ADVERTISEMENT

ಆಳ–ಅಗಲ: ನದಿ ಜೋಡಣೆ ಯೋಜನೆಯಲ್ಲಿ ಲಾಭವಷ್ಟೇ ಅಲ್ಲ, ನಷ್ಟವೂ ಇದೆ

ಶಿವಶಂಕರ್ ಟಿ.ಎಂ
Published 6 ಫೆಬ್ರುವರಿ 2022, 20:30 IST
Last Updated 6 ಫೆಬ್ರುವರಿ 2022, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ನದಿ ಜೋಡಣೆ ವಿಷಯ ಪ್ರಸ್ತಾಪಿಸಲಾಗಿದ್ದು, ಕೆನ್–ಬೆಟ್ವಾ ನದಿ ಜೋಡಣೆ ಯೋಜನೆಗೆ ಹಣ ತೆಗೆದಿರಿಸಲಾಗಿದೆ. ಜೊತೆಗೆ ದೇಶದ ಇತರ ಐದು ನದಿಗಳನ್ನು ಬೆಸೆಯುವ ನಿರ್ಧಾರ ಅಂತಿಮಗೊಂಡಿದೆ. ಪೆನ್ನಾರ್–ಕಾವೇರಿ, ಕೃಷ್ಣಾ–ಪೆನ್ನಾರ್,ಕೃಷ್ಣಾ–ಗೋದಾವರಿ, ಪಾರ್ ತಾಪಿ–ನರ್ಮದಾ ಹಾಗೂ ದಮನ್ ಗಂಗಾ ಪಿಂಜಾಲ್ ನದಿಗಳು ಜೋಡಣೆ ಆಗಲಿವೆ. ಕರ್ನಾಟಕಕ್ಕೆ ಸಂಬಂಧಪಟ್ಟಂತೆ, ಕಾವೇರಿ, ಕೃಷ್ಣಾ, ಪೆನ್ನಾರ್ ನದಿಗಳಿಗೆ ಸಂಪರ್ಕ ಕಲ್ಪಿಸುವುದರಿಂದರಾಜ್ಯಕ್ಕೆ ಲಾಭಕ್ಕಿಂತನಷ್ಟವೇ ಹೆಚ್ಚು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ

ಹೆಚ್ಚು ನೀರು ಇರುವ ಪ್ರದೇಶಗಳಿಂದ ಕಡಿಮೆ ನೀರು ಇರುವ ಪ್ರದೇಶಗಳಿಗೆ ವೈಜ್ಞಾನಿಕವಾಗಿ ಮತ್ತು ವ್ಯವಸ್ಥಿತವಾಗಿ ನದಿಗಳ ಜೋಡಣೆಯಿಂದ ನೀರು ಹರಿಸಬಹುದು. ನದಿಗಳ ಜೋಡಣೆಯಿಂದ ಹೆಚ್ಚುವರಿ ನೀರಾವರಿ ಪ್ರದೇಶ ಅಭಿವೃದ್ಧಿ, ವಿದ್ಯುತ್‌ ಉತ್ಪಾದನೆ, ಕುಡಿಯುವ ನೀರಿನ ವ್ಯವಸ್ಥೆ, ಅಂತರ್ಜಲ ವೃದ್ಧಿ, ಜಲಸಂಚಾರ, ಪ್ರವಾಸೋದ್ಯಮ ಹೀಗೆ ಹಲವು ಅನುಕೂಲಗಳು ಇವೆ. ಆದರೆ, ಇಂತಹ ಯೋಜನೆಗಳು ಸಾಮಾಜಿಕ ಸಮಸ್ಯೆ ಸೃಷ್ಟಿಸಬಹುದು, ನೈಸರ್ಗಿಕ ವಿಕೋಪ, ರಾಜ್ಯಗಳ ನಡುವೆ ಮನಸ್ತಾಪ, ನೀರು ಹಂಚಿಕೆಯ ವಿವಾದ, ಪರಿಸರ ನಾಶ, ಅರಣ್ಯ ನಾಶಕ್ಕೂ ನದಿ ಜೋಡಣೆ ಕಾರಣ ಆಗಬಹುದು. ಯೋಜನೆಗಾಗಿ ಭೂಸ್ವಾಧೀನದ ವಿಚಾರದಲ್ಲಿ ತಾರತಮ್ಯ ಇಲ್ಲ ಎಂದು ಸರ್ಕಾರ ಹೇಳಿದರೂ ಸಣ್ಣ ಹಿಡುವಳಿ ಇರುವ ಬಡವರೇ ಹೆಚ್ಚು ತೊಂದರೆಗೆ ಒಳಗಾಗುತ್ತಾರೆ ಎಂಬುದು ಸತ್ಯ.

ಗಂಗಾನದಿಯ ಒಂದು ಶಾಖೆಯನ್ನು ಕಾವೇರಿಗೆ ಹರಿಸುವ ಯೋಜನೆ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದ ಕಾಲದಲ್ಲಿಯೇ ಮಾತು ಕೇಳಿ ಬಂದಿತ್ತು.ಗಂಗಾ ನದಿಯನ್ನು ಕರ್ನಾಟಕದತ್ತ ಹರಿಸುವ ಅಗತ್ಯವೇ ಇಲ್ಲ.

ADVERTISEMENT

ಕರ್ನಾಟಕದಲ್ಲಿ ನೀರಿಗೆ ಕೊರತೆ ಇಲ್ಲ. ರಾಜ್ಯದಲ್ಲಿ 400ಕ್ಕೂ ಹೆಚ್ಚು ನದಿಗಳಿವೆ. ಅವುಗಳ ಪೈಕಿ 50ಕ್ಕೂ ಹೆಚ್ಚು ದೊಡ್ಡ ನದಿಗಳಿವೆ. ಪಾಲಾರ್‌, ದಕ್ಷಿಣ ಪಿನಾಕಿನಿ, ಉತ್ತರ ಪಿನಾಕಿನಿ, ಕಾವೇರಿ, ವೇದಾವತಿ, ತುಂಗಭದ್ರಾ, ಕೃಷ್ಣಾ, ಮಹಾದಾಯಿ ಮತ್ತು ಗೋದಾವರಿ ಜಲಾನಯನ ಪ್ರದೇಶಗಳಲ್ಲಿ ಹುಟ್ಟಿ ಹರಿಯುವ ನದಿಗಳಿಂದ 97,352 ದಶ ಲಕ್ಷ ಘನ ಮೀಟರ್‌ ನೀರು ದೊರೆಯುತ್ತದೆ. ರಾಜ್ಯದಲ್ಲಿ ಪ್ರತಿವರ್ಷ ಲಭ್ಯವಾಗುವ ನೀರಿನ ಪ್ರಮಾಣ 14,79,318 ಹೆಕ್ಟೋ ಮೀಟರ್‌. ಪಶ್ಚಿಮದತ್ತ ಹರಿಯುವ ನದಿಗಳಲ್ಲಿ ವರ್ಷಕ್ಕೆ 2,000 ಟಿಎಂಸಿ ಅಡಿ ನೀರು ದೊರೆಯುತ್ತದೆ.

ಸಮುದ್ರ ಸೇರುವ ನೀರಿನ ಶೇ 40ರಿಂದ ಶೇ 50ರಷ್ಟನ್ನು ರಾಜ್ಯದ ಪೂರ್ವ ಮತ್ತು ಉತ್ತರಕ್ಕೆ ತಿರುಗಿಸಿದರೂ ಬಯಲು ಸೀಮೆಯ ನೀರಿನ ಸಮಸ್ಯೆ ಪರಿಹಾರವಾಗುತ್ತದೆ. ಆದರೆ, ಇದು ಸುಲಭವಲ್ಲ. ಮಧ್ಯ ಇರುವ ಪಶ್ಚಿಮ ಘಟ್ಟವನ್ನು 80–100 ಕಿ.ಮೀ.ನಷ್ಟು ಕೊರೆದು ಅಥವಾ ಕಡಿದು ನೀರು ತರಬೇಕಾಗುತ್ತದೆ. ಇದರಿಂದ ಜೀವ ವೈವಿಧ್ಯ ಮತ್ತು ಅರಣ್ಯ ಅಪಾರ ಪ್ರಮಾಣದಲ್ಲಿ ನಾಶವಾಗುತ್ತದೆ.

ಬೆಂಗಳೂರಿನಲ್ಲಿ ಮೆಟ್ರೊ ಸುರಂಗ ಕೊರೆಯುವಂತಹ ಯಂತ್ರಗಳನ್ನು ಬಳಸಿಕೊಂಡು ಪಶ್ಚಿಮ ಘಟ್ಟವನ್ನು ಕೊರೆಯಬಹುದು. ಮೂರು ದಿನಕ್ಕೆ ಒಂದು ಮೀಟರ್‌ ಸುರಂಗ ಕೊರೆಯುವ ಸಾಮರ್ಥ್ಯ ಈ ಯಂತ್ರಕ್ಕೆ ಇದೆ. ಕಾಮಗಾರಿ ನಿಧಾನವಾದರೂ ಒಂದಲ್ಲ ಒಂದು ದಿನ ನೀರು ಹರಿಸಲು ಸಾಧ್ಯ. ಕರ್ನಾಟಕಕ್ಕೆ ಗಂಗಾ ನದಿಯನ್ನು ಹರಿಸುವ ಬದಲು ಈ ಬಗ್ಗೆ ಕೇಂದ್ರವು ಯೋಚಿಸಬೇಕು.

ನೀರಾವರಿಗಾಗಿ ಪ್ರತಿ ವರ್ಷವೂ ಲಕ್ಷಾಂತರ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಹಾಗಿದ್ದರೂ ನೀರಾವರಿಗೆ ಒಳಪಟ್ಟಿರುವ ಜಮೀನಿನ ಪ್ರಮಾಣ ಶೇ 25ರಷ್ಟನ್ನು ತಲುಪಿಲ್ಲ. ಈಜಿಪ್ಟ್‌ನಲ್ಲಿ ನೈಲ್‌ ನದಿಯ ನೀರನ್ನು 500–600 ಕಿ.ಮೀ. ದೂರಕ್ಕೆ ಹರಿಸಿ ಮರಳುಗಾಡಿನಲ್ಲಿಯೂ ಕೃಷಿ ಮಾಡುತ್ತಾರೆ. ನ್ಯೂಜಿಲೆಂಡ್‌, ಫ್ರಾನ್ಸ್‌, ಅಮೆರಿಕ, ರಷ್ಯಾದಲ್ಲಿ ಆಳದಲ್ಲಿ ಹರಿಯುವ ನದಿಯ ನೀರನ್ನು ಎತ್ತರಕ್ಕೆ ಹರಿಸಿ ಕೃಷಿಗೆ ಬಳಸುತ್ತಾರೆ. ಆದರೆ, ನಮ್ಮಲ್ಲಿ ಇಂತಹ ಪ್ರಯತ್ನಗಳು ಆಗಿಲ್ಲ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಯಾವ ತಾಲ್ಲೂಕಿನಲ್ಲಿಯೂ ಕಾಲುವೆ ನೀರು ಹರಿಯುವುದಿಲ್ಲ. ಧಾರವಾಡ, ಬೆಳಗಾವಿ, ವಿಜಯಪುರ, ಬಳ್ಳಾರಿ, ರಾಯಚೂರು, ಕಲಬುರ್ಗಿ, ಬೀದರ್‌ ಜಿಲ್ಲೆಗಳ ಬಹಳಷ್ಟು ಭೂ ಪ್ರದೇಶ ಒಣ ಭೂಮಿಯಾಗಿಯೇ ಉಳಿದಿದೆ. ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ ಜಲಾಶಯಗಳಿಂದಾಗಿ ರಾಯಚೂರು, ಕಲಬುರ್ಗಿ, ವಿಜಯಪುರ ಜಿಲ್ಲೆಗಳ ಸ್ವಲ್ಪ ಭಾಗಕ್ಕೆ ಮಾತ್ರ ನೀರು ಸಿಕ್ಕಿದೆ. ಗೋದಾವರಿ ನದಿಯನ್ನು ಕೃಷ್ಣಾ ನದಿಗೆ ಸೇರಿಸಿರುವುದರಿಂದ 22 ಟಿಎಂಸಿ ಅಡಿ ನೀರು ಹರಿದಿದೆ. ಆದರೆ, ಕೃಷ್ಣಾದಿಂದ ಕರ್ನಾಟಕಕ್ಕೆ ಹೆಚ್ಚಿನ ನೀರು ಸಿಕ್ಕಿಲ್ಲ.

ಬೇರೆ ರಾಜ್ಯಗಳಿಂದ ನೀರು ತಂದು ಕರ್ನಾಟಕದ ಒಣ ಜಮೀನು ಅಭಿವೃದ್ಧಿ ಸಾಧ್ಯವೇ ಇಲ್ಲ. ಇಂತಹ ಯೋಜನೆಗೆ ವೆಚ್ಚವಾಗುವ ಒಂದು ಭಾಗವನ್ನು ಕರ್ನಾಟಕಕ್ಕೆ ನೀಡಿ, ಒಣ ಭೂಮಿಯನ್ನು ಹಸಿರಾಗಿರುವ ಗುರಿ ನಿಗದಿ ಮಾಡಬೇಕು.

ಕಾವೇರಿ ಮತ್ತು ಪೆನ್ನಾರ್‌ ನದಿಗಳ ಜೋಡಣೆಯ ಸಮಗ್ರ ಯೋಜನೆಯನ್ನು 2022–23ರ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಆದರೆ, ಇದರಿಂದ ಕರ್ನಾಟಕಕ್ಕೆ ಲಭ್ಯವಾಗುವ ನೀರು ಎಷ್ಟು ಎಂಬ ನಿಖರ ಮಾಹಿತಿ ಇಲ್ಲ. ಈ ಯೋಜನೆ ಜಾರಿಯಾದರೆ ತಮಿಳುನಾಡಿಗೆ ಹೆಚ್ಚಿನ ಉಪಯೋಗ ಆಗಲಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೂ ಸ್ವಲ್ಪ ಲಾಭ ಆಗಬಹುದು. ಕರ್ನಾಟಕಕ್ಕೆ ಯಾವುದೇ ಲಾಭ ಆಗುವುದಿಲ್ಲ.

ನದಿ ಜೋಡಣೆಗೆ ಕರ್ನಾಟಕವು ಸಮ್ಮತಿ ನೀಡಬಾರದು. ನದಿ ಜೋಡಣೆಯು ಹೇಳಿದಷ್ಟು ಸುಲಭವೇನೂ ಅಲ್ಲ. ನದಿ ಜೋಡಣೆಯ ಸಾಧಕ ಬಾಧಕಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಬೇಕು. ನದಿ ಜೋಡಣೆಯು ಐತಿಹಾಸಿಕ ಪ್ರಮಾದವಾಗುವುದನ್ನು ತಡೆಯಬೇಕು.

–ಶಿವಶಂಕರ್ ಟಿ.ಎಂ

ಲೇಖಕ: ನಿವೃತ್ತ ಹಿರಿಯ ಭೂಜಲ ವಿಜ್ಞಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.