ADVERTISEMENT

ಅನುಭವ ಮಂಟಪ | ಮಾಧುಸ್ವಾಮಿ ವರದಿಯೇ ಆಧಾರವಾಗಲಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 1:06 IST
Last Updated 18 ಅಕ್ಟೋಬರ್ 2024, 1:06 IST
<div class="paragraphs"><p>ಪಿ. ರಾಜೀವ್‌</p></div>

ಪಿ. ರಾಜೀವ್‌

   

ಸುಪ್ರೀಂ ಕೋರ್ಟ್‌ ಆಗಸ್ಟ್‌ 1ರಂದು ನೀಡಿರುವ ತೀರ್ಪಿನೊಂದಿಗೆ ಒಳಮೀಸಲಾತಿ ಬೇಡಿಕೆಗೆ ತಾರ್ಕಿಕ ಅಂತ್ಯ ಸಿಕ್ಕಿದೆ. ರಾಜ್ಯದಲ್ಲಿ ನ್ಯಾ. ಸದಾಶಿವ ಆಯೋಗದ ವರದಿಯ ಆಧಾರದಲ್ಲಿ ಒಳಮೀಸಲಾತಿ ಜಾರಿಗೆ ತರಬೇಕು ಎಂಬ ಚರ್ಚೆ ನಡೆಯುತ್ತಿದೆ. ಸದಾಶಿವ ಆಯೋಗವು ಪರಿಶಿಷ್ಟ ಜಾತಿಗಳಿಗೆ ಈ ಹಿಂದೆ ಇದ್ದ ಶೇ 15ರ ಮೀಸಲಾತಿ ಆಧಾರದಲ್ಲಿ ಒಳಮೀಸಲಾತಿಯನ್ನು ವರ್ಗೀಕರಣ ಮಾಡಿತ್ತು. ಆ ವರದಿ ಈಗ ಅಪ್ರಸ್ತುತ.

ರಾಜ್ಯದಲ್ಲಿ ಈಗ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ 17ರಷ್ಟು ಮೀಸಲಾತಿ ಇದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಮೀಸಲಾತಿ ಪ್ರಮಾಣವನ್ನು ಶೇ 15ರಿಂದ ಶೇ 17ಕ್ಕೆ ಏರಿಸಿದೆ. ಆದರೆ, ಈ ಮೀಸಲಾತಿ ಇನ್ನೂ ಜಾರಿಗೆ ಬಂದಿಲ್ಲ ಎಂಬ ತಪ್ಪು ಮಾಹಿತಿ ಹರಡಿ ಗೊಂದಲ ಸೃಷ್ಟಿಸಲಾಗುತ್ತಿದೆ. ರಾಜ್ಯದಲ್ಲಿ ಹೊಸ ಮೀಸಲಾತಿ ಪ್ರಮಾಣ ಅನುಷ್ಠಾನಗೊಂಡಿದೆ. ಸರ್ಕಾರ ಈ ಬಗ್ಗೆ ಕಾನೂನು ರೂಪಿಸಿದೆ. ಅಧಿಸೂಚನೆಯನ್ನೂ ಹೊರಡಿಸಿದೆ.

ADVERTISEMENT

ನಮ್ಮ ಪಕ್ಷದ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಸದಾಶಿವ ವರದಿಯನ್ನು ತಿರಸ್ಕರಿಸಿತ್ತು. ಶೇ 17ರ ಮೀಸಲಾತಿಗೆ ಅನ್ವಯವಾಗುವಂತೆ ಒಳಮೀಸಲಾತಿ ಹಂಚಿಕೆ ಮಾಡಲು ಸಚಿವರಾಗಿದ್ದ ಮಾಧುಸ್ವಾಮಿ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿಯ ಶಿಫಾರಸುಗಳು ಹೆಚ್ಚು ವೈಜ್ಞಾನಿಕವಾಗಿವೆ. 

ಸಮಿತಿಯು 2011ರ ಜನಗಣತಿಯ ಆಧಾರದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆಯನ್ನು ಪರಿಗಣಿಸಿದೆ. 1 ಕೋಟಿಯಷ್ಟಿರುವ ಜನಸಂಖ್ಯೆಯನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಿದೆ. ಪ್ರತಿ ಆರು ಲಕ್ಷ ಜನಸಂಖ್ಯೆಗೆ ಶೇ 1ರಷ್ಟು ಮೀಸಲಾತಿಯಂತೆ ಲೆಕ್ಕಹಾಕಿದೆ. ಸಮಿತಿಯು ಎಲ್ಲ ಉಪ ಜಾತಿಗಳಿಗೂ ಸಮುದಾಯಗಳಿಗೂ ನ್ಯಾಯ ಒದಗಿಸಲು ಪ್ರಯತ್ನಿಸಿದೆ. 

ಭೋವಿ, ಬಂಜಾರ, ಕೊರಮ, ಕೊರಚ ಸಮುದಾಯಗಳು ಒಳಮೀಸಲಾತಿಯ ವಿರುದ್ಧವಾಗಿಲ್ಲ. ಆದರೆ, ವಿರೋಧ ಪಕ್ಷ ಕಾಂಗ್ರೆಸ್‌, ಅಂತಹ ಅಭಿಪ್ರಾಯವನ್ನು ಜನರಲ್ಲಿ ಬಿತ್ತುತ್ತಿದೆ. ಕೇಂದ್ರ ಸರ್ಕಾರದ ಪರಿಶಿಷ್ಟ ಜಾತಿ ಆಯೋಗವು ಪರಿಶಿಷ್ಟ ಜಾತಿಯಲ್ಲಿರುವ 101 ಉಪಜಾತಿಗಳಲ್ಲಿ ಭೋವಿ, ಬಂಜಾರ, ಕೊರಮ, ಕೊರಚ ಸಮುದಾಯಗಳನ್ನು ಮೀಸಲಾತಿ ಪಡೆಯುವ ಜಾತಿಗಳ ಪಟ್ಟಿಯಿಂದ ಶಾಶ್ವತವಾಗಿ ಕೈಬಿಡುವ ಬಗ್ಗೆ ರಾಜ್ಯ ಸರ್ಕಾರದ ಅಭಿಪ್ರಾಯ ಕೇಳಿತ್ತು. ಈ ಸಮುದಾಯಗಳನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂಬ ಅಭಿಪ್ರಾಯವನ್ನು ಹಿಂದಿದ್ದ ಬಿಜೆಪಿ ನೇತೃತ್ವದ ಸರ್ಕಾರ ವ್ಯಕ್ತಪಡಿಸಿತ್ತು. 

ಆದರೆ, ಈ ಸಮುದಾಯಗಳಿಗಿರುವ ಮೀಸಲಾತಿಯನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ರಾಜ್ಯದಲ್ಲಿ ಸುಳ್ಳು ಮಾಹಿತಿ ಹರಡಲಾಯಿತು. ಇದರಿಂದ ಸಮುದಾಯಗಳಲ್ಲಿ ಆತಂಕ ತಲೆದೋರಿತು. ಮೀಸಲಾತಿ ಎಲ್ಲಿ ರದ್ದಾಗುತ್ತದೆಯೋ ಎಂಬ ಭಯದಿಂದ ಸಮುದಾಯದವರು ಒಳಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದರು. ಸದಾಶಿವ ಆಯೋಗವು ಈ ಸಮುದಾಯಗಳಿಗೆ ಶೇ 3ರಷ್ಟು ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಿತ್ತು. ಮಾಧುಸ್ವಾಮಿ ಸಮಿತಿಯು ಶೇ 4.5ರಷ್ಟು ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಿದೆ. ಇದು ವೈಜ್ಞಾನಿಕವಾಗಿದೆ. ಬಂಜಾರ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇಲ್ಲಿಯವರೆಗೂ ಸಿಕ್ಕಿಲ್ಲ. ಇದರಿಂದ ವಿದ್ಯಾವಂತರಿಗೆ ನಷ್ಟವಾಗಿದೆ. ಶೇ 4.5ರಷ್ಟು ಮೀಸಲಾತಿಯಿಂದ ಸಮುದಾಯದ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಅವಕಾಶಗಳು ಸಿಗಲಿವೆ.  

ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಒಳ ಮೀಸಲಾತಿಯನ್ನು ವೈಜ್ಞಾನಿಕವಾಗಿ ಜಾರಿ ಮಾಡುವ ಇಚ್ಛೆ ಇಲ್ಲ. ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಮಾಧುಸ್ವಾಮಿ ಸಮಿತಿ ಶಿಫಾರಸಿನಂತೆ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ಬಂದರಷ್ಟೇ ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳಿಗೂ ನ್ಯಾಯ ಸಿಗಲಿದೆ. 

ಲೇಖಕ: ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.