ಜಿಎಚ್‌ಐನಲ್ಲಿ ಭಾರತದ ಸ್ಥಾನವನ್ನು ನಿರ್ಧರಿಸುವಲ್ಲಿ ಅಪೌಷ್ಟಿಕತೆ, ಮಕ್ಕಳ ಕುಂಠಿತ ಬೆಳವಣಿಗೆ, ಮಕ್ಕಳ ಮರಣ ಪ್ರಮಾಣ ಮತ್ತು ಕಡಿಮೆ ತೂಕದ ಮಕ್ಕಳ ಪ್ರಮಾಣವನ್ನು ಪರಿಗಣಿಸಲಾಗಿದೆ. ಈ ಎಲ್ಲಾ ಸೂಚಿಗಳಲ್ಲಿ ಭಾರತವು ಉತ್ತಮ ಸ್ಥಿತಿಯಲ್ಲಿ ಇಲ್ಲ. ಕೆಲವು ಸೂಚಿಗಳಲ್ಲಿ ಭಾರತವು ಅಪಾಯಕಾರಿ ಸ್ಥಿತಿಯಲ್ಲಿ ಇದೆ ಎಂದು ಜಿಎಚ್‌ಐನಲ್ಲಿ ವಿವರಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿರುವ ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5’ರ (ಎನ್‌ಎಫ್‌ಎಚ್‌ಎಸ್) ವರದಿಯಲ್ಲೂ, ಈ ಸೂಚಿಗಳನ್ನು ವಿವರಿಸಲಾಗಿದೆ. ದೇಶದಲ್ಲಿ ಅಪೌಷ್ಟಿಕತೆಯು ಅಪಾಯಕಾರಿ ಮಟ್ಟದಲ್ಲಿದೆ ಎಂಬುದನ್ನು ಈ ವರದಿಯ ದತ್ತಾಂಶಗಳೇ ಹೇಳುತ್ತವೆ. ಕೆಲವು ಸೂಚಿಗಳಲ್ಲಿ ಪ್ರಗತಿ ಸಾಧಿಸಲಾಗಿದೆಯಾದರೂ, ಕೆಲವು ಸೂಚಿಗಳಲ್ಲಿ ಹಿಮ್ಮುಖ ಪ್ರಗತಿ ದಾಖಲಾಗಿದೆ. ಅಂತಹ ಸೂಚಿಗಳಲ್ಲಿ ಈ ಹಿಂದಿಗಿಂತ, ಕೆಟ್ಟ ಸ್ಥಿತಿಗೆ ಹೋಗಿದ್ದೇವೆ ಎಂಬುದನ್ನು ಈ ದತ್ತಾಂಶಗಳು ಹೇಳುತ್ತವೆ. ಜಿಎಚ್‌ಐನಲ್ಲಿ ವಿವರಿಸಲಾಗಿರುವ ಅಂಶಗಳನ್ನೇ ಎನ್‌ಎಫ್‌ಎಚ್‌ಎಸ್ ದತ್ತಾಂಶಗಳು ಪ್ರತಿಧ್ವನಿಸುತ್ತವೆ. ಒಟ್ಟಾರೆ ಈ ದತ್ತಾಂಶಗಳೆಲ್ಲವೂ ಭಾರತದಲ್ಲಿ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ಇದೆ ಎಂಬುದನ್ನೇ ಹೇಳುತ್ತವೆ.
ರಕ್ತಹೀನತೆ: ಭಾರಿ ಏರಿಕೆ
ಅಪೌಷ್ಟಿಕತೆ ಅಥವಾ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ಇದೆ ಎಂಬುದನ್ನು ರಕ್ತಹೀನತೆಯು ಸೂಚಿಸುತ್ತದೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಹೀಗಾಗಿ ದೇಶದದಲ್ಲಿನ ಅಪೌಷ್ಟಿಕತೆಯ ಪ್ರಮಾಣವನ್ನು ನಿರ್ಧರಿಸಲುರಕ್ತಹೀನತೆಯ ಪ್ರಮಾಣವನ್ನು ಪರಿಗಣಿಸಲಾಗುತ್ತದೆ. ಭಾರತದಲ್ಲಿ ರಕ್ತಹೀನತೆಯ ಪ್ರಮಾಣ ಅತ್ಯಧಿಕ ಮಟ್ಟದಲ್ಲಿದೆ ಮತ್ತು ಅದು ಏರಿಕೆಯಾಗುತ್ತಿದೆ ಎಂದು ಎನ್‌ಎಫ್‌ಎಚ್‌ಎಸ್ ದತ್ತಾಂಶಗಳು ಹೇಳುತ್ತವೆ.
ದೇಶದ ಎಲ್ಲಾ ವಯಸ್ಸಿನ ಮತ್ತು ಲಿಂಗದ ಜನರಲ್ಲಿ ರಕ್ತಹೀನತೆ ದೊಡ್ಡ ಪ್ರಮಾಣದಲ್ಲೇ ಇದೆ. ಪುರುಷರಿಗೆ ಹೋಲಿಸಿದರೆ, ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರ ಪ್ರಮಾಣ ಒಂದು ಪಟ್ಟು ಹೆಚ್ಚು ಎಂದು ಈ ದತ್ತಾಂಶಗಳು ಹೇಳುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ದೇಶದಲ್ಲಿನ 6 ತಿಂಗಳಿಂದ 59 ತಿಂಗಳ ವಯಸ್ಸಿನ ಮಕ್ಕಳಲ್ಲಿ ರಕ್ತಹೀನತೆ ಪ್ರಮಾಣ ವಿಪರೀತ ಪ್ರಮಾಣದಲ್ಲಿದೆ ಎಂಬುದನ್ನು ಈ ದತ್ತಾಂಶಗಳು ಹೇಳುತ್ತವೆ. ಒಟ್ಟಾರೆ ಇವು ಅಪೌಷ್ಟಿಕತೆ ಅಥವಾ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ಅಥವಾ ಹಸಿವಿನ ಪ್ರಮಾಣವನ್ನು ಸೂಚಿಸುತ್ತವೆ.
* 2015–16ಕ್ಕೆ ಹೋಲಿಸಿದರೆ, 2019–21ರಲ್ಲಿ ಎಲ್ಲಾ ವಯಸ್ಸಿನವರಲ್ಲೂ ರಕ್ತಹೀನತೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಸಿವು ನೀಗಿಸುವಲ್ಲಿ ಸರ್ಕಾರ ಕೈಗೊಂಡಿರುವ ಯೋಜನೆಗಳು ನಿರೀಕ್ಷಿತ ಪರಿಣಾಮ ಬೀರುತ್ತಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.
* ಈ ವಯಸ್ಸಿನ ಮಕ್ಕಳಲ್ಲಿ ರಕ್ತಹೀನತೆ ಪ್ರಮಾಣ ಅತ್ಯಧಿಕ ಪ್ರಮಾಣದಲ್ಲಿದೆ. 2015–16ರಲ್ಲಿ ಶೇ 58.6ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದರೆ, 2019–21ರಲ್ಲಿ ಇಂತಹ ಮಕ್ಕಳ ಪ್ರಮಾಣ ಶೇ 67.1ಕ್ಕೆ ಏರಿಕೆಯಾಗಿದೆ. ಈ ವಯಸ್ಸಿನ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸಲು, ಸರ್ಕಾರವು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಕಾರ್ಯಕ್ರಮಗಳ ಮೂಲಕ ಕಬ್ಬಿಣಾಂಶ ಹೆಚ್ಚಿಸುವ ಮಾತ್ರೆಗಳು, ಪೌಷ್ಟಿಕ ಆಹಾರ, ಹಾಲು–ಮೊಟ್ಟೆಗಳನ್ನು ನೀಡಲಾಗುತ್ತಿದೆ. ಆದರೂ, ಈ ವಯಸ್ಸಿನ ಮಕ್ಕಳಲ್ಲಿ ರಕ್ತಹೀನತೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.
* 15–49 ವರ್ಷದ ಮಹಿಳೆಯರು ಮತ್ತು ಗರ್ಭಿಣಿಯರಲ್ಲಿ ರಕ್ತಹೀನತೆಯು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ಪೂರೈಕೆ ಮಾಡಲು ಹಲವು ಕಾರ್ಯಕ್ರಮಗಳನ್ನು ಸರ್ಕಾರ ನಡೆಸುತ್ತಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಇವನ್ನು ಒದಗಿಸಲಾಗುತ್ತಿದೆ. ಆದರೆ, ಇವು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ ಎಂಬುದನ್ನು ರಕ್ತಹೀನತೆ ಪ್ರಮಾಣದಲ್ಲಿ ಆಗಿರುವ ಏರಿಕೆಯು ಸೂಚಿಸುತ್ತದೆ.
* ಮಕ್ಕಳು ಮತ್ತು ಮಹಿಳೆಯರಿಗೆ ಹೋಲಿಸಿದರೆ, ಪುರುಷರಲ್ಲಿ ರಕ್ತಹೀನತೆ ಪ್ರಮಾಣ ಕಡಿಮೆ ಇದೆ. ಆದರೆ, ಪ್ರತಿ ಮೂವರಲ್ಲಿ ಒಬ್ಬ ಪುರುಷ ರಕ್ತಹೀನತೆಯಿಂದ ಬಳಲುತ್ತಿದ್ದಾನೆ ಎಂಬುದನ್ನು ಈ ದತ್ತಾಂಶಗಳು ಹೇಳುತ್ತವೆ. ಆಹಾರ ಭದ್ರತಾ ಕಾಯ್ದೆ ಅಡಿ ಒದಗಿಸಲಾಗುತ್ತಿರುವ ಪಡಿತರದ ಫಲಾನುಭವಿಗಳಲ್ಲಿ ಈ ಪುರುಷರೂ ಬರುತ್ತಾರೆ. ಆದರೆ, ಈ ಅವಧಿಯಲ್ಲಿ ಪುರುಷರಲ್ಲೂ ರಕ್ತಹೀನತೆ ಪ್ರಮಾಣ ಏರಿಕೆಯಾಗಿದೆ. ಪೌಷ್ಟಿಕ ಆಹಾರ ಪೂರೈಕೆಗೆ ಮತ್ತು ರಕ್ತಹೀನತೆ ನಿವಾರಣೆಗೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.
ರಕ್ತಹೀನತೆ ಗ್ರಾಮೀಣ ಪ್ರದೇಶದಲ್ಲೇ ಅಧಿಕ
ನಗರ ಪ್ರದೇಶದಲ್ಲಿನ ಜನರಿಗೆ ಹೋಲಿಸಿದರೆ, ಗ್ರಾಮೀಣ ಪ್ರದೇಶದ ಜನರಲ್ಲೇ ರಕ್ತಹೀನತೆ ಪ್ರಮಾಣ ಹೆಚ್ಚು. ಎಲ್ಲಾ ವಯಸ್ಸಿನವರಲ್ಲೂ ಪರಿಸ್ಥಿತಿ ಹೀಗೇ ಇದೆ.
ಸರ್ಕಾರಗಳಿಗೆ ಸವಾಲಾದ ಅಪೌಷ್ಠಿಕತೆ
ದೇಶದ 5 ವರ್ಷದೊಳಗಿನ ಮಕ್ಕಳು ಗಂಭೀರ ಸ್ವರೂಪದ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದನ್ನುರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್‌ಎಫ್‌ಎಚ್‌ಎಸ್) 2019–21ರ ವರದಿಯ ದತ್ತಾಂಶಗಳು ದೃಢಪಡಿಸುತ್ತವೆ. ಈ ಹಿಂದಿನ 2015–16ನೇ ಸಾಲಿನ ಸಮೀಕ್ಷೆಯ ದತ್ತಾಂಶಗಳ ಜೊತೆ 2019–21ನೇ ಸಾಲಿನ ಸಮೀಕ್ಷೆಯ ದತ್ತಾಂಶಗಳನ್ನು ಹೋಲಿಸಿದರೆ, ಅಪೌಷ್ಟಿಕತೆ ನಿವಾರಣೆಯಲ್ಲಿ ಸುಧಾರಣೆ ಕಂಡುಬಂದಿದೆ. ಆದರೆ, ಅದು ಅಲ್ಪ ಪ್ರಮಾಣದ್ದು ಎಂಬುದು ಗಮನಾರ್ಹ.
ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದರೂ ಅಪೌಷ್ಟಿಕತೆಯು ದೊಡ್ಡ ಮಟ್ಟದಲ್ಲೇ ಇರುವುದು ಸರ್ಕಾರಗಳಿಗೆ ಸವಾಲಾಗಿದೆ. ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ಪೂರೈಕೆ, ಹಣಕಾಸಿನ ಸಹಾಯಧನ ಒದಗಿಸುವುದು, ನವಜಾತ ಶಿಶುಗಳ ಆರೈಕೆ, ಲಸಿಕೆ ನೀಡಿಕೆ, ಮಕ್ಕಳಲ್ಲಿ ರಕ್ತಹೀನತೆ ಕಡಿಮೆ ಮಾಡುವುದೂ ಸೇರಿದಂತೆ ಹಲವು ಆರೋಗ್ಯ ಕಾರ್ಯಕ್ರಮಗಳು ಜಾರಿಯಲ್ಲಿವೆ. ಹೀಗಿದ್ದೂ, ಅಪೌಷ್ಟಿಕತೆ ಗಮನಾರ್ಹ ಮಟ್ಟದಲ್ಲೇ ಇದೆ ಎಂಬುದರತ್ತ ಈ ವರದಿಗಳು ಬೊಟ್ಟು ಮಾಡುತ್ತವೆ. 2022ರ ಜಾಗತಿಕ ಹಸಿವು ಸೂಚ್ಯಂಕವೂ (ಜಿಎಚ್‌ಐ) ಈ ಅಂಶಗಳ ಮೇಲೆಯೇ ಬೆಳಕು ಚೆಲ್ಲಿದೆ.
ಮರಣ ಪ್ರಮಾಣ:
ದೇಶದಲ್ಲಿ ಜನಿಸುವ ಪ್ರತಿ 1,000 ಮಕ್ಕಳ ಪೈಕಿ ಸರಿಸುಮಾರು 42 ಮಕ್ಕಳುಅಪೌಷ್ಟಿಕತೆಯ ಕಾರಣಕ್ಕೆ ಪ್ರಾಣ ಕಳೆದುಕೊಳ್ಳುತ್ತಿವೆ. ಈ ಮಕ್ಕಳಿಗೆ ತಮ್ಮ ಐದನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಪ್ರಮಾಣ ಗ್ರಾಮೀಣ ಭಾಗದಲ್ಲಿ ಹೆಚ್ಚು. ಗ್ರಾಮೀಣ ಪ್ರದೇಶದ ಐದು ವರ್ಷದೊಳಗಿನ 1,000 ಮಕ್ಕಳ ಪೈಕಿ ಸರಿಸುಮಾರು 46 ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿವೆ. ಸರಿಯಾದ ಆಹಾರ, ಪೋಷಣೆ, ಆರೈಕೆ ಸಿಗದ ಕಾರಣ ಮಕ್ಕಳು ಜೀವ ಬಿಡುತ್ತಿವೆ. 2005–06ನೇ ಸಾಲಿನ ವರದಿ ಪ್ರಕಾರ, ಸಾವಿರ ಮಕ್ಕಳಿಗೆ 74 ಮಕ್ಕಳು ಅಸುನೀಗುತ್ತಿದ್ದವು. ಈ ಸಂಖ್ಯೆಯು ಹತ್ತು ವರ್ಷಗಳ ಅವಧಿಯಲ್ಲಿ 50ಕ್ಕೆ ಕುಸಿದಿತ್ತು. ಅಲ್ಲಿಂದ ಐದು ವರ್ಷಗಳಲ್ಲಿ 42ಕ್ಕೆ ಬಂದು ನಿಂತಿದೆ. ಇದು ಗಣನೀಯವಾಗಿ ಕಡಿಮೆಯಾದಾಗ ಮಾತ್ರ, ಅಪೌಷ್ಟಿಕತೆ ನೀಗಿದೆ ಎಂಬ ತೀರ್ಮಾನಕ್ಕೆ ಬರಬಹುದು.
ಮಕ್ಕಳ ಕುಂಠಿತ ಬೆಳವಣಿಗೆ
ಮಕ್ಕಳು ತಮ್ಮ ವಯಸ್ಸಿಗೆ ತಕ್ಕಷ್ಟು ಎತ್ತರಕ್ಕೆ ಬೆಳೆಯಲಿಲ್ಲ (ಸ್ಟಂಟ್) ಎಂದಾದರೆ, ಅದನ್ನೂ ಅಪೌಷ್ಟಿಕತೆ ಎಂದು ಪರಿಗಣಿಸಲಾಗುತ್ತದೆ. ದೇಶದ ಐದು ವರ್ಷದೊಳಗಿನ ಶೇ 35.5ರಷ್ಟು ಮಕ್ಕಳು ಈ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದು ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸುತ್ತದೆ. ಅಪೌಷ್ಟಿಕತೆಯ ಕಾರಣಕ್ಕೆ, ಗ್ರಾಮೀಣ ಭಾಗದ ಶೇ 37ರಷ್ಟು ಮಕ್ಕಳು ದೈಹಿಕವಾಗಿ ಎತ್ತರ ಬೆಳೆಯಲು ಸಾಧ್ಯವಾಗುತ್ತಿಲ್ಲ. 2005–06ನೇ ಸಾಲಿನಲ್ಲಿ ಶೇ 48ರಷ್ಟು ಮಕ್ಕಳು ಈ ಸಮಸ್ಯೆ ಎದುರಿಸುತ್ತಿದ್ದರು. ಅಲ್ಲಿಂದ ಹತ್ತು ವರ್ಷಗಳಲ್ಲಿ ಈ ಪ್ರಮಾಣ ಶೇ 38ಕ್ಕೆ ಕುಸಿದಿದೆ. ಆದರೆ, ನಂತರದ ಐದು ವರ್ಷಗಳಲ್ಲಿ ಶೇ 3ರಷ್ಟು ಮಾತ್ರ ಇಳಿಕೆಯಾಗಿದೆ. ಹಲವು ಸೌಲಭ್ಯಗಳು ಹಾಗೂ ಆರೋಗ್ಯ ಕಾರ್ಯಕ್ರಮಗಳಿದ್ದರೂ ಗಣನೀಯ ಸುಧಾರಣೆ ಸಾಧ್ಯವಾಗಿಲ್ಲ.
ಕಡಿಮೆ ತೂಕದ ಮಕ್ಕಳು
ಮಕ್ಕಳು ತಮ್ಮ ಎತ್ತರಕ್ಕೆ ತಕ್ಕಷ್ಟು ತೂಕ ಹೊಂದಿಲ್ಲದಿರುವುದೂ (ವೆಸ್ಟ್) ಅಪೌಷ್ಟಿಕತೆಯ ವ್ಯಾಪ್ತಿಯಲ್ಲಿ ಬರುತ್ತದೆ. ದೇಶದಲ್ಲಿ 5 ವರ್ಷದೊಳಗಿನ ಶೇ 19.3ರಷ್ಟು ಮಕ್ಕಳು ಈ ಸ್ವರೂಪದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಎನ್‌ಎಫ್‌ಎಚ್‌ಎಸ್ ಸಮೀಕ್ಷಾ ವರದಿ ಅಭಿಪ್ರಾಯಪಟ್ಟಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗದಿರುವ ಪರಿಸ್ಥಿತಿ ಉಂಟಾದಾಗ, ಆ ಮಕ್ಕಳು ಸಹಜವಾಗಿಯೇ ಸಣಕಲಾಗಿ ಕಾಣಿಸುತ್ತವೆ. ವಯಸ್ಸಿಗೆ ತಕ್ಕಂತೆ ದೈಹಿಕವಾಗಿ ಎತ್ತರ ಬೆಳೆದರೂ, ದೇಹದ ತೂಕ ಕಡಿಮೆಯಿರುತ್ತದೆ. ಇದು ಗಂಭೀರ ಅಪೌಷ್ಟಿಕತೆ ಸಮಸ್ಯೆ. ಈ ಸೂಚಿಯಲ್ಲಿಯೂ ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚಿನ ಸಂತ್ರಸ್ತರು.
2022ನೇ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಉಲ್ಲೇಖಿಸಿರುವಂತೆ, ಭಾರತದ 5 ವರ್ಷದೊಳಗಿನ ಮಕ್ಕಳು ಕಡಿಮೆ ತೂಕದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸೂಚಿಯಲ್ಲಿ ಸುಡಾನ್, ಯೆಮನ್ ದೇಶಗಳಿಗಿಂತಲೂ ಭಾರತ ಕಡಿಮೆ ಅಂಕಗಳನ್ನು ಸಂಪಾದಿಸಿರುವುದು ಸರ್ಕಾರಗಳಿಗೆ ಎಚ್ಚರಿಕೆ ಗಂಟೆಯಾಗಿದೆ.
ಆಧಾರ: ಎನ್‌ಎಫ್‌ಎಚ್‌ಎಸ್ ವರದಿಗಳು, ಜಾಗತಿಕ ಹಸಿವು ಸೂಚ್ಯಂಕ ವರದಿಗಳು, ಪಿಟಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.