ಕನ್ನಡದ ಹೆಮ್ಮೆ
ಸಾಲುಮರದ ತಿಮ್ಮಕ್ಕ
ಜನನ: ಜೂನ್ 30, 1991
ಗಿಡಮರಗಳ ಲಾಲನೆ–ಪಾಲನೆ ಮತ್ತು ಪರಿಸರ ಸಂರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ ಸಾವಿರಾರು ಪರಿಸರ ಪ್ರೇಮಿಗಳಿಗೆ ಆದರ್ಶ ಸಾಲುಮರದ ತಿಮ್ಮಕ್ಕ. ‘ವೃಕ್ಷ ಮಾತೆ’ ಎನ್ನುವುದು ಅವರ ಅನ್ವರ್ಥನಾಮ. ಅಕ್ಷರ ಜ್ಞಾನ ಇಲ್ಲದೆಯೂ ಜಗತ್ತು ಮೆಚ್ಚುವಂತಹ, ಎಲ್ಲರನ್ನೂ ಪ್ರಭಾವಿಸುವಂತಹ ಕಾರ್ಯವನ್ನು ಮಾಡಬಹುದು ಎಂಬುದನ್ನು ತೋರಿಸಿದವರು. ಹಸಿರಿನಿಂದ ನಳನಳಿಸುತ್ತಿರುವ ಗಿಡ ಮರಗಳಲ್ಲೇ ಮಕ್ಕಳನ್ನು ಕಂಡವರು. ರಸ್ತೆಗಳ ಬದಿಯಲ್ಲಿ ಸಾಲು ಗಿಡಗಳನ್ನು ನೆಟ್ಟು, ಕಿ.ಮೀಗಟ್ಟಲೆ ದೂರದಿಂದ ನೀರು ಹೊತ್ತು ತಂದು ಉಣಿಸಿ, ಅವುಗಳನ್ನು ಹೆಮ್ಮರವಾಗಿ ಮಾಡುವುದರ ಮೂಲಕ ಮಕ್ಕಳು ಇಲ್ಲದ ಕೊರಗನ್ನು ದೂರ ಮಾಡಿಕೊಂಡವರು ತಿಮ್ಮಕ್ಕ. ಎಲೆಮರೆ ಕಾಯಿಯಂತಿದ್ದ ತಿಮ್ಮಕ್ಕ ಅವರು ಮಾಡಿದ ಕೆಲಸ ಮತ್ತು ಪರಿಸರ ಉಳಿಸುವ ಅವರ ನಿಸ್ವಾರ್ಥ ಕಾಳಜಿಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದು, 1994ರ ಜೂನ್ 19ರ ‘ಪ್ರಜಾವಾಣಿ’ಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ‘ಸಾಲುಮರಗಳ ಸಂಗಾತಿ ತಿಮ್ಮಕ್ಕ’ ಎಂಬ ಚಿತ್ರ ಬರಹ. ಪರಿಸರ ಸಂರಕ್ಷಣೆ ವಿಚಾರದಲ್ಲಿ ರಾಷ್ಟ್ರ–ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಿ ಮಹಿಳೆಯಾಗಿರುವ ತಿಮ್ಮಕ್ಕ, ಈಗ ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿ. ಅವರ ಹೆಸರಿನಲ್ಲಿ ರಾಜ್ಯದಾದ್ಯಂತ ಅಭಿವೃದ್ಧಿ ಪಡಿಸಿರುವ ಉದ್ಯಾನಗಳು ಅವರು ಸರ್ಕಾರ, ಜನರ ಮೇಲೆ ಬೀರಿದ ಪ್ರಭಾವಕ್ಕೆ ಸಾಕ್ಷಿ.
ಎಸ್.ಆರ್.ಹಿರೇಮಠ
ಜನನ: ನವೆಂಬರ್ 5 , 1944
ಸಾಮಾನ್ಯ ಎಂಜಿನಿಯರ್ ಒಬ್ಬರು ಜನಪರ ಕಾಳಜಿಯ ಬೆನ್ನಿಗೆ ಬಿದ್ದು, ಹೋರಾಟವನ್ನೇ ವ್ರತವಾಗಿ ಮಾಡಿಕೊಂಡು ರಾಜಕೀಯ, ಸಾಮಾಜಿಕ ‘ಪರಿವರ್ತನೆ’ಗೆ ಕಾರಣವಾಗಿದ್ದು ಕರ್ನಾಟಕದ ಇತಿಹಾಸದಲ್ಲಿ ಮೈಲಿಗಲ್ಲು. ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ಬೆಳವಣಿಕಿಯಲ್ಲಿ ಹುಟ್ಟಿದರೂ ಅವರ ಹೋರಾಟ ದೇಶದಗಲ. ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್.ಹಿರೇಮಠ ಹೆಸರು ಕೇಳಿದರೆ ಗಣಿಗಳ್ಳರು, ಭ್ರಷ್ಟರು ನಡುಗುತ್ತಾರೆ. ಅಮೆರಿಕದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಎಂ.ಎಸ್. ಪದವಿ ಪಡೆದ ಹಿರೇಮಠರು, ಭಾರಿ ಸಂಬಳದ ಉದ್ಯೋಗದಲ್ಲಿ ಸುಖವನ್ನೇ ಸೂರೆಗೊಳ್ಳಬಹುದಿತ್ತು. ಇಂದಿರಾಗಾಂಧಿ ಹೇರಿದ ತುರ್ತುಪರಿಸ್ಥಿತಿ ವಿರುದ್ಧ ಷಿಕಾಗೊದಲ್ಲಿ ಹೋರಾಟ ನಡೆಸಿ, ವಿಶ್ವಸಂಸ್ಥೆಯ ಗಮನ ಸೆಳೆದಿದ್ದರು. ಭಾರತಕ್ಕೆ ಮರಳಿದ ಬಳಿಕವೂ ಅವರು ವಿಶ್ರಮಿಸಿದವರಲ್ಲ. ಹರಿಹರ ಪಾಲಿಫೈಬರ್ಸ್ ವಿರುದ್ಧ ಹೋರಾಟ, ಒಡಿಶಾದ ಬಸ್ತರ್ ಜಿಲ್ಲೆಯಲ್ಲಿ ಆದಿವಾಸಿಗಳ ಜಮೀನು ಕಬಳಿಸಿದವರ ವಿರುದ್ಧದ ಚಳವಳಿಯಲ್ಲಿ ಭಾಗಿಯಾದರು. ಬಸ್ತರ್‌ನಲ್ಲಿ ಕಾಡುಗಳ್ಳರು ಕಡಿದಿದ್ದ ಮರಗಳು ಮಾರುಕಟ್ಟೆಗಳಲ್ಲಿ ಬಿಕರಿಯಾಗಿದ್ದವು. ಈ ಅಕ್ರಮ ಸಾಬೀತಿಗೆ ದೇಶದಲ್ಲೇ ಮೊದಲ ಬಾರಿಗೆ ಮರಗಳ ಡಿಎನ್‌ಎ ಮಾಡಿಸಿದ್ದ ಹಿರೇಮಠರು, ಕಳ್ಳರಿಗೆ ಶಿಕ್ಷೆ ಕೊಡಿಸಿದ್ದರು. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಬಳ್ಳಾರಿಯ ಗಣಿ ಉದ್ಯಮಿಗಳು ನಡೆಸಿದ್ದ ಅದಿರು ಕಳವಿನ ಬೆನ್ನು ಹತ್ತಿದ ಹಿರೇಮಠರು, ಅಕ್ರಮ ಗಣಿಗಾರಿಕೆಗೆ ತಡೆಹಾಕಿಸಲು ದೊಡ್ಡ ಮಟ್ಟದ ಕಾನೂನು ಹೋರಾಟವನ್ನೇ ನಡೆಸಿದರು. ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ, ಸಚಿವ ಜನಾರ್ದನ ರೆಡ್ಡಿ ಸೇರಿ ಹಲವು ಜನಪ್ರತಿನಿಧಿಗಳು ಜೈಲಿಗೆ ಹೋಗಲು ಹಿರೇಮಠರ ಹೋರಾಟವೇ ಕಾರಣ.
ಗುಂಡಪ್ಪ ವಿಶ್ವನಾಥ್
ಜನನ: ಫೆಬ್ರುವರಿ 12, 1949
ಭಾರತದ ಕ್ರಿಕೆಟ್‌ನಲ್ಲಿ ಕಂಗೊಳಿಸಿದ ಕರ್ನಾಟಕದ ಅಮೂಲ್ಯ ರತ್ನಗಳಲ್ಲಿ ಜಿ.ಆರ್.ವಿಶ್ವನಾಥ್ ಒಬ್ಬರು. ತಮ್ಮ ಕಲಾತ್ಮಕ ಬ್ಯಾಟಿಂಗ್‌ನಿಂದ ರಾಜ್ಯದ ಮತ್ತು ದೇಶದ ಹೆಸರನ್ನು ಎತ್ತರಕ್ಕೇರಿಸಿದವರು ಭದ್ರಾವತಿಯ ವಿಶ್ವನಾಥ್. 1970ರ ದಶಕದಲ್ಲಿ ಭಾರತ ತಂಡದ ಬ್ಯಾಟಿಂಗ್ ಆಧಾರಸ್ತಂಭವಾಗಿದ್ದ ಅವರು ವೇಗದ ಮತ್ತು ಸ್ಪಿನ್ ಎಸೆತಗಳನ್ನು ಅಧಿಕಾರಯುತವಾಗಿ ಆಡಬಲ್ಲವರಾಗಿದ್ದರು. ಲೇಟ್ ಕಟ್ ಹೊಡೆತ ಅವರಿಗೆ ಹೆಚ್ಚಿನ ಪ್ರಸಿದ್ಧಿ ತಂದಿತ್ತು. ಮದರಾಸಿನಲ್ಲಿ (ಈಗಿನ ಚೆನ್ನೈ) 1974–75ರಲ್ಲಿ ಅವರು ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ ವೀರೋಚಿತ 97 ರನ್‌ಗಳ ಇನಿಂಗ್ಸ್ ಕ್ರಿಕೆಟ್ ಪ್ರಿಯರ ಸ್ಮೃತಿಪಟಲದಲ್ಲಿ ಅಚ್ಚಳಿಯದೇ ಉಳಿದಿದೆ. ಅಂಥ ಕೆಲವು ಸ್ಮರಣೀಯ ಇನಿಂಗ್ಸ್‌ಗಳನ್ನು ‘ವಿಶಿ’ ಆಡಿದ್ದಾರೆ. 1979–80ರಲ್ಲಿ ಇಂಗ್ಲೆಂಡ್ ವಿರುದ್ಧ ಸುವರ್ಣ ಮಹೋತ್ಸವ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪರ್ ಬಾಬ್ ಟೇಲರ್ ಅವರಿಗೆ ಅಂಪೈರ್ ಔಟ್ ತೀರ್ಪು ನೀಡಿದರೂ, ಆ ಬಗ್ಗೆ ಅನುಮಾನ ಹೊಂದಿದ ನಾಯಕ ವಿಶ್ವನಾಥ್ ಅವರನ್ನು ವಾಪಸು ಕರೆಸಿಕೊಂಡಿದ್ದರು. ಭಾರತ ಆ ಪಂದ್ಯ ಸೋತರೂ, ವಿಶ್ವನಾಥ್ ಕ್ರೀಡಾ ಸ್ಫೂರ್ತಿ ಗೆದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.