‘ಫೇಸ್‌ಬುಕ್ ಸಾರ್ವಜನಿಕ ಹಿತಾಸಕ್ತಿ ಮತ್ತು ಸ್ವಹಿತಾಸಕ್ತಿಗಳ ಮಧ್ಯೆ ಸ್ವಹಿತಾಸಕ್ತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತದೆ. ಕಂಪನಿಯು ಹಣ ಮಾಡಲಷ್ಟೇ ಆದ್ಯತೆ ನೀಡುತ್ತದೆ’ ಎಂದುಫೇಸ್‌ಬುಕ್‌ನ ಮಾಜಿ ಉದ್ಯೋಗಿ ಫ್ರಾನ್ಸಿನ್ ಹಾಗನ್ ಆರೋಪಿಸಿದ್ದಾರೆ. ಅವರ ಆರೋಪಗಳ ಕುರಿತು ಅಮೆರಿಕದ ಸೆನೆಟ್ ವಿಚಾರಣೆ ಸಹ ಆರಂಭಿಸಿದೆ. ವಿಚಾರಣೆಯ ಭಾಗವಾಗಿ ಹಾಗನ್ ಸಹ ಸೆನೆಟ್ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.
ದ್ವೇಷ, ಸುಳ್ಳುಸುದ್ದಿಗೆ ನಿರ್ಲಕ್ಷ್ಯ
‘ದ್ವೇಷ ಮತ್ತು ಹಿಂಸಾಚಾರವನ್ನು ಹರಡಲು ಮತ್ತು ಉದ್ದೀಪಿಸಲು ಫೇಸ್‌ಬುಕ್ ಬಳಕೆಯಾಗುತ್ತಿದೆ. ಈ ಬಗ್ಗೆ ಫೇಸ್‌ಬುಕ್‌ಗೆ ಅರಿವಿದ್ದೂ, ಅದನ್ನು ನಿರ್ಲಕ್ಷಿಸಿದೆ. ಸುಳ್ಳು ಸುದ್ದಿ ಹರಡುವ ಪೋಸ್ಟ್‌ಗಳ ವಿಚಾರದಲ್ಲೂ ಫೇಸ್‌ಬುಕ್ ಇದೇ ನೀತಿಯನ್ನು ಅನುರಿಸಿದೆ’ ಎಂದು ಹಾಗನ್ ಹೇಳಿದ್ದಾರೆ. ಈ ಸಂಬಂಧ ಫೇಸ್‌ಬುಕ್ ಉದ್ಯೋಗಿಗಳ ಮಧ್ಯೆ ನಡೆದಿರುವ ಇ-ಮೇಲ್ ವ್ಯವಹಾರ ಮತ್ತು ಪರಿಶೀಲನಾ ವರದಿಗಳ ಪ್ರತಿಗಳನ್ನು ಹಾಗನ್ ಮಾಧ್ಯಮಗಳಿಗೆ ನೀಡಿದ್ದಾರೆ.
ಅಮೆರಿಕದ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಒಂದು ಪಕ್ಷ/ನಾಯಕನ ಪರವಾಗಿ ಫೇಸ್‌ಬುಕ್ ಬಳಸಿಕೊಳ್ಳಲಾಗಿದೆ. ಚುನಾವಣೆಗೆ ಫೇಸ್‌ಬುಕ್ ದುರ್ಬಳಕೆಯಾಗದಂತೆ ಫೇಸ್‌ಬುಕ್, ಮಾರ್ಗಸೂಚಿಗಳನ್ನು ಸಿದ್ಧಪಡಿಸಿತ್ತು. ಈ ಮಾರ್ಗಸೂಚಿಗಳಲ್ಲಿ ಹಲವು ನ್ಯೂನತೆಗಳಿದ್ದವು. ಆ ನ್ಯೂನತೆಗಳನ್ನು ಬಳಸಿಕೊಂಡು, ಚುನಾವಣೆಯ ಫಲಿತಾಂಶದವಿರುದ್ಧ ಫೇಸ್‌ಬುಕ್ ಮೂಲಕ ಜನಾಭಿಪ್ರಾಯವನ್ನು ರೂಪಿಸಲಾಗಿತ್ತು. ಇದು ಗೊತ್ತಿದ್ದರೂ, ಫೇಸ್‌ಬುಕ್ ಯಾವುದನ್ನೂ ತಡೆಯಲಿಲ್ಲ ಎಂದು ಹಾಗನ್ ಹೇಳಿದ್ದಾರೆ.
‘ಚುನಾವಣೆಯಲ್ಲಿ ತಾವು ಸೋಲುತ್ತೀವಿ ಎಂದು ಗೊತ್ತಾದ ತಕ್ಷಣ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ‘ಮತ ಎಣಿಕೆಯಲ್ಲಿ ಮೋಸ ನಡೆಯುತ್ತಿದೆ. ಇದನ್ನು ತಡೆಯಬೇಕು’ ಎಂದು ಕರೆ ನೀಡಿದರು. ಇದಕ್ಕಾಗಿ ‘ಸ್ಟಾಪ್ ದಿ ಸ್ಟೀಲ್’ ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಪೋಸ್ಟ್ ಮಾಡಿದರು. ಈ ಹ್ಯಾಷ್‌ಟ್ಯಾಗ್ ಅಡಿ ಸಾವಿರಾರು ಮಂದಿ ಪೋಸ್ಟ್ ಮಾಡಲು ಆರಂಭಿಸಿದರು. ಈ ಪೋಸ್ಟ್‌ಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿತ್ತು. ಈ ಬಗ್ಗೆ ಫೇಸ್‌ಬುಕ್ ಸುಳ್ಳುಸುದ್ದಿ ತಡೆ ಘಟಕವು, ಎಚ್ಚರಿಕೆ ನೀಡಿತು. ಆದರೆ ಈ ಪೋಸ್ಟ್‌ಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆ ಮೂಲಕ ಹಿಂಸಾಚಾರ ನಡೆಯಲು ಫೇಸ್‌ಬುಕ್ ಸಹ ಕಾರಣವಾಯಿತು. ಈ ಮೂಲಕ ಪ್ರಜಾಪ್ರಭುತ್ವಕ್ಕೆ ಮಾರಕವಾಗುವಂತೆ ಫೇಸ್‌ಬುಕ್ ನಡೆದುಕೊಂಡಿತು’ ಎಂದು ಹಾಗನ್ ಹೇಳಿದ್ದಾರೆ. ಅವರು ಬಿಡುಗಡೆ ಮಾಡಿರುವ ಫೇಸ್‌ಬುಕ್‌ನ ಆಂತರಿಕ ಪರಿಶೀಲನಾ ವರದಿಗಳ ಪ್ರತಿಗಳಲ್ಲೂ ಈ ಮಾಹಿತಿ ಇದೆ. ಸೆನೆಟ್ ಎದುರು ನೀಡಿರುವ ಸಾಕ್ಷ್ಯ ಹೇಳಿಕೆಯಲ್ಲೂ ಅವರು ಈ ಮಾಹಿತಿ ನೀಡಿದ್ದಾರೆ.
‘ದ್ವೇಷ, ಹಿಂಸಾಚಾರವನ್ನು ಪ್ರಚೋದಿಸುವ ಪೋಸ್ಟ್‌ಗಳು ಮತ್ತು ಸುಳ್ಳು ಸುದ್ದಿಗಳು ಹೆಚ್ಚಿನ ಅವಧಿಯವರೆಗೆ ಚಾಲ್ತಿಯಲ್ಲಿ ಇರುತ್ತವೆ. ಅವು ಹೆಚ್ಚು ಚಾಲ್ತಿಯಲ್ಲಿ ಇರುವ ಕಾರಣ ಫೇಸ್‌ಬುಕ್‌ಗೆ ಜಾಹೀರಾತು ಮೂಲದ ಆದಾಯ ಹೆಚ್ಚಾಗುತ್ತದೆ. ಇದೇ ಕಾರಣದಿಂದ ದ್ವೇಷ, ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಸುಳ್ಳು ಸುದ್ದಿಗಳನ್ನು ಹರಡುವ ಪೋಸ್ಟ್‌ಗಳು ಮತ್ತು ಖಾತೆಗಳ ವಿರುದ್ಧ ಫೇಸ್‌ಬುಕ್ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಆ ಮೂಲಕ ಫೇಸ್‌ಬುಕ್ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದೆ’ ಎಂದು ಹಾಗನ್ ಆರೋಪಿಸಿದ್ದಾರೆ.
----
ದ್ವೇಷ ತಡೆ: ಭಾರತೀಯ ಭಾಷೆ ಬಲ್ಲವರಿಲ್ಲ
‘ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಬಳಕೆದಾರರು, ಗುಂಪುಗಳು ಮತ್ತು ಪುಟಗಳು ಜನರಲ್ಲಿ ಭೀತಿ ಹುಟ್ಟಿಸುತ್ತಿವೆ ಹಾಗೂ ಮುಸ್ಲಿಂ ವಿರೋಧಿ ಕಥನಗಳನ್ನು ಹರಡುತ್ತಿವೆ ಎಂಬುದರ ಅರಿವು ಇದ್ದರೂ ಅದರ ವಿರುದ್ಧ ಕ್ರಮ ಕೈಗೊಳ್ಳಲು ಅಥವಾ ಅಂತಹ ಕಂಟೆಂಟ್ ಅನ್ನು ತಡೆಯಲು ಫೇಸ್‌ಬುಕ್ ಯಾವ ಕ್ರಮವನ್ನೂ ಕೈಗೊಂಡಿಲ್ಲ’ ಎಂದು ಫ್ರಾನ್ಸಿಸ್ ಹಾಗನ್ ಅವರು ಅಮೆರಿಕದಲ್ಲಿ (ಸೆಕ್ಯುರಿಟೀಸ್ ಎಂಡ್ ಎಕ್ಸ್‌ಚೇಂಜ್ ಕಮಿಷನ್) ನೀಡಿದ ದೂರಿನಲ್ಲಿ ವಿವರಿಸಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಹಿಂದಿ ಮತ್ತು ಬಂಗಾಳಿ ಭಾಷೆಯಲ್ಲಿನ ದ್ವೇಷದ ಕಂಟೆಂಟ್‌ಗಳನ್ನು ವರ್ಗೀಕರಿಸುವ ಸಾಮರ್ಥ್ಯದ ಕೊರತೆಯೂ ಇದಕ್ಕೆ ಒಂದು ಕಾರಣ ಎಂದು ಅವರು ಆರೋಪಿಸಿದ್ದಾರೆ.
ಫೇಸ್‌ಬುಕ್‌ಗೆ ಭಾಷೆಗಳ ವಿಷಯದಲ್ಲಿ ಇರುವ ಅಸಾಮರ್ಥ್ಯವು ಜಾಗತಿಕ ಮಟ್ಟದಲ್ಲಿ ತಪ್ಪು ಮಾಹಿತಿ ಹರಡುವಿಕೆ ಹಾಗೂ ಜನಾಂಗೀಯ ಹಿಂಸೆಗೆ ಕಾರಣವಾಗಿದೆ ಎಂಬುದು ಹಾಗನ್ ಅವರ ಆರೋಪಗಳಲ್ಲಿ ಮುಖ್ಯವಾದುದು.
ಫೇಸ್‌ಬುಕ್‌ನಲ್ಲಿ ಭಾರತೀಯ ಭಾಷೆಗಳನ್ನು ಬಲ್ಲ ಸಿಬ್ಬಂದಿಯಕೊರತೆ ತೀವ್ರವಾಗಿರುವುದರಿಂದ ದ್ವೇಷ ಭಾಷಣಗಳು ಯಾವುದೇ ಪರಿಶೀಲನೆ ಇಲ್ಲದೆಯೇ ಪ್ರಕಟವಾಗುತ್ತವೆ. ಒಬ್ಬರೇ ಬಳಕೆದಾರರು ಹಲವು ಖಾತೆಗಳನ್ನು ನಿರ್ವಹಿಸುವ ಮಾದರಿಯನ್ನು ಬಿಜೆಪಿ ಬಳಸುತ್ತಿದೆ. ಈ ಖಾತೆಗಳ ಮೂಲಕ ಪ್ರಚಾರ ನಡೆಸಲಾಗುತ್ತದೆ. ಇದು ನೆರೆಯ ಬಾಂಗ್ಲಾದೇಶದಲ್ಲಿಯೂ ಸಮಸ್ಯೆಗೆ ಕಾರಣವಾಗಿದೆ ಎಂದು ಎಂದು ಹಾಗನ್ ಆರೋಪಿಸಿದ್ದಾರೆ. ಈ ಯಾವುದೇ ಆರೋಪದ ಬಗ್ಗೆ ಆರ್‌ಎಸ್‌ಎಸ್ ಅಥವಾ ಬಿಜೆಪಿಯಿಂದ ಪ್ರತಿಕ್ರಿಯೆ ಬಂದಿಲ್ಲ.
ಅಡ್ವರ್ಸರಿಯಲ್ ಹಾರ್ಮ್‌ಫುಲ್ ನೆಟ್‌ವರ್ಕ್ಸ್– ಇಂಡಿಯಾ ಕೇಸ್ ಸ್ಟಡಿ (ಪ್ರತಿಕೂಲ ತೊಂದರೆದಾಯಕ ಜಾಲಗಳು– ಭಾರತದ ಪ್ರಕರಣ ಅಧ್ಯಯನ) ಎಂಬ ಫೇಸ್‌ಬುಕ್‌ನ ಸೋರಿಕೆಯಾದ ದಾಖಲೆಯನ್ನು ಎಸ್‌ಇಸಿಗೆ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಸಿಬಿಎಸ್ ನ್ಯೂಸ್ ವೆಬ್‌ಸೈಟ್ ಹೇಳಿದೆ.
ಅತಿ ಹೆಚ್ಚು ಜನರು ನೋಡಿದ್ದಾರೆ ಎಂದು ಹೇಳಲಾಗುವ ಪೋಸ್ಟ್‌ಗಳು ನಕಲಿ ಎಂದು ಫೇಸ್‌ಬುಕ್‌ನ ಆಂತರಿಕ ಸಮೀಕ್ಷೆಯೊಂದನ್ನು ಉಲ್ಲೇಖಿಸಿ ಹಾಗನ್ ಹೇಳಿದ್ದಾರೆ. ಈ ಸಮೀಕ್ಷೆಯು ಯಾವಾಗ ನಡೆಸಿದ್ದು ಎಂಬ ವಿವರಗಳು ಇಲ್ಲ.
ನೀತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಫೇಸ್‌ಬುಕ್‌ನ ಗರಿಷ್ಠ ಆದ್ಯತೆಯ ದೇಶಗಳಲ್ಲಿ ಭಾರತವೂ ಇದೆ ಎಂದು ಸಂಸ್ಥೆಯು ಹೇಳಿಕೊಳ್ಳುತ್ತಿದೆ. ಫೇಸ್‌ಬುಕ್‌ನ ಮೂಲಕ ತಪ್ಪು ಮಾಹಿತಿ, ಸುಳ್ಳು ಮಾಹಿತಿ ಮತ್ತು ದ್ವೇಷ ಹರಡುವ ಮಾಹಿತಿಯನ್ನು ಪತ್ತೆ ಮಾಡಿ ಅಳಿಸಿ ಹಾಕುವುದಕ್ಕಾಗಿ ದೊಡ್ಡ ಮೊತ್ತವನ್ನು ಸಂಸ್ಥೆಯು ವ್ಯಯ ಮಾಡುತ್ತಿದೆ. ಆದರೆ, ಈ ವಿಚಾರದಲ್ಲಿ ಭಾರತಕ್ಕೆ ಆದ್ಯತೆ ಇಲ್ಲ. ಇದಕ್ಕಾಗಿ ಇರಿಸಲಾದ ಮೊತ್ತದಲ್ಲಿ ಶೇ 83ರಷ್ಟನ್ನು ಅಮೆರಿಕಕ್ಕೆ ಮೀಸಲು ಇರಿಸಲಾಗಿದೆ ಎಂದು ಕಳೆದ ವರ್ಷ ಸೋರಿಕೆಯಾದ ಮಾಹಿತಿಯೊಂದು ಹೇಳಿತ್ತು.
--------
ತಪ್ಪು ಮಾಹಿತಿ ವಿರುದ್ಧದ ದನಿ
ಫ್ರಾನ್ಸಿಸ್ ಹಾಗನ್, ಅಮೆರಿಕದ ಒಬ್ಬ ಡೇಟಾ ಎಂಜಿನಿಯರ್ ಹಾಗೂ ವಿಜ್ಞಾನಿ. ಫೇಸ್‌ಬುಕ್‌ನ ಮಾಜಿ ಉದ್ಯೋಗಿ.ಹಗರಣಗಳನ್ನು ಹೊರಗೆಳೆಯುವ ವಿಷಲ್ ಬ್ಲೋವರ್ ಕೂಡ ಹೌದು. ಫೇಸ್‌ಬುಕ್‌ನ 10 ಸಾವಿರಕ್ಕೂ ಹೆಚ್ಚು ಆಂತರಿಕ ಭದ್ರತೆಯ ದಾಖಲೆಗಳನ್ನು ಬಹಿರಂಗ ಮಾಡಿರುವ ಅವರು, ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಅದರ ಪರಿಣಾಮವಾಗಿ ಆ ಪತ್ರಿಕೆಯಲ್ಲಿ ಫೇಸ್‌ಬುಕ್ ವಿರುದ್ಧ ‘ಫೇಸ್‌ಬುಕ್ ಫೈಲ್ಸ್’ ಹೆಸರಿನಲ್ಲಿ ಸರಣಿ ವರದಿಗಳು ಪ್ರಕಟವಾದವು.
ಮೊದಲು ‘ವಿಷಲ್ ಬ್ಲೋವರ್’ ಹೆಸರಿನಲ್ಲಿ ಅನಾಮಧೇಯವಾಗಿದ್ದ ಹಾಗನ್, ಅಕ್ಟೋಬರ್ ಆರಂಭದಲ್ಲಿ ತಮ್ಮ ಗುರುತನ್ನು ಬಹಿರಂಗಪಡಿಸಿದ್ದರು.
37 ವರ್ಷದ ಹಾಗನ್, ಫೇಸ್‌ಬುಕ್‌ನಲ್ಲಿ ಎರಡು ವರ್ಷ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಫೇಸ್‌ಬುಕ್ ವೇದಿಕೆಯ ಮೂಲಕ ತಪ್ಪು ಮಾಹಿತಿ ಹರಡುವುದನ್ನು ತಡೆಯುವುದು ಹಾಗೂ ಪ್ರಜಾಪ್ರಭುತ್ವ ವಿರೋಧಿ ಕೆಲಸಕ್ಕೆ ಈ ವೇದಿಕೆಯು ಬಳಕೆಯಾಗದಂತೆ ನೋಡಿಕೊಳ್ಳುವುದು ಅವರ ಕೆಲಸವಾಗಿತ್ತು.
ಹಾರ್ವರ್ಡ್ ವಿಶ್ವವಿದ್ಯಾಲಯದ ಪದವೀಧರೆಯಾಗಿರುವ ಹಾಗನ್‌ಗೆ, ಇದಕ್ಕೂ ಮುನ್ನ ಗೂಗಲ್, ಯೆಲ್ಪ್ ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವವಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹರಡುವುದರ ವಿರುದ್ಧ ದನಿ ಎತ್ತುವುದು ತಮಗೆ ಯಾವಾಗಲೂ ಆಸ್ಥೆಯ ವಿಷಯವಾಗಿತ್ತು ಎಂದು ಅವರು ವಾಲ್‌ಸ್ಟ್ರೀಟ್ ಜರ್ನಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
2018ರಲ್ಲಿ ಫೇಸ್‌ಬುಕ್ ಅವರನ್ನು ಸಂಪರ್ಕಿಸಿದಾಗ, ಅವರು ತಮ್ಮ ಇಷ್ಟದ ವಿಭಾಗ ಯಾವುದು ಎಂಬುದನ್ನು ಹೇಳಿದ್ದರು. 2019ರಲ್ಲಿ, ಕೆಲಸಕ್ಕೆ ಸೇರಿದಾಗ ಕಂಪನಿಯ ‘ನಾಗರಿಕ ಬದ್ಧತೆ’ಯ ತಂಡದಲ್ಲಿ ಕಾರ್ಯ ಆರಂಭಿಸಿದರು. ಅದು ಚುನಾವಣಾ ಹಸ್ತಕ್ಷೇಪವನ್ನು ನೋಡಿಕೊಳ್ಳುವ ವಿಭಾಗವಾಗಿತ್ತು. ಆದರೆ, 2020ರಲ್ಲಿ ನಡೆದ ಅಮೆರಿಕದ ಅಧ್ಯಕ್ಷರ ಚುನಾವಣೆ ಮುಗಿದ ಬಳಿಕ ಆ ವಿಭಾಗವು ವಿಸರ್ಜನೆಯಾಯಿತು. ಇದರಿಂದಾಗಿ, ಫೇಸ್‌ಬುಕ್ ಮೇಲೆ ತಮಗಿದ್ದ ವಿಶ್ವಾಸ ಕಡಿಮೆಯಾಯಿತು. ಅಲ್ಲದೇ ಕಂಪನಿಯು, ತಪ್ಪು ಮಾಹಿತಿ ಹರಡುವಿಕೆಯನ್ನು ತಡೆಯುವಲ್ಲಿ ಹೆಚ್ಚಿನ ಪ್ರಯತ್ನ ಮಾಡುತ್ತಿಲ್ಲ ಎಂದು ಸಿಬಿಎಸ್ ನ್ಯೂಸ್‌ನ ‘60 ಮಿನಿಟ್ಸ್’ ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷರ ಚುನಾವಣೆಯ ಬಳಿಕ, ಫೇಸ್‌ಬುಕ್ ಸುರಕ್ಷತಾ ಕ್ರಮಗಳನ್ನು ತೆಗೆದುಹಾಕಿತ್ತು. ಹೀಗಾಗಿ ಜ.6ರಂದು ನಡೆದ ಗಲಭೆಗೆ ಫೇಸ್‌ಬುಕ್ ಅನ್ನು ಬಳಸಿಕೊಳ್ಳಲಾಗಿತ್ತು ಎಂಬುದು ಅವರ ಆರೋಪಗಳಲ್ಲೊಂದು.
ಸಾರ್ವಜನಿಕರು ಹಾಗೂ ಹೂಡಿಕೆದಾರರಿಂದ ಬಂದ ಪ್ರತಿಕ್ರಿಯೆಗಳನ್ನು ಫೇಸ್‌ಬುಕ್ ಬಹಿರಂಗಪಡಿಸುತ್ತಿಲ್ಲ ಎಂದೂ ಹೇಳಿದ್ದಾರೆ. ತಪ್ಪು ಮಾಹಿತಿ ಹರಡುವಿಕೆಯಿಂದ ಮುಖ್ಯವಾಗಿ ಹದಿಹರೆಯದ ಹೆಣ್ಣುಮಕ್ಕಳ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಅರಿವಿದ್ದರೂ ಅದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂಬುದು ಅವರ ದೂರು ಮತ್ತು ಆತಂಕ.
----
‘ಆರೋಪವು ತರ್ಕಹೀನ’
ಪ್ರಾನ್ಸಿಸ್ ಹಾಗನ್ ಅವರು ಮಾಡಿರುವ ಆರೋಪಗಳನ್ನು ಫೇಸ್‌ಬುಕ್ ವಕ್ತಾರೆ ಲೀನಾ ಪೀಟ್ಶ್ ತಳ್ಳಿಹಾಕಿದ್ದಾರೆ. ತಪ್ಪು ಮಾಹಿತಿ ಮತ್ತು ಅಪಾಯಕಾರಿ ವಿಷಯ ಹರಡುವುದನ್ನು ತಡೆಯಲು ಮಹತ್ವದ ಸುಧಾರಣೆಗಳನ್ನು ಕಂಪನಿ ತಂದಿದೆ ಎಂದಿದ್ದಾರೆ.
‘ಪ್ರತಿದಿನ ಕೋಟ್ಯಂತರ ಜನರು ನಮ್ಮ ವೇದಿಕೆ ಮೂಲಕ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾರೆ. ಅವರು ಮುಕ್ತವಾಗಿ ಅನಿಸಿಕೆ ವ್ಯಕ್ತಪಡಿಸುವ ನಿಟ್ಟಿನಲ್ಲಿ ನಮ್ಮ ವೇದಿಕೆಯನ್ನು ಸುರಕ್ಷಿತವಾದ ಮತ್ತು ಧನಾತ್ಮಕ ವೇದಿಕೆಯನ್ನಾಗಿ ಇರಿಸಲು ನಮ್ಮ ಸಿಬ್ಬಂದಿ ತಂಡಗಳು ಶ್ರಮಿಸುತ್ತಿವೆ. ಹಾನಿಕಾರಕ ವಿಷಯ ಅಥವಾ ವಸ್ತುವನ್ನು ನಾವು ಬೆಂಬಲಿಸುತ್ತೇವೆ ಮತ್ತು ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಸುಳ್ಳು’ ಎಂದಿದ್ದಾರೆ.
ನಮ್ಮ ಸಂಸ್ಥೆ ಕುರಿತು ತಪ್ಪು ಅಭಿಪ್ರಾಯ ಬರುವಂತೆ ಮಾಡಲು ಹಾಗನ್ ಹೀಗೆ ಹೇಳಿದ್ದಾರೆ. ನಮ್ಮ ಸಂಸ್ಥೆಯ ಉತ್ಪನ್ನವನ್ನು ಅಭಿವೃದ್ಧಿಪಡಿಸಲು ನಾವು ಯಾವುದೇ ರೀತಿಯ ಸಂಶೋಧನೆಗಳನ್ನು ಮಾಡುತ್ತಿಲ್ಲ ಎಂದು ಬಿಂಬಿಸಲಾಗಿದೆ ಎಂದಿದ್ದಾರೆ.
ಜುಗರ್‌ಬರ್ಗ್ ಪ್ರತಿಕ್ರಿಯೆ:ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಕೂಡಾ ಈ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಮಗೆ ಜಾಹೀರಾತುಗಳಿಂದ ಆದಾಯ ಬರುತ್ತದೆ. ದ್ವೇಷಪೂರಿತ ಅಥವಾ ಹಾನಿಕಾರಕ ವಿಷಯದ ಜೊತೆ ನಮ್ಮ ಜಾಹೀರಾತನ್ನು ಹಾಕುವುದು ಬೇಡವೆಂದು ಜಾಹೀರಾತುದಾರರೇ ಹೇಳುತ್ತಾರೆ. ಹಾನಿಕಾರಕ ವಿಷಯಗಳಿಂದ ಲಾಭ ಮಾಡುತ್ತೇವೆ ಎಂಬುದು ತರ್ಕಹೀನ ಆರೋಪವಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.