ಜೆಇಇ ಮತ್ತು ನೀಟ್ ನಂತಹ ಪರೀಕ್ಷೆಗಳಿಗೆ ತರಬೇತಿ ನೀಡುವ ಸಾವಿರಾರು ಕೋಚಿಂಗ್ ಕೇಂದ್ರಗಳಿರುವ ನಗರ ರಾಜಸ್ಥಾನದ ಕೋಟಾ. ಇಲ್ಲಿಗೆ ಪ್ರತಿವರ್ಷ ಸುಮಾರು 2.5 ಲಕ್ಷದಿಂದ 3 ಲಕ್ಷದ ವರೆಗೆ ವಿದ್ಯಾರ್ಥಿಗಳು ದಾಖಲುಗೊಳ್ಳುತ್ತಾರೆ. ಇಂಥ ಪರೀಕ್ಷೆಗಳಲ್ಲಿ ಇಲ್ಲಿ ಓದಿದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುತ್ತಾರೆ ಹಾಗೂ ರ್‍ಯಾಂಕ್ ಗಳಿಸುತ್ತಾರೆ. ಇದೇ ಕಾರಣಕ್ಕೆ ಈ ನಗರವನ್ನು ‘ಕೋಟಾ ಫ್ಯಾಕ್ಟರಿ’ ಎಂದು ಕರೆಯುತ್ತಾರೆ. ಉತ್ತಮ ಅಂಕ ಪಡೆಯುವ, ಪೋಷಕರ ಆಸೆಯನ್ನು ಈಡೇರಿಸುವ ಭಾರ ಹೊತ್ತ ವಿದ್ಯಾರ್ಥಿಗಳು ಈ ಫ್ಯಾಕ್ಟರಿಯಲ್ಲಿ ಪ್ರತಿದಿನವೂ ಒತ್ತಡದೊಂದಿಗೆ ಬದುಕುತ್ತಿದ್ದಾರೆ. 9–10ನೇ ತರಗತಿಗೇ ಇಲ್ಲಿ ಸೇರುವ ಮಕ್ಕಳ ಮೇಲೆ ಪಠ್ಯದ ಭಾರವೂ ಇದೆ. ಈ ಎಲ್ಲ ಭಾರವನ್ನು ತಾಳಿಕೊಳ್ಳಲು ಸಾಧ್ಯವಾಗದೇ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ
ಬಿಡುವಿಲ್ಲದ ತರಗತಿಗಳು, ಉಸಿರು ಕಟ್ಟಿಸುವ ಸ್ಪರ್ಧೆ, ಉತ್ತಮ ಅಂಕ ಗಳಿಸಲೇ ಬೇಕು ಎನ್ನುವ ನಿರಂತರ ಒತ್ತಡ, ಪೋಷಕರ ಒತ್ತಾಸೆಯ ಭಾರ, ಗಳಿಗೆ ಗಳಿಗೆಗೂ ಕಾಡುವ ಮನೆಯ ನೆನಪು... ಇದು ರಾಜಸ್ಥಾನದ ‘ಕೋಟಾ ಫ್ಯಾಕ್ಟರಿ’ಯ ವಿದ್ಯಾರ್ಥಿಗಳ ಮೇಲೆ ನಡೆಯುವ ‘ಶೈಕ್ಷಣಿಕ ಕೌರ್ಯ’ದ ಕಥಾನಕ.
‘ನಾನು ಕಳೆದ ಎರಡು ವರ್ಷಗಳಿಂದ ಇಲ್ಲಿ ಜೆಇಇಗಾಗಿ ತಯಾರಿ ನಡೆಸುತ್ತಿದ್ದೇನೆ. ಕೋಟಾ ಎಂದರೆ ಟ್ರೆಡ್‌ಮಿಲ್ ಇದ್ದ ಹಾಗೆ. ಒಂದು ಬಾರಿ ಇದನ್ನು ಹತ್ತಿದರೆ ಮುಗಿಯಿತು ನೀವು ಓಡುತ್ತಲೇ ಇರಬೇಕು. ಓಡಲು ಪ್ರಾರಂಭಿದ ಮೇಲೆ ಮಾತ್ರ ನೀವು ನಿಲ್ಲುವ ಹಾಗಿಲ್ಲ ಅಥವಾ ನಿಮ್ಮ ಗತಿಯನ್ನು ತಗ್ಗಿಸುವ ಹಾಗೂ ಇಲ್ಲ.. ಓಡುತ್ತಿರಬೇಕು ಅಷ್ಟೇ’ ಎನ್ನುತ್ತಾರೆ ಒಡಿಸಾದ ಮಾನ್ಸಿ ಸಿಂಗ್.
ತನ್ನ ಗುರುತನ್ನು ಹೇಳಿಕೊಳ್ಳಲು ಬಯಸದ ಇನ್ನೊಬ್ಬ ವಿದ್ಯಾರ್ಥಿಯದ್ದು ಹೆಚ್ಚು ಕಡಿಮೆ ಇದೇ ಅಭಿಪ್ರಾಯವೇ. ‘ಒಂದೊಮ್ಮೆ ಕೆಲವು ನಿಮಿಷಗಳ ಕಾಲ ನೀವು ಪುಸ್ತಕ ಹಿಡಿಯಲಿಲ್ಲ, ಓದಲಿಲ್ಲ ಎಂದಿಟ್ಟುಕೊಳ್ಳಿ, ಆ ನಿಮಿಷಗಳು ‘ವ್ಯರ್ಥ’ವಾದಂತೆ ಅನ್ನಿಸಿ ಬಿಡುತ್ತದೆ. ಒಮ್ಮೆ ಈ ಅನ್ನಿಸಿಕೆ ನಮ್ಮ ತಲೆಹೊಕ್ಕರೆ ಸಾಕು, ಅದು ಅಪರಾಧಿಭಾವದ ವಿಷವರ್ತುಲದ ಒಳಗೆ ಸಿಲುಕಿಕೊಂಡಂತೆ. ಈ ವರ್ತುಲವು ಕೊನೆಯಲ್ಲಿ ನಮ್ಮನ್ನು ಅಧೀರರನ್ನಾಗಿ ಮಾಡಿಬಿಡುತ್ತದೆ’ ಎನ್ನುತ್ತಾರೆ.
ಹೀಗೆ ಒಂದೊಂದೂ ಕಥಾನಕ ‘ಫ್ಯಾಕ್ಟರಿ’ಯಲ್ಲಿನ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯನ್ನು ಬಿಚ್ಚಿಡುತ್ತಾ ಹೋಗುತ್ತವೆ. ಈ ಫ್ಯಾಕ್ಟರಿಗೆ ಸೇರುವ ವಿದ್ಯಾರ್ಥಿಗಳಿಗೆ ಅಲಿಖಿತ ನಿಯಮವೊಂದಿದೆ. ಅದುವೇ ಸ್ನೇಹಿತರನ್ನು ಸಂಪಾದಿಸಬಾರದು ಎಂಬುದಾಗಿ. ಪೋಷಕರು ಕೋಟಾಗೆ ತಮ್ಮ ಮಕ್ಕಳನ್ನು ತಂದು ಬಿಡುವಾಗ ಮಕ್ಕಳ ಮೇಲೆ ಹೇರುವ ನಿಮಯವಿದು. ‘ನೀನು ಇಲ್ಲಿಗೆ ಓದಲಿಕ್ಕೆ, ನಮ್ಮ ಕನಸನ್ನು ನನಸು ಮಾಡಲಿಕ್ಕೆ ಬಂದಿದ್ದೀಯಾ. ಆದ್ದರಿಂದ ಸ್ನೇಹವೆಂದೆಲ್ಲಾ ಸಮಯ ಹಾಳು ಮಾಡಬೇಡ’ ಇದು ಪೋಷಕರ ಖಡಾಖಂಡಿತ ಮಾತು.
‘ಇಲ್ಲಿ ಸ್ನೇಹಕ್ಕೆ ಅವಕಾಶವಿಲ್ಲ. ಇಲ್ಲಿ ಇರುವವರು ಸ್ಪರ್ಧಿಗಳು ಮಾತ್ರ. ನಮ್ಮ ಪಕ್ಕ ಕೂರುವ ಪ್ರತಿಯೊಬ್ಬರೂ ನಮ್ಮ ಪ್ರತಿಸ್ಪರ್ಧಿಗಳೇ ಆಗಿದ್ದಾರೆ. ಶಾಲೆ– ಕಾಲೇಜುಗಳು ಥರ ಇಲ್ಲಿ ಯಾರೂ ಯಾರೊಂದಿಗೂ ನೋಟ್ಸ್‌ಗಳನ್ನು ಹಂಚಿಕೊಳ್ಳುವುದಿಲ್ಲ. ಹಂಚಿಕೊಂಡರೆ ತಮ್ಮ ಅವಕಾಶವನ್ನು ಎಲ್ಲಿ ಕಿತ್ತುಕೊಂಡು ಬಿಡುತ್ತಾರೊ ಎನ್ನುವ ಆತಂಕ ಎಲ್ಲರಲ್ಲೂ ಇದೆ’ ಎನ್ನುತ್ತಾರೆ ಮಧ್ಯ ಪ್ರದೇಶದ ರಿಧಿಮಾ ಸ್ವಾಮಿ. ಸ್ನೇಹ ಮಾಡುವುದು ಪಾಪವಾಗಿರುವ ಇಲ್ಲಿ, ಇದೇ ವರ್ಷದಲ್ಲಿ ಸುಮಾರು 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಮ್ಮನಾಗುವ ಪೊಲೀಸರು
‘ನಿಮ್ಮನ್ನು ಏನಾದರೊಂದು ವಿಷಯ ಕಾಡುತ್ತಿದೆಯಾ? ನಿಮಗೆ ನಿಜವಾಗಿಯೂ ಎಂಜಿನಿಯರ್ ಅಥವಾ ಡಾಕ್ಟರ್ ಆಗಲು ಇಷ್ಟವಿದೆಯಾ? ತರಗತಿಗಳಲ್ಲಿ ಹೇಳಿ ಕೊಡುತ್ತಿರುವುದು ಅರ್ಥವಾಗುತ್ತಿದೆಯಾ? ಹಾಸ್ಟಲ್‌ಗಳಲ್ಲಿ ಊಟ ಉತ್ತಮ ಗುಣಮಟ್ಟದಲ್ಲಿ ಇದೆಯಾ? – ಹೀಗೆ ‘ಕೋಟಾ ಫ್ಯಾಕ್ಟರಿ’ಯಲ್ಲಿ ತಿರುಗುವ ಪೊಲೀಸರು ವಿದ್ಯಾರ್ಥಿಗಳನ್ನು ವಿಚಾರಿಸಿಕೊಳ್ಳುತ್ತಿದ್ದಾರೆ.
ಒಂದಾದ ಮೇಲೆ ಒಂದು ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗ ತೊಡಗಿದಾಗ ಆತಂಕಗೊಂಡ ಆಡಳಿತ ಹಾಗೂ ಪೊಲೀಸರು ‘ವಿದ್ಯಾರ್ಥಿ ಸಹಾಯ ವಿಭಾಗ’ ಅನ್ನು ಪರಿಚಯಿಸಿದರು. ಇದರಲ್ಲಿ 40 ವರ್ಷ ಮೀರಿದ, 18 ವರ್ಷದ ಆಸುಪಾಸಿನ ಮಕ್ಕಳಿರುವ ಒಟ್ಟು 11 ಪೊಲೀಸರನ್ನು ಈ ವಿಭಾಗಕ್ಕೆ ನೇಮಿಸಲಾಗಿದೆ. ಮಹಿಳಾ ಪೊಲೀಸರೂ ಸೇರಿದ ಈ ವಿಭಾಗದವರು ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಾರೆ.
ಜುಲೈ ತಿಂಗಳಿನಿಂದ ಈ ವಿಭಾಗ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಸಹಾಯವಾಣಿಯೂ ಇದೆ. ಇವರು ಸಮವಸ್ತ್ರ ಧರಿಸುವುದಿಲ್ಲ. ಪೊಲೀಸ್ ವಾಹನಗಳಲ್ಲಿ ಓಡಾಡುವುದಿಲ್ಲ. ಇವರು ಸ್ನೇಹಿತರಾಗುತ್ತಾರೆ. ಅಮ್ಮನಾಗುತ್ತಾರೆ ಹಾಗೂ ಕೆಲವೊಮ್ಮೆ ಆಪ್ತಸಮಾಲೋಚಕರೂ ಆಗಿ ಮಕ್ಕಳನ್ನು ಸಂಬಾಳಿಸುತ್ತಿದ್ದಾರೆ.
ನಿತ್ಯ ಬೆಳಿಗ್ಗೆ 9 ಗಂಟೆಗೆ ಇವರ ಕೆಲಸ ಪ್ರಾರಂಭವಾಗುತ್ತದೆ. ಹಾಸ್ಟೆಲ್‌ಗಳಿಗೆ ಭೇಟಿ ನೀಡುವುದು, ಟ್ಯೂಷನ್‌ಗಳಿಗೆ ಭೇಟಿ ನೀಡುವ ಕೆಲಸ ಮಾಡುತ್ತಾರೆ. ವಿದ್ಯಾರ್ಥಿಗಳನ್ನು ಮಾತನಾಡಿಸಿ, ಅವರ ಮಾನಸಿಕ ಸ್ಥಿತಿಯನ್ನು ಅಧ್ಯಯನ ಮಾಡಿ, ಆಪ್ತಸಮಾಲೋಚನೆ ಮಾಡುತ್ತಾರೆ. ಪರಿಸ್ಥಿತಿ ಕೈಮೀರಿದೆ ಎಂದು ತೋರಿದರೆ ಮನಃಶಾಸ್ತ್ರಜ್ಞರ ಬಳಿ ಕರೆದುಕೊಂಡು ಹೋಗುತ್ತಾರೆ ಮತ್ತು ಪೋಷಕರಿಗೆ ಮಾಹಿತಿಯನ್ನೂ ನೀಡುತ್ತಾರೆ.
‘ಇಲ್ಲಿಯ ವರೆಗೆ ಸುಮಾರು 60,000 ವಿದ್ಯಾರ್ಥಿಗಳನ್ನು ಮಾತನಾಡಿಸಿದ್ದೇವೆ. ಕೆಲವೊಮ್ಮೆ ವಿದ್ಯಾರ್ಥಿಗಳು ನಮ್ಮೊಂದಿಗೆ ವಿಷಯಗಳನ್ನು ಹಂಚಿಕೊಳ್ಳಲು ಅಂಜುತ್ತಾರೆ. ಯಾರಿಗೂ ಏನೂ ಹೇಳಬಾರದು ಎಂಬ ಪೋಷಕರ ಒತ್ತಡವೂ ಇರಬಹುದು. ಹಾಸ್ಟೆಲ್‌ಗಳ ವಾರ್ಡನ್‌ಗಳನ್ನು ಭೇಟಿ ಮಾಡುತ್ತೇವೆ. ವಿದ್ಯಾರ್ಥಿಗಳ ನಡವಳಿಕೆಯಲ್ಲಾಗುವ ಬದಲಾವಣೆಗಳನ್ನು ಕೇಳುತ್ತೇವೆ. ಒಂದೊಮ್ಮೆ ಅವರು ತರಗತಿಗಳನ್ನು ನಿರಂತರವಾಗಿ ತಪ್ಪಿಸುತ್ತಿದ್ದರೆ, ಅದರ ಕುರಿತೂ ಮಾಹಿತಿ ಪಡೆದುಕೊಳ್ಳುತ್ತೇವೆ. ಇದೆಲ್ಲವನ್ನೂ ಗಮನಿಸಿ ಆತ್ಮಹತ್ಯೆಯಂಥ ತೀವ್ರವಾದ ನಿರ್ಧಾರ ತೆಗೆದುಕೊಳ್ಳುವುದರ ಒಳಗೆ ಅಂಥ ವಿದ್ಯಾರ್ಥಿಗಳನ್ನು ಕಾಪಾಡುವ ಕೆಲಸ ಮಾಡುತ್ತೇವೆ’ ಎನ್ನುತ್ತಾರೆ ಕೋಟಾದ ಹೆಚ್ಚುವರಿ ಎಸ್‌ಪಿ ಚಂದ್ರಶೀಲ್ ಠಾಕೂರ್. ಇವರೇ ಈ ವಿಭಾಗದ ಮುಖ್ಯಸ್ಥರು.
ಸಹಾಯವಾಣಿಗೆ ಕರೆ ಬಂದು ತೀವ್ರತರವಾದ ನಿರ್ಧಾರ ಕೈಗೊಳ್ಳುವ ಮುನ್ನವೇ ವಿದ್ಯಾರ್ಥಿಗಳನ್ನು ಕಾಪಾಡಿದ ಹಲವು ಉದಾಹರಣೆಗಳು ಈ ‘ವಿದ್ಯಾರ್ಥಿ ಸಹಾಯ ವಿಭಾಗ’ದಲ್ಲಿ ಇದೆ.
ಆತ್ಮಹತ್ಯೆ ಹೆಚ್ಚಳ: ಸಮಿತಿ ರಚನೆ
ಕೆಲವೇ ದಿನಗಳ ಹಿಂದೆ ಇಬ್ಬರು ವಿದ್ಯಾರ್ಥಿಗಳು ನಾಲ್ಕು ತಾಸಿನ ಅಂತರದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಈ ಘಟನೆ ನಡೆಯುವ ಸುಮಾರು ಒಂದು ವಾರದ ಮುನ್ನ ಅಂದರೆ ಆಗಸ್ಟ್ 18ರಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಸಭೆಯೊಂದನ್ನು ಕರೆದಿದ್ದರು. ಮುಖ್ಯಮಂತ್ರಿಯು ಈ ಸಭೆ ಕರೆಯುವ ಹೊತ್ತಿಗೆ ಕೋಟಾದಲ್ಲಿ ಇದೇ ವರ್ಷವೇ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ವರ್ಷದ ಈ ಸಂಖ್ಯೆ 15ರಲ್ಲಿತ್ತು. ಆತ್ಮಹತ್ಯೆ ಪ್ರಕರಣದಲ್ಲಿ ಏರಿಕೆ ಕಂಡುಬಂದು ಕಳವಳಗೊಂಡ ಸರ್ಕಾರವು ಸಭೆ ಕರೆದಿತ್ತು.
ಕೋಚಿಂಗ್ ಕೇಂದ್ರಗಳ ಪ್ರತಿನಿಧಿಗಳು, ಪೋಷಕರು, ವೈದ್ಯರು, ಸರ್ಕಾರಿ ಅಧಿಕಾರಿಗಳನ್ನು ಸೇರಿಸಿ ಈ ಸಮಿತಿಯನ್ನು ರಚಿಸಲಾಯಿತು. 15 ದಿನಗಳ ಒಳಗೆ ವರದಿಯನ್ನು ನೀಡುವಂತೆಯೂ ಗಡುವು ನೀಡಲಾಗಿತ್ತು. ಇದಾದ ಬಳಿಕ ಆಗಸ್ಟ್ 28ರಂದು ಈ ಸಮಿತಿಯು ಸಭೆ ಸೇರಿತ್ತು. ಈ ಸಭೆಯಲ್ಲಿ ಕೆಲವು ನಿರ್ಧಾರಗಳನ್ನೂ ಕೈಗೊಳ್ಳಲಾಗಿತ್ತು. ಅವುಗಳೆಂದರೆ:
l ಕೋಚಿಂಗ್ ಕೇಂದ್ರಗಳು ಪ್ರತಿ ಬುಧವಾರದ ಮಧ್ಯಾಹ್ನವನ್ನು ಮನರಂಜನೆಗಾಗಿ ಮೀಸಲಿಡಬೇಕು
l ಪರೀಕ್ಷೆಗಳಿಗೆ ಗೈರಾಗುವ ಮತ್ತು ಕಡಿಮೆ ಅಂಕಗಳನ್ನು ಗಳಿಸುವ, ಆತ್ಮಹತ್ಯೆ ಮಾಡಿಕೊಳ್ಳುವ ಮನಃಸ್ಥಿತಿ ತೋರುವ ವಿದ್ಯಾರ್ಥಿಗಳನ್ನು ಗಮನಿಸಿ ಅಂಥವರಿಗೆ ಆಪ್ತಸಮಾಲೋಚನೆ ಸೇವೆ ಒದಗಿಸಬೇಕು
l ಪ್ರತಿ ವಾರ ನೀಡುವ ಪರೀಕ್ಷೆಯನ್ನು ನಿಲ್ಲಿಸಬೇಕು
l ವಿದ್ಯಾರ್ಥಿಗಳ ಪಠ್ಯಭಾರವನ್ನು ಕಡಿಮೆಗೊಳಿಸಲು ವಿಷಯ ತಜ್ಞರ ಸಮಿತಿಯೊಂದನ್ನು ಕೋಚಿಂಗ್ ಕೇಂದ್ರಗಳು ರಚಿಸಿಕೊಳ್ಳಬೇಕು
l ತಜ್ಞರಿಂದ ಆನ್‌ಲೈನ್ ಮೂಲಕ ಸ್ಫೂರ್ತಿದಾಯಕ ಭಾಷಣಗಳನ್ನು ಏರ್ಪಡಿಸಬೇಕು ಮತ್ತು ಈ ಭಾಷಣಗಳನ್ನು ಕೇಂದ್ರಗಳು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಅಪ್‌ಲೋಡ್ ಮಾಡಬೇಕು
l ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯನ್ನು ಅರಿತುಕೊಳ್ಳುವ ಸಲುವಾಗಿ ಪ್ರತಿನಿತ್ಯವೂ ಅರ್ಜಿಯೊಂದನ್ನು ನೀಡಿ, ಅದನ್ನು ತುಂಬಲು ಹೇಳಬೇಕು
‘ಸಮೂಹ ಮನಃಸ್ಥಿತಿಯಿಂದ ಸಮಸ್ಯೆ’
ಒಂದೇ ರೀತಿಯ ಮನಃಸ್ಥಿತಿಯವರು ನೇರವಾಗಿ ಅಥವಾ ಪರೋಕ್ಷವಾಗಿ ಒಬ್ಬರಿಗೊಬ್ಬರು ಆಸರೆಯಾಗಿರುತ್ತಾರೆ. ಯಾವುದೇ ಒಬ್ಬ ವ್ಯಕ್ತಿ ದುಡುಕಿನ ನಿರ್ಧಾರ ಕೈಗೊಂಡರೆ ಅದು ಉಳಿದವರ ಮನಃಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಿ, ಅವರು ಸಹ ಅದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇರುತ್ತದೆ. ಇದನ್ನು ‘ಸಮೂಹ ಮನಃಸ್ಥಿತಿ ಪರಿಣಾಮ’ ಎನ್ನಬಹುದಾಗಿದೆ.
ಪರೀಕ್ಷೆಗಳಲ್ಲಿ ಅಧಿಕ ಅಂಕ ಪಡೆಯುವಂತೆ ಪಾಲಕರು ಒತ್ತಡ ಹೇರುತ್ತಿರುವುದರಿಂದ ಮಕ್ಕಳಲ್ಲಿ ಸಹ ಮಾನಸಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ
–ಡಾ. ಶಶಿಧರ್ ಎಚ್.ಎನ್., ನಿಮ್ಹಾನ್ಸ್‌ನ ಸ್ಥಾನಿಕ ವೈದ್ಯಾಧಿಕಾರಿ (ಆರ್‌ಎಂಒ)
***
‘ಮಕ್ಕಳ ಮೇಲೆ ಅತಿ ಒತ್ತಡ ಹೇರಬಾರದು’
ವೈದ್ಯಕೀಯ ಶಿಕ್ಷಣ ಮತ್ತು ಎಂಜಿನಿಯರಿಂಗ್ ಎನ್ನುವುದು ಇಂದು ಕ್ರೇಜ್ ಆಗಿದೆ. ಮಕ್ಕಳಿಗೆ ಆ ಕ್ಷೇತ್ರವನ್ನು ತಮ್ಮ ಕೈಯಲ್ಲಿ ನಿಭಾಯಿಸಲು ಸಾಧ್ಯವಿಲ್ಲ ಎನ್ನುವ ಭಾವನೆ ಇದ್ದಾಗ ಪೋಷಕರು ಆ ಕ್ಷೇತ್ರಕ್ಕೆ ಮಕ್ಕಳನ್ನು ಒತ್ತಾಯದಿಂದ ನೂಕಬಾರದು. ವೈದ್ಯರು ಅಥವಾ ಎಂಜಿನಿಯರ್ ಆಗಲಿಲ್ಲ ಎಂದರೆ ಜೀವನವೇ ಇಲ್ಲ ಎನ್ನುವ ಅತಿರೇಕದ ಮಟ್ಟಕ್ಕೆ ಇದು ತಲುಪಿದೆ. ಕೆಲವು ಪೋಷಕರು ತಮ್ಮ ಇಚ್ಛೆ, ಆಸೆಗಳನ್ನು ಮಕ್ಕಳ ಮೇಲೆ ಹೇರುತ್ತಾರೆ.
–ಪ್ರದೀಪ್ ಈಶ್ವರ್, ಮುಖ್ಯಸ್ಥರು, ಪರಿಶ್ರಮ ನೀಟ್ ಅಕಾಡೆಮಿ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.