ಕೊಲೆ ಪ್ರಕರಣದ ಆರೋಪಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ನಟ ದರ್ಶನ್‌ಗೆ ವಿಶೇಷ ಆತಿಥ್ಯ ಸಿಕ್ಕಿದ ವಿಚಾರ ರಾಜ್ಯದ ಜೈಲು ವ್ಯವಸ್ಥೆ ಬಗ್ಗೆ ಭಾರಿ ಚರ್ಚೆ ಹುಟ್ಟುಹಾಕಿರುವುದೇನೋ ನಿಜ. ಜೈಲಿನಲ್ಲಿ ಕೆಲವು ಕೈದಿಗಳಿಗೆ ಸಿಗುತ್ತಿರುವ ರಾಜಾತಿಥ್ಯದ ಬಗ್ಗೆ ಮಾತ್ರ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ, ಈ ಚರ್ಚೆಯ ಅಬ್ಬರದ ನಡುವೆ ರಾಜ್ಯದಲ್ಲಿರುವ ಕಾರಾಗೃಹಗಳ ವಾಸ್ತವ ಸ್ಥಿತಿಗತಿ, ಕನಿಷ್ಠ ಸವಲತ್ತುಗಳೂ ಇಲ್ಲದೇ ಇಡೀ ಜೈಲು ವ್ಯವಸ್ಥೆ ಕುಸಿದಿರುವ ಪ್ರಮುಖ ವಿಚಾರ ಹಿನ್ನೆಲೆಗೆ ಸರಿದುಹೋಗಿದೆ.
ಬ್ರಿಟಿಷ್ ಕಾಲದವರೆಗೆ ಇದ್ದ, ‘ಮಾಡಿದ ತಪ್ಪಿಗೆ ಕ್ರೂರ ಶಿಕ್ಷೆ’ ಎಂಬಂಥ ಪದ್ಧತಿಯನ್ನು ತ್ಯಜಿಸಿರುವ ಸ್ವಾತಂತ್ರ್ಯೋತ್ತರ ಭಾರತ, ಜೈಲುಗಳಲ್ಲಿ ಕೈದಿಯ ಮನಃಪರಿವರ್ತನೆ, ಸುಧಾರಣೆ, ಪುನರ್ವಸತಿ ಮತ್ತು ಸಮಾಜದ ಮುಖ್ಯವಾಹಿನಿಗೆ ತರುವುದನ್ನು ತನ್ನ ಶಿಕ್ಷಾ ಪದ್ಧತಿಯನ್ನಾಗಿ ಅಳವಡಿಸಿಕೊಂಡಿದೆ. ಸಮಾಜಘಾತುಕ ಮನಃಸ್ಥಿತಿಯ ಕೈದಿಯನ್ನು ಸಮಾಜಮುಖಿಯನ್ನಾಗಿ ಮಾಡುವುದನ್ನು ತನ್ನ ಮೂಲ ಉದ್ದೇಶವಾಗಿರಿಸಿಕೊಂಡಿದೆ. ಆದರೆ, ಈ ಉದ್ದೇಶವನ್ನು ಈಡೇರಿಸಿಕೊಳ್ಳಲು ಬೇಕಾದ ಪೂರಕ ವಾತಾವರಣ ಜೈಲುಗಳಲ್ಲಿಲ್ಲ. ಸಿಬ್ಬಂದಿ, ಸಂಪನ್ಮೂಲ, ಸವಲತ್ತು ಕೊರತೆ, ನಿರ್ಲಕ್ಷ್ಯದಂಥ ಸಮಸ್ಯೆಗಳನ್ನು ಕಾರಾಗೃಹಗಳು ಎದುರಿಸುತ್ತಿವೆ.
ರಾಜ್ಯದಲ್ಲಿ ಕೇಂದ್ರ ಕಾರಾಗೃಹ, ಜಿಲ್ಲೆ, ತಾಲ್ಲೂಕು, ಬಯಲು ಬಂದೀಖಾನೆ ಸೇರಿ ಒಟ್ಟು 50 ಜೈಲುಗಳಿವೆ. ಅವುಗಳಲ್ಲಿ ವಿಚಾರಣಾಬಂದಿ ಮತ್ತು ಶಿಕ್ಷಾಬಂದಿಗಳು ಸೇರಿ ಒಟ್ಟಾರೆ 15 ಸಾವಿರ ಕೈದಿಗಳಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಂತೂ ಸಾಮರ್ಥ್ಯಕ್ಕಿಂತ ಎರಡು ಪಟ್ಟು ಹೆಚ್ಚು ಕೈದಿಗಳಿದ್ದಾರೆ. ಎಲ್ಲ ಜೈಲುಗಳಲ್ಲೂ ವರ್ಷದಿಂದ ವರ್ಷಕ್ಕೆ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇವರ ಮೇಲೆ ನಿಗಾ ವಹಿಸಲು ಒಂದು ಪಾಳಿಗೆ 1:6 ಆಧಾರದಲ್ಲಿ ರಾಜ್ಯದಲ್ಲಿ 7,000 ಸಿಬ್ಬಂದಿ ಕಾರಾಗೃಹ ಇಲಾಖೆಯಲ್ಲಿ ಇರಬೇಕಿತ್ತು. ಆದರೆ, ರಾಜ್ಯದ ಎಲ್ಲ ಕಾರಾಗೃಹಗಳಿಗೆ ಈವರೆಗೆ ಮಂಜೂರಾಗಿರುವ ಹುದ್ದೆಗಳು ಕೇವಲ 3,583. ಈ ಪೈಕಿ ಸದ್ಯ 2,848 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 735 ಮಂದಿಯ ಕೊರತೆ ಅನುಭವಿಸುತ್ತಿದೆ.
ಕೈದಿಗಳೆಂದರೆ ಮೂಲಭೂತವಾಗಿ ಅಪರಾಧಿಕ ಹಿನ್ನೆಲೆಯವರು. ಜತೆಗೆ, ಕುಟುಂಬದಿಂದ ಪ್ರತ್ಯೇಕಗೊಂಡ ಕಾರಣಕ್ಕೆ ಸಾಮಾನ್ಯವಾಗಿಯೇ ಅವರ ಮಾನಸಿಕ ಸ್ಥಿತಿ ಹದಗೆಟ್ಟಿರುತ್ತದೆ. ಅಪರಾಧಿ ಮನಃಸ್ಥಿತಿ ಮತ್ತು ಮಾನಸಿಕ ಒತ್ತಡಗಳು ಒಂದಾದಾಗ ಅವರು ಪೈಶಾಚಿಕ ವರ್ತನೆಗಳನ್ನು ಜೈಲಿನಲ್ಲೂ ಪ್ರದರ್ಶಿಸುತ್ತಾರೆ. ಸಿಬ್ಬಂದಿ ಮೇಲೆ ದಾಳಿ ಮಾಡುತ್ತಾರೆ, ಹೊರ ಹೋಗಲು ಪ್ರಯತ್ನಿಸುತ್ತಾರೆ, ಬೇಕಿದ್ದನ್ನು ಪಡೆಯಲು ಅಕ್ರಮಗಳ ದಾರಿ ಹುಡುಕುತ್ತಾರೆ. ಸಿಬ್ಬಂದಿ ಕೊರತೆ ಇರುವಾಗ ಈ ಸವಾಲುಗಳನ್ನು ಎದುರಿಸುವುದು ಹೇಗೆ ಎಂಬ ಪ್ರಶ್ನೆ ಬಹುತೇಕ ಬಂದೀಖಾನೆ ಅಧಿಕಾರಿಗಳದ್ದು.
‘ಕೈದಿಯೊಬ್ಬನನ್ನು ಸಮಾಜಮುಖಿಯನ್ನಾಗಿ ಪರಿವರ್ತಿಸಲು ಮನೋವೈದ್ಯರು ಬೇಕು, ಆಪ್ತ ಸಮಾಲೋಚನೆ, ಸಲಹೆಗಳು ಬೇಕು. ಆದರೆ, ರಾಜ್ಯದ ಎಷ್ಟು ಜೈಲುಗಳಲ್ಲಿ ಆಪ್ತ ಸಮಾಲೋಚಕರು ಇದ್ದಾರೆ? ಇವರೇ ಇಲ್ಲದಿದ್ದ ಮೇಲೆ ಜೈಲಿನ ಮೂಲ ಉದ್ದೇಶ ಈಡೇರುವುದಾದರೂ ಹೇಗೆ? ಜೈಲಿಗೆ ಬಂದಾಗ ಕೈದಿಗಳು ವೈಯಕ್ತಿಕ ಬದುಕು, ಕುಟುಂಬದ ಸಂಪರ್ಕ ಕಳೆದುಕೊಳ್ಳುತ್ತಾರೆ. ಒಂದು ವೇಳೆ, ಅವರೇ ಕುಟುಂಬದ ಆಧಾರವಾಗಿದ್ದರೆ, ಅದರ ಚಿಂತೆಯಲ್ಲೇ ಮತ್ತಷ್ಟು ಕ್ರುದ್ಧರಾಗುತ್ತಾರೆ. ಒಳಗಿಂದಲೇ ಸಂಘ ಕಟ್ಟಿಕೊಂಡು ಕುಟುಂಬಕ್ಕಾಗಿ ಹೊರಗಡೆ ಕಳ್ಳತನ ಮಾಡಿಸಲು ಆರಂಭಿಸುತ್ತಾರೆ. ಇದನ್ನೆಲ್ಲ ತಡೆಯುವುದು ಹೇಗೆ? ಇದಕ್ಕಾಗಿಯೇ ನಿಯಮಾವಳಿಗಳಲ್ಲಿ ಬದಲಾವಣೆಯಾಗಬೇಕು. ಕೈದಿಗಳಿಗೆ ಕುಟುಂಬದ ಸಂಪರ್ಕವನ್ನು ಹೆಚ್ಚಿಸಬೇಕು’ ಎಂಬ ಮಾತು ಇಲಾಖೆಯಲ್ಲಿ ಆಂತರಿಕವಾಗಿ ಕೇಳಿ ಬರುತ್ತಿದೆ.
ನಿಯಮಗಳ ಪ್ರಕಾರ, ವಿಚಾರಣಾಧೀನ ಕೈದಿಗಳಿಗೆ ವಾರದಲ್ಲಿ ಎರಡು ಬಾರಿ ಫೋನ್ ಕರೆ, ಮುಲಾಖತ್ (ವಿಡಿಯೊ ಕರೆ) ಮಾಡಲು ಅವಕಾಶವಿದೆ. ಶಿಕ್ಷಾಬಂದಿಗೆ ಇವೆಲ್ಲವೂ 15 ದಿನಕ್ಕೆ ಎರಡು ಬಾರಿ ಮಾತ್ರ. ಈ ನಿಯಮಗಳನ್ನು ಸರಳಗೊಳಿಸಬೇಕು. ಕುಟುಂಬದೊಂದಿಗೆ ಮಾತನಾಡಲು ಹೆಚ್ಚು ಅವಕಾಶ ಸಿಕ್ಕಂತೆಲ್ಲ ಕೈದಿಗಳ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎನ್ನುತ್ತಾರೆ ಜೈಲು ವ್ಯವಸ್ಥೆಯನ್ನು ಬಲ್ಲವರು.
ತಮಿಳುನಾಡಿನಲ್ಲಿ ಮೊದಲ ಬಾರಿ ವಿಚಾರಣಾಧೀನ ಕೈದಿಗಳನ್ನು ನೇರವಾಗಿ ಜೈಲಿಗೆ ಹಾಕುವುದಿಲ್ಲ. ಅವರಿಗೆ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲಾಗುತ್ತದೆ. ಆದರೆ, ನಿಗಾ ವ್ಯವಸ್ಥೆ ಕಠಿಣವಾಗಿದೆ. ಕುಟುಂಬದ ನಿರ್ವಹಣೆ ಮಾಡಲು ಅವರಿಗೆ ಅವಕಾಶ ನೀಡಲಾಗುತ್ತಿದೆ. ಶಿಕ್ಷೆ ಸಾಬೀತಾದಾಗ ಮಾತ್ರ ಜೈಲಿಗೆ ಹಾಕುತ್ತಾರೆ. ಅಲ್ಲಿನ ವ್ಯವಸ್ಥೆ ರಾಜ್ಯದಲ್ಲೂ ಜಾರಿಗೆ ಬರಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ.
‘ರಾಜಸ್ಥಾನದ ಸಂಗನೇರ್ ಬಯಲು ಬಂದೀಖಾನೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವತ್ತ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ಅದೊಂದು ಕ್ಯಾಂಪ್. ಅಲ್ಲಿ, ಕೈದಿಯೊಬ್ಬ ಮನೆ ಕಟ್ಟಿಕೊಂಡು ಕುಟುಂಬಸ್ಥರೊಂದಿಗೆ ನೆಮ್ಮದಿಯಿಂದ ಬದುಕಲು ಅವಕಾಶವಿದೆ. ಆತ ಹೊರ ಜಗತ್ತಿಗೆ ಹೋಗಿ ದುಡಿದು ಬರಬಹುದು. ಆದರೆ, ಸಾಮಾನ್ಯ ಜನರಿಗಿದ್ದಂತೆ ಸಮಾಜ ಅವರಿಗೆ ಮುಕ್ತವಾಗಿರುವುದಿಲ್ಲ ಅಷ್ಟೆ. ಕೊಠಡಿಯೊಳಗೆ ಬಂದಿಯಾಗಿಡುವುದಕ್ಕಿಂತಲೂ ಇಂಥ ಸುಧಾರಿತ ಕ್ರಮಗಳ ಬಗ್ಗೆ ಚಿಂತಿಸುವ ಅಗತ್ಯವಿದೆ’ ಎಂದು ಹೇಳುತ್ತಾರೆ ನಿವೃತ್ತ ಮತ್ತು ಹಾಲಿ ಅಧಿಕಾರಿಗಳು.
ರಾಜ್ಯವೂ ಸೇರಿದಂತೆ ದೇಶದ ಜೈಲುಗಳಲ್ಲಿ ಭದ್ರತೆ, ಸಿಬ್ಬಂದಿ ಕೊರತೆ, ಅವ್ಯವಸ್ಥೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಜೈಲುಗಳ ಸುಧಾರಣೆಗಾಗಿ ರಚನೆಯಾಗುವ ಸಮಿತಿಗಳಲ್ಲಿ ಪೊಲೀಸ್ ಇಲಾಖೆಯೂ ಸೇರಿದಂತೆ ಸಾಮಾಜಿಕ ರಂಗದ ಪ್ರಮುಖರು, ನ್ಯಾಯಾಧೀಶರು, ವೈದ್ಯರು ಮತ್ತು ಇತರರು ಇರಬೇಕು. ಆಗ ಮಾತ್ರ ಸುಧಾರಣೆ ಕೇಂದ್ರಿತ ಶಿಫಾರಸುಗಳು ಬರಲು ಸಾಧ್ಯ. ಜತೆಗೆ ಶಿಫಾರಸುಗಳು ಅನುಷ್ಠಾನವಾದರೆ ಮಾತ್ರ ಜೈಲುಗಳು ಸುಧಾರಣೆ ಕಾಣಬಹುದು.–ಡಿ.ವಿ.ಗುರುಪ್ರಸಾದ್, ನಿವೃತ್ತ ಡಿಜಿಪಿ
ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ
ರಾಜ್ಯದ ಜೈಲುಗಳಲ್ಲಿರುವ ಮಹಿಳಾ ಕೈದಿಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿ ಇದ್ದಾರೆ. ಒಟ್ಟು ಇರುವ ಸಿಬ್ಬಂದಿ ಪೈಕಿ 1,000 ಮಂದಿ ಮಹಿಳೆಯರಿದ್ದಾರೆ.
‘ಜೈಲು ವ್ಯವಸ್ಥೆಗೆ ಮಹಿಳಾ ಸಿಬ್ಬಂದಿ ಹೊಂದುವುದಿಲ್ಲ. ಬಹುತೇಕ ಸಮಯದಲ್ಲಿ ಕೈದಿಗಳನ್ನು ಮುಟ್ಟಿ ಪರೀಕ್ಷೆ ಮಾಡಬೇಕಾಗುತ್ತದೆ. ಕೊಠಡಿಗಳಿಗೆ ಒಬ್ಬೊಬ್ಬರೇ ಸಿಬ್ಬಂದಿ ಹೋಗಿ ಪರಿಶೀಲಿಸಬೇಕಾಗಿರುತ್ತದೆ. ಇದು ಮಹಿಳಾ ಸಿಬ್ಬಂದಿಯಿಂದ ಸಾಧ್ಯವೇ ಆಗುವುದಿಲ್ಲ. ಹಲವು ಸಂದರ್ಭಗಳಲ್ಲಿ ಪುರುಷ ಬಂದಿಗಳು ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಇವು ಹೊರಗೇ ಬರುತ್ತಿಲ್ಲ. ದೌರ್ಜನ್ಯಕ್ಕೆ ಒಳಗಾದ ಮಹಿಳಾ ಸಿಬ್ಬಂದಿ ದೂರು ನೀಡಲೂ ಹಿಂಜರಿಯುತ್ತಿದ್ದಾರೆ’ ಎಂದು ಹೇಳುತ್ತಾರೆ ವಿವಿಧ ಜೈಲಿನ ಅಧಿಕಾರಿಗಳು.
‘ಪುರುಷ ಕೈದಿಗಳೇ ಹೆಚ್ಚಿರುವ ಕಾರಾಗೃಹಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸುವುದರಲ್ಲಿ ಅರ್ಥ ಇಲ್ಲ. ಜೈಲು ವ್ಯವಸ್ಥೆಯನ್ನು ವಿಶೇಷ ವಲಯವೆಂದು ಪರಿಗಣಿಸಿ ಇಲ್ಲಿ ಮಹಿಳಾ ಮೀಸಲಾತಿಯನ್ನು ತೆಗೆದು, ಎಷ್ಟು ಬೇಕೋ ಅಷ್ಟು ಸಂಖ್ಯೆಯ ಮಹಿಳಾ ಸಿಬ್ಬಂದಿ ನೇಮಿಸಿಕೊಳ್ಳುವುದು ಈ ಹೊತ್ತಿನ ಅಗತ್ಯ’ ಎಂಬುದು ಮಹಿಳಾ ಅಧಿಕಾರಿಯೊಬ್ಬರ ಅಭಿಪ್ರಾಯ.
ಕಡತದಲ್ಲಿ ಶಿಫಾರಸುಗಳು
ಕಾರಾಗೃಹಗಳಲ್ಲಿ ಏನಾದರೂ ಸಮಸ್ಯೆಗಳಾದಾಗ ಅಧಿಕಾರಿಗಳ ಲೋಪಗಳು ಮುನ್ನೆಲೆಗೆ ಬರುತ್ತವೆ. ಒತ್ತಡದ ಕಾರಣಕ್ಕೆ ಹಲವು ಅಧಿಕಾರಿಗಳೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮದಲ್ಲದ ತಪ್ಪಿಗೆ ಹಲವರು ಅಮಾನತುಗೊಂಡಿದ್ದಾರೆ. ಆಗ ಅಧ್ಯಯನಕ್ಕೆ ಸಮಿತಿಗಳು ಬರುತ್ತವೆ. ಸಮಿತಿಗಳು ಮೂಲ ಸಮಸ್ಯೆಗಳನ್ನೇ ಬದಿಗಿಟ್ಟು, ಮೇಲ್ನೋಟದ ಸಮಸ್ಯೆಗಳಿಗೆ ಮಾತ್ರ ಪರಿಹಾರ ಹೇಳುತ್ತವೆ. ಸಮಿತಿಗಳ ಶಿಫಾರಸುಗಳನ್ನು ಜಾರಿಗೆ ತರಲೂ ಸರ್ಕಾರ ಮನಸ್ಸು ಮಾಡುವುದಿಲ್ಲ.
2013ರಲ್ಲಿ ಪರಪ್ಪನ ಅಗ್ರಹಾರ ಜೈಲಿನಂದ ಜೈಶಂಕರ್ ಎಂಬ ಕೈದಿ ಪರಾರಿಯಾಗಿದ್ದ. ಹೀಗಾಗಿ, ಜೈಲು ಭದ್ರತೆ ಪರಾಮರ್ಶೆಗೆ ಉನ್ನತಾಧಿಕಾರ ಸಮಿತಿ ನೇಮಕವಾಯಿತು. ಭದ್ರತೆಗೆ ಸಂಬಂಧಿಸಿದಂತೆ ಅದು ನೀಡಿದ ವರದಿ ಸಮರ್ಪಕವಾಗಿ ಅನುಷ್ಠಾನವೇ ಆಗಿಲ್ಲ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾಗೆ ವಿಶೇಷ ಆತಿಥ್ಯ ನೀಡಿದ ವಿಷಯ 2017ರಲ್ಲಿ ಬಹಿರಂಗಗೊಂಡಿತು. ಐಪಿಎಸ್ ಅಧಿಕಾರಿ ಡಿ.ರೂಪಾ ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆಗ ಜೈಲುಗಳ ಸ್ಥಿತಿಗತಿಯ ಕುರಿತು ಅಧ್ಯಯನ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ಸಮಿತಿಯೊಂದನ್ನು ಸರ್ಕಾರ ರಚಿಸಿತ್ತು ಜೈಲಿನಲ್ಲಿ 20 ಕೈದಿಗಳಿಗೆ ಒಬ್ಬ ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿರುವುದಾಗಿಯೂ ಸಮಿತಿ ವರದಿಯಲ್ಲಿ ಹೇಳಿತ್ತು. ವಾರ್ಡನ್ ಹಂತದಲ್ಲೇ ಶೇ 61ರಷ್ಟು ಸಿಬ್ಬಂದಿ ಕಡಿಮೆ ಇರುವುದಾಗಿಯೂ ಹೇಳಿತ್ತು. ಸಮಿತಿ ವರದಿ ನೀಡಿ 7 ವರ್ಷ ಕಳೆದಿದೆ, ಜೈಲುಗಳು ಈಗಲೂ ಸಿಬ್ಬಂದಿ ಕೊರತೆ ಅನುಭವಿಸುತ್ತಿವೆ.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಜೈಲು ವ್ಯವಸ್ಥೆ ಚೆನ್ನಾಗಿದೆ. ಇಲ್ಲಿ ಸಿಬ್ಬಂದಿ ಕೊರತೆಯೇ ಸಮಸ್ಯೆ. ಜತೆಗೆ, ಸಿಬ್ಬಂದಿಗೆ ತರಬೇತಿ, ರಕ್ಷಣಾ ಆಯುಧ ನೀಡಬೇಕು. ಸಾವಿರ ಜನಕ್ಕೆ ಒಂದು ಜೈಲು ಎಂಬಂತಾಗಬೇಕು. ವಿಚಾರಣಾಧೀನ, ಶಿಕ್ಷಾಬಂದಿ, ಅಪಾಯಕಾರಿ ಪ್ರವೃತ್ತಿಯುಳ್ಳ ಕೈದಿಗಳನ್ನೂ ವಿಭಾಗಿಸಬೇಕು. ಜೈಲು ಸುಧಾರಣೆಗೆ ರಚನೆಯಾಗುವ ಸಮಿತಿಗಳಲ್ಲಿ ಜೈಲು ಅಧಿಕಾರಿಗಳೂ ಇರಬೇಕು. ಸುಧಾರಣೆಯ ವಿಷಯ ಬಂದಾಗ ಕಠಿಣ ಕ್ರಮಗಳು ಇರಬಾರದು, ಉದಾರವಾಗಿರಬೇಕು..–ವಿ.ಎಸ್.ರಾಜಾ, ನಿವೃತ್ತ ಎಐಜಿ, ಕಾರಾಗೃಹ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.