ಫ್ರಾನ್ಸ್, ಪ್ರಾಜೆಕ್ಟ್–75(ಐ) ಯೋಜನೆಯಿಂದ ಹಿಂದೆ ಸರಿದ ಏಕೈಕ ರಾಷ್ಟ್ರವಲ್ಲ. ರಷ್ಯಾ ಮತ್ತು ಜರ್ಮನಿ ಈ ಯೋಜನೆಯಿಂದ ಈಗಾಗಲೇ ಹಿಂದೆ ಸರಿದಿವೆ. ಈಗ ಫ್ರಾನ್ಸ್ ಸಹ ಈ ಸಾಲಿಗೆ ಸೇರಿದೆಯಷ್ಟೆ. ಈ ಯೋಜನೆಗೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯವು ನಿಗದಿ ಮಾಡಿರುವ ‘ಕನಿಷ್ಠ ತಾಂತ್ರಿಕ ಅಗತ್ಯ’ ಷರತ್ತುಗಳನ್ನು ಪೂರೈಸಲು ಸಾಧ್ಯವಿಲ್ಲದ ಕಾರಣ ಯೋಜನೆಯಿಂದ ಹಿಂದೆ ಸರಿದಿರುವುದಾಗಿ ಈ ಮೂರೂ ದೇಶಗಳ ಕಂಪನಿಗಳು ಹೇಳಿವೆ. ಆ ತಾಂತ್ರಿಕ ಕಾರಣಗಳನ್ನು ವಿವರಿಸಿಲ್ಲ. ಆದರೆ, ಈ ತಾಂತ್ರಿಕ ಷರತ್ತುಗಳ ಬಗ್ಗೆ ತಜ್ಞರು ವಿಶ್ಲೇಷಣೆ ನಡೆಸಿದ್ದಾರೆ. ಈ ಕಂಪನಿಗಳೂ ಅನಧಿಕೃತವಾಗಿ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿವೆ.
ಪಿ–75(ಐ) ಯೋಜನೆಗೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯವು 2021ರ ಜುಲೈ 20ರಂದು ಪ್ರಸ್ತಾವನೆ ಸಲ್ಲಿಕೆಗೆ ಮನವಿಯನ್ನು (ರಿಕ್ವೆಸ್ಟ್ ಆಫ್ ಪ್ರಪೋಸಲ್– ಆರ್‌ಎಫ್‌ಪಿ) ಪ್ರಕಟಿಸಿತ್ತು. ಈ ಯೋಜನೆಯಲ್ಲಿ ವಿದೇಶಿ ಕಂಪನಿಗಳನ್ನು ರಕ್ಷಣಾ ಸಹಭಾಗೀದಾರ ಎಂದು ಪರಿಗಣಿಸಲಾಗುತ್ತದೆ. ಆರ್‌ಎಫ್‌ಪಿಯ ಭಾಗವಾಗಿ ರಷ್ಯಾ, ಜರ್ಮನಿ, ದಕ್ಷಿಣ ಕೊರಿಯಾ, ಸ್ಪೇನ್ ಮತ್ತು ಫ್ರಾನ್ಸ್‌ನ ಕಂಪನಿಗಳನ್ನು ರಕ್ಷಣಾ ಸಚಿವಾಲಯವು ಸಂಭಾವ್ಯ ರಕ್ಷಣಾ ಸಹಭಾಗೀದಾರರಾಗಿ ಪಟ್ಟಿ ಮಾಡಿತ್ತು. ಅಂತಿಮವಾಗಿ ಆಯ್ಕೆಯಾಗುವ ಕಂಪನಿಯು,ಭಾರತೀಯ ಕಂಪನಿಗಳ ಜತೆಗೆ, ಭಾರತದಲ್ಲೇ ಜಲಾಂತರ್ಗಾಮಿಗಳನ್ನು ನಿರ್ಮಿಸಬೇಕು ಎಂಬುದು ಮೊದಲ ಷರತ್ತು. ಈ ಷರತ್ತಿನ ಬಗ್ಗೆ ಯಾವುದೇ ಆಕ್ಷೇಪಗಳು ವ್ಯಕ್ತವಾಗಿಲ್ಲ.
ಈ ಯೋಜನೆ ಅಡಿ ನಿರ್ಮಿಸಲಾಗುವ ಪ್ರತಿ ಜಲಾಂತರ್ಗಾಮಿಯ ಒಟ್ಟು ವೆಚ್ಚದಲ್ಲಿ ಶೇ 40ರಿಂದ ಶೇ 60ರಷ್ಟು ಮೌಲ್ಯದ ಉಪಕರಣ ಗಳನ್ನು ದೇಶೀಯವಾಗಿ ಖರೀದಿಸಬೇಕು ಎಂದು ಮತ್ತೊಂದು ಷರತ್ತನ್ನು ಆರ್‌ಎಫ್‌ಪಿಯಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ ಜಲಾಂತರ್ಗಾಮಿ ಗಳ ನಿರ್ಮಾಣದಲ್ಲಿ ಬಳಸಲಾಗುವ ಬಹುತೇಕ ತಂತ್ರಜ್ಞಾನಗಳನ್ನು ‘ತಂತ್ರಜ್ಞಾನ ವರ್ಗಾವಣೆ (ಟಿಒಟಿ)’ ಷರತ್ತಿನ ಅಡಿ ಭಾರತಕ್ಕೆ ವರ್ಗಾಯಿಸಬೇಕು ಎಂದು ಇನ್ನೊಂದು ಷರತ್ತು ವಿಧಿಸಲಾಗಿದೆ. ‘ಜಲಾಂತರ್ಗಾಮಿಗಳಿಗೆ ಅಗತ್ಯವಿರುವ ಉಪಕರಣಗಳು, ಬಿಡಿಭಾಗಗಳ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆಗೆ ಅನುಕೂಲವಾಗುವಂತೆ ತಂತ್ರಜ್ಞಾನಗಳನ್ನು ವರ್ಗಾಯಿಸಬೇಕು. ದೇಶೀಯ ಉದ್ದಿಮೆಗಳಿಗೆ ಉತ್ತೇಜನ ನೀಡುವುದು ಮತ್ತು ಆ ಮೂಲಕ ಆತ್ಮನಿರ್ಭರ ಭಾರತವನ್ನು ಸಾಧಿಸುವುದು ಈ ಷರತ್ತುಗಳ ಮುಖ್ಯ ಉದ್ದೇಶ’ ಎಂದು ಆರ್‌ಎಫ್‌ಪಿಯಲ್ಲಿ ವಿವರಿಸಲಾಗಿದೆ.
ಈ ಎರಡೂ ಷರತ್ತುಗಳ ಬಗ್ಗೆ ವಿದೇಶಿ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿವೆ ಎಂದು ಪಿಟಿಐ, ರಾಯಿಟರ್ಸ್ ಮತ್ತು ಎಎಫ್‌ಪಿ ಸುದ್ದಿಸಂಸ್ಥೆ ಗಳು ವರದಿ ಪ್ರಕಟಿಸಿವೆ. ‘ಜಲಾಂತರ್ಗಾಮಿಯ ನಿರ್ಮಾಣದ ಒಟ್ಟು ವೆಚ್ಚದಲ್ಲಿ ಶೇ 40–60ರಷ್ಟು ಮೌಲ್ಯದ ಉಪಕರಣಗಳನ್ನು ಭಾರತದಲ್ಲೇ ಖರೀದಿಸಲು ವೆಚ್ಚ ಮಾಡಬೇಕು ಎಂಬ ಷರತ್ತನ್ನು ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ಫ್ರಾನ್ಸ್‌ನ ನೇವಲ್ ಗ್ರೂಪ್‌ನ ಅಧಿಕಾರಿಗಳು ಹೇಳಿದ್ದಾರೆ’ ಎಂದು ಈ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಎಐಪಿ ತೊಡಕು
ಈ ಯೋಜನೆ ಅಡಿ ನಿರ್ಮಿಸುವ ಪ್ರತಿ ಜಲಾಂತರ್ಗಾಮಿಯೂ ‘ಏರ್ ಇಂಡಿಪೆಂಡೆಂಟ್ ಪ್ರೊಪಲ್ಷನ್’ (ಎಐಪಿ) ವ್ಯವಸ್ಥೆ ಹೊಂದಿರಬೇಕು ಎಂದು ಆರ್‌ಎಫ್‌ಪಿಯಲ್ಲಿ ಷರತ್ತು ವಿಧಿಸಲಾಗಿದೆ. ಈ ಷರತ್ತಿನಿಂದಲೇ ವಿದೇಶಿ ಕಂಪನಿಗಳು ಯೋಜನೆಯಲ್ಲಿ ರಕ್ಷಣಾ ಸಹಭಾಗೀದಾರ ಆಗುವುದರಿಂದ ಹಿಂದೆ ಸರಿಯುತ್ತಿವೆ ಎಂದು ವಿಶ್ಲೇಷಿಸಲಾಗಿದೆ.
ಡೀಸೆಲ್ ಎಂಜಿನ್‌ನಿಂದ ವಿದ್ಯುತ್ ಉತ್ಪಾದಿಸಿ, ಆ ವಿದ್ಯುತ್‌ನ ಮೂಲಕ ಚಲಿಸುವ ಜಲಾಂತರ್ಗಾಮಿ
ಗಳನ್ನು ಸಾಂಪ್ರದಾಯಿಕ ಜಲಾಂತರ್ಗಾಮಿಗಳು ಎಂದು ಕರೆಯಲಾಗುತ್ತದೆ. ಡೀಸೆಲ್ ತುಂಬಿಸಿಕೊಳ್ಳಲು ಮತ್ತು ಎಂಜಿನ್ ಕಾರ್ಯನಿರ್ವಹಿಸಲು ಅಗತ್ಯವಿರುವ ಗಾಳಿಯನ್ನು ಹೀರಿಕೊಳ್ಳಲು ಈ ಜಲಾಂತರ್ಗಾಮಿಗಳು ಪದೇ ಪದೇ ನೀರಿನಿಂದ ಮೇಲೆ ಬರಬೇಕಾಗುತ್ತದೆ. ನೀರಿನಡಿಯಲ್ಲೇ ಇವು ದೀರ್ಘಕಾಲದವರೆಗೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಈ ಸಮಸ್ಯೆಗೆ, ಅಣುಶಕ್ತಿ ವಿದ್ಯುತ್ ಆಧರಿತ ಜಲಾಂತರ್ಗಾಮಿಗಳ ಮೂಲಕ ಪರಿಹಾರ ಕಂಡುಕೊಳ್ಳಲಾ ಯಿತು. ಆದರೆ ಸಾಂಪ್ರದಾಯಿಕ ಜಲಾಂತರ್ಗಾಮಿಗಳಿಗೆ ಹೋಲಿಸಿದರೆ, ಅಣುಶಕ್ತಿ ಆಧರಿತ ಜಲಾಂತರ್ಗಾಮಿಗಳು ತೀರಾ ದುಬಾರಿ. ಹೀಗಾಗಿ ಸಾಂಪ್ರದಾಯಿಕ
ಜಲಾಂತರ್ಗಾಮಿಗಳನ್ನೇ ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಎಐಪಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಯಿತು.
ಏರ್ ಇಂಡಿಪೆಂಡೆಂಟ್ ಪ್ರೊಪಲ್ಷನ್ ಎಂದರೆ, ಗಾಳಿಯ ಅಗತ್ಯವಿಲ್ಲದ ಎಂಜಿನ್ ವ್ಯವಸ್ಥೆ ಎಂದರ್ಥ. ಗಾಳಿಯ ಅಗತ್ಯವಿಲ್ಲದೇ ಜಲಾಂತರ್ಗಾಮಿಯ ಒಳಗೇ ವಿದ್ಯುತ್ ಅನ್ನು ಉತ್ಪಾದಿಸುವ ವ್ಯವಸ್ಥೆ. ಇದಕ್ಕಾಗಿ ಇಂಧನ ಸೆಲ್ (ಫ್ಯುಯಲ್ ಸೆಲ್) ತಂತ್ರಜ್ಞಾನವನ್ನು ಬಳಸಿಕೊಳ್ಳ ಲಾಗುತ್ತದೆ. ಜಲಾಂತರ್ಗಾಮಿಯು ನೀರಿನಡಿಯಲ್ಲಿ ಇರುವಾಗಲೇಇಂಧನ ಸೆಲ್‌ಗಳ ಮೂಲಕ ವಿದ್ಯುತ್ ಉತ್ಪಾದಿಸಿ, ಅದನ್ನು ಚಲಾಯಿಸಲಾಗುತ್ತದೆ. ಡೀಸೆಲ್ ಮುಗಿದರೂ, ಡೀಸೆಲ್ ಜನರೇಟರ್‌ಗಳಿಗೆ ಅಗತ್ಯವಿರುವ ಗಾಳಿ ಮುಗಿದರೂ ಅಥವಾ ಗಾಳಿ ಎಳೆದುಕೊಳ್ಳಲು ನೀರಿನಿಂದ ಮೇಲೆ ಬರಲು ಸಾಧ್ಯವಿಲ್ಲದೇ ಇರುವಾಗ ಇಂಧನ ಸೆಲ್ ಬಳಸಿಕೊಂಡು ವಿದ್ಯುತ್ ಉತ್ಪಾದಿಸಬಹುದು. ಈ ವ್ಯವಸ್ಥೆ ಇದ್ದರೆ ದೀರ್ಘಾವಧಿಯ ವರೆಗೆ ಮತ್ತು ದೀರ್ಘಪಯಣ ದಲ್ಲಿ ಜಲಾಂತರ್ಗಾಮಿ ನೀರಿನಿಂದ ಮೇಲಕ್ಕೆ ಬರುವ ಅನಿವಾರ್ಯ ಉಂಟಾಗುವುದಿಲ್ಲ.
ಆದರೆ ಈ ವ್ಯವಸ್ಥೆಯನ್ನು ಜಲಾಂತರ್ಗಾಮಿಯಲ್ಲಿ ಅಳವಡಿಸುವುದು ಸುಲಭವಲ್ಲ. ಜಲಂತರ್ಗಾಮಿಯ ಒಳಗೆ ಲಭ್ಯವಿರುವ ಸೀಮಿತ ಜಾಗದಲ್ಲಿ, ಡೀಸೆಲ್ ವಿದ್ಯುತ್ ಜನರೇಟರ್ ವ್ಯವಸ್ಥೆಯ ಜತೆಯಲ್ಲೇ ಎಐಪಿ ವ್ಯವಸ್ಥೆಯನ್ನೂ ಅಳವಡಿಸುವುದು ಕಷ್ಟಸಾಧ್ಯವಾದ ಕೆಲಸ.
ಜಲಾಂತರ್ಗಾಮಿಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿದ ಮೊದಲ ದೇಶ ದಕ್ಷಿಣ ಕೊರಿಯಾ. ಸ್ಪೇನ್ ಮತ್ತು ಜರ್ಮನಿ ಸಹ ಇಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿವೆ. ಇನ್ನೂ ಆರಂಭಿಕ ಹಂತದಲ್ಲಿ ಇರುವ ಈ ವ್ಯವಸ್ಥೆಯನ್ನು ನೀಡಲೇಬೇಕು ಎಂದು ಆರ್‌ಎಫ್‌ಪಿಯಲ್ಲಿ ಷರತ್ತು ವಿಧಿಸಿದ್ದರಿಂದ ರಷ್ಯಾ, ಜರ್ಮನಿ ಮತ್ತು ಫ್ರಾನ್ಸ್ ಒಪ್ಪಂದದಿಂದ ಹಿಂದೆ ಸರಿದಿವೆ. ಸ್ಪೇನ್ ಮತ್ತು ದಕ್ಷಿಣ ಕೊರಿಯಾ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.
ಪಿ–75(ಐ) ಯೋಜನೆ ಹಲವು ವರ್ಷಗಳಷ್ಟು ವಿಳಂಬವಾಗಿದೆ. ಒಪ್ಪಂದವೇ ಇನ್ನೂ ಅಂತಿಮವಾಗಿಲ್ಲ. 2024ರ ಅಂತ್ಯದ ವೇಳೆಗೆ ಒಪ್ಪಂದವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಒಪ್ಪಂದ ಅಂತಿಮವಾದ ನಂತರ ಮೊದಲ ಜಲಾಂತರ್ಗಾಮಿಯನ್ನು 8 ವರ್ಷಗಳಲ್ಲಿ ನೀಡಬೇಕು ಎಂದು ಷರತ್ತು ವಿಧಿಸಲಾಗಿದೆ. ಆದರೆ, ಈ ತಂತ್ರಜ್ಞಾನವನ್ನು ಚೀನಾ ಸಹ ಹೊಂದಿದೆ. ಪಾಕಿಸ್ತಾನಕ್ಕಾಗಿ ಇಂತಹ ನಾಲ್ಕು ಜಲಾಂತರ್ಗಾಮಿಗಳನ್ನು ನಿರ್ಮಿಸಿಕೊಡಲು ಚೀನಾ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ.
ಪ್ರಾಜೆಕ್ಟ್–75
1999ರ ಜೂನ್‌ನಲ್ಲಿ ಭದ್ರತೆ ಕುರಿತ ಕೇಂದ್ರ ಸಂಪುಟ ಸಮಿತಿಯು 30 ವರ್ಷಗಳಲ್ಲಿ 24 ಜಲಾಂತರ್ಗಾಮಿಗಳನ್ನು ನಿರ್ಮಿಸಲು ಒಪ್ಪಿಗೆ ನೀಡಿತ್ತು. ಇದರಲ್ಲಿ ಅಣುಶಕ್ತಿ ಚಾಲಿತಆರು ಜಲಾಂತರ್ಗಾಮಿಗಳೂ ಸೇರಿವೆ. ಎರಡು ಹಂತಗಳಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು. ಮೊದಲ ಹಂತದ ಯೋಜನೆಯೇ ‘ಪ್ರಾಜೆಕ್ಟ್–75’. ಇದರ ಅಡಿಯಲ್ಲಿ ಡೀಸೆಲ್–ವಿದ್ಯುತ್ ಚಾಲಿತ, ಕಲ್ವರಿ ಶ್ರೇಣಿಯ ಅಡಿಯಲ್ಲಿ ಬರುವ ಸ್ಕಾರ್ಪೀನ್ ಸರಣಿಯ ಆರು ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗಿದೆ. ಕಳೆದ ತಿಂಗಳಷ್ಟೇ, ಇದೇ ಸರಣಿಯ 6ನೇ ಹಾಗೂಕೊನೆಯ ಜಲಾಂತರ್ಗಾಮಿ ‘ಐಎನ್‌ಎಸ್ ವಾಗ್ಶೀರ್’ ಅನ್ನು ಮುಂಬೈನ ಮಡಗಾಂವ್ ಹಡಗುಕಟ್ಟೆಯಲ್ಲಿ ಉದ್ಘಾಟಿಸಲಾಗಿದೆ. ಫ್ರಾನ್ಸ್‌ನ ನೇವಲ್ ಗ್ರೂಪ್ ಸಹಭಾಗಿತ್ವದಲ್ಲಿ ಮಡಗಾಂವ್ ಡಾಕ್‌ನಲ್ಲಿ ಇವುಗಳನ್ನು ನಿರ್ಮಿಸಲಾಗಿದೆ.
ಸ್ಕಾರ್ಪೀನ್ ಸರಣಿಯ ಐಎನ್‌ಎಸ್ ಕಲ್ವರಿ, ಐಎನ್‌ಎಸ್ ಖಂಡೆರಿ, ಐಎನ್‌ಎಸ್ ಕಾರಂಜ್ ಹಾಗೂ ಐಎನ್‌ಎಸ್ ವೇಲಾ ಜಲಾಂತರ್ಗಾಮಿಗಳು ಈಗಾಗಲೇ ಸೇವೆಗೆ ನಿಯುಕ್ತಿಯಾಗಿವೆ. ಐದನೇ ನೌಕೆ ಐಎನ್‌ಎಸ್ ವಾಗಿರ್ ಜಲಾಂತರ್ಗಾಮಿಯು ಪರೀಕ್ಷಾ ಹಂತದಲ್ಲಿದೆ. ಕೊನೆಯ ನೌಕೆ ವಾಗ್ಶೀರ್ ಪರೀಕ್ಷಾ ಹಂತಗಳನ್ನು ಪೂರೈಸಿ 2023ರ ವೇಳೆಗೆ ಭಾರತೀಯ ನೌಕಾಪಡೆಯ ಸೇವೆಗೆ ಸಮರ್ಪಣೆಯಾಗಲಿದೆ.
ಇನ್ನಷ್ಟು ವಿಳಂಬ
ಪ್ರಾಜೆಕ್ಟ್–75ರ ಮುಂದುವರಿದ ಭಾಗವೇ ಪ್ರಾಜೆಕ್ಟ್–75 (ಐ). 2017ರಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ₹43,000 ಕೋಟಿ ವೆಚ್ಚದಲ್ಲಿ ಡೀಸೆಲ್–ವಿದ್ಯುತ್ ಚಾಲಿತ ಆರು ಜಲಾಂತರ್ಗಾಮಿಗಳನ್ನು ನಿರ್ಮಿಸುವುದು ಸರ್ಕಾರದ ಉದ್ದೇಶವಾಗಿತ್ತು. ಈ ಜಲಾಂತರ್ಗಾಮಿಗಳನ್ನು ನಿರ್ಮಿಸಲು ಭಾರತದಲ್ಲಿ ಮಡಗಾಂವ್ ಡಾಕ್ ಮತ್ತು ಲಾರ್ಸನ್ ಅಂಡ್ ಟುಬ್ರೊ ಕಂಪನಿಗಳನ್ನು 2019ರಲ್ಲಿ ಗುರುತಿಸಲಾಗಿತ್ತು. ವಿದೇಶದ ಐದು ಕಂಪನಿಗಳನ್ನು ಸಹಭಾಗಿ ಕಂಪನಿಗಳಾಗಿ ಸರ್ಕಾರ ಗುರುತಿಸಿತ್ತು. ಈ ಪಟ್ಟಿಯಲ್ಲಿ ರಷ್ಯಾ, ಫ್ರಾನ್ಸ್, ಸ್ಪೇನ್, ದಕ್ಷಿಣ ಕೊರಿಯಾ ಹಾಗೂ ಜರ್ಮನಿಯ ಒಂದೊಂದು ಕಂಪನಿಗಳು ಇದ್ದವು. ಬಿಡ್‌ನಲ್ಲಿ ಆಯ್ಕೆಯಾದ ಕಂಪನಿಯು ಭಾರತದ ಯಾವುದಾದರೂ ಒಂದು ಕಂಪನಿಯ ಜೊತೆಗೂಡಿ ಭಾರತದಲ್ಲಿ ಸ್ಥಳೀಯವಾಗಿ ಜಲಾಂತರ್ಗಾಮಿಗಳನ್ನು ನಿರ್ಮಿಸಬೇಕಿದೆ. 2027–32ರ ಅವಧಿಯಲ್ಲಿ ಆರು ಜಲಾಂತರ್ಗಾಮಿಗಳನ್ನು ಸೇವೆಗೆ ನಿಯೋಜಿಸುವ ಗುರಿ ಹಾಕಿಕೊಳ್ಳಲಾಗಿದೆ.
ಯೋಜನೆಯ ಭಾಗವಾಗಿ, ರಕ್ಷಣಾ ಸಚಿವಾಲಯವು 2021ರ ಜುಲೈನಲ್ಲಿ ಆರ್‌ಎಫ್‌ಪಿ ಹೊರಡಿಸಿತ್ತು.ಆದರೆ ಸರ್ಕಾರ ಪ್ರಸ್ತಾಪಿಸಿದ್ದ ಕೆಲವು ನಿಬಂಧನೆಗಳನ್ನು ಪೂರೈಸಲು ಆಗುವುದಿಲ್ಲ ಎಂಬ ಕಾರಣ ನೀಡಿ ರಷ್ಯಾ, ಜರ್ಮನಿ, ಫ್ರಾನ್ಸ್ ದೇಶಗಳು ಯೋಜನೆಯಿಂದ ಹಿಂದೆ ಸರಿದವು. ಹೀಗಾಗಿ ನವೆಂಬರ್‌ಗೆ ಕೊನೆಯಾಗಿದ್ದ ಬಿಡ್ ಅವಧಿಯನ್ನು ಸರ್ಕಾರವು 2022ರ ಜೂನ್‌ವರೆಗೆ ವಿಸ್ತರಿಸಿತು. ಒಂದು ವೇಳೆ ಜೂನ್‌ನಲ್ಲಿ ಬಿಡ್ ಸಲ್ಲಿಕೆಯಾದರೆ, ಅದನ್ನು ಪರಿಶೀಲನೆ ನಡೆಸಿ, ಸರ್ಕಾರ ಕಾರ್ಯಾದೇಶ ನೀಡಲು ಸುಮಾರು ಎರಡು ವರ್ಷ ಬೇಕು. ಒಂದೊಂದೇ ದೇಶಗಳು ಬಿಡ್‌ನಿಂದ ಹಿಂದೆ ಸರಿಯುತ್ತಿರುವ ಕಾರಣ, ಪ್ರಾಜೆಕ್ಟ್–75 (ಐ) ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ.
ಪ್ರಾಜೆಕ್ಟ್–75 (ಐ) ಅಡಿಯಲ್ಲಿ ಎರಡು ಹಂತಗಳಿವೆ. ಮೊದಲ ಹಂತದಲ್ಲಿ 6, ಎರಡನೇ ಹಂತದಲ್ಲಿ 12 ನೌಕೆಗಳನ್ನು ತಯಾರಿಸುವ ಉದ್ದೇಶವಿದೆ. ಸರ್ಕಾರ ಅಂದುಕೊಂಡಂತೆ 2030ರ ವೇಳೆಗೆ ಒಟ್ಟು 24 ಜಲಾಂತರ್ಗಾಮಿ ಗಳನ್ನು ನಿರ್ಮಿಸುವುದು ಕಷ್ಟಸಾಧ್ಯ ಎನ್ನುತ್ತಾರೆ ಪರಿಣತರು. 1999ರಲ್ಲಿ ಆರಂಭವಾದ ಯೋಜನೆಯಲ್ಲಿ 2022ರ ವೇಳೆಗೆ 6 ಜಲಾಂತರ್ಗಾಮಿಗಳನ್ನು ನಿರ್ಮಿಸಲು ಸಾಧ್ಯವಾಗಿದೆ. ಈ ಆರರಲ್ಲಿ ನಾಲ್ಕು ಜಲಾಂತರ್ಗಾಮಿಗಳು ಸೇವೆಯ ಲ್ಲಿದ್ದರೆ, ಇನ್ನೆರಡು ಪರೀಕ್ಷಾ ಹಂತದಲ್ಲಿವೆ. ಯೋಜನೆ ಪ್ರಕಾರ, ಉಳಿದಿರುವ 8 ವರ್ಷಗಳಲ್ಲಿ 18 ಜಲಾಂತರ್ಗಾಮಿಗಳನ್ನು ನಿರ್ಮಿಸುವ ಸವಾಲು ಸರ್ಕಾರದ ಮುಂದಿದೆ. ಬಿಡ್ ಸಲ್ಲಿಸುವವರು ಸರ್ಕಾರದ ಹೊಸ ನಿಬಂಧನೆಗಳಿಂದ ಹಿಂದೆ ಸರಿಯುತ್ತಿರುವ ಕಾರಣ, ಯೋಜನೆಯ ಗುರಿ ಸಾಧನೆ ಮತ್ತಷ್ಟು ಕಠಿಣವಾಗಲಿದೆ ಎನ್ನುತ್ತದೆ ಉದ್ಯಮ ವಲಯ.
ಭಾರತದಲ್ಲಿವೆ 18 ಜಲಾಂತರ್ಗಾಮಿಗಳು
ಭಾರತ ಈಗ 18 ಜಲಾಂತರ್ಗಾಮಿಗಳನ್ನು ಹೊಂದಿದೆ. ಮೂರು ಶ್ರೇಣಿಯ ಜಲಾಂತರ್ಗಾಮಿಗಳಿವೆ. ಶಿಶುಮಾರ ಶ್ರೇಣಿಯ 4, ಸಿಂಧುಘೋಷ ಶ್ರೇಣಿಯ 8 ಹಾಗೂ ಕಲ್ವರಿ ಶ್ರೇಣಿಯ 4 ಜಲಾಂತರ್ಗಾಮಿಗಳು ನೌಕಾಪಡೆಯ ಸೇವೆಯಲ್ಲಿವೆ. ಐಎನ್‌ಎಸ್ ಅರಿಹಂತ್ ಹೆಸರಿನ ಎರಡು ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಗಳಿವೆ. ಆದರೆ ಸರ್ಕಾರವು ಈ ನೌಕೆಗಳ ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.
ಆಧಾರ: ರಕ್ಷಣಾ ಸಚಿವಾಲಯದ ಆರ್‌ಎಫ್‌ಪಿ ಪ್ರಕಟಣೆ, ಗ್ಲೋಬಲ್ ಫೈರ್ ಇಂಡೆಕ್ಸ್, ಪಿಐಬಿ, ರಾಯಿಟರ್ಸ್, ಪಿಟಿಐ, ಎಎಫ್‌ಪಿ,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.