ADVERTISEMENT

ಆಳ-ಅಗಲ: ಸ್ಕೌಟ್ಸ್‌–ಗೈಡ್ಸ್‌ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ

ಗಣೇಶ ಚಂದನಶಿವ
Published 20 ಡಿಸೆಂಬರ್ 2022, 22:00 IST
Last Updated 20 ಡಿಸೆಂಬರ್ 2022, 22:00 IST
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗಾಗಿ ಮಕ್ಕಳ ಸಾಹಸ ಪ್ರದರ್ಶನಕ್ಕೆ ಸಿದ್ಧಗೊಳ್ಳುತ್ತಿರುವ ಮೈದಾನ
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗಾಗಿ ಮಕ್ಕಳ ಸಾಹಸ ಪ್ರದರ್ಶನಕ್ಕೆ ಸಿದ್ಧಗೊಳ್ಳುತ್ತಿರುವ ಮೈದಾನ   

ಯಾವುದೇ ಜನಾಂಗ, ಧರ್ಮ, ಭಾಷೆ, ವರ್ಣಗಳ ಭೇದವಿಲ್ಲದೇ ಯುವಜನರ ಸರ್ವಾಂಗೀಣ ಅಭಿವೃದ್ಧಿಯ ಉದ್ದೇಶ ಹೊಂದಿರುವ ಸ್ಕೌಟ್ಸ್‌ ಮತ್ತು ಗೈಡ್ಸ್‌ ಒಂದು ಅಂತರರಾಷ್ಟ್ರೀಯ ಸಂಸ್ಥೆ. ವಿಶ್ವದ ಬಹುತೇಕ ದೇಶಗಳಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕಾರ್ಯನಿರ್ವಹಿಸುತ್ತಿದೆ. ವಿಶ್ವದ ಎಲ್ಲ ದೇಶಗಳಲ್ಲಿನ ಸ್ಕೌಟ್ಸ್‌ ಮತ್ತು ಗೈಡ್‌ಗಳು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಸೇರುವ ಬೃಹತ್ ಮೇಳವೇ ಜಾಂಬೂರಿ. ಅಂತಹ ವಿಶ್ವದ ಮೊದಲ ಸಾಂಸ್ಕೃತಿಕ ಜಾಂಬೂರಿ ಭಾರತದಲ್ಲಿ, ಅದರಲ್ಲೂ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ನಡೆಯುತ್ತಿದೆ.

------

ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಅಂತರರಾಷ್ಟ್ರೀಯ ಮಟ್ಟದ ಪ್ರಪ್ರಥಮ ಸಾಂಸ್ಕೃತಿಕ ಜಾಂಬೂರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಜ್ಜಾಗಿದೆ. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ಇದೇ 21ರಿಂದ 27ರವರೆಗೆ ದೇಶ–ವಿದೇಶದ ಮಕ್ಕಳ ಪ್ರತಿಭೆ–ಸಾಹಸ ಪ್ರದರ್ಶನ ಅನಾವರಣಗೊಳ್ಳಲಿದೆ.ಸ್ಕೌಟ್ಸ್‌ ಮತ್ತು ಗೈಡ್ಸ್‌ನಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ 24 ಜಾಂಬೂರಿ ಆಗಿದ್ದು, ಇದು 25ನೇ ಕಾರ್ಯಕ್ರಮ. ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಇದೇ ಮೊದಲ ಬಾರಿಗೆ ಅದೂ ನಮ್ಮ ರಾಜ್ಯದಲ್ಲಿ ಆಗುತ್ತಿದೆ.

ADVERTISEMENT

ನಮ್ಮ ದೇಶದ ವಿವಿಧ ರಾಜ್ಯಗಳು ಹಾಗೂ 10 ದೇಶಗಳವರು ಸೇರಿ ಒಟ್ಟು 50 ಸಾವಿರ ಸ್ಕೌಟ್ಸ್‌–ಗೈಡ್ಸ್‌/ ರೋವರ್ಸ್‌–ರೇಂಜರ್ಸ್‌ಗಳು (ಶಿಬಿರಾರ್ಥಿ ವಿದ್ಯಾರ್ಥಿಗಳು), 10 ಸಾವಿರ ದಳನಾಯಕರು (ತರಬೇತುದಾರರು),3 ಸಾವಿರ ಸ್ವಯಂ ಸೇವಕರು ಪಾಲ್ಗೊಳ್ಳುತ್ತಿದ್ದಾರೆ.

‘ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಇಂತಹ ಕಾರ್ಯಕ್ರಮಗಳಿಗೆ ಮಕ್ಕಳಿಗೆ ಟೆಂಟ್‌ಗಳನ್ನು ಹಾಕಲಾಗುತ್ತದೆ. ರಾಜ್ಯ–ದೇಶವಾರು ತಂಡಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಇರುತ್ತಿತ್ತು. ಇದೇ ಮೊದಲ ಬಾರಿಗೆ ಶಿಬಿರಾರ್ಥಿಗಳಿಗೆ ವಸತಿ ವ್ಯವಸ್ಥೆ ಮತ್ತು ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಿದ್ದೇವೆ’ ಎನ್ನುತ್ತಾರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತಡಾ.ಮೋಹನ ಆಳ್ವ.

5 ಬೃಹತ್‌ ಮೇಳ:
ಬೆಳಿಗ್ಗೆ 10ರಿಂದ ರಿಂದ ರಾತ್ರಿ 9 ಗಂಟೆಯವರೆಗೆ ಜನಮನ ತಣಿಸುವ ಅಪೂರ್ವ ಕಾರ್ಯಕ್ರಮಗಳು ಇಲ್ಲಿಯ 5 ಬೃಹತ್‌ ವೇದಿಕೆಯಲ್ಲಿ ನಡೆಯಲಿವೆ.ಕೃಷಿ, ವಿಜ್ಞಾನ, ಪುಸ್ತಕ, ಕಲಾ ಹಾಗೂ ಆಹಾರ ಮೇಳಗಳು ನಡೆಯಲಿವೆ. ಕೃಷಿ ಮೇಳಕ್ಕಾಗಿಯೇ ಸಿದ್ಧಪಡಿಸಿರುವ ಇಲ್ಲಿಯ ತೋಟದಲ್ಲಿ 100 ವಿಧದ ತರಕಾರಿ ಬೆಳೆಯಲಾಗಿದೆ. ವಿಜ್ಞಾನ ಮೇಳವು ಪ್ರಾಥಮಿಕದಿಂದ ಸ್ನಾತಕೋತ್ತರದವರೆಗಿನ ಎಲ್ಲಾ ವಿದ್ಯಾರ್ಥಿಗಳನ್ನು ಆಕರ್ಷಿಸಲಿದೆ.

ವೈಜ್ಞಾನಿಕ ಆಟಿಕೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ದೇಶ-ವಿದೇಶಗಳ ಪ್ರತಿಭಾನ್ವಿತ ಕಲಾವಿದರ ಸಂಗಮದ ಚಿತ್ರಕಲೆ, ಶಿಲ್ಪಕಲೆ, ವ್ಯಂಗ್ಯ ಚಿತ್ರ ಮತ್ತು ಛಾಯಾಚಿತ್ರ ಪ್ರದರ್ಶನವು ಕಲಾಮೇಳದ ಪ್ರಮುಖ ಆಕರ್ಷಣೆಯಾಗಿದೆ. ಮಕ್ಕಳ ಚಟುವಟಿಕೆಗಾಗಿಯೇ 10 ವೇದಿಕೆಗಳನ್ನು ಮೀಸಲಿಡಲಾಗಿದ್ದು, ಬುಡಕಟ್ಟು ಸಮುದಾಯಗಳಿಗೆ ಸೇರಿದ 150ಕ್ಕೂ ಹೆಚ್ಚು ಮಕ್ಕಳೂ ಇದರಲ್ಲಿ ಭಾಗಿಯಾಗಲಿದ್ದಾರೆ.

ಇದೇ ಮೊದಲ ಬಾರಿಗೆ ಶಿಬಿರಾರ್ಥಿ ಮಕ್ಕಳಿಗೆ ಬ್ಯಾಗ್‌, ಎರಡು ಟಿ–ಶರ್ಟ್‌, ಕ್ಯಾಪ್‌, ನೀರಿನ ಬಾಟಲಿಗಳನ್ನು ಒಳಗೊಂಡ ₹750 ಮೌಲ್ಯದ ಸ್ವಾಗತ ಕಿಟ್‌ ನೀಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ₹10 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಶಿಬಿರಾರ್ಥಿ ಮಕ್ಕಳಿಗೆ ₹1500 ಶುಲ್ಕ ನಿಗದಿ ಮಾಡಿದ್ದು, ಅದರಿಂದ ₹7 ಕೋಟಿಯಷ್ಟು ಹಣ ಸಂಗ್ರಹವಾಗಲಿದೆ.₹35 ಕೋಟಿಗೂ ಹೆಚ್ಚು ವೆಚ್ಚವಾಗುತ್ತಿದ್ದು, ರಾಜ್ಯ ಸರ್ಕಾರ ಇನ್ನಷ್ಟು ನೆರವು ನೀಡಬೇಕು ಎಂಬುದು ಮೋಹನ ಆಳ್ವ ಅವರ ಮನವಿ.

ಪ್ರಮುಖ ಆಕರ್ಷಣೆ

*35 ಸಾಹಸಮಯ ಕ್ರೀಡೆಗಳು

*ಅರಣ್ಯ ಸಂಪತ್ತಿನ ಜಾಗೃತಿ ಮೂಡಿಸಲು
ಜಂಗಲ್ ಟ್ರಯಲ್

*ಪ್ರತಿ ದಿನ ತಂಡ ತಂಡವಾಗಿ 5 ಕಿ.ಮೀ.ನಷ್ಟು ಸ್ವಚ್ಚತಾ ಕಾರ್ಯ (ಒಟ್ಟು 168 ಕಿ.ಮೀ. ಸ್ವಚ್ಚಗೊಳಿಸುವ ಗುರಿ)

*ಕೈಮಗ್ಗ, ಖಾದಿ, ರೇಷ್ಮೆ, ಕರಕುಶಲ ವಸ್ತುಗಳು, ತಿಂಡಿತಿನಿಸುಗಳ ದೇಸಿ ಮಳಿಗೆಗಳು

*ಉಚಿತ ಪ್ರವೇಶ

*1000ಕ್ಕೂ ಮಿಕ್ಕಿದ ವೈವಿಧ್ಯಮಯ ಮತ್ತು ದಿನವಹಿ ಅಗತ್ಯವಸ್ತುಗಳ ಮಾರಾಟ ಮಳಿಗೆಗಳು

*ಮಧ್ಯಾಹ್ನ ಮತ್ತು ರಾತ್ರಿ ಉಚಿತ ಊಟೋಪಚಾರ

*ಪ್ರಥಮ ಬಾರಿ ಸಾಹಿತ್ಯ ಚಟುವಟಿಕೆ

*ಸಿಡಿಮದ್ದು ಪ್ರದರ್ಶನ

*ಪ್ರಥಮ ಬಾರಿಗೆ ಹಸಿರು ಹೊರೆಕಾಣಿಕೆಯ ಸಂಕಲ್ಪ

*ಸಿನಿ ಸಿರಿ, ಛಾಯಾಚಿತ್ರ ಪ್ರದರ್ಶನ, ಮ್ಯಾರಥಾನ್ ಓಟ

l ಮ್ಯಾಜಿಕ್ ಷೋ, ಪಪೆಟ್ ಷೋ, ಗಾಳಿಪಟ ಷೋ, ಯೋಗಾಥಾನ್

‘ಅವಿಸ್ಮರಣೀಯವಾಗಿಸಲು ಶ್ರಮ’

ನಮ್ಮ ನೆಲದಲ್ಲಿ ನಡೆಯುತ್ತಿರುವ ವಿಶ್ವದ ಪ್ರಥಮ ಅಂತರರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಜಾಂಬೂರಿಯನ್ನು ಅವಿಸ್ಮರಣೀಯವಾಗಿಸುವಂತೆ ಸಂಘಟಿಸಿದ್ದೇವೆ.

ಉತ್ತಮ ಸ್ಪಂದನೆ ಸಿಗುತ್ತಿದೆ. ದೇವಸ್ಥಾನ–ಧಾರ್ಮಿಕ ಕಾರ್ಯಕ್ರಮಗಳಿಗೆ ಹೊರೆಕಾಣಿಕೆ ಸಾಮಾನ್ಯ. ಆದರೆ, ಜನರು ಇಂತಹ ಕಾರ್ಯಕ್ರಮಕ್ಕೂ ಹೊರೆಕಾಣಿಕೆ ಸಲ್ಲಿಸುತ್ತಿದ್ದಾರೆ. ಇಡೀ ರಾಜ್ಯದ ಎಲ್ಲ ವರ್ಗದ ಜನರು ಕೊಡುಗೆ ನೀಡುತ್ತಿದ್ದಾರೆ. ಅಕ್ಕಿ, ತೆಂಗು, ಸಕ್ಕರೆ, ಬೆಲ್ಲ ನಮ್ಮ ಅಗತ್ಯದಷ್ಟು ಸಂಗ್ರಹವಾಗಿದೆ.

ಅಚ್ಚುಕಟ್ಟು ವ್ಯವಸ್ಥೆಗೆ ಒತ್ತು ನೀಡಲಾಗಿದೆ. ಮನರಂಜನೆಯಿಂದ ಹಿಡಿದು ಭರಪೂರ ಮಾಹಿತಿ ಒಂದೇ ಕಡೆ ಸಿಗುವುದು ರಾಜ್ಯದಲ್ಲಿ ಬಹುಶಃ ಇದೇ ಮೊದಲು. ಸಾರ್ವಜನಿಕರು ಒಂದು ದಿನ ಬಂದು ಹೋದರೆ ಅವರಿಗೆ ಇದು ಅವೀಸ್ಮರಣೀಯವಾಗಲಿದೆ. ದೂಳು ಮುಕ್ತ ಪರಿಸರ ಇದೆ. ಮಧ್ಯಾಹ್ನ ಮತ್ತು ರಾತ್ರಿ ಸೇರಿ ನಿತ್ಯ ಐದು ಬಗೆಯ ಸಿಹಿ ಪದಾರ್ಥ ಊಟದ ವ್ಯವಸ್ಥೆ ಇದೆ.

ಮೋಹನ ಆಳ್ವ,ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಆಯುಕ್ತ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌

‘ಇದು ಅನೌಪಚಾರಿಕ ಶಿಕ್ಷಣ ವ್ಯವಸ್ಥೆ’

ಸ್ಕೌಟ್ಸ್‌–ಗೈಡ್ಸ್‌ ಎನ್ನುವುದು ಅನೌಪಚಾರಿಕ ಶಿಕ್ಷಣ ವ್ಯವಸ್ಥೆ. ವೈಯಕ್ತಿಕ ಶುಚಿತ್ವ, ಉತ್ತಮ ನಡವಳಿಕೆ, ಸಮಾಜ ಮತ್ತು ರಾಷ್ಟ್ರವನ್ನು ಪ್ರೀತಿಸುವುದು, ಸಹಾಯ ಹಸ್ತ ಚಾಚುವುದು ಮತ್ತು ಸೇವಾ ಮನೋಭಾವ, ಪ್ರಾಣಿ ಪ್ರಪಂಚ, ಸಸ್ಯ ಪ್ರಪಂಚ, ಪೃಥ್ವಿ–ನೀರು–ಆಕಾಶ ಇವುಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತದೆ.ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳ ಮನಪರಿವರ್ತಿಸುವ ಉದ್ದೇಶದಿಂದ ಆಯೋಜಿಸಿರುವ ಈ ‘ಸಾಂಸ್ಕೃತಿಕ ಜಾಂಬೂರಿ’ ನಮ್ಮ ದೇಶದಲ್ಲಿ ಮತ್ತು ವಿಶ್ವಮಟ್ಟದಲ್ಲಿ ಇದೇ ಮೊದಲ ಬಾರಿ ನಡೆಯುತ್ತಿದೆ.

ನಾವು ಈ ಕಾರ್ಯಕ್ರಮ ನಡೆಸಲು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಾತಾವರಣ–ಸೌಲಭ್ಯ ಈ ಮೂರು ಆಯಾಮಗಳಲ್ಲಿ ಹುಡುಕಾಟ ನಡೆಸಿದಾಗ ನಮ್ಮೆದುರು ಬಂದ ಹೆಸರು ಮೋಹನ ಆಳ್ವ. ಅವರನ್ನು ಕೇಳಿಕೊಂಡಾಗ ಅವರು ಒಪ್ಪಿಕೊಂಡರು.ದಕ್ಷಿಣ ಕನ್ನಡ ಜಿಲ್ಲೆಯ ಜನರು, ದಾನಿಗಳು ಬಹಳ ಉತ್ಸುಕತೆಯಿಂದ ಇದಕ್ಕೆ ನೆರವಾಗುತ್ತಿದ್ದಾರೆ. ಸ್ವಾಗತ ಸಮಿತಿಯ ಅಧ್ಯಕ್ಷರಾಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳು, ದ.ಕ ಜಿಪಂ ಸಿಇಒ ಹಾಗೂ ಎಲ್ಲ ಸಂಘ–ಸಂಸ್ಥೆಗಳವರು ತಮ್ಮ ಮನೆಯ ಕಾರ್ಯಕ್ರಮ ಎಂಬಂತೆ ಸಿದ್ಧತೆ–ಸಹಕಾರ ನೀಡುತ್ತಿದ್ದಾರೆ.

ಪಿ.ಜಿ.ಆರ್‌. ಸಿಂಧ್ಯಾ,ರಾಜ್ಯ ಮುಖ್ಯ ಆಯುಕ್ತ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್, ಕರ್ನಾಟಕ

--------------------------------

ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌

ಸ್ಕೌಟ್ಸ್‌ ಚಳವಳಿಯ ಇತಿಹಾಸ ವಿಶೇಷವಾದುದು. ಇದು ಆರಂಭವಾದದ್ದು ಬ್ರಿಟನ್‌ನಲ್ಲಿ. ಬಾಲಕರಲ್ಲಿ ನಾಗರಿಕ ಪ್ರಜ್ಞೆ ಮತ್ತು ಜೀವನ ಕೌಶಲಗಳನ್ನು ಬೆಳೆಸುವ ಉದ್ದೇಶದಿಂದ ಬ್ರಿಟನ್‌ ಸೇನೆಯ ಮೇಜರ್ ಜನರಲ್ ಲಾರ್ಡ್‌ ಬೇಡನ್ ಪೊವೆಲ್ ಅವರು 1907ರಲ್ಲಿ ಬಾಲಕರಿಗಾಗಿ ಒಂದು ಶಿಬಿರವನ್ನು ನಡೆಸಿದರು. ಸಮಾಜದ ಭಿನ್ನ ವರ್ಗ, ಸಮುದಾಯಗಳಿಗೆ ಸೇರಿದ 21 ಬಾಲಕರನ್ನು ಆ ಶಿಬಿರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಜುಲೈ 29ರಂದು ಆರಂಭವಾದ ಶಿಬಿರವು ಆಗಸ್ಟ್‌ 9ಕ್ಕೆ ಮುಕ್ತಾಯವಾಗಿತ್ತು. ಈ ಶಿಬಿರಕ್ಕೆ ಸಂಬಂಧಿಸಿದಂತೆ 1908ರಲ್ಲಿ ‘ಸ್ಕೌಟಿಂಗ್‌ ಫಾರ್ ಬಾಯ್ಸ್‌’ ಎಂಬ ಪುಸ್ತಕ ಪ್ರಕಟಿಸಲಾಯಿತು.

‘ಸ್ಕೌಟಿಂಗ್‌ ಫಾರ್ ಬಾಯ್ಸ್‌’ ಪುಸ್ತಕದಿಂದಾಗಿ ಸ್ಕೌಟ್ಸ್‌ ಶಿಬಿರದ ಜನಪ್ರಿಯತೆ ಹೆಚ್ಚಾಯಿತು. ಅದು ಚಳವಳಿಯ ರೂಪ ಪಡೆಯಿತು. ನಂತರದ ವರ್ಷಗಳಲ್ಲಿ ಇಂಗ್ಲೆಂಡ್ ಸೇರಿ ವಿಶ್ವದ ಹಲವೆಡೆ ಹಲವು ಶಿಬಿರಗಳು ನಡೆದವು. 1909ರಲ್ಲಿ ಸ್ಕೌಟ್ಸ್‌ ಶಿಬಿರದ ಭಾಗವಾಗಿ ಕ್ರಿಸ್ಟಲ್‌ ಪ್ಯಾಲೆಸ್‌ನಲ್ಲಿ ರ‍್ಯಾಲಿ ಆಯೋಜಿಸಲಾಗಿತ್ತು. 11,000ಕ್ಕೂ ಹೆಚ್ಚು ಸ್ಕೌಟ್ಸ್‌ಗಳು ಅದರಲ್ಲಿ ಭಾಗಿಯಾಗಿದ್ದರು. ಅವರ ಮಧ್ಯೆ ಸ್ಕೌಟ್ಸ್‌ ಸಮವಸ್ತ್ರ ತೊಟ್ಟಿದ್ದ ಹಲವು ಬಾಲಕಿಯರೂ ಇದ್ದರು. ಹೀಗಾಗಿ ಬಾಲಕಿಯರಿಗೂ ಇಂತಹ ಶಿಬಿರ ನಡೆಸಬೇಕು ಎಂದು ಪೊವೆಲ್‌ ಯೋಚಿಸಿದರು. ಇದರ ಫಲವಾಗಿ 1910ರಲ್ಲಿ ‘ಗೈಡ್ಸ್‌’ ಅಸ್ತಿತ್ವಕ್ಕೆ ಬಂದಿತು.

ಭಾರತದಲ್ಲೂ ಸ್ಕೌಟ್ಸ್‌ ಮತ್ತು ಗೈಡ್ಸ್‌ ಆರಂಭಿಸಿದ್ದು ಬ್ರಿಟೀಷರೇ. 1909ರಲ್ಲಿ ಬೆಂಗಳೂರಿನಲ್ಲಿ ಮೊದಲ ಸ್ಕೌಟ್ಸ್‌ ಅನ್ನು ಕ್ಯಾಪ್ಟನ್ ಟಿ.ಎಚ್‌.ಬೇಕರ್ ಸ್ಥಾಪಿಸಿದರು. ಎರಡೇ ವರ್ಷದಲ್ಲಿ ಕಲ್ಕತ್ತಾ (ಕೋಲ್ಕತ್ತ), ಕಿರ್ಕಿ, ಮದ್ರಾಸ್, ಲೋನಾವಾಲ ಮತ್ತು ಜಬಲ್‌ಪುರದಲ್ಲಿ ಸ್ಕೌಟ್ಸ್‌ ಆರಂಭವಾಯಿತು. 1911ರಲ್ಲಿ ಜಬಲ್‌ಪುರದಲ್ಲಿ ದೇಶದ ಮೊದಲ ಗೈಡ್ಸ್‌ ಅನ್ನು ಆರಂಭಿಸಲಾಯಿತು. ಆದರೆ, ಇದ್ಯಾವುದೂ ಭಾರತೀಯ ಬಾಲಕ–ಬಾಲಕಿಯರಿಗೆ ಮುಕ್ತವಾಗಿರಲಿಲ್ಲ. ಬ್ರಿಟೀಷರು ಮತ್ತು ಆಂಗ್ಲೊ–ಇಂಡಿಯನ್‌
ಗಳಿಗೆ ಮಾತ್ರ ಸ್ಕೌಟ್ಸ್‌ ಮತ್ತು ಗೈಡ್ಸ್‌ಗೆ ಪ್ರವೇಶವಿತ್ತು. ಆನಂತರದ ವರ್ಷಗಳಲ್ಲಿ ಭಾರತೀಯರಿಗೂ ಇಲ್ಲಿ ಪ್ರವೇಶ ದೊರೆಯಿತು.

ದೇಶದ ಹಲವೆಡೆ ಸ್ಕೌಟ್ಸ್‌ ಮತ್ತು ಗೈಡ್ಸ್‌ಗಳಿದ್ದರೂ, ಇವೆಲ್ಲವುಗಳನ್ನು ಒಗ್ಗೂಡಿಸುವ ಒಂದು ಸಂಸ್ಥೆ ಇರಲಿಲ್ಲ. 1921 ಮತ್ತು 1937ರಲ್ಲಿ ಬೇಡನ್ ಪೊವೆಲ್‌ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಎಲ್ಲಾ ಸ್ಕೌಟ್ಸ್‌ ಮತ್ತು ಗೈಡ್ಸ್‌ಗಳನ್ನು ಒಂದು ಸಂಸ್ಥೆಯ ಅಡಿಯಲ್ಲಿ ಒಗ್ಗೂಡಿಸುವ ಯತ್ನ ನಡೆಯಿತು. ಆದರೆ, ಬ್ರಿಟಿಷ್ ಅಧಿಕಾರಿಯ ಎದುರು ತಲೆಬಾಗಬೇಕಾಗುತ್ತದೆ ಎಂಬ ಕಾರಣದಿಂದ ಇದಕ್ಕೆ ಸಹಮತ ವ್ಯಕ್ತವಾಗಲಿಲ್ಲ. ಹೀಗಾಗಿ ಅಂತಹ ಎರಡೂ ಯತ್ನಗಳು ವಿಫಲವಾದವು. ಆದರೆ, ಸ್ವಾತಂತ್ರ್ಯಾನಂತರ ಇಂತಹ ಯತ್ನ ಮತ್ತೆ ಆರಂಭವಾಯಿತು. ಅಂದಿನ ಭಾರತ ಸರ್ಕಾರದ ಸತತ ಪ್ರಯತ್ನದ ಫಲವಾಗಿ ಎಲ್ಲಾ ಸ್ಕೌಟ್ಸ್‌ಗಳು ಒಗ್ಗೂಡುವ ಒಪ್ಪಂದಕ್ಕೆ 1950ರ ನವೆಂಬರ್ 7ರಂದು ಸಹಿ ಮಾಡಲಾಯಿತು. ಅಂತೆಯೇ ‘ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌–ಬಿಎಸ್‌ಜಿ’ ಅಸ್ತಿತ್ವಕ್ಕೆ ಬಂದಿತ್ತು. ಹೀಗಿದ್ದೂ ಭಾರತೀಯ ಗೈಡ್ಸ್‌ಗಳು ಬಿಎಸ್‌ಜಿಯನ್ನು ಸೇರಿದ್ದು 1951ರ ಆಗಸ್ಟ್‌ 15ರಂದು.

ಆಧಾರ: ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌, ಸ್ಕೌಟ್ಸ್ ಮತ್ತು ಗೈಡ್ಸ್‌ ಕರ್ನಾಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.