ಈ 18ನೇ ಲೋಕಸಭೆಯ ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಚುನಾವಣೆ ಕುತೂಹಲ ಕೆರಳಿಸಿದೆ. 1952ರಿಂದ ಒಟ್ಟು 16 ಲೋಕಸಭೆಗಳಲ್ಲಿ 14 ಮಂದಿ ಡೆಪ್ಯುಟಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕೆಲವರು ಇದರಲ್ಲಿ ಎರಡು ಅವಧಿಗೆ ಆ ಹುದ್ದೆಯನ್ನು ನಿರ್ವಹಿಸಿದ್ದಿದೆ. ಹೀಗೆ ಒಟ್ಟು 16 ಅವಧಿಯಲ್ಲಿ ವಿರೋಧ ಪಕ್ಷಗಳ ಸಂಸದರೇ 13 ಬಾರಿ ಈ ಹುದ್ದೆಗೆ ಆಯ್ಕೆಯಾಗಿದ್ದರು. ಆದರೆ ಈ ಬಾರಿ ವಿರೋಧ ಪಕ್ಷಗಳಿಗೆ ಈ ಹುದ್ದೆಯನ್ನು ಬಿಟ್ಟುಕೊಡಲು ಆಡಳಿತಾರೂಢ ಎನ್‌ಡಿಎ ನಿರಾಕರಿಸಿದೆ.
––––––––
ಲೋಕಸಭೆಯ ಸ್ಪೀಕರ್ ಸ್ಥಾನಕ್ಕೆ ಎಷ್ಟು ಮಹತ್ವವಿದೆಯೋ ಅಷ್ಟೇ ಪ್ರಮಾಣದ ಮಹತ್ವ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೂ ಇದೆ. ಏಕಂದರೆ, ಅಧಿಕಾರದ ವಿಚಾರದಲ್ಲಿ ಇಬ್ಬರೂ ಸಮಾನರು ಮತ್ತು ಡೆಪ್ಯುಟಿ ಸ್ಪೀಕರ್ ಅವರದ್ದು, ಸ್ಪೀಕರ್ ಅವರ ಹುದ್ದೆಯ ಅಧೀನ ಹುದ್ದೆಯಲ್ಲ. ಸ್ಪೀಕರ್ ಅವರ ಅನುಪಸ್ಥಿತಿಯಲ್ಲಿ, ಡೆಪ್ಯುಟಿ ಸ್ಪೀಕರ್ ಅವರೇ ಸ್ಪೀಕರ್ ಆಗಿ ಕಲಾಪವನ್ನು ನಡೆಸಿಕೊಡುತ್ತಾರೆ. ಸ್ಪೀಕರ್‌ಗೆ ಇರುವಷ್ಟೇ ಹೊಣೆಗಾರಿಕೆ ಅವರಿಗೂ ಇರುತ್ತದೆ. ಅಂತಹ ಒಂದು ಮಹತ್ವದ ಹುದ್ದೆಯ ಬಗ್ಗೆ ಈಗ ಚರ್ಚೆ ಆರಂಭವಾಗಿದೆ.
ಮೊದಲ ಚುನಾಯಿತ ಲೋಕಸಭೆ ಅಸ್ತಿತ್ವಕ್ಕೆ ಬಂದಿದ್ದು 1952ರಲ್ಲಿ. ಆಗ ಆಡಳಿತಾರೂಢ ಪಕ್ಷದ ಸಂಸದರೇ ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಹುದ್ದೆಗೆ ಚುನಾಯಿತರಾಗಿದ್ದರು. ಆನಂತರದ 16 ಲೋಕಸಭೆಗಳಲ್ಲಿ ಆಡಳಿತ ಪಕ್ಷದ ಸಂಸದರೇ ಡೆಪ್ಯುಟಿ ಸ್ಪೀಕರ್ ಆಗಿ ಆಯ್ಕೆಯಾಗಿದ್ದು ಎರಡು ಬಾರಿ ಮಾತ್ರ. ಉಳಿದ 14 ಲೋಕಸಭೆಗಳಲ್ಲಿ ಆ ಹುದ್ದೆಯನ್ನು ವಿರೋಧ ಪಕ್ಷಗಳಿಗೆ ಬಿಟ್ಟುಕೊಡಲಾಗಿತ್ತು. ಲೋಕಸಭೆ ಕಲಾಪ ನಿರ್ವಹಣೆಯಲ್ಲಿ ಪಕ್ಷಪಾತವಾಗದೇ ಇರುವ ರೀತಿಯಲ್ಲಿ ಎಚ್ಚರವಹಿಸುವ ಸಂಬಂಧ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಕಂಡುಕೊಂಡ ಸೌಹಾರ್ದ ಮಾರ್ಗವಿದು. ಈವರೆಗೆ ಸರ್ಕಾರ ನಡೆಸಿದ ಎಲ್ಲಾ ಪಕ್ಷಗಳೂ ಈ ಸಂಪ್ರದಾಯವನ್ನು ಅನುಸರಿಸಿಕೊಂಡೇ ಬಂದಿವೆ. ಆದರೆ ಈಗ ಆ ಸಂಪ್ರದಾಯ ಮುರಿಯುವ ಸಾಧ್ಯತೆ ಇದೆ.
18ನೇ ಲೋಕಸಭೆಯ ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಆಯ್ಕೆ ಸಂಬಂಧ ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟದ ನಡುವೆ ಮಂಗಳವಾರ ಸಭೆ ನಡೆದಿತ್ತು. ವಿರೋಧ ಪಕ್ಷಗಳಿಗೆ ಡೆಪ್ಯುಟಿ ಸ್ಪೀಕರ್ ಹುದ್ದೆ ನೀಡಲು ಆಡಳಿತಾರೂಢ ಎನ್‌ಡಿಎ ನಿರಾಕರಿಸಿದೆ.
1952, 1962 ಮತ್ತು 1971ರಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ಸಂಸದರೇ ಡೆಪ್ಯುಟಿ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು. ಆನಂತರ ಆ ಹುದ್ದೆಗೆ ವಿರೋಧ ಪಕ್ಷಗಳ ನಾಯಕರನ್ನೇ ಆಯ್ಕೆ ಮಾಡಲಾಗಿದೆ. ಇದಕ್ಕೆ ಕಾನೂನಿನ ಬೆಂಬಲ ಇಲ್ಲ. ಆದರೆ ಎಲ್ಲಾ ಪಕ್ಷಗಳೂ ಅಧಿಕಾರದಲ್ಲಿ ಇದ್ದಾಗ ಈ ಸಂಪ್ರದಾಯವನ್ನು ಪಾಲಿಸಿಕೊಂಡೇ ಬಂದಿದ್ದವು. ಆ ಸಂಪ್ರದಾಯವನ್ನು ತುಸು ಬದಲಾಯಿಸಿದ್ದು ಬಿಜೆಪಿಯೇ. 2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಿತು. ಆಗ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ವಿರೋಧ ಪಕ್ಷಗಳ ಬದಲಿಗೆ, ತನ್ನ ಮಿತ್ರ ಪಕ್ಷ ಮತ್ತು ಎನ್‌ಡಿಎಯ ಭಾಗವಾಗಿದ್ದ ಎಐಎಡಿಎಂಕೆಗೆ ಬಿಟ್ಟುಕೊಟ್ಟಿತು. ಈಗ ಬಿಜೆಪಿ, ಮತ್ತದೇ ರೀತಿಯಲ್ಲಿ ತನ್ನದೇ ಮಿತ್ರ ಪಕ್ಷಗಳಿಗೆ ಡೆಪ್ಯುಟಿ ಸ್ಪೀಕರ್ ಹುದ್ದೆ ಬಿಟ್ಟುಕೊಡುವ ಸಾಧ್ಯತೆ ಇದೆ. ವಿರೋಧ ಪಕ್ಷಗಳಿಗೆ ಈ ಹುದ್ದೆಯನ್ನು ನಿರಾಕರಿಸುವ ಮೂಲಕ ಈ ಸಂಪ್ರದಾಯವನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಮುರಿದಿದೆ.
ಈ ಹಿಂದೆ ಸ್ಪೀಕರ್ ನಡೆಗೆ ಆಕ್ಷೇಪ
ಲೋಕಸಭೆಯ ಕಲಾಪವನ್ನು ಪಕ್ಷಾತೀತವಾಗಿ ನಡೆಸುವುದು ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಅವರ ಹೊಣೆಗಾರಿಕೆ. 17ನೇ ಲೋಕಸಭೆಯ, 2023ರ ಚಳಿಗಾಲದ ಅಧಿವೇಶನದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣ ನೀಡಿ ವಿರೋಧ ಪಕ್ಷಗಳ 100 ಸಂಸದರನ್ನು ಅಮಾನತು ಮಾಡಲಾಗಿತ್ತು. ಈ ನಿರ್ಧಾರದ ಸಂಬಂಧ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
‘ಬಿರ್ಲಾ ಅವರು ಆಡಳಿತ ಪಕ್ಷದ ಆಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮತ್ತು ಟಿಎಂಸಿಯ ಸಂಸದರು ಆರೋಪಿಸಿದ್ದರು. ಡೆಪ್ಯುಟಿ ಸ್ಪೀಕರ್ ಹುದ್ದೆ ಭರ್ತಿಯಾಗಿದ್ದು, ವಿರೋಧ ಪಕ್ಷಗಳ ಸಂಸದರು ಆ ಹುದ್ದೆಯಲ್ಲಿ ಇದ್ದಿದ್ದರೆ ಇಂತಹ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂಬುದರ ಬಗ್ಗೆ ಚರ್ಚೆ ನಡೆದಿತ್ತು.
2019ರಲ್ಲೇ ಮೊದಲ ಬಾರಿ ಖಾಲಿ...
2019ರ 17ನೇ ಲೋಕಸಭೆಯಲ್ಲಿ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ತೆರವಾಗಿಯೇ ಇರಿಸಲಾಗಿತ್ತು. ಐದೂ ವರ್ಷಗಳಲ್ಲಿ ಸ್ಪೀಕರ್ ಅವರೇ ಕಲಾಪವನ್ನು ನಡೆಸಿದ್ದರು. ಅವರ ಅನುಪಸ್ಥಿತಿಯಲ್ಲಿ ಹಲವು ಸಂಸದರು ನಿಯೋಜಿತ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ತೆರವಾಗಿಯೇ ಇರಿಸುವುದೂ ಸರಿಯಲ್ಲ ಎಂಬ ಅಭಿಪ್ರಾಯವಿದೆ.
18ನೇ ಲೋಕಸಭೆಯಲ್ಲಿ ಸ್ಪೀಕರ್ ಅವರ ಹುದ್ದೆಯನ್ನು ತೆರವಾಗಿಯೇ ಇರಿಸಿದ್ದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಲಾಗಿತ್ತು. ಅರ್ಜಿಯ ಸಂಬಂಧ ವಿಚಾರಣೆಯೂ ನಡೆದಿತ್ತು. 93ನೇ ವಿಧಿಯಲ್ಲಿ, ‘shall appoint’ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಡೆಪ್ಯುಟಿ ಸ್ಪೀಕರ್ ಹುದ್ದೆಗೆ ಆಯ್ಕೆ ಕಡ್ಡಾಯವಾದುದು ಎಂಬುದು ಅರ್ಜಿದಾರರ ವಾದವಾಗಿತ್ತು. ಇದನ್ನು ಒಪ್ಪಿದ್ದ ಸುಪ್ರೀಂ ಕೋರ್ಟ್ ಪೀಠವು, ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಸರ್ಕಾರದಿಂದ ವಿವರಣೆಯನ್ನೂ ಕೇಳಿತ್ತು.
ಆದರೆ, ಅಂದಿನ ಆಡಳಿತಾರೂಢ ಬಿಜೆಪಿಯು ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ಐದೂ ವರ್ಷ ತೆರವಾಗಿಯೇ ಇರಿಸಿತ್ತು. ಗಮನಿಸಬೇಕಾದ ಅಂಶವೆಂದರೆ, 1952ರಿಂದ 2019ರವರೆಗಿನ 16 ಲೋಕಸಭೆಗಳಲ್ಲಿ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ಒಮ್ಮೆಯೂ ತೆರವಾಗಿ ಇರಿಸಿರಲಿಲ್ಲ. ಈ ಬಾರಿ 18ನೇ ಲೋಕಸಭೆಯಲ್ಲಿ ಬಿಜೆಪಿಯು, 2014ರಲ್ಲಿ ಮಾಡಿದ್ದಂತೆ ತನ್ನ ಮಿತ್ರ ಪಕ್ಷಕ್ಕೆ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ಬಿಟ್ಟುಕೊಡುವ ಸಾಧ್ಯತೆ ಇದೆ ಎಂದು ಚರ್ಚೆಯಾಗುತ್ತಿದೆ. ಜತೆಗೆ ಈ ಬಾರಿಯೂ ಆ ಹುದ್ದೆಯನ್ನು ತೆರವಾಗಿಯೇ ಇರಿಸುವ ಸಾಧ್ಯತೆಯೂ ಇದೆ ಎಂಬ ಚರ್ಚೆ ಆರಂಭವಾಗಿದೆ.
ಆಧಾರ: ಲೋಕಸಭೆಯ ದಾಖಲೆ ಪತ್ರಗಳು, ಲೋಕಸಭೆಯ ಸ್ಪೀಕರ್–ಡೆಪ್ಯಟಿ ಸ್ಪೀಕರ್ ಪಟ್ಟಿ, ಸಂವಿಧಾನದ 93, 94, 95 ಮತ್ತು 96ನೇ ವಿಧಿಗಳು, ಪಿಟಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.