ADVERTISEMENT

ಆಳ–ಅಗಲ | ಒಂದು ಹತ್ಯೆ; ಎರಡು ದೇಶಗಳ ಕಲಹ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 0:13 IST
Last Updated 16 ಅಕ್ಟೋಬರ್ 2024, 0:13 IST
   
ಒಂದು ಹತ್ಯೆ ಪ್ರಕರಣ ಭಾರತ– ಕೆನಡಾ ನಡುವಿನ ಕಲಹಕ್ಕೆ ಕಾರಣವಾಗಿದೆ. ಯಾವ ಮಟ್ಟಿಗೆ ಎಂದರೆ, ಎರಡೂ ದೇಶಗಳು ಪರಸ್ಪರ ರಾಜತಾಂತ್ರಿಕರಿಗೆ ದೇಶ ತೊರೆಯುವಂತೆ ಸೂಚನೆ ನೀಡಿವೆ. ಹತ್ಯೆಗೊಳಗಾದ ಹರ್ದೀಪ್‌ ಸಿಂಗ್ ನಿಜ್ಜರ್ ಭಾರತದ ಪ್ರಕಾರ ಭಯೋತ್ಪಾದಕ; ಆದರೆ, ಅದನ್ನು ಒಪ್ಪಲು ಕೆನಡಾ ಸಿದ್ಧವಿಲ್ಲ. ಅದಕ್ಕೆ ಕಾರಣಗಳು ಹಲವು. ಮುಖ್ಯವಾದುದು, ಕೆನಡಾದಲ್ಲಿ ಸಿಖ್ಖರು ನಿರ್ಣಾಯಕ ರಾಜಕೀಯ ಶಕ್ತಿ ಎನ್ನುವುದು. ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಗೆ ಮುಂದಿನ ಚುನಾವಣೆಯಲ್ಲಿ ಸಿಖ್ಖರ ಬೆಂಬಲ ಬೇಕು. ಭಾರತ–ಕೆನಡಾದ ಸಂಬಂಧ ಹಿಂದೆಂದೂ ಇಲ್ಲದ ರೀತಿಯಲ್ಲಿ ಬಿಗಡಾಯಿಸಲು ಇದೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ

ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ ಹಲವು ತಿರುವುಗಳನ್ನು ಪಡೆಯುತ್ತಿದೆ. ಹತ್ಯೆ ಸಂಬಂಧ ಭಾರತದ ಹೈಕಮಿಷನರ್ ಅವರನ್ನು ವಿಚಾರಣೆಗೆ ಒಳಪಡಿಸುವುದಾಗಿ ಕೆನಡಾ ಹೇಳಿದ ನಂತರ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತೀವ್ರಗೊಂಡಿದೆ. ಅಲ್ಲಿನ ತನ್ನ ಹೈಕಮಿಷನರ್ ಅನ್ನು ವಾಪಸ್ ಕರೆಸಿಕೊಳ್ಳುವುದಾಗಿ ಭಾರತ ಘೋಷಿಸಿದ ಬೆನ್ನಲ್ಲೇ ಭಾರತದ ಹೈಕಮಿಷನರ್ ಸೇರಿದಂತೆ ಆರು ಮಂದಿ ರಾಜತಾಂತ್ರಿಕರಿಗೆ ಕೆನಡಾ ದೇಶ ಬಿಟ್ಟು ಹೋಗುವಂತೆ ಸೂಚಿಸಿದೆ. ಅದಕ್ಕೆ ಪ್ರತಿಯಾಗಿ ಕೆನಡಾದ ಆರು ಮಂದಿ ರಾಜತಾಂತ್ರಿಕರಿಗೆ ಭಾರತ ಕೂಡ ದೇಶ ತೊರೆಯುವಂತೆ ಹೇಳಿದೆ. ಎರಡು ದೇಶಗಳ ನಡುವಿನ ಸಂಬಂಧ ಬಿಗಡಾಯಿಸುವ ಹಂತಕ್ಕೆ ಹೋಗುತ್ತಿದೆ. ಮುಂದೇನು ಎನ್ನುವ ಆತಂಕಕ್ಕೂ ಇದು ಕಾರಣವಾಗಿದೆ.

1974ರಲ್ಲಿಯೂ ಇಂಥದೇ ಪರಿಸ್ಥಿತಿ ಉದ್ಭವಿಸಿತ್ತು. ಭಾರತ ರಾಜಸ್ಥಾನದ ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿ ಜಾಗತಿಕ ಮಟ್ಟದಲ್ಲಿ ಭಾರಿ ಸುದ್ದಿ ಮಾಡಿತ್ತು. ತಾನು ಶಾಂತಿಯ ಉದ್ದೇಶಕ್ಕಾಗಿ ಉಡುಗೊರೆಯಾಗಿ ನೀಡಿದ್ದ ಕೆನಡಿಯನ್ ರಿಯಾಕ್ಟರ್‌ನಿಂದ ಪ್ಲುಟೋನಿಯಂ ಅನ್ನು ಭಾರತವು ಅಣ್ವಸ್ತ್ರಕ್ಕೆ ಬಳಸಿಕೊಂಡಿದೆ ಎಂದು ಕೆನಡಾ ಅಸಮಾಧಾನ ವ್ಯಕ್ತಪಡಿಸಿತ್ತು. ಭಾರತದ ಪರಮಾಣು ಕಾರ್ಯಕ್ರಮವನ್ನು ತಾನು ಬೆಂಬಲಿಸುವುದಿಲ್ಲ ಎಂದು ಘೋಷಿಸಿತ್ತು. 1998ರಲ್ಲಿಯೂ ಭಾರತ ಅಣ್ವಸ್ತ್ರ ಪರೀಕ್ಷೆ ಮಾಡಿದಾಗ ಕೆನಡಾ ಆಕ್ಷೇಪಿಸಿತ್ತು. ಇನ್ನೊಮ್ಮೆ, 2005ರಲ್ಲಿ, ಏರ್ ಇಂಡಿಯಾದಲ್ಲಿ ಬಾಂಬ್ ಇಟ್ಟಿದ್ದ ಆರೋಪಕ್ಕೆ ಒಳಗಾಗಿದ್ದ ಕೆನಡಾದ ಇಬ್ಬರು ಸಿಖ್ಖರನ್ನು ಅಲ್ಲಿನ ನ್ಯಾಯಾಲಯ ಖುಲಾಸೆಗೊಳಿಸಿದಾಗ ಭಾರತ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು.

ಮೂರೂ ಸಂದರ್ಭಗಳಲ್ಲಿ ಎರಡು ರಾಷ್ಟ್ರಗಳ ನಡುವೆ ಒಂದಿಷ್ಟು ಅಸಮಾಧಾನದ ವಾತಾವರಣ ಮೂಡಿತ್ತು, ನಿಜ. ಆದರೆ, ಯಾವ ಸಂದರ್ಭದಲ್ಲಿಯೂ ಉಭಯ ರಾಷ್ಟ್ರಗಳು ತಮ್ಮ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡಿರಲಿಲ್ಲ ಎನ್ನುವುದು ಗಮನಾರ್ಹ. ಈಗ, ಎರಡೂ ದೇಶಗಳ ಮುಖಂಡರು ನೇರಾನೇರ ಆಪಾದನೆಗಳನ್ನು ಮಾಡುತ್ತಿದ್ದು, ಹಿಂದೆಂದೂ ಇಲ್ಲದ ರೀತಿಯಲ್ಲಿ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ.

ADVERTISEMENT

ಹರ್ದೀಪ್ ಸಿಂಗ್ ನಿಜ್ಜರ್ ಭಾರತದ ಮಟ್ಟಿಗೆ ಒಬ್ಬ ಭಯೋತ್ಪಾದಕ. ನಿಜ್ಜರ್ ಹುಟ್ಟಿದ್ದು ಭಾರತದಲ್ಲಿಯೇ ಆದರೂ 1997ರಲ್ಲಿ– ತನ್ನ 20ನೇ ವಯಸ್ಸಿನಲ್ಲಿ ಕೆನಡಾಗೆ ಹೋಗಿ ನೆಲಸಿದ್ದ. ಪ್ಲಂಬಿಂಗ್ ವ್ಯಾಪಾರ ಮಾಡುತ್ತಿದ್ದ ಈತ 2015ರಲ್ಲಿ ಕೆನಡಾದ ಪೌರತ್ವ ಪಡೆದಿದ್ದ. ಭಾರತವನ್ನು 80 ಮತ್ತು 90ರ ದಶಕದಲ್ಲಿ ತೀವ್ರವಾಗಿ ಕಾಡಿದ್ದ ಪ್ರತ್ಯೇಕ ಖಾಲಿಸ್ತಾನಿ ಹೋರಾಟವನ್ನು ಮುಂದುವರಿಸುವ ಬಗ್ಗೆ ಕೆನಡಾದಲ್ಲಿ ಪ್ರಯತ್ನ ನಡೆಸುತ್ತಿದ್ದ ಈತ, ಅಲ್ಲಿ ಸಿಖ್ ಗುರುದ್ವಾರವೊಂದರ ಅಧ್ಯಕ್ಷನಾಗಿದ್ದ. ಅಲ್ಲಿನ ಸಿಖ್ ಸಮುದಾಯದಲ್ಲಿ ಖಾಲಿಸ್ತಾನಿ ಹೋರಾಟದ ಬಗ್ಗೆ ಪ್ರಚಾರ ಮಾಡುತ್ತಾ, ಅದರ ಬಗ್ಗೆ ಸಿಖ್ಖರ ಸಹಾನುಭೂತಿ ಗಿಟ್ಟಿಸುತ್ತಿದ್ದ; ಅಲ್ಲಿದ್ದುಕೊಂಡೇ ಭಾರತದಲ್ಲಿ ಹಲವು ಭಯೋತ್ಪಾದನಾ ಕೃತ್ಯಗಳಿಗೆ, ಹಲವರ ಸಾವಿಗೆ ಕಾರಣಕರ್ತನಾಗಿದ್ದ ಎನ್ನುವುದು ಭಾರತದ ಆರೋಪ.

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ 2018ರಲ್ಲಿ ಪಂಜಾಬ್‌ಗೆ ಭೇಟಿ ನೀಡಿದ್ದರು. ಕೆನಡಾದಲ್ಲಿರುವ ನಿಜ್ಜರ್ ಸೇರಿದಂತೆ ಎಂಟು ಮಂದಿ ಪ್ರತ್ಯೇಕತಾವಾದಿ ನಾಯಕರ ವಿರುದ್ಧ ಕ್ರಮ ಜರುಗಿಸುವಂತೆ ಆಗಿನ ಪಂಜಾಬ್‌ ಮುಖ್ಯಮಂತ್ರಿಯು ಅವರನ್ನು ಒತ್ತಾಯಿಸಿದ್ದರು. ಅವರೆಲ್ಲ ಖಾಲಿಸ್ತಾನ ಪ್ರತ್ಯೇಕ ರಾಷ್ಟ್ರದ ಹೆಸರಿನಲ್ಲಿ ಪಂಜಾಬ್‌ನಲ್ಲಿ ಅಶಾಂತಿ ಮತ್ತು ದಂಗೆಗೆ ಕಾರಣರಾಗುತ್ತಿದ್ದಾರೆ ಎನ್ನುವುದು ಅವರ ಆರೋಪವಾಗಿತ್ತು. ನಿಜ್ಜರ್‌ನನ್ನು ಒಬ್ಬ ‘ಭಯೋತ್ಪಾದಕ’ ಎಂದು ಕರೆದಿದ್ದ ಭಾರತವು, ಆತನ ಸುಳಿವು ನೀಡಿದವರಿಗೆ ₹10 ಲಕ್ಷ ಬಹುಮಾನ ಘೋಷಿಸಿತ್ತು.

ಇದರ ನಡುವೆ, 45 ವರ್ಷದ ನಿಜ್ಜರ್‌ನನ್ನು 2023ರ ಜೂನ್‌ 18ರಂದು ವ್ಯಾಂಕೂವರ್‌ನ ಗುರುದ್ವಾರದ ಎದುರು ಮುಸುಕುಧಾರಿಗಳು ಗುಂಡಿಟ್ಟು ಕೊಂದಿದ್ದರು. ಅದನ್ನು ಭಾರತದ ಏಜೆಂಟರೇ ಮಾಡಿದ್ದು, ಅದಕ್ಕೆ ಭಾರತ ಸರ್ಕಾರ ಬೆಂಬಲ ನೀಡಿದೆ ಎಂದು ಟ್ರುಡೊ ಹಿಂದಿನಿಂದಲೂ ಪ್ರತಿಪಾದನೆ ಮಾಡುತ್ತಿದ್ದಾರೆ. ಖಾಲಿಸ್ತಾನಿ ಪ್ರತ್ಯೇಕತಾವಾದಿ ಹೋರಾಟಗಾರರಿಗೆ ಕೆನಡಾ ನೆಲೆಯಾಗಿದೆ ಎನ್ನುವುದು ಭಾರತದ ಆರೋಪವಾಗಿತ್ತು. ಈಗಿನ ಬೆಳವಣಿಗೆಗಳು ಅದರ ಮುಂದುವರಿದ ಭಾಗವಾಗಿವೆ.

ನಿಜ್ಜರ್ ಹತ್ಯೆ ಪ್ರಕರಣವನ್ನು ಕೆನಡಾ ಗಂಭೀರವಾಗಿ ಪರಿಗಣಿಸುವುದಕ್ಕೆ ಕಾರಣ, ಅಲ್ಲಿರುವ ಸಿಖ್ಖರ ಜನಸಂಖ್ಯೆ. ಭಾರತದ ಪಂಜಾಬ್‌ ಬಿಟ್ಟರೆ ಅತಿ ಹೆಚ್ಚು ಮಂದಿ ಸಿಖ್ಖರು ಇರುವುದು (7.7 ಲಕ್ಷ) ಕೆನಡಾದಲ್ಲಿಯೇ. ಅಲ್ಲಿನ ರಾಜಕೀಯದಲ್ಲಿ ಗಮನಾರ್ಹ ಪ್ರಭಾವ ಹೊಂದಿರುವ ಸಿಖ್ಖರು, ಹೌಸ್ ಆಫ್ ಕಾಮನ್ಸ್‌ನಲ್ಲಿ 18 ಸ್ಥಾನ ಪಡೆದಿದ್ದಾರೆ. ದೇಶದ ಜನಸಂಖ್ಯೆಯಲ್ಲಿ ಶೇ 2ರಷ್ಟಿದ್ದರೂ, ಹೌಸ್ ಆಫ್ ಕಾಮನ್ಸ್‌ನಲ್ಲಿ ಶೇ 4ರಷ್ಟು ಪ್ರತಿನಿಧಿಗಳನ್ನು ಹೊಂದಿದ್ದಾರೆ. ಸಿಖ್ಖರು ಪ್ರತಿನಿಧಿಸುವ ಕ್ಷೇತ್ರಗಳು ಪ್ರಮುಖ ಕ್ಷೇತ್ರಗಳಾಗಿದ್ದು, ರಾಜಕೀಯದಲ್ಲಿ ವಿಶೇಷ ಮಹತ್ವ ಪಡೆದಿವೆ. ಹಾಗಾಗಿಯೇ ಸಿಖ್ಖರನ್ನು ಓಲೈಸಲು ಕೆನಡಾದ ರಾಜಕಾರಣಿಗಳು–ವಿಶೇಷವಾಗಿ, ಆಳುವ ಸರ್ಕಾರ– ಸದಾ ಮುಂದಿರುತ್ತದೆ ಎನ್ನುವುದು ವಿಶ್ಲೇಷಕರ ಅಭಿಪ್ರಾಯ.

2020ರಲ್ಲಿ ದೆಹಲಿಯ ಸಿಂಘು ಗಡಿಯಲ್ಲಿ ಪಂಜಾಬ್‌ ರೈತರು ನಡೆಸುತ್ತಿದ್ದ ಪ್ರತಿಭಟನೆಯನ್ನು ಟ್ರುಡೊ ಬೆಂಬಲಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟಕ್ಕಿಂತಲೂ ಹೆಚ್ಚು ಸಿಖ್ ಸಮುದಾಯದ ಸಚಿವರು (ನಾಲ್ಕು ಮಂದಿ) ನನ್ನ ಸಂಪುಟದಲ್ಲಿದ್ದಾರೆ ಎಂದು ಹಿಂದೊಮ್ಮೆ ಹೇಳಿದ್ದರು. ಅಲ್ಲಿ ಮುಂದಿನ ವರ್ಷ ಸಂಸತ್‌ ಚುನಾವಣೆ ನಡೆಯಲಿದೆ. ಟ್ರುಡೊ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, ಅವರ ಪುನರಾಯ್ಕೆಯ ಸಾಧ್ಯತೆ ಶೇ 28 ಮಾತ್ರ ಎಂದು ಸಮೀಕ್ಷೆಗಳು ಹೇಳಿವೆ. ಹೀಗಾಗಿ ಅವರಿಗೆ ಸಿಖ್ ಸಮುದಾಯದ ಬೆಂಬಲ ಪಡೆಯುವುದು ಮುಖ್ಯವಾಗಿದೆ. ಟ್ರುಡೊ ಅವರು ನಿಜ್ಜರ್ ಹತ್ಯೆಯ ವಿಚಾರಕ್ಕೆ ಅಗತ್ಯಕ್ಕಿಂತ ಹೆಚ್ಚು ಒತ್ತು ನೀಡುತ್ತಿದ್ದಾರೆ; ಇದರ ಹಿಂದೆ ಮತಬ್ಯಾಂಕ್‌ ರಾಜಕೀಯ ಇದೆ ಎಂದು ಭಾರತ ಸರ್ಕಾರ ಹೇಳಿರುವುದು ಇದೇ ಅರ್ಥದಲ್ಲಿ.

ವ್ಯಾಪಾರಕ್ಕೆ ಧಕ್ಕೆಯಾಗುವ ಆತಂಕ

2023ರ ಸೆಪ್ಟೆಂಬರ್‌ನಿಂದಲೇ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಳಸಿದ್ದರೂ, ಎರಡೂ ರಾಷ್ಟ್ರಗಳ ನಡುವಿನ ಆರ್ಥಿಕ ಸಂಬಂಧಕ್ಕೆ ಧಕ್ಕೆಯಾಗಿರಲಿಲ್ಲ. ಆದರೆ, ಈಗಿನ ಬೆಳವಣಿಗೆಗಳು ಈ ಸಂಬಂಧದ ಮೇಲೂ ಕರಿಛಾಯೆ ಆವರಿಸುವಂತೆ ಮಾಡಿವೆ.

ಭಾರತದಲ್ಲಿ ಬಂಡವಾಳ ಹೂಡುತ್ತಿರುವ ರಾಷ್ಟ್ರಗಳಲ್ಲಿ ಕೆನಡಾ 17ನೇ ದೊಡ್ಡ ದೇಶ. ಕಳೆದ ವರ್ಷ ಉಭಯ ದೇಶಗಳ ನಡುವಿನ ಸೇವೆಗಳ ವಹಿವಾಟು ಮೌಲ್ಯ ₹83,956 ಕೋಟಿ ಆಗಿತ್ತು. ಭಾರತವು ₹20,926 ಕೋಟಿ ಮೌಲ್ಯದ ಸೇವೆಗಳನ್ನು ರಫ್ತು ಮಾಡಿದ್ದರೆ, ₹63,030 ಕೋಟಿ ಮೌಲ್ಯದ ಸೇವೆಗಳನ್ನು ಆಮದು ಮಾಡಿಕೊಂಡಿತ್ತು.

ಭಾರತವು ಔಷಧ ಉತ್ಪನ್ನಗಳು, ಎಲೆಕ್ಟ್ರಾನಿಕ್‌ ಸರಕುಗಳು, ಆಭರಣ, ಹರಳುಗಳು, ಬೆಲೆಬಾಳುವ ಶಿಲೆಗಳು, ಸಮುದ್ರ ಆಹಾರ ಉತ್ಪನ್ನ (ಸಿಗಡಿ), ಎಂಜಿನಿಯರಿಂಗ್‌ ಸರಕುಗಳು ಮತ್ತು ವಾಹನಗಳ ಬಿಡಿಭಾಗಗಳನ್ನು ರಫ್ತು ಮಾಡಿದರೆ, ಖನಿಜಗಳು, ದ್ವಿದಳ ಧಾನ್ಯಗಳು, ಪೊಟ್ಯಾಷ್‌, ನ್ಯೂಸ್‌ಪ್ರಿಂಟ್‌, ಕಬ್ಬಿಣ ಮತ್ತು ಅಲ್ಯೂಮಿನಿಯಂ ಚೂರುಗಳು, ಕೈಗಾರಿಕಾ ರಾಸಾಯನಿಕಳು ಮತ್ತು ಬೆಲೆಬಾಳುವ ರತ್ನಗಳನ್ನು ಆಮದು ಮಾಡಿಕೊಳ್ಳುತ್ತದೆ.

ನಿಜ್ಜರ್‌ ಒಬ್ಬನೇ ಅಲ್ಲ...

ಕಳೆದ ವರ್ಷ ನಿಜ್ಜರ್‌ ಹತ್ಯೆಗೂ ಮುನ್ನ ಇಬ್ಬರು ಖಾಲಿಸ್ತಾನಿ ಪ್ರತ್ಯೇಕತಾವಾದಿ ಮುಖಂಡರು ವಿದೇಶಿ ನೆಲದಲ್ಲಿ ಮೃತಪಟ್ಟಿದ್ದರು. 

ಭಾರತವು ಭಯೋತ್ಪಾದಕ ಎಂದು ಗುರುತಿಸಿದ್ದ ಖಾಲಿಸ್ತಾನ್‌ ಕಮಾಂಡೊ ಪಡೆಯ ಮುಖ್ಯಸ್ಥನಾಗಿದ್ದ ಪರಮ್‌ಜಿತ್‌ ಸಿಂಗ್‌ ಪಂಜ್ವಾರ್‌ನನ್ನು 2023ರ ಮೇ 6ರಂದು ಪಾಕಿಸ್ತಾನದ ಲಾಹೋರ್‌ನಲ್ಲಿ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆತನನ್ನು ಹತ್ಯೆ ಮಾಡಿದವರು ಯಾರು ಎಂಬುದು ಇದುವರೆಗೆ ಗೊತ್ತಾಗಿಲ್ಲ. 

ಬ್ರಿಟನ್‌ನ ಆಸ್ಪತ್ರೆಯೊಂದರಲ್ಲಿ ಕಳೆದ ವರ್ಷದ ಜೂನ್‌ 15ರಂದು ಖಾಲಿಸ್ತಾನ ಲಿಬರೇಷನ್‌ ಫೋರ್ಸ್‌ನ ಮುಖ್ಯಸ್ಥ ಎಂದು ನಂಬಲಾದ ಅವತಾರ್‌ ಸಿಂಗ್‌ ಖಂಡಾ ಮೃತಪಟ್ಟಿದ್ದ. ಮಾರ್ಚ್‌ನಲ್ಲಿ ಲಂಡನ್ನಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಭಾರತದ ರಾಯಭಾರ ಕಚೇರಿಯಲ್ಲಿ ಅಳವಡಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಕೆಳಕ್ಕೆ ಎಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್‌ ಪೊಲೀಸರು ಆತನನ್ನು ಬಂಧಿಸಿದ್ದರು. ಆತನ ಸಾವಿನ ಕುರಿತಂತೆ ಯಾವುದೇ ಅನುಮಾನಗಳಿಲ್ಲ ಎಂದು ಪೊಲೀಸರು ಹೇಳಿದ್ದರು. 

ಪಂಜ್ವಾರ್‌ ಸತ್ತ ಮೂರು ದಿನಗಳ ಬಳಿಕ ಕೆನಡಾದಲ್ಲಿ ನಿಜ್ಜರ್‌ನ ಹತ್ಯೆ ನಡೆದಿತ್ತು. 

ಭಾರತವು ಭಯೋತ್ಪಾದಕ ಎಂದು ಘೋಷಿಸಿರುವ, ಅಮೆರಿಕದಲ್ಲಿ ನೆಲಸಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ಮುಖಂಡ ಗುರುಪತ್ವಂತ್‌ ಸಿಂಗ್‌ ಪನ್ನೂ ಕೊಲೆ ಯತ್ನವೂ ನಡೆದಿತ್ತು. 2023ರ ನವೆಂಬರ್‌ನಲ್ಲಿ ಅಮೆರಿಕ ಅಧಿಕೃತವಾಗಿ ಈ ಬಗ್ಗೆ ಹೇಳಿಕೆ ನೀಡಿತ್ತು. ಈ ಹತ್ಯೆ ಯತ್ನದ ಹಿಂದೆ ಭಾರತದ ಕೈವಾಡ ಇದೆ ಎಂಬ ಆರೋಪವೂ ಇದೆ. ತನಿಖೆಗಾಗಿ ಭಾರತವೂ ತನಿಖಾ ತಂಡ ರಚಿಸಿದ್ದು, ಅದೀಗ ಅಮೆರಿಕಕ್ಕೆ ಭೇಟಿ ನೀಡಿದೆ.

ಭಾರತೀಯರ ಶಿಕ್ಷಣ, ಉದ್ಯೋಗಕ್ಕೆ ಕತ್ತರಿ? 

ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಾದ ಭಾರತ ಮತ್ತು ಕೆನಡಾಗಳು ಸಾಂಸ್ಕೃತಿಕವಾಗಿ ಉತ್ತಮ ಬಾಂಧವ್ಯವನ್ನು ಈವರೆಗೂ ಹೊಂದಿವೆ. 

ಹೊರದೇಶಗಳ ಪೈಕಿ ಅತಿ ಹೆಚ್ಚಿನ ಸಂಖ್ಯೆಯ ಭಾರತೀಯರು ನೆಲಸಿರುವುದು ಕೆನಡಾದಲ್ಲಿ. ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, 18 ಲಕ್ಷ ಭಾರತೀಯರು ಅಲ್ಲಿದ್ದಾರೆ. ಈ ಪೈಕಿ ಸಿಖ್‌ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅಮೆರಿಕದಲ್ಲಿ ಹೋಗಿ ಕೆಲಸ ಮಾಡುವ, ನೆಲಸುವ ಆಕಾಂಕ್ಷೆಯುಳ್ಳ ಭಾರತೀಯ ವೃತ್ತಿಪರರಿಗೆ, ಅಲ್ಲಿಗೆ ಹೋಗಲು ಅವಕಾಶ ಸಿಗದಿದ್ದರೆ, ಅವರ ನಂತರದ ಆಯ್ಕೆ ಕೆನಡಾ.  

ಉನ್ನತ ಶಿಕ್ಷಣಕ್ಕಾಗಿ ಕೆನಡಾಕ್ಕೆ ತೆರಳಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದಿದೆ. ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ವೀಸಾ ನಿಯಮವನ್ನು ಬಿಗಿಗೊಳಿಸಿದ ನಂತರ ಮತ್ತು ಕಳೆದ ವರ್ಷ ರಾಜತಾಂತ್ರಿಕ ಬಿಕ್ಕಟ್ಟು ಉಂಟಾದ ಬಳಿಕ ಅಲ್ಲಿಗೆ ಶಿಕ್ಷಣಕ್ಕಾಗಿ ತೆರಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಮುಂದೆ ಏನಾಗಲಿದೆ ಎನ್ನುವ ಆತಂಕವೂ ಕೆಲವರಲ್ಲಿದೆ.

ಆಧಾರ: ಎಎಫ್‌ಪ್, ಬಿಬಿಸಿ, ಪಿಐಬಿ,ಭಾರತೀಯ ವಿದೇಶಾಂಗ ಸಚಿವಾಲಯ, ಇನ್‌ವೆಸ್ಟ್‌ ಇಂಡಿಯಾ ವೆಬ್‌ಸೈಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.