ADVERTISEMENT

ಆಳ–ಅಗಲ: ಸುಳ್ಳು ಪತ್ತೆ ಪರೀಕ್ಷೆಗಳ ಸುತ್ತ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 19:30 IST
Last Updated 23 ನವೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸುಳ್ಳು ಪತ್ತೆ ಪರೀಕ್ಷೆ ಮತ್ತೆ ಸುದ್ದಿಯಲ್ಲಿದೆ. ದೆಹಲಿಯ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ ಅಫ್ತಾಬ್‌ ಪೂನಾವಾಲಾನನ್ನು ತನಿಖಾಧಿಕಾರಿಗಳು ಮಂಗಳವಾರ ಸಂಜೆಯಷ್ಟೇ ಪಾಲಿಗ್ರಫಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಗುರುವಾರ ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಸ್ವರೂಪದ ಸುಳ್ಳು ಪತ್ತೆ ಪರೀಕ್ಷೆಗಳಿಂದ ಕಲೆಹಾಕಿದ ಮಾಹಿತಿಗಳನ್ನು ಆರೋಪಿಯ ವಿರುದ್ಧ ಸಾಕ್ಷ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ಹಲವು ಪ್ರಕರಣಗಳಲ್ಲಿ ತೀರ್ಪಿತ್ತಿದೆ. ಹೀಗಾಗಿ ಇಂತಹ ಪರೀಕ್ಷೆಗಳನ್ನು ತನಿಖೆಗೆ ಪೂರಕವಾಗಿಯಷ್ಟೇ ಬಳಸಲಾಗುತ್ತದೆ. ಇಂತಹ ಪರೀಕ್ಷೆಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳೂ ಇದನ್ನೇ ಹೇಳುತ್ತವೆ

–––––––

ಸುಳ್ಳು ಪತ್ತೆ ಪರೀಕ್ಷೆಗಳನ್ನು ತನಿಖೆಯ ಭಾಗವಾಗಿ ನಡೆಸಲಾಗುತ್ತದೆ. ಬಹುತೇಕ ಸಂದರ್ಭದಲ್ಲಿ ಈ ಪರೀಕ್ಷೆಗಳು ಸರಿಯಾದ ಮಾಹಿತಿಯನ್ನು ಕಲೆಹಾಕಲು ನೆರವಾಗುತ್ತವೆ. ಆದರೆ, ತನಿಖಾಧಿಕಾರಿಗಳು ಇಂತಹ ಪರೀಕ್ಷೆಗಳನ್ನು ತಿರುಚುವ ಮತ್ತು ಆರೋಪಿಗಳೂ ಇಂತಹ ಪರೀಕ್ಷೆಯನ್ನು ಏಮಾರಿಸುವ ಸಾಧ್ಯತೆ ಇರುತ್ತದೆ. ಸುಳ್ಳು ಪತ್ತೆ ಪರೀಕ್ಷೆಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳ ಪೂರ್ವಪೀಠಿಕೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಹೇಳಿರುವ ಮಾತಿದು. ವೈಜ್ಞಾನಿಕವಾಗಿ ಇವು ಸಾಬೀತಾದ ತನಿಖಾ ಮಾರ್ಗಗಳಾದರೂ, ಈ ಪರೀಕ್ಷೆಗಳಲ್ಲಿ ದೊರೆತ ಮಾಹಿತಿಯನ್ನು ಆರೋಪಿಯ ವಿರುದ್ಧ ಸಾಕ್ಷ್ಯ ಎಂದು ಪರಿಗಣಿಸಲು ನಮ್ಮ ಸಂವಿಧಾನವು ಅವಕಾಶ ನೀಡುವುದಿಲ್ಲ. ಹೀಗಾಗಿ, ಈ ಪರೀಕ್ಷೆಗಳಿಂದ ಕಲೆಹಾಕಲಾದ ಮಾಹಿತಿಯನ್ನು ಭಾರತದ ನ್ಯಾಯಾಲಯಗಳು ಸಾಕ್ಷ್ಯ ಎಂದು ಪರಿಗಣಿಸುವುದಿಲ್ಲ.

ADVERTISEMENT

ಭಾರತದ ಯಾವುದೇ ಪ್ರಜೆ ತನ್ನ ವಿರುದ್ಧ ತಾನೇ ಸಾಕ್ಷ್ಯ ನುಡಿಯಲು ಅಥವಾ ಸಾಕ್ಷಿಯಾಗಲು ಸಂವಿಧಾನದ
21(3)ನೇ ವಿಧಿಯು ಅವಕಾಶ ನೀಡುವುದಿಲ್ಲ. ಈ ಕಾರಣದಿಂದಲೇ ಪೊಲೀಸರ ತನಿಖೆಯ ಸಂದರ್ಭದಲ್ಲಿ ಆರೋಪಿ ನೀಡಿದ ಹೇಳಿಕೆಯನ್ನು ಆತನ ವಿರುದ್ಧವೇ ಸಾಕ್ಷ್ಯ ಎಂದು ಬಳಸಲು ಅವಕಾಶವಿಲ್ಲ. ಭಾರತೀಯ ಸಾಕ್ಷ್ಯ ಕಾಯ್ದೆ ಸಹ ಇದನ್ನೇ ಹೇಳುತ್ತದೆ. ಹೀಗಿದ್ದೂ ಹಲವು ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಸುಳ್ಳು ಪತ್ತೆ ಪರೀಕ್ಷೆಗಳನ್ನು ನಡೆಸುತ್ತಾರೆ.

ಸುಳ್ಳು ಪತ್ತೆ ಪರೀಕ್ಷೆಯಲ್ಲಿ ಕಲೆಹಾಕಲಾದ ಮಾಹಿತಿಯನ್ನು ನ್ಯಾಯಾಲಯಗಳು, ‘ತಜ್ಞರ ಅಭಿಪ್ರಾಯ’ ಎಂದಷ್ಟೇ ಪರಿಗಣಿಸುತ್ತದೆ. ಆದರೆ, ಈ ಮಾಹಿತಿಗಳನ್ನು ಬಳಸಿಕೊಂಡು ತನಿಖೆ ಮುಂದುವರಿಸಲು ಪೊಲೀಸರು ಅಥವಾ ತನಿಖಾಧಿಕಾರಿಗಳಿಗೆ ಅವಕಾಶವಿದೆ. ಉದಾಹರಣೆಗೆ, ಕೊಲೆ ಪ್ರಕರಣವೊಂದರಲ್ಲಿ ಬಂಧಿಸಲಾದ ಆರೋಪಿಯೊಬ್ಬ ಹತ್ಯೆಗೆ ಬಳಸಿದ ಆಯುಧದ ಬಗ್ಗೆ ವಿಚಾರಣೆಯಲ್ಲಿ ಮಾಹಿತಿ ನೀಡುತ್ತಿಲ್ಲ. ಅಂತಹ ಸಂದರ್ಭದಲ್ಲಿ ತನಿಖಾಧಿಕಾರಿಗಳು ಸುಳ್ಳು ಪತ್ತೆ ಪರೀಕ್ಷೆಗಳನ್ನು ನಡೆಸುತ್ತಾರೆ. ಆಯುಧವನ್ನು ಇಂತಲ್ಲಿ ಬಿಸಾಡಿದ್ದೇನೆ ಅಥವಾ ಬಚ್ಚಿಟ್ಟಿದ್ದೇನೆ ಎಂದು ಆರೋಪಿ ಮಾಹಿತಿ ನೀಡಿದರೆ, ಅದರ ಆಧಾರದಲ್ಲಿ ತನಿಖಾಧಿಕಾರಿಗಳು ಹುಡುಕಾಟ ನಡೆಸುತ್ತಾರೆ. ಅಲ್ಲಿ ಆಯುಧ ದೊರೆತರೆ ಆರೋಪಿಯ ವಿರುದ್ಧ ಅದನ್ನು ಸಾಕ್ಷ್ಯ ಎಂದು ಪರಿಗಣಿಸಲು ಸಾಧ್ಯವಾಗುತ್ತದೆ.

ಗೊತ್ತೇ ಇಲ್ಲದ ಮಾಹಿತಿಯನ್ನು ಈ ಪರೀಕ್ಷೆಗಳ ಮೂಲಕ ಪತ್ತೆ ಮಾಡಲು ಸಾಧ್ಯವಿಲ್ಲ.ಪೊಲೀಸರಿಗೆ ಗೊತ್ತಿರುವ ಅಲ್ಪಸ್ವಲ್ಪ ಮಾಹಿತಿಯನ್ನೇ ಸ್ಪಷ್ಟಪಡಿಸಿಕೊಳ್ಳಲು ಈ ಪರೀಕ್ಷೆಗಳು ನೆರವಾಗುತ್ತವೆ. ಇದು ಈ ಪರೀಕ್ಷೆಗೆ ಇರುವ ದೊಡ್ಡ ಮಿತಿ. ಹೀಗಿದ್ದೂ, ದೇಶದಲ್ಲಿ ಹಲವು ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಇವು ನೆರವಾಗಿವೆ.

ಪರೀಕ್ಷೆಗಳ ವಿಧಗಳು

lಪಾಲಿಗ್ರಫಿ ಪರೀಕ್ಷೆ: ಪಾಲಿಗ್ರಫಿ ಯಂತ್ರದ ಮೂಲಕ ಈ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಗೆ ಒಳಪಡುವ ವ್ಯಕ್ತಿಯ ದೇಹದಲ್ಲಿ ರಕ್ತದ ಒತ್ತಡದಲ್ಲಿ ಆಗುವ ಏರುಪೇರನ್ನು ಆಧರಿಸಿ ಆತ ಸುಳ್ಳು ಹೇಳುತ್ತಿದ್ದಾನೆಯೇ ಅಥವಾ ಸತ್ಯ ಹೇಳುತ್ತಿದ್ದಾನೆಯೇ ಎಂಬುದನ್ನು ನಿರ್ಧರಿಸಲಾಗುತ್ತದೆ. ಸುಳ್ಳು ಪತ್ತೆ ಪರೀಕ್ಷೆಗಳಲ್ಲಿ ಇದು ಅತ್ಯಂತ ಹಳೆಯ ವಿಧಾನ

lಮಂಪರು ಪರೀಕ್ಷೆ: ಈ ಪರೀಕ್ಷೆಗೆ ಒಳಪಡುವ ವ್ಯಕ್ತಿಯ ದೇಹಕ್ಕೆ ವಿವಿಧ ರಾಸಾಯನಿಕಗಳನ್ನು ಸೇರಿಸುವ ಮೂಲಕ, ಆತನಿಂದ ಮಾಹಿತಿ ಹೆಕ್ಕುವ ವಿಧಾನವಿದು. ವ್ಯಕ್ತಿಯನ್ನು ಅರೆಪ್ರಜ್ಞಾವಸ್ಥೆಗೆ ದೂಡಲಾಗುತ್ತದೆ. ಆತ ಪೂರ್ಣ ಪ್ರಜ್ಞೆ ಕಳೆದುಕೊಳ್ಳುವುದನ್ನು ತಡೆಯುವ ಉದ್ದೇಶದಿಂದ ಕಪಾಲಕ್ಕೆ ಬಾರಿಸುವುದು, ಚಿವುಟುವುದು, ಬಡಿಯುವುದನ್ನು ಮಾಡಲಾಗುತ್ತದೆ. ಇದು ಹೆಚ್ಚು ಹಿಂಸಾತ್ಮಕವಾದ ಸುಳ್ಳು ಪತ್ತೆ ಪರೀಕ್ಷೆಯಾಗಿದೆ. ಆದರೆ, ಇದರಲ್ಲಿ ಪಡೆಯುವ ಮಾಹಿತಿ ಸತ್ಯಕ್ಕೆ ಹತ್ತಿರವಾಗಿರುತ್ತವೆ ಎಂದು ನಂಬಲಾಗಿದೆ

l ಬ್ರೈನ್‌ ಮ್ಯಾಪಿಂಗ್‌: ಪರೀಕ್ಷೆಗೆ ಒಳಪಡುವ ವ್ಯಕ್ತಿಯ ಮಿದುಳಿನಲ್ಲಿ ಆಗುವ ಬದಲಾವಣೆಗಳನ್ನು ವಿಶ್ಲೇಷಿಸಲಾಗುತ್ತದೆ. ಆತ ಸುಳ್ಳು ಹೇಳುತ್ತಿದ್ದಾನೆಯೇ ಅಥವಾ ಸತ್ಯ ಹೇಳುತ್ತಿದ್ದಾನೆಯೇ ಎಂಬುದನ್ನು ಆ ಬದಲಾವಣೆಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಸುಳ್ಳು ಪತ್ತೆ ಪರೀಕ್ಷೆಗಳಲ್ಲೇ ಇದು ಅತ್ಯಂತ ಅಹಿಂಸಾತ್ಮಕವಾದ ಮತ್ತು ಹೆಚ್ಚು ಕರಾರುವಕ್ಕಾದ ಪರೀಕ್ಷೆ ಎನಿಸಿದೆ

ಈ ಎಲ್ಲಾ ಪರೀಕ್ಷೆಗಳಲ್ಲೂ ಆರೋಪಿಗಳು ತಜ್ಞರನ್ನು ಹಾದಿತಪ್ಪಿಸಲು ಅವಕಾಶವಿದೆ. ಪ್ರಬಲ ಇಚ್ಛಾಶಕ್ತಿ ಇರುವವರು, ಸದಾ ಸುಳ್ಳು ಹೇಳುವ ಅಭ್ಯಾಸ ಇರುವವರಿಂದ ಇಂತಹ ಪರೀಕ್ಷೆಗಳಲ್ಲೂ ಸುಳ್ಳನ್ನು ಪತ್ತೆ ಮಾಡುವುದು ಕಷ್ಟಸಾಧ್ಯ ಎನ್ನುತ್ತವೆ ಅಧ್ಯಯನ ವರದಿಗಳು

ಮಾರ್ಗಸೂಚಿಗಳು

ಭಾರತದಲ್ಲಿ 2000ಕ್ಕೂ ಮುನ್ನ ಸುಳ್ಳು ಪತ್ತೆ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಯಾವುದೇ ಕಾನೂನು ಅಥವಾ ಮಾರ್ಗಸೂಚಿಗಳು ಇರಲಿಲ್ಲ. ಇಂತಹ ಪರೀಕ್ಷೆಗಳಲ್ಲಿ ಆರೋಪಿಯ ಮಾನವ ಹಕ್ಕುಗಳ ರಕ್ಷಣೆಗೆ ಅವಕಾಶವೇ ಇರಲಿಲ್ಲ. ಇಂತಹ ಪರೀಕ್ಷೆಗಳನ್ನು ಪೊಲೀಸರು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂಬ ಆರೋಪ ಇತ್ತು. 1997ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಕೆಯಾದ ಒಂದು ಅರ್ಜಿಯೇ ಈ ಪರೀಕ್ಷೆಗಳಿಗೆ ಮಾರ್ಗಸೂಚಿಗಳನ್ನು ರಚಿಸಲು ಕಾರಣ ಎಂದು ಆಯೋಗ ಹೇಳಿಕೊಂಡಿದೆ.

ದೆಹಲಿಯಲ್ಲಿ 1997ರಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿರುತ್ತದೆ. ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿರುತ್ತದೆ. ‘ನನ್ನ ಒಪ್ಪಿಗೆ ಇಲ್ಲದೆಯೇ ಈ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆ ಸರಿಯಾಗಿ ನಡೆದಿಲ್ಲ. ಇದರಿಂದ ನನ್ನನ್ನು ರಕ್ಷಿಸಿ’ ಎಂದು ಆ ವ್ಯಕ್ತಿ ಅರ್ಜಿಯಲ್ಲಿ ಕೋರಿರುತ್ತಾರೆ. ಆಯೋಗವು ಆ ಅರ್ಜಿಯನ್ನು ತಿರಸ್ಕರಿಸುತ್ತದೆ. ಆ ವ್ಯಕ್ತಿ ಪದೇ ಪದೇ ಅರ್ಜಿ ಸಲ್ಲಿಸುತ್ತಾರೆ. ಹೀಗಾಗಿ 1999ರಲ್ಲಿ ಅರ್ಜಿಯಲ್ಲಿ ಹೇಳಲಾದ ವಿಷಯಗಳನ್ನು ಪರಿಶೀಲಿಸಲು ಆಯೋಗವು ಸಮಿತಿಯನ್ನು ರಚಿಸುತ್ತದೆ. ಸಮಿತಿಯು, ‘ಭಾರತದಲ್ಲಿ ಇಂತಹ ಪರೀಕ್ಷೆಗಳಲ್ಲಿ ಆರೋಪಿಗಳ ಮಾನವ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಯಾವುದೇ ಕಾನೂನು ಇಲ್ಲ. ಅಂತಹ ಕಾನೂನಿನ ಅವಶ್ಯಕತೆ ಇದೆ’ ಎಂದು ಶಿಫಾರಸು ಮಾಡುತ್ತದೆ. ಶಿಫಾರಸಿನ ಅನ್ವಯ 1999ರ ನವೆಂಬರ್‌ನಲ್ಲಿ ಮಾರ್ಗಸೂಚಿಗಳನ್ನು ರಚಿಸಲಾಗುತ್ತದೆ. ಆನಂತರ 2000ರ ಜನವರಿ 11ರಂದು ಆ ಮಾರ್ಗಸೂಚಿಗಳನ್ನು ದೇಶದಾದ್ಯಂತ ಜಾರಿಗೆ ತರಲಾಯಿತು.

lಆರೋಪಿಯ ಒಪ್ಪಿಗೆ ಇಲ್ಲದೆ ಯಾವುದೇ ಸ್ವರೂಪದ ಸುಳ್ಳು ಪತ್ತೆ ಪರೀಕ್ಷೆಗಳನ್ನು ನಡೆಸಬಾರದು. ಪರೀಕ್ಷೆಗೆ ಒಳಗಾಗುವ ಅಥವಾ ಪರೀಕ್ಷೆಯನ್ನು ತಿರಸ್ಕರಿಸುವ ಆಯ್ಕೆಯನ್ನು ಆರೋಪಿಗೆ ನೀಡಬೇಕು. ಅಂತಹ ಪರೀಕ್ಷೆಗೆ ಆರೋಪಿಯ ಒಪ್ಪಿಗೆ ಇದೆ ಎಂಬುದನ್ನು ನ್ಯಾಯಾಧೀಶರ ಎದುರಲ್ಲೇ ದಾಖಲಿಸಬೇಕು

lಆರೋಪಿಯು ಸ್ವಯಂಪ್ರೇರಿತವಾಗಿ ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲು ಇಚ್ಛಿಸಿದರೆ, ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಯನ್ನು ಆತನ ವಕೀಲರ ಮೂಲಕವೇ ನಡೆಸಬೇಕು

lಪರೀಕ್ಷೆ ಸಂದರ್ಭದಲ್ಲಿ ನಡೆಯುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಪ್ರಕ್ರಿಯೆಗಳ ಬಗ್ಗೆ ಆರೋಪಿಗೆ ಪೊಲೀಸರು ಮತ್ತು ಅವರ ವಕೀಲರು ವಿವರಿಸಬೇಕು

lಪರೀಕ್ಷೆಯ ವೇಳೆ ಆರೋಪಿ ನೀಡುವ ಹೇಳಿಕೆಗಳು ತಪ್ಪೊಪ್ಪಿಗೆ ಹೇಳಿಕೆಗಳಾಗುವುದಿಲ್ಲ. ಅವು ಪೊಲೀಸರ ಎದುರು ನೀಡಲಾದ ಹೇಳಿಕೆಗಳು ಎಂದಷ್ಟೇ ಅವನ್ನು ಪರಿಗಣಿಸಲಾಗುತ್ತದೆ’ ಎಂಬುದನ್ನು ಆರೋಪಿಗೆ ವಿವರಿಸಬೇಕು

lಇಂತಹ ಪರೀಕ್ಷೆಗಳ ಸ್ವರೂಪ, ಪರೀಕ್ಷೆಯ ಅವಧಿ ಮತ್ತು ಆರೋಪಿಯ ಪೊಲೀಸ್ ಕಸ್ಟಡಿ ಅವಧಿಯ ವಿವರಗಳನ್ನು ನ್ಯಾಯಾಲಯಕ್ಕೆ ನೀಡಬೇಕು

lಆಸ್ಪತ್ರೆ ಅಥವಾ ವಿಧಿವಿಜ್ಞಾನ ಪ್ರಯೋಗಾಲಯಗಳಂತಹ ಸ್ವತಂತ್ರ ಸಂಸ್ಥೆಗಳಲ್ಲಿ ಸುಳ್ಳು ಪತ್ತೆ ಪರೀಕ್ಷೆಯನ್ನು ವಕೀಲರ ಸಮ್ಮುಖದಲ್ಲಿ ನಡೆಸಬೇಕು. ಪರೀಕ್ಷೆಯ ವಿವರಗಳನ್ನು ದಾಖಲಿಸಬೇಕು

ಪ್ರಮುಖ ಪ್ರಕರಣಗಳು

ಮಂಪರು ಪರೀಕ್ಷೆ, ಪಾಲಿಗ್ರಫಿ ಹಾಗೂ ಮೈಂಡ್ ಮ್ಯಾಪಿಂಗ್‌ ಪರೀಕ್ಷೆಗಳನ್ನು ಹಲವು ಪ್ರಕರಣಗಳಲ್ಲಿ ಪ್ರಯೋಗಿಸಲಾಗಿದೆ. ಈ ಎಲ್ಲ ಪರೀಕ್ಷೆಗಳೂ ಯಶಸ್ವಿಯಾಗಿಲ್ಲ. ಕೆಲವು ಪ್ರಕರಣಗಳಲ್ಲಿ ತನಿಖಾಧಿಕಾರಿಗಳ ವಾದಕ್ಕೆ ಪುಷ್ಠಿ ನೀಡುವ ಹೇಳಿಕೆಗಳನ್ನು ಆರೋಪಿಗಳು ಸುಳ್ಳು ಪತ್ತೆ ಪರೀಕ್ಷೆ ವೇಳೆ ನೀಡಿದ್ದಾರೆ. ಆದರೆ, ಕೆಲವು ಪ್ರಕರಣಗಳಲ್ಲಿ ಸುಳ್ಳು ಪತ್ತೆ ಪರೀಕ್ಷೆಗಳಿಂದ ಯಾವ ಮಾಹಿತಿಯೂ ಲಭ್ಯವಾಗಿಲ್ಲ. ಹೀಗಾಗಿ ಇವು ತನಿಖೆಗೆ ನೆರವಾಗುತ್ತವೆ ಎಂದು ಖಚಿತವಾಗಿ ಹೇಳಲಾಗದು

ಅಜ್ಮಲ್ ಕಸಬ್: ಮುಂಬೈ ಮೇಲೆ ನಡೆದಿದ್ದ ಉಗ್ರರ ದಾಳಿಯಲ್ಲಿ ಸೆರೆಸಿಕ್ಕಿದ್ದ ಉಗ್ರ ಅಜ್ಮಲ್ ಕಸಬ್‌ಗೆ ಮಂಪರು ಪರೀಕ್ಷೆ ನಡೆಸಲಾಗಿತ್ತು. ಪಾಕಿಸ್ತಾನದಲ್ಲಿ ಹೇಗೆ ಸಂಚು ಹೆಣೆಯಲಾಗಿತ್ತು ಎಂಬುದನ್ನು ಅವನು ಬಾಯಿಬಿಟ್ಟಿದ್ದ. ನಿಷೇಧಿತ ಲಷ್ಕರ್ ಸಂಘಟನೆಯ ಶಿಬಿರದಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದ ವಿಚಾರ, ತನ್ನ ಕುಟುಂಬದ ಹಿನ್ನೆಲೆ, ತಂಡದ ಜೊತೆ ಭಾರತಕ್ಕೆ ಬಂದ ಮಾಹಿತಿ ನೀಡಿದ್ದ. ಸಾಕಷ್ಟು ಒಳನೋಟಗಳನ್ನು ಈ ಪರೀಕ್ಷೆ ನೀಡಿತ್ತು. ಲಷ್ಕರ್ ಸಂಘಟನೆ ಸ್ಥಾಪಕ ಹಫೀಸ್‌ ಸಯೀದ್‌ ದಾಳಿಯ ಸಂಚುಕೋರ ಎಂಬುದು ಗೊತ್ತಾಗಿತ್ತು. ಬಡಯುವಕರ ಮನಪರಿವರ್ತನೆ ಮಾಡಿ, ಅವರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ನಿಯೋಜನೆ ಮಾಡಲಾಗುತ್ತಿದೆ ಎಂಬ ಅಂಶಗಳು ಗೊತ್ತಾಗಿದ್ದವು.

ಅಬ್ದುಲ್ ಕರೀಂ ತೆಲಗಿ: ನಕಲಿ ಛಾಪಾಕಾಗದ ಹಗರಣದ ಆರೋಪಿ ಅಬ್ದುಲ್ ಕರೀಂ ತೆಲಗಿಯನ್ನು 2003ರಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸಲಾಗಿತ್ತು. ಮಂಪರು ಪರೀಕ್ಷೆಯ ವಿಡಿಯೊ ಟೇಪ್‌ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಅಂದಿನ ಕೇಂದ್ರ ಸಚಿವರು, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಕೆಲವು ರಾಜಕಾರಣಿಗಳ ಹೆಸರನ್ನು ಮಂಪರು ಪರೀಕ್ಷೆಯಲ್ಲಿ ತೆಲಗಿ ಹೇಳಿದ್ದಾನೆ ಎಂದು ವರದಿಯಾಗಿತ್ತು. ಆದರೆ, ಈ ಪರೀಕ್ಷೆಯ ಬಳಿಕ, ನ್ಯಾಯಾಧೀಶರ ಎದುರು ತೆಲಗಿ ನುಡಿದಿದ್ದ ಸಾಕ್ಷ್ಯದಲ್ಲಿ, ಹಣ ನೀಡಿದ್ದನ್ನು ಉಲ್ಲೇಖಿಸಿರಲಿಲ್ಲ.

ನಿಥಾರಿ ಪ್ರಕರಣ: 2007ರಲ್ಲಿ ನೊಯ್ಡಾದಲ್ಲಿ 17 ಮಕ್ಕಳ ಅಸ್ತಿಪಂಜರಗಳು ಸಿಕ್ಕಿದ್ದ ಪ್ರಕರಣದಲ್ಲಿ ಮನೆಯ ಮಾಲೀಕ ಮೊನಿಂದರ್ ಸಿಂಗ್ ಪಂಧೇರ್ ಹಾಗೂ ಮನೆಯಲ್ಲಿ ವಾಸವಿದ್ದ ಸುರಿಂದರ್ ಕೋಲಿ ಎಂಬುವರ ಮೇಲೆಬ್ರೈನ್ ಮ್ಯಾಪಿಂಗ್ ಹಾಗೂ ಪಾಲಿಗ್ರಫಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಅಪರಾಧವನ್ನು ಕೋಲಿ ಒಪ್ಪಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದರು. ಕೋಲಿ ಎಸಗಿದ್ದ ಅಪರಾಧ ಕೃತ್ಯಗಳ ಬಗ್ಗೆ ಪಂಧೇರ್‌ಗೆ ಏನೂ ಗೊತ್ತಿರಲಿಲ್ಲ ಎಂದು ಮಂಪರು ಪರೀಕ್ಷೆಯನ್ನು ಉಲ್ಲೇಖಿಸಿ ಪೊಲೀಸರು ಹೇಳಿದ್ದರು.

ಇನ್ನಷ್ಟು ಪ್ರಕರಣ: ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ತರೂರ್‌ ಅವರ ಆಪ್ತರ ಮೇಲೆ ಈ ಪರೀಕ್ಷೆಗಳನ್ನು ನಡೆಸಲಾಗಿತ್ತು. ಸಿಬಿಐ ವಿಶೇಷ ನಿರ್ದೇಶಕರಾಗಿದ್ದ ರಾಕೇಶ್ ಆಸ್ಥಾನ ಅವರ ವಿರುದ್ಧ ಕೇಳಿಬಂದಿದ್ದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ನೀಡಿದವರು ಹಾಗೂ ಬಂಧಿತರನ್ನು 2019ರಲ್ಲಿ ಪಾಲಿಗ್ರಫಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಉತ್ತರ ಪ್ರದೇಶ ಹಾಥರಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳ ಮೇಲೂ ಈ ಪರೀಕ್ಷೆಗಳನ್ನು ನಡೆಸಲಾಗಿದೆ.

ಆರುಷಿ ತಲ್ವಾರ್: ವೈದ್ಯ ದಂಪತಿ ರಾಜೇಶ್ ತಲ್ವಾರ್ ಹಾಗೂ ನೂಪುರ್ ತಲ್ವಾರ್ ಅವರ ಮಗಳು ಆರುಷಿ ತಲ್ವಾರ್ ಹತ್ಯೆ ಪ್ರಕರಣದಲ್ಲಿ ಮಂಪರು ಪರೀಕ್ಷೆ ಕೆಲಸ ಮಾಡಲಿಲ್ಲ. 2010ರಲ್ಲಿ ಆರುಷಿಯ ಹೆತ್ತವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗಿದ್ದರೂ, ತನಿಖಾಧಿಕಾರಿಗಳಿಗೆ ಕೊಲೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿಲ್ಲ. ಇದಕ್ಕೂ ಮುನ್ನ, 2009ರಲ್ಲಿ ಬ್ರೈನ್ ಮ್ಯಾಪಿಂಗ್ ಹಾಗೂ ಇತರೆ ಸುಳ್ಳುಪತ್ತೆ ಪರೀಕ್ಷೆಗಳನ್ನು ತಲ್ವಾರ್ ದಂಪತಿ ಮೇಲೆ ನಡೆಸಲಾಗಿತ್ತು. ಆದರೆ ಕೊಲೆ ಮಾಡಿರುವುದನ್ನು ಖಚಿತಪಡಿಸುವ ಮಾಹಿತಿ ಅಥವಾ ಪುರಾವೆಗಳು ಲಭ್ಯವಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.