ಎರಡನೇ ಮಹಾಯುದ್ಧದ ನಂತರ ವಿಶ್ವದ ಎಲ್ಲಿಯೂ ಅಣ್ವಸ್ತ್ರವನ್ನು ಬಳಸಿಲ್ಲ. ಆದರೆ, ವಿಶ್ವದ ಅತ್ಯಂತ ಶಕ್ತಿಯುತ ರಾಷ್ಟ್ರಗಳ ಶಸ್ತ್ರಾಗಾರಗಳಲ್ಲಿ ಅಣ್ವಸ್ತ್ರಗಳು ಇವೆ. ಇವುಗಳ ಸಂಖ್ಯೆಯನ್ನು ಹೆಚ್ಚಿಸಲು ಈ ರಾಷ್ಟ್ರಗಳು ಯೋಜನೆ ಹಾಕಿಕೊಂಡಿವೆ. ಈಗ ವಿಶ್ವದಾದ್ಯಂತ ಇರುವ ಒಟ್ಟು ಅಣ್ವಸ್ತ್ರಗಳಲ್ಲಿ ಶೇ 70ಕ್ಕೂ ಹೆಚ್ಚು ಅಣ್ವಸ್ತ್ರಗಳು ಬಳಕೆಗೆ ಯೋಗ್ಯವಾಗಿವೆ ಎನ್ನುತ್ತದೆ ಸ್ಟಾಕ್‌ಹೋಂ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಸೆಂಟರ್ (ಸಿಪ್ರಿ) ವಾರ್ಷಿಕ ವರದಿ.
‘ವಿಶ್ವದ ಒಂಬತ್ತು ರಾಷ್ಟ್ರಗಳ ಬಳಿ ಅಣ್ವಸ್ತ್ರಗಳು ಇವೆ. ಈ ರಾಷ್ಟ್ರಗಳು ತಮ್ಮಲ್ಲಿರುವ ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಸಿದ್ಧತೆ ನಡೆಸಿವೆ. ಆದರೆ, 2021ರ ಜನವರಿ ವೇಳೆಗೆ ಈ ದೇಶಗಳ ಬಳಿ ಇದ್ದ ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆಗೆ ಹೋಲಿಸಿದರೆ, 2022ರ ಜನವರಿ ವೇಳೆಗೆ ಸಿಡಿತಲೆಗಳ ಸಂಖ್ಯೆಯಲ್ಲಿ ತುಸು ಕಡಿಮೆಯಾಗಿದೆ. ಅವಧಿ ಮುಗಿದ ಮತ್ತು ಬಳಸಲು ಯೋಗ್ಯವಲ್ಲದ ಅಣ್ವಸ್ತ್ರ ಸಿಡಿತಲೆಗಳನ್ನು ಈ ದೇಶಗಳು ವಿಲೇವಾರಿ ಮಾಡಲು ಮುಂದಾಗಿರುವ ಕಾರಣ, ಸಂಗ್ರಹದಲ್ಲಿರುವ ಒಟ್ಟು ಸಿಡಿತಲೆಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಕಡಿಮೆಯಾದ ಸಿಡಿತಲೆಗಳಿಗಿಂತಲೂ ಹೆಚ್ಚಿನ ಸಂಖ್ಯೆಯ ಸಿಡಿತಲೆಗಳನ್ನು ನಿರ್ಮಿಸಲು ಈ ದೇಶಗಳು ಮುಂದಾಗಿವೆ’ ಎಂದು ಸಿಪ್ರಿ ವಿವರಿಸಿದೆ.
‘ಕೆಲವು ದೇಶಗಳು, ಕೆಲವೇ ವರ್ಷಗಳಲ್ಲಿ ತಮ್ಮಲ್ಲಿರುವ ಸಿಡಿತಲೆಗಳ ಸಂಖ್ಯೆಯನ್ನು ಹೆಚ್ಚಿಸಲು ಸಿದ್ಧತೆ ನಡೆಸಿವೆ. ಸಿಡಿತಲೆ ನಿರ್ಮಾಣಕ್ಕೆ ಅಗತ್ಯವಿರುವ ಕಚ್ಚಾವಸ್ತುಗಳನ್ನು ಈ ದೇಶಗಳು ಖರೀದಿಸಿವೆ. ಹೀಗೆ ಖರೀದಿಸಿದ ಕಚ್ಚಾವಸ್ತುಗಳ ಲೆಕ್ಕಾಚಾರದಲ್ಲಿ, ಮುಂದಿನ ದಿನಗಳಲ್ಲಿ ಅವು ಎಷ್ಟು ಸಿಡಿತಲೆಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿವೆ ಎಂಬುದನ್ನು ಅಂದಾಜಿಸಲಾಗಿದೆ. ಎರಡನೇ ವಿಶ್ವಯುದ್ಧದ ನಂತರ, ವಿಶ್ವದ ಹಲವು ದೇಶಗಳು ಏಕಕಾಲದಲ್ಲಿ ಸಿಡಿತಲೆಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿರುವುದು ಇದೇ ಮೊದಲು. ಇದು ಅತ್ಯಂತ ಕಳವಳಕಾರಿ ಬೆಳವಣಿಗೆ’ ಎಂದು ಸಿಪ್ರಿ ಆತಂಕ ವ್ಯಕ್ತಪಡಿಸಿದೆ.
‘ಮೂರನೇ ವಿಶ್ವಯುದ್ಧ ನಡೆಯಬಾರದು ಮತ್ತು ಅಣ್ವಸ್ತ್ರಗಳನ್ನು ಮತ್ತೆ ಬಳಸಲೇಬಾರದು’ ಎಂದು ಅಮೆರಿಕ ಮತ್ತು ರಷ್ಯಾ ಪದೇ ಪದೇ ಹೇಳುತ್ತಲೇ ಇವೆ. ಆದರೆ, ಈ ಎರಡು ದೇಶಗಳೇ ಅಣ್ವಸ್ತ್ರ ಬಳಕೆಯ ಪರೋಕ್ಷ ಬೆದರಿಕೆಯನ್ನು ಒಡ್ಡುತ್ತಿವೆ ಎಂದು ಸಿಪ್ರಿ ಹೇಳಿದೆ. ವಿಶ್ವದಲ್ಲಿ ಈಗ ಇದೆ ಎಂದು ಅಂದಾಜಿಸಲಾಗಿರುವ ಒಟ್ಟು ಅಣ್ವಸ್ತ್ರ ಸಿಡಿತಲೆಗಳಲ್ಲಿ ಶೇ 90ರಷ್ಟು ಸಿಡಿತಲೆಗಳು ರಷ್ಯಾ ಮತ್ತು ಅಮೆರಿಕದ ಬಳಿಯೇ ಇವೆ. ಈ ಎರಡೂ ದೇಶಗಳು ಒಟ್ಟು 8,185 ಅಣ್ವಸ್ತ್ರ ಸಿಡಿತಲೆಗಳನ್ನು ಯುದ್ಧಸನ್ನದ್ಧವಾಗಿ ಇರಿಸಿವೆ. ಇವುಗಳಲ್ಲಿ, 3,000ಕ್ಕೂ ಹೆಚ್ಚು ಅಣ್ವಸ್ತ್ರ ಸಿಡಿತಲೆಗಳನ್ನು ಈ ದೇಶಗಳು ತಮ್ಮ ಗಡಿ ಮತ್ತು ಸೇನಾನೆಲೆಗಳ ಆಯಕಟ್ಟಿನ ಜಾಗಗಳಲ್ಲಿ ಉಡಾಯಿಸಲು ಸಿದ್ಧವಾಗಿ ಇರಿಸಿವೆ. ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ಅಣ್ವಸ್ತ್ರ ಬಳಸುವ ಬೆದರಿಕೆ ಪದೇ ಪದೇ ಕೇಳಿಬಂದಿದೆ. ಇದರ ಮಧ್ಯದಲ್ಲೇ ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆಯನ್ನು ಹೆಚ್ಚಿಸಲು ಹಲವು ದೇಶಗಳು ಮುಂದಾಗಿವೆ ಎಂದು ಸಿಪ್ರಿ ತನ್ನ ವರದಿಯಲ್ಲಿ ವಿವರಿಸಿದೆ.
ಈ ಎಲ್ಲಾ ದೇಶಗಳು ತಮ್ಮಲ್ಲಿರುವ ಅಣ್ವಸ್ತ್ರ ಸಿಡಿತಲೆಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಬೇರೆ ದೇಶಗಳು ಅಣ್ವಸ್ತ್ರ ಹೊಂದಬಾರದು ಎಂದು ಒತ್ತಡ ಹೇರುತ್ತಿವೆ. ಅಣ್ವಸ್ತ್ರ ಹೊಂದುವ ಇರಾನ್‌ನ ಕಾರ್ಯಕ್ರಮದ ಕಾರಣಕ್ಕೇ ಆ ದೇಶದ ಮೇಲೆ ಅಮೆರಿಕ ಆರ್ಥಿಕ ದಿಗ್ಬಂಧನ ಹೇರಿದೆ. ಈವರೆಗೆ ತನ್ನಲ್ಲಿರುವ ಅಣ್ವಸ್ತ್ರಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಬ್ರಿಟನ್, ಇನ್ನು ಮುಂದೆ ಇಂತಹ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದೆ. ಉತ್ತರ ಕೊರಿಯಾ ತನ್ನಲ್ಲಿರುವ ಅಣ್ವಸ್ತ್ರ ಸಿಡಿತಲೆಗಳ ಬಗ್ಗೆ ಮಾಹಿತಿ ನೀಡುತ್ತಲೇ ಇಲ್ಲ. ಅಮೆರಿಕ ಮತ್ತು ರಷ್ಯಾ ಸಹ ತಮ್ಮಲ್ಲಿರುವ ಸಿಡಿತಲೆಗಳ ಒಟ್ಟು ಸಂಖ್ಯೆಯನ್ನು ಮುಚ್ಚಿಟ್ಟಿವೆ. ಅಣ್ವಸ್ತ್ರ ಹೊಂದಿರುವ ಬೇರೆ ರಾಷ್ಟ್ರಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
ಚೀನಾ
ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ವೇಗವಾಗಿ ಹೆಚ್ಚಿಸಿಕೊಳ್ಳುವ ದೇಶಗಳ ಸಾಲಿನಲ್ಲಿ ಚೀನಾ ಇದೆ. ಸಿಪ್ರಿ ಲೆಕ್ಕಾಚಾರದ ಪ್ರಕಾರ, 350 ಅಣ್ವಸ್ತ್ರ ಸಿಡಿತಲೆಗಳನ್ನು ಚೀನಾ ಹೊಂದಿದೆ. ಆದರೆ, 2021ರಲ್ಲಿ ತನ್ನ ಸಾಮರ್ಥ್ಯವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಲು ಚೀನಾ ಯತ್ನಿಸಿದೆ. ಒಂದು ಅಂದಾಜಿನ ಪ್ರಕಾರ, 300ಕ್ಕೂ ಹೆಚ್ಚು ಹೊಸ ಕ್ಷಿಪಣಿಗಳನ್ನು ಚೀನಾ ನಿರ್ಮಿಸುತ್ತಿದೆ ಎನ್ನಲಾಗಿದೆ. ಅದೇ ವರ್ಷದಲ್ಲಿ ಹಲವು ಅಣ್ವಸ್ತ್ರ ಸಿಡಿತಲೆಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದೆ ಎಂದು ಅಂದಾಜಿಸಲಾಗಿದೆ. ಮೊಬೈಲ್ ಲಾಂಚರ್‌ಗಳು ಹಾಗೂ ಜಲಾಂತರ್ಗಾಮಿಗಳು ಸಿದ್ಧವಾದಂತೆಲ್ಲಾ, ಶಸ್ತ್ರಾಗಾರವನ್ನು ಸೇರಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.
ರಷ್ಯಾ ಮತ್ತು ಅಮೆರಿಕ
ಜಾಗತಿಕ ಅಣ್ವಸ್ತ್ರ ಸಿಡಿತಲೆಗಳಲ್ಲಿ ರಷ್ಯಾ ಹಾಗೂ ಅಮೆರಿಕ ಶೇ 90ರಷ್ಟು ಪಾಲು ಹೊಂದಿವೆ. ಅಣ್ವಸ್ತ್ರಗಳನ್ನು ಹೊಂದುವ ವಿಚಾರದಲ್ಲಿ ಈ ಎರಡೂ ದೇಶಗಳ ನಡುವೆ ಭಾರಿ ಪೈಪೋಟಿ ಇರುವುದು ದತ್ತಾಂಶಗಳನ್ನು ಪರಿಶೀಲಿಸಿದಾಗ ತಿಳಿಯುತ್ತದೆ. ಸಂಖ್ಯಾದೃಷ್ಟಿಯಿಂದ ನೋಡಿದರೆ, ಅತಿಹೆಚ್ಚು ಅಣ್ವಸ್ತ್ರ ಸಂಗ್ರಹ ಇರುವುದು ರಷ್ಯಾ ಬಳಿ. 2021ರಲ್ಲಿ 6,255ರಷ್ಟಿದ್ದ ಇವುಗಳ ಸಂಖ್ಯೆ 2022ರಲ್ಲಿ 5,977ಕ್ಕೆ ಇಳಿಕೆಯಾಗಿದೆ. ಇವುಗಳ ಸಂಖ್ಯೆಯನ್ನು ರಷ್ಯಾ ಕಡಿತಗೊಳಿಸಿದೆ ಎಂದು ಇದರ ಅರ್ಥವಲ್ಲ. ಕೆಲವು ಅಣ್ವಸ್ತ್ರ ಸಿಡಿತಲೆಗಳು ತೀರಾ ಹಳೆಯವಾಗಿದ್ದು, ಅವುಗಳಿಗೆ ನಿವೃತ್ತಿ ನೀಡಲಾಗಿದೆ ಅಥವಾ ಅವುಗಳನ್ನು ವಿಲೇವಾರಿ ಮಾಡಲಾಗಿದೆ. ರಷ್ಯಾಕ್ಕಿಂತ ಸ್ವಲ್ಪ ಕಡಿಮೆ (5,428) ಅಣ್ವಸ್ತ್ರ ಸಿಡಿತಲೆ ಹೊಂದಿರುವ ಅಮೆರಿಕದಲ್ಲೂ ಕಳೆದ ವರ್ಷಕ್ಕೆ (5,550) ಹೋಲಿಸಿದರೆ, 2022ರಲ್ಲಿ ಇವುಗಳ ಸಂಖ್ಯೆ ಇಳಿಕೆಯಾಗಿದೆ.
ಭಾರತ ಹಾಗೂ ಪಾಕಿಸ್ತಾನ
ಭಾರತ ಹಾಗೂ ಪಾಕಿಸ್ತಾನ ತಮ್ಮ ಅಣ್ವಸ್ತ್ರ ಸಾಮರ್ಥ್ಯ ಹೆಚ್ಚಿಸಿಕೊಳ್ಳುವಂತೆ ಕಾಣುತ್ತಿದೆ ಎಂದು ಸಿಪ್ರಿ ವರದಿ ಅಭಿಪ್ರಾಯಪಟ್ಟಿದೆ. ಹೊಸ ರೀತಿಯ ಅಣ್ವಸ್ತ್ರ ಉಡಾವಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಹಾಗೂ ಈಗಿನ ವ್ಯವಸ್ಥೆಗಳನ್ನು ಆಧುನೀಕರಣಗೊಳಿಸುವ ಪ್ರಕ್ರಿಯೆಗಳು 2021ರಲ್ಲಿ ಚುರುಕು ಪಡೆದವು. ಈ ದಿಸೆಯಲ್ಲಿ ಎರಡೂ ದೇಶಗಳಲ್ಲಿ ಹಲವು ಬೆಳವಣಿಗೆಗಳು ಆಗಿವೆ ಎನ್ನಲಾಗಿದೆ. ಸಿಪ್ರಿ ಒದಗಿಸಿರುವ ಭಾರತದ ಅಣ್ವಸ್ತ್ರ ಸಾಮರ್ಥ್ಯದ ಅಂಕಿ–ಅಂಶವನ್ನು ಗಮನಿಸಿದರೆ, 2021 ಹಾಗೂ 2022ರ ಅವಧಿಯಲ್ಲಿ ನಾಲ್ಕು ಹೆಚ್ಚುವರಿ ಅಣ್ವಸ್ತ್ರ ಸಿಡಿತಲೆಗಳು ಭಾರತದ ಬತ್ತಳಿಕೆಯನ್ನು ಸೇರಿವೆ. ಈಗ ಭಾರತದ ಬಳಿ ಅಧಿಕೃತವಾಗಿ 160 ಅಣ್ವಸ್ತ್ರ ಸಿಡಿತಲೆಗಳಿವೆ. ಆದರೆ, ಈ ವಿಚಾರದಲ್ಲಿ ಭಾರತಕ್ಕಿಂತ ಪಾಕಿಸ್ತಾನ ಮುಂದಿದೆ. 165 ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.
ಫ್ರಾನ್ಸ್
ಅಣ್ವಸ್ತ್ರ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಫ್ರಾನ್ಸ್ ಸಹ ಮುಂದಾಗಿದೆ.ಮೂರನೇ ತಲೆಮಾರಿನ ಅಣ್ವಸ್ತ್ರ ಸಾಮರ್ಥ್ಯದ ಬಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ಅಭಿವೃದ್ಧಿ ಕಾರ್ಯಕ್ರಮವನ್ನು (ಎಸ್ಎಸ್‌ಬಿಎನ್) 2021ರಲ್ಲಿ ಫ್ರಾನ್ಸ್ ಪ್ರಕಟಿಸಿತ್ತು. ಫ್ರಾನ್ಸ್ ಬಳಿ ಈಗ 290 ಅಣ್ವಸ್ತ್ರ ಸಿಡಿತಲೆಗಳಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಸಂಖ್ಯೆಯಲ್ಲಿ ಅಧಿಕೃತವಾಗಿ ಯಾವುದೇ ಬದಲಾವಣೆಯಾಗಿಲ್ಲ. 280 ಸಿಡಿತಲೆಗಳನ್ನು ನಿಯೋಜನೆ ಮಾಡಲಾಗಿದ್ದರೆ, ಉಳಿದ 10 ಅಣ್ವಸ್ತ್ರ ಸಿಡಿತಲೆಗಳನ್ನು ಸಂಗ್ರಹಿಸಿ ಇಡಲಾಗಿದೆ.
ಉತ್ತರ ಕೊರಿಯಾ
ಉತ್ತರ ಕೊರಿಯಾ ದೇಶವು ತನ್ನ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರದ ಮುಖ್ಯ ಭಾಗ ಎಂಬುದಾಗಿ ಅಣ್ವಸ್ತ್ರ ಕಾರ್ಯಕ್ರಮವನ್ನು ಪರಿಗಣಿಸಿದೆ. ಆದಾಗ್ಯೂ, 2021ರಲ್ಲಿ ಯಾವುದೇ ಖಂಡಾಂತರ ಕ್ಷಿಪಣಿ, ಬಲಿಸ್ಟಿಕ್ ಕ್ಷಿಪಣಿ ಪರೀಕ್ಷೆಯನ್ನು ಉತ್ತರ ಕೊರಿಯಾ ನಡೆಸಿಲ್ಲ. ಸಿಪ್ರಿ ವರದಿ ಪ್ರಕಾರ, 20 ಅಣ್ವಸ್ತ್ರ ಸಿಡಿತಲೆಗಳನ್ನು ಉತ್ತರ ಕೊರಿಯಾ ಸಿದ್ಧಪಡಿಸಿದೆ. ಸುಮಾರು 40–50 ಅಣ್ವಸ್ತ್ರಗಳನ್ನು ಸಿದ್ಧಪಡಿಸುತ್ತಿದೆ ಎನ್ನಲಾಗಿದೆ.
ಬ್ರಿಟನ್
ಜಾಗತಿಕವಾಗಿ ವಿವಿಧ ದೇಶಗಳು ತಮ್ಮ ಅಣ್ವಸ್ತ್ರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ವಿದ್ಯಮಾನದ ಮೇಲೆ ಕಣ್ಣಿಟ್ಟಿದ್ದಬ್ರಿಟನ್, ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆಯನ್ನು ಹೆಚ್ಚಿಸುವ ಅಚ್ಚರಿಯ ನಿರ್ಧಾರವನ್ನು 2021ರಲ್ಲಿ ಪ್ರಕಟಿಸಿತು. ಇದು ದಶಕದಷ್ಟು ಹಿಂದೆ ತಾನೇ ಪ್ರಕಟಿಸಿದ್ದ ನಿಶ್ಶಸ್ತ್ರೀಕರಣ ನೀತಿಗೆ ವಿರುದ್ಧವಾಗಿ ತೆಗೆದುಕೊಂಡ ನಿರ್ಧಾರವಾಗಿತ್ತು. ಜಾಗತಿಕ ಶಸ್ತ್ರ ಸಾಮರ್ಥ್ಯದಲ್ಲಿ ದೇಶದ ಬಲ ಕುಗ್ಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಬ್ರಿಟನ್ ಈ ನಿರ್ಧಾರ ತಳೆಯಿತು.
ತಮ್ಮ ತಮ್ಮ ದೇಶಗಳ ಶಸ್ತ್ರಕೋಠಿಯಲ್ಲಿ ಎಷ್ಟು ಸಂಖ್ಯೆಯ ಅಣ್ವಸ್ತ್ರಗಳನ್ನು ದಾಸ್ತಾನು ಇಡಲಾಗಿದೆ ಎಂಬ ಬಗ್ಗೆ ರಷ್ಯಾ ಹಾಗೂ ಚೀನಾ ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಬ್ರಿಟನ್ ಆರೋಪಿಸಿದೆ. ಈ ದೇಶಗಳು ಹೇಳುವ ಸಾಮರ್ಥ್ಯಕ್ಕೂ, ಅವು ಹೊಂದಿರುವ ಸಾಮರ್ಥ್ಯಕ್ಕೂ ವ್ಯತ್ಯಾಸಗಳಿವೆ ಎಂಬುದು ಬ್ರಿಟನ್ ಅನುಮಾನ. ಹೀಗಾಗಿ ನಿರ್ಧಾರ ಪ್ರಕಟಿಸಿದ ಬ್ರಿಟನ್, ತನ್ನಲ್ಲಿರುವ ಅಣ್ವಸ್ತ್ರ ಸಂಗ್ರಹದ ಮಾಹಿತಿಯನ್ನುಇನ್ನುಮುಂದೆ ಬಹಿರಂಗಪಡಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಇಸ್ರೇಲ್
ಯಾವುದೇ ಹೊಸ ಅಣ್ವಸ್ತ್ರವನ್ನು ಹೊಂದುತ್ತಿರುವ ಬಗ್ಗೆ ಇಸ್ರೇಲ್ ಬಹಿರಂಗವಾಗಿ ಹೇಳಿಲ್ಲ. ಆದರೆ ತನ್ನ ಅಣ್ವಸ್ತ್ರ ಬಲವನ್ನು ಆಧುನೀಕರಣಗೊಳಿಸುತ್ತಿದೆ ಎನ್ನಲಾಗಿದೆ.
ಆಧಾರ: ಸಿಪ್ರಿ ವಾರ್ಷಿಕ ವರದಿ, ರಾಯಿಟರ್ಸ್, ಎಎಫ್‌ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.