ADVERTISEMENT

ಆಳ–ಅಗಲ | ಹಾವು ಕಡಿತ: ಭಾರತದ ‘ನಿರ್ಲಕ್ಷಿತ’ ಸಮಸ್ಯೆ

ದೇಶದಲ್ಲಿ ವಾರ್ಷಿಕ 60 ಸಾವಿರಕ್ಕೂ ಹೆಚ್ಚು ಸಾವು

ಬಿ.ವಿ. ಶ್ರೀನಾಥ್
Published 18 ಅಕ್ಟೋಬರ್ 2024, 22:45 IST
Last Updated 18 ಅಕ್ಟೋಬರ್ 2024, 22:45 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   
ದೇಶದಲ್ಲಿ ಡೆಂಗಿ, ಮಲೇರಿಯಾ ಕಾಯಿಲೆಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ವನ್ಯಪ್ರಾಣಿ–ಮಾನವ ಸಂಘರ್ಷದ ಭಾಗವಾಗಿ ಹುಲಿ, ಚಿರತೆ, ಆನೆ ದಾಳಿಗಳ ಬಗ್ಗೆ ರಾಜಕಾರಣಿಗಳೂ ಸೇರಿದಂತೆ ಹಲವರು ಚರ್ಚಿಸಿ, ಪರಿಹಾರೋಪಾಯಗಳ ಬಗ್ಗೆ ಮಾತುಕತೆ ನಡೆಸುತ್ತಿರುತ್ತಾರೆ. ಆದರೆ, ಇವೆರಡಕ್ಕಿಂತ ಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿರುವ ಹಾವು ಕಡಿತದ ಬಗ್ಗೆ ಸರ್ಕಾರಗಳು ಅಷ್ಟು ಗಮನ ಹರಿಸುತ್ತಿಲ್ಲ. ಭಾರತ ‘ಹಾವು ಕಡಿತದ ರಾಜಧಾನಿ’ ಎಂದೇ ಹೆಸರಾಗಿದ್ದು, ಅದರಿಂದ ಹೆಚ್ಚು ಮಂದಿ ಸಾಯುತ್ತಿದ್ದಾರೆ. ಹಾವು ಕಡಿತಕ್ಕೆ ಒಳಗಾಗುತ್ತಿರುವ ಹೆಚ್ಚಿನವರು ಹಳ್ಳಿಗರು, ಬಡವರಾಗಿರುವುದು ಈ ಕುರಿತ ನಿರ್ಲಕ್ಷ್ಯಕ್ಕೆ ಕಾರಣ ಎನ್ನಲಾಗುತ್ತಿದೆ   

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ 81 ಸಾವಿರಕ್ಕೂ ಹೆಚ್ಚು ಮಂದಿ ಹಾವು ಕಡಿತದಿಂದಾಗಿ ಸಾಯುತ್ತಿದ್ದಾರೆ; ಅದರ ಮೂರರಷ್ಟು ಮಂದಿ ಅಂಗವೈಕಲ್ಯವೂ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಜಗತ್ತಿನಲ್ಲಿ ಹಾವು ಕಡಿತದಿಂದ ಸಾಯುತ್ತಿರುವ ಪ್ರತಿ 100 ಮಂದಿಯ ಪೈಕಿ ಸುಮಾರು 50 ಮಂದಿ ಭಾರತದವರು. 

ಹಾವು ಶೀತ ರಕ್ತದ ಸರೀಸೃಪ. ಮಳೆಗಾಲದ ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲೇ ಹೆಚ್ಚಿನ ಹಾವು ಕಡಿತದ ಪ್ರಕರಣಗಳು ವರದಿಯಾಗುತ್ತಿವೆ. ಭಾರತದಲ್ಲಿ ವರದಿಯಾಗುತ್ತಿರುವ ಶೇ 90ರಷ್ಟು ಪ್ರಕರಣಗಳಿಗೆ ಅತಿ ಅಪಾಯಕಾರಿ ಎಂದು ಪರಿಗಣಿಸಲಾಗಿರುವ ನಾಲ್ಕು ಪ್ರಭೇದಗಳು– ನಾಗರಹಾವು, ಕೊಳಕು ಮಂಡಲ, ಗರಗಸ ಮಂಡಲ, ಕಟ್ಟು ಹಾವು– ಕಾರಣವಾಗಿವೆ. ಉಳಿದ ಶೇ 10ರಷ್ಟು ಪ್ರಕರಣಗಳಿಗೆ 12 ಹಾವಿನ ಪ್ರಭೇದಗಳು ಕಾರಣವಾಗುತ್ತಿವೆ.  

ADVERTISEMENT

ವ್ಯವಸಾಯದ ಕಾರಣಕ್ಕಾಗಿ ಹೊಲಗದ್ದೆಗಳಲ್ಲಿ ಸಂಚರಿಸುವ, ರಾತ್ರಿ ಹೊತ್ತು ಓಡಾಡುವ ಕೃಷಿಕರು, ಕೂಲಿ ಕಾರ್ಮಿಕರು ಹಾವು ಕಡಿತಕ್ಕೆ ಹೆಚ್ಚು ಗುರಿಯಾಗುತ್ತಿದ್ದಾರೆ. ಹೀಗಾಗಿ, ಹಾವು ಕಡಿತವನ್ನು ಗ್ರಾಮೀಣ ಭಾಗದ ಜನರು ಮತ್ತು ಬಡವರ ಸಮಸ್ಯೆ ಎಂದೇ ನೋಡಲಾಗುತ್ತಿದೆ.  ನಗರ ಪ್ರದೇಶಗಳಲ್ಲಿಯೂ ಇತ್ತೀಚೆಗೆ ಹಾವು ಕಡಿತದ ಸಂಖ್ಯೆ ಏರುತ್ತಿದೆ. ಹಾವುಗಳ ಆವಾಸಗಳಲ್ಲಿ ಬಡಾವಣೆಗಳು, ಮನೆಗಳು ನಿರ್ಮಾಣಗೊಂಡಿರುವುದು ಇದಕ್ಕೆ ಕಾರಣ.  

ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ‘ಮಿಲಿಯನ್ ಡೆತ್ ಸ್ಟಡಿ’ ಹೆಸರಿನಲ್ಲಿ 2011ರಲ್ಲಿ ಮೊದಲ ಬಾರಿಗೆ ಈ ಸಮಸ್ಯೆಯ ಬಗ್ಗೆ ವ್ಯಾಪಕ ಮಾಹಿತಿ, ಅಂಕಿಅಂಶ ಕಲೆಹಾಕಿ, ಅದರ ಗಂಭೀರ ಸ್ವರೂಪವನ್ನು ಬಹಿರಂಗಪಡಿಸಿತು. ಭಾರತವು ಹಾವು ಕಡಿತದ ರಾಜಧಾನಿ ಎಂದು ಕರೆಸಿಕೊಳ್ಳುವುದಕ್ಕೆ ಹಲವು ಕಾರಣಗಳನ್ನು ತಜ್ಞರು ಪಟ್ಟಿ ಮಾಡುತ್ತಾರೆ. ವಾಸ್ತವವಾಗಿ, ದೇಶದಲ್ಲಿ ಹಾವಿನ ಕಡಿತಕ್ಕೊಳಗಾಗುತ್ತಿರುವ ಸಂಖ್ಯೆ ಈಗ ಹೇಳುತ್ತಿರುವುದಕ್ಕಿಂತಲೂ ಇನ್ನೂ ಹೆಚ್ಚಿದೆ. ಈ ಕುರಿತ ಅಧ್ಯಯನ, ಜಾಗೃತಿ ಮೂಡಿಸುವ ಕಾರ್ಯಕ್ರಮ ಮತ್ತು ಚಿಕಿತ್ಸೆಯ ವಿಚಾರದಲ್ಲಿ ದೇಶವು ಹಲವು ತೊಡಕುಗಳನ್ನು ಎದುರಿಸುತ್ತಿದೆ.  

ದೇಶದಲ್ಲಿ ಹಾವು ಕಡಿತವನ್ನು ‘ಮೆಡಿಕೋ ಲೀಗಲ್’ ಪ್ರಕರಣ ಎಂದು ‍ಪರಿಗಣಿಸಲಾಗುತ್ತದೆ. ಪೊಲೀಸರ ಭಯದಿಂದ ಹಲವು ವೈದ್ಯರು ಹಾವು ಕಡಿತಕ್ಕೆ ಚಿಕಿತ್ಸೆ ನೀಡದೇ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸುತ್ತಾರೆ. ಈ ಬಗ್ಗೆ ಸರ್ಕಾರ ಪದೇ ಪದೇ ಮಾರ್ಗಸೂಚಿ ಬದಲಾವಣೆ ಮಾಡಿದರೂ ಹಲವು ಕಾರಣಗಳಿಂದ ಅದು ದೇಶದ ಗ್ರಾಮೀಣ ಭಾಗದ ವೈದ್ಯರಿಗೆ ತಲುಪುತ್ತಿಲ್ಲ. ಇದರಿಂದ ಬಾಧಿತರಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಸಾವುಗಳು ಹೆಚ್ಚುತ್ತಿವೆ.  

ಭಾರತದ ವೈದ್ಯರು ಇಂದಿಗೂ ಹಳೆಯ, ಪಶ್ಚಿಮ ಕೇಂದ್ರಿತವಾದ ವೈದ್ಯ ಪಠ್ಯಗಳನ್ನು ಆಧರಿಸಿಯೇ ಚಿಕಿತ್ಸೆ ನೀಡುತ್ತಿದ್ದು, ಇಲ್ಲಿನ ಭೌಗೋಳಿಕ ಪರಿಸರಕ್ಕೆ, ಹಾವು ಪ್ರಭೇದಕ್ಕೆ ಅದು ಅಷ್ಟು ಪರಿಣಾಮಕಾರಿಯಾಗಿಲ್ಲ. ಕೆಲವು ರಾಜ್ಯಗಳು ಹಾವು ಕಡಿತದಿಂದ ಸಾವಿಗೀಡಾದವರ ಸಂಬಂಧಿಕರಿಗೆ ಪರಿಹಾರ ನೀಡುತ್ತಿದ್ದು, ಅದು ಅತ್ಯಲ್ಪ ಪ್ರಮಾಣದ್ದಾಗಿದೆ ಎನ್ನುವ ಟೀಕೆ ವ್ಯಾಪಕವಾಗಿದೆ. ಸಾವು ಸಂಭವಿಸಿದಲ್ಲಿ ಅದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಪಡೆದರೆ ಮಾತ್ರವೇ ಪರಿಹಾರ ಸಿಗುತ್ತದೆ. ಆದರೆ, ಪ್ರಮಾಣ ಪತ್ರ ಪಡೆಯುವುದು ಅತ್ಯಂತ ಪ್ರಯಾಸದ ಕೆಲಸವಾಗಿದ್ದು, ಇದರಿಂದ ನಮ್ಮ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ವ್ಯವಸ್ಥೆಯ ಬಗ್ಗೆ ಜನರಿಗೆ ನಂಬಿಕೆಯೇ ಇಲ್ಲವಾಗಿದೆ.

ಭಾರತದಲ್ಲಿ ಹಾವು ಕಡಿತದ ಸುತ್ತ ಮೂಢನಂಬಿಕೆ, ದಂತಕಥೆ, ಅಂಧ ಆಚರಣೆಗಳು ಹೆಚ್ಚು ಚಾಲ್ತಿಯಲ್ಲಿರುವುದು ಹೆಚ್ಚಿನ ಸಾವುಗಳಿಗೆ ಕಾರಣ ಎಂದು ತಜ್ಞರು ವಿಶ್ಲೇಷಿಸುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಹಾವು ಕಡಿತಕ್ಕೊಳಗಾದವರು ತಕ್ಷಣ ಹೋಗುವುದು ಮಾಟ ಮಂತ್ರ ಮಾಡುವವರ ಬಳಿ. ಇಲ್ಲವೇ ಸಾಂಪ್ರದಾಯಿಕ ಚಿಕಿತ್ಸೆ ನೀಡುವವರ ಬಳಿ. ಜನರಿಗೆ ಹಾವು ಕಡಿತದ ಬಗ್ಗೆ ಮತ್ತು ಅದಕ್ಕೆ ಮಾಡಬೇಕಾದ ಚಿಕಿತ್ಸೆಯ ಬಗ್ಗೆ ಇರುವ ಭಯ ಮತ್ತು ಅಜ್ಞಾನ ಚಿಕಿತ್ಸೆಯ ವಿಚಾರದಲ್ಲಿ ಒಂದು ತೊಡಕಾಗಿದೆ.

ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೌಲಭ್ಯಗಳು ಇಲ್ಲದೇ ಇರುವುದು ಕೂಡ ಹಾವು ಕಡಿತದಿಂದ ಹೆಚ್ಚು ಸಾವು ಸಂಭವಿಸಲು ಒಂದು ಕಾರಣವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗಳು ಕಡಿಮೆ. ಆಸ್ಪತ್ರೆ ಇದ್ದರೂ ಅವುಗಳಲ್ಲಿ ಆ್ಯಂಟಿ ಸ್ನೇಕ್ ವೆನಮ್ (ವಿಷ ನಿರೋಧಕ) ಲಭ್ಯ ಇರುವುದಿಲ್ಲ. ಹೀಗಾಗಿ ಹಳ್ಳಿಗಳಲ್ಲಿ ಹಾವು ಕಡಿತಕ್ಕೊಳಗಾದವರು ಸಾಂಪ್ರದಾಯಿಕ ಔಷಧಿಯ ಮೊರೆ ಹೋಗುವಂತಾಗಿದೆ. 

ವಿಶ್ವ ಆರೋಗ್ಯ ಸಂಸ್ಥೆಯು ಹಾವು ಕಡಿತದಿಂದ ಉಂಟಾಗುವ ಅಸ್ವಸ್ಥತೆಯನ್ನು ‘ಉಷ್ಣವಲಯದ ಒಂದು ನಿರ್ಲಕ್ಷಿತ ಕಾಯಿಲೆ’ ಎಂದು ವರ್ಗೀಕರಿಸಿದೆ. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಈ ಬಗ್ಗೆ ಸೂಕ್ತ ಗಮನ ಹರಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದೆ. ಭಾರತದಲ್ಲಿ ಪ್ರತಿವರ್ಷ ಡೆಂಗಿ, ಮಲೇರಿಯಾಕ್ಕಿಂತಲೂ ಹೆಚ್ಚು ಮಂದಿ ಹಾವು ಕಡಿತದಿಂದ ಸಾಯುತ್ತಿದ್ದಾರೆ. ಮಾನವ–ಪ್ರಾಣಿ ಸಂಘರ್ಷದಲ್ಲೂ ಹಾವಿನ ಕಡಿತದ ಪ್ರಕರಣಗಳೇ ಹೆಚ್ಚಿವೆ. ದೇಶದಲ್ಲಿ ಬಿಹಾರ, ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಹೆಚ್ಚಿನ ಹಾವು ಕಡಿತ ಪ್ರಕರಣಗಳು ವರದಿಯಾಗುತ್ತಿವೆ.

ಇಷ್ಟಾದರೂ ಹಾವು ಕಡಿತದಿಂದಾಗುತ್ತಿರುವ ಸಾವುಗಳನ್ನು ತಪ್ಪಿಸುವ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಾಗಲಿ ಅಥವಾ ರಾಜ್ಯಗಳ ಮಟ್ಟದಲ್ಲಾಗಲಿ ಗಂಭೀರವಾದ ಚಿಂತನೆ ಮತ್ತು ಕ್ರಮಗಳು ಇತ್ತೀಚಿನವರೆಗೂ ಆಗಿರಲೇ ಇಲ್ಲ. 2030ರ ಹೊತ್ತಿಗೆ, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನದಂತೆ, ಹಾವು ಕಡಿತದ ಪ್ರಕರಣಗಳನ್ನು ಹಾಗೂ ಅದಕ್ಕೆ ಸಂಬಂಧಿಸಿದ ಸಾವುಗಳನ್ನು ಕನಿಷ್ಠ ಅರ್ಧದಷ್ಟಾದರೂ ಕಡಿಮೆ ಮಾಡಲು ಈಚೆಗೆ ಕೇಂದ್ರ ಸರ್ಕಾರವು ಕಾರ್ಯಯೋಜನೆಯೊಂದನ್ನು ರೂಪಿಸಿದೆ.

ಈ ವರ್ಷದ ಮಾರ್ಚ್‌ನಲ್ಲಿ ಕರ್ನಾಟಕ ಸರ್ಕಾರವು ಹಾವು ಕಡಿತದಿಂದಾಗುವ ಅಸ್ವಸ್ಥತೆಯನ್ನು ‘ಘೋಷಿತ ಕಾಯಿಲೆ’ ಎಂದು ಗುರುತಿಸಿದೆ. ಇದರಿಂದ ಹಾವು ಕಡಿತದ ಘಟನೆಗಳು ದಾಖಲಾಗುವುದಲ್ಲದೇ, ಚಿಕಿತ್ಸೆ ನೀಡಲು ಸಹಾಯವಾಗುತ್ತದೆ. ಹೀಗೆ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಉಳಿದ ರಾಜ್ಯಗಳು ಕೂಡ ಇದೇ ಮಾದರಿ ಅನುಸರಿಸಬೇಕು ಎಂದು ತಜ್ಞರು ಒತ್ತಾಯಿಸುತ್ತಿದ್ದಾರೆ.

ಕೇರಳದಲ್ಲಿ ‘ಸರ್ಪ’ ಸಾಧನೆ

2019ರಲ್ಲಿ ಕೇರಳದ ವಯನಾಡ್‌ನಲ್ಲಿ ಐದನೆಯ ತರಗತಿಯ ಬಾಲಕಿಯೊಬ್ಬಳಿಗೆ ಶಾಲಾ ಕೊಠಡಿಯಲ್ಲಿಯೇ ಹಾವು ಕಚ್ಚಿ, ಆಕೆ ಮೃತಪಟ್ಟಳು. 2019ರಲ್ಲಿ ರಾಜ್ಯದಲ್ಲಿ ಹಾವು ಕಚ್ಚಿ 130 ಮಂದಿ ಮೃತಪಟ್ಟಿದ್ದರು. 2020ರಲ್ಲಿ ಉತ್ತರಾ  ಎನ್ನುವ ಮಹಿಳೆಗೆ ನಿದ್ರೆ ಮಾತ್ರೆ ನೀಡಿ, ಬೆಡ್‌ರೂಮ್‌ನಲ್ಲಿ ಮಲಗಿದ್ದಾಗ ಅವರ ಮೇಲೆ ಗಂಡನೇ ನಾಗರ ಹಾವನ್ನು ಎಸೆದಿದ್ದ. ಹಾವು ಕಚ್ಚಿ ಉತ್ತರಾ ಅವರು ಮೃತಪಟ್ಟರು. ಆ ವರ್ಷ (2020) ಕೇರಳದಲ್ಲಿ ಹಾವು ಕಚ್ಚಿ ಸತ್ತವರ ಸಂಖ್ಯೆ 80. ಈ ಎರಡು ಪ್ರಕರಣಗಳು ಹಾವು ಕಡಿತದ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರವನ್ನು ಪ್ರೇರೇಪಿಸಿತು. 

2023ರರಲ್ಲಿ ಕೇರಳದಲ್ಲಿ ಹಾವು ಕಚ್ಚಿ ಸತ್ತವರ ಸಂಖ್ಯೆ 40. 2024ರ ಆರಂಭದ ತಿಂಗಳಲ್ಲಿ ಹಾವು ಕಚ್ಚಿ ಸತ್ತವರ ಸಂಖ್ಯೆ 7. ಕೇರಳ ಕ್ರಮೇಣ ಹಾವು ಕಡಿತದ ಶೂನ್ಯ ಸಾವಿನ ರಾಜ್ಯವಾಗುವತ್ತ ಹೆಜ್ಜೆ ಇಡುತ್ತಿದೆ. ಕೇರಳದ ಈ ಸಾಧನೆಗೆ ಕಾರಣ, ಹಾವಿನ ಬಗ್ಗೆ ಅರಿವು ಮೂಡಿಸುವ ಮತ್ತು ಅವುಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ರೂಪಿಸಿರುವ ‘ಸರ್ಪ’ (ಸ್ನೇಕ್ ಅವೇರ್‌ನೆಸ್ ರೆಸ್ಕ್ಯೂ ಮತ್ತು ಪ್ರೊಟೆಕ್ಷನ್) ಆ್ಯಪ್. ಇದರ ಮೂಲಕ ಸಂತ್ರಸ್ತರು ವೈಜ್ಞಾನಿಕವಾಗಿ ಹಾವನ್ನು ಹಿಡಿಯುವ ತರಬೇತಿ ಪಡೆದವರನ್ನು ಸಂಪರ್ಕಿಸಿ, ಶೀಘ್ರ ಚಿಕಿತ್ಸೆ ಪಡೆಯಬಹುದಾಗಿದೆ.

ಪ್ರದೇಶಕ್ಕೆ ತಕ್ಕಂತೆ ಔಷಧ ಬೇಕು 

ಭಾರತದಲ್ಲಿ ಆ್ಯಂಟಿ ಸ್ನೇಕ್ ವೆನಮ್ (ವಿಷ ನಿರೋಧಕ) ಅನ್ನು ಪ್ರಮುಖ ನಾಲ್ಕು ಜಾತಿಯ ಹಾವುಗಳ ಕಡಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ. ದೇಶದಲ್ಲಿ ಒಟ್ಟು 290 ಕ್ಕೂ ಹೆಚ್ಚು ಹಾವಿನ ಪ್ರಭೇದಗಳಿದ್ದು, ಅವುಗಳಲ್ಲಿ ಸಮಾರು 60 ವಿಷಪೂರಿತ ಹಾವುಗಳಿವೆ. ಆದರೆ, ಆ್ಯಂಟಿ ಸ್ನೇಕ್ ವೆನಮ್ ತಯಾರಿಸುವಾಗ ಪ್ರಮುಖ ನಾಲ್ಕು ಹಾವುಗಳ ವಿಷವನ್ನು ಮಾತ್ರ ಬಳಸಲಾಗುತ್ತಿದೆ. ಈಶಾನ್ಯ ರಾಜ್ಯಗಳೂ ಸೇರಿದಂತೆ ದೇಶದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಹಾವು ಪ್ರಭೇದ ಇವೆ. ಈ ನಾಲ್ಕು ಜಾತಿಗೆ ಸೇರದ ಹಾವುಗಳಿಂದ ಕಡಿತಕ್ಕೊಳಗಾದವರಿಗೆ ಈಗ ಬಳಸುತ್ತಿರುವ ಆ್ಯಂಟಿ ಸ್ನೇಕ್ ವೆನಮ್ ಅಷ್ಟು ಉಪಯುಕ್ತವಾಗುವುದಿಲ್ಲ.

ಭಾರತದಂಥ ವಿಸ್ತಾರವಾದ, ವೈವಿಧ್ಯಮಯವಾದ ದೇಶದಲ್ಲಿ ಇಲ್ಲಿನ ಪ್ರಾದೇಶಿಕ ಭಿನ್ನತೆ, ಹಾವುಗಳ ವೈವಿಧ್ಯಕ್ಕೆ ತಕ್ಕಂತೆ ಆ್ಯಂಟಿ ಸ್ನೇಕ್ ವೆನಮ್ ತಯಾರಿಸುವ ದಿಸೆಯಲ್ಲಿ ಅಧ್ಯಯನಗಳು ನಡೆಯಬೇಕಿದೆ ಎನ್ನುವುದು ತಜ್ಞರ ನಿಲುವು. ದೇಶದ ಎಲ್ಲೆಡೆಯೂ ಒಂದೇ ರೀತಿಯ ಆ್ಯಂಟಿ ಸ್ನೇಕ್ ವೆನಮ್ ಬಳಸಲಾಗುತ್ತಿದ್ದು, ಇದು ಕೆಲವರಲ್ಲಿ ಅಲರ್ಜಿಯಂಥ ಗಂಭೀರ ಅಡ್ಡಪರಿಣಾಮಗಳಿಗೂ ಕಾರಣವಾಗುತ್ತಿದೆ. ಈ ದಿಸೆಯಲ್ಲಿಯೂ ಸರ್ಕಾರ ಗಮನ ಹರಿಸಬೇಕು
ಎನ್ನುವ ಒತ್ತಾಯ ಕೇಳಿಬಂದಿದೆ.

ಹಾವು ಕಚ್ಚಿದಾಗ ಏನು ಮಾಡಬೇಕು?

  • ವಿಚಲಿತಗೊಳ್ಳದೆ ಶಾಂತವಾಗಿರಿ. ಕಡಿತಕೊಳ್ಳಗಾದ ವ್ಯಕ್ತಿಯನ್ನು ಸಮಾಧಾನ ಪಡಿಸಿ

  • ಹಾವಿನಿಂದ ದೂರ ಹೋಗಿ

  • ಕಚ್ಚಿದ ಜಾಗ ಅಥವಾ ಗಾಯವನ್ನು ಹಾಗೆಯೇ ಬಿಡಿ

  • ಕಡಿತದ ಜಾಗದಿಂದ ಬಿಗಿ ಬಟ್ಟೆ/ಆಭರಣ/ಗಡಿಯಾರ/ಉಂಗುರ/ಬೆಲ್ಟ್‌/ಪಾದರಕ್ಷೆಗಳನ್ನು ತೆಗೆಯಿರಿ

  • ಕಡಿತಕ್ಕೆ ಒಳಗಾದ ವ್ಯಕ್ತಿಯು ಎಡ ಮಗ್ಗುಲಿಗೆ ಮಲಗುವಂತೆ ಮಾಡಿ. ಬಲಗಾಲು ಬಾಗಿರಲಿ. ಕೈಗಳು ತಲೆಯ ಕೆಳಭಾಗದಲ್ಲಿರಲಿ

  • ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಿರಿ 

ಏನು ಮಾಡಬಾರದು?

  • ಕಡಿತಕ್ಕೊಳಗಾದ ವ್ಯಕ್ತಿ ಗಾಬರಿಯಾಗುವುದಕ್ಕೆ ಅವಕಾಶ ನೀಡಬೇಡಿ

  • ಕಚ್ಚಿದ ಹಾವನ್ನು ಹೊಡೆಯಬೇಡಿ ಅಥವಾ ಕೊಲ್ಲಬೇಡಿ. ಹೊಡೆದರೆ ಅದು ಮತ್ತೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ

  • ಕಡಿತದ ಗಾಯಕ್ಕೆ ವಿಷ ನಿರೋಧಕ ಔಷಧ ಹಾಕಬೇಡಿ

  • ರಕ್ತ ಪರಿಚಲನೆಯನ್ನು ತಡೆಯುವುದಕ್ಕಾಗಿ ಕಚ್ಚಿರುವ ಸ್ಥಳವನ್ನು ದಾರ, ಬಟ್ಟೆಯಿಂದ ಕಟ್ಟಬೇಡಿ. ಗಾಯವಾಗಿರುವ ಭಾಗವನ್ನು ಕತ್ತರಿಸಬೇಡಿ

  • ಕಡಿತಕ್ಕೊಳಗಾದ ವ್ಯಕ್ತಿಯನ್ನು ಅಂಗಾತವಾಗಿ ಮಲಗಿಸಬೇಡಿ. ದೇಹದಲ್ಲಿ ಗಾಳಿಯ ಸಂಚಾರವನ್ನು ಇದು ತಡೆಯಬಹುದು

  • ಸಾಂಪ್ರದಾಯಿಕ ಅಥವಾ ಅಸುರಕ್ಷಿತವಾದ ಚಿಕಿತ್ಸೆಯನ್ನು ಪಡೆಯಬೇಡಿ

ದೇಶದಲ್ಲಿ ಹೆಚ್ಚು ಜನರನ್ನು ಬಲಿ ಪಡೆಯುತ್ತಿರುವ ಹಾವುಗಳೆಂದರೆ...

ಆಧಾರ: ವಿಶ್ವ ಆರೋಗ್ಯ ಸಂಸ್ಥೆ ವೆಬ್‌ಸೈಟ್, ಬಿಬಿಸಿ, ಪಿಐಬಿ, ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.