ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವುದ್ದಾರೆ. ಈ ಕಠಿಣ ಪರಿಸ್ಥಿತಿಯಿಂದ ಹೊರಬರಲು ‘ಅವರು ಐಪಿಎಲ್‌ನಿಂದ ವಿಶ್ರಾಂತಿ ತೆಗೆದುಕೊಳ್ಳಬೇಕು’ ಎಂದು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.
ಆದರೆ ಕಳೆದ ಎರಡು ವರ್ಷಗಳಲ್ಲಿ ವಿರಾಟ್ ಹಲವು ಬಾರಿ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಆದರೂ ಏಕಾಗ್ರತೆಯನ್ನು ಸಾಧಿಸುವಲ್ಲಿ ಎಡವಿದ್ದು ಎದ್ದು ಕಾಣುತ್ತಿದೆ. ಇದಕ್ಕೆ ಕಾರಣವನ್ನು ವಿಶ್ಲೇಷಿಸುವ ಪ್ರಯತ್ನ ತಜ್ಞರಿಂದ ನಡೆಯುತ್ತಿದೆ.
‘ಎಲ್ಲ ಶ್ರೇಷ್ಠ ಆಟಗಾರರೂ ತಮ್ಮ ವೃತ್ತಿ ಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಒಂದು ಹಂತದಲ್ಲಿ ಈ ಕಠಿಣ ಪರಿಸ್ಥಿತಿಯಿಂದ ಹೊರಬಂದು ಯಶಸ್ವಿಯಾಗಿದ್ದಾರೆ. ಅವರು ರನ್ ಬರವನ್ನು ನಿವಾರಿಸಿಕೊಂಡು ಉತ್ತುಂಗಕ್ಕೇರುವುದು ಖಚಿತ’ ಎಂದು ಆರ್‌ಸಿಬಿ ಮುಖ್ಯ ಕೋಚ್ ಸಂಜಯ್ ಬಾಂಗರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ಕಳೆದ ಐದು ಇನಿಂಗ್ಸ್‌ಗಳಲ್ಲಿ ವಿರಾಟ್ (9,0,0,12 ಮತ್ತು 1) ತೀರಾ ಅಗ್ಗಕ್ಕೆ ಔಟಾಗಿದ್ದಾರೆ. ಎಲ್ಲ ಮಾದರಿಗಳಲ್ಲಿಯೂ ಸೇರಿದಂತೆ ಕಳೆದ 102 ಪಂದ್ಯಗಳಲ್ಲಿ ಅವರು ಶತಕವನ್ನೇ ಬಾರಿಸಿಲ್ಲ. ಸಚಿನ್ ತೆಂಡೂಲ್ಕರ್ ಅವರ ಶತಕಗಳ ದಾಖಲೆಯನ್ನು ಮೀರಿ ನಿಲ್ಲುವ ಭರವಸೆ ಮೂಡಿಸಿರುವ ಆಟಗಾರ ವಿರಾಟ್.
1983ರಲ್ಲಿ ಸುನಿಲ್ ಗಾವಸ್ಕರ್ ಮತ್ತು 100ನೇ ಶತಕ ದಾಖಲಿಸುವ ಹಾದಿಯಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಇಂತಹದ್ದೇ ಹಿನ್ನಡೆ ಅನುಭವಿಸಿದ್ದರು. ನಂತರ ಅವರು ತಮ್ಮ ಲಯಕ್ಕೆ ಮರಳಿದ್ದರು. ಅದೇ ರೀತಿ ವಿರಾಟ್ ಕೂಡ ಮತ್ತೆ ಫಾರ್ಮ್‌ಗೆ ಮರಳುವ ವಿಶ್ವಾಸವೂ ವ್ಯಕ್ತವಾಗುತ್ತಿದೆ.
‘ವಿರಾಟ್ ಅನುಭವಿ ಆಟಗಾರ. ಅವರು ಉನ್ನತ ಸ್ಥಾನದಲ್ಲಿರುವ ಬ್ಯಾಟರ್. ಆ ಹಂತದಲ್ಲಿ ಅವರಲ್ಲಿ ಸ್ವಯಂ ಅವಲೋಕನ ಮಾಡಿಕೊಳ್ಳುವ ಸಾಮರ್ಥ್ಯವು ಅಪಾರವಾಗಿರುತ್ತದೆ. ರವಿಶಾಸ್ತ್ರಿಯವರು ವಿರಾಟ್ ಅವರೊಂದಿಗೆ ನಿಕಟವಾಗಿದ್ದಾರೆ. ಕೋಚ್ ಆಗಿದ್ದಾಗ ವಿರಾಟ್ ಅವರೊಂದಿಗೆ ಬಹಳಷ್ಟು ಸಮಯ ವಿನಿಯೋಗಿಸಿದ್ದಾರೆ. ಆದ್ದರಿಂದ ಅವರ ಸಲಹೆಯು ಮೌಲ್ಯಯುತವಾದದ್ದೆ. ಈ ವಿಷಯದಲ್ಲಿ ವಿರಾಟ್ ಅವರೇ ಪರಿಹಾರ ಕಂಡುಕೊಳ್ಳಲು ಸಮರ್ಥರು’ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಶೈಕ್ಷಣಿಕ ವಿಭಾಗದ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಸುಜಿತ್ ಸೋಮಸುಂದರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಕಳೆದ ಎರಡು ವರ್ಷಗಳಲ್ಲಿ ವಿರಾಟ್ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಹಲವು ಭಾವನಾತ್ಮಕ ಬದಲಾವಣೆಗಳಾಗಿವೆ. ಎಲ್ಲ ಮಾದರಿಗಳ ಕ್ರಿಕೆಟ್ ತಂಡಗಳ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದಾರೆ. ಈ ವಿಷಯದಲ್ಲಿ ಬಿಸಿಸಿಐ ಜೊತೆಗಿನ ಮುಸುಕಿನ ಗುದ್ದಾಟವನ್ನೂ ಅನುಭವಿಸಿದ್ಧಾರೆ. ಇವೆಲ್ಲವೂ ಅವರ ಆಟದ ಮೇಲೆ ಪ್ರಭಾವ ಬೀರಿರಬಹುದು.
‘ಇಲ್ಲಿಯವರೆಗಿನ ವೈಫಲ್ಯಗಳನ್ನು ಮೀರಿ ನಿಲ್ಲುವ ಸಾಮರ್ಥ್ಯ ಮತ್ತು ಇನ್ನೂ ಏಳೆಂಟು ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚುವ ಪ್ರತಿಭೆ ವಿರಾಟ್‌ಗೆ ಇದೆ. ಅವರು ಐಪಿಎಲ್‌ನಿಂದ ವಿಶ್ರಾಂತಿ ಪಡೆದು ತಮ್ಮನ್ನು ಭವಿಷ್ಯಕ್ಕಾಗಿ ಸಿದ್ಧಗೊಳಿಸಿಕೊಳ್ಳಬೇಕು’ ಎಂದು ರವಿಶಾಸ್ತ್ರಿ ಬುಧವಾರ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ.
ಆದರೆ, ವಿರಾಟ್ ಸದ್ಯ ವಿಶ್ರಾಂತಿ ಪಡೆಯುವ ಮನಸ್ಥಿತಿಯಲ್ಲಿದ್ದಂತೆ ಕಾಣುತ್ತಿಲ್ಲ. ಸತತವಾಗಿ ಆಡುತ್ತಲೇ ಲಯಕ್ಕೆ ಮರಳುವ ಪ್ರಯತ್ನ ಅವರ ಹಾವಭಾವದಲ್ಲಿ ಪ್ರತಿಫಲಿಸುತ್ತಿದೆ.
ವಿರಾಟ್ ವಿಶ್ರಾಂತಿ ವಿವರಗಳು
* 2020ರ ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೆ ಕೋವಿಡ್ ನಿಂದಾಗಿ ಕ್ರಿಕೆಟ್ ಸ್ಥಗಿತವಾಗಿತ್ತು.
* 2021ರ ಜನವರಿಯಲ್ಲಿ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ಪಿತೃತ್ವ ರಜೆ ತೆಗೆದುಕೊಂಡಿದ್ದು
* ಐಪಿಎಲ್ 14ನೇ ಆವೃತ್ತಿಯು ಕೋವಿಡ್ ಎರಡನೇ ಅಲೆಯಿಂದಾಗಿ ಅರ್ಧಕ್ಕೆ ಸ್ಥಗಿತ. ಆಗಲೂ ಸುಮಾರು ಎರಡು ತಿಂಗಳು ವಿಶ್ರಾಂತಿ
* 2021ರ ಜುಲೈನಲ್ಲಿ ನ್ಯೂಜಿಲೆಂಡ್ ಎದುರಿನ ವಿಶ್ವ ಟೆಸ್ಟ್ ಫೈನಲ್ ನಂತರ ಇಂಗ್ಲೆಂಡ್ ಸರಣಿಗೂ ಮುನ್ನ ಮೂರು ವಾರಗಳ ವಿಶ್ರಾಂತಿ
* ಟಿ20 ವಿಶ್ವಕಪ್ ಟೂರ್ನಿಯ ನಂತರ ನ್ಯೂಜಿಲೆಂಡ್ ಎದುರು ಭಾರತದಲ್ಲಿಯೇ ನಡೆ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದರು
* ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಬೆನ್ನುನೋವಿನ ಕಾರಣಕ್ಕೆ ಎರಡನೇ ಪಂದ್ಯದಲ್ಲಿ ಆಡಿರಲಿಲ್ಲ
* ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಯ ಕೊನೆಯ ಪಂದ್ಯ ಮತ್ತು ಶ್ರೀಲಂಕಾ ಎದುರಿನ ಟಿ20 ಸರಣಿಯಿಂದಲೂ ಅವರು ಹಿಂದೆ ಸರಿದಿದ್ದರು.
ವಿರಾಟ್ ಅನುಭವಿ ಆಟಗಾರ. ಅವರು ಉನ್ನತ ಸ್ಥಾನದಲ್ಲಿರುವ ಬ್ಯಾಟರ್. ಆ ಹಂತದಲ್ಲಿ ಅವರಲ್ಲಿ ಸ್ವಯಂ ಅವಲೋಕನ ಮಾಡಿಕೊಳ್ಳುವ ಸಾಮರ್ಥ್ಯವು ಅಪಾರವಾಗಿರುತ್ತದೆ. ರವಿಶಾಸ್ತ್ರಿ ಅವರು ವಿರಾಟ್ ಅವರೊಂದಿಗೆ ನಿಕಟವಾಗಿದ್ದಾರೆ. ಕೋಚ್ ಆಗಿದ್ದಾಗ ವಿರಾಟ್ ಅವರೊಂದಿಗೆ ಬಹಳಷ್ಟು ಸಮಯ ವಿನಿಯೋಗಿಸಿದ್ದಾರೆ. ಆದ್ದರಿಂದ ಅವರ ಸಲಹೆಯು ಮೌಲ್ಯಯುತವಾದದ್ದೆ. ಈ ವಿಷಯದಲ್ಲಿ ವಿರಾಟ್ ಅವರೇ ಪರಿಹಾರ ಕಂಡುಕೊಳ್ಳಲು ಸಮರ್ಥರು.
ಸುಜಿತ್ ಸೋಮಸುಂದರ್,ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಶೈಕ್ಷಣಿಕ ವಿಭಾಗದ ಮುಖ್ಯಸ್ಥ
ವಿರಾಟ್ ಕೊಹ್ಲಿ ತಮ್ಮ ವೈಭವದ ದಿನಗಳನ್ನು ನೆನಪಿಸಿಕೊಳ್ಳಬೇಕು. ಆ ಅಮೋಘ ಆಟದ ಸ್ಮರಣೆಗಳೇ ಅವರಿಗೆ ಪ್ರೇರಣೆಯಾಗಬೇಕು. ಅದರಿಂದ ಇಂದು ಎದುರಿಸುತ್ತಿರುವ ಕೆಟ್ಟ ಪರಿಸ್ಥಿತಿಯಿಂದ ಹೊರಬರುವ ದಾರಿ ಸಿಗಲಿದೆ.
ಯುವರಾಜ್ ಸಿಂಗ್, ಭಾರತ ತಂಡದ ಮಾಜಿ ಕ್ರಿಕೆಟಿಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.