ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಸಂವಿಧಾನದ ಆಶಯಗಳಿಗೆ ಯಾವುದೇ ಧಕ್ಕೆ ಆಗದಂತೆ ಒಳ ಮೀಸಲಾತಿ ಪ್ರಮಾಣ ನಿಗದಿಪಡಿಸಬೇಕು. ಎಲ್ಲ ವರ್ಗಗಳಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆಗಾಗಿ ಒಳ ಮೀಸಲಾತಿ ನೀಡಲೇಬೇಕಿದೆ. ಈ ವಿಚಾರದಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿಯನ್ನು ಯಥಾವತ್ ಅನುಷ್ಠಾನಕ್ಕೆ ತರಬೇಕು. ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಸಹಮತ ವ್ಯಕ್ತಪಡಿಸಬೇಕು.
ಒಳ ಮೀಸಲಾತಿ ಹಕ್ಕಿಗಾಗಿ ಎಡಗೈ (ಮಾದಿಗ, ಆದಿ ಜಾಂಬವ) ಸಮುದಾಯದವರು ನೂರಾರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಈ ರಾಜ್ಯದಲ್ಲಿ ಅತೀ ಹೆಚ್ಚು ಪ್ರತಿಭಟನೆಗಳು ಈ ವಿಚಾರಕ್ಕಾಗಿಯೇ ನಡೆದಿವೆ. ಪ್ರತಿ ಹಳ್ಳಿಯಲ್ಲೂ ಪ್ರತಿಭಟನೆ ನಡೆದಿದೆ, ನಡೆಯುತ್ತಲೇ ಇದೆ. ಆದರೂ ಈ ವಿಚಾರದಲ್ಲಿ ಸ್ಪಷ್ಟವಾದ ನಿಲುವು– ತೀರ್ಮಾನ ಆಗಿಲ್ಲ. ನಮ್ಮ ತಂದೆ ಎನ್.ರಾಚಯ್ಯ ಅವರು ಒಳ ಮೀಸಲಾತಿ ಜಾರಿಗಾಗಿ ಓಡಾಡಿದ್ದರು. ಸ್ಪೃಶ್ಯರನ್ನೂ ನಮ್ಮೊಂದಿಗೆ (ಅಸ್ಪೃಶ್ಯ) ಮೀಸಲಾತಿಗೆ ಸೇರಿಸಲಾಗಿದೆ. ಅಂಬೇಡ್ಕರ್ ಅವರು ಹೇಳಿದ್ದ ಆರು ಜಾತಿಗಳ ಜೊತೆ ಇನ್ನೂ 95 ಜಾತಿಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಈ ಎಲ್ಲ ಜಾತಿಗಳಿಗೂ ಸಮಾನ ಮೀಸಲಾತಿ ಕಲ್ಪಿಸಲಾಗಿದೆ. ‘ಒಳ ಮೀಸಲಾತಿ’ ಮೂಲಕ ನೀವು (ಸರ್ಕಾರ) ಯಾವ ವರ್ಗಕ್ಕೆ ಎಷ್ಟು ಪ್ರಮಾಣ ಹಂಚಿಕೆ ಮಾಡುತ್ತೀರೋ ಗೊತ್ತಿಲ್ಲ. ನಾವು (ಎಡಗೈ ಸಮುದಾಯ) ತುಳಿತಕ್ಕೆ ಒಳಗಾದ ಸಮುದಾಯದವರು. ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಕೊಡಬೇಕು. ಕೆನೆಪದರದಡಿ ಮೀಸಲಾತಿಯನ್ನು ಪರಿಷ್ಕರಿಸಿ, ಹೆಚ್ಚು ತುಳಿತಕ್ಕೆ ಒಳಗಾದವರನ್ನು ಮೇಲಕ್ಕೆತ್ತಬೇಕು.
ನಾನು ವಿಧಾನ ಪರಿಷತ್ ಸದಸ್ಯನಾಗಿದ್ದಾಗ ಒಳ ಮೀಸಲಾತಿ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆಸಿದ್ದ ಸಭೆಗಳಲ್ಲಿ ಭಾಗವಹಿಸಿದ್ದೆ. ಸದಾಶಿವ ಆಯೋಗದ ವರದಿಯಲ್ಲಿ ಕೆಲವು ಅಂಶಗಳನ್ನು ‘ಪೆನ್ಸಿಲ್’ನಲ್ಲಿ ಬರೆಯಲಾಗಿದೆ ಎಂಬ ಅಂಶದ ವಿಚಾರದಲ್ಲಿನ ವಾದ– ಗೊಂದಲ ಇನ್ನೂ ಬಗೆಹರಿದಿಲ್ಲ. ಈ ನಡುವೆ, ವರದಿ ಜಾರಿ ಕುರಿತು ಕಾಂಗ್ರೆಸ್‌ನಿಂದ ಸ್ಪಷ್ಟ ನಿಲುವು ಹೊರಬಾರದ ಕಾರಣ ಮಾದಿಗ ಸಮುದಾಯವು ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಕಡೆ ವಾಲಿದೆ. ಆದರೆ, ಬಿಜೆಪಿ ಅವಧಿಯಲ್ಲಿ ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪ ಸಮಿತಿಯು ಈ ವರದಿ ಅಪ್ರಸ್ತುತ ಎಂದು ತಿರಸ್ಕರಿಸಿ, ಕೇಂದ್ರಕ್ಕೆ ತನ್ನದೇ ಶಿಫಾರಸು ಮಾಡಿದೆ. ಆದರೆ, ಕೇಂದ್ರ ಸರ್ಕಾರ ಕೂಡಾ ಯಾವುದೇ ನಿಲುವು ವ್ಯಕ್ತಪಡಿಸಿಲ್ಲ. ಈಗ ರಾಜಕೀಯ ಬದಲಾಗಿದೆ. ಒಳ ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿರುವುದರಿಂದ, ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ರಾಜ್ಯ ಸರ್ಕಾರ ಈ ವಿಚಾರದಲ್ಲಿ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬೇಕು.
ಅಧಿಕಾರ ಚುಕ್ಕಾಣಿ ಹಿಡಿದ ನಂತರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಸದಾಶಿವ ಆಯೋಗದ ವರದಿ ಜಾರಿ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಪಕ್ಷ ಭರವಸೆ ನೀಡಿತ್ತು. ಆದರೆ, ವರ್ಷ ಕಳೆದರೂ ಯಾವುದೂ ಆಗಿಲ್ಲ. ಈ ಕಾರಣಕ್ಕೆ ಎಡಗೈ ಸಮುದಾಯ ಮತ್ತೆ ಮತ್ತೆ ಬೀದಿ ಹೋರಾಟ ನಡೆಸುವ ಅನಿವಾರ್ಯ ಎದುರಾಗಿದೆ. ಸರ್ಕಾರ ಇದಕ್ಕೆ ಅವಕಾಶ ನೀಡಬಾರದು. ತುಳಿತಕ್ಕೆ ಒಳಗಾದ, ಅವಕಾಶ ವಂಚಿತ, ಶೋಷಿತ ಸಮುದಾಯಕ್ಕೆ ನ್ಯಾಯ ಕೊಡುವ ಕೆಲಸವನ್ನು ತಕ್ಷಣ ಮಾಡಬೇಕು. ರಾಜ್ಯದಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ನೆಲ– ಜಲ, ಸಂಪತ್ತು–ಸವಲತ್ತು, ಶಿಕ್ಷಣ– ಉದ್ಯೋಗ ಎಲ್ಲ ವರ್ಗಗಳಿಗೂ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕು. ಈ ವಿಚಾರವನ್ನು ವರ್ಷಾನುಗಟ್ಟಲೆ ತಳ್ಳಿಕೊಂಡು ಹೋಗಬಾರದು.
ಲೇಖಕ: ಕೆಪಿಸಿಸಿ ಎಸ್‌ಸಿ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.