ಉನ್ನತ ದರ್ಜೆಯ ಕ್ರೀಡಾಸೌಲಭ್ಯಗಳು ಮತ್ತು ತರಬೇತಿಗಾಗಿ ರಾಜಧಾನಿ ಬೆಂಗಳೂರಿನತ್ತಲೇ ರಾಜ್ಯದ ಎಲ್ಲ ಭಾಗಗಳ ಕ್ರೀಡಾಪಟುಗಳು ಮುಖ ಮಾಡುವುದು ಇಂದಿಗೂ ತಪ್ಪಿಲ್ಲ. ಅದು ಕ್ರಿಕೆಟ್ ಇರಬಹುದು ಅಥವಾ ಈಜು ಕ್ರೀಡೆಯೇ ಇರಬಹುದು. ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಈಜುಕೊಳಗಳು ಇವೆ. ಆದರೆ, ಕೆಲವೆಡೆ ತರಬೇತುದಾರರಿಲ್ಲ, ಕೆಲವೆಡೆ ನಿರ್ವಹಣೆ ಇಲ್ಲ. ಆದ್ದರಿಂದ ಪ್ರತಿಭಾವಂತರು ಬೇಸಿಗೆ ಶಿಬಿರಗಳು ಮತ್ತು ಸ್ಥಳೀಯ ಈಜು ಸ್ಪರ್ಧೆಗಳಿಗೆ ಸೀಮಿತವಾಗಿದ್ದಾರೆ.
ಬೆಂಗಳೂರು ನಗರದ ಈಜುಕೇಂದ್ರಗಳ ಪೈಕಿ ಹೆಚ್ಚಿನವುಗಳಲ್ಲಿ ಸಕಲ ಸೌಲಭ್ಯಗಳೂ ಇವೆ. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಒಂದು ಕೊಳ ಹಾಗೂ ಬಿಬಿಎಂಪಿಯ 12 ಕೊಳಗಳು ಮಾತ್ರವಲ್ಲದೆ ರಾಜ್ಯ ಈಜುಸಂಸ್ಥೆಯ ಮಾನ್ಯತೆ ಪಡೆದಿರುವ 26 ಕ್ಲಬ್‌ಗಳ ಕೊಳಗಳು ಇವೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇರುವ ಸೌಲಭ್ಯಗಳು ಶೂನ್ಯ.
ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಎರಡು ಕೊಳಗಳು ಇವೆ.ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ದಾವಣಗೆರೆಯ ಎರಡು ಈಜುಕೊಳಗಳನ್ನು ₹2.05 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಹರಿಹರದಲ್ಲಿ ಒಂದು ಈಜುಕೊಳ ಇದೆ. 2017ರ ಡಿಸೆಂಬರ್‌ನಲ್ಲಿ ದುಬೈನಲ್ಲಿ ನಡೆದ ಏಷ್ಯನ್ ಯೂಥ್ ಪ್ಯಾರಾ ಗೇಮ್ಸ್‌ನಲ್ಲಿ ರೇವತಿ ನಾಯಕ ಕಂಚಿನ ಪದಕ ಪಡೆದಿದ್ದರು. ದವನ್ ಕಾಲೇಜಿನ ವಿದ್ಯಾರ್ಥಿ ಮಣಿಕಂಠ ಎಲ್. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ಸರ್ಕಾರಿ ಹಾಗೂ ಎರಡು ಖಾಸಗಿ ಈಜುಕೊಳಗಳಿವೆ. ನಿರ್ವಹಣೆ ಕೊರತೆ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇಲಾಖೆಯ ಎರಡು ಕೊಳಗಳು ಇವೆ.
ಕಲ್ಯಾಣ ಕರ್ನಾಟಕದ ಕಲಬುರ್ಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಈಜುಕೊಳ ಇದೆ. 2014ರಲ್ಲಿ ಒಂದು ಬಾರಿ ಮಾತ್ರ ಮಾಸ್ಟರ್ಸ್ ಈಜು ಚಾಂಪಿಯನ್‌ಷಿಪ್ ನಡೆದಿದ್ದು ಬಿಟ್ಟರೆ ಸ್ಪರ್ಧೆಗಳು ನಡೆದಿಲ್ಲ. ತಾತ್ಕಾಲಿಕ ಕೋಚ್ ಇದ್ದಾರೆ. ಬೀದರ್ ಜಿಲ್ಲೆಯಲ್ಲಿ ಸರ್ಕಾರದ ಒಂದು ಈಜುಕೊಳ ಇದೆ. ಇದು ಮೂರು ವರ್ಷದಿಂದ ಸ್ಥಗಿತವಾಗಿದೆ. ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ 2019ರಲ್ಲಿ ಈಜುಕೊಳ ಉದ್ಘಾಟನೆ ಆಗಿದೆ. ಯಾವುದೇ ಸೌಲಭ್ಯಗಳು ಇಲ್ಲ. ರಾಯಚೂರಿನ ಈಜುಕೊಳದಲ್ಲಿ ಮೂರು ವರ್ಷಗಳ ಹಿಂದೆ ಆರಂಭಿಸಲಾದ ಕಾಮಗಾರಿ ಪೂರ್ಣಗೊಳ್ಳದೆ ಈಗ ಹಾಳುಬಿದ್ದಿದೆ. ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಸುಸಜ್ಜಿತ ಈಜುಕೊಳ ಇದೆ. ಇಬ್ಬರು ತಾತ್ಕಾಲಿಕ ಕೋಚ್‌ಗಳು ಇದ್ದಾರೆ. ಗಂಗಾವತಿಯಲ್ಲಿ ಇರುವ ಈಜುಕೊಳ ಶಿಥಿಲಗೊಂಡಿದೆ.
ಮೈಸೂರಿನಲ್ಲಿ ಸದ್ಯಕ್ಕೆ ಸಾರ್ವಜನಿಕರಿಗೆ ಲಭ್ಯವಾಗುವಂಥ ಮೂರು ಈಜುಕೊಳಗಳಿವೆ. ನಿರ್ವಹಣೆ, ತರಬೇತಿ ಸೌಲಭ್ಯ ಪರವಾಗಿಲ್ಲ. ಕ್ರೀಡಾ ಇಲಾಖೆಯು ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ದರ್ಜೆಯ ಈಜುಕೊಳ ನಿರ್ಮಿಸಿದೆ. ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಾಗಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಒಂದು ಕೊಳ ಇದೆ. ಜೆ.ಪಿ.ನಗರದಲ್ಲಿರುವ ಪಂಡಿತ ಪುಟ್ಟರಾಜು ಗವಾಯಿ ಕ್ರೀಡಾ ಸಂಕೀರ್ಣದಲ್ಲಿಯೂ ಒಂದು ಕೊಳ ಇದೆ. ಪಾಲಿಕೆಯು ಇದರ ನಿರ್ವಹಣೆಯನ್ನು 30 ವರ್ಷಗಳ ಅವಧಿಗೆ ಖಾಸಗಿ ಸಂಸ್ಥೆಯವರಿಗೆ ಗುತ್ತಿಗೆ ನೀಡಿದೆ. ಚಾಮರಾಜನಗರದಲ್ಲಿ ಒಂದೂ ಈಜುಕೊಳ ಇಲ್ಲ. ಹಾಸನದಲ್ಲಿ ಎರಡು ಈಜುಕೊಳಗಳಿದ್ದು, ನಿರ್ವಹಣೆ ಅಷ್ಟಕಷ್ಟೆ. ಮಂಡ್ಯದಲ್ಲೂ ಪಿಇಟಿ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ದರ್ಜೆಯ ಖಾಸಗಿ ಈಜುಕೊಳವಿದೆ. ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಈಜುಕೊಳವಿದೆ. ಇಬ್ಬರು ತರಬೇತುದಾರರು ಇದ್ದಾರೆ.
ಉತ್ತರ ಕರ್ನಾಟದಲ್ಲಿ ಡೈವಿಂಗ್ ಮತ್ತು ಅಂತರರಾಷ್ಟ್ರೀಯ ದರ್ಜೆಯ ಈಜುಕೊಳ ಇರುವುದು ಹುಬ್ಬಳ್ಳಿಯಲ್ಲಿ ಮಾತ್ರ. ಆದರೆ ತರಬೇತುದಾರರ ಕೊರತೆ ಇದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 2018ರಿಂದ ಎರಡು ವರ್ಷ ನವೀಕರಣ ಕೆಲಸ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಈಜುಕೊಳ ಮುಚ್ಚಿದೆ. ಬಾಗಲಕೋಟೆಯಲ್ಲಿ ಹೆಸರಿಗಷ್ಟೇ ಅಂತರರಾಷ್ಟ್ರೀಯ ಈಜುಕೊಳವಿದೆ. ಎರಡು ವರ್ಷಗಳಿಂದ ದುರಸ್ತಿಯಲ್ಲಿದೆ. ವಿಜಯಪುರದಲ್ಲಿ ಹೊಸ ಈಜುಕೊಳ ಕಾಮಗಾರಿ ನಡೆಯುತ್ತಿದೆ. ಗದುಗಿನಲ್ಲಿ ಎರಡು ಕೊಳಗಳು ಇವೆ. ಹಾವೇರಿಯಲ್ಲಿ ಇರುವ ಈಜುಕೊಳ ಎರಡು ವರ್ಷದಿಂದ ಮುಚ್ಚಿದೆ.
ಬೆಳಗಾವಿಯಲ್ಲಿ ಇದುವರೆಗೂ ಅಂತರರಾಷ್ಟ್ರೀಯ ಗುಣಮಟ್ಟದ ಈಜುಕೊಳವಿಲ್ಲ. ವಿಜಯನಗರ (ಹೊಸಪೇಟೆ) ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಈಜುಕೊಳವಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಹೈಟೆಕ್ ಮಾದರಿ ಈಜುಕೊಳ ಇವೆ. ಮೂಡುಬಿದಿರೆ, ಪುತ್ತೂರು, ಮಂಗಳೂರು ಸೇರಿದಂತೆ ಕೆಲ, ಸಿಬಿಎಸ್‌ಸಿ ಶಾಲೆಗಳಲ್ಲಿ ಕೂಡ ಈಜುಕೊಳ ಇವೆ. ಮೂಡುಬಿದಿರೆ ಈಜುಕೊಳವನ್ನು ಕ್ರೀಡಾ ಇಲಾಖೆ ನಿರ್ವಹಣೆ ಮಾಡುತ್ತಿದ್ದು, ಮಂಗಳೂರಿನ ಮಂಗಳಾ ಈಜುಕೊಳದ ನಿರ್ವಹಣೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದೆ. ಸೌಲಭ್ಯಗಳೂ ಇವೆ. ತರಬೇತುದಾರರು ಇದ್ದಾರೆ.
ಮಾಹಿತಿ: ಮಹೇಶ್ ಕನ್ನೇಶ್ವರ, ಓಂಕಾರ್ ಮೂರ್ತಿ, ಡಿ.ಕೆ. ಬಸವರಾಜು, ಪ್ರಮೋದ್, ವಿಕ್ರಂ ಕಾಂತಿಕೆರೆ, ಸತೀಶ ಬಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.