಾಣ ಶೇ 51.6 ಆದರೆ, ಮಹಿಳಾ ವಲಸಿಗರ ಮರುವಲಸೆಯ ಪ್ರಮಾಣ ಶೇ 11 ಆಗಿತ್ತು. ಭಾರತದ ಆಂತರಿಕ ವಲಸೆಯಲ್ಲಿ ಲಿಂಗ ಅಂತರ ಇರುವುದು ಸ್ಪಷ್ಟವಾಗಿದೆ. ಕೋವಿಡ್ ಕಾಲದ ಈ ಅಂತರವನ್ನು ಮತ್ತಷ್ಟು ವಿಶ್ಲೇಷಿಸಲು ದತ್ತಾಂಶದ ಕೊರತೆ ಇದೆ. ಅದರಲ್ಲೂ ಲಿಂಗತ್ವ ಅಲ್ಪಸಂಖ್ಯಾತರ ವಲಸೆ ಸ್ಥಿತಿಗತಿ ಅರಿಯುವ ದಿಸೆಯಲ್ಲಿ ಅಂಕಿಸಂಖ್ಯೆಗಳ ತೀವ್ರ ಕೊರತೆ ಕಂಡುಬಂದಿದೆ.
ಆಧಾರ: ಅಂತರರಾಷ್ಟ್ರೀಯ ವಲಸೆ ಸಂಸ್ಥೆಯ (ಐಒಎಂ) ‘ವಿಶ್ವ ವಲಸೆ ವರದಿ– 2024’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.